September 22, 2023 1:20 am

ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಭಾರತ ದೇಶದಲ್ಲಿ ಅನೇಕ ಮತಗಳು ಇವೆ. ಅವುಗಳೆಂದರೆ ಹಿಂದೂ, ಇಸ್ಲಾಂ, ಕ್ರೈಸ್ತ, ಬೌದ್ಧ, ಸಿಖ್, ಜೈನ, ಪಾರ್ಸಿ ಮತಗಳು ಮತ್ತು ಅನೇಕ ಬುಡಕಟ್ಟುಗಳು. ಒಂದೊಂದು ಮತದಲ್ಲಿ ಹಲವು ಜಾತಿಗಳಿವೆ. ಉದಾಹರಣೆಗೆ ಹಿಂದೂ ಮತದಲ್ಲಿ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ, ಕುರುಬ, ಗೊಲ್ಲ, ಬಣಜಿಗ, ಗಾಣಿಗ ಇತ್ಯಾದಿಗಳು. ಒಂದೊಂದು ಜಾತಿಯಲ್ಲಿ ಹಲವು ಉಪಜಾತಿಗಳಿವೆ. ಉದಾಹರಣೆಗೆ ಒಕ್ಕಲಿಗರಲ್ಲಿ ಮುಳ್ಳು ಒಕ್ಕಲಿಗರು, ದಾಸ ಒಕ್ಕಲಿಗರು, ಮರಸು ಒಕ್ಕಲಿಗರು, ಮುಸುಕು ಒಕ್ಕಲಿಗರು ಇತ್ಯಾದಿಯಾಗಿ. ಭಾರತ ಸರ್ಕಾರದ ಒಂದು ಅಧ್ಯಯನದ ಪ್ರಕಾರ ಈ ದೇಶದಲ್ಲಿ 4635 ವಿವಿಧ ಜಾತಿಗಳು ಮತ್ತು ಉಪಜಾತಿಗಳಿವೆಯಂತೆ. ಒಂದೊಂದು ಜಾತಿಗೆ ಒಂದೊಂದು ಕಸುಬು. ಈ ಕಸುಬನ್ನು ವಂಶ ಪಾರಂಪರ್ಯ ಮಾಡಲಾಗಿದೆ. ಜಾತಿಯನ್ನು ಬದಲಾಯಿಸುವಂತಿಲ್ಲ.  ಕಸುಬನ್ನು ಬದಲಾಯಿಸುವಂತಿಲ್ಲ. ಜಾತಿ ಜಾತಿಯ ಮಧ್ಯೆ ಸಂಬಂಧ ಬೆಳಸುವಂತಿಲ್ಲ. ಸಹ ಭೋಜನವಿಲ್ಲ, ಅಷ್ಟೇ ಏಕೆ ಹೆಣಗಳನ್ನು ಒಂದೇ ಮಸಣದಲ್ಲಿ ಶವಸಂಸ್ಕಾರ ಮಾಡುವಂತಿಲ್ಲ.

ಈ ಜಾತಿ ಅಸಮಾನತೆ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ಪ್ರಮುಖವಾಗಿ ರಾಜಕೀಯ ಅಸಮಾನತೆ, ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಮತ್ತು ಸಾಂಸ್ಕೃತಿಕ ಅಸಮಾನತೆ, ಮೇಲುಜಾತಿಗಳು, ಮೇಲ್ವರ್ಗಗಳು, ಕೆಳ ಜಾತಿಗಳು, ಕೆಳವರ್ಗಗಳು. ಇದು ಕೇವಲ ಶ್ರಮ ವಿಭಜನೆಯಾಗಿರದೇ ಶ್ರಮಿಕರ ಎಭಜನೆಯಾಗಿದೆ. ಅತಿ ಹೆಚ್ಚು ಅವಿದ್ಯಾವಂತರು, ನಿರುದ್ಯೋಗಿಗಳು, ಬಡವರು, ರೋಗಗ್ರಸ್ಥರು, ವಸತಿಹೀನರು ಎಲ್ಲಿದ್ದಾರೆಂದು ಹುಡುಕಿಕೊಂಡು ಹೋದರೆ ಅವರು ಕಾಣುವುದು ಕೆಳಜಾತಿಯ ಜನರಲ್ಲಿ. ಜಾತಿ ಮತ್ತು ವರ್ಗ ಬೆರೆತುಹೋಗಿರುವ ಒಂದು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ನಮ್ಮಲ್ಲಿ ಕಾಣುತ್ತೇವೆ.

ಜಾತಿ ಪದ್ಧತಿ ಸಾಮಾಜಿಕ ಚಟುವಟಿಕೆಯನ್ನು ನಿಷೇಧಿಸಿದೆ. ಹಿಂದುಗಳು ಒಗ್ಗಟ್ಟಾಗಿ ಬಾಳುವುದನ್ನು ಜಾತಿ ಪದ್ಧತಿ ತಪ್ಪಿಸಿತು. ನಾವೀಗ ಕಾಣುವುದು ವೈಯಕ್ತಿಕ ಚಟುವಟಿಕೆಗಳೇ ಹೊರತು ಸಾಮೂಹಿಕ ಚಟುವಟಿಕೆಯಲ್ಲ. ಜಾತಿ ಪದ್ಧತಿಯೆಂಬ ಸಮಾಜ ವಿರೋಧಿ ಅಂಶವು ಸಮಾಜವನ್ನು ಒಡೆದು ಹಾಕಿದ್ದು ಮಾತ್ರವಲ್ಲದೇ ಒಡೆದು ಹೋದ ಗುಂಪುಗಳು ತಮಗಾಗಿ ಮತ್ತು ತಮ್ಮ ಸ್ವಾರ್ಥಕ್ಕಾಗಿ ಸದಾ ಕಾದಾಡುವಂತೆ ಮಾಡಿದೆ. ಒಂದು ಗುಂಪನ್ನು ತುಳಿಯುವುದರ ಮೂಲಕ ಮತ್ತೊಂದು ಗುಂಪು ಅಸ್ತಿತ್ವದಲ್ಲಿರಲು ಪ್ರಯತ್ನಿಸುತ್ತಿದೆ. ಅಷ್ಟೇ ಅಲ್ಲ ಜಾತಿ ಮತ್ತು ಜಾತಿ ಪ್ರಜ್ಞೆಯು ಸಮಾಜದ ಐಕ್ಯತೆಯನ್ನು ಅಸಾಧ್ಯವಾಗಿಸಿದೆ.

ಜಾತಿ ಪದ್ಧತಿಯು ಆರ್ಥಿಕ ಸಂಘಟನೆಯಾಗಿ ಬಹು ಹಾನಿಕಾರಕ ವ್ಯವಸ್ಥೆಯಾಗಿ ಮಾರ್ಪಾಡಾಗಿದೆ. ಮಾನವ ಸಹಜ ಶಕ್ತಿ ಮತ್ತು ಪ್ರತಿಭೆಗಳನ್ನು ಹತ್ತಿಕ್ಕಿ ಸಮಾಜ ಹೊರಿಸುವ ವೃತ್ತಿಯನ್ನು ಒಪ್ಪಿಕೊಳ್ಳುವುದರಿಂದ ವ್ಯಕ್ತಿಯ ಬುದ್ಧಿ ಕುಂಠಿತವಾಗಿ ಕಾಲಕ್ರಮೇಣ ನಿರುಪಯುಕ್ತ ಆಗಿಬಿಟ್ಟನು. ಹೊರಗಿನವರ ಆಕ್ರಮಣವನ್ನು ತಡೆಯುವ ಸಾಮರ್ಥ್ಯವಿದ್ದರೂ ತಡೆಯಲಾಗಲಿಲ್ಲ. ಯಾಕೆಂದರೆ ಕ್ಷತ್ರಿಯರು ಮಾತ್ರ ಯುದ್ಧ ಮಾಡುತ್ತಿದ್ದರು. ಇತರೆ ಜಾತಿ ಜನರನ್ನು ಯುದ್ಧ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಲೇ ಇಲ್ಲ. ಕ್ಷತ್ರಿಯರು ಸೋತರೆ ಭಾರತವೇ ಸೋತಂತೆ ನಿರ್ಧರಿಸಲಾಯಿತು. ಈ ಕಾರಣದಿಂದ ಭಾರತೀಯರು ಸುಮಾರು ಒಂದು ಸಾವಿರ ವರ್ಷಗಳ ಕಾಲ ಪರಕೀಯರ ಗುಲಾಮರಾಗಿ ಬಾಳಬೇಕಾಯಿತು.

ಈ ಅಸಮಾನತೆಯ ವಿರುದ್ಧ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ಶಾಂತಿಗಾಗಿ ಮತ್ತು ಪ್ರೀತಿಗಾಗಿ ಮೊದಲು ಪ್ರತಿಪಾದಿಸಿದವರು ಗೌತಮ ಬುದ್ಧ. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಬುದ್ಧನ ವಿಚಾರಗಳೆಂದರೆ:

  1. ಆಸ್ತಿಯ ಖಾಸಗಿ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನು ಮತ್ತೊಂದು ವರ್ಗಕ್ಕೆ ದುಃಖವನ್ನು ತರುತ್ತದೆ.
  2. ಸಮಾಜದ ಒಳಿತಿಗಾಗಿ ಈ ದುಃಖದ ಮೂಲ ಕಾರಣವಾದ ಖಾಸಗಿ ಆಸ್ತಿಯನ್ನೇ ಇಲ್ಲವಾಗಿಸಬೇಕು.
  3. ಎಲ್ಲ ಮಾನವರು ಸಮಾನರು.
  4. ಹುಟ್ಟಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಗುಣದಿಂದ ದೊಡ್ಡವನಾಗುತ್ತಾನೆ.
  5. ಒಳ್ಳೆ ವಂಶದ ಹುಟ್ಟು ಮುಖ್ಯವಲ್ಲ. ಉನ್ನತ ಆದರ್ಶಗಳು ಮುಖ್ಯ.
  6. ಎಲ್ಲರ ಬಗೆಗೆ ಮೈತ್ರಿಯೇ ಮುಖ್ಯ. ಶತ್ರುವಿಗೂ ಕೂಡ ಅದು ಸಲ್ಲಬೇಕು.
  7. ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ.

ಹನ್ನೆರಡನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳ ಅಂತಿಮಗುರಿ ಜಾತಿ ಭೇದವಿಲ್ಲದ, ಲಿಂಗಭೇದವಿಲ್ಲದ, ವರ್ಗಭೇದವಿಲ್ಲದ ಒಂದು ಸಮ ಸಮಾಜದ ನಿರ್ಮಾಣ. ಬಸವಣ್ಣನವರು ಅಸ್ಪೃಶ್ಯತೆ ಮತ್ತು ಜಾತಿ ಭೇದವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಮಾನವ ಜಾತಿ ಒಂದೇ ಎಂಬ ಸಂದೇಶವನ್ನು ಬಸವಣ್ಣನವರು ಸಾರಿದರು. ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ:

ನೆಲವೊಂದೆ – ಹೊಲಗೇರಿ ಶಿವಾಲಯಕ್ಕೆ

ಜಲವೊಂದೇ – ಶೌಚಾಚಮನಕ್ಕೆ

ಕುಲವೊಂದೆ – ತನ್ನ ತಾನರಿದವರಿಗೆ

ಫಲವೊಂದೆ ಷಡುದರುಶನ ಮುಕ್ತಿಗೆ ನಿಲುವೊಂದೆ ಕೂಡಲ ಸಂಗಮದೇವಾ

ನಿಮ್ಮನ್ನರಿದವರಿಗೆ

ಈ ಕೆಳಗಿನ ವಚನದಲ್ಲಿ ಜಾತಿ ಆಧರಿಸಿದ ಜನರ ಬಗೆಗಿನ ತಾರತಮ್ಯ ಭಾವನೆಯನ್ನು ತಿರಸ್ಕರಿಸುತ್ತಾರೆ.

ಶೆಟ್ಟಿಯೆಂಬೆನೆ ಸಿರಿಯಾಳನ?

ಮಡಿವಾಳನೆಂಬೆನೆ ಮಾಚಯ್ಯನ?

ಡೋಹಾರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚನ್ನಯನ?

ಆನು ಹಾರುವನೆಂದನೆ ಕೂಡಲ ಸಂಗಮದೇವ ನಗುವನಯ್ಯ

ಬಸವಣ್ಣ ತನ್ನ ಬ್ರಾಹ್ಮಣ ಮೂಲವನ್ನು ತಿರಸ್ಕರಿಸಿ, ಕೆಳವರ್ಗದ ಜೊತೆ ತನ್ನನ್ನು ಗುರುತಿಸಿಕೊಂಡ ಕ್ರಾಂತಿಕಾರಕ ವಚನವೊಂದು ಹೀಗಿದೆ:

ಚನ್ನಯ್ಯನ ಮನೆಯ ದಾಸನ ಮಗನು

ಕಕ್ಕಯ್ಯನ ಮನೆಯ ದಾಸಿಯ ಮಗಳು

ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ

ಸಂಗವ ಮಾಡಿದರು

ಇವರಿಬ್ಬರಿಗೆ ಹುಟ್ಟಿದ ಮಗ ನಾನು

ಕೂಡಲಸಂಗಮ ದೇವ ಸಾಕ್ಷಿಯಾಗಿ

ಲಿಂಗ ಭೇದವ ಕುರಿತು ಒಂದು ವಚನದಲ್ಲಿ ಹೀಗೆ ಹೇಳಿದೆ:

ಕೇಳಿರಯ್ಯ ಮಾನವರೆ

ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ

ದೇವರ ಮುಂದೆ ನಂದಾ ದೀವಿಗೆಯ ಮುಡಿಸಿದ ಹಾಗೆ

ಮನಸ್ಸು ಬೇರಾದರೆ

ಗಂಜಳದೊಳಗೆ ಹಂದಿ ಹೊರಳಾಡಿ

ಒಂದರ ಮೇಲೆ ಒಂದು ಬಿದ್ದು ಮಾಸಿದ ಹಾಗೆ.

12ನೇ ಶತಮಾನದವರೆಗೆ ಕಾಯಕ ಮಾಡಿದವರು ಕೈಲಾಸಕ್ಕೆ ಹೋಗಬಹುದೆಂಬ ಸಂದೇಶವನ್ನು ಜಗತ್ತಿನ ಎಲ್ಲಾ ದಾರ್ಶನಿಕರು ನೀಡಿದರು. ಆದರೆ ಬಸವಣ್ಣನವರು ಈ ಸಂದೇಶಕ್ಕೆ ಹೊಸ ತಾತ್ಪರ್ಯವನ್ನು ಬರೆದು ಕಾಯಕವೇ ಕೈಲಾಸವೆಂದರು. ಕಾಯಕ ಕೇವಲ ತನಗಾಗಿ ಅಲ್ಲ. ಅದು ಸಮಾಜಕ್ಕಾಗಿ, ಜನತೆಗಾಗಿ ಎಂಬುದನ್ನು ಈ ವಚನದಲ್ಲಿ ಹೇಳಿದೆ:

ನಾನು ಆರಂಬ ಮಾಡುವೆನಯ್ಯ – ಗುರುಪೂಜೆಗೆಂದು

ನಾನು ಬೆವಹಾರವ ಮಾಡುವೆನಯ್ಯ – ಲಿಂಗಾರ್ಚನೆಗೆಂದು

ನಾನು ಪರಸೇವೆ ಮಾಡುವೆನಯ್ಯ – ಜಂಗಮ ದಾಸೋಹಕ್ಕೆಂದು

ಕನಕದಾಸ, ತುಕಾರಾಮ, ವೇಮನ, ಖಾಕಿಫೀರರು, ಕೈವಾರದ ನಾರೆಯಣಪ್ಪ ನಾರಾಯಣಗುರು, ಪೆರಿಯಾರ್, ಶಿಶುನಾಳ ಷರೀಫ ಇನ್ನೂ ಅನೇಕ ಮಹಾನ್ ಸಂತರು ಸಮಾಜದಲ್ಲಿ ಸಾಮಾಜಿಕ ನ್ಯಾಯವೆಂಬ ಮೌಲ್ಯವನ್ನು ಪಸರಿಸಿದರು.

20ನೇ ಶತಮಾನದವರೆಗೆ ಸಾಮಾಜಿಕ ನ್ಯಾಯ ಸಮಾಜದಲ್ಲಿ ಒಂದು ನೀತಿಯಾಗಿತ್ತು. ಆದರೆ ರಾಜನೀತಿಯಾಗಲಿಲ್ಲ. ಕಡ್ಡಾಯವಾಗಿ ಜಾರಿ ಮಾಡಲಾಗದ ಒಂದು ನೀತಿಯಾಗಿಯೇ ಉಳಿಯಿತು. ಮೊದಲನೇ ಬಾರಿಗೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರು “ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು” ಎಂಬುದಾಗಿ ಪ್ರತಿಪಾದಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಕೇವಲ ಸಮಾಜದ ನೀತಿಯಾಗಿ ಉಳಿಯದೆ ಸರ್ಕಾರದ ನೀತಿಯಾಗಿ ಸ್ಥಾನ ಗಳಿಸುವಂತಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕೆಲವು ಕಾನೂನುಗಳು ಜಾರಿಗೆ ಬಂದವು. ಅವುಗಳೆಂದರೆ:

  1. ಹರಿಜನ ಸಾಮಾಜಿಕ ದೌರ್ಬಲ್ಯ ನಿವಾರಣಾ ಕಾಯಿದೆ.
  2. ಹರಿಜನರು ದೇವಾಲಯಗಳಿಗೆ ಪ್ರವೇಶಿಸುವ ಕಾಯಿದೆ.
  3. ಸತಿಸಹಗಮನ ಪದ್ಧತಿ ನಿಷೇಧದ ಕಾಯಿದೆ.
  4. ವಿಧವೆಯರ ಮದುವೆ ಹಕ್ಕಿನ ಕಾಯಿದೆ.
  5. ಬಾಲ್ಯ ವಿವಾಹ ನಿಷೇಧ ಕಾಯಿದೆ.
  6. ವರದಕ್ಷಿಣೆ ನಿಷೇಧ ಕಾಯಿದೆ.
  7. ದೇವದಾಸಿ ಪದ್ಧತಿ ನಿಷೇಧ ಕಾಯಿದೆ.

ಸ್ವತಂತ್ರವಾದ ಭಾರತ ಜಗತ್ತಿನಲ್ಲಿ ಅತಿ ದೊಡ್ಡದಾದ ಲಿಖಿತ ಸಂವಿಧಾನವನ್ನು ಒಪ್ಪಿ 1950ರಲ್ಲಿ ಗಣರಾಜ್ಯವಾಯಿತು. ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯವು ಪ್ರಮುಖಸ್ಥಾನವನ್ನು ಪಡೆದುಕೊಂಡಿದೆ. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸರಿಸಮಾನರು. ಯಾವುದೇ ಜಾತಿ, ವರ್ಣ, ಲಿಂಗ, ಧರ್ಮದ ಹಿನ್ನೆಲೆಯಲ್ಲಿ ಭೇದಭಾವ ಮಾಡಲಾಗದು. ಸಮಸ್ತ ಜನತೆಯ ಕಲ್ಯಾಣವೇ ಸರಕಾರದ ಗುರಿ. ಸಮಾನತೆಯೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮನಾದ ಅವಕಾಶಗಳನ್ನು ರಾಷ್ಟ್ರವು ನೀಡುವುದಾಗಿದೆ.

ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿರುವ ಹೋಗಲಾಡಿಸಿ ಹಿಂದುಳಿದವರ, ಬಡವರ, ಅಸಮಾನತೆಯನ್ನು ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲಕ್ಕೆತ್ತಲು ಶಾಸನಗಳನ್ನು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವುದು. ಕಳೆದ 72 ವರ್ಷಗಳ ಗಣರಾಜ್ಯ ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಹಲವು ಶಾಸನಗಳನ್ನು ಮತ್ತು ಕಾರ್ಯಕ್ರಮಗಳನ್ನು ತಂದು ಒಂದಷ್ಟು ಸುಧಾರಣೆಯಾಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ವಿಕಲಚೇತನರು, ವೃದ್ಧರು, ಬಡವರು ಇತ್ಯಾದಿ ಜನವಿಭಾಗದ ಬದುಕು ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕಾಗಿದೆ.

ಗ್ರಾಮೀಣ ಭಾರತದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಾವ ರೀತಿ ಇತ್ತು ಎಂಬುದನ್ನು ತಿಳಿಯಲು ಒಂದು ಸಣ್ಣಕಥೆ ನೆನಪಾಗುತ್ತೆ. ಪೂರ್ವದಿಕ್ಕಿನಲ್ಲಿ ಗೊಲ್ಲಹಳ್ಳಿಯೆಂಬುದೊಂದು ಹಳ್ಳಿ. ಇದರ ಹತ್ತಿರದಲ್ಲಿ ಪಶ್ಚಿಮದ ದಿಕ್ಕಿನಲ್ಲಿ ಕೋಡಹಳ್ಳಿ ಇತ್ತು. ಎರಡು ಹಳ್ಳಿಗಳ ಮಧ್ಯೆ ಎರಡು ಹಳ್ಳಿಯ ರೈತರಿಗೆ ಸೇರಿದ ಕೃಷಿ ಜಮೀನು ಇತ್ತು. ಪ್ರತಿ ದಿವಸ ಎರಡು ಹಳ್ಳಿಯ ರೈತರು ಬಂದು ತಮ್ಮ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರು. ಹೀಗೆ ಇಬ್ಬರು ರೈತರು ಒಳ್ಳೆಯ ಸ್ನೇಹಿತರಾದರು. ಪ್ರತಿ ದಿವಸ ಬೆಳಗ್ಗೆ ತಮ್ಮ ತಮ್ಮ ಹಳ್ಳಿಯಿಂದ ಬಂದು ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗಿ ಮಾತುಕತೆ ಮಾಡಿಕೊಂಡು ತಮ್ಮ ತಮ್ಮ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ಸಂಜೆಯಾದ ನಂತರ ತಮ್ಮ ತಮ್ಮ ಹಳ್ಳಿಗೆ ವಾಪಸ್ಸು ಹೋಗುತ್ತಿದ್ದರು. ಪ್ರತಿ ದಿವಸ ಈ ರೈತರು ಭೇಟಿಯಾಗುತ್ತಿದ್ದ ಸ್ಥಳದಲ್ಲಿ ಒಂದು ಮಾವಿನಗೊಟ್ಟು ಕಂಡು ಬಂತು. ಈ ಮಾವಿನಗೊಟ್ಟನ್ನು ಒಂದು ಮರವಾಗಿ ಬೆಳೆಸಲು ಈ ಸ್ನೇಹಿತರು ಯೋಚಿಸಿದರು. ಪಾತಿ ತೆಗೆದು, ಗೊಬ್ಬರ ಹಾಕಿ, ನೀರು ಹಾಕಿ ಮಾವಿನ ಗೊಟ್ಟನ್ನು ನಾಟಿ ಮಾಡಿದರು. ಸ್ವಲ್ಪ ದಿವಸಗಳ ನಂತರ ಮಾವಿನ ಗೊಟ್ಟು ಮೊಳಕೆ ಒಡೆದು ಗಿಡವಾಗಿ ಬೆಳೆಯಿತು. ಈ ರೈತ ಸ್ನೇಹಿತರು ಗಿಡಕ್ಕೆ ಬೇಲಿಕಟ್ಟಿ ಸರದಿಯ ಮೇರೆಗೆ ನೀರು ಹಾಕುತ್ತಾ ಬಂದರು. ಮೂರು ನಾಲ್ಕು ವರ್ಷಗಳ ನಂತರ ಮಾವಿನ ಗಿಡ ಮೊದಲನೇ ಫಸಲಿನಲ್ಲಿ ಮೂರು ಮಾವಿನ ಹಣ್ಣು ಬಿಟ್ಟಿತು. ಒಬ್ಬ ರೈತ ನನಗೆ ಎರಡು ಹಣ್ಣು ಬೇಕೆಂದು ಕೇಳಿದ. ಆದರೆ ಇದಕ್ಕೆ ಇನ್ನೊಬ್ಬ ರೈತ ಒಪ್ಪಲಿಲ್ಲ. ಮಾವಿನ ಹಣ್ಣುಗಳ ಹಂಚಿಕೆಯ ವಿಷಯದಲ್ಲಿ ರೈತ ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಹಳ್ಳಿಯ ಪಂಚಾಯಿತಿದಾರರಿಗೆ ಒಪ್ಪಿಸಿ ತೀರ್ಮಾನ ಮಾಡುವಂತೆ ವಿನಂತಿಸಿದರು. ಪಂಚಾಯಿತಿದಾರರು ಸ್ಥಳ ಪರಿಶೀಲನೆ ಮಾಡಿ ವಾದವಿವಾದವನ್ನು ಕೇಳಿದರು. ಪೂರ್ವದಿಕ್ಕಿನಲ್ಲಿರುವ ಗೊಲ್ಲಹಳ್ಳಿ ರೈತ ಪ್ರತಿದಿವಸ ಬೆಳಿಗ್ಗೆ ಸೂರ್ಯನಿಗೆ ಬೆನ್ನುಕೊಟ್ಟು ಬರುತ್ತಿದ್ದ ಮತ್ತೆ ಸಂಜೆ ವಾಪಸ್‌ ಹೋಗಬೇಕಾದರೆ ಸೂರ್ಯನಿಗೆ ಬೆನ್ನು ಕೊಡುತ್ತಿದ್ದ. ಆದರೆ ಪಶ್ಚಿಮದ ಕೋಡಿಹಳ್ಳಿಯಿಂದ ಬರುತ್ತಿದ್ದ ರೈತ ಬೆಳಗ್ಗೆ ಸೂರ್ಯನ ಕಿರಣಗಳಿಗೆ ಮುಖ ಕೊಟ್ಟು ಬರುತ್ತಿದ್ದ ಮತ್ತು ಸಂಜೆ ವಾಪಸ್ಸು ಹೋಗಬೇಕಾದರೆ ಮುಖಕೊಟ್ಟು ಹೋಗುತ್ತಿದ್ದ. ಸೂರ್ಯನ ಕಿರಣಗಳಿಗೆ ಬೆನ್ನು ಕೊಟ್ಟ ರೈತನಿಗಿಂತ ಮುಖಕೊಟ್ಟ ರೈತನ ಶ್ರಮ ಹೆಚ್ಚಿನದೆಂದು ಕೋಡಿಹಳ್ಳಿ ರೈತನಿಗೆ ಎರಡು ಹಣ್ಣುಗಳನ್ನು ಗೊಲ್ಲಹಳ್ಳಿ ರೈತನಿಗೆ ಒಂದು ಹಣ್ಣನ್ನು ಕೊಟ್ಟು ವ್ಯಾಜ್ಯ ತೀರ್ಮಾನ ಮಾಡಿದರು. ದುಡಿಮೆಗೆ ಸಮನಾದ ಪ್ರತಿಫಲ ನೀಡುವುದೇ ‘ಸಾಮಾಜಿಕ ನ್ಯಾಯ’.

ಶಾಸಕಾಂಗದಲ್ಲಿ, ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗ. ಆದರೆ ಮೀಸಲಾತಿ ಒಂದೇ ಸಾಮಾಜಿಕ ನ್ಯಾಯವಲ್ಲ. ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರುವುದೇ ಸಾಮಾಜಿಕ ನ್ಯಾಯದ ಗುರಿ, ದುಡಿಮೆಗೆ ಸಮನಾದ ಪ್ರತಿಫಲ, ರಕ್ಷಣೆ ಮತ್ತು ಜನರ ಕನಿಷ್ಠ ಅಗತ್ಯಗಳನ್ನು ಪೂರೈಸುವುದೂ ಸಹ ಸಾಮಾಜಿಕ ನ್ಯಾಯ. ಸಾಮಾಜಿಕ ನ್ಯಾಯವನ್ನು ಒದಗಿಸುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಖಾಸಗಿ ಕ್ಷೇತ್ರ ಮತ್ತು ಇಡೀ ಸಮಾಜದ ಜವಾಬ್ದಾರಿಯೂ ಸಹ.

ಜಾಗತೀಕರಣದ ಪರಿಣಾಮವಾಗಿ ಅತಿಯಾದ ವ್ಯಾಪಾರೀಕರಣ ಬೆಳೆಯುತ್ತಿದೆ. ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಗ್ರಾಮಾಂತರ ಜನ ನಗರಳಿಗೆ ಗುಳೆ ಹೋಗುತ್ತಿದ್ದಾರೆ, ನಗರಗಳಲ್ಲಿ ಕೊಳಚೆ ಪ್ರದೇಶಗಳು ಬೆಳೆಯುತ್ತಿವೆ. ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸಾಧಾರಣ ಜನರಿಗೆ ಕಾನೂನಿನ ರಕ್ಷಣೆ ಸಿಗುತ್ತಿಲ್ಲ, ಅಭದ್ರತೆ, ಹಿಂಸೆ, ಕ್ರೌರ್ಯ ಇತ್ಯಾದಿಗಳು ಜನರನ್ನು ಕಾಡುತ್ತಿವೆ.

ಈ ರೀತಿ ಬೆಳೆಯುತ್ತಿರುವ ನಮ್ಮ ವ್ಯವಸ್ಥೆ ನ್ಯಾಯವನ್ನು ಅಪ್ರಸ್ತುತಗೊಳಿಸುತ್ತಿದೆ. ಕೇವಲ ಅಭಿವೃದ್ಧಿ ಆದರೆ ಸಾಲದು, ಅಭಿವೃದ್ಧಿಯ ಸಾಧನೆ ಜನರ ಜೀವನಮಟ್ಟವನ್ನು ಸುಧಾರಿಸಿದಾಗ ಅದು ನಿಜವಾದ ಅಭಿವೃದ್ಧಿ ಎನ್ನಿಸಿಕೊಳ್ಳುವುದು. ಮಾನವೀಯತೆಯನ್ನೊಳಗೊಂಡ ಅಭಿವೃದ್ಧಿ ನಮಗೆ ಬೇಕಾಗಿದೆ. ರಾಷ್ಟ್ರಕವಿ ಕುವೆಂಪುರವರು ಹೇಳಿದ “ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು” ನನಸಾದಾಗ ಸಾಮಾಜಿಕ ನ್ಯಾಯಕ್ಕೆ ಜಯ ಸಿಗುವುದು.

  • ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿಗಳು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು