ದೇವರಾಜ ಅರಸು ಎಂಬ ಆರದ ಲಾಂದ್ರ ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿಯನ್ನು ಕೊಟ್ಟ ದೀನ ದಲಿತ ಕಾರ್ಮಿಕ ಅಲ್ಪಸಂಖ್ಯಾತ ಎಲ್ಲರನ್ನೂ ತನ್ನ ಆಡಳಿತದ ರೆಕ್ಕೆಯ ಬುಡದಲ್ಲಿ ಬಚ್ಚಿಟ್ಟುಕೊಂಡು ಕಾಪಾಡಿದ ಮಾನವೀಯ. ಟಿಪ್ಪು ಮತ್ತು ನಾಲ್ವಡಿ ಕೃಷ್ಣರಾಜರ ನಂತರ ಅಖಂಡ ಕರ್ನಾಕದ ಅರಸನಾಗಿ ಅನಾಥ ಸಮುದಾಯಗಳನ್ನು ಗ್ರಾಮೀಣ ಜನತೆಯನ್ನು ರೈತರನ್ನು ಅವಿರತ ಸಲಹಿದ ಶಕ್ತಿ ಅರಸು ಅವರು.
ಅರಸು ತೋರಿಕೆಯ ಮನುಷ್ಯನಾಗಿರಲಿಲ್ಲ. ಆಡುವುದೊಂದು ಮಾಡುವುದೊಂದು ಅರಸು ಅವರ ರಾಜನೀತಿಯೂ ಆಗಿರಲಿಲ್ಲ, ಗುಣವೂ ಆಗಿರಲಿಲ್ಲ. ಅವರ ಕಣ್ಣಲ್ಲಿದ್ದದ್ದು ಒಂದೇ ‘ಬಡವರ ಹಿಂದುಳಿದವರ ತಬ್ಬಲಿಗಳ ದುರ್ಬಲರ ಕಣ್ಣೀರು ಒರೆಸದಿದ್ದರೆ ಅಂತ ಅಧಿಕಾರವಾದರೂ ಯಾರಿಗೆ ಬೇಕು. ಅಂತಹಾ ಸರ್ಕಾರಗಳಾದರೂ ಏತಕ್ಕೆ ಬೇಕು?’ ಎಂಬುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಊಳಿಗಮಾನ್ಯ ಮನಸ್ಥಿತಿ ಜೀವಂತವಾಗಿ ಚಲನೆಯಲ್ಲಿದ್ದ ಕಾಲದಲ್ಲಿ, ಜೀತ ಪದ್ಧತಿ ಜೀವಂತವಿದ್ದ ಕಾಲಘಟ್ಟದಲ್ಲಿ ತನ್ನ ಪಕ್ಷದಲ್ಲೇ ಫ್ಯೂಡಲ್ ಗಳು ತುಂಬಿಕೊಂಡು ಕಿರುಕುಳ ಕೊಡುವ ಸಂದರ್ಭದಲ್ಲಿ ಅವರನ್ನೆಲ್ಲ ಎದುರು ಹಾಕಿಕೊಂಡು ಸಮಾಜದ ಶೋಷಿತರ ಪರವಾಗಿ ನಿಂತ ರಾಜಕಾರಣಿ ದೇಶದಲ್ಲಿ ವಿರಳ.
ಉಳುವವನೇ ಭೂಮಿಯ ಒಡೆಯ ಕಾನೂನನ್ನು ದೇಶದಲ್ಲಿ ಅರಸು ಅವರಷ್ಟು ಧೈರ್ಯವಾಗಿ ಪರಿಣಾಮಕಾರಿಯಾಗಿ ಬೇರಾವ ರಾಜ್ಯ ಸರ್ಕಾರಗಳೂ ಮತ್ತಾವ ನಾಯಕನೂ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಉತ್ತರ ಕರ್ನಾಟಕ, ಮಲೆನಾಡು, ದಕ್ಷಿಣ ಮಧ್ಯ ಕರ್ನಾಟಕ ಎಲ್ಲೆಲ್ಲೂ ಬಲಾಢ್ಯರಾಗಿದ್ದ ಸಾವಿರಾರು ಎಕರೆ ಭೂಮಿಯ ಒಡೆಯರುಗಳನ್ನು ಗಣನೆಗೆ ತೆಗೆದುಕೊಳ್ಳದೆ ಅರಸರು ತಾವು ಜಾರಿಗೊಳಿಸಿದ ಕಾನೂನಿನಿಂದಾಗಿ ಭೂಮಾಲಕರ ದೃಷ್ಟಿಯಲ್ಲಿ ಇಂದಿಗೂ ಖಳನಾಯಕನಾಗಿ ಉಳಿದಿದ್ದಾರೆ. ಹಿಂದುಳಿದವರ ದೃಷ್ಟಿಯಲ್ಲಿ ಅರಸು ಶಾಶ್ವತ ಹೃದಯ ಸಿಂಹಾಸನಾಧೀಶ್ವರ. ಆದರೆ ಈ ಮಾತು ಹೇಳುವಾಗ ಭಯವಾಗುತ್ತದೆ, ನಾಚಿಕೆಯಾಗುತ್ತದೆ, ನೋವಾಗುತ್ತದೆ.
ನಮ್ಮ ಇಂದಿನ ತಲೆಮಾರಿಗೆ ಇದೆಲ್ಲವೂ ಮರೆತು ಹೋಗಿದೆ. ತನ್ನ ಕುಟುಂಬ ಅನುಭವಿಸುತ್ತಿರುವ ಭೂಮಿ ಯಾರು ಕೊಟ್ಟರೆಂಬುದ ಮರೆತಿದೆ. ತಾವು ವಸತಿ ಮಾಡುತ್ತಿರುವ ಕೇರಿಗಳು, ಬಡಾವಣೆಗಳು, ಬೀದಿ ದೀಪದ ವ್ಯಸ್ಥೆ ಯಾರ ಕೊಡುಗೆ ಎಂಬುದ ಮರೆತಿದೆ. ತಾವು ಓದಿದ ಶಾಲೆ, ಹಾಸ್ಟೆಲು ಯಾರ ಕೊಡುಗೆ ಎಂಬುದ ಮರೆತಿದೆ. ತನ್ನ ತಂದೆಗೋ ತಾಯಿಗೋ ಸಿಕ್ಕ ಕೆಲಸ ಯಾರು ಕೊಟ್ಟವರೆಂಬುದ ಮರೆತಿದೆ. ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಯೋಜನೆ ಯಾರ ಕೊಡುಗೆ ಎಂಬುದ ಮರೆತಿದೆ. ಏನೂ ಕೊಡದವರ ಎಲ್ಲವನ್ನೂ ಕಿತ್ತುಕೊಳ್ಳುವವರ ಪರ ಕೈ ಎತ್ತಿ ನಿಂತಿರುವ ಇಂದಿನ ಯುವ ತಲೆಮಾರು ತಮ್ಮ ಸಮುದಾಯಗಳ ಸ್ವಾಭಿಮಾನವನ್ನು ಘನತೆಯನ್ನು ಎತ್ತಿ ಹಿಡಿದ ನಾಯಕನ ಕನಸುಗಳನ್ನ ಮರೆತು ತಮ್ಮನ್ನು ಮಾನಸಿಕ ಗುಲಾಮರನ್ನಾಗಿಕೊಳ್ಳುವವರ ಕೈಗೆ ಅಧಿಕಾರ ಕೊಟ್ಟು ವಾಸ್ತವದಲ್ಲಿ ಜಳ್ಳೆದ್ದು ಹೋಗಿದ್ದರೂ ಹೆಂಡ ಕುಡಿದ ಮಂಗಗಳಂತೆ ಕುಣಿಯುತ್ತಿವೆ.
ತಲೆಯ ಮೇಲೆ ಮರ ಹೊರುವ ಪದ್ಧತಿಯನ್ನು ನಿಷೇಧಿಸಿದ, ಊರ ಕಸ, ಚರಂಡಿ, ಸ್ವಚ್ಛಗೊಳಿಸುವ ನಿಮ್ನ ವರ್ಗದ ದಲಿತ ಜಾಡಮಾಲಿಗಳನ್ನು ಸ್ಥಳೀಯ ಹೀನ ಪದಗಳಿಂದ ಕರೆಯುವುದು ರೂಢಿಯಲ್ಲಿತ್ತು. ಅದರಿಂದ ಆ ಸಮುದಾಯದ ಜನರಿಗೆ ಆಗುವ ಸಾಮಾಜಿಕ ಅಪಮಾನವನ್ನು ಕಂಡು ಅವರನ್ನು ಪೌರಕಾರ್ಮಿಕರು ಎಂದು ಕರೆದು ಬದುಕಲು ಬಲ ತುಂಬಿದ ಇಂಥ ಜನತೆಯ ನಾಯಕನ ಮಾನವೀಯ ಧಾರೆ ಆರಲು ಬಿಡಬಾರದು.
ನಮ್ಮ ಜನರ ವಿವೇಕದ ಮೇಲೆ ಪೊರೆ ಬಿದ್ದಿದೆ ಅಷ್ಟೆ. ಆ ಪೊರೆ ಕೀಳುವ ಕಾರ್ಯ ನಾವೆಲ್ಲರೂ ಕೈ ಜೋಡಿಸಿ ಮಾಡಬೇಕಾದ ಜರೂರು ಇವತ್ತು ಸೃಷ್ಟಿಯಾಗಿದೆ.
• ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು