ಮಾನವ ಸಮಾಜವು ಆದಿಕಾಲದ ಸಮುದಾಯ ಸಮಾಜ, ಗುಲಾಮಗಿರಿ ಮತ್ತು ಸಾಮಂತಶಾಹಿ ಸಮಾಜಗಳಂತಹ ವಿವಿಧ ಸಾಮಾಜಿಕ ಘಟ್ಟಗಳನ್ನು ದಾಟಿ ಪ್ರಜಾಪ್ರಭುತ್ವ ಸಮಾಜದ ಘಟ್ಟಕ್ಕೆ ಬಂದು ನಿಂತಿದೆ. ಭಾರತ ಸಂವಿಧಾನದಲ್ಲಿ ಸಾಮಂತಶಾಹಿ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಸಂಸದೀಯ ಪ್ರಜಾಪ್ರಭುತ್ವ ಮಾದರಿಯ ಸರ್ಕಾರದ ಸ್ಥಾಪನೆಗೆ ಅನುವು ಮಾಡಿಕೊಡಲಾಗಿದೆ. ಇಡೀ ಸಂವಿಧಾನವನ್ನು ಓದಿದರೆ ನಮ್ಮ ಪ್ರಜಾಪ್ರಭುತ್ವ ಎಂಥದ್ದೆಂದು ತಿಳಿಯುತ್ತದೆ. ಭಾರತದ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವವೆಂದರೆ: ರಾಜಕೀಯ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವ, ಸಾಮಾಜಿಕ ಪ್ರಜಾಪ್ರಭುತ್ವ, ಸ್ವತಂತ್ರವಾದ ನ್ಯಾಯಾಂಗ ಮತ್ತು ಮುಕ್ತವಾದ ಪತ್ರಿಕೋದ್ಯಮ. ಇವುಗಳ ಪೈಕಿ ಒಂದನ್ನು ಹೊರತುಪಡಿಸಿದರೂ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾಗಲಾರದು. ಒಂದಕ್ಕೆ ಮತ್ತೊಂದು ಪೂರಕವಾಗಿ ಕೆಲಸ ಮಾಡಿ ಸಂವಿಧಾನದ ಆಶಯಗಳನ್ನು ಜಾರಿಗೊಳಿಸಬೇಕು.
ರಾಜಕೀಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗಕ್ಕೆ ಬಹು ಮುಖ್ಯವಾದ ಸ್ಥಾನ. ಸಮಾಜಕ್ಕೆ ಬೇಕಾದ ಕಾನೂನುಗಳನ್ನು, ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಶಾಸಕಾಂಗದ ಕೆಲಸ. ಈ ಮಹತ್ತರ ಕೆಲಸ ನಿರ್ವಹಿಸಲು ಜನರು ಕಾಲಕಾಲಕ್ಕೆ ತಮ್ಮ ಪ್ರತಿನಿಧಿಗಳನ್ನು ಚುನಾವಣೆಗಳ ಮುಖಾಂತರ ಆಯ್ಕೆ ಮಾಡುತ್ತಾರೆ. ಈ ರೀತಿಯ ಚುನಾವಣೆಗಳಲ್ಲಿ ಪ್ರತಿಯೊಬ್ಬ ಪ್ರಜೆಗೂ ಎರಡು ರೀತಿಯ ಹಕ್ಕುಗಳಿವೆ. ಒಂದನೆಯದಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕು. ಎರಡನೆಯದಾಗಿ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕು.
ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸರಕಾರ ಬಹುಮತ ಕಳೆದುಕೊಂಡು ಹೊರ ನಡೆದರೆ, ಉಳಿದ ಅವಧಿಗೆ ಬೇರೆ ಸರಕಾರ ರಚನೆಯಾಗದಿದ್ದರೆ, ಅನಿವಾರ್ಯವಾಗಿ ಚುನಾವಣೆಗಳನ್ನು ನಡೆಸಬೇಕಾಗುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ಸದನದಿಂದ ಉಚ್ಛಾಟಿತರಾದರೆ ತೆರವಾದ ಸ್ಥಾನಕ್ಕೆ ಮರುಚುನಾವಣೆ ನಡೆಸಲಾಗುತ್ತದೆ. ಈ ಚುನಾವಣಾ ಪ್ರಕ್ರಿಯೆಯಿಂದ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭೆ ಸದಸ್ಯರನ್ನು, ರಾಜ್ಯಸಭೆ ಸದಸ್ಯರನ್ನು, ರಾಜ್ಯ ಶಾಸನ ಸಭೆಗಳ ಸದಸ್ಯರನ್ನು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದೆ.
1950ರಲ್ಲಿ ಗಣರಾಜ್ಯವಾದ ಭಾರತ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುತ್ತಿದೆ. ಜನರು ತಮಗೆ ಬೇಕಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಶಾಂತಿಯುತವಾಗಿ ರಾಜಕೀಯ ಅಧಿಕಾರ ಬದಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಕಂಡುಬಂದ ಕೆಲವು ನ್ಯೂನ್ಯತೆಗಳನ್ನು ಸೂಕ್ತ ಸುಧಾರಣೆಗಳನ್ನು ತರುವುದರ ಮೂಲಕ ಸರಿಪಡಿಸಲಾಗಿದೆ. ಕಳೆದ 72 ವರ್ಷಗಳಲ್ಲಿ ತಂದ ಪ್ರಮುಖ ಸುಧಾರಣೆಗಳೆಂದರೆ:
- ಮತದಾನದ ಹಕ್ಕನ್ನು 21 ವರ್ಷಗಳ ವಯೋಮಿತಿಯಿಂದ 18ವರ್ಷದ ವಯೋಮಿತಿಗೆ ಇಳಿಸಲಾಗಿದೆ.
- ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದೆ.
- ಮತದಾನ ಮಾಡಲು ಎಲೆಕ್ಟ್ರಾನಿಕ್ ಮತದಾನದ ಯಂತ್ರವನ್ನು ಅಳವಡಿಸಲಾಗಿದೆ.
- ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವರಮಾನ ಸಾಲ, ಚರ ಮತ್ತು ಸ್ಥಿರಾಸ್ತಿಗಳ ಹಾಗೂ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ತಿಳಿಯಪಡಿಸುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
- ಚುನಾವಣಾ ಪ್ರಚಾರಕ್ಕಾಗಿ ಗೋಡೆ ಬರಹ, ಪೋಸ್ಟರ್, ಬ್ಯಾನರ್ ಇತ್ಯಾದಿಗಳ ಬಳಕೆಯನ್ನು ನಿಯಂತ್ರಿಸಲಾಗಿದೆ.
- ವಾಹನಗಳ ಮತ್ತು ಧ್ವನಿವರ್ಧಕಗಳ ಬಳಕೆ ಮತ್ತು ಪ್ರಚಾರ ಸಭೆಗಳನ್ನು ನಿಯಂತ್ರಿಸಲಾಗಿದೆ.
- ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗಿದೆ.
- ಪ್ರಜಾಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿಗಳನ್ನು ತರಲಾಗಿದೆ.
ಇಷ್ಟೆಲ್ಲ ಸುಧಾರಣೆಗಳನ್ನು ತಂದರೂ ಸಹ ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಗಂಭೀರ ಸಮಸ್ಯೆಗಳು ತಲೆ ಎತ್ತಿವೆ. ಹಣ, ಜಾತಿ, ಧರ್ಮ, ಅಪರಾಧೀಕರಣ, ಭ್ರಷ್ಟಾಚಾರ ಇತ್ಯಾದಿಗಳ ಪ್ರಭಾವ ಚುನಾವಣೆಗಳ ಮೇಲೆ ಆಗಿದೆ. ಇವುಗಳು ಚುನಾವಣೆಗಳ ಸ್ವಚ್ಛತೆ ಮತ್ತು ಸ್ವಾಯತ್ತತೆಯ ಮೇಲೆ ಪರಿಣಾಮ ಬೀರಿವೆ. ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿದ National Election Watch ಎಂಬ ಸ್ವಯಂ ಸೇವಾ ಸಂಸ್ಥೆ ತನ್ನ ವರದಿಯಲ್ಲಿ ಈ ರೀತಿ ತಿಳಿಸಿದೆ.
2004 – 14 LS | 2009 – 15 LS | 2014 – 16 LS | 2019 -17 LS | |
ಕ್ರಿಮಿನಲ್ ಕೇಸುಗಳು ಹೊತ್ತಿರುವ ಸದಸ್ಯರು | 24 % 130 MP | 30% 160 MP | 34% 186 MP | 43% |
ಕೋಟ್ಯಾಧಿಪತಿಗಳು | 30% 160 MP | 58% 315 MP | 82% 450 MP | 88% |
ವಂಶಪಾರಂಪರ್ಯ ಹಂತ, ರಿಯಲ್ ಎಸ್ಟೇಟ್, ಕೈಗಾರಿಕೋದ್ಯಮ ಮತ್ತು ಗುತ್ತಿಗೆದಾರರ ಮೂಲದಿಂದ | 50% 270 MP | 52% 285 MP | 54% 290 MP |
ಈ ಅಧ್ಯಯನದಿಂದ ತಿಳಿದು ಬರುವ ಮತ್ತೊಂದು ಸಂಗತಿಯೆಂದರೆ ಹೆಚ್ಚು ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಹಾಗೂ ಹೆಚ್ಚು ಕೋಟಿ ಆಸ್ತಿಪಾಸ್ತಿ ಹೊಂದಿರುವ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಕಡಿಮೆ ಕ್ರಿಮಿನಲ್ ಕೇಸುಗಳು ಮತ್ತು ಕಡಿಮೆ ಹಣವಿರುವ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಅಂದರೆ ಹಣ ಮತ್ತು ಅಪರಾಧೀಕರಣ ಚುನಾವಣೆಗಳ ಮೇಲೆ ಪ್ರಭಾವ ಬೀರಿವೆ.
2012ರಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ನಂತರ UDF ಒಕ್ಕೂಟ ಒಮನ್ ಚಾಂಡಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿತು. ಗಣನೀಯ ಪ್ರಮಾಣದಲ್ಲಿ ಕ್ರೈಸ್ತ ಮತದಾರರಿರುವ ಕ್ಷೇತ್ರಗಳಲ್ಲಿ UDF ಹೆಚ್ಚು ಮತಗಳನ್ನು ಗಳಿಸಿ ಗೆಲುವನ್ನು ಸಾಧಿಸಿತು. 2014ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಬಹುಸಂಖ್ಯಾತ ಹಿಂದೂಗಳಿರುವ ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿಯು ಸಂಪೂರ್ಣ ಗೆಲುವನ್ನು ಸಾಧಿಸಿದರೆ ಬಹುಸಂಖ್ಯಾತ ಮುಸಲ್ಮಾನ ಮತದಾರರಿರುವ ಕಾಶ್ಮೀರ ಕಣಿವೆಯಲ್ಲಿ ಅದು ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಇದರಿಂದ ತಿಳಿಯಪಡುವ ಸತ್ಯವೆಂದರೆ ಧರ್ಮ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿದೆ. ಯಾವ ಕ್ಷೇತ್ರದಲ್ಲಿ ಯಾವ ಜಾತಿಯ ಮತದಾರರು ಹೆಚ್ಚಿದ್ದಾರೆ ಆ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪರಿಪಾಠವನ್ನು ಹಲವು ಪ್ರಮುಖ ರಾಜಕೀಯ ಪಕ್ಷಗಳು ಮಾಡಿಕೊಂಡು ಬರುತ್ತಿರುವುದು ಸರ್ವೆ ಸಾಮಾನ್ಯ ಸಂಗತಿಯಾಗಿದೆ. ಚುನಾವಣಾ ಮುಂಚಿನ ಕೆಲವು ದಿನಗಳಲ್ಲಿ ಹಾಗೂ ಚುನಾವಣಾ ಸಮಯದಲ್ಲಿ ಕೋಮುವಾದ ಜಾತಿವಾದ ಬಿತ್ತುವ ಭಾಷಣಗಳು, ಗಲಭೆಗಳು, ಪ್ರಚೋದನೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಇದರ ಪರಿಣಾಮ ಚುನಾವಣೆಗಳ ಮೇಲೆ ಬಿದ್ದಿದೆ.
ಚುನಾವಣೆಗೆ ಸಂಬಂಧಿಸಿ ರಾಜಕೀಯ ಮುಖಂಡರು ವಿಮಾನಗಳಲ್ಲಿ, ಚಾರ್ಟಡ್ ವಿಮಾನಗಳಲ್ಲಿ, ಹೆಲಿಕಾಪ್ಟರ್‌ಗಳಲ್ಲಿ, ರೈಲುಗಳಲ್ಲಿ ಪ್ರಯಾಣ ಮಾಡಲು ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಟಿ.ವಿ., ರೇಡಿಯೋ, ಸೋಷಿಯಲ್ ಮೀಡಿಯಾ ಮತ್ತು ಪತ್ರಿಕೆಗಳಲ್ಲಿ ಜಾಹೀರಾತಿನ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ಮತದಾರರಿಗೆ ಹಂಚಲೆಂದು ಸಾಗಿಸಲಾಗುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಹಣದ ಚೀಲಗಳು, ಬಟ್ಟೆ, ಟಿ.ವಿ, ರೇಡಿಯೋ, ಮದ್ಯ ಇತ್ಯಾದಿಗಳನ್ನು ಜಪ್ತಿ ಮಾಡಿದೆ. ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಾಜಕೀಯ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅವರ ಯೋಗ್ಯತೆಗೆ ಅನುಗುಣವಾಗಿ ಸೈಟುಗಳನ್ನು, ಕಾರುಗಳನ್ನು, ದ್ವಿಚಕ್ರ ವಾಹನಗಳನ್ನು, ಮೊಬೈಲ್ ಫೋನುಗಳನ್ನು ಇತ್ಯಾದಿಯಾಗಿ ಕೊಡಲಾಗಿದೆಯೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೀಗೆ ಹೇರಳವಾದ ಹಣದ ಪ್ರಭಾವ ಚುನಾವಣೆಗಳ ಮೇಲೆ ಬಿದ್ದಿದೆ.
ಮತಗಳ ಪ್ರಮಾಣಾನುಸಾರ ಪ್ರಾತಿನಿಧ್ಯ ಇಲ್ಲದಿರುವುದು ಎದ್ದು ಕಾಣುತ್ತಿದೆ. 1971ರಿಂದ 2004ರವರೆಗೆ ಕಾಂಗ್ರೆಸ್ ಪಕ್ಷ ಗಳಿಸಿದ್ದ ಶೇಕಡಾವಾರು ಮತಗಳು ಮತ್ತು ಗೆದ್ದ ಲೋಕಸಭಾ ಸದಸ್ಯ ಸ್ಥಾನಗಳ ಪಟ್ಟಿ ಈ ರೀತಿ ಇದೆ :
ಲೋಕಸಭಾ ಚುನಾವಣಾ ವರ್ಷ | ಗಳಿಸಿದ ಶೇಕಡಾ ವಾರು ಮತಗಳು | ಲೋಕಸಭೆಯಲ್ಲಿ ಗೆದ್ದ ಸ್ಥಾನಗಳು (ಶೇಕಡಾವಾರು) |
1971 | 43.7 | 352 (64.8) |
1977 | 34.5 | 154 (28.4) |
1980 | 42.7 | 353 (65) |
1984 | 48.1 | 405 (74.6) |
1989 | 39.5 | 197 (36.3) |
1991 | 36.5 | 232 (42.7) |
1996 | 28.8 | 140 (25.8) |
1998 | 25.8 | 141 (26) |
1984 ರಿಂದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷ ಗಳಿಸಿದ ಶೇಕಡಾವಾರು ಮತಗಳು ಮತ್ತು ಗೆದ್ದ ಸ್ಥಾನಗಳ ಪಟ್ಟಿ ಈ ರೀತಿ ಇದೆ:
ಚುನಾವಣಾ ವರ್ಷ | ಗಳಿಸಿದ ಶೇಕಡಾ ವಾರು ಮತಗಳು | ಸ್ಥಾನಗಳಲ್ಲಿ ಗೆಲುವು / ಶೇಕಡಾವಾರು |
1984 | 707 | 2 (0.4) |
1989 | 11.5 | 86 (15.8) |
1991 | 20 | 121 (22.3) |
1996 | 20.3 | 161 (29.7) |
1998 | 25.6 | 182 (33.5) |
1999 | 23.6 | 182 (33.5) |
2004 | 22.2 | 138 (25.4) |
2009 | 18.80 | 116 (20.9) |
2014 | 31 | 282 (52) |
2019 | 38 | 303 |
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆಪ್ ಪಕ್ಷ ದೆಹಲಿಯಲ್ಲಿ ಶೇ. 33ರಷ್ಟು ಮತಗಳನ್ನು ಪಡೆದರೂ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಡರಂಗ ಶೇ. 29.61ರಷ್ಟು ಮತಗಳನ್ನು ಪಡೆದು ಕೇವಲ ಎರಡು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ಟಿಎಂಸಿ ಪಕ್ಷ ಶೇ. 39.36ರಷ್ಟು ಮತಗಳನ್ನು ಪಡೆದು 34 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ ಪಕ್ಷ ಶೇ. 9.58ರಷ್ಟು ಮತಗಳನ್ನು ಪಡೆದು 4 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ ಮತ್ತು ಬಿಜೆಪಿ ಶೇ. 16ರಷ್ಟು ಮತಗಳನ್ನು ಪಡೆದು 2 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ.
ಈ ಅಂಕಿ ಅಂಶಗಳಿಂದ ತಿಳಿದು ಬರುವ ಸಂಗತಿಯೆಂದರೆ ಮತ ಗಳಿಕೆಗೂ ಮತ್ತು ಸ್ಥಾನಗಳ ಗಳಿಕೆಗೂ ಸಂಬಂಧವಿಲ್ಲವಾಗಿದೆ. ಕಡಿಮೆ ಮತಗಳನ್ನು ಗಳಿಸಿ ಹೆಚ್ಚು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿ ಅಧಿಕಾರಕ್ಕೆ ಬರುತ್ತಿರುವುದು ಎದ್ದು ಕಾಣುತ್ತಿದೆ. ಬಹುಸಂಖ್ಯಾತ ಮತದಾರರ ಅಭಿಮತದ ವಿರುದ್ಧವಾದ ಪಕ್ಷ ಅಥವಾ ಪಕ್ಷಗಳು ಅಧಿಕಾರದ ಗಾದಿಯನ್ನು ಹಿಡಿಯುತ್ತಿವೆ.
ರಾಜಕಾರಣದಲ್ಲಿ ನಿಷ್ಠಾವಂತರ, ಪರಿಣಿತರ, ಯೋಗ್ಯರ, ಪ್ರಾಮಾಣಿಕರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ವಂಶಪಾರಂಪರ್ಯವಾಗಿ ರಾಜಕಾರಣಿಗಳು, ಅವರ ಮಕ್ಕಳು, ಸಂಬಂಧಿಕರು, ಉದ್ಯಮಿಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ತತ್ವನಿಷ್ಠೆ, ಸರಳತೆ, ಸಜ್ಜನಿಕೆ, ಜನಪರ ಕಾಳಜಿಯಂತಹ ಮೌಲ್ಯಗಳು ಕುಸಿಯುತ್ತಿವೆ. ಯೋಗ್ಯರು, ಸಮರ್ಥರು, ಜನಹಿತವನ್ನು ಪ್ರತಿನಿಧಿಸುವ ವ್ಯಕ್ತಿಗಳು ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲದಂತಾಗಿದೆ. ಇದರ ಒಟ್ಟು ಪರಿಣಾಮ ನಮ್ಮ ಲೋಕಸಭೆ ಮತ್ತು ರಾಜ್ಯಸಭೆಯ ನಡವಳಿಕೆಗಳ ಮೇಲೆ ಪ್ರಭಾವ ಬೀರಿದೆ.
ಸಂಸತ್ತಿನಲ್ಲಿ ವಿಷಯಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿಲ್ಲ. ಅನೇಕ ಶಾಸನಗಳನ್ನು ಚರ್ಚೆಯಿಲ್ಲದೆ ಅಂಗೀಕಾರಗೊಳಿಸಲಾಗುತ್ತಿದೆ. ಅಸಹನೆ, ವಿಭಜನಾಶೀಲತೆ, ಭ್ರಷ್ಟಾಚಾರ, ಘರ್ಷಣೆಗಳು ಹಾಗೂ ಭಿನ್ನಮತಕ್ಕೆ ಅಗೌರವ ಸಾಮಾನ್ಯ ಸಂಗತಿಯಾಗಿದೆ. ಕೂಗಾಟ, ಅರಚಾಟ, ಗಲಾಟೆ, ಧರಣಿ, ಸಭಾತ್ಯಾಗ ಇತ್ಯಾದಿಗಳು ದಿನನಿತ್ಯದ ಚಟುವಟಿಕೆಯಾಗಿವೆ.
ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳನ್ನು ಹೊರತುಪಡಿಸಿ ಬಹುತೇಕರು ಎಲ್ಲಾ ಬಗೆಯ ಅತಿರೇಕಗಳಲ್ಲಿ ತೊಡಗಿರುವುದರ ಜೊತೆಗೆ ತಮ್ಮ ಅಧಿಕಾರವನ್ನು ದುರು ಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಗರಣಗಳ ಮೇಲೆ ಹಗರಣಗಳು ಹೊರಬಂದು ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿದ ಆಪಾದನೆಗೆ ಇಂದು ನಮ್ಮ ಜನಪ್ರತಿನಿಧಿಗಳು ಒಳಗಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳು ಮನಬಂದಂತೆ ನಿಲುವು ಬದಲಾಯಿಸುತ್ತಾರೆ. ಪಕ್ಷ ಬದಲಾಯಿಸುತ್ತಾರೆ. ಇದು ಕೇವಲ ದುಡ್ಡಿಗಾಗಿ ಅಧಿಕಾರ ಪಡೆಯುವ ದುರಾಸೆಯಿಂದ ಎಲ್ಲಾ ನೈತಿಕತೆಯನ್ನು ಬದಿಗೊತ್ತಿ ಅಪವಿತ್ರ ಹೊಂದಾಣಿಕೆಗಳ ಹಾಗೂ ಮೈತ್ರಿಗಳ ಯುಗ ಮುಗಿಲುಮುಟ್ಟಿದೆ.
“ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದು ಕೆಟ್ಟದಾಗಿ ಬಿಡುವುದು ಖಂಡಿತ” ಎಂದು ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಎಚ್ಚರಿಸಿದ ಮಾತುಗಳನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ತಲೆ ಎತ್ತಿರುವ ನ್ಯೂನತೆಗಳ ಕಾರಣದಿಂದ ‘ಸಂಸದೀಯ ಪ್ರಜಾಪ್ರಭುತ್ವ’ ಸರಿಯಲ್ಲ ಅಥವಾ ಸೂಕ್ತವಲ್ಲ ಎಂದು ಹೇಳಲಾಗದು. ‘ಸಂಸದೀಯ ಪ್ರಜಾಪ್ರಭುತ್ವ’ಕ್ಕೆ ಪರ್ಯಾಯದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇರತಕ್ಕಂಥ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ ಮತ್ತು ಕೆಟ್ಟದ್ದನ್ನು ಕಿತ್ತೊಗೆಯಬೇಕಾಗಿದೆ. ರಾಜಕಾರಣದಲ್ಲಿ ಸಜ್ಜನರ, ಸಮರ್ಥರ, ಯೋಗ್ಯರ ಸಂಖ್ಯೆ ಹೆಚ್ಚಿಸಬೇಕಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳನ್ನು ತರಬೇಕಾಗಿದೆ. ಚುನಾವಣಾ ಸುಧಾರಣೆಗೆ ಸಂಬಂಧಿಸಿ ಹಲವು ವರದಿಗಳು ಸರಕಾರದ ಮುಂದಿವೆ. ಅವುಗಳೆಂದರೆ:
1. ತಾರ್ಕುಂಡೆ ಸಮಿತಿ ವರದಿ 1975
2. ಗೋಸ್ವಾಮಿ ಸಮಿತಿ ವರದಿ 1990
3. ಮೋರು ಸಮಿತಿ ವರದಿ 1993
4. ಇಂದ್ರಜಿತ್ ಗುಪ್ತಾ ಸಮಿತಿ ವರದಿ 1998
5. ರಾಷ್ಟ್ರೀಯ ಕಾನೂನು ಆಯೋಗ ವರದಿ 1999
6. ಸಂವಿಧಾನ ಪರಾಮರ್ಶೆ ವರದಿ 2001
7. ಚುನಾವಣಾ ಆಯೋಗ ಸಲ್ಲಿಸಿರುವ ಪ್ರಸ್ತಾವನೆಗಳು 2004
8. ಆಡಳಿತಾತ್ಮಕ ಸುಧಾರಣಾ ಆಯೋಗದ ವರದಿ 2008
ಈ ಎಲ್ಲ ವರದಿಗಳು ಹಣ ಮತ ಜಾತಿ ಅಪರಾಧೀಕರಣ ಹಾಗೂ ಭ್ರಷ್ಟಾಚಾರದಂತಹ ಅನಿಷ್ಟಗಳು ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿರುವುದನ್ನು ಗುರುತಿಸಿವೆ. ಮತ್ತು ಸೂಕ್ತ ಸಲಹೆಗಳನ್ನು ನೀಡಿವೆ. ಒಟ್ಟಾರೆ ಈ ಕೆಳಗಿನ ಸುಧಾರಣೆಗಳನ್ನು ಅಗತ್ಯವಾಗಿ ತರಬೇಕಾಗಿದೆ. ಅವುಗಳೆಂದರೆ :
1. ಮತಗಳ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿ ಜಾರಿಗೆ ತರಬೇಕಾಗಿದೆ.
2. ಅಭ್ಯರ್ಥಿಯ ಸ್ಥಾನ ತೆರವಾದರೆ ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಪ್ರತಿನಿಧಿಯೆಂದು ಘೋಷಿಸಿ ಮರು ಚುನಾವಣೆಯನ್ನು ತಪ್ಪಿಸಬೇಕು.
3. ಆಯ್ಕೆಯಾದ ಅಭ್ಯರ್ಥಿ ಜನರ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ, ಭ್ರಷ್ಟನಾದರೆ, ದುರಾಡಳಿತದಲ್ಲಿ ತೊಡಗಿದರೆ, ಅಂತಹ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆ.
4. ರಾಜಕೀಯ ಪಕ್ಷಗಳು ತಮ್ಮ ವರಮಾನ, ಖರ್ಚು ವೆಚ್ಚಗಳ ಬಗ್ಗೆ ಆಡಿಟೆಡ್ ಲೆಕ್ಕವನ್ನು ನೀಡಬೇಕು.
5. ವ್ಯಕ್ತಿಗಳು, ಕಂಪೆನಿಗಳು ಇತ್ಯಾದಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೂ ಸಹ ಆಡಿಟೆಡ್ ಲೆಕ್ಕವನ್ನು ನೀಡಬೇಕು.
6. ಪಕ್ಷಾಂತರಿಗಳ ಮೇಲೆ ಮತ್ತು ಗೆದ್ದ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಭ್ಯರ್ಥಿಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ 10 ವರ್ಷ ನಿಷೇಧ ಹೇರಬೇಕು ಮತ್ತು ಚುನಾವಣಾ ವೆಚ್ಚವನ್ನು ವಸೂಲಿ ಮಾಡಬೇಕು.
7. ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ತಿಳಿಯಪಡಿಸಿರುವ ಅಪರಾಧಗಳಿಗೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆಯಲ್ಲಿ ಅಪರಾಧವೆಸಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದ್ದರೆ ಅಥವಾ ರೌಡಿಶೀಟರ್ ಎಂದು ಘೋಷಿಸಲ್ಪಟ್ಟಿರುವವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು.
8. ಧರ್ಮ, ಜಾತಿ, ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ಜನರ ಐಕ್ಯತೆಯನ್ನು ಮುರಿಯುವ, ವಿಷವನ್ನು ಬಿತ್ತುವ, ಭಯ, ಅಭದ್ರತೆ, ಹಿಂಸೆ ಮತ್ತು ದ್ವೇಷವನ್ನು ಹುಟ್ಟುಹಾಕುವ ಯಾವುದೇ ರೀತಿಯ ಪ್ರಚೋದನೆಯನ್ನು ಮಟ್ಟ ಹಾಕಬೇಕು. ಇವುಗಳಿಗೆ ಕಾರಣರಾದವರನ್ನು ಚುನಾವಣಾ ಕಣದಿಂದ ನಿಷೇಧಿಸಬೇಕು.
9. ಮಾಧ್ಯಮಗಳು ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳಬಾರದು. ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿ ಜನ ಹಿತವನ್ನು ಕಾಪಾಡಬೇಕು.
10. ತಾಂತ್ರಿಕ ಕಾರಣಗಳಿಗೆ ಚುನಾವಣಾ ತಕರಾರು ಅರ್ಜಿಗಳನ್ನು ವಜಾ ಮಾಡುವುದು ನಿಲ್ಲಬೇಕು. ಸತ್ಯವನ್ನು ಕಂಡುಹಿಡಿದು ವ್ಯಾಜ್ಯಗಳನ್ನು ಬೇಗ ಇತ್ಯರ್ಥಗೊಳಿಸಬೇಕು.
11. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು.
12. ಮೀಸಲು ಸ್ಥಾನಗಳನ್ನು ರೊಟೇಶನ್ ಪದ್ಧತಿಗೆ ಒಳಪಡಿಸಬೇಕು.
ಶೇಕಡಾವಾರು ಮತ ಗಳಿಕೆಯ ಆಧಾರದ ಮೇಲೆ ಪಕ್ಷಗಳಿಗೆ ಪ್ರಾತಿನಿಧ್ಯ ನೀಡುವ ವಿಚಾರವನ್ನು ಚರ್ಚಿಸಬೇಕಾಗಿದೆ. ಇಂತಹ ಕ್ರಮಗಳಿಂದ ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಿ ಗಟ್ಟಿಗೊಳಿಸಬೇಕಾಗಿದೆ.