ಬೆಳಗಾವಿ: ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆ, ಆದ್ರೂ ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ಇಂತಹ ತರಬೇತಿಗಳನ್ನು ಆಯೋಜಿಸುತ್ತಿರುವ ಸತೀಶ ಜಾರಕಿಹೊಳಿ ಅವರಿಗೆ ಧನ್ಯವಾದಗಳನ್ನು ತಿಳಿಸಲೇಬೇಕು ಎಂದು ಘಟಪ್ರಭಾ ಠಾಣೆಯ ಮಹಿಳಾ ಪಿಎಸ್ಐ ಶಾಂತಾ ಹಳ್ಳಿ ಹೇಳಿದರು.
ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ ರಾಷ್ಟ್ರೀಯ ತರಬೇತಿ ಅಕಾಡೆಮಿಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಜರುಗಿದ ಸೈನಿಕ ಮತ್ತು ಪೊಲೀಸ್ ಕಾನ್ಸ್ಟೇಬಲ್ ಮಹಿಳಾ ಆಕಾಂಕ್ಷಿಗಳಿಗೆ ಉಚಿತ ತರಬೇತಿಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದ ಅವರು, ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಜೀವನ ಮನೆಯ ಚೌಕಟ್ಟಿನಲ್ಲಿ ಮುಗಿದು ಹೋಗುತ್ತದೆ. ಆದ್ರೂ ನಿಮ್ಮನ್ನು ಕರೆತಂದು ಇಂತಹ ತರಬೇತಿಗಳನ್ನು ನೀಡುವುದರ ಮೂಲಕ ನಿಮ್ಮನ್ನು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶ ಹೊಂದಿರುವ ಸತೀಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದರು.

ತಮ್ಮ ವಿದ್ಯಾರ್ಥಿ ಮತ್ತು ವೃತ್ತಿ ಜೀವನದ ಅನುಭವಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ಲಿಖಿತ ಮತ್ತು ದೈಹಿಕ ಪರೀಕ್ಷೆಗಾಗಿ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳಿಗೆ ಎದುರಾಗುವ ಗೊಂದಲಗಳನ್ನು ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ತರಬೇತಿ ಉಸ್ತುವಾರಿ ರವೀಂದ್ರ ನಾಯ್ಕರ್ ಮಾತನಾಡಿ, ಪೊಲೀಸ್ ಇಲಾಖೆಯಾಗಲಿ ಅಥವಾ ಇನ್ನಾವುದೇ ಇಲಾಖೆಯಾಗಲಿ ನೇರ ಮಾರ್ಗದಲ್ಲಿ ಕೆಲಸ ಪಡೆದುಕೊಳ್ಳಬೇಕು. ಅದಕ್ಕಾಗಿ ಅಡ್ಡದಾರಿಗಳಿರುವುದಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಮುಂದಿನ ದಿನಗಳಲ್ಲಿ ದೇವದಾಸಿಯರ ಮಕ್ಕಳು, ಅದರ ನಂತರ ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೆ ತರಬೇತಿ ನೀಡಲಾಗುವುದು ಎಂದರು.
ಬಳಿಕ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಾಂತಾ ಹಳ್ಳಿ ಮತ್ತು ಜಿಲ್ಲಾ ಖಜಾನೆ ಅಧಿಕಾರಿಯಾಗಿ ಆಯ್ಕೆಯಾಗಿರುವ ಪ್ರಕಾಶ ವೈ. ಮೇಟಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತರಬೇತಿ ಶಿಬಿರದಲ್ಲಿ ಆಯೋಜಿಸಿದ ಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿದ ಮತ್ತು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದ ಶಿಬಿರಾರ್ಥಿಗಳಿಗೆ ಬಹುಮಾನಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಇದೇ ವೇಳೆ ಶಿಬಿರಾರ್ಥಿಗಳು ತರಬೇತಿ ಅವಧಿಯ ಅನುಭವವನ್ನು ಹಂಚಿಕೊಂಡರು. ಇಲ್ಲಿ ಬಂದಾಗ ನಾವು ಕಲ್ಲಿನಂತೆ ಇದ್ದೆವು, ಈಗ ನಮ್ಮನ್ನು ಒಂದು ಸುಂದರ ಶಿಲ್ಪವನ್ನಾಗಿ ಮಾಡಿದ್ದಾರೆ ಎಂದರು. ಜೊತೆಗೆ, ಇಲ್ಲಿನ ಊಟ, ತರಬೇತಿ, ಸಿಬ್ಬಂದಿಯ ಸೌಜನ್ಯವನ್ನು ಮಾತಾಡಿದ ಬಹುತೇಕ ಶಿಬಿರಾರ್ಥಿಗಳು ಮೆಚ್ಚಿಕೊಂಡರು.
ಡಾ. ಪ್ರದೀಪ ಮಾಲ್ಗುಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬೋಧಕರಾದ ಹನುಮಂತ ಬಂಡಿ, ಸಂತೋಷ ಮೆಳವಂಕಿ, ದೈಹಿಕ ತರಬೇತುರರಾದ ರೇಣುಕಾ ವನಕುಂದ್ರಿ, ಸುಭಾಷ ನಾಯಕ, ಉಷಾ ನಾಯಕ ಇದ್ದರು.