ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಬಾಬಾಸಾಹೇಬರಿಗೆ ಬರೆದ ಪತ್ರ

ತೀರ್ಥರೂಪ ಸಮಾನರಾದ ಬಾಬಾಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು.

ನಾವಿಲ್ಲಿ ಕ್ಷೇಮ, ನೀವು ಕ್ಷೇಮವಾಗಿದ್ದೀರ ಎಂದು ಭಾವಿಸಿದ್ದೇನೆ. ನೀವು ಧರೆಗೆ ದೊಡ್ಡವರು. ನಿಮ್ಮ ನೆನಪು ಅಜರಾಮರ.

ಈ ಪತ್ರ ಬರೆಯಲು ಕಾರಣವೇನೆಂದರೆ ನೀವು ಬರೆದಿಟ್ಟ ಸಂವಿಧಾನದ ಫಲವೇ ನಿಮಗೆ ಈಗ ಪತ್ರ ಬರೆಯುವಷ್ಟು ಸ್ವಾತಂತ್ರ್ಯ, ಅಕ್ಷರ ಮತ್ತು ಅರಿವು ನಮಗೆ ಸಿಕ್ಕಂತಾಗಿದೆ.

ನೀವು ಹೋದ ಮೇಲೆ ದೇಶದಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸಿವೆ. ತಾವೇ ಹೇಳಿದಂತೆ “ನಾನು ಬರೆದ ಸಂವಿಧಾನ ಅದೆಷ್ಟೇ ಉತ್ಕೃಷ್ಟವಾಗಿದ್ದರು ಅದನ್ನು ಅನುಷ್ಠಾನಗೊಳಿಸುವವರು ದುಷ್ಟರಾಗಿದ್ದರೆ  ಆ ಸಂವಿಧಾನವೂ ವ್ಯರ್ಥ” ಎಂಬ ಮಾತು ದಿಟವಾಗುವಂತ ಆತಂಕ ನಮ್ಮನ್ನು ಕಾಡುತ್ತಿದೆ.

ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದ ಸಂತ ಕಬೀರರು “ಮನುಷ್ಯ ದೇವರಾಗಬೇಕಿಲ್ಲ. ಮಹಾತ್ಮನಾಗಬೇಕಿಲ್ಲ, ಆತ ಸಂತನಾಗಬೇಕು” ಎಂದಿದ್ದರು. ನೀವು ಇದನ್ನೆ ಪ್ರತಿಪಾದಿಸಿದ್ದಿರಿ. ಅಂತೆಯೆ ಬದುಕಿದ್ದೀರಿ. ಆದರೆ ಈ ದೇಶದಲ್ಲಿ ಈಗ ಮನುಷ್ಯರೇ ದೇವರುಗಳಾಗಿ ಮನುಷ್ಯರನ್ನೆ “ಭಕ್ತ”ರನ್ನಾಗಿಸಿ ಧಾರ್ಮಿಕ ಸಾಂಸ್ಕೃತಿಕ ಅರಾಜಕತೆಯೆಡೆಗೆ ತಳ್ಳಲಾಗುತ್ತಿದೆ.

ಅರಿವು, ಸ್ವಾಭಿಮಾನದ ಜಂಗಮ ರೂಪವಾದ ನಿಮ್ಮನ್ನೆ ಸ್ಥಾವರವನ್ನಾಗಿಸಿಯೂ, ಮಹಾತ್ಮನನ್ನಾಗಿಸಿಯೂ, ದೇವರನ್ನಾಗಿಸಿಯೂ ಮಾಡಿ ಜನರನ್ನು ಮತ್ತದೆ ದಾಸ್ಯಕ್ಕೆ ಒಗ್ಗಿಸುತ್ತಿರುವುದು ವರ್ತಮಾನ ರಾಜಕಾರಣದ ದೊಡ್ಡ ಸಂಚು.

ಬಾಬಾ ಸಾಹೇಬರೆ, ಜನ – ದನಗಳು ಇಲ್ಲಿ ಈಗ ರಾಜಕೀಯ ಅಧಿಕಾರದ ಅಸ್ತ್ರಗಳಾಗಿಬಿಟ್ಟಿವೆ. ಹಸಿವು, ಅಭದ್ರತೆಯಿಂದ ಬೀದಿಯಲ್ಲಿ ಸಾಮಾನ್ಯರ ರಕ್ತವೇ ಹರಿದರೂ ಕನಿಕರ‌ ಹುಟ್ಟಲಾರದಷ್ಟು ನಿರ್ದಯಿಗಳೇ ಇಂದು ಅಧಿಕಾರದಲ್ಲಿರುವುದು.

ಅಧಿಕಾರ ರಾಜಕಾರಣವೇ ಪ್ರಾಯೋಜಿಸಿದ ವಿಭಜನೆ, ಹಿಂಸೆಯಿಂದ ಬಹುತ್ವದ ಭಾರತದ ಬಣ್ಣಗಳು ಒಂದೆ ನೆತ್ತರಿನ ಕೆಂಪು ಮುಕ್ಕಳಿಸುತ್ತಿವೆ.

ಇನ್ನೂ ನೀವು ತಂದ ಸಮಬಾಳು ಸಮಪಾಲು ಎಂಬ ಮಹೋನ್ನತ ಮಾನವೀಯ ಆದರ್ಶ ಸಿದ್ಧಾಂತವನ್ನು  ಮಣ್ಣು ಪಾಲು ಮಾಡುವ ಶಕ್ತಿಗಳಿಗೆ ಅಧಿಕಾರ ಬಲ ಬಂದಿದೆ. ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಅನ್ನಬಟ್ಟಲಿಗೆ ಕೇಡಿನ ನಂಜು ಕಲೆಸಲಾಗುತ್ತಿದೆ. ಈ ನ್ಯಾಯದ ಜಗುಲಿಯೇ ಅಪ್ರಸ್ತುತ ಎನ್ನುವಂತೆ ಪರಿಕಲ್ಪಿತ ಅಭಿಪ್ರಾಯ ಬಲಗೊಳ್ಳುತ್ತಿರುವುದು ದುರಂತ.

ಅದೆಲ್ಲಾ ಇರಲಿ, ಮುಖ್ಯವಾಗಿ ಬೆಲೆ ಏರಿಕೆ, ನಿರುದ್ಯೋಗದಿಂದ  ದೇಶದ ಜನ ಬೆಂದು ಹೋಗುವಂತಾಗಿದೆ. ಸರ್ಕಾರಗಳು ತಾಯಿಯಿದ್ದಂತೆ, ಅಂತಃಕರಣದಿಂದ ಆಡಳಿತ ನಡೆಸಬೇಕು ಎಂಬ ತಮ್ಮ ದಾರ್ಶನಿಕತೆಯಿಂದ ಗಾವುದ ದೂರ ಸಾಗಿರುವ ಸರ್ಕಾರಗಳು ನಿರ್ದಯಿ ಈಸ್ಟ್ ಇಂಡಿಯಾ ಕಂಪನಿಗಿಂತ ಭಿನ್ನವಿಲ್ಲ.

ಪ್ರಶ್ನಿಸುವವರನ್ನು ಸಲೀಸಾಗಿ ಜೈಲಿಗೆ ಅಟ್ಟುವ ಮೂಲಕ ಪ್ರಜಾಪ್ರಭುತ್ವದ ಜೀವದ್ರವ್ಯಗಳೆ ಆಗಿರುವ ಪ್ರಶ್ನೆ – ಉತ್ತರ, ಸಂವಾದ, ಚರ್ಚೆ, ಶಾಂತಿಯುತ ಚಳವಳಿಗಳೆಲ್ಲಾ ಈಗ ಅಘೋಷಿತ ನಿಷೇಧಕ್ಕೊಳಪಟ್ಟಿವೆ. ಬಹುಶಃ ನೀವಿಂದು ಇದ್ದಿದ್ದರೆ ನಿಮಗೆ ಈಗಾಗಲೆ ದೇಶದ್ರೋಹಿ ಪಟ್ಟ ಕಟ್ಟಿ ಜೈಲಿನಲ್ಲಿಟ್ಟಿರುತ್ತಿದ್ದರು.

ಪ್ರಭುತ್ವವನ್ನು ಪ್ರಶ್ನಿಸುವ ಯಾವ ಕವಿತೆಗೂ, ಮಧುರ ಹಾಡಿಗೂ  ಇಲ್ಲಿ ಜಾಗವಿಲ್ಲ. ಕವಿ, ಪತ್ರಕರ್ತ, ನಾಟಕಕಾರ, ಉಪನ್ಯಾಸಕ ಯಾರೊಬ್ಬರೂ ಇಲ್ಲಿ ಸೊಲ್ಲೆತ್ತುವಂತಿಲ್ಲ.  ಪ್ರಭುತ್ವವೆ ಪ್ರಜೆಗಳನ್ನು ಬೇಟೆಯಾಡುವ, ನಿಂತ ನಿಲುವುನಲ್ಲೆ ದೇಶದ್ರೋಹಿಯಾಗಿಸಿ ಅಖೈರುಗೊಳಿಸುವ ಭಾರತವಿಂದು ಹುಟ್ಟಿಕೊಂಡಿದೆ.

ಕ್ಷಮೆ ಇರಲಿ ಭೀಮ್ ಜೀ…

ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನೀವು ಯಾವ ವಿಭಜನಾ ಶಕ್ತಿಗಳು, ಅಮಾನವೀಯ ಸಿದ್ಧಾಂತಗಳ ವಿರುದ್ಧ ತಾವು ಯಾರಿಗಾಗಿ ಹೋರಾಡಿದ್ದಿರೂ, ಬದುಕಿನುದ್ದಕೂ ಸಕಲವನ್ನೂ ತ್ಯಾಗ ಮಾಡಿದ್ದಿರೋ ಅವರೂ ಕೂಡ ಇಂದು ಅದೇ ದುರುಳ ಶಕ್ತಿ, ಸಿದ್ಧಾಂತಗಳ ಜೊತೆ ಹೆಜ್ಜೆ ಹಾಕುತ್ತಿರುವುದು ಘೋರ ವಿದ್ರೋಹ.

ಇಂತಹ ವೈರುಧ್ಯದ ಕತ್ತಲಲ್ಲಿ  ಶೋಷಿತ ಸಮುದಾಯ ಸಾಂಸ್ಕೃತಿಕ ರೂಪಾಂತರದ ಸಂಚಿಗೆ ಸಲೀಸಾಗಿ ಬಲಿಯಾಗುತ್ತಿದೆ. ಬಹುಶಃ ನಿಮ್ಮನ್ನು ಪರಿಪೂರ್ಣವಾಗಿ ಓದಿಕೊಳ್ಳಲಾರದ, ಅರ್ಥ‌ಮಾಡಿಕೊಳ್ಳಲಾಗದ  ಈ ಸಮುದಾಯಗಳ ಹೊಣೆಗೇಡಿತನ ಎನ್ನುತ್ತೇನೆ.

ನಿಮ್ಮನ್ನು ಅಪ್ರಸ್ತುತಗೊಳಿಸುವ ಎಲ್ಲಾ ಹುನ್ನಾರಗಳ ನಡುವೆಯೂ ನೀವು ಎಲ್ಲಾ ಕಾಲಕ್ಕೂ ಮೋಡ ಸೀಳಿ ಬೆಳಕನೀಯುವ ಸೂರ್ಯನಂತೆ ಬೆಳಗುತ್ತಲೆ ಇರುತ್ತೀರ. ಇದೊಂದೆ ನಿಮ್ಮನ್ನು ನಂಬಿದ  ‘ನೀವು’ ಎಂದರೆ ಭಾರತದ ಸಂವಿಧಾನ ಎಂಬ ಮಹಾನ್ ಮೂರ್ತ ಸ್ವರೂಪ. ಇದುವೆ ನಮ್ಮ ಪಾಲಿಗೆ ಒಂದು ಭರವಸೆ, ರಕ್ಷಣೆ ಮತ್ತು‌ ಬದುಕು.

ಭೀಮ್ ಜೀ… ನಿಮ್ಮ  ಪರಿ ನಿಬ್ಬಾಣ ದ ದಿನ ಈ ದೇಶ ಅನಾಥವಾಯಿತು. ನಿಜ, ಮಹಾ ಮಗನೊಬ್ಬನನ್ನು ಕಳೆದುಕೊಂಡ ತಂದೆಯಂತೆ, ತಾಯಿಯನ್ನು ಕಳೆದುಕೊಂಡ ಹಸುಗೂಸಿನಂತೆ ಈ ದೇಶ  ಕಣ್ಣೀರಿಟ್ಟಿತು.

ಇಲ್ಲಿ ಯಾವುದೂ ಶಾಶ್ವತವಲ್ಲ ಎಂದ ತಥಾಗತನ ಬೆರಳ ಹಿಡಿದು ಒಂದೂ ಮಾತೂ ಹೇಳಿದೆ ಹೋಗಿ ಬಿಟ್ಟಿರಲ್ಲ…?!ಇದು ನ್ಯಾಯವೇ?

ನೀವು ಬಂದಾಗ ಇತ್ತಕಡೆ ಬಂದು ಹೋಗಿ.

ನಿಮ್ಮ ಬೂಟಿಗೆ ಹೊಳಪಿನ ಪಾಲಿಶ್ ಹಾಕಿ ಕೊಡುತ್ತೇನೆ.

ನಿಮ್ಮ ಊರುಗೋಲು ಸವೆಯದಂತೆ ಅಟ್ಟೆ ಕಟ್ಟಿಕೊಡುತ್ತೇನೆ.

ಸಡಿಲಗೊಂಡ ನಿಮ್ಮ ಕನ್ನಡಕದ  ಪ್ರೇಮ್ ಭದ್ರಪಡಿಸಿಕೊಡುತ್ತೇನೆ.

ಅನ್ನ, ಅರಿವು, ಸ್ವಾಭಿಮಾನದ ಹಾಲುಣಿಸಿದ ನಿಮಗೆ ಈ ಮೂಲಕವಾದರೂ ಋಣ ತೀರಿಸಿದ ತೃಣ ತೃಪ್ತಿಯಾದರೂ ನನ್ನದಾಗಲಿ.

ನಿಮಗಾಗಿ ಕಾಯುತ್ತಿದ್ದೇನೆ.

ಇಂತಿ ನಿಮ್ಮ…..

– ಎನ್ ರವಿಕುಮಾರ್ ಟೆಲೆಕ್ಸ್

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]