ಚಿತ್ರದುರ್ಗ: ಮಾನವ ಬಂಧುತ್ವ ವೇದಿಕೆ ಮೂಢನಂಬಿಕೆ, ಕಂದಾಚಾರದ ವಿರುದ್ಧ ಹೋರಾಡುತ್ತ, ವೈಜ್ಞಾನಿಕ ತಳಹದಿಯ ಮೇಲೆ ಜೀವನ ನಡೆಸಬೇಕು ಎಂಬ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭಧಲ್ಲಿ ಮಾತಾಡಿದ ಅವರು, ದೇಶದಲ್ಲಿರುವ ಮೌಢ್ಯ, ಜಾತಿ, ಕುಲ, ಗೋತ್ರಗಳು ಬೇರಾವ ದೇಶಗಳಲ್ಲೂ ಇಲ್ಲ. ಇಂತಹ ಸಮಯದಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಮಾಡುತ್ತಿದೆ ಎಂದರು.
ಕೊರೊನಾ ಸಮಯದಲ್ಲಿ ಎಲ್ಲ ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು ಮುಚ್ಚಿದವು. ಆಗ ಜೀವ ಉಳಿಸುವ ಕೆಲಸ ಮಾಡಿದ್ದು ಆಸ್ಪತ್ರೆಗಳು. ವೈಜ್ಞಾನಿಕ ಆಲೋಚನೆಗಳನ್ನು ಎಲ್ಲರೂ ರೂಪಿಸಿಕೊಳ್ಳಬೇಕು ಎಂದರು.
ಮನುವಾದ ಮನುಷ್ಯತ್ವವನ್ನು ನಾಶಮಾಡುತ್ತಿದೆ. ಇಂತಹ ಸಮಯದಲ್ಲಿ ವೇದಿಕೆ ಮಹತ್ವದ ಕೆಲಸವನ್ನು ಮಾಡುತ್ತಿದೆ. ವಿದ್ಯುತ್ ಖಾಸಗೀಕರಣ, ಸಂವಿಧಾನ ಉಳಿಸಿ ಮೊದಲಾದ ಕಾರ್ಯಕ್ರಮಗಳನ್ನು ವೇದಿಕೆ ಮಾಡುತ್ತಿದೆ ಎಂದರು.
ಉದ್ಯಮಿಗಳಿಗೆ ಅನುಕೂಲಕರವಾದ, ಜನವಿರೋಧಿಯಾದ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ರಾಷ್ಟ್ರೀಕರಣ ಹೋಗಿ ಈಗ ಖಾಸಗೀಕರಣ ಬರುತ್ತಿದೆ. ರೈತರಿಗೆ ವಿದ್ಯುತ್ ಅನ್ನು ಕಡಿತಮಾಡುವ ಕೆಲಸವನ್ನು, ರೈಲ್ವೇಯನ್ನು ಖಾಸಗೀಕರಣಗೊಳಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದರೆ ಮಾನವ ಬಂಧುತ್ವ ವೇದಿಕೆಯಿಂದ ಇನ್ನಷ್ಟು ಉಪಯೋಗವಾಗುತ್ತದೆ. ಇಂತಹ ಸಮಾವೇಶಗಳನ್ನು ಎಲ್ಲ ತಾಲೂಕುಗಳಿಗೂ ವಿಸ್ತರಿಸಿ ಎಂದು ಸಲಹೆ ನೀಡಿದರು.