ಸಾಗರದ ಕಡೆಯ ಸ್ನೇಹಿತರು ಕೆಳದಿ ಟಿಪ್ಪುವಿನ ಕಾಲದಲ್ಲಿ ಪತನವಾಗುತ್ತದೆ ಎಂದು ಹೇಳಿದ್ದಾರೆ; ಮಾತ್ರವಲ್ಲ ಸಾಗರ ಸಮೀಪದ ಆನಂದಪುರದ ಮೇಲೆ ಟಿಪ್ಪುವಿನ ಸೈನಿಕರು ದಾಳಿ ಮಾಡಿ, ಸೈನಿಕರ ಹೆಣ್ಣುಗಳ ಮೇಲೆ ಅತ್ಯಾಚಾರ ಮಾಡುತ್ತಾರೆ, ಮಹಿಳೆಯರು ಆನಂದಪುರದ ಗಾಣಿಗನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆ ಸತ್ಯಕ್ಕೆ ದೂರ.
ಕೆಳದಿ ವಂಶದ ನಾಯಕರ ಮೊದಲನೇ ರಾಜಧಾನಿ ಕೆಳದಿ. ಇಕ್ಕೇರಿ ಅವರ ಎರಡನೇ ರಾಜಧಾನಿ. ಇಕ್ಕೇರಿಯನ್ನು ವೀರಭದ್ರಪ್ಪ ನಾಯಕ ಆಳುವಾಗ ಬಹಮನಿ ಸುಲ್ತಾನ ಎರಡನೇ ಇಬ್ರಾಹಿಂ ಆದಿಲ್ ಷಹನ ದಂಡನಾಯಕ ರಣದುಲ್ಲಾ ಖಾನ್ ಮತ್ತು ಛತ್ರಪತಿ ಶಿವಾಜಿಯ ತಂದೆ ಷಹಾಜಿಯ ನೇತೃತ್ವದಲ್ಲಿ ಇಕ್ಕೇರಿಯ ಮೇಲೆ ದಾಳಿ ನಡೆಸಲಾಗುತ್ತದೆ. ರಣದುಲ್ಲಾಖಾನನ ಸೇನೆ ಶಿಕಾರಿಪುರದ ಮದಗದ ಕೆರೆಯ ಬಂಡಿತಿಮ್ಮಾಯಿ ಕಣಿವೆಯ ಮೂಲಕ ಶಿಕಾರಿಪುರ ಕೋಟೆ ಹಾಗೂ ಅಂಬ್ಲಿಗೋಳ ಮಾರ್ಗದಲ್ಲಿ ಆನಂದಪುರ (ಯಡೆಹಳ್ಳಿ) ತಲುಪಿ ಅಲ್ಲಿಂದ ಇಕ್ಕೇರಿ ಮೇಲೆ ದಾಳಿ ಮಾಡುತ್ತದೆ. ಈ ದಾಳಿಯಲ್ಲಿ ಮುಸಲ್ಮಾನರಿಗಿಂತ ಕೆಳದಿ ಸಂಸ್ಥಾನದ ವೈರಿಗಳಾಗಿದ್ದ ಇತರೇ ಹಿಂದೂ ಪಾಳೆಪಟ್ಟುಗಳೇ ಹೆಚ್ಚು ಸೇರಿಕೊಂಡಿದ್ದವು.
ರಣದುಲ್ಲಾಖಾನ್ ಮತ್ತು ಷಹಾಜಿಯರಿಗೆ ಇಕ್ಕೇರಿಯ ದಾರಿ ತೋರಿಸಿದವರು ಕೆಳದಿ ಪ್ರಭುಗಳೊಡನೆ ವಿರಸ ಕಟ್ಟಿಕೊಂಡಿದ್ದ ಕೆಲವರು ಬ್ರಾಹ್ಮಣರು. ಈ ಘಟನೆ ನಡೆದದ್ದು ಹದಿನೇಳನೇ ಶತಮಾನದ ಮೊದಲರ್ಧದಲ್ಲಿ. ಇಕ್ಕೇರಿಯ ಮೇಲೆ ದಾಳಿ ನಡೆಸಿ ಗೆದ್ದ ಬಳಿಕ ಸಂತೃಪ್ತಗೊಂಡ ಎರಡನೆ ಇಬ್ರಾಹಿಂ ಆದಿಲ್ ಷಹ ಶಿವಾಜಿಯ ತಂದೆ ಷಹಾಜಿಗೆ ಬೆಂಗಳೂರಿನ ಜಹಗೀರುದಾರನನ್ನಾಗಿ ನೇಮಿಸುತ್ತಾನೆ. ಇತ್ತ ಇಕ್ಕೇರಿ ವಿಜಯದ ನೆನಪಿಗಾಗಿ ಶಿಕಾರಿಪುರ ಮತ್ತು ಹಿರೇಕೇರೂರು ನಡುವಿನ ಮದಗದ ಕೆರೆಯ ಗುಡ್ಡದ ಮೇಲೆ ಕೋಟೆಯೊಂದನ್ನು ಕಟ್ಟಿಸುತ್ತಾನೆ. ಅಲ್ಲಿ ಇಕ್ಕೇರಿಯ ಗೆಲುವನ್ನು ಸಂಭ್ರಮಿಸಿ ಬರೆದ ಪರ್ಶಿಯನ್ ಶಾಸನವೊಂದನ್ನು ಹಾಕಿಸುತ್ತಾನೆ.
ಎಪಿಗ್ರಾಪಿಯಾ ಕರ್ನಾಟಿಕಾ ಶಿವಮೊಗ್ಗ ಜಿಲ್ಲೆಯ ಸಂಪುಟ – 7 ರಲ್ಲಿ ಆ ಶಾಸನ ಪ್ರಕಟವಾಗಿದೆ. ಮದಗದಲ್ಲಿ ಈಗಲೂ ಆದಿಲ್ ಷಾಹಿ ಕೋಟೆ ಇದೆ. ಈ ದಾಳಿಯಲ್ಲಿ ಮರಾಠಾ ಯೋಧರೂ ಇದ್ದರು. ಈ ಘಟನೆ ನಡೆದಾಗ ಹೈದಾರಾಲಿಯೂ ಹುಟ್ಟಿರಲಿಲ್ಲ ಟಿಪ್ಪುವೂ ಹುಟ್ಟಿರಲಿಲ್ಲ. ಸೋತ ವೀರಭದ್ರ ನಾಯಕ ಈ ಮೊದಲೇ ಹೊನ್ನೆ ಕಂಬಳಿ ಅರಸರಿಂದ ಕಿತ್ತುಕೊಂಡಿದ್ದ ಬಿದನೂರು ದುರ್ಗಕ್ಕೆ ರಾಜಧಾನಿಯನ್ನು ಬದಲಾಯಿಸುತ್ತಾನೆ. ಆನಂತರ ಅಂದರೆ ಈ ಘಟನೆ ನಡೆದು ಸುಮಾರು ಒಂದು ನೂರು ವರ್ಷದ ಬಳಿಕ ಬಿದನೂರಿನ ಮೇಲೆ ರಾಣಿ ವೀರಮ್ಮಾಜಿಯ ಕಾಲಘಟ್ಟದಲ್ಲಿ ಹೈದರಾಲಿಯು ಅರಸೀಕೆರೆ, ಕಡೂರು, ತರೀಕೆರೆ, ಹೊಳೆಹೊನ್ನೂರು, ಶಿವಮೊಗ್ಗ, ಕುಂಸಿ, ಆನಂದಪುರ ಮಾರ್ಗವಾಗಿ ಚಿತ್ರದುರ್ಗದವರ ಸೇನೆಯನ್ನು ಕೂಡಿಸಿಕೊಂಡು ಬಿದನೂರಿನ ಮೇಲೆ ಕ್ರಿಸ್ತಶಕ 1763ರಲ್ಲಿ ದಾಳಿ ಮಾಡುತ್ತಾನೆ. ಈ ದಾಳಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದು ಚಿತ್ರದುರ್ಗದ ಮದಕರಿ ನಾಯಕ ಮತ್ತು ಅವನ ಸೈನ್ಯ.
ಬಿದನೂರಿನ ಮೇಲೆ ಈ ದಾಳಿ ನಡೆದಾಗ ಟಿಪ್ಪುವಿನ ವಯಸ್ಸು ಕೇವಲ 14 ವರ್ಷದ ಆಸುಪಾಸು. ಹೈದರ್ ಮತ್ತು ಮದಕರಿ ನಾಯಕರ ಸೇನೆಗಳೂ ಸಾಕಷ್ಟು ದಾಳಿ ಮಾಡಿವೆ. ಆದರೆ, ‘ಟಿಪ್ಪು ಕೆಳದಿಯ ಮೇಲೆ ದಾಳಿ ಮಾಡಿದ. ಆಮೇಲೆ ಅವನ ಸೈನಿಕರು ಆನಂದಪುರದ ಜನರನ್ನು ಕೊಂದು ಗಾಣಿಗನ ಕೆರೆಗೆ ಎಸೆದರು’ ಎಂದು ಹೇಳುವುದು ಶುದ್ಧ ಸುಳ್ಳು. ವೈರಿ ರಾಜ್ಯದ ಮೇಲೆ ದಾಳಿ ಮಾಡಿದಾಗಲೂ ಮಹಿಳೆಯರ ಮೇಲೆ ಕೈ ಎತ್ತದಂತೆ ಅವರನ್ನು ಹಿಂಸಿಸದಂತೆ ನಡೆದುಕೊಳ್ಳಬೇಕೆಂದು ಆದೇಶಿಸಿದ್ದ ಟಿಪ್ಪು, ತನ್ನದೇ ರಾಜ್ಯದ ತನಗೇ ಸೇರಿದ ಕೋಟೆಯ ಮೇಲೆ ಊರಿನ ಮೇಲೆ ದಾಳಿ ನಡೆಸಿ ಅತ್ಯಾಚಾರ ಅನಾಚಾರ ನಡೆಸಲು ಹೇಗೆ ಸಾಧ್ಯ? ಅದೂ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಅಧಿಕಾರವೇ ತನಗಿಲ್ಲದ ಕಾಲದಲ್ಲಿ ಒಬ್ಬ ಬಾಲಕ ಟಿಪ್ಪು ಹೀಗೆ ಮಾಡಿರಲಿಕ್ಕೆ ಸಾಧ್ಯವೇ?
ಈಗ ಗಮನಿಸಿ ಹೈದರ್ ಬಿದನೂರು ಗೆದ್ದ ಬಳಿಕ ಅಲ್ಲಿ ಸುಮಾರು ಒಂದೂವರೆ ವರ್ಷ ಇದ್ದನೆನಿಸತ್ತೆ. ಆ ಬಳಿಕ ಅವನ ಅಧಿಕಾರಿಗಳು ಹಾಗು ನಂತರ ಸಾಕು ಮಗ ಅಯಾಸ್ ಖಾನ್ ಬಿದನೂರು ಪ್ರಾಂತದಲ್ಲಿ ಆಳಿದ್ದಾನೆ. ಅನೇಕ ಅಧಿಕಾರಿಗಳು ಆಳಿದ್ದಾರೆ. ಟಿಪ್ಪುವು ಪ್ರಾಬಲ್ಯಕ್ಕೆ ಬಂದಮೇಲಷ್ಟೆ ಬಿದನೂರು ಅಥವಾ ನಗರ ರೀಜನ್ ಟಿಪ್ಪುವಿನ ಹಿಡಿತಕ್ಕೆ ಬಂದಿದೆ.
ಹಾಗಾದರೆ ಆನಂದಪುರದ ಮೇಲೆ ದಾಳಿ ಮಾಡಿದವರು ಯಾರು? ಅಲ್ಲಿಯ ಜನರನ್ನು ಕಡಿದು ಗಾಣಿಗನ ಕೆರೆಗೆ ಎಸೆದವರು ಯಾರು? ನೀವಂದುಕೊಂಡು ಹಾಗೆ ಟಿಪ್ಪುವಾಗಲೀ ಅವನ ಸೈನಿಕರಾಗಲೀ ಅಲ್ಲ. ಆನಂದಪುರದ ಮೇಲೆ ದಾಳಿ ಮಾಡಿದ್ದು ಈ ಮೊದಲೇ ಬಿದನೂರನ್ನು ವಶಪಡಿಸಿಕೊಂಡಿದ್ದ ಜನರಲ್ ಮ್ಯಾಥ್ಯೂವ್ಸ್ ನ ಸೈನ್ಯ. ಬಿದನೂರಿನಿಂದ ಎರಡು ದಿನಗಳ ಪ್ರಯಾಣದಷ್ಟು ದೂರವಿದ್ದ ಆನಂದಪುರದ ಮೇಲೆ ದಾಳಿ ಮಾಡಿ, ಅಲ್ಲಿನ ನಿವಾಸಿಗಳನ್ನು ಕಡಿದು ಕತ್ತರಿಸಿ ಕೋಟೆಯ ಸುತ್ತ ಇದ್ದ ಕೆರೆಗಳಿಗೆ ಎಸೆದವರು ಮ್ಯಾಥ್ಯೂವ್ಸ್ ನ ನೇತೃತ್ವದ ಬ್ರಿಟಿಷ್ ಸೇನೆ. ಇದನ್ನು ದಾಖಲಿಸಿದಾತ ಜೇಮ್ಸ್ ಸ್ಕರ್ರಿ. ಈ ಘಟನೆ ನಡೆದಾಗ ಮರಾಠ ಸೇನಾ ನಾಯಕ ಪರಶುರಾಮ್ ಭಾಹು ಮತ್ತು ಜೇಮ್ಸ್ ಸ್ಕೂರಿ ಇಬ್ಬರ ಜಂಟಿ ಸೈನ್ಯ ಜೊತೆಯಲ್ಲೇ ಇತ್ತು. ಜನರಲ್ ಮ್ಯಾಥ್ಯೂವ್ಸ್ ಬಿದನೂರು ಸಮೀಪ ಟಿಪ್ಪುವಿನ ಸೈನಿಕರಿಗೂ ಮ್ಯಾಥ್ಯೂವ್ಸ್ ಸ್ಕರ್ರಿ ಪರಶುರಾಮ ಭಾಹು ಇವರ ಜಂಟಿ ಸೇನೆಗೂ ನಡೆದ ಘೋರ ಕದನದಲ್ಲಿ ಸತ್ತು ಹೋದ. ಈಗ ಸ್ಕರ್ರಿ ಭಾಹು ಮತ್ತು ಸತ್ತು ಹೋದ ಮ್ಯಾಥ್ಯೂವ್ಸನ ಸೇನೆ ಲಾರ್ಡ್ ಕಾರ್ನ್ ವಾಲೀಸನ ಕರೆಯ ಮೇರೆಗೆ ಶ್ರೀರಂಗಪಟ್ಟಣದ ಕಡೆ ಹೊರಟಾಗ ಆನಂದಪುರಕ್ಕೆ ಧಾವಿಸಿದ ಮೇಜರ್ ಜನರಲ್ ಮ್ಯೂಥ್ಯೂವ್ಸ್ ನ ತುಕಡಿ ನಡೆಸಿದ ಕಗ್ಗೊಲೆ ಇದು.
ಟಿಪ್ಪುವಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ಮಾಹಿತಿಯ ಕೊರತೆಯಿಂದಲೋ ಉದ್ದೇಶಪೂರ್ವಕವಾಗಿಯೋ ಈ ರೀತಿ ಹೇಳಿಕೆ ಕೊಡುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ. ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ಅದರಲ್ಲೂ ಎಡಪಂಥೀಯ ಸಮಾತಾವಾದಿ ಪಕ್ಷವೊಂದಕ್ಕೆ ಸೇರಿದವರು ಈ ರೀತಿ ಹೇಳಿಕೆ ಕೊಟ್ಟರೆ ಅದು ಕೋಮುವಾದಿಗಳಿಗೆ ಅವರ ವಿಚ್ಛಿದ್ರಕಾರಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಈ ಕುರಿತ ಮಾಹಿತಿ ಬೇಕಿದ್ದಲ್ಲಿ, ಕೆಳದಿ ನೃಪವಿಜಯಂ, ಹೈದರ್ ನಾಮೆ, ಜಂಗ್ ನಾಮೆ, ಕಂಠೀರವ ನರಸರಾಜ ವಿಜಯ, ಪ್ರವಾಸಿ ಕಂಡ ಇಂಡಿಯಾ – ಸಂಪುಟ 8, ಮೀರ್ ಹುಸೇನ್ ಅಲಿಖಾನ್ ಕಿರ್ಮಾನಿಯ ನಿಷಾನೆ ಹೈದರಿ ಮೊದಲಾದ ಕೃತಿಗಳನ್ನು ನೋಡಬಹುದು.
- ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು