October 1, 2023 6:53 am

ಮಾನವ ಹಕ್ಕುಗಳು: ದುಷ್ಟರ ಗೆಲುವಿಗೆ ಸಜ್ಜನರ ಮೌನವೇ ಕಾರಣ: ನ್ಯಾ. ನಾಗಮೋಹನ್ ದಾಸ್

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ವಿಶ್ವದಲ್ಲಿ ಅನೇಕ ಯುದ್ಧಗಳು ನಡೆದಿವೆ. ಈ ‘ಯುದ್ಧಗಳಲ್ಲಿ ಮಿಲಿಯಾಂತರ ಜನರು ಸತ್ತಿದ್ದಾರೆ. ನಿಖರವಾಗಿ ಎಷ್ಟು ಜನ ಸತ್ತರೆಂದು ಹೇಳಲು ಸಾಧ್ಯವಿಲ್ಲ. 20ನೇ ಶತಮಾನದಲ್ಲಿ ಮೊದಲನೆಯ ಮಹಾಯುದ್ಧವು 1914 ರಿಂದ 1918 ರವರೆಗೆ ನಡೆಯಿತು. ಈ ಯುದ್ಧದಲ್ಲಿ ಅಪಾರವಾದ ಪ್ರಾಣಹಾನಿ ಮತ್ತು ಆಸ್ತಿ ಹಾನಿ ಸಂಭವಿಸಿತು. ಇದರಿಂದ ಪಾಠ ಕಲಿತ ನಂತರ ಇನ್ನು ಮುಂದೆ ಈ ರೀತಿಯ ಯುದ್ಧಗಳು ನಡೆಯದಂತೆ ತಡೆಯಲು, ವಿಶ್ವ ಶಾಂತಿಯನ್ನು ಸ್ಥಾಪಿಸಲು ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸುವ ಉದ್ದೇಶದಿಂದ ಲೀಗ್ ಆಫ್ ನೇಷನ್ಸ್ ಸ್ಥಾಪನೆಗೆ ನಾಂದಿಯಾಯಿತು. ಕೆಲವು ವರ್ಷಗಳ ನಂತರ ಸದಸ್ಯ ರಾಷ್ಟ್ರಗಳ ಅಸಹಕಾರ, ದ್ವೇಷ, ವೈಷಮ್ಯ, ಸಂಶಯ, ಭೀತಿ, ಶಸ್ತ್ರಾಸ್ತ್ರಗಳ ಪೈಪೋಟಿ, ಫ್ಯಾಸಿಸಂನ ಹುಟ್ಟು ಹಾಗೂ ಬೆಳವಣಿಗೆ, ಸರ್ವಾಧಿಕಾರಿಗಳ ಏಳಿಗೆ ಮುಂತಾದ ಮಾನವ ದೌರ್ಬಲ್ಯಗಳು ಎರಡನೇ ಮಹಾ ಯುದ್ಧಕ್ಕೆ ದಾರಿ ಮಾಡಿಕೊಟ್ಟವು.

ಎರಡನೆ ಮಹಾಯುದ್ಧವು 1939 ರಿಂದ 1945ರವರೆಗೆ ನಡೆಯಿತು. ಯುದ್ಧದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದವು. ಈ ಯುದ್ಧದಲ್ಲಿ ಸುಮಾರು 2 ಕೋಟಿ ಸೈನಿಕರು, 4 ಕೋಟಿ ನಾಗರಿಕರು ಮರಣ ಹೊಂದಿದರು. ಸುಮಾರು ಎರಡೂವರೆ ಕೋಟಿ ಜನ ಗಾಯಗೊಂಡರು. ಈ ಹಿಂದೆ ಎಂದೂ ಕಾಣದಂತಹ ವಿಪತ್ತು, ವಿನಾಶ, ಭೀಕರ ನರಹತ್ಯೆ, ಆರ್ಥಿಕ ದುಂದುವೆಚ್ಚ, ಅವ್ಯವಸ್ಥೆ ಮತ್ತು ಅರಾಜಕತೆ ಜಗತ್ತನ್ನೇ ಮುಳುಗಿಸಿತು. ಈ ಯುದ್ಧದಿಂದ ಬಂದೊದಗಿದ ರೋಗ ರುಜಿನಾದಿಗಳಿಂದ ಮತ್ತು ಆಹಾರದ ಅಭಾವದಿಂದ ಅನೇಕ ಜನರು ಸಾವನ್ನಪ್ಪಿದರು. ಬಾಂಬುಗಳನ್ನು ಸಿಡಿಸಿ ನಗರಗಳನ್ನು ಧ್ವಂಸ ಮಾಡಲಾಯಿತು, ಹಳ್ಳಿಗಳಿಗೆ ಮತ್ತು ಕಾಡುಗಳಿಗೆ ಬೆಂಕಿ ಹಚ್ಚಲಾಯಿತು. ಕೈಗಾರಿಕೆಗಳನ್ನು, ಅಣೆಕಟ್ಟುಗಳನ್ನು, ರಸ್ತೆಗಳನ್ನು, ಮೂಲಸೌಕರ್ಯಗಳನ್ನು ನಾಶಮಾಡಲಾಯಿತು. ಜನಾಂಗೀಯ ದ್ವೇಷದಿಂದ ನಡೆದ ದೊಡ್ಡ ಪ್ರಮಾಣದ ನರಹತ್ಯೆ, ಹಿಂಸೆ, ಕ್ರೌರ್ಯದಿಂದ ಜಗತ್ತಿನ ಜನರು ತತ್ತರಿಸಿ ಹೋದರು. ಹೀಗೆ ಎರಡನೇ ಮಹಾಯುದ್ಧವು ಮಾನವ ಇತಿಹಾಸ ಎಂದೂ ಕಾಣದ ಘೋರ ಘಟನೆಯಾಗಿ ಪರಿಣಮಿಸಿತು. ಇದರಿಂದ ಉಂಟಾದ ದುಷ್ಪರಿಣಾಮಗಳು ಜಗತ್ತಿನ ಜನರನ್ನು ದಂಗುಬಡಿಸಿ ಮತ್ತೊಂದು ಯುದ್ಧ ನಡೆದರೆ ಇಡೀ ಜಗತ್ತೇ ನಾಶವಾಗುತ್ತದೆ ಎಂಬ ಕಟು ಸತ್ಯದ ಅರಿವು ಮೂಡಿಸಿತು. ಇದರ ಪರಿಣಾಮವಾಗಿ ಅಸಮರ್ಥ ಮತ್ತು ಅಪ್ರಯೋಜಕವಾಗಿದ್ದ “ಲೀಗ್ ಆಫ್ ನೇಷನ್ಸ್” ಸ್ಥಾನದಲ್ಲಿ 1945ರಲ್ಲಿ “ವಿಶ್ವಸಂಸ್ಥೆ” ಸ್ಥಾಪನೆಯಾಯಿತು.

ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ಅವುಗಳನ್ನು ವಿಶ್ವದಾದ್ಯಂತ ವಿಸ್ತರಿಸುವುದು ವಿಶ್ವಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಒಂದು. ಈ ಗುರಿ ಸಾಧನೆಗಾಗಿ ವಿಶ್ವಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಿತು. ಕಾಲಕ್ರಮೇಣ ಈ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬರಲಾಗಿದೆ, ಅವುಗಳೆಂದರೆ:

1. ಜಗತ್ತಿನ ಎಲ್ಲ ಜನರೂ ಸಮಾನರು.

2. ಧರ್ಮ, ಜಾತಿ, ಲಿಂಗ, ವರ್ಗ ಆಧಾರದ ಮೇಲೆ ತಾರತಮ್ಯ ತೋರಬಾರದು.

3. ಜೀವಿಸುವ, ಸ್ವತಂತ್ರವಾಗಿರುವ ಮತ್ತು ವೈಯಕ್ತಿಕ ಭದ್ರತೆ ಪಡೆಯುವ ಹಕ್ಕು.

4. ಗುಲಾಮಗಿರಿಯಿಂದ ವಿಮೋಚನೆ ಪಡೆಯುವ ಹಕ್ಕು.

5. ಚಿತ್ರಹಿಂಸೆ ಮತ್ತು ಕ್ರೌರ್ಯಕ್ಕೆ ಒಳಪಡದಿರುವ ಹಕ್ಕು.

6. ಕಾನೂನಿನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕು.

7. ಕಾನೂನಿನ ದೃಷ್ಟಿಯಲ್ಲಿ ಸಮಾನತೆಯ ಹಕ್ಕು.

8. ತ್ವರಿತ ವಿಚಾರಣೆಯ ಹಕ್ಕು.

9. ಇಚ್ಛಾನುಸಾರ ಬಂಧಿಸಿಡುವ ಅಥವಾ ಗಡೀಪಾರು ಮಾಡದಿರುವ ಹಕ್ಕು.

10. ನ್ಯಾಯಯುತವಾದ ಸಾರ್ವಜನಿಕ ವಿಚಾರಣಾ ಹಕ್ಕು.

11. ಅಪರಾಧಿಯೆಂದು ರುಜುವಾತು ಪಡಿಸುವವರೆಗೂ ನಿರ್ದೋಷಿಯೆಂದು ಪರಿಗಣಿಸುವ ಹಕ್ಕು.

12. ತನ್ನ ಖಾಸಗಿ ವಿಚಾರಗಳಲ್ಲಿ, ಕೌಟುಂಬಿಕ ವಿಚಾರಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಇತರರು ಅತಿಕ್ರಮಿಸದೇ ಇರುವ ಹಕ್ಕು.

13. ದೇಶದಲ್ಲಿ ಮತ್ತು ವಿದೇಶಗಳಲ್ಲಿ ಸಂಚರಿಸುವ ಹಕ್ಕು.

14. ಇತರೆ ದೇಶಗಳಲ್ಲಿ ಆಶ್ರಯ ಪಡೆಯುವ ಹಕ್ಕು.

15. ಒಂದು ರಾಷ್ಟ್ರದ ಪೌರತ್ವವನ್ನು ಪಡೆಯುವ ಅಥವಾ ಬದಲಾಯಿಸಿಕೊಳ್ಳುವ ಹಕ್ಕು.

16. ಮದುವೆ ಮಾಡಿಕೊಂಡು ಸಂಸಾರ ಮಾಡುವ ಹಕ್ಕು.

17. ಖಾಸಗಿ ಆಸ್ತಿಯನ್ನು ಹೊಂದುವ ಹಕ್ಕು.

18. ಧಾರ್ಮಿಕ ಹಕ್ಕು.

19. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು.

20.ಶಾಂತಿಯುತವಾಗಿ ಸಭೆ ಸೇರುವ ಮತ್ತು ಸಂಘಟಿಸುವ ಹಕ್ಕು.

21. ಸರ್ಕಾರದ ಕಾರ್ಯದಲ್ಲಿ ಮತ್ತು ಚುನಾವಣೆಗಳಲ್ಲಿ ಭಾಗವಹಿಸುವ ಹಕ್ಕು.

22. ಸಾಮಾಜಿಕ ಭದ್ರತೆಯ ಹಕ್ಕು.

23. ಐಚ್ಛಿಕ ಕೆಲಸ ಮಾಡುವ ಮತ್ತು ಕಾರ್ಮಿಕ ಸಂಘ ಸೇರುವ ಹಕ್ಕು.

24. ವಿಶ್ರಾಂತಿ ಪಡೆಯುವ ಹಕ್ಕು.

25. ಜೀವನದ ಕನಿಷ್ಠ ಅವಶ್ಯಕತೆಗಳನ್ನು ಹೊಂದುವ ಹಕ್ಕು.

26. ಶಿಕ್ಷಣದ ಹಕ್ಕು.

27. ಸಮುದಾಯದ ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸುವ ಹಕ್ಕು.

28. ಸಾಮಾಜಿಕ ನೆಮ್ಮದಿಯ ಹಕ್ಕು.

29. ಬೆಳವಣಿಗೆಯ ಹಕ್ಕು.

30. ಈ ಮೇಲೆ ಹೇಳಿರುವ ಹಕ್ಕುಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸದಿರುವ ಹಕ್ಕು.

ಸುಮಾರು ಏಳು ದಶಕಗಳ ಹಿಂದೆ ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡಿತು. ಕಳೆದ ಏಳು ದಶಕಗಳಲ್ಲಿ ಒಂದಷ್ಟು ಸಾಧನೆಯಾಗಿದೆ ಅವುಗಳೆಂದರೆ :

1. ಜಗತ್ತಿನಾದ್ಯಂತ ಯಾವುದಾದರೂ ಸಿದ್ಧಾಂತ ಜನರ ಮನ್ನಣೆಯನ್ನು ಗಳಿಸಿದ್ದರೆ ಅದು “ಮಾನವಹಕ್ಕುಗಳ ಸಿದ್ಧಾಂತ.”

2. ವಿಶ್ವದ 193 ರಾಷ್ಟ್ರಗಳು ಮಾನವ ಹಕ್ಕುಗಳ ಘೋಷಣೆಗೆ ಒಪ್ಪಿಗೆಯನ್ನು ಸೂಚಿಸಿ ತಮ್ಮ ರಾಷ್ಟ್ರಗಳಲ್ಲಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿವೆ.

3. ವಸಾಹತುಶಾಹಿ ಪದ್ಧತಿಯನ್ನು ಮತ್ತು ವರ್ಣದ್ವೇಷವನ್ನು ರದ್ದುಗೊಳಿಸುವಲ್ಲಿ ಮಾನವಹಕ್ಕುಗಳು ಮಹಾಪಾತ್ರ ವಹಿಸಿವೆ.

4. ಪ್ರಜಾಪ್ರಭುತ್ವದ ಪ್ರತಿ ಹೆಜ್ಜೆಯ ಗೆಲುವು ಮಾನವ ಹಕ್ಕುಗಳ ಘೋಷಣೆಯ ಕಾರಣದಿಂದಾಗಿದೆ.

5. ಮಹಿಳೆಯರು, ಮಕ್ಕಳು, ವಿಕಲಚೇತನರು, ಜೀತದಾಳುಗಳು ಮೊದಲಾದವರ ಕನಿಷ್ಠ ಹಕ್ಕುಗಳ ರಕ್ಷಣೆಯಲ್ಲಿ ಮಹಾಪಾತ್ರವಹಿಸಿವೆ.

6. ಚಿತ್ರಹಿಂಸೆ, ಕ್ರೌರ್ಯ, ಜನಾಂಗೀಯ ದ್ವೇಷ ಇತ್ಯಾದಿಗಳನ್ನು ಹಿಮ್ಮೆಟ್ಟಿಸುವಲ್ಲಿ ಮಾನವಹಕ್ಕುಗಳು ತನ್ನದೇ ಕೊಡುಗೆಯನ್ನು ನೀಡಿವೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. 1948ರಲ್ಲಿ ವಿಶ್ವಸಂಸ್ಥೆ ಮಾನವಹಕ್ಕುಗಳನ್ನು ಘೋಷಿಸಿತು. ಅಂದು ನಮ್ಮ ದೇಶದ ಸಂವಿಧಾನ ಸಭೆ ಕರಡು ಸಂವಿಧಾನ ರಚನೆಯ ಕಾರ್ಯದಲ್ಲಿ ತೊಡಗಿತ್ತು. ನಮ್ಮ ಸಂವಿಧಾನದ ರಚನಕಾರರು ಮಾನವ ಹಕ್ಕುಗಳ ಘೋಷಣೆಯಿಂದ ಪ್ರಭಾವಿತರಾಗಿ ಅವುಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದರು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಮತ್ತು ಹಲವು ಅನುಚ್ಛೇದಗಳಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿರುವ ಮಾನವ ಹಕ್ಕುಗಳನ್ನು ಕಾಣಬಹುದು.

ಭಾರತ ಸಂವಿಧಾನವು ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಜಾರಿಗೊಳಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿದೆ. ಅನುಚ್ಛೇದ 32ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಪಡೆದಿದೆ. ಅನುಚ್ಛೇದ 226ರಲ್ಲಿ ರಾಜ್ಯದ ಉಚ್ಛನ್ಯಾಯಾಲಯಗಳು ರಿಟ್‌ಗಳನ್ನು ಹೊರಡಿಸಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿವೆ.

ಭಾರತ ದೇಶದ ಸಂಸತ್ತು 1993ರಲ್ಲಿ ಮಾನವಹಕ್ಕುಗಳ ಕಾಯಿದೆಯನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಮಾನವಹಕ್ಕುಗಳ ಆಯೋಗವನ್ನು ರಚಿಸಲಾಗಿದೆ. ಅದೇ ರೀತಿ ಎಲ್ಲಾ ರಾಜ್ಯಗಳಲ್ಲಿ ರಾಜ್ಯ ಆಯೋಗಗಳನ್ನು ರಚಿಸಲಾಗಿದೆ.

ಮಾನವ ಹಕ್ಕುಗಳನ್ನು ಜಾರಿಗೊಳಿಸುವ ದಿಕ್ಕಿನಲ್ಲಿ ಸರ್ಕಾರ ಕೆಲವು ಕಾನೂನುಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇವುಗಳೆಲ್ಲದರ ಪರಿಣಾಮವಾಗಿ ಭಾರತ ದೇಶದಲ್ಲಿ ಮಾನವಹಕ್ಕುಗಳು ಸ್ವಲ್ಪಮಟ್ಟಿಗೆ ಜಾರಿಯಾಗಿವೆ. ಮಹಿಳೆಯರ, ಮಕ್ಕಳ, ವೃದ್ಧರ, ವಿಕಲಚೇತನರ, ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಜೀವನಮಟ್ಟದಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಹಲವು ಸಂಸ್ಥೆಗಳನ್ನು ಕಟ್ಟಿ, ಸುಧಾರಣೆಗಳನ್ನು ತಂದಿದ್ದೇವೆ. ಸಮಾಜದ ಬಹುಪಾಲು ಚಟುವಟಿಕೆಯನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಿದ್ದೇವೆ. ಮಾನವಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ನ್ಯಾಯಾಂಗ ಮಹತ್ತರ ಕೊಡುಗೆಯನ್ನು ನೀಡಿದೆ. ಭಾರತ ಸರ್ವೋಚ್ಛ ನ್ಯಾಯಾಲಯ ನೂರಾರು ತೀರ್ಪುಗಳಲ್ಲಿ ಭಾರತ ಸಂವಿಧಾನದ ಹಲವು ಅನುಚ್ಛೇದಗಳನ್ನು ವ್ಯಾಖ್ಯಾನ ಮಾಡುತ್ತಾ ಮಾನವ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಪ್ರಮುಖ ತೀರ್ಪುಗಳ ಸಾರಾಂಶ ಹೀಗಿದೆ:

ಮೂಲಸೌಕರ್ಯಗಳನ್ನು ಪಡೆಯುವ ಹಕ್ಕನ್ನು ಜೀವಿಸುವ ಹಕ್ಕು ಒಳಗೊಳ್ಳುತ್ತದೆ. ಮನುಷ್ಯರು ಘನತೆಯಿಂದ ಬದುಕುವ ಹಕ್ಕನ್ನು ಜೀವಿಸುವ ಹಕ್ಕು ಒಳಗೊಂಡಿದೆ. ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಹಕ್ಕು, ಮಹಿಳೆಯರನ್ನು ಸಭ್ಯತೆ ಮತ್ತು ಸೂಕ್ತ ಘನತೆಯಿಂದ ನಡೆಸಿಕೊಳ್ಳುವ ಹಕ್ಕು, ತಿಳಿದುಕೊಳ್ಳುವ ಹಕ್ಕು, ಮಾಹಿತಿ ಹಕ್ಕು, ಖಾಸಗಿ ಹಕ್ಕು, ವಿದೇಶ ಪ್ರವಾಸದ ಹಕ್ಕು, ತ್ವರಿತ ವಿಚಾರಣೆಯ ಹಕ್ಕು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯುವ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ಬೇಡಿ ತೊಡಿಸುವುದರ ವಿರುದ್ಧದ ಹಕ್ಕು, ಉಚಿತ ಕಾನೂನು ನೆರವು ಹಕ್ಕು, ವೈದ್ಯಕೀಯ ನೆರವು ಹಕ್ಕು, ಆರೋಗ್ಯಕರ ಪರಿಸರದ ಹಕ್ಕು ಇತ್ಯಾದಿಯಾಗಿ, ಇಷ್ಟೆಲ್ಲ ಸಾಧನೆಯ ಮಧ್ಯೆ ಇನ್ನೂ ಸಮಸ್ಯೆಗಳು ಮುಂದುವರೆಯುತ್ತಿವೆ, ಹೊಸ ಸಮಸ್ಯೆಗಳು ಸೇರಿಕೊಂಡಿವೆ ಮತ್ತು ಸವಾಲುಗಳೂ ಇವೆ. ನಾವು ಏನನ್ನು ಸಾಧಿಸಬಹುದಾಗಿತ್ತೋ ಅಷ್ಟನ್ನು ಸಾಧಿಸಲು ಸಾಧ್ಯವಾಗಿಲ್ಲ.

ರೈತರು ಆರ್ಥಿಕವಾಗಿ, ನೈತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಿವಾಳಿಯಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಿರುದ್ಯೋಗ ಹೆಚ್ಚಾಗಿ ಯುವಜನತೆ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗುತ್ತಿದೆ. ಮಹಿಳೆಯರ, ಮಕ್ಕಳ, ದಲಿತರ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮತ್ತು ಸಾಮಾಜಿಕ ಭಯೋತ್ಪಾದನೆ ತಲೆದೋರಿದೆ.

ಸರ್ಕಾರ, ಪೊಲೀಸು ಮತ್ತು ಸೈನ್ಯದಿಂದಲೇ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಭಯೋತ್ಪಾದಕರಿಂದ, ಉಗ್ರಗಾಮಿಗಳಿಂದ, ಮೂಲಭೂತವಾದಿಗಳಿಂದ, ಕೋಮುವಾದಿಗಳಿಂದ ಮತ್ತು ಕ್ರಿಮಿನಲ್‌ಗಳಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜಾಗತೀಕರಣದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಆಯೋಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಾನವ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಅಪರಾಧೀಕರಣ, ಅತಿಯಾದ ವ್ಯಾಪಾರೀಕರಣ ಮತ್ತು ಸಾಂಸ್ಕೃತಿಕ ದಿವಾಳಿತನವೆಂಬ ಸವಾಲುಗಳು ಎದುರಾಗಿವೆ. ಇಂತಹ ಸಂದಿಗ್ಧ ಸಮಯದಲ್ಲಿ ನಾವು ನೀವು ಏನು ಮಾಡಬೇಕು? ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಒಬ್ಬ ಶಿಕ್ಷಕ ನಾಜಿಗಳು ನಡೆದು ಕೊಂಡ ರೀತಿ ಕುರಿತು ಬರೆದ ಒಂದು ಕವನ ನೆನಪಾಗುತ್ತದೆ. ಅದು ಹೀಗಿದೆ:

ಅವರು ಬಂದರು

ಅವರು ಹುಡುಕಿಕೊಂಡು ಬಂದರು

ಅವರು ಮೊದಲು ಯಹೂದಿಗಳನ್ನು ಹುಡುಕಿಕೊಂಡು ಬಂದರು

ನಾನು ಬಾಯಿ ಬಿಡಲಿಲ್ಲ

ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ

ಅವರು ಮತ್ತೆ ಬಂದರು

ಅವರು ಕ್ಯಾಥೋಲಿಕರನ್ನು ಹುಡುಕಿಕೊಂಡು ಬಂದರು

ನಾನು ಬಾಯಿ ಬಿಡಲಿಲ್ಲ

ಯಾಕೆಂದರೆ ನಾನು ಕ್ಯಾಥೋಲಿಕ್‌ ನಾಗಿರಲಿಲ್ಲ

ಅವರು ಮತ್ತೆ ಹುಡುಕಿಕೊಂಡು ಬಂದರು

ಅವರು ಕಮ್ಯುನಿಸ್ಟ್‌ರನ್ನು ಹುಡುಕಿಕೊಂಡು ಬಂದರು

ನಾನು ಬಾಯಿ ಬಿಡಲಿಲ್ಲ

ಯಾಕೆಂದರೆ ನಾನು ಕಮ್ಯುನಿಸ್ಟ್‌ನಾಗಿರಲಿಲ್ಲ

ಅವರು ಕೊನೆಯದಾಗಿ ಬಂದರು

ಅವರು ನನ್ನನ್ನೇ ಹುಡುಕಿಕೊಂಡು ಬಂದರು

ಆಗ ನನಗಾಗಿ ಬಾಯಿ ಬಿಡಲು ಯಾರೂ ಇರಲಿಲ್ಲ

“ದುಷ್ಟರ ಗೆಲುವಿಗೆ ಸಜ್ಜನರ ಮೌನವೇ ಕಾರಣ’ವೆಂಬ ನೀತಿಪಾಠವನ್ನು ನಾವೆಲ್ಲ ನೆನಪಿನಲ್ಲಿಡಬೇಕು. ನಮ್ಮ ಬಾಯಿಗೆ ಹಾಕಿರುವ ಬೀಗವನ್ನು ಮುರಿದು ಅನ್ಯಾಯದ ವಿರುದ್ಧ ನಮ್ಮ ಧ್ವನಿಯೆತ್ತಬೇಕು.

  • ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು