ಛತ್ರಪತಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರ ಸಂಸ್ಥಾನದಲ್ಲಿ ಜಾರಿಗೆ ತಂದ ಸುಧಾರಣೆಗಳು ಭಾರತೀಯ ರಾಜಮಹಾರಾಜರ ಸಾಲಿನಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ಒದಗಿಸಿಕೊಟ್ಟಿವೆ. 1884 ರಿಂದ 1922ವರೆಗಿನ ಅವರ ಆಡಳಿತದ ಅವಧಿಯಲ್ಲಿ ಭಾರತದಲ್ಲೇ ಅನೇಕ ಪ್ರಥಮಗಳಿಗೆ ಸಾಕ್ಷಿಯಾದರು.
ಜನನ: 26 ಜೂನ್ 1874
ಪಟ್ಟಾಭಿಷೇಕ: 2 ಏಪ್ರಿಲ್ 1884
ಮರಣ: 6 ಮೇ 1922
ಶಾಹು ಮಹಾರಾಜರು 26 ಜೂನ್ 1874ರಂದು ಕೊಲ್ಹಾಪುರದ ಕಾಗಲ್‌ನಲ್ಲಿ ಜನಿಸಿದರು. ಇವರ ಮೊದಲ ಹೆಸರು ಯಶವಂತ ರಾವ್ ಘಾಟ್ಗೆ. ಅವರು 1884ರಲ್ಲಿ ರಾಣಿ ಅನಂದಿಬಾಯಿ ಅವರು ಯಶವಂತ ರಾವ್ ಘಾಟ್ಗೆ ಅವರನ್ನು ದತ್ತು ತೆಗೆದುಕೊಂಡರು. 1884ರಲ್ಲಿ ಅವರಿಗೆ ರಾಜ್ಯಾಭಿಷೇಕ ಮಾಡಲಾಯಿತು.
ಶಾಹು ಮಹಾರಾಜರು ರಾಜಕುಮಾರ ಕಾಲೇಜ್, ರಾಜ್‌ಕೋಟ್‌ನಲ್ಲಿ ಶಿಕ್ಷಣ ಪಡೆದರು ಮತ್ತು 1891ರಲ್ಲಿ ಲಕ್ಷ್ಮೀಬಾಯಿ ಖನ್ವಿಲ್ಕರ್ ಅವರೊಂದಿಗೆ ವಿವಾಹ ನೆರವೇರಿತು. ಅವರಿಗೆ ನಾಲ್ಕು ಮಕ್ಕಳಿದ್ದರು.
ಸರ್ ಸ್ಟುವರ್ಟ್ ಫ್ರೇಸರ್ ಅವರ ಪ್ರಭಾವ: ರಾಜ್‌ಕೋಟ್‌ನಲ್ಲಿ ಶಾಹು ಮಹಾರಾಜರು ಶಿಕ್ಷಣ ಪಡೆಯುವ ವೇಳೆಯಲ್ಲಿ ಸರ್ ಸ್ಟುವರ್ಟ್ ಫ್ರೇಸರ್ ಅವರು ಆಡಳಿತ ವ್ಯವಹಾರ ವಿಷಯಗಳ ಕುರಿತು ತರಬೇತಿ ನೀಡಿದರು.
ಆಧುನಿಕ ಭಾರತದ ಶಿಲ್ಪಿಗಳಲ್ಲಿ ರಾಜರ ಪೈಕಿ ಶಾಹು ಮಹಾರಾಜ, ಸಯ್ಯಾಜಿ ರಾವ್ ಗಾಯಕ್ವಾಡ್ ಮತ್ತು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರನ್ನು ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಈ ಮೂವರು ಮಹನೀಯರು ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯದೆ ಆಧುನಿಕ ಶಿಕ್ಷಣ ಪಡೆದದ್ದು ಕೂಡ ಅವರ ಸಾಮಾಜಿಕ ಚಿಂತನೆ ಮತ್ತು ಜನಪರ ಯೋಜನೆಗಳ ಜಾರಿಯಲ್ಲಿ ಕೆಲಸ ಮಾಡಿದೆ.
ಅದುವರೆಗಿನ ರಾಜರು ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅದು ಮನುಸ್ಮೃತಿಯ ಅಂಶಗಳನ್ನು ಒಳಗೊಂಡಿದ್ದಲ್ಲದೆ, ಅಸಮಾನತೆಯನ್ನು ಸಮರ್ಥಿಸುತ್ತಿತ್ತು. ಮತ್ತು ರಾಜರು ತಮ್ಮ ಜೀವಿತಾವಧಿ ಮತ್ತು ಆಡಳಿತಾವಧಿಯಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಪೂರಕವಾಗಿತ್ತು. ಆದರೆ ಆಧುನಿಕ ಶಿಕ್ಷಣ ಮಾನವೀಯತೆ, ಸಮಾನತೆ, ಸಹೋದರತೆ ಮೊದಲಾದ ಭಾವನೆಗಳನ್ನು ಕಲಿಸಿತು. ಇದರಲ್ಲಿ ಸ್ಟುವರ್ಟ್ ಫ್ರೇಸರ್ ಅವರ ಪಾತ್ರ ಗಮನಾರ್ಹವಾಗಿದೆ. ಅವರು ಭಾರತೀಯ ಜೀವನ ಪದ್ಧತಿ ಮತ್ತು ಪಾಶ್ಚಾತ್ಯ ಜೀವನ ಪದ್ಧತಿಯಲ್ಲಿರುವ ಸಮಾನ ಮತ್ತು ಅಸಮಾನ ಸಿದ್ಧಾಂತಗಳ ಕುರಿತು ಎಳೆಯ ವಯಸ್ಸಿನಲ್ಲೇ ಶಾಹು ಮಹಾರಾಜರಿಗೆ ಸೂಕ್ಷ್ಮವಾಗಿ ಆದರೆ ಸ್ಫಷ್ಟ, ನೇರ, ಸರಳ ಮತ್ತು ಖಚಿತವಾಗಿ ತಿಳಿಹೇಳಿದರು. ಇವರಿಂದ ಕಲಿತ ನೈತಿಕತೆಯ ಪಾಠ ಶಾಹು ಅವರ ಚಿಂತನೆಯನ್ನು ಆಳವಾಗಿ ಪ್ರಭಾವಿಸಿತು. ಫ್ರೇಸರ್ ಅವರ ಸಮಾನತೆಯ ಕುರಿತ ವಿಚಾರಗಳಿಂದ ಪ್ರೇರಿತರಾದ ಶಾಹು ಮಹಾರಾಜರು ತಮ್ಮ ಅಧಿಕಾರದ ಅವಧಿಯಲ್ಲಿ ಸಮಾನತೆ, ದಮನಿತರಿಗೆ ನೆರವು, ಅಬಲರಿಗೆ ಆಶ್ರಯ, ಅಸಂಘಟಿತರಿಗೆ ಭದ್ರತೆ ಇತ್ಯಾದಿ ವಿಷಯಗಳತ್ತ ಗಮನ ಹರಿಸಿದರು.
ಜನತೆಯ ರಾಜ ಶಾಹು ಮಹಾರಾಜರ ಸಾಧನೆಗಳು:
ಸರ್ಕಾರಿ ಹುದ್ದೆಗಳಲ್ಲಿ ಶೂದ್ರರಿಗೆ 50% ಮೀಸಲಾತಿ ಘೋಷಣೆ – 1902
ಅಸ್ಪೃಶ್ಯರಿಗಾಗಿ 18 ಪ್ರತ್ಯೇಕ ಶಾಲೆಗಳ ಸ್ಥಾಪನೆ
1908ರಲ್ಲಿ ವಿದ್ಯಾಸಂಸ್ಥೆ ಸ್ಥಾಪನೆ
ವಿಧವಾ ವಿವಾಹ ಕಾನೂನುಬದ್ಧ – 1917
ಮಹರ್ ವತನ್ ಪದ್ದತಿ ನಿಷೇಧ – 1918
ಅಸ್ಪ್ರಶ್ಯರಿಗೆ ವಂಶಾವಳಿಯಾಗಿ ಬಂದಿದ್ದ ಜೀತ ಪದ್ದತಿ ನಿಷೇಧ – 1918
1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳ ಸ್ಥಾಪನೆ
1918ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು “ಮೂಕ ನಾಯಕ” ಪತ್ರಿಕೆ ಆರಂಭ
1918ರಲ್ಲಿ ಮಹಾತ್ಮ ಜೋತಿಬಾಫುಲೆ ಅವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು “ಶಾಹು ಸತ್ಯ ಶೋಧಕ ಸಮಾಜ” ಸ್ಥಾಪನೆ
ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿ – 1919 ಜುಲೈ 12
ಅಸ್ಪ್ರಶ್ಯತಾ ಆಚರಣೆ ವಿರುದ್ದ ಕಾನೂನು ಜಾರಿ – 1919
ದೇವದಾಸಿ ಪದ್ಧತಿಯ ನಿಷೇಧ -1920
ದೇವದಾಸಿ ಪದ್ದತಿ ನಿರ್ಮೂಲನಾ ಕಾನೂನು ಜಾರಿ 1920 ಜುಲೈ 17
ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನ – 1920 ಮೇ 30
ಡಾ.ಬಿ.ಆರ್.ಅಂಬೇಡ್ಕರ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಧನ ಸಹಾಯ
ರಾಜಾರಾಮ್ ಕಾಲೇಜ್ ನಿರ್ಮಾಣ
ರಾಧಾನಗರಿ ಅಣೆಕಟ್ಟೆ ನಿರ್ಮಾಣಕ್ಕೆ ಚಾಲನೆ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಹು ಮಹಾರಾಜರು ಮಾಡಿದ ಸುಧಾರಣೆಗಳು
ಭೂಹೀನರಿಗೆ ಉಚಿತವಾಗಿ ಭೂಮಿ ಹಂಚಿಕೆ
ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಿ ಹೆಚ್ಚು ಬೆಳೆ ಬೆಳೆಯಲು ರೈತರಿಗೆ ಉತ್ತೇಜನ
ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಜಾರಿ
ಸಹಕಾರಿ ಮಾರುಕಟ್ಟೆ ಪದ್ದತಿ ಮೊದಲ ಬಾರಿ ಕೊಲ್ಲಾಪುರದಲ್ಲಿ ಜಾರಿ
ಮೀಸಲಾತಿಯ ಜನಕ ಶಾಹು ಮಹಾರಾಜ: ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಮೀಸಲಾತಿ ಪರಿಕಲ್ಪನೆಯನ್ನು ಶೋಧಿಸಿ ದಮನಿತರ ದನಿಯಾದವರು ಶಾಹು ಮಹಾರಾಜರು. ಶತಮಾನಗಳಿಂದ ಮೀಸಲಾತಿಯ ಪರಿಕಲ್ಪನೆಯ ಇಲ್ಲದೆ ಶೂದ್ರರು, ದಲಿತರು, ಮಹಿಳೆಯರು ಗಾಣದ ಎತ್ತಿನ ಮಾದರಿಯಲ್ಲಿ ದುಡಿಯುತ್ತಿದ್ದರು. ಅವರ ಶ್ರಮಕ್ಕೆ ತಕ್ಕ ಕೂಲಿ, ಪ್ರತಿಫಲ ಕೂಡ ದೊರೆಯುತ್ತಿರಲಿಲ್ಲ. ಮನುಸ್ಮೃತಿಯ ಆಧಾರದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ರೂಪಿಸಿದ್ದ ಪುರೋಹಿತಶಾಹಿಗಳು ಶೂದ್ರರು, ದಲಿತರು, ಮಹಿಳೆಯರನ್ನು ಅಕ್ಷರ ಲೋಕದಿಂದ ವಂಚಿಸಿದ್ದರು. ಜೊತೆಗೆ, ಆಸ್ತಿ, ಅಧಿಕಾರಗಳಿಂದ ಕೂಡ ದೂರ ಇಟ್ಟಿದ್ದರು. ಈ ಕಾರಣದಿಂದಾಗಿ ಘನತೆ, ಗೌರವ, ಆತ್ಮಗೌರವಗಳಿಂದ ಶೇ. 85ರಷ್ಟು ಸಮೂಹ ವಂಚಿತವಾಗಿತ್ತು.
ಭಾರತದ ಯಾವುದೇ ರಾಜಮಹಾರಾಜರು, ಸುಮಾರು 33 ಕೋಟಿ ದೇವಾನುದೇವತೆಗಳಿಗೂ ಶೂದ್ರ, ದಲಿತ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ವಂಚನೆ, ಅಸಮಾನತೆಗಳಿಂದ ಪಾರು ಮಾಡಬೇಕು ಎನ್ನಿಸಿರಲೇ ಇಲ್ಲ. ತನ್ನ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಈ ನಿಟ್ಟಿನಲ್ಲಿ ಆಲೋಚನೆ ಮಾಡಿದ್ದನ್ನು ಹೊರತುಪಡಿಸಿದರೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನಗಳ ವಿಷಯದಲ್ಲಿ ಸಮಾನತೆಯನ್ನು ಜಾರಿಗೆ ತರಲು ಶ್ರಮಿಸಿದ ಕೀರ್ತಿ ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ.
ಸರ್ಕಾರಿ ವ್ಯವಸ್ಥೆಯ ಒಳಗೆ ಶೇ.50ರಷ್ಟು ಮೀಸಲಾತಿ ಜಾರಿ ವಿಷಯವನ್ನು ಯಥಾಸ್ಥಿತಿವಾದಿ ಪುರೋಹಿತಶಾಹಿಗಳು ವಿರೋಧಿಸಿದರು. ಒಳಗೊಳಗೆ ವಿರೋಧಿಸಿದ್ದಷ್ಟೇ ಅಲ್ಲದೆ, ಸ್ವತಃ ಶಾಹು ಮಹಾರಾಜರ ಮುಂದೆ ಕೂಡ ಅಸಮ್ಮತಿಯನ್ನು ವ್ಯಕ್ತಪಡಿಸಿದರು.
ಗಣಪತ್ ರಾವ್ ಎಂಬ ವಕೀಲ ಶಾಹು ಮಹಾರಾಜರ ಮುಂದೆಯೇ ಮೀಸಲಾತಿ ಜಾರಿಯಾದರೆ ಪ್ರತಿಭೆಗಳಿಗೆ ಧಕ್ಕೆಯಾಗುತ್ತದೆಯಲ್ಲವೇ? ಎಂದು ಕೇಳುತ್ತಾರೆ. ಆಗ ಅವರನ್ನು ತಮ್ಮ ಅರಮನೆಯ ಕುದರೆಯ ಲಾಯದ ಬಳಿ ಕರೆದುಕೊಂಡು ಹೋದ ಶಾಹು ಮಹಾರಾಜರು, ಕುದುರೆ ಸಾಕುವವನನ್ನು ಗದರುತ್ತಾರೆ. ಎಲ್ಲ ಕುದುರೆಗಳನ್ನು ಒಂದೆಡೆ ಬಿಟ್ಟು ಮೇವು ಹಾಕುವುದು ಬಿಟ್ಟು ಏಕೆ ಪ್ರತ್ಯೇಕವಾಗಿ ಕುದುರೆಗಳನ್ನು ಕಟ್ಟಿ ಹಾಕಿ ಮೇವು ಹಾಕುತ್ತಿದ್ದೀಯಾ? ನಿನಗೆ ಬುದ್ಧಿ ಇಲ್ಲವೇ? ಎಂದು ಪ್ರಶ್ನಿಸುತ್ತಾರೆ.
ಮಹಾರಾಜರ ಪ್ರಶ್ನೆಗೆ ಉತ್ತರಿಸಿದ ಕುದುರೆ ಕಾಯುವ ವ್ಯಕ್ತಿ, ಮಹಾಸ್ವಾಮಿ, ಇಲ್ಲಿರುವ ಕುದುರೆಗಳ ಪೈಕಿ ವಯಸ್ಸಾದ ಕುದುರೆಗಳು, ಯುದ್ಧ ಮತ್ತಿತರ ಕಾರಣದಿಂದ ಗಾಯಗೊಂಡ ಕುದುರೆಗಳು, ಎಳೆಯ ಕುದುರೆಗಳು ಮತ್ತು ಸದೃಢ, ದಷ್ಟಪುಷ್ಟ, ಯೌವನದ ಕುದುರೆಗಳು ಇವೆ. ಇವೆಲ್ಲವುಗಳಿಗೆ ಒಂದೇ ಕಡೆಯಲ್ಲಿ ಮೇವು ಹಾಕಿದರೆ, ವಯಸ್ಸಾದ ಕುದುರೆಗಳನ್ನು, ಗಾಯಗೊಂಡ ಕುದುರೆಗಳನ್ನು, ಎಳೆಯ ಕುದುರೆಗಳನ್ನು ದಷ್ಟಪುಷ್ಟ ಕುದುರೆಗಳು ಎಲ್ಲ ಮೇವನ್ನು ತಿಂದುಬಿಡುತ್ತವೆ. ಎಳೆಯ, ವಯಸ್ಸಾದ ಮತ್ತು ಗಾಯಗೊಂಡಿರುವ ಕುದುರೆಗಳಿಗೆ ಮೇವು ಸಿಗದೆ ಸತ್ತೇಹೋಗುತ್ತವೆ ಎಂದು ವಿವರಿಸುತ್ತಾನೆ. ಅಲ್ಲದೇ, ತಾನು 4 ಭಾಗದಲ್ಲಿ ವಿಂಗಡಿಸಿ ಪ್ರತ್ಯೇಕವಾಗಿ ಮೇವು ಹಾಕಿರುವುದರಿಂದ ಎಲ್ಲ ಕುದುರೆಗಳಿಗೂ ಸಮಾನವಾಗಿ ಮೇವು ಸಿಗುತ್ತದೆ. ಎಲ್ಲವುಗಳೂ ಆರೋಗ್ಯದಿಂದ ಇರಲು ಹೀಗೆ ವಿಂಗಡಿಸಿ ಮೇವು ಹಂಚುವುದರಿಂದ ಮಾತ್ರ ಸಾಧ್ಯ ಎನ್ನುತ್ತಾನೆ.
ಇದನ್ನು ಕೇಳಿದ ಶಾಹು ಮಹಾರಾಜರು ಪ್ರಶ್ನಾರ್ಥಕವಾಗಿ ಗಣಪತ್ ರಾವ್ ಕಡೆಗೆ ದೃಷ್ಟಿಬೀರುತ್ತಾರೆ. ಆಗ ಗಣಪತ್ ರಾವ್ ಅವರಿಗೆ ಮೀಸಲಾತಿಯ ಮಹತ್ವ ಅರಿವಾಗುತ್ತದೆ. ಮೀಸಲಾತಿಯ ವಿರೋಧಿಗಳು ಇಂದಿಗೂ ಬಳಸುವುದು ಗಣಪತ್ ರಾವ್ ಅವರ ಪ್ರತಿಭೆ ಮತ್ತು ಅರ್ಹತೆಯ ಮಾನದಂಡವನ್ನೇ ಅಲ್ಲವೇ? ಆದರೆ ಅವರಿಗೆ ಶಾಹು ಮಹಾರಾಜರು ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ.
ಮೀಸಲಾತಿಯನ್ನು ಶತಮಾನಗಳಿಂದ ತಾವೇ ಅನುಭವಿಸಿಕೊಂಡು ಬಂದಿರುವ ಸಮುದಾಯದವರು, ಅದರ ಲಾಭ ಎಲ್ಲ ಜಾತಿ, ವರ್ಗ, ವರ್ಣದವರಿಗೂ ಸಿಗಲಿ ಎಂಬ ವಿಶಾಲ, ಉದಾರ ಮನೋಭಾವನ್ನು ಬೆಳೆಸಿಕೊಳ್ಳದೆ ಸಂಕುಚಿತರಾಗಿದ್ದಾರೆ. ಇರುವ ಎಲ್ಲದೂ ತನಗೆ, ತನ್ನ ಜಾತಿಗೆ ಸೀಮಿತವಾಗಿರಲಿ ಎಂಬ ಮನಃಸ್ಥಿತಿಯಿಂದ ಇವರು ಹೊರಬರಬೇಕಿದೆ. ಜೊತೆಗೆ, ಸಾಮಾಜಿಕ ಸಮಾನತೆಗಾಗಿ ಮೀಸಲಾತಿಯು ಒಂದು ಪ್ರಮುಖ ಅಸ್ತ್ರವಾಗಿದೆ ಎಂಬುದನ್ನು ಮನಗಂಡು ಅದನ್ನು ಜಾರಿಗೆ ತಂದ ಶಾಹು ಮಹಾರಾಜರನ್ನು ನೆನೆಯಬೇಕಿದೆ.
ಶಾಹು ಮಹಾರಾಜ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬದ್ಧರಾಗಿದ್ದರು. 1902ರಲ್ಲಿ, ಅವರು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ 50% ಮೀಸಲಾತಿಯನ್ನು ಘೋಷಿಸಿದರು. ಇದು ಭಾರತದಲ್ಲಿ ಒಂದು ಮಾದರಿ ಹೆಜ್ಜೆಯಾಗಿದೆ. ಅವರು ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದರು. ಜಾತಿ ಅಥವಾ ಧರ್ಮದ ಪ್ರಭಾವವಿಲ್ಲದೆ ಎಲ್ಲರಿಗೂ ಶಿಕ್ಷಣ ಸಿಗುವಂತೆ ಅವಕಾಶ ಸೃಷ್ಟಿಸಿದರು.
ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಸ್ಥಾಪಿಸಿದರು ಮತ್ತು ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿ ವೇತನಗಳನ್ನು ಒದಗಿಸಿದರು. 1919ರಲ್ಲಿ, ಅವರು ಅಸ್ಪೃಶ್ಯತೆಯನ್ನು ರದ್ದುಗೊಳಿಸಿದರು. ಎಲ್ಲಾ ಜಾತಿಗಳಿಗೆ ಸಮಾನವಾಗಿ ಸಾರ್ವಜನಿಕ ಸೌಕರ್ಯಗಳಿಗೆ ಪ್ರವೇಶವನ್ನು ಒದಗಿಸಿದರು. ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೆತಂದರು.
1917 ರಲ್ಲಿ ಅಂತರ್ಜಾತಿ ವಿವಾಹ ಮತ್ತು ಮತ್ತು ವಿಧವಾ ವಿವಾಹಗಳನ್ನು ಕಾನೂನುಬದ್ಧಗೊಳಿಸಿದರು. ಇದು ಮನುಸ್ಮೃತಿಯಿಂದ ನಿಯಂತ್ರಿತವಾಗಿದ್ದ ಸ್ಥಗಿತಗೊಂಡ ಸಮಾಜದ ಕಠಿಣ ನಿಯಮಗಳನ್ನು ಮುರಿಯಲು ದೊಡ್ಡ ಹಾದಿಯನ್ನು ತೆರೆಯಿತು.
1920 ರಲ್ಲಿ ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಇದು ದೇವರ ಹೆಸರಿನಲ್ಲಿ ಮಹಿಳೆಯರ ಮೇಲೆ ಮೇಲ್ಜಾತಿ, ಮೇಲ್ವರ್ಗ, ಭೂಮಾಲೀಕ ವರ್ಗ ನಡೆಸುತ್ತಿದ್ದ ಶೋಷಣೆಯಿಂದು ಬಿಡುಗಡೆಯ ಮಾರ್ಗವಾಗಿತ್ತು.
ಇಂತಹ ಮಹತ್ ಸಾಧನೆಗಳನ್ನು ಮಾಡಿದ ಶಾಹು ಮಹಾರಾಜರು 6 ಮೇ 1922ರಂದು ಮುಂಬೈನಲ್ಲಿ ನಿಧನರಾದರು. ಆದರೆ ಅವರು ಮಾಡಿರುವ ಸಾಧನೆಗಳು ಅವರನ್ನು ಭಾರತದ ಇತಿಹಾಸದ ಪುಟದಲ್ಲಿ ಅಮರರನ್ನಾಗಿರಿಸುತ್ತವೆ.








