ಬಸವ ಜಾನಪದ: ಜನಸಾಮಾನ್ಯರು ಮರು ಸೃಷ್ಟಿಸಿಕೊಂಡ ಬಸವಣ್ಣ

ಅರುಣ್ ಜೋಳದಕೂಡ್ಲಿಗಿಯವರು ಕನ್ನಡದ ಯುವ ವಿದ್ವಾಂಸರು. ಜಾನಪದ ಕ್ಷೇತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಇವರು ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಪೂರ್ವ ಒಳನೋಟಗಳನ್ನು ಇವರ ಭಾಷಣಗಳು ಮತ್ತು ಲೇಖನಗಳು ನೀಡುತ್ತವೆ.

ಒಮ್ಮೆ ಕೂಡಲಸಂಗಮಕ್ಕೆ ಹೋದಾಗ ಲಿಂಗಾಯತ ಧರ್ಮದ ಕುರಿತು  ಆಯೋಜಿಸಿದ ಬೃಹತ್ ಸಮಾವೇಶವೊಂದರಲ್ಲಿ ಆಕಸ್ಮಿಕವಾಗಿ ಹಾಜರಾಗಿದ್ದೆ. ಅದು ಬಸವ ಉತ್ಸವ, 770 ಅಮರಂಗಳ ಚಿಂತನ ಮಥನ ಕಾರ್ಯಕ್ರಮವಾಗಿತ್ತು. ಈ ಸಮಾವೇಶದಲ್ಲಿ ನಾನು ಮಾತನಾಡಿಸಿದ ಅನೇಕರು ಬಸವ ಕಲ್ಯಾಣದ ಸುತ್ತಮುತ್ತಣ ಹಳ್ಳಿಗಳಿಂದ ಬಂದವರು. ಅದರಲ್ಲಿ ಬಹುಪಾಲು ಲಿಂಗಾಯತದ ಬೇರೆ ಬೇರೆ ಪಂಗಡಗಳಿಗೆ ಸೇರಿದವರಿದ್ದರು. ದಲಿತ ಕೆಳಜಾತಿಗಳ ಪ್ರಾತಿನಿಧ್ಯ ಬಡವಾದಂತಿತ್ತು. ಮುಖ್ಯವಾಗಿ ಪುರುಷ ಮಹಿಳೆಯರ ಸಂಖ್ಯೆ ಸಮಸಮವಾಗಿತ್ತು. ಅಂತೆಯೇ ಬಂದವರಿಗೆ ರುದ್ರಾಕ್ಷಿ ಮಾಲೆ ಮತ್ತು ವಿಭೂತಿಯನ್ನು ನೀಡಲಾಗಿತ್ತು. ಇದರಲ್ಲಿ ಹೆಚ್ಚು ಬಿಳಿಬಟ್ಟೆ ತೊಟ್ಟಿದ್ದರು. ಸ್ಟೇಜಲ್ಲಿ ದೊಡ್ಡದಾದ ಲಿಂಗದ ಪ್ರತಿಷ್ಠಾಪನೆ ಮಾಡಲಾಗಿತ್ತು. ಕನಿಷ್ಠ ಹತ್ತು ಸಾವಿರದಷ್ಟು ಜನರು ಸೇರಿದ್ದರು. ಹತ್ತಾರು ಉಪನ್ಯಾಸಗಳು ಏರ್ಪಟ್ಟವು. ಈ ಸಭೆ `ಬಸವಣ್ಣ’ ಸಮುದಾಯದಲ್ಲಿ ನೆಲೆಗೊಂಡಿರುವ ಒಂದು ಮಾದರಿಯನ್ನು ತೋರಿಸುತ್ತಿತ್ತು. ಲಿಂಗಾಯತ ಧರ್ಮದ ಚರ್ಚೆಯ ಕಾರಣಕ್ಕೆ ಬಸವಣ್ಣನನ್ನು ಒಳಗೊಂಡಂತೆ ಇತರೆ ಶರಣರ ವಚನಗಳ ವಿಶ್ಲೇಷಣೆಗೆ ಹೊಸ ಹೊಳಪು ಬಂದಂತಿತ್ತು.

ಅದೆ ದಿನದ ಸಂಜೆ ಹುಮನಾಬಾದ ಸಮೀಪದ ಗಡವಂತಿ ಎಂಬ ಹಳ್ಳಿಗೆ ಭೇಟಿಕೊಟ್ಟೆ. ರಾತ್ರಿ ಅಲ್ಲಿನ ಬುದ್ಧ ವಿಹಾರದಲ್ಲಿ ಭಜನೆ ನಡೆಯಿತು. ಈ ಭಜನೆಯಲ್ಲಿ ಕ್ರಮವಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಕುರಿತು ಹಾಡಿದರು. ಇದರ ಹಿನ್ನೆಲೆ ವಿಚಾರಿಸಿದೆ. `ಮೊದಲ ಮುನುಷ್ಯರಿಗೆ ಬೆಳಕು ತೋರಿದವ ಬುದ್ಧ, ಆಮ್ಯಾಲೆ ಬಸವ, ಈಗ ಕಲಿಯುಗದಾಗ ಅಂಬೇಡ್ಕರ್ ರೀ.. ಹಂಗಾಗಿ ನಾವು ಬುದ್ಧ ಬಸವ ಅಂಬೇಡ್ಕರ್ ಕುರಿತು ಹಾಡತೇವಿ.. ಅವರನ್ನು ನಮ್ ಊರಾಗ ಉಳಿಸಿಕೊಂಡಿವಿ’ ಎಂದರು.

ಬೆಳಗ್ಗೆ ನೋಡಿದ ಬಸವ ಉತ್ಸವದ ದೊಡ್ಡ ದೊಡ್ಡ ಭಾಷಣಗಳಲ್ಲಿ ತೋರಿಕೆಯ ವೇಷಭೂಷಣಗಳಲ್ಲಿ ಬಸವನನ್ನು ಕಟ್ಟಿಕೊಂಡ ಮಾದರಿಗಿಂತ ಗಡವಂತಿಯ ದಲಿತ ಸಮುದಾಯದವರು ತಮ್ಮ ಭಜನೆಗಳಲ್ಲಿ ಬಸವನನ್ನು ಕಟ್ಟಿಕೊಂಡ ಪರಿ ವಿಶಿಷ್ಠವಾಗಿತ್ತು.

ಹಾಗೆ ನೋಡಿದರೆ ಬಸವ ನಂತರದ ಕಾಲಘಟ್ಟದಿಂದ ಈತನಕ ಜನಸಾಮಾನ್ಯರು ತಮ್ಮೊಳಗೆ ಬಸವನನ್ನು ಬಹುನೆಲೆಗಳಲ್ಲಿ ಕಟ್ಟಿಕೊಂಡಿದ್ದಾರೆ. ಹೀಗೆ ಬಸವನನ್ನು ಮರುಸೃಷ್ಠಿಸಿಕೊಂಡ ರೂಪಗಳು ಹಲವು. ಜನರಲ್ಲಿ ನೆಲೆಗೊಂಡ ಬಸವನ ಈ ಬಹುನೆಲೆಗಳನ್ನು ಶೋಧಿಸುವಾಗ ನಮಗೆ `ಬಸವ ಜಾನಪದ’ ಲೋಕ ಕಾಣುತ್ತದೆ. ಬಸವನನ್ನು ಹಾಡು ಕತೆಗಳಲ್ಲಿ, ನಂಬಿಕೆ ಲೋಕದಲ್ಲಿ, ಆಚರಣೆಗಳಲ್ಲಿ, ನಡೆನುಡಿಗಳಲ್ಲಿ, ಕಲೆ ಸಂಪ್ರದಾಯಗಳಲ್ಲಿ ಅಡಕಗೊಳಿಸಿಕೊಂಡಿದ್ದಾರೆ. ಹೀಗೆ ಅಡಕಗೊಂಡ ಬಸವಣ್ಣನನ್ನು ಹುಡುಕುವುದು `ಬಸವ ಜಾನಪದ’ದ ಆಶಯ.

ಮುಖ್ಯವಾಗಿ ಶಿಷ್ಟ ಪರಂಪರೆಯ ಕೃತಿಗಳಲ್ಲಿ ಬಸವನ ಅಭಿವ್ಯಕ್ತಿಯಂತೆ, ಜನರ ಮಾಧ್ಯಮವಾದ ಜನಪದದಲ್ಲಿ ಬಸವನ ಅಭಿವ್ಯಕ್ತಿ ಭಿನ್ನವಾಗಿದೆ. ಜನರು ಬಸವನ ಯಾವ ಸಂಗತಿಗಳನ್ನು ಆಯ್ದು ಮರುಕಟ್ಟಿದ್ದಾರೆ, ಯಾವುದನ್ನು ಬಿಟ್ಟಿದ್ದಾರೆ ಎನ್ನುವುದು ವಿಶ್ಲೇಷಿಸಬಹುದಾದ ವಿಷಯ. ಇಂತಹ ಆಯ್ಕೆಯ ಹಿಂದಿನ ರಾಜಕಾರಣವನ್ನು ಚರ್ಚೆ ಮಾಡಿದರೆ `ಬಸವ ಜಾನಪದ’ ದ ಪರಿಕಲ್ಪನೆ ಅರ್ಥವಾಗುತ್ತಾ ಹೋಗುತ್ತದೆ. ಈ ಬರಹದಲ್ಲಿ `ಬಸವ ಜಾನಪದ’ ಕುರಿತ ಚರ್ಚೆಯ ಕೆಲವು ಆಯಾಮಗಳ ಕಡೆ ಗಮನಸೆಳೆಯಲು ಪ್ರಯತ್ನಿಸುವೆ.

-1-

ವಚನಪರಂಪರೆಯ ಬಸವಣ್ಣ ಈ ಲೋಕವನ್ನು ನೋಡಿದ ಬಗೆಗೆ ಬಹುನೆಲೆಯ ಚರ್ಚೆಗಳಾಗಿವೆ. ಈ ಚರ್ಚೆಗಳು ಹೆಚ್ಚಾಗಿ ಶಿಷ್ಟಪರಂಪರೆಯಲ್ಲಿ ನಡೆದಿವೆ. ಅಂದರೆ ಬಸವನ ವಚನಗಳ ಮೂಲಕ ಆತನ ಜತೆಗಿನ ಸಂವಾದದ ಮಾದರಿಯಿದು. ಆದರೆ ಜನಪದ ಪರಂಪರೆ ಇದಕ್ಕೆ ಎದುರಾಗಿ ಈ ಲೋಕ ಯಾವ ಯಾವ ರೂಪದಲ್ಲಿ ಬಸಣ್ಣನನ್ನು ಜೀವಂತಗೊಳಿಸಿದೆ, ಈ ಬಗೆಯ ಜನಸಮುದಾಯಗಳ ಮುಖಾಮುಖಿಯ ಸ್ವರೂಪ ಯಾವುದು ಎನ್ನುವುದನ್ನು ಕಾಣಿಸುತ್ತದೆ. ಇಲ್ಲಿನ ಬಸವ ಜಾನಪದಕ್ಕೆ ಮುಖ್ಯವಾಗಿ ಮೂರು ಆಯಾಮಗಳಿವೆ. ಅದರಲ್ಲಿ ಮೊದಲನೆಯದು ಬಸವನ ನಂತರದಲ್ಲಿ ಶಿಷ್ಟಸಾಹಿತ್ಯದಲ್ಲಿ ಬಸವನ ಮರುಕಟ್ಟುವಿಕೆ ನಡೆಯಿತು. ಈ ಶಿಷ್ಟಕೃತಿಗಳಿಗೆ ಆಗಿನ ಜನಸಮುದಾಯದೊಳಗಿನ ಬಸವನ ರೂಪವೂ ಪ್ರೇರಣೆ ಒದಗಿಸಿತ್ತು. ಹೀಗೆ ಶಿಷ್ಟಕೃತಿಗಳಲ್ಲಿರುವ ಜನರ ನಂಬಿಕೆಯ ಲೋಕದ ಬಸವನನ್ನು ಗುರುತಿಸಬಹುದು.

ಇದರಲ್ಲಿ ಮುಖ್ಯವಾದದ್ದು ಹರಿಹರನ `ಬಸವರಾಜ ದೇವರ ರಗಳೆ’. ಇಡೀ ಕೃತಿ ಜನಪದ ಲೋಕಗಳ ಪ್ರಭಾವಗಳಲ್ಲಿ ಬರೆದದ್ದು. ಕಾರಣ ಬಸವಣ್ಣ ಬದುಕಿದ್ದ ಕಾಲಕ್ಕೆ ಜನರು ಆತನನ್ನು ಪವಾಡ ಪುರುಷನನ್ನಾಗಿ ಕಟ್ಟಿಕೊಂಡಿದ್ದರು. ಅಂತೆಯೇ ಬಸವಣ್ಣನ ಅಂತ್ಯದ ನಂತರ ಸಹಜವಾಗಿ ಬಸವಣ್ಣ `ಪವಾಡ ಪುರುಷ’ ನಾಗಿ ಬದಲಾಗುತ್ತಾನೆ. ಇಂತಹ ಜನಪದರ ಪವಾಡಗಳನ್ನು ಹರಿಹರ ಆಯ್ದುಕೊಂಡು ಸಣ್ಣಪುಟ್ಟ ಮಾರ್ಪಾಟು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ಬಸವರಾಜ ಮಲಶೆಟ್ಟರು ಗುರುತಿಸುತ್ತಾರೆ. ನಂತರದಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಭೀಮಕವಿಯ `ಬಸವ ಪುರಾಣ’. ಇದು ತೆಲುಗಿನ ಪಾಲ್ಕುರಿಕೆ ಸೋಮನಾಥನ ` ಬಸವ ಪುರಾಣುಮು’ ಕೃತಿಯಿಂದ ಕನ್ನಡಕ್ಕೆ ಬಂದದ್ದು. ಷಡಕ್ಷರದೇವನ `ವೃಷಭೇಂದ್ರ ವಿಜಯ’ ರಾಚಪ್ಪಯ್ಯನ `ನಂದಿ ಆಗಮಲೀಲೆ’ ಕೃತಿಗಳನ್ನು ಗಮನಿಸಬಹದು. ಈ ಎಲ್ಲಾ ಶಿಷ್ಟ ಕಾವ್ಯಗಳಲ್ಲಿ ಜನಸಮುದಾಯದ ಒಳಗೆ ನೆಲಸಿದ್ದ ಬಸವಣ್ಣನ ಬೇರುಗಳು ಇರುವುದನ್ನು ಮರೆಯುವಂತಿಲ್ಲ. ಹಾಗಾಗಿ ಈ ಸಂಗತಿಯೂ ಬಸವ ಜಾನಪದವನ್ನು ಮತ್ತೊಂದು ಆಯಾಮವನ್ನು ಗುರುತಿಸಲು ನೆರವಾಗುತ್ತದೆ.

ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದರೆ ಮುಖ್ಯವಾಗಿ ಬಸವಣ್ಣನನ್ನು ಮುಖಾಮುಖಿ ಮಾಡಿದ ದೊಡ್ಡ ಪ್ರಮಾಣದ ಸಾಹಿತ್ಯ ಲಭ್ಯವಿದೆ. ಇದರಲ್ಲಿ 80-90ರ ದಶಕವನ್ನು ಗಮನಿಸಿದರೆ, ಲಂಕೇಶರ `ಸಂಕ್ರಾಂತಿ’, ಹೆಚ್.ಎಸ್.ಶಿವಪ್ರಕಾಶ್ ಅವರ `ಮಹಾಚೈತ್ರ’ ಈಚಿನ ಮಲ್ಲಿಕಾಘಂಟಿ ಅವರ `ಹೊನ್ನಶೂಲ’ ದ ತನಕ್ಕ ದೊಡ್ಡಪಟ್ಟಿಯನ್ನೆ ಕೊಡಬಹುದು. ಇಲ್ಲಿಯೂ ವಚನಪರಂಪರೆಯನ್ನು, ಬಸವಣ್ಣನನ್ನು ಭಿನ್ನವಾಗಿ ಮುಖಾಮುಖಿ ಮಾಡಿದ್ದಾರೆ. ಈ ಎಲ್ಲವುಗಳ ವಿಸ್ತಾರವಾದ ವಿಶ್ಲೇಷಣೆಯಲ್ಲಿ ಜನಸಮುದಾಯದ ಬಸವಣ್ಣನ ನೆಲೆಗಳನ್ನು ಹುಡುಕಲು ಸಾಧ್ಯವಿದೆ.

ಮತ್ತೊಂದು ಆಯಾಮದಲ್ಲಿ ಬಸವಣ್ಣ ಕೂಡ ಜಾನಪದ ಲೋಕವನ್ನು ಹೇಗೆ ಕಂಡಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. `ಕಲ್ಲು ದೇವರು ದೇವರಲ್ಲ/ಮಣ್ಣು ದೇವರು ದೇವರಲ್ಲ/ಮರದ ದೇವರು ದೇವರಲ್ಲ/ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ/ಸೇತುಬಂಧ ರಾಮೇಶ್ವರ, ಗೋಕರ್ಣ, ಕೇದಾರ ಪುಣ್ಯಕ್ಷೇತ್ರದ ದೇವರು ದೇವರಲ್ಲ/ ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ ದೇವನೋಡ ಅಪ್ರಮಾಣ ಕೂಡಲ ಸಂಗಮದೇವ’ ಎನ್ನುತ್ತಾರೆ. ಇಲ್ಲಿ ವೈದಿಕಶಾಹಿ ದೇವರುಗಳನ್ನು ದೇವರಲ್ಲ ಎಂದು ನಿರಾಕರಿಸುವ ಭರದಲ್ಲಿ ಜನಪದರ ನಂಬಿಕೆಯ ಲೋಕವಾದ ಕಲ್ಲು, ಮಣ್ಣು, ಮರ ದೈವಗಳನ್ನು ನಿರಾಕರಿಸುವುದನ್ನು ನೋಡಬಹುದು. ಮತ್ತೊಂದು ವಚನದಲ್ಲಿ `ಬೀರ ಮೈಲಾರ, ಮಾರಿ ಮಸಣೆಯರ ಬಣಗು ದೈವಗಳ ಪೂಜಿಸಿ’ ಬಣಗೆಟ್ಟರು ಎನ್ನುತ್ತಾರೆ. ಬಸವಣ್ಣನವರು ಏಕದೇವತಾರಾಧಾನೆ ಹೇಳುವಾಗ ಜನಪದ ದೈವಗಳನ್ನು ಬಣಗು ದೈವಗಳೆಂದು ಜರಿಯುತ್ತಾನೆ. ಸಣ್ಣಸಣ್ಣ ಸಂಗತಿಗಳನ್ನು ಸುಕ್ಷ್ಮವಾಗಿ ಆಲೋಚಿಸುವ ಬಸವಣ್ಣ ಈ ವಿಷಯದಲ್ಲಿ ಯಾಕೆ ಜನಪದರ ನಂಬಿಕೆಯ ಲೋಕದ ಆಳಕ್ಕೆ ಇಳಿಯಲಿಲ್ಲ ಎಂದು ಅಚ್ಚರಿಯಾಗುತ್ತದೆ.

ಒಂದೆಡೆ ಜನಪದ ನಂಬಿಕೆಲೋಕವನ್ನು ನಿರಾಕರಿಸುವ ಬಸವಣ್ಣ ಮತ್ತೊಂದೆಡೆ ಅದೇ ಜನಪದ ಲೋಕದ ವಿವೇಕವನ್ನು ತಮ್ಮ ವಚನಗಳಲ್ಲಿ ತರುವುದನ್ನು ನೋಡಬಹುದು. ಸ್ವತಃ ಬಸವಣ್ಣನ ಮೇಲೂ ಜಾನಪದ ಲೋಕದ ದಟ್ಟ ಪ್ರಭಾವ ಆದಂತಿದೆ. ಮುಖ್ಯವಾಗಿ ಅವರ ವಚನಗಳಲ್ಲಿ ಜನಪದರ ನುಡಿಗಟ್ಟು ಗಾದೆಗಳನ್ನು ವ್ಯಾಪಕವಾಗಿ ಬಳಸಿಕೊಂಡಿದ್ದಾಗಿ ಕಾಣುತ್ತದೆ. `ಒಲ್ಯಾನ ಬೆಂಕಿ ಆರ್ತೈತ್ಯಂತ ಗುಡ್ಡಕ ಹತ್ತಿದ ಬೆಂಕಿ ಆರೀತಾ’ ಎಂಬ ವಚನದ ಸಾಲು `ಒಲೆಹತ್ತಿ ಉರಿದೊಡೆ ನಿಲಬಹುದಲ್ಲದೆ, ನೆಲಹತ್ತಿ ಉರಿದೊಡೆ ನಿಲಬಹುದೆ?’ ಗಾದೆಯನ್ನು ನೆನಪಿಸುತ್ತದೆ. ಅಂತೆಯೇ ವಚನದ ಸಾಲು `ಬೇಲಿಕೆಯ್ಯಮೇವಡೆ’ `ಬೇಲಿ ಎದ್ದು ಹೊಲ ಮೇಯ್ದಂತೆ’ ಗಾದೆಯಂತಿದೆ, `ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?’ ಸಾಲು `ಮಂಗ್ಯಾನ ಕೈಯಾಗ ಮಾಣಿಕ್ಯ ಕೊಟ್ಟಾಂಗ’ ಗಾದೆಗೆ ಹೋಲುತ್ತದೆ. ಹೀಗೆ ಬಸವಣ್ಣನವರ ವಚನಗಳನ್ನು ಪರಿಶೀಲಿಸಿದರೆ ಜನಪದ ಲೋಕದ ವಿವೇಕ ಅವರ ವಚನಗಳಲ್ಲಿ ಮರುಸೃಷ್ಠಿಯಾಗಿರುವುದು ಕಾಣುತ್ತದೆ.

-2-

ಮೂರನೆ ಆಯಾಮ ಜನಸಮುದಾಯಗಳು ಬಸವನನ್ನು ಹೇಗೆ ಮರುಕಟ್ಟಿಕೊಂಡಿವೆ ಎನ್ನುವುದರ ಹುಡುಕಾಟ. ಇದುವೆ ಬಸವ ಜಾನಪದದ ಮುಖ್ಯ ಆಯಾಮವಾಗಿದೆ. ಈ ನೆಲೆಯ ಬಗ್ಗೆ ಹೆಚ್ಚು ವಿವರಿಸಲು ಪ್ರಯತ್ನಿಸುವೆ. `ನಡೆ ಮತ್ತು ನುಡಿಗಳು ಒಂದನ್ನೊಂದು ಅನುಸರಿಸದೇ ಇರುವುದೇ ನಮ್ಮ ಸುತ್ತಲಿನ ಸಮಾಜದ ಅವ್ಯವಸ್ಥೆಗೆ ಕಾರಣವೆಂಬುದು ವಚನಕಾರರ ದಾಟಿ.  ನಡೆಗೂ ನುಡಿಗೂ ನಡುವೆ ಸಂಪರ್ಕ ಕಲ್ಪಿಸುವ ಒಂದು ಸಾಧನ ಬೇಕು. ಇದನ್ನು ಸ್ವಪರೀಕ್ಷೆ ಅಥವಾ ಆತ್ಮಪರಿವೀಕ್ಷಣೆ ಮುಂತಾದ ಮಾತುಗಳಿಂದ ಸೂಚಿಸಬಹುದು. ಈ ಸಾಧನದ ಗೈರುಹಾಜರಿಯೇ ನಡೆ ನುಡಿಗಳನ್ನು ಬೇರ್ಪಡಿಸುತ್ತದೆ. ಈ ಸಾಧನವನ್ನು ರೂಪಿಸಿಕೊಂಡರೆ ಈ ವಿರೋಧವನ್ನು ನಿವಾರಿಸಬಹುದು. ವಚನಕಾರರು ತಮ್ಮ ಎಲ್ಲ ಮಾತುಗಳನ್ನು ಅಂತರಂಗದ ಸಾಕ್ಷಿಯಲ್ಲಿ ಅಥವಾ ಇಷ್ಟದೈವದ ಹಾಜರಿಯಲ್ಲಿ ಹೇಳುತ್ತಾರೆ. ಕೊರತೆ ಬಿದ್ದ ಸಾಧನವನ್ನು ಈ ಅಂತರಂಗ ಸಾಕ್ಷಿತ್ವದಿಂದ ತುಂಬಿಕೊಳ್ಳಲು ಪ್ರಯತ್ನಿಸಿದ್ದು ಸ್ಪಷ್ಟವಾಗಿದೆ’ ಎಂದು ಕೆ.ವಿ. ನಾರಾಯಣ (ತೊಂಡುಮೇವು-2, ಪು-91) ವಚನ ಪರಂಪರೆಯ ಬಗ್ಗೆ ಬಹು ಮುಖ್ಯವಾದ ಮಾತನ್ನು ಹೇಳುತ್ತಾರೆ. ಬಹುಶಃ ಈ `ನಡೆನುಡಿ’ ತತ್ವವೇ ಜನಸಮುದಾಯಗಳಲ್ಲಿ ಬಸವನನ್ನು ಒಳಗೊಂಡಂತೆ ವಚನ ಪರಂಪರೆ ಹೆಚ್ಚು ನೆಲೆಗೊಂಡಂತೆ ಕಾಣುತ್ತದೆ. ಇದರ ಭಾಗವಾಗಿಯೆ ಮಂಟೇಸ್ವಾಮಿಯು ಕಲ್ಯಾಣದ ಪರೀಕ್ಷೆ ಮಾಡುವ `ಕಲ್ಯಾಣ ಪಟ್ಟಣದ’ ಸಾಲಿನ ಘಟನೆ ಜನಪದ ಲೋಕ ಕಲ್ಯಾಣವನ್ನೂ, ಬಸವನನ್ನೂ ನೋಡಿದ ವಿಮರ್ಶಾತ್ಮಕ ನೆಲೆಗೂ ಸಾಂಕೇತಿಕತೆಯಂತಿದೆ.

ಇದರ ಪರಿಣಾಮವೆಂಬಂತೆ ಬಸವನನ್ನು ಒಳಗೊಂಡಂತೆ ಕಲ್ಯಾಣದ ಪ್ರಭಾವ ಕೂಡ ಜನಸಮುದಾಯದ ಭಾಗವಾಗಿ ಮತ್ತೆ ಮತ್ತೆ ಕಲ್ಯಾಣದ ಕಟ್ಟುವಿಕೆ ನಡೆದಿದೆ. 12ನೇ ಶತಮಾನದಲ್ಲಿ ಶರಣರು ಕಟ್ಟಬಯಸಿದ ಕಲ್ಯಾಣವನ್ನು `ಸಮಯ ಕಲ್ಯಾಣ’ ಎಂದು ಕರೆಯಲಾಗುತ್ತದೆ. ನಂತರದಲ್ಲಿ `ಕಲ್ಯಾಣ’ ಬೇರೆ ಬೇರೆ ರೂಪದಲ್ಲಿ ಪುನರ್ ಸೃಷ್ಠಿಯಾಗತೊಡಗಿತು. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ `ವಿಜಯಕಲ್ಯಾಣ’ ರೂಪುಗೊಂಡರೆ,  ಕೊಡೆಕಲ್ಲು ಬಸವಣ್ಣನನ್ನು ಒಳಗೊಂಡಂತೆ ಮಂಟೇಸ್ವಾಮಿ, ರಾಚಪ್ಪಾಜಿಯರನ್ನು ಒಳಗೊಂಡ `ಅಮರಕಲ್ಯಾಣ’ ಬೆಳೆಯಿತು. ಇದನ್ನೆ ಕಡೇ ಕಲ್ಯಾಣ ಎಂದಾಗ್ಯೂ, ನಾಗಾವಿಯಲ್ಲಿ ಗುಂಡಬಸವ ಎನ್ನುವವ `ಧರ್ಮಕಲ್ಯಾಣ’ ಕಟ್ಟಲು ಪ್ರಯತ್ನಿಸಿದ. ಶಹಾಪುರದಲ್ಲಿ ಡಿಗ್ಗಿ ಎನ್ನುವ ಗ್ರಾಮದ ಸಂಗಮನಾಥನು ಮತ್ತೆ ಕಲ್ಯಾಣಕಟ್ಟುವ ಪ್ರಯತ್ನ ಮಾಡುತ್ತಾನೆ. ಇದನ್ನು ಹೊರತುಪಡಿಸಿಯೂ ಕಲ್ಯಾಣವನ್ನು ನೆನಪಿಸುವ ಗ್ರಾಮನಾಮಗಳಿವೆ. ಅವುಗಳಲ್ಲಿ ಕಲ್ಯಾಡಿ (ಅರಸಿಕೆರೆ ತಾಲೂಕು), ಕಲ್ಲಣೆ (ತುರುವೆಕೆರೆ ತಾಲೂಕು)  ಕಲ್ಯಾಣಪುರ (ತುಮಕೂರು, ಕೆ.ಆರ್.ನಗರ. ಮಾಗಡಿ ಈ ಮೂರು ತಾಲೂಕುಗಳವೆ) ಕಲ್ಯಾಣಿ ಕಾವಲು, ಕಲ್ಯಾಣಿ ಒಡೆಯರ ಮಠ (ಮಾಗಡಿ ತಾಲೂಕು) ಕಲ್ಯಾಣ (ಶಿಗ್ಗಾವಿ ತಾಲೂಕು) ಇನ್ನು ಮುಂತಾದವುಗಳನ್ನು ನೋಡಬಹದು.

ಬಾಲ್ಯದಲ್ಲಿ ನನ್ನಪ್ಪ ಹೇಳುತ್ತಿದ್ದ ಘಟನೆ ನೆನಪಿದೆ. ಬಸವ ಜಯಂತಿಗೆ ನನ್ನಪ್ಪ ಬಾಲ್ಯದಲ್ಲಿ ಮಕ್ಕಳ ಜತೆ ಬಸವಣ್ಣ ಕುದುರೆ ಮೇಲೆ ಕೂತ ಮರದ ಮೂರ್ತಿ ಹೊತ್ತು ಮನೆಮನೆಗೆ ಹೋಗುತ್ತಿದ್ದರಂತೆ. ಆಗ ಮಕ್ಕಳು ಬಸವಣ್ಣನ ಕುರಿತು `ಬಸವಣ್ಣ ಬಂದಾನ, ಬಾಗಿಲಲ್ಲಿ ನಿಂತಾನ/ ಬಿಳಿಕುದುರಿ ಏರ್ಯಾನ| ನಗುನಗುತಾ ನಿಂತಾನ/ ಬಸವಣ್ಣನ ಹಣೆಯ ಮೇಲೆ ವಿಭೂತಿ ಧರಿಸ್ಯಾನ| ಕಾಯಕದಲ್ಲಿಯೇ ಕೈಲಾಸ ಕಾಣಿರೆಂದು ಹೇಳ್ಯಾನ’ ಎಂದು ಹಾಡುತ್ತಿದ್ದರಂತೆ. ಆದರೆ ಈ ವಾರ್ಷಿಕ ಆಚರಣೆ ನನ್ನ ಬಾಲ್ಯದ ಕಾಲಕ್ಕೆ ನಿಂತುಹೋಗಿತ್ತು. ಇದನ್ನು ನೋಡಿದರೆ ಕಾಲಕಾಲಕ್ಕೆ ಬಸವನ ಬಗ್ಗೆ ಹುಟ್ಟಿದ ಜನಪದ ಅಭಿವ್ಯಕ್ತಿಗಳು ಸ್ವಲ್ಪಕಾಲದ ನಂತರ ಮರೆಯಾದದ್ದು ಇದೆ. ಜನಪದರಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸಿದಾಗ (ಎಡವಿ ಬಿದ್ದಾಗ, ತಕ್ಷಣ ಮುಗುಚಿದಾಗ) ತಕ್ಷಣಕ್ಕೆ `ಬಸವ’ ಎನ್ನುತ್ತಾರೆ. ಇಂತಹ ಸಂದರ್ಭಗಳಲ್ಲಿ `ಅಮ್ಮಾ’ ಅಥವಾ `ಅವ್ವಾ’ ಎನ್ನುವ ರೂಢಿಯಿತ್ತು ಈ `ಅವ್ವ’ ನ ಸ್ಥಾನದಲ್ಲಿ `ಬಸವಾ’ ಎಂದು ಬದಲಾದಂತಿದೆ. ಅವ್ವನನ್ನು ನೆನೆವಲ್ಲಿ ಬಸವನನ್ನು ನೆನೆಯುವುದು ಜನಪದರು ಬಸವನಿಗೆ ನೀಡಿದ ಸ್ಥಾನಕ್ಕೆ ರೂಪಕದಂತಿದೆ.

ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯುತ್ತಿ

ಕಲ್ಯಾಣದ ಬಸವಣ್ಣ| ಇರುವಾಗ

ಕಲ್ಲೀಗೆ ಯಾಕ ಕೈಮುಗೀತಿ.

ಎನ್ನುವುದು ಬಸವನ ಪ್ರಭಾವದಲ್ಲಿ ದೇವರನ್ನು ಸರಳವಾಗಿಯೂ, ಸಂಗಾತಿಯನ್ನಾಗಿಯೂ ಪರಿಭಾವಿಸುವಲ್ಲಿ ಜನಪದರು `ಕಲ್ಲಿನ’ ದೇವರ ಬಗ್ಗೆ ತಿರಸ್ಕಾರದ ಭಾವ ಮೂಡಿರುವುದು ಕಾಣುತ್ತದೆ. ಅಂತೆಯೇ ರೈತ ಸಮುದಾಯದಲ್ಲಿ ಸಹಜವಾಗಿದ್ದ ನಿಸರ್ಗದ ಆರಾಧನೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.

ಜನಪದ ವಿದ್ವಾಂಸರಾದ ಶಿವಾನಂದ ಗುಬ್ಬಣ್ಣನವರು `ಬಸವಣ್ಣ ನಿನ್ನ ಹೆಸರು ದೆಸೆದೆಸೆಗೆ ಶಿವಮಂತ್ರ’ ಎನ್ನುವ ಪುಸ್ತವನ್ನು ಸಂಪಾದಿಸಿದ್ದಾರೆ. ಈ ಕೃತಿ ಜನಪದರಲ್ಲಿ ಬಸವಣ್ಣನ ಬಗ್ಗೆ ಹುಟ್ಟಿದ ಹಾಡಿಕೆಗಳನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ಡೊಳ್ಳಿನ ಹಾಡು, ಕೋಲುಪದ, ಲಾವಣಿ, ಗೀಗಿ, ರಿವಾಯ್ತ್, ಜೋಗುಳ ಹಾಡುಗಳನ್ನು ಒಳಗೊಂಡಿದೆ. ಇಲ್ಲಿ ಹಾಡಿನ ಪ್ರಕಾರಕ್ಕೆ ವಿಶಿಷ್ಟವಾದ ಲಕ್ಷಣಗಳಲ್ಲಿ ಬಸವಣ್ಣ ಮರುಹುಟ್ಟು ಪಡೆದಿದ್ದಾನೆ. ಕೋಲಾಟ ಹಾಡಿಕೆಯನ್ನು ಹೆಚ್ಚು ಯುವಕರು ಹಾಡುವ ಕಾರಣ ಬಸವನನ್ನು ಯುವಕನನ್ನಾಗಿ ಪರಿಭಾವಿಸಿ ಹಾಡುತ್ತಾರೆ. ಡೊಳ್ಳಿನ ಪದಗಳಲ್ಲಿ ಭಕ್ತಿ ಹೆಚ್ಚಾಗಿದೆ. ಅಂತೆಯೇ ಜೋಗುಳ ಪದದಲ್ಲಿ ಮಕ್ಕಳಿಗೆ ಬಸವ ತತ್ವವನ್ನು ರೂಢಿಸುವ ದಾಟಿಯಿದೆ.

ಉದಾ:

ಬಸವನಂತವರು ಭಕ್ತರ್ಯಾರಿಲ್ಲ

ಬಂಗಾರದ ಸರಿ ವಡವೆಗಳಿಲ್ಲ

ಸಂಗಮನ ಭಕ್ತ ಹೌದು ಕೇವಲ

ಹೀಂಗ ಬಸವ ಅಂದವರಿಗೆ

ಕುಡಿಸುವನು ಹಾಲ ಜೋ..ಜೋ..|

ಕೆಟ್ಟಕಲಿಯುಗ ಬಂದು ಸೃಷ್ಟಿಗೆ ನಿಂತು

ಕಲ್ಯಾಣ ಪಟ್ಟಣದ ಕಡೆ ಆಟವಾಯಿತು

ಬಲ್ಲೀದ ಬಸವಣ್ಣನ ಆಳೀಕೆ ಮುಗಿಯೀತು

ಹೀಂಗ ಖುಲ್ಲ ಜೈನರ ವಂಶ ನಿಲ್ಲದೆ ಅಳೀತು..ಜೋ ಜೋ|

ಹೀಗೆ ಜೋಗುಳದ ಹಾಡಿನಲ್ಲಿ ಮಹಿಳೆಯರು ಬಸವನನ್ನು ಕಂಡಿರುವ ಬಗೆಯೂ ವಿಶಿಷ್ಟವಾಗಿದೆ. ಆರಂಭಕ್ಕೆ ಉಲ್ಲೇಖಿಸಿದ ಬಸವ ಕಲ್ಯಾಣ ಭಾಗದ ದಲಿತ ಸಮುದಾಯದ ಭಜನೆಗಳಲ್ಲಿ ಬಸವನನ್ನು ಬುದ್ಧನ ಜತೆಗೂ, ಅಂಬೇಡ್ಕರ್ ಜತೆಗೂ ಹೋಲಿಸಿ ಮರುಕಟ್ಟಿದ್ದಾರೆ. ಈ ಹೋಲಿಕೆಯು ದಲಿತಲೋಕ ಕಂಡ ಬಸವಣ್ಣನ ಒಂದು ಚಿತ್ರವನ್ನೂ ಕೊಡುತ್ತದೆ.

ಉದಾ:

`ಬುದ್ಧ ಬಸವ ಗೀತೆ’

ಓ ಬುದ್ಧ ಬಸವ ಪದ್ಯ ಹಾಡೀರೇ

ವಿದ್ಯಾವಂತರಾಗಿರೆ, ಬುದ್ಧಿವಂತರಾಗಿರೇ||

ಸಿದ್ಧಾರ್ಥ ತಪವ ಮಾಡಿದಾ

ಜನರ ಹಿತಕೆ ಬೆಳಕನು ನೀಡಿದಾ

ಪಂಚಶೀಲ ನುಡಿದಾ| ಅಷ್ಟಶೀಲಾ ಹೇಳಿದಾ||

ಬಸವನು ವಚನ ನೀಡಿದಾ

ಲೋಕ ಕಲ್ಯಾಣಕ್ಕಾಗಿ ಧರ್ಮ ತೋರಿದಾ

ಶಿವನ ಮಂತ್ರ ನುಡಿದಾ| ಶರಣ ತತ್ವ ಬೀರಿದ||

ಮನುಕುಲಕೆ ಮಾರ್ಗವ ತೋರಿದಾ

ಮಾನವ ಧರ್ಮದ ಗರ್ವ ಅರಹಿದಾ

ಬುದ್ಧ ಶ್ರದ್ಧೆಯ ನೀಡಿದಾ

ಬಸವ ಹೊಸತನ ಮಾಡಿದಾ..||

ಜನಪದ ವಿದ್ವಾಂಸರಾದ ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ ಕರಪಾಲ ಮೇಳದವರು ಹಾಡಿದ ಬಸವ ಪುರಾಣದಲ್ಲಿ ಹೆಚ್ಚು ಬಸವನ ಪವಾಡಗಳವೆ. ಹೀಗೆ ಜನಪದ ಹಾಡುಗಳಲ್ಲಿ ಯಥೇಚ್ಚವಾಗಿ ಬಸವನ ಹುಟ್ಟಿನ ಬಗೆಗೆ, ಉಪನಯನ ನಿರಾಕರಿಸಿದ ಬಗೆಗೆ, ಶರಣರನ್ನು ಬಹುಬಗೆಯಲ್ಲಿ ಪರೀಕ್ಷೆಗೆ ಒಡ್ಡಿದ ಬಗೆಗೆ ಪವಾಡಗಳ ಕಥೆಗಳು ಹಾಡಿನ ರೂಪು ಪಡೆದಿವೆ.

-3-

ಜನಪದ ರಂಗಭೂಮಿಯ ಪರಂಪರೆಯಲ್ಲಿಯೂ ಬಸವನ ಮರುಕಟ್ಟುವಿಕೆ ವಿಶಿಷ್ಟವಾಗಿದೆ. ಹಂಪೆ ಸಮೀಪದ ನಿಡುಗಲ್ಲಿನ ಕವಿ ಚೆನ್ನಪ್ಪ ನಿಡುಗಲ್ (1750) ಬರೆದ `ಶಿವಶರಣ ಲೀಲಾಮೃತ’,  ಬೆಳಗಾವಿ ಸಮೀಪದ ಕಣಿವೆ ಕುರುವಿನ ಕೊಪ್ಪದ ಗರು ರಾಚಯ್ಯ (1890-1975) ಬರೆದ `ಜಗಜ್ಯೋತಿ ಬಸವೇಶ್ವರ’ , ಇದೇ ಬೆಳಗಾವಿ ಭಾಗದ ಕದ್ರೋಳಿಯ ನೀಲಕಂಠಪ್ಪ ಪತ್ತಾರ್ (1895-1975) ಅವರು ಬರೆದ `ಗುರುಭಕ್ತ ಬಂಡಾರಿ’, ಗುಲ್ಬರ್ಗಾ ಭಾಗದ ಸಾವಳಗಿ ಮಹಮದ್ ಸಾಬ್ ಬರೆದ `ಜಗಜ್ಯೋತಿ ಬಸವೇಶ್ವರ’, ಓಕಳಿ ಚನ್ನಬಸವಸ್ವಾಮಿ, ಗುರುಲಿಂಗಪ್ಪ ವಾಲೀಕಾರ, ರಟಕಲ್ ಸ್ವಾಮಿ ಈ ಮೂವರೂ ಬರೆದ ಭಿನ್ನವಾದ `ಬಸವೇಶ್ವರ’ ದೊಡ್ಡಾಟವನ್ನು ನೋಡಬಹುದು.

ಗುಲ್ಬರ್ಗಾ ಭಾಗದ ದೇವಣ ಗ್ರಾಮದ ಗುರುಲಿಂಗಪ್ಪ ರಾಮಚಂದ್ರಪ್ಪ ವಾಲೀಕಾರ ಅವರು ಭೀಮಕವಿಯ `ಹರಳಯ್ಯ ಮಧುವರಸರ ವಿವಾಹ ಸಂಬಂಧದ ಘಟನೆ ಆಯ್ದುಕೊಂಡು ಬರೆದ `ಬಸವೇಶ್ವರ’ ದೊಡ್ಡಾಟ ಕುತೂಹಲಕಾರಿಯಾಗಿದೆ. ಇದರಲ್ಲಿ ಹರಳಯ್ಯ ಮಧುವರಸನ ಸಂಬಂಧದ ಘೋರ ಪಾಪದ ಬಗ್ಗೆ ಬಿಜ್ಜಳನಲ್ಲಿ ಜನರು ಚಾಡಿ ಹೇಳುತ್ತಾರೆ. ಆಗ ಬಿಜ್ಜಳ ಈ ಇಬ್ಬರಿಗೂ ಚಿತ್ರಹಿಂಸೆ ಕೊಡುವ ಶಿಕ್ಷೆ ವಿಧಿಸುತ್ತಾನೆ. ಇದರಿಂದಾಗಿ ರೊಚ್ಚಿಗೆದ್ದ ಜನರು ಬಿಜ್ಜಳನನ್ನು ಕೊಲೆ ಮಾಡುತ್ತಾರೆ. ಇನ್ನು ದಕ್ಷಿಣ ಕನ್ನಡದಲ್ಲಿ `ಬಸವನ’ ಕುರಿತು ಯಕ್ಷಗಾನಗಳು ಹುಟ್ಟಿದ್ದು ತೀರಾ ಕಡಿಮೆ. ಗೋಕಾಕದ ಜಾನಪದ ವಿದ್ವಾಂಸರಾದ ಸಿ.ಕೆ.ನಾವಲಗಿ ಅವರು ಶಿವಮೊಗ್ಗದ ವಿದ್ವಾನ್ ದತ್ತಮೂರ್ತಿ ಭಟ್ ಅವರ ಸಂಘಟನೆ `ನಾಟ್ಯಶ್ರೀ ಕಲಾತಂಡ’ ಬಡಗುತಿಟ್ಟಿನ ಯಕ್ಷಗಾನದಲ್ಲಿ ರೂಪಿಸಿದ `ಬಸವೇಶ್ವರ’ ಯಕ್ಷಗಾನ ತಮ್ಮ ಭಾಗದಲ್ಲಿ ತುಂಬಾ ಜನಪ್ರಿಯವಾಗಿ ಪ್ರದರ್ಶನಗೊಂಡ ಬಗ್ಗೆ ಹೇಳುತ್ತಾರೆ.

ವಚನಗಳ ಮೌಖಿಕತೆಯ ಹಾಡಿಕೆಗೂ ಒಂದು ಚರಿತ್ರೆ ಸಿಗುತ್ತದೆ. ಸಿದ್ಧರಾಮ ಚರಿತೆಯಲ್ಲಿ `ಹಾಡಿದನೊಂದು ಗುರುವಚನ’ `ಹಾಡಿದ ಗೀತವ’ `ಗುರುವಚನಮಂ ಹಾಡುತಿರಲು’ `ಕುರುವಾಗಿ ಹಾಡಿದೀ ಗೀತ’ `ವಚನ ದಿಗಂತದೊಳು ಹಾಡುತಿರೆ’ `ಗೀತಂ ಭಿನ್ನಹಂ ಮಾಡಿ’ (ಮಾರ್ಗ-4, ಪು:41) ಈ ಉಲ್ಲೇಖಗಳನ್ನು ನೋಡಿದರೆ ಆಗಿನ ಜನಸಾಮಾನ್ಯರು ವಚನಗಳನ್ನು ಹಾಡುತ್ತಿದ್ದರು ಎನ್ನುವ ಸೂಚನೆಯಿದೆ. ಇದನ್ನು ಪರಿಶೀಲಿಸಿದರೆ ಅಂದರೆ ಬಸವನ ನಂತರದಲ್ಲಿ ಬಹುಬೇಗ ಬಸವಣ್ಣ ಜನಪದ ಪರಂಪರೆಗೆ ಸೇರಿಹೋದರು ಅನ್ನಿಸುತ್ತದೆ.

ಆಧುನಿಕ ಕಾಲದಲ್ಲಿ ಶಾಸ್ತ್ರೀಯವಾಗಿ ವಚನಗಳ ಹಾಡಿಕೆಗೂ ಒಂದು ಚರಿತ್ರೆಯಿದೆ. 1932ರಲ್ಲಿ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಂದ ಸೊಲ್ಲಾಪುರದಲ್ಲಿ ಹಾಡಿಸಿದ ಮೊದಲ ವಚನ `ವೇದಪ್ರಿಯ ಶಿವನೆಂಬರು..’ ಹೆಚ್.ಎಂ.ವಿ ಕಂಪನಿಯು ಮಲ್ಲಿಕಾರ್ಜುನ ಮನ್ಸೂರ್ ಅವರ ಧ್ವನಿಯಲ್ಲಿ `ನೀನೊಲಿದರೆ.. ಎಂಬ ವಚನವನ್ನು ರೆಕಾರ್ಡ್ ಮಾಡಿಕೊಂಡಿತು. ಮುಂದೆ 1938 ರಲ್ಲಿ ಹಳಕಟ್ಟಿಯವರು ವಿಜಯಪುರದ ಸಿದ್ದೇಶ್ವರ ಹೈಸ್ಕೂಲಿನ ಸಂಗೀತ ಶಿಕ್ಷಕರಾದ ಪಿ.ವಿ ಪಾಟೀಲ್ ಅವರ ಮೂಲಕ ವಚನಗಳನ್ನು ಸಂಗೀತಕ್ಕೆ ಅಳವಡಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಹಿಂದುಸ್ಥಾನಿ ಪದ್ದತಿಯಲ್ಲಿ ಎಚ್.ಎಂ.ವಿ ಕಂಪನಿ ಮೂಲಕ ಧ್ವನಿಮುದ್ರಣಗೊಂಡಿತು. 1950 ರ ನಂತರ ಈ ಶಾಸ್ತ್ರೀಯ ಹಾಡಿಕೆಯ ಪರಂಪರೆ ವ್ಯಾಪಕವಾಗಿ ವಿಸ್ತರಿಸಿತು ಎಂದು ಎಂ.ಎಂ ಕಲಬುರ್ಗಿ ಅವರು ವಿವರಿಸುತ್ತಾರೆ. (ಮಾರ್ಗ-4, ಪು:40)

ಆಚರಣ ಲೋಕದಲ್ಲಿ ಬಸವ ಭಿನ್ನವಾಗಿ ರೂಪಾಂತರಗೊಂಡಿದ್ದಾನೆ. ಕೂಡ್ಲಿಗಿ ತಾಲೂಕಿನಲ್ಲಿ `ಬಾಲಬಸವರು’ ಕಾಲಜ್ಞಾನ ಹೇಳುತ್ತಾರೆ. ಅವರು ಮುಂದೆ ನಡೆಯಬಹುದಾದುದನ್ನು ಎಚ್ಚರಿಕೆ ರೂಪದಲ್ಲಿ ಜನರಿಗೆ ಹೇಳುವಾಗ ವಚನಗಳ ನೆರವನ್ನು ಪಡೆಯುವುದಿದೆ. ಈ ಬಾಲಬಸವರು ಬಸವಣ್ಣನ ಕಾಲದಲ್ಲಿ ಲಿಂಗಾಧಾರಣೆಯಾದ ದಲಿತರು ಎನ್ನುವುದು ವಿಶೇಷ. ಈ ಕಾರಣಕ್ಕೆ ಇವರು ದಲಿತರೂ ಸೇರದ, ಮೂಲ ಲಿಂಗಾಯತರೂ ಸೇರದ ಅತಂತ್ರ ಸ್ಥಿತಿಯಲ್ಲಿರುವುದನ್ನು ನೋಡಬಹುದು. ಕೂಡಲ ಸಂಗಮದಲ್ಲಿ ವಾರ್ಷಿಕವಾಗಿ ನಡೆಯುವ ಆಚರಣೆಯಾದ `ಸಂಗಮೇಶ್ವರ ಜಾತ್ರೆ’ ಯಲ್ಲಿ ಬಸವಣ್ಣನನ್ನು ಮರುಕಟ್ಟಿಕೊಳ್ಳುವ ಆಯಾಮ ವಿಶಿಷ್ಟವಾಗಿದೆ. ಜಾತ್ರೆ ಜರುಗುವ ಮೊದಲು ಕ್ರಿಯಾವಿಧಿ ನಡೆಯುತ್ತದೆ, ಇದಕ್ಕೆ `ಬಸವಪಟ’ ಕಟ್ಟುವ ವಿಧಾನವೆಂದು ಕರೆಯುತ್ತಾರೆ. ಬಸವ ಪಟ ಕಟ್ಟಿದ ಮೇಲೆಯೇ ಮನೆಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತದೆ. ಬಸವಪಟ ಕಟ್ಟುವ ಕಾರ್ಯವನ್ನು ಕೂಡಲ ಸಂಗಮದ ಎಲೆಗಾರ ಕುಟುಂಬ ಮಾಡುತ್ತದೆ.

ಇನ್ನೊಂದು ಆಚರಣೆ ಗಮನಸೆಳೆಯುವಂತಿದೆ. ಅದೆಂದರೆ, ಸಂಗಮೇಶ್ವರ ಗುಡಿಯ ಆವರಣದ ಗುಡಿಕಟ್ಟು ಪ್ರದೇಶದಲ್ಲಿ `ಲಗ್ನದ ಕಟ್ಟೆ’ ಇದೆ. ಈ ಕಟ್ಟೆಯಲ್ಲಿ ಬಸವಣ್ಣ ಮತ್ತು ನೀಲಮ್ಮನಿಗೆ ಮದುವೆ ಮಾಡುವ ಅನುಕರಣೆ ಮಾಡಲಾಗುತ್ತದೆ. ಅರ್ಚಕರ ಮನೆಯ ಒಬ್ಬ ಅಪ್ರಾಪ್ತ ಬಾಲಕ ಮತ್ತು ದೇವಸ್ಥಾನಕ್ಕೆ ಇರುವ ದೇವದಾಸಿ (ಪಾತರದವರು) ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿ ವಧುವರರಾಗುತ್ತಾರೆ. ಅವರಿಗೆ ವಿವಾಹದ ಆಚರಣೆ ನೆರವೇರುತ್ತದೆ. ಈ ಆಚರಣೆಯು ಬಸವಣ್ಣನ ಮದುವೆಯನ್ನೂ, ಮತ್ತು ಬಸವಣ್ಣ ಮಾಡಿದ ಅಂತರ್ಜಾತಿ ವಿವಾಹ ಈ ಎರಡನ್ನೂ ಸಾಂಕೇತಿಸುತ್ತದೆ. ಈ ಕುರಿತಂತೆ ವಿದ್ವಾಂಸರಾದ ಮಹೇಶ್ ತಿಪ್ಪಶೆಟ್ಟಿ ಅವರು ತಮ್ಮ `ಕೂಡಲ ಸಂಗಮ’ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಹೀಗೆ ಬಸವನನ್ನು ಕಟ್ಟಿಕೊಳ್ಳುವ ಕೂಡಲ ಸಂಗಮನ ಭಕ್ತರು ಬಸವ ತತ್ವಕ್ಕೆ ವಿರುದ್ಧವೆಂಬಂತೆ ಈಚಿನ ದಶಕಗಳಲ್ಲಿ ಸಂಗಮನಾಥನ ಮಾಲೆ ಧರಿಸಿ, ಅಯ್ಯಪ್ಪನ ಮಾಲೆಯ ಕ್ರಿಯಾವಿಧಿಗಳನ್ನು ಪಾಲಿಸುತ್ತಾರೆ. ಇದರಲ್ಲಿ ಹೆಣ್ಣುಮಕ್ಕಳ ಸಂಪರ್ಕವಿಲ್ಲದೆ, ಅವರು ಮಾಡಿದ ಆಹಾರವನ್ನು ಸೇವಿಸದಿರುವಂತಹ ನಂಬಿಕೆಗಳು ಬಸವ ತತ್ವಕ್ಕೆ ವಿರುದ್ಧವಾಗಿವೆ.

ಪ್ರೊ.ವೀರಣ್ಣ ದಂಡೆ ಮತ್ತು ಡಾ.ಜಯಶ್ರೀ ದಂಡೆಯವರು ಸಂಪಾದನೆ ಮಾಡಿದ ‘ಬಸವ ಪರಿವಾರ’ 644 ಪುಟದ ಬೃಹತ್ ಸಂಪುಟ ಬಸವಣ್ಣನ ಬಗೆಗೆ ರಚಿತವಾದ ಜನಪದ ಹಾಡಿಕೆಗಳ ಸಂಕಲನವನ್ನು (2012) ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಕಟಿಸಿದೆ. ಇದು ಜನಪದರು ಬಸವನನ್ನು ಕಟ್ಟಿಕೊಂಡ ಬಹುರೂಪಿ ಚಿತ್ರಗಳನ್ನು ಕಾಣಿಸುತ್ತದೆ. ಹೀಗೆ `ಬಸವ ಜಾನಪದ’ ಬಹುರೂಪಗಳಲ್ಲಿದೆ. ಮೇಲೆ ಗುರುತಿಸಿದಂತೆ ಸ್ವಲ್ಪಮಟ್ಟಿನ ಸಂಗ್ರಹ ಕಾರ್ಯ ನಡೆದದ್ದು ಬಿಟ್ಟರೆ, ಜನಸಮುದಾಯದೊಳಗೆ ಇರುವ ಬಸವನ ಸೆಲೆ ಇನ್ನೂ ಅಗಾಧವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಜನಪದರು ಬಸವನ ವಚನಗಳ ಜತೆ ಮುಖಾಮುಖಿ ಮಾಡದೆ, ಆತನ ವೈಯಕ್ತಿಕ ಬದುಕಿನ ವಿವರಗಳ ಜತೆ ಮುಖಾಮುಖಿ ಮಾಡಿದ್ದಾರೆ. ಹೀಗಾಗಿ ವೈಚಾರಿಕೆಗಿಂತ ಹೆಚ್ಚಾಗಿ ಪಾವಾಡಗಳ ರೂಪದಲ್ಲಿ ಬಸವನನ್ನು ಕಾಣಲು ಪ್ರಯತ್ನಿಸಿದ್ದಾರೆ. ಈ ಆಯ್ಕೆ ನಿರಾಕರಣೆಯ ಕಾರಣ ಶೋಧದ ಬಗ್ಗೆಯೂ ಹೆಚ್ಚು ಕೆಲಸ ಮಾಡಬೇಕಿದೆ. ಈ ಬರಹದಲ್ಲಿ ಮಾಡಿರುವ ಚರ್ಚೆಗಳು ಬಿಡಿಬಿಡಿಯಾಗಿವೆ. ಈ ಬಿಡಿಬಿಡಿ ಘಟನೆಗಳನ್ನು ಪೋಣಿಸಿ ಹೊಸ ಹೊಳಹು ಮೂಡಿಸುವ ನೆಲೆಯಲ್ಲಿ ಇನ್ನಷ್ಟು ಗಂಭೀರ ಅಧ್ಯಯನಗಳು ನಡೆಯಬೇಕಾಗಿದೆ. ಮುಖ್ಯವಾಗಿ ಲಿಂಗಾಯತ ಧರ್ಮ ಸ್ವತಂತ್ರ್ಯ ಅಸ್ಥಿತ್ವ ಪಡೆಯುತ್ತಿರುವ ಈ ಕಾಲದಲ್ಲಿ `ಬಸವ ಜಾನಪದ’ ಕ್ಕೂ ಪ್ರಾಮುಖ್ಯತೆ ಒದಗಿದೆ. ಲಿಂಗಾಯತ ಧರ್ಮದ ಕಟ್ಟುವಿಕೆಯಲ್ಲಿ ಈ ಆಯಾಮವನ್ನು ಬಹುಮುಖ್ಯವಾಗಿ ಎದುರುಗೊಳ್ಳಬೇಕಿದೆ.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ