March 25, 2023 4:27 pm

ಮೀಸಲಾತಿಯ ಜನಕ ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣ ರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ ಜೂನ್ 4 1884ರಂದು ಮಹಾರಾಜ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಅವರ ಜೇಷ್ಠ ಪುತ್ರನಾಗಿ ಜನಿಸಿದರು. ನಾಡು ಇಂದು ಅವರ 137ನೇ ಜಯಂತಿಯನ್ನು ಆಚರಿಸುತ್ತಿದೆ.

ಯದುವಂಶದ ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರಾಗಿ ಮೈಸೂರು ಸಂಸ್ಥಾನವನ್ನು ಮುನ್ನಡೆಸಿ ಅನೇಕ ಕ್ರಾಂತಿಯ ಹರಿಕಾರರಾದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಇವರು 1902-1940ರ ಸುಮಾರು 38 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಮೈಸೂರನ್ನು ಪ್ರಗತಿಪಥದಲ್ಲಿ ಕೊಂಡೊಯ್ದರು.

ಇವರು 1895ರಲ್ಲೇ ಪಟ್ಟಾಭಿಷಿಕ್ತರಾದಾಗ ಇವರ ವಯಸ್ಸು ಕೇವಲ 10. ಈ ಸಮಯದಲ್ಲಿ ಮಹಾರಾಣಿ ಕೆಂಪಜಂಜಮ್ಮಣ್ಣಿ ವಾಣಿ ವಿಲಾಸ ಅವರು ರಾಜ್ಯ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಕೃಷ್ಣರಾಜರಿಗೆ ವಯೋಸಹಜವಾಗಿ ಮತ್ತು ಮೈಸೂರು ಅರಸರಿಗೆ ಸಿಗಬೇಕಿದ್ದ ಅರ್ಹ ವಿದ್ಯಾಭ್ಯಾಸ, ಆಡಳಿತ ತರಬೇತಿಗಳನ್ನು ಮಹಾರಾಣಿ ನಿಗಾದಲ್ಲಿ ಕೊಡಿಸಿದರು.

1894ರಲ್ಲಿ ಕೊಲ್ಕೊತ್ತಾ ಪ್ರವಾಸದ ವೇಳೆ 10ನೇ ಚಾಮರಾಜೇಂದ್ರ ಒಡೆಯರ್ ಅನಾರೋಗ್ಯದಿಂದ ಕಾಲವಶರಾಗುತ್ತಾರೆ. ಆಗ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೇವಲ 10ರ ಹರೆಯ. ಆ ವಯಸ್ಸಿನಲ್ಲೇ ಕೃಷ್ಣರಾಜರಿಗೆ ಮೈಸೂರು ಸಂಸ್ಥಾನದ ರಾಜ್ಯಭಾರ ಹೊರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. 18ರ ಪ್ರಾಪ್ತ ವಯಸ್ಸಿನವರೆಗೆ ತಾಯಿಯ ಉಸ್ತುವಾರಿಯಲ್ಲೇ ರಾಜ್ಯಭಾರ ನಡೆಯುತ್ತದೆ. 1902ರ ಫೆಬ್ರವರಿ 2ರಂದು ಅಧಿಕೃತವಾಗಿ ತಮ್ಮ ತಾಯಿಯಿಂದ ಅಧಿಕಾರದ ದಂಡವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ಅನಂತರದ್ದೆಲ್ಲ ಕರ್ನಾಟಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ.

1902ರ ಆಗಸ್ಟ್ 8ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ಯುಕ್ತವಾಗಿ ಮೈಸೂರಿನ ಮಹಾರಾಜ ಎಂದು ಘೋಷಿಸುತ್ತಾರೆ. 

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರಾಜಗುರು ಪಿ. ರಾಘವೇಂದ್ರ ರಾವ್ ಅಡಿಯಲ್ಲಿ ಲೋಕರಾಜನ್ ಅರಮನೆಯಲ್ಲಿ ಆರಂಭಿಕ ಶಿಕ್ಷಣ ಮತ್ತು ತರಬೇತಿ ನೀಡಲಾಗುತ್ತದೆ. ಪಾಶ್ಚಿಮಾತ್ಯ ಅಧ್ಯಯನ, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಕುದುರೆ ಸವಾರಿ ಮತ್ತು ಭಾರತೀಯ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಕೂಡ ಅವರು ಮಾಡುತ್ತಾರೆ. ಅನಂತರ ಅಜ್ಮೀರ್ ನ ಮೇಯೊ ಕಾಲೇಜ್‍ನಲ್ಲಿ ಶಿಕ್ಷಣ ಪಡೆಯುತ್ತಿರುವ ಸಮಯದಲ್ಲಿ ಅನಾರೋಗ್ಯದ ಕಾರಣ ಮೈಸೂರಿಗೆ ವಾಪಸಾಗುತ್ತಾರೆ. ಬಳಿಕ ಬಾಂಬೆ ಸಿವಿಲ್ ಸರ್ವೀಸ್‍ನ ಸರ್ ಸ್ಟುವರ್ಟ್ ಫ್ರೇಸರ್ ಅವರ ಬಳಿ ಆಡಳಿತ ನಿರ್ವಹಣೆ, ನ್ಯಾಯಶಾಸ್ತ್ರ, ತತ್ವಶಾಸ್ತ್ರ ಶಿಕ್ಷಣವನ್ನು ಪಡೆಯುತ್ತಾರೆ. ಅದಾದ ನಂತರ, ರಾಜ್ಯದಾದ್ಯಂತ ಪ್ರವಾಸಗಳನ್ನು ಮಾಡುವ ಮೂಲಕ ರಾಜ್ಯದ ಅಗತ್ಯಗಳೇನು ಇತ್ಯಾದಿ ಅಂಶಗಳ ಕುರಿತು ತಿಳಿವಳಿಕೆಯನ್ನು ಗಳಿಸುತ್ತಾರೆ.

ಮೈಸೂರು ಆಡಳಿತ ಸುಧಾರಣೆಯ ಪರ್ವ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ನೆಪಮಾತ್ರಕ್ಕೆ ಸೀಮಿತವಾಗಿದ್ದ ‘ಪ್ರಜಾ ಪ್ರತಿನಿಧಿ ಸಭೆ’ಗೆ ಹೊಸರೂಪ ಕೊಡುವಲ್ಲಿ ಇವರ ಪಾತ್ರ ಗಮನಾರ್ಹವಾದುದು. ಇವರ ಅವಧಿಯಲ್ಲೇ ಪ್ರಜಾಪ್ರತಿನಿಧಿ ಸಭೆ ನೈಜ ಪ್ರಜಾಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಗುತ್ತದೆ. ಅವರ ನೇತೃತ್ವದ ಮೊದಲ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಕೃಷ್ಣರಾಜ ಒಡೆಯರ್, “ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡ ಸುಖ ಸಂಪತ್ತನ್ನು ಒದಗಿಸಿ ಕೊಡಬೇಕೆಂಬುದು ನನ್ನ ಜೀವನದ ಪರಮೊದ್ದೇಶ” ಎನ್ನುತ್ತಾರೆ. ತಮ್ಮ ಆಡಳಿತದ ಅವಧಿಯಲ್ಲಿ ತಮ್ಮ ಮಾತುಗಳಿಗೆ ಬದ್ಧರಾಗಿರುತ್ತಾರೆ. 1923ರರಲ್ಲಿ ನೂತನ ಪ್ರಜಾಪ್ರತಿನಿಧಿಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಜಾರಿಗೆ ತರುತ್ತಾರೆ. 

ಅವರು ಅಂದು ಇಟ್ಟ ಈ ನಡೆ ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಭಾರತದಲ್ಲೇ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಮೊದಲ ಹೆಜ್ಜೆ ಇಡುತ್ತದೆ. ಈ ಪ್ರಜಾಪ್ರತಿನಿಧಿ ಸಭೆ ಇಂದು ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿಧಾನ ಪರಿಷತ್ತುಗಳು ನಡೆಸುವ ಸಂಸತ್ ಮತ್ತು ವಿಧಾನಮಂಡಲ ಅಧಿವೇಶನದ ಮಾದರಿಯಲ್ಲಿ ವರ್ಷಕ್ಕೆ ಎರಡು ಬಾರಿ ಸಭೆ ನಡೆಸಲಾಗುತ್ತಿತ್ತು. ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸಭೆ ನಡೆಯುತ್ತಿತ್ತು. ಈ ಕಲಾಪಗಳಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳ ಮಂಡನೆ ಇತ್ಯಾದಿ ಇಂದಿನ ಸಂಸದೀಯ ಮಾದರಿಯ ನಡಾವಳಿಗಳನ್ನು ಪಾಲಿಸಲಾಗುತ್ತಿತ್ತು. ಪ್ರಜಾಪ್ರತಿನಿಧಿ ಸಭೆಯಲ್ಲಿ 275 ಸದಸ್ಯರ ಪೈಕಿ ಬಹುತೇಕ ಪ್ರತಿನಿಧಿಗಳು ಜನರಿಂದ ಆಯ್ಕೆಯಾಗಬೇಕಿತ್ತು. ಸಮಯಕ್ಕೆ ಸರಿಯಾಗಿ ಚುನಾವಣೆ ಕ್ಷೇತ್ರಗಳ ಪುನರ್ವಿಂಗಡಣೆಗೆ ಕ್ರಮಕೈಗೊಳ್ಳಲಾಗಿತ್ತು. 

ಪ್ರಜಾಪ್ರತಿನಿಧಿ ಸಭೆಯೊಂದಿಗೆ. 1907ರಲ್ಲಿ ನ್ಯಾಯ ವಿಧೇಯಕ ಸಭೆಯನ್ನೂ ಜಾರಿಗೊಳಿಸಲಾಯಿತು. ಇದರಲ್ಲಿನ ಸದಸ್ಯರ ಸಂಖ್ಯೆ 50. ಇವರ ಪೈಕಿ ಜನರಿಂದ ಆಯ್ಕೆಯಾದವರ ಸಂಖ್ಯೆ 22. ಇದು ಇಂದಿನ ರಾಜ್ಯಸಭೆ, ವಿಧಾನಪರಿಷತ್ತಿನ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಲಾಪಗಳನ್ನು ನಡೆಸಲಾಗುತ್ತಿತ್ತು. 

ಪ್ರಜಾಪ್ರತಿನಿಧಿಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ವಿಮರ್ಶಿಸುವ ಅಧಿಕಾರವನ್ನು ನ್ಯಾಯವಿಧೇಯಕ ಸಭೆಗೆ ನೀಡಲಾಗಿತ್ತು. ಯಾವುದೇ ಕಾನೂನನ್ನು ಜಾರಿಗೊಳಿಸಲು ನ್ಯಾಯ ವಿಧೇಯಕ ಸಭೆಯ ಅನುಮತಿ ಕಡ್ಡಾಯವಾಗಿತ್ತು. ಈ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರವನ್ನು ಕೂಡ ನೀಡಲಾಗಿತ್ತು.

ಮೀಸಲಾತಿಯ ಜನಕ ನಾಲ್ವಡಿ ಕೃಷ್ಣರಾಜ ಒಡೆಯರ್ 

1918ರಲ್ಲಿ ಸರ್. ಮಿಲ್ಲರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಎಲ್ಲ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಕೊಡುವ ಸಲುವಾಗಿ ಅಗತ್ಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಯಿತು. ಆಯೋಗದ ಶಿಫಾರಸಿನ ಪ್ರಕಾರ, ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಲಾಯಿತು.  1921ರಲ್ಲಿ ಪ್ರಪ್ರಥಮ ಭಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶಿಸಲಾಯಿತು. ಇದೇ ಕಾರಣದಿಂದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು “ಮೀಸಲಾತಿಯ ಜನಕ” ಎಂದು ಕರೆಯಲಾಗುತ್ತದೆ. 

“ಮಿಲ್ಲರ್ ಆಯೋಗ” ರಚನೆ ಸಾಮಾಜಿಕ ಇತಿಹಾಸದಲ್ಲೇ ಬೃಹತ್ ಮೈಲಿಗಲ್ಲು ಎಂದು ಹೆಸರಾಗಿದೆ. ಮಿಲ್ಲರ್ ಆಯೋಗ ಜಾರಿಗೆ ಬಂದ ಪರಿಣಾಮದಿಂದ ಮೈಸೂರು ಸಂಸ್ಥಾನದಲ್ಲಿ ಮೊಟ್ಟಮೊದಲ ಬಾರಿಗೆ ಕಾಂತರಾಜೇ ಅರಸ್ ಮೈಸೂರಿನ ದಿವಾನರಾಗಲು ಅವಕಾಶ ಲಭಿಸಿತು. ಅನಂತರದ ಪ್ರಮುಖ ಬೆಳವಣಿಗೆಗಳೆಂದರೆ, ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವ ಜಾತಿ ಆಧಾರಿತ ಶಾಲಾ- ಕಾಲೇಜುಗಳು ತೆರೆದವು. ಇದರ ಪರಿಣಾಮದಿಂದಾಗಿಯೇ ಇಂದು ಈ ಸಮುದಾಯದವರು ವಿದ್ಯಾಭ್ಯಾಸ, ಸರ್ಕಾರಿ ನೌಕರಿ, ಖಾಸಗಿ ಉದ್ದಿಮೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಲು ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೂಡ ಮೇಲುಗೈ ಸಾಧಿಸಲು ಕಾರಣರಾದರು. ಇದರ ಶ್ರೇಯಸ್ಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು.

ಆಡಳಿತ ವಿಕೇಂದ್ರೀಕರಣಕ್ಕೆ ಕೃಷ್ಣರಾಜರ ಕೊಡುಗೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಟಿಯುಳ್ಳ ಅರಸರಾಗಿದ್ದರು ಎಂಬುದಕ್ಕೆ ಅನೇಕ ಸಾಕ್ಷಿಗಳು ಸಿಕ್ಕಿವೆ. ಮೈಸೂರು ಸಂಸ್ಥಾನದಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದರು. ಇದು ಅವರ ಅವಿಸ್ಮರಣೀಯ ಕೊಡುಗೆಗಳ ಪೈಕಿ ಒಂದು. ಅವರ ಈ ಮುಂಗಾಣ್ಕೆಯಿಂದಾಗಿ ರಾಜ್ಯದ ಸಣ್ಣ ಪಟ್ಟಣಗಳಲ್ಲಿ ಮುನಿಸಿಪಾಲಿಟಿಗಳು ಕಾರ್ಯಾಚರಣೆಗಿಳಿದವು. ಗ್ರಾಮೀಣ ಪ್ರದೇಶಗಳಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯಾರಂಭಿಸಿದವು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆ ಸಾಧ್ಯವಾಯಿತು. ಮಹಾತ್ಮ ಗಾಂಧಿಯವರು ಹೇಳುವ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಅವಧಿಯಲ್ಲಿ ಜಾರಿಗೊಳಿಸಿದರು.

ಕೃಷ್ಣರಾಜರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನವಾಗಿ ಹೆಸರಾಯಿತು. ನಾಲ್ವಡಿಯವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದೇ ಹೆಸರಾಗಲು ಅವರು ನೀಡಿದ ಕೊಡುಗೆಗಳೇ ಕಾರಣ. ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಸೇರಿದಂತೆ ರಾಜ್ಯದ ಆಮುಲಾಗ್ರ ಅಭಿವೃದ್ಧಿಗೆ ಕೃಷ್ಣರಾಜರು ಕಾರಣರಾದರು. ಇದಕ್ಕೆ ಒಂದು ಉದಾಹರಣೆಯೆಂದರೆ, 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ.

ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಚಿಕಿತ್ಸೆ, ವಿದ್ಯಾಭ್ಯಾಸದ ಅವಕಾಶಗಳ ವಿಸ್ತರಣೆ, ನೀರು ಸರಬರಾಜು, ಜನರ ಸಂಚಾರಕ್ಕೆ ನೀಡಿದ ಒತ್ತುಗಳೆಲ್ಲ ಕೃಷ್ಣರಾಜ ಒಡೆಯರ್ ಅವರು ಎಷ್ಟು ಮುಂದಾಲೋಚನೆ ಹೊಂದಿದ್ದರು ಎಂಬುದಕ್ಕೆ ಕೆಲವು ಉದಾಹರಣೆಗಳು ಮಾತ್ರ. 

ಕೃಷ್ಣರಾಜ ಒಡೆಯರ ಕಾಲದಲ್ಲಿ ರೈಲ್ವೇ ವಿಸ್ತರಣೆ

ಮೈಸೂರು – ಅರಸೀಕೆರೆ, ಬೆಂಗಳೂರು – ಚಿಕ್ಕಬಳ್ಳಾಪುರ, ಚಿಕ್ಕಜಾಜೂರು – ಚಿತ್ರದುರ್ಗ, ನಂಜನಗೂಡು – ಚಾಮರಾಜನಗರ, ತರೀಕೆರೆ – ನರಸಿಂಹರಾಜಪುರ, ಶಿವಮೊಗ್ಗ – ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು 1931ರ ಹೊತ್ತಿಗೆ ಪೂರ್ಣಗೊಳಿಸಲಾಗಿತ್ತು. 

ನೀರಾವರಿಗೆ ನೀಡಿದ ಉತ್ತೇಜನ ಇಂದಿಗೂ ಮಾದರಿ

1907ರಲ್ಲಿ ಬರದ ನಾಡು ಎಂದೇ ಖ್ಯಾತವಾದ ಚಿತ್ರದುರ್ಗ ಮಾರಿಕಣಿವೆ ಎಂಬಲ್ಲಿ ವಾಣೀವಿಲಾಸ ಸಾಗರ ಅಣೆಕಟ್ಟೆಯನ್ನು ಕಟ್ಟಿದರು. ಇದರಿಂದಾಗಿ ಚಳ್ಳಕೆರೆ ಮತ್ತು ಸುತ್ತಮುತ್ತಲ ರೈತರು ಹಾಗೂ ಕಾರ್ಖಾನೆಗಳಿಗೆ ನೀರಿನ ಸೌಕರ್ಯವನ್ನು ಒದಗಿಸಲಾಯಿತು.

ಏಷ್ಯಾದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಕೇಂದ್ರ ಸ್ಥಾಪನೆ

1911ರಲ್ಲಿ ಚಾಲನೆ ನೀಡಲಾದ ಕೃಷ್ಣರಾಜ ಸಾಗರ ಅಣೆಕಟ್ಟೆ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ ಎಂದೇ ಪ್ರಸಿದ್ಧವಾಗಿದೆ. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು.  ಈ ವಿದ್ಯುತ್ ಉತ್ಪಾದನಾ ಕೇಂದ್ರ ಭಾರತದ ಮೊಟ್ಟಮೊದಲ ಜಲ ವಿದ್ಯುತ್ ಉತ್ಪಾದನಾ ಕೇಂದ್ರ. ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ಪ್ರಪ್ರಥಮ ಜಲ ವಿದ್ಯುತ್ ಯೋಜನೆಯನ್ನು ಆಗುಮಾಡಿದ ಸಾಧನೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ. ಈ ಯೋಜನೆಯಿಂದಾಗಿಯೇ 1905 ಆಗಸ್ಟ್ 3ರಂದು ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಈ ಮೂಲಕ ಬೆಂಗಳೂರಿನ ಬೆಳಕು ಎಂಬ ಕೀರ್ತಿ ಕೂಡ ಕೃಷ್ಣರಾಜ ಒಡೆಯರಿಗೆ ಸಲ್ಲಬೇಕು. 

ಜಾತ್ಯತೀತಗೆ ಕೃಷ್ಣರಾಜ ಒಡೆಯರ ಒತ್ತು

ಜಾತಿ ಆಧಾರದ ಮೇಲೆ ಯಾರನ್ನೂ ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಠಗಳನ್ನು ಸರ್ಕಾರ ಎತ್ತಿ ಹಿಡಿಯದು. ಸಾರ್ವಜನಿಕ ಶಾಲೆಗಳನ್ನು ತೆರಿಗೆ ಆದಾಯದದಿಂದ ನಡೆಸುತ್ತಿರುವುದರಿಂದ ಶಿಕ್ಷಣವು ಸಹ, ಆಸ್ಪತ್ರೆ, ನ್ಯಾಯಾಲಯ, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಬೇಕು ಎಂಬುದು ಕೃಷ್ಣರಾಜರ ನಿಲುವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಎಲ್ಲ ವರ್ಗ, ಜಾತಿಯವರಿಗೂ ನೀಡಲು ಒತ್ತು ನೀಡಿದರು.

ಶಿಕ್ಷಣ ಕ್ಷೇತ್ರಕ್ಕೆ ಕೃಷ್ಣರಾಜರ ಕೊಡುಗೆ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡಲು ಉತ್ತೇಜನ ನೀಡಲಾಯಿತು. ಇದರ ಮುಂದುವರೆದ ಭಾಗವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ವಿಶ್ವವಿದ್ಯಾನಿಲಯವನ್ನು ಜುಲೈ 27, 1916ರಂದು ಸ್ಥಾಪಿಸಿದರು. ಇದು ಭಾರತದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಮೂಲಕ ಹೊಸ ದಾಖಲೆಯನ್ನೇ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದಾರೆ.

ಬುಡಕಟ್ಟು ಸಮುದಾಯದವರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಪ್ರಥಮವಾಗಿ ಸ್ಥಾಪಿಸಿದರು. ಅಸ್ಪೃಶ್ಯರಿಗೆ ಮಾತ್ರ ಮೀಸಲಾದ ಶಾಲೆಗಳನ್ನು ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ತೆರೆದರು. ಅನಂತರದ ಅವರ ಆಡಳಿತದ ಅವಧಿಯಲ್ಲಿ ಒಟ್ಟು ಸುಮಾರು 800 ಶಾಲೆಗಳನ್ನು ಸ್ಥಾಪಿಸಲಾಯಿತು. ಈ ಮೂಲಕ ಅವರು ವಿದ್ಯೆ ನೀಡಲು ನೀಡುತ್ತಿದ್ದ ಒತ್ತನ್ನು ಗಮನಿಸಬಹುದು.  ಜೊತೆಗೆ, ಕ್ರಾಂತಿಕಾರಕ ನಿರ್ಧಾರ ಕೈಗೊಂಡು ಪ್ರಪ್ರಥಮ ಬಾರಿಗೆ ಸ್ತ್ರೀ ಶಿಕ್ಷಣವನ್ನು ಕಡ್ಡಾಯಗೊಳಿಸಲಾಯಿತು. 

ಆರೋಗ್ಯ ಕ್ಷೇತ್ರಕ್ಕೆ ಕೃಷ್ಣರಾಜರ ಕೊಡುಗೆ

ಇನ್ನು ಕೃಷ್ಣರಾಜರ ಅವಧಿಯಲ್ಲಿ ರಾಜ್ಯದ ವಿವಿಧೆಡೆ 270 ಉಚಿತ ಆಸ್ಪತ್ರೆಗಳಿಗೆ ಚಾಲನೆ ನೀಡಲಾಯಿತು. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಕೂಡ ಅವರು ಒತ್ತು ನೀಡಿದ್ದನ್ನು ಗಮನಿಸಬಹುದು. ಅವರ ಅವಧಿಯಲ್ಲಿ 1913ರಲ್ಲಿ ಸ್ಥಾಪಿಸಲಾದ ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಯಿತು.

6 ಏಪ್ರಿಲ್ 1918ರಂದು ಚಾಲನೆ ನೀಡಲಾದ ಮೈಸೂರಿನ ಕ್ಷಯರೋಗ ಆಸ್ಪತ್ರೆಯನ್ನು ಇದೀಗ ಪಿ.ಕೆ.ಟಿ.ಬಿ ಎಂದು ಕರೆಯಲಾಗುತ್ತಿದೆ. 1921ರಂದು ಇದು ಕ್ಷಯ ಮತ್ತು ಉಸಿರಾಟದ ರೋಗ ಸಂಬಂಧಿಸಿದ ಆಸ್ಪತ್ರೆಯಾಗಿ ಲೋಕಾರ್ಪಣೆಯಾಯಿತು. ನಂತರ ಇದನ್ನೇ ಬೋಧನಾ ಸಂಸ್ಥೆಯೆಂದು 1974 ರಲ್ಲಿ ಎಂ.ಎಂ.ಸಿ ಗೆ ವಹಿಸಿಕೊಡಲಾಗಿದೆ. ಏಪ್ರಿಲ್ 1975ರಲ್ಲಿ ಸುವರ್ಣಮಹೋತ್ಸವನ್ನು ಆಚರಿಸಲಾಗಿದೆ.

ವಾಣಿಜ್ಯ ಉತ್ತೇಜನಕ್ಕೆ ಒತ್ತು

02 ಅಕ್ಟೋಬರ್ 1913ರಂದು ವಾಣಿಜ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅನ್ನು ಸ್ಥಾಪಿಸಲಾಯಿತು. ಖಾಸಗಿ ಸಹಭಾಗಿತ್ವದೊಡನೆ 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲು ಚಾಲನೆ ನೀಡಲಾಯಿತು. ರೈತರಿಗಾಗಿ ನೆರವು ನೀಡುವ ಸದುದ್ದೇಶದಿಂದ ಜಮೀನು ಅಡಮಾನ ಬ್ಯಾಂಕುಗಳನ್ನು ತೆರೆಯಲಾಯಿತು. 

ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಕೆಲವು ಸಾಧನೆಗಳು

1902-ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯಶಾಲೆ ಪ್ರಾರಂಭ

1902-ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆ ಜಾರಿ

1902-ಕಾವೇರಿ ನದಿಗೆ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಕಾರ್ಯಾಗಾರ ಸ್ಥಾಪನೆ – ಪ್ರಥಮ ಬಾರಿಗೆ ಕೋಲಾರದ ಗಣಿ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ

1903-ಮೈಸೂರಿನಲ್ಲಿ ತಾಂತ್ರಿಕ ಶಾಲೆ ಸ್ಥಾಪನೆ

1906-ಕುರುಡ ಹಾಗೂ ಮೂಕ ಮಕ್ಕಳಿಗೆ ಶಾಲೆಗಳು ಆರಂಭ

1911-ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಚಾಲನೆ

1912-ಪ್ರಪ್ರಥಮ ಬಾರಿ ವಯಸ್ಕರ ಶಿಕ್ಷಣ ಆಂದೋಲನಕ್ಕೆ ಚಾಲನೆ – 7000 ಸಾಕ್ಷರತಾ ಕೇಂದ್ರಗಳ ಸ್ಥಾಪನೆ

1913-ಗ್ರಾಮೀಣ ಪ್ರದೇಶದ ಜನರಿಗೆ ಶೀಘ್ರ ನ್ಯಾಯ ನೀಡುವ ಸಲುವಾಗಿ ‘ದಿ ಮೈಸೂರು ವಿಲೇಜ್ ಕೋರ್ಟ್ ಆಕ್ಟ್’ ಜಾರಿ

1916-ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ – ಉರ್ದು ಶಾಲೆಗಳ ಸ್ಥಾಪನೆ

1918-ಶಾಲಾ ಪ್ರವೇಶಕ್ಕೆ ಅಡ್ಡಿಯಾಗಿದ್ದ ಜಾತಿಪದ್ದತಿ ನಿರ್ಮೂಲನೆ

1919-ಮಾಧ್ಯಮಿಕ ಶಿಕ್ಷಣ ಶುಲ್ಕ ರದ್ದು

1928-ರೈತರು ಸಾಲದ ಅಡಿಯಲ್ಲಿ ಸಿಕ್ಕಿ ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿಯಿಂದ ಮುಕ್ತಿ ನೀಡುವ ‘ಅಗ್ರಿಕಲ್ಚರಿಸ್ಸ್ ಡಿಬೆಟ್ ರಿಲೀಫ್ ಆಕ್ಟ್” ಜಾರಿ

1939-ಫೆಬ್ರವರಿ-5ರಂದು ಜೋಗ ಜಲಪಾತದ ಬಳಿ ಶರಾವತಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಜಾರಿಯಾದ ಸಾಮಾಜಿಕ ಕಾನೂನುಗಳು

1905-ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿ

1909-ದೇವದಾಸಿ ಪದ್ಧತಿ ನಿಷೇಧ

1910-ಬಸವಿ ಪದ್ಧತಿ ರದ್ದು

1910-’ಗೆಜ್ಜೆಪೂಜೆ’ ಪದ್ಧತಿ ನಿಷೇಧ

1913-ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿ

1918-ಗ್ರಾಮ ಪಂಚಾಯ್ತಿಗಳ ಕಾಯ್ದೆ ಜಾರಿ

1936- ವೇಶ್ಯಾ ವೃತ್ತಿ ತಡೆಗಟ್ಟುವ ಕಾನೂನು

1936-ವಿಧವಾ ವಿವಾಹ ಕಾಯ್ದೆ

1936-ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ

1927-ಪ್ರಪ್ರಥಮ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯ ಆರ್ಥಿಕ ಸುಧಾರಣೆಗಳು

ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಎಂದು ಬಹುತೇಕ ಆರ್ಥಿಕ ತಜ್ಞರು ಹೇಳುತ್ತಾರೆ. ಈ ಮಹತ್ವದ ವಿಷಯವನ್ನು ಮೊದಲೇ ತಿಳಿದಿದ್ದ ಕೃಷ್ಣರಾಜ ಒಡೆಯರ್, ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಲು 1905ರಲ್ಲಿ ಸಹಕಾರಿ ಸಂಘಗಳನ್ನು ತೆರೆದರು. ಇದರಿಂದಾಗಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕು ಮತ್ತು ಭೂ ಅಭಿವೃದ್ಧಿ ಬ್ಯಾಂಕ್‍ಗಳು ಸ್ಥಾಪನೆಯಾದವರು. 

ಮೈಸೂರು ಪ್ರಾಂತ್ಯದ ಫಲವತ್ತಾದ ಪ್ರದೇಶಗಳಾದ ಮಂಡ್ಯ ಮತ್ತು ಮೈಸೂರು ಭಾಗದ ರೈತರ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಸುಮಾರು 1,12,000 ಎಕರೆ ಜಮೀನಿಗೆ ನೀರಾವರಿ ಸೌಕರ್ಯವನ್ನು ಒದಗಿಸಿದರು. 

ಕೈಗಾರಿಕೆ ಅಭಿವೃದ್ಧಿಗೆ ಕೃಷ್ಣರಾಜರ ಕೊಡುಗೆ  

1914-ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಆರಂಭ

ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ

ಬೆಂಗಳೂರಿನ ಸಾಬೂನು ಕಾರ್ಖಾನೆ

ಮೈಸೂರಿನ ಗಂಧದೆಣ್ಣೆ ಕಾರ್ಖಾನೆ

ಸಿಮೆಂಟ್ ಕಾರ್ಖಾನೆ

1934- ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ

1936- ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ

ಮಂಗಳೂರು ಹೆಂಚು ಕಾರ್ಖಾನೆ

ಷಹಬಾದಿನ ಸಿಮೆಂಟ್ ಕಾರ್ಖಾನೆ

ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ

ಕೊಡಗಿನ ಕಾಫಿ ಸಂಶೋಧನಾ ಕೇಂದ್ರ 

ರಸ್ತೆ ಸಾರಿಗೆಗೆ ಉತ್ತೇಜನ ನೀಡಿದ ಕೃಷ್ಣರಾಜ ಒಡೆಯರ್

215 ಮೈಲಿ ರಸ್ತೆ – ಬೆಂಗಳೂರು  

211 ಮೈಲಿ – ಕೋಲಾರ

189 ಮೈಲಿ – ತುಮಕೂರು  

220 ಮೈಲಿ – ಚಿತ್ರದುರ್ಗ  

368 ಮೈಲಿ – ಮೈಸೂರು  

191 ಮೈಲಿ – ಹಾಸನ

283 ಮೈಲಿ – ಶಿವಮೊಗ್ಗ  

325 ಮೈಲಿ – ಕಡೂರು  

ರೈಲು ಸಾರಿಗೆಗೆ ಉತ್ತೇಜನ ನೀಡಿದ ಕೃಷ್ಣರಾಜ ಒಡೆಯರ್

1913-ಹೊಸ ರೈಲು ಸಾರಿಗೆ ನಿರ್ಮಾಣ ಇಲಾಖೆ ಆರಂಭ

1918-ಚಿಕ್ಕಬಳ್ಳಾಪುರ-ಯಲಹಂಕ-ಮೈಸೂರು-ಅರಸೀಕೆರೆ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣ

1921-ಚಿಕ್ಕ ಜಾಜೂರು-ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣ

ಶಿಕ್ಷಣ, ಕೈಗಾರಿಕೆ, ನೀರಾವರಿ, ಬ್ಯಾಂಕಿಂಗ್, ಸಹಕಾರ, ಕಲೆ, ಸಾಹಿತ್ಯ, ಸಂಸ್ಕೃತಿ, ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸುದೀರ್ಘ 38 ವರ್ಷಗಳ ಅವಧಿಯವರೆಗೆ ದಕ್ಷವಾಗಿ ಮೈಸೂರು ಸಂಸ್ಥಾನವನ್ನು ಮುನ್ನಡೆಸಿದರು. ಇವರ ಕೊಡುಗೆಗಳನ್ನು ಅನುಲಕ್ಷಿಸಿ ಇವರಿಗೆ ರಾಜರ್ಷಿ ಎಂಬ ಬಿರುದನ್ನು ಜನತೆ ನೀಡಿದರು.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ