May 12, 2026 11:44 pm

ನಮ್ಮ ಸಂವಿಧಾನದ ಮುಂದಿರುವ ಸವಾಲುಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಇಷ್ಟೆಲ್ಲ ಸಾಧನೆಗಳು ಮತ್ತು ಅಭಿವೃದ್ಧಿಯ ನಂತರ, ಇಂದು ಸಂವಿಧಾನವೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದೇ ಹೋದರೆ ನಮ್ಮ ಸಂವಿಧಾನವನ್ನು ಹಾಗೂ ಅದು ನೀಡಿರುವ ಪ್ರಜಾಪ್ರಭುತ್ವವಾದಿ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ಹೋಗಿ ಅರಾಜಕತೆ ಬರುತ್ತದೆ. ಹಾಗಾಗಿ ಇಂದು ಸಂವಿಧಾನದ ಮುಂದಿರುವ ಹಾಗೂ ದೇಶದ ಮುಂದಿರುವ ಸವಾಲು ಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ.

1. ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವ: ಭಾರತದ ಸಂವಿಧಾನವು ಪಾಳೆಗಾರಿ ಪದ್ಧತಿಯನ್ನು ರದ್ದುಪಡಿಸಿದೆ. ಪ್ರಜಾಪ್ರಭುತ್ವವಾದಿ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಅನುವು ಮಾಡಲಾಗಿದೆ. ಅದರಂತೆ 1952ರಿಂದ ಇಲ್ಲಿಯವರೆಗೆ(2018ರವರೆಗೆ) 16 ಲೋಕಸಭೆ ಚುನಾವಣೆಗಳು ನಡೆದಿವೆ. ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಿ, ಮತ ಚಲಾಯಿಸಿ, ಮತದಾರರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸರ್ಕಾರಗಳನ್ನು ರಚಿಸುತ್ತಾ ಬಂದಿದ್ದಾರೆ. ಆದರೆ ಇಂದು ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ನಡೆಯುವ ಚುನಾವಣೆಗಳು ಧರ್ಮ, ಜಾತಿ, ಹಣ ಮತ್ತು ಅಪರಾಧಿಕರಣದಂತಹ ಅನಿಷ್ಟಗಳಿಗೆ ಬಲಿಯಾಗಿವೆ. ಹೆಚ್ಚು ಹಣ ಹೊಂದಿರುವ ಮತ್ತು ಹೆಚ್ಚು ಕ್ರಿಮಿನಲ್ ಕೇಸ್ ಘೋಷಿಸಿಕೊಂಡಿರುವ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆದು ಗೆಲವು ಸಾಧಿಸುತ್ತಿದ್ದು, ನಿಷ್ಠಾವಂತರು ಠೇವಣಿ ಕಳೆದುಕೊಳ್ಳುತ್ತಿದ್ದಾರೆ. ಎಲ್ಲ ಸಂಸ್ಥೆಗಳಲ್ಲಿ ಹಣಬಲ ಮತ್ತು ಅಪರಾಧದ ಹಿನ್ನೆಲೆ ಇರುವವರು ಚುನಾಯಿತರಾಗುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. 14, 15 ಮತ್ತು 16ನೇ ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳು, ಹೊಂದಿರುವ ಸಂಪತ್ತು ಅಪಾರವಾಗಿದ್ದು, ಆತಂಕಕಾರಿಯಾಗಿದೆ.

ಚುನಾವಣೆ ವರ್ಷ:                2004                           2009                           2014                         

ಎಷ್ಟನೇ ಲೋಕಸಭೆ:                       14                                15                                16                  

ಕ್ರಿಮಿನಲ್ ಕೇಸ್ ಹೊಂದಿರುವವರು: 24%                       30%                            34%

ಕೋಟ್ಯಾಧಿಪತಿಗಳು:                        30%                            58%                            82%

ರಾಜಕೀಯ ಕುಟುಂಬದ ಹಿನ್ನಲೆಯವರು: 45% 50%                            52%

ರಾಜಕಾರಣದಲ್ಲಿ ವಿದ್ಯಾವಂತರ, ನಿಷ್ಠರ, ಪರಿಣತರ, ಯೋಗ್ಯರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಭ್ರಷ್ಟರು, ಕ್ರಿಮಿನಲ್ ಕೇಸು ಹಾಕಿಸಿಕೊಂಡವರು, ರಾಜಕಾರಣಿಗಳ ಮಕ್ಕಳು, ಅವರ ಬಂಧುಗಳು, ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಇದರ ಪರಿಣಾಮ ನಮ್ಮ ಲೋಕಸಭೆ ಮತ್ತು ರಾಜ್ಯಸಭೆಯ ನಡವಳಿಕೆಗಳ ಮೇಲೆ ಪ್ರಭಾವ ಬೀರಿದೆ. ಹೊಸದಾಗಿ ಮಂಡಿಸುವ ಶಾಸನಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತಿವೆ. ಅಸಹನೆ, ವಿಭಜನಶೀಲತೆ, ಭ್ರಷ್ಟಾಚಾರ, ಘರ್ಷಣೆಗಳು ಹಾಗೂ ಭಿನ್ನಮತಕ್ಕೆ ಅಗೌರವ ತೋರುವುದು ಸದನದ ಕಲಾಪಗಳ ದಿನನಿತ್ಯ ಸಂಗತಿಯಾಗಿದೆ. ಈ ಸಂಸ್ಥೆಗಳಲ್ಲಿ ಕಿರುಚಾಟ, ಕೂಗಾಟ, ಗದ್ದಲ, ಪ್ರತಿಭಟನೆ ಇತ್ಯಾದಿಗಳು ಆವರಿಸಿಕೊಂಡು ಜನಸಾಮಾನ್ಯರಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಇಡೀ ಅಧಿವೇಶನದ ಸಮಯ ಯಾವುದೇ ಚರ್ಚೆಗಳು ನಡೆಯದೆ ಜನಸಾಮಾನ್ಯರು ಕಟ್ಟುವ ನೂರಾರು ಕೋಟಿ ರೂಪಾಯಿಗಳಷ್ಟು ತೆರಿಗೆ ಹಣ ವ್ಯರ್ಥವಾಗಿ ಪೋಲಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ. ಎಲ್ಲರ ಪ್ರಣಾಳಿಕೆಗಳಲ್ಲೂ ಬಡವರು, ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಅಪಾರ ಭರವಸೆಗಳನ್ನು ನೀಡಲಾಗುತ್ತದೆ. ಬಡತನ ನಿವಾರಣೆ, ಸಂಪೂರ್ಣ ಸಾಕ್ಷರತೆ, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರ ಕಲ್ಯಾಣ ಇತ್ಯಾದಿ ಘೋಷಣೆಗಳು ಮೊಳಗುತ್ತಲೇ ಬಂದಿವೆ. ಕೋಟಿಗಟ್ಟಲೆ ಉದ್ಯೋಗದ ಸೃಷ್ಟಿ ಮತ್ತು ಎಲ್ಲರ ಕಿಸೆಗೆ ಲಕ್ಷಗಟ್ಟಲೆ ರೂಪಾಯಿಗಳನ್ನು ನೀಡುತ್ತೇವೆಂದು ಹೇಳುತ್ತಾರೆ. ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳಲ್ಲಿ ನೀಡಿರುವ ಬಹುಪಾಲು ಆಶ್ವಾಸನೆಗಳನ್ನು ಮರೆಯುತ್ತವೆ. ನೀಡಿದ ಭರವಸೆಗಳನ್ನು ಜಾರಿ ಮಾಡುವ ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ಹೀಗಾಗಿ ಚುನಾವಣಾ ಪ್ರಣಾಳಿಕೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ.

ಚುನಾಯಿತ ಪ್ರತಿನಿಧಿಗಳು ಸಂವಿಧಾನಾತ್ಮಕ ಸ್ಥಾನಗಳ ಜವಾಬ್ದಾರಿಯನ್ನು ನಿರ್ವಹಿಸು ತಿದ್ದರೂ ಸಂವಿಧಾನದ ಮೇಲೆ ಅವರಲ್ಲಿ ಮೊದಲಿನಂತೆ ವಿಶ್ವಾಸ ಕಾಣುತ್ತಿಲ್ಲ. ಚುನಾಯಿತ ಸದಸ್ಯರಲ್ಲಿ ಕಾನೂನು ಮತ್ತು ಸಂವಿಧಾನದ ಬಗೆಗಿನ ತಿಳುವಳಿಕೆಯೂ ಇರುವುದಿಲ್ಲ. ಅವಕಾಶವಾದಿತನ ಹೆಚ್ಚಾಗುತ್ತಿದ್ದು, ಅನುಕೂಲಕ್ಕೆ ತಕ್ಕಂತೆ ನಿಲುವುಗಳನ್ನು ಬದಲಾಯಿಸುತ್ತಾರೆ, ಪಕ್ಷ ಬದಲಾಯಿಸುತ್ತಾರೆ, ನೈತಿಕ ಮೌಲ್ಯಗಳನ್ನು ಬದಿಗೊತ್ತಿ ನಡೆಯುವ ಈ ಸ್ಥಾನಾಂತರಗಳು ಅಪವಿತ್ರ ಹೊಂದಾಣಿಕೆಗಳಾಗಿರುತ್ತವೆ. ಇದರಿಂದ ಆಡಳಿತಕ್ಕಾಗಲಿ, ಮತ ನೀಡಿದ ಪ್ರಜೆಗಳಿಗಾಗಲಿ, ಪ್ರಜಾಪ್ರಭುತ್ವ ವ್ಯವಸ್ಥೆಗಾಗಲಿ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಿಗೆ, ಇಂತಹ ಕ್ರಮಗಳು ಪ್ರಜಾಪ್ರಭುತ್ವೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ.

ವಿಧಾನಸಭೆ ಅಥವಾ ಲೋಕಸಭೆ ಕ್ಷೇತ್ರದ ಪರಿಚಯವೇ ಇಲ್ಲದ ಎಷ್ಟೋ ಜನ ತಮ್ಮ ಹಣ ಬಲ ಮತ್ತು ತೋಳ್ಳಲಗಳಿಂದ ಚುನಾವಣೆಗಳನ್ನು ಗೆಲ್ಲುತ್ತಿರುವುದನ್ನು ಕಾಣುತ್ತಿದ್ದೇವೆ. ತಮ್ಮ ಕ್ಷೇತ್ರದ ಜನರ ಹಾಗೂ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇಲ್ಲದವರು ಹಣ ನೀಡಿ ಮತಗಳಿಸುತ್ತಾ, ಮತದಾರರನ್ನು ಭ್ರಷ್ಟರನ್ನಾಗಿ ಮಾಡಿ, ಜಾತಿವಾದ ಸೃಷ್ಟಿಸಿ, ರೌಡಿಸಂ ನಡೆಸಿ, ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದಾರೆ.

ಈ ವೈಫಲ್ಯಗಳು ಹೇಗೆ ಆದವು? ನಾವು ಎಲ್ಲಿ ಸೋತೆವು? ಅತ್ಯುತ್ತಮ ಸಂವಿಧಾನ ಇದ್ದರೂ ಅದನ್ನು ಅರಿತು, ಗೌರವಿಸುತ್ತಾ, ಅದನ್ನು ಜಾರಿಗೆ ತರುವ ಪ್ರತಿನಿಧಿಗಳು ಇಲ್ಲದಿದ್ದರೆ ಹಾಗೂ ಸಂವಿಧಾನವನ್ನು ಅನುಸರಿಸಿ ಆಡಳಿತ ನಡೆಸಿ ಎಂದು ಆದೇಶಿಸುವ ಮತದಾರರು ಇಲ್ಲದಿದ್ದರೆ ಸಂವಿಧಾನ ತನ್ನಷ್ಟಕ್ಕೆ ಏನೂ ಮಾಡಲು ಬರುವುದಿಲ್ಲ. ‘ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿ ಬಿಡುವುದು ಖಂಡಿತ’ ಎಂದು ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸುತ್ತಾ ಡಾ. ಅಂಬೇಡ್ಕರ್‌ರವರು ಹೇಳಿದ ಎಚ್ಚರಿಕೆಯ ಮಾತುಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

2. ಹಕ್ಕುಗಳ ದಮನ: ‘ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾತಾಂತ್ರಿಕ ವ್ಯವಸ್ಥೆಯ ತಳಹದಿ’ ಎಂಬ ಸ್ಪಷ್ಟ ಕಲ್ಪನೆ ನಮ್ಮ ಸಂವಿಧಾನ ರಚನಕಾರರಿಗೆ ಇತ್ತು. ಸಂವಿಧಾನದ ಅನುಚ್ಛೇದ 19(1)(ಎ) ಎಲ್ಲ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಅನುಚ್ಛೇದದಲ್ಲಿ ನೀಡಿರುವ ವಾಕ್ ಸ್ವಾತಂತ್ರ್ಯವು ಜನರು ಮುಕ್ತವಾಗಿ, ಸ್ವತಂತ್ರವಾಗಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು ಸ್ವಾತಂತ್ರ್ಯವನ್ನು ನೀಡುತ್ತದೆ. ಈ ವಾಕ್ ಸ್ವಾತಂತ್ರ್ಯವು ಸರ್ವ ಸ್ವತಂತ್ರವಾದದ್ದು. ಹಿಂದಿನ ಕಾಲದ ಕಟ್ಟಳೆಗಳಾಗಲಿ, ವರ್ತಮಾನದ ಕೋಳಗಳಾಗಲಿ ಇದಕ್ಕೆ ಇರಬಾರದು. ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರಜಾಪ್ರಭುತ್ವದ ಮೂಲ ಲಕ್ಷಣ. ಯಾವುದೇ ಮೂಲಭೂತ ಹಕ್ಕುಗಳ ಹತ್ತಿಕ್ಕುವಿಕೆಯನ್ನು ನಮ್ಮ ಸಂವಿಧಾನವು ಮಾನ್ಯ ಮಾಡುವುದಿಲ್ಲ. ಹಾಗಿರುವಾಗ ಇತ್ತೀಚೆಗೆ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳು, ವಿಭಿನ್ನ ಚಿಂತನೆಗಳ ಬಗೆಗಿನ ಅಸಹನೆ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಫ್ರಾನ್ಸ್ ನ ಚಿಂತಕ ವಾಲ್ವೇರ್ ಹೇಳಿರುವ ಮಾತು ಗಮನಾರ್ಹ- ‘ನಿನ್ನ ಯಾವ ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನ್ನ ಉಸಿರಿರುವವರೆಗೂ ಸಮರ್ಥಿಸುತ್ತೇನೆ’.

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವ್ಯಕ್ತಿ ಸ್ವಾತಂತ್ರ್ಯವು ಮೊದಲನೆಯ ಹೆಜ್ಜೆ. ಹಾಗಾಗಿ ಯಾವ ಸಂಪ್ರದಾಯಗಳನ್ನು ವಿರೋಧಿಸಿದರೂ ಸರಿಯೇ ವ್ಯಕ್ತಿಯು ಸತ್ಯಕ್ಕಾಗಿ ನಡೆಸುವ ಹುಡುಕಾಟದ ಸ್ವಾತಂತ್ರ್ಯ ಮೊಟಕುಗೊಳ್ಳಬಾರದು. ಎಲ್ಲಾ ಪ್ರಮುಖ ವಿಷಯಗಳ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು. ಪ್ರಗತಿ ಸಾಧ್ಯವಾಗುವುದು ಪರಂಪರೆಯನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುವುದರ ಮೂಲಕವಲ್ಲ; ಬದಲಾಗಿ ಜನರ ಅಭಿಪ್ರಾಯಗಳು ಬದಲಾಗುವಷ್ಟರ ಮಟ್ಟಿಗೆ ಹೊಸ ವಿಷಯಗಳನ್ನು, ವೈಜ್ಞಾನಿಕ ಚಿಂತನೆಯ ಆಧಾರದ ಮೇಲೆ ಮಂಡಿಸುವ ಮೂಲಕ. ಒಬ್ಬ ವ್ಯಕ್ತಿಯ ಚಿಂತನಾಕ್ರಮ ವೃದ್ಧಿಗೊಳ್ಳಲು, ವೈಚಾರಿಕತೆ ಅರಳಲು, ಬೌದ್ಧಿಕ ಜಗತ್ತು ವಿಸ್ತಾರಗೊಳ್ಳಲು ಮತ್ತು ವ್ಯಕ್ತಿತ್ವ ಪರಿಪಕ್ವಗೊಳ್ಳಲು ಎಲ್ಲಾ ರೀತಿಯ ಅಭಿಪ್ರಾಯಗಳು ಮುಕ್ತವಾಗಿರಬೇಕು.

ಕಳೆದ 68 ವರ್ಷಗಳಿಂದ ಅನುಭವಿಸುತ್ತಾ ಬಂದಿರುವ ಈ ಹಕ್ಕುಗಳನ್ನು ಇಂದು ಕಳೆದುಕೊಳ್ಳುವ ಅಂಚಿನಲ್ಲಿರುವಂತೆ ಭಾಸವಾಗುತ್ತಿದೆ. ಸರ್ಕಾರಗಳು ತನ್ನ ಹಿಡಿತದಲ್ಲಿರುವ ದೂರದರ್ಶನ ಮತ್ತು ಆಕಾಶವಾಣಿಯೆಂಬ ಸಾರ್ವಜನಿಕ ಮಾಧ್ಯಮಗಳನ್ನು ತನ್ನ ವಕ್ತಾರರಾಗಿ ಬಳಸಿಕೊಳ್ಳುತ್ತಿವೆ. ಜಾಹಿರಾತುಗಳ ಮೂಲಕ ಖಾಸಗಿ ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತಿವೆ. ಸರ್ಕಾರ ತನ್ನ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಪುಸ್ತಕಗಳನ್ನು, ಸಿನಿಮಾಗಳನ್ನು, ಚಿತ್ರಕಲೆಗಳನ್ನು ನಿಷೇಧಿಸುತ್ತಿದೆ. ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸುವ ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾಹಿತಿಗಳನ್ನು ರಾಜದ್ರೋಹವೆಂಬ ಆಪಾದನೆಯನ್ನು ಹೊರಿಸಿ ಬಂಧಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸುತ್ತಿದ್ದಾರೆ. ಹತ್ಯೆ ಮಾಡುತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಮೂಗು ತೂರಿಸಿ, ಜನರು ಏನನ್ನು ತಿಳಿಯಬೇಕು – ಏನನ್ನು ತಿಳಿಯಬಾರದು ಎಂಬುದನ್ನು ನಿಗ್ರಹಿಸುತ್ತಿವೆ ಸರ್ಕಾರಗಳು. ಮಾಧ್ಯಮಗಳೂ ಕೂಡ ಮಾರುಕಟ್ಟೆ ಹಾಗೂ ಆಡಳಿತ ಯಂತ್ರಗಳ ಮುಲಾಜಿಗೆ ಬಿದ್ದು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸುದ್ದಿಯನ್ನು ತಿರುಚಿದ ಉದಾಹರಣೆಗಳೂ ಇವೆ.

ಮಾಹಿತಿ ತಂತ್ರಜ್ಞಾನವು ಜಗತ್ತಿನ ಜನರನ್ನು ಹತ್ತಿರಕ್ಕೆ ತಂದಿದೆ ಮತ್ತು ಇಡೀ ವಿಶ್ವವೇ ಒಂದು ಹಳ್ಳಿಯೆಂದು ಹೇಳಲಾಗಿದೆ. ಆದರೆ, ಭಾರತವನ್ನೂ ಒಳಗೊಂಡಂತೆ, ವಿಶ್ವದಾದ್ಯಂತ ಮಹಿಳೆಯರ, ಅಲ್ಪಸಂಖ್ಯಾತರ, ಮಕ್ಕಳ, ಅಸಂಘಟಿತ ಕಾರ್ಮಿಕರ, ಅನಕ್ಷರಸ್ಥರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕೂಗನ್ನು ಯಾರೂ ಕೇಳುತ್ತಿಲ್ಲ ಮತ್ತು ಆ ವರ್ಗಗಳ ಜನರಿಗೆ ಬೇಕಾದ ಮಾಹಿತಿ ಅವರಿಗೆ ಕೈಗೆ ಎಟುಕುತ್ತಿಲ್ಲ. ಇಂತಹ ಬೆಳವಣಿಗೆಗಳಿಂದ ನಾವು ಏನನ್ನು ಗಳಿಸಿದ್ದೇವೆಯೋ ಅದನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಬೆಳವಣಿಗೆಗಳು ನಮ್ಮ ಸಂವಿಧಾನಕ್ಕೆ ಒಂದು ದೊಡ್ಡ ಸವಾಲಾಗಿದೆ.

3. ಗಂಡಾಂತರದಲ್ಲಿ ರೂಲ್ ಆಫ್ ಲಾ (Rule of Law): ಭಾರತದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆ ಸಂವಿಧಾನಾತ್ಮಕವಾಗಿರಬೇಕು. ಶಾಸಕಾಂಗವು ರಚಿಸುವ ಶಾಸನಗಳು, ಕಾರ್ಯಾಂಗ ಹೊರಡಿಸುವ ಆದೇಶಗಳು, ರೂಪಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಹಾಗೂ ನ್ಯಾಯಾಂಗ ನೀಡುವ ತೀರ್ಪುಗಳು ಸಂವಿಧಾನಾತ್ಮಕವಾಗಿರಬೇಕು. ದೇಶದ ಎಲ್ಲ ಸಂಸ್ಥೆಗಳು ಮತ್ತು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಂವಿಧಾನಕ್ಕಿಂತ ಮೇಲೆ ಯಾರೂ ಇಲ್ಲ. ‘ರಾಜನೇ ಕಾನೂನಲ್ಲ, ಕಾನೂನೇ ರಾಜ ಎನ್ನುವಂತೆ’ (King is not law, law is the King).

ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ‘ರೂಲ್ ಆಫ್ ಲಾ’ ಎಂಬ ತತ್ವಕ್ಕೆ ತದ್ವಿರುದ್ಧವಾಗಿವೆ. ದೇಶದ ಪ್ರತಿ ನಗರದಲ್ಲಿ ಕ್ರಿಮಿನಲ್ ಮಾಫಿಯಾಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಮುಂಬಯಿ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ದೆಹಲಿಯಂತಹ ನಗರಗಳಲ್ಲಿ ಹಲವಾರು ಮಾಫಿಯ ಗುಂಪುಗಳು ಕೆಲಸ ಮಾಡುತ್ತಿವೆ. ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದಂತೆ ಮಾಫಿಯಾಗಳು ರೇಟುಗಳನ್ನು ನಿಗದಿಗೊಳಿಸಿದ್ದಾರೆ. ಕಾಲು ತೆಗೆದರೆ ಒಂದು ರೇಟು, ಕೈ ತೆಗೆದರೆ ಒಂದು ರೇಟು, ತಲೆ ತೆಗೆದರೆ ಒಂದು ರೇಟು ಎಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಡಿಗೆದಾರರ ಮನೆ ಖಾಲಿ ಮಾಡಿಸಲಿಕ್ಕೆ, ಸಾಲ ವಸೂಲಾತಿಗೆ, ಜಾಗ ತೆರವುಗೊಳಿಸಲಿಕ್ಕೆ ಇತ್ಯಾದಿ ಉದ್ದೇಶಗಳಿಗೆ ಮಾಫಿಯಾಗಳನ್ನು ಬಳಸಲಾಗುತ್ತಿದೆ. ಕೆಲವರು ಮಾಫಿಯ ಕೆಲಸವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೂಲ್ ಆಫ್ ಲಾ ಎನ್ನುವುದು ಎಲ್ಲಿರಲು ಸಾಧ್ಯ?

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ-ಎನ್.ಸಿ.ಆರ್.ಬಿ.) ವರದಿಯ ಪ್ರಕಾರ ಅಸ್ಪೃಶ್ಯರ ಮೇಲೆ ಪ್ರತಿದಿನ ಸರಾಸರಿ 27 ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿ ದಿವಸ ಅಸ್ಪೃಶ್ಯರ 5 ಮನೆಗಳನ್ನು ಬೆಂಕಿಯಿಂದ ಸುಡಲಾಗುತ್ತಿದೆ, 3 ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಯುತ್ತಿದೆ ಮತ್ತು 11 ಜನರ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತಿದೆ. ಪ್ರತಿವಾರ 13 ಅಸ್ಪೃಶ್ಯರ ಕೊಲೆಯಾಗುತ್ತಿದೆ. ಸುಮಾರು 100 ರೀತಿಯ ದೌರ್ಜನ್ಯಗಳು ಅಸ್ಪೃಶ್ಯರ ಮೇಲೆ ನಡೆಯುತ್ತಿವೆ ಎಂದು ಅಧ್ಯಯನಗಳು ತಿಳಿಸಿವೆ. ಇದರಲ್ಲಿ ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ. ವರದಿಯಾದ ಬಹುಪಾಲು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ.

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ 2016ರ ವರದಿಯ ಪ್ರಕಾರ ಪ್ರತಿ 77 ನಿಮಿಷಗಳಿಗೆ ಒಬ್ಬ ಮಹಿಳೆ ಹಿಂಸೆಯಿಂದ ಸಾಯುತ್ತಿದ್ದಾಳೆ. ಪ್ರತಿ 6 ಗಂಟೆಗಳಿಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತವಾಗಿ ಸುಡಲಾಗುತ್ತಿದೆ ಅಥವಾ ಹೊಡೆದು ಸಾಯಿಸಲಾಗುತ್ತಿದೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಃಸ್ಥಿತಿಗೆ ತಳ್ಳಲಾಗುತ್ತಿದೆ. ವಿವಾಹವಾಗಿರುವ 100 ಮಹಿಳೆಯರ ಪೈಕಿ 20 ಮಹಿಳೆಯರು ಪ್ರತಿನಿತ್ಯವೂ ಗಂಡನಿಂದ ಅಥವಾ ಅವನ ಕುಟುಂಬದವರಿಂದ ದೈಹಿಕ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಪ್ರತಿ 47 ನಿಮಿಷಗಳಿಗೆ ಒಬ್ಬ ಮಹಿಳೆ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾಳೆ. ನಗರ ಪ್ರದೇಶಗಳಲ್ಲಿ ಶೇಕಡ 96ರಷ್ಟು ಮಹಿಳಾ ಕಾರ್ಮಿಕರು ಒಂದಲ್ಲ ಒಂದು ಬಾರಿ ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಆಸಿಡ್ ದಾಳಿ, ಬಿಸಿಎಣ್ಣೆ ಎರಚುವುದು ಇತ್ಯಾದಿಗಳು ದಿನೇ ದಿನೇ ಹೆಚ್ಚುತ್ತಿವೆ. ಅನೇಕ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.

ಸಾಮಾಜಿಕ ವಿಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 45 ಸಾವಿರ ಮಕ್ಕಳು ಪ್ರತಿ ವರ್ಷ ಕಾಣೆಯಾಗುತ್ತಿದ್ದಾರೆ. ಅವರ ಪೈಕಿ 11 ಸಾವಿರ ಮಕ್ಕಳು ಮರಳಿ ಸಿಗುವುದೇ ಇಲ್ಲ. ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆ, ವೇಶ್ಯಾವೃತ್ತಿಗೆ ನೂಕುತ್ತಿರುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಅದೇ ರೀತಿ ದುಡ್ಡಿಗಾಗಿಯೂ ಅಪಹರಣಗಳು ನಡೆಯುತ್ತಿವೆ. ಇಲ್ಲಿ ಮಹಿಳೆ ಮತ್ತು ಮಕ್ಕಳು ಮಾರಾಟದ ಸರಕಾಗಿದ್ದಾರೆ.

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಾಫ್ ಪಂಚಾಯಿತಿಗಳು ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಧಿಕ್ಕರಿಸಿ ಹೆಣ್ಣು ಮಕ್ಕಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತಿವೆ. ಹೆಣ್ಣು ಮಕ್ಕಳ ಮದುವೆ ವಯಸ್ಸು, ಭ್ರೂಣಹತ್ಯೆ, ಅಂತರ್ಜಾತಿ ಮದುವೆ, ವರದಕ್ಷಿಣೆ, ಶಿಕ್ಷಣ ಇತ್ಯಾದಿಗಳ ಬಗ್ಗೆ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಫರಮಾನ್‌ಗಳನ್ನು ಹೊರಡಿಸಿ ಅನುಷ್ಠಾನಗೊಳಿಸುತ್ತಿವೆ. ಕುಟುಂಬದ ಗೌರವ ಕಾಪಾಡುವ ಹೆಸರಿನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿವೆ. ಅಂತರ್ಜಾತಿ ಮದುವೆಗಳನ್ನು ನಿಷೇಧಿಸಿವೆ. ಕಾಪ್ ಪಂಚಾಯಿತಿಯ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ಮರ್ಯಾದೆಯ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಬಹಿರಂಗವಾಗಿ ಹತ್ಯೆ ಕೂಡ ಮಾಡಲಾಗುತ್ತಿದೆ. ಹೀಗೆ ಪರ್ಯಾಯ ಕಾನೂನುಗಳು ಮತ್ತು ಪಂಚಾಯಿತಿ ಎಂಬ ನ್ಯಾಯಾಲಯಗಳು ಇನ್ನೂ ಜೀವಂತವಾಗಿವೆ.

ಪೊಲೀಸರ ಪ್ರಮುಖ ಕೆಲಸವೆಂದರೆ ಪ್ರಜೆಗಳ ಜೀವ ರಕ್ಷಿಸುವುದು ಮತ್ತು ಅವರ ಆಸ್ತಿ- ಪಾಸ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು; ಅಪರಾಧಿಗಳನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಿ, ವಿಚಾರಣೆ ನಡೆಸಿ ನ್ಯಾಯಾಲಯಗಳ ಮೂಲಕ ಶಿಕ್ಷೆಯನ್ನು ವಿಧಿಸುವುದು. ಆದರೆ ಪೊಲೀಸ್ ಠಾಣೆಗಳಲ್ಲಿ ಚಿತ್ರಹಿಂಸೆ ನೀಡುವ ಮೂಲಕ ಜನರನ್ನು ಸಾಯಿಸುತ್ತಿರುವ ಪ್ರಕರಣಗಳು ದಿನನಿತ್ಯದ ಸುದ್ದಿಯಾಗಿವೆ. 2013ರಲ್ಲಿ 118, 2014ರಲ್ಲಿ 93, 2015ರಲ್ಲಿ 97 ಮತ್ತು 2016ರಲ್ಲಿ 92 ಸಾವುಗಳು ಪೊಲೀಸ್ ಠಾಣೆಗಳಲ್ಲಿ ಸಂಭವಿಸಿವೆಯೆಂದು ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ ವರದಿ ಮಾಡಿದೆ. ಜೈಲುಗಳಲ್ಲಿರುವ ಕೈದಿಗಳು ಸಹ ಚಿತ್ರಹಿಂಸೆ ಹಾಗೂ ಇತರೆ ಕಾರಣಗಳಿಂದ ಸಾಯುತ್ತಿದ್ದಾರೆ. 2017ನೇ ಸಾಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ 894 ಕೈದಿಗಳು ಸಾವನ್ನಪ್ಪಿದ್ದಾರೆ. ಇದೇ ರೀತಿ ಎನ್‌ಕೌಂಟರ್ ಹೆಸರಿನಲ್ಲಿಯೂ ಸಹ ಪೊಲೀಸರು ಜನರನ್ನು ಸಾಯಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಉತ್ತರಪ್ರದೇಶದಲ್ಲಿ 1200 ಎನ್‌ಕೌಂಟರ್ ಪ್ರಕರಣಗಳು ನಡೆದು 50 ಸಾವುಗಳು ಸಂಭವಿಸಿವೆ. ಬೇಲಿಯೇ ಎದ್ದು ಹೊಲವನ್ನು ಮೇಯುವಂತ ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಯು ಇಲ್ಲವಾಗುತ್ತಿದೆ.

ಈ ಸಂಖ್ಯೆಗಳು ವರದಿಯಾಗಿರುವ ಪ್ರಕರಣಗಳು. ಆದರೆ ಇಂತಹ ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಬೆಳಕಿಗೆ ಬರುವುದಿಲ್ಲ. ವರದಿಯಾದ ಪ್ರಕರಣಗಳ ತನಿಖೆಯಲ್ಲಿ ದೋಷಗಳು, ಪ್ರಾಸಿಕ್ಯೂಷನ್‌ನಲ್ಲಿ ನ್ಯೂನತೆ, ಸಾಕ್ಷಿಗಳು ತಮ್ಮ ಹೇಳಿಕೆಯನ್ನು ಬದಲಾಯಿಸುವುದು, ಕಾನೂನಿನ ನ್ಯೂನತೆಗಳು, ನ್ಯಾಯಾಲಯದ ಪ್ರಕ್ರಿಯೆಯ ದೋಷಗಳು, ನ್ಯಾಯವಾದಿಗಳ ಹಾಗೂ ನ್ಯಾಯಾಧೀಶರ ಪೂರ್ವಗ್ರಹ ನಿಲುವುಗಳು ಇತ್ಯಾದಿ ಕಾರಣಗಳಿಂದ ಅನೇಕ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿರುವುದು ನಿತ್ಯದ ಸಂಗತಿಯಾಗಿದೆ.

4. ಪ್ರಜಾತಂತ್ರ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ: ಭಾರತವು ಗಣರಾಜ್ಯವಾದ ನಂತರ ಕಟ್ಟಿರುವ ಸ್ವತಂತ್ರವಾದ ಪ್ರಜಾಪ್ರಭುತ್ವ ಸಂಸ್ಥೆಗಳು ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿ ಕೆಲಸ ಮಾಡಿವೆ. ನಮ್ಮ ಸಮಾಜದಲ್ಲಿ ಸ್ಥಿರತೆ, ಸುಭದ್ರತೆ, ಐಕ್ಯತೆ ಮತ್ತು ಆಶಾದಾಯಕ ಭಾವನೆಗಳನ್ನು ಬೆಳೆಸುವಲ್ಲಿ ಪಾತ್ರವಹಿಸಿವೆ. ಆದರೆ ಇಂದು ಈ ಸಂಸ್ಥೆಗಳು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ. ಈ ಸಂಸ್ಥೆಗಳಲ್ಲಿ ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಪ್ರವೇಶಿಸಿದ್ದರಿಂದ ಅವುಗಳು ಪ್ರಜಾಪ್ರಭುತ್ವ ಕಳೆದುಕೊಳ್ಳುತ್ತಿವೆ.

ನಮ್ಮ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಒಂದು ಮಹತ್ತರವಾದ ಸ್ಥಾನವಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಪತ್ಯೇಕಿಸಲ್ಪಟ್ಟಿರುವ ನ್ಯಾಯಾಂಗವು ಒಂದು ಸ್ವತಂತ್ರವಾದ ಅಂಗ. ನ್ಯಾಯಾಂಗವು ತನ್ನ ತೀರ್ಪುಗಳ ಮುಖಾಂತರ ನಮ್ಮ ಸಂವಿಧಾನವನ್ನು, ಅದರ ಮೂಲ ತತ್ವಗಳಾದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯಗಳನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ವಿಶ್ವಾಸವನ್ನು ಉಳಿಸಿದೆ. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೂ ಧಕ್ಕೆ ತಂದಿವೆ.

ಸರ್ವೋಚ್ಛ ನ್ಯಾಯಾಲಯದಲ್ಲಿ ಶೇ.20ರಷ್ಟು, ಉಚ್ಚ ನ್ಯಾಯಾಲಯಗಳಲ್ಲಿ ಶೇ.40ರಷ್ಟು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಶೇ.30ರಷ್ಟು ನ್ಯಾಯಾಧೀಶರ ಹುದ್ದೆಗಳು ಖಾಲಿ ಬಿದ್ದಿವೆ. ನ್ಯಾಯಾಧೀಶರ ನೇಮಕಾತಿ, ವರ್ಗಾವಣೆ ಹಾಗೂ ಬಡ್ತಿ ವಿಚಾರಕ್ಕೆ ಸಂಬಂಧಿಸಿದ ‘ಪ್ರಕ್ರಿಯೆ ಒಪ್ಪಂದ’ವು (Memorandum of Procedure) ಸರ್ವೋಚ್ಛ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಮಧ್ಯದ ಸಂಘರ್ಷದಿಂದಾಗಿ 2015ರಿಂದಲೂ ನೆನೆಗುದಿಗೆ ಬಿದ್ದಿದೆ. ಈ ವಿಚಾರದಲ್ಲಿ ಮೇಲುಗೈ ಸಾಧಿಸಲು ಕಾರ್ಯಾಂಗ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಜನರ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಎಲ್ಲಾ ನಿಯಮಗಳನ್ನು ಮುರಿದು ಕೊಲಿಜಿಯಂ ಶಿಫಾರಸ್ಸು ಮಾಡಿದ ಹೆಸರುಗಳನ್ನು ಹಿಂತಿರುಗಿಸುತ್ತಿದೆ. ಸಕಾರಣವಿಲ್ಲದೆ ವಿಳಂಬ ಮಾಡುತ್ತಿದೆ ಮತ್ತು ಸರ್ವೋಚ್ಛ ನ್ಯಾಯಾಲಯವನ್ನು ಧಿಕ್ಕರಿಸಿ ನೇರವಾಗಿ ಉಚ್ಚ ನ್ಯಾಯಾಲಯಗಳ ಜೊತೆ ವ್ಯವಹರಿಸುತ್ತಿದೆ. ಈ ಬೆಳವಣಿಗೆಗಳಿಂದ ನ್ಯಾಯ ವಿತರಣಾ ಪದ್ಧತಿಯ ಮೇಲೆ ತೀವ್ರವಾದ ಪರಿಣಾಮ ಬಿದ್ದಿದೆ.

ಭಾರತೀಯ ರಿಸರ್ವ್ ಬ್ಯಾಂಕ್, ಸಿಬಿಐ, ಮೊದಲಾದ ಸ್ವಾಯತ್ತ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ, ಆಯಾ ಸಂಸ್ಥೆಗಳ ನಿಯಮಗಳನ್ನು ಗಾಳಿಗೆ ತೂರಿ ಬದಲಾವಣೆಗಳನ್ನು ಮಾಡುವ ಮೂಲಕ ಹಾಗೂ ಆಡಳಿತದಲ್ಲಿರುವ ಸರ್ಕಾರಗಳು ತಮಗೆ ಬೇಕಾದ ವ್ಯಕ್ತಿಗಳನ್ನು ಈ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಮೂಲಕ ಈ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ.

ಗುಣಾತ್ಮಕ ಶಿಕ್ಷಣವನ್ನು ನೀಡಿ ಯುವಜನ ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಬೆಳೆಸುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ, ಪಠ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಆ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಉದಾಹರಣೆಗೆ ಮದ್ರಾಸ್ ಎಂಜಿನಿಯರಿಂಗ್ ಕಾಲೇಜು, ಪುಣೆಯ ಎಫ್.ಟಿ.ಐ.ಐ., ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಮುಂಬೈನ ಟಾಟಾ ಸಮಾಜಶಾಸ್ತ್ರ ವಿಶ್ವವಿದ್ಯಾಲಯ, ಹೈದರಾಬಾದ್ ವಿಶ್ವವಿದ್ಯಾಲಯ, ಜೋಧಪು‌ರ್ ವಿಶ್ವ ವಿಶ್ವವಿದ್ಯಾಲಯ, ಜಾಧವ ಪುರ್ ವಿಶ್ವವಿದ್ಯಾಲಯ ಇತ್ಯಾದಿಗಳಲ್ಲಿ ನಡೆದಿರುವ ಇತ್ತೀಚೆಗಿನ ಘಟನೆಗಳು ಮತ್ತು ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ಈ ವಿಶ್ವವಿದ್ಯಾಲಯಗಳಿಗೆ ಅನುದಾನವನ್ನು ಕಡಿತಗೊಳಿಸಿ, ಹತ್ತಾರು ವಿಷಯಗಳ ಬಗ್ಗೆ ಅಧ್ಯಯನವನ್ನು ನಿಲ್ಲಿಸಿ, ನೂರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನಿರಾಕರಿಸಲಾಗಿದೆ. ಈ ರೀತಿ ಅನೇಕ ಶಿಕ್ಷಣ ಸಂಸ್ಥೆಗಳು ದಾಳಿಗೆ ಒಳಗಾಗಿವೆ.

ಚುನಾವಣಾ ಆಯೋಗ, ಕೇಂದ್ರ ತನಿಖಾ ದಳ(ಸಿಬಿಐ), ಸೆಂಟ್ರಲ್ ಎನ್‌ಪೋರ್ಸ್ಮೆಂಟ್ ಸೆಲ್ (ಸಿಇಸಿ), ಚಲನಚಿತ್ರ ಸೆನ್ಸಾರ್ ಮಂಡಳಿ ಇತ್ಯಾದಿ ಸಂಸ್ಥೆಗಳಿಗೆ ಇತ್ತೀಚೆಗೆ ಮಾಡಿರುವ ನೇಮಕಾತಿಗಳು ಹಾಗೂ ಅವುಗಳ ಕಾರ್ಯನಿರ್ವಹಣೆಯ ವೈಖರಿಯು ಜನರಲ್ಲಿ ಅಸಂತೋಷವನ್ನು ಉಂಟುಮಾಡಿದೆ.

5. ಆಪತ್ತಿನಲ್ಲಿರುವ ಜಾತ್ಯತೀತತೆ, ಧರ್ಮನಿರಪೇಕ್ಷತೆ: ಧರ್ಮನಿರಪೇಕ್ಷತೆ ಎಂದರೆ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು. ಸರ್ಕಾರಕ್ಕೆ ತನ್ನದೆ ಆದ ಧರ್ಮವಿರಕೂಡದು. ಸರ್ಕಾರ ಬೇರೆ ಬೇರೆ ಧರ್ಮಗಳ ಮಧ್ಯೆ ತಾರತಮ್ಯ ತೋರಬಾರದು. ಧರ್ಮದ ಪೋಷಣೆಗೆ ಸರ್ಕಾರ ಜನರ ಮೇಲೆ ತೆರಿಗೆ ವಿಧಿಸಬಾರದು. ಸರ್ಕಾರದ ನೀತಿಗಳು ಯಾವುದೇ ಧರ್ಮದ ಫರಮಾನ್‌ಗಳಿಂದ ಪ್ರೇರಿತವಾಗಿರಕೂಡದು. ಇಂತಹ ಒಂದು ರಾಜಕೀಯ ವ್ಯವಸ್ಥೆ ಧರ್ಮನಿರಪೇಕ್ಷ ವ್ಯವಸ್ಥೆ ಎಂದು ಕರೆಯಲ್ಪಡುತ್ತದೆ.

ಧರ್ಮನಿರಪೇಕ್ಷತೆ ಎಂದರೆ ಧರ್ಮ ವಿರೋಧಿಯಲ್ಲ. ಆದರೆ ಯಾವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಅಮಾನವಿಯವೋ, ಅನಾರೋಗ್ಯಕರವೋ, ಹಿಂಸಾತ್ಮಕವೋ, ದಮನಕಾರಿಯೋ ಮತ್ತು ಮಾನವ ಘನತೆಗೆ ಧಕ್ಕೆಯನ್ನು ತರುತ್ತದೋ ಅಂತಹವುಗಳನ್ನು ನಿಷೇಧಿಸುವ ಹಕ್ಕನ್ನು ಸರ್ಕಾರ ಹೊಂದಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮೂಲಭೂತವಾದಿ ಮತ್ತು ಕೋಮುವಾದಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಈ ಶಕ್ತಿಗಳು ಜನರ ಐಕ್ಯತೆಯನ್ನು ಮುರಿಯುತ್ತಿವೆ. ಜನರ ಮಧ್ಯೆ ಗೋಡೆಗಳನ್ನು ನಿರ್ಮಾಣ ಮಾಡಿವೆ. ಜನರಲ್ಲಿ ದ್ವೇಷ, ಹಿಂಸೆ, ಅಸೂಯೆ, ಅಪನಂಬಿಕೆಗಳನ್ನು ಹುಟ್ಟು ಹಾಕಿವೆ. ಆತಂಕದ ವಿಚಾರವೆಂದರೆ ಈ ಶಕ್ತಿಗಳು ಎಲ್ಲಾ ಕ್ಷೇತ್ರಗಳಿಗೆ ಅಂದರೆ ರಾಜಕಾರಣ, ಆಡಳಿತ, ಶಿಕ್ಷಣ, ಸಿನಿಮಾ, ಕ್ರೀಡೆ, ಸಂಗೀತ, ಕಲೆ, ಪೊಲೀಸ್ ಇತ್ಯಾದಿಗಳಲ್ಲಿ ಪ್ರವೇಶಿಸಿವೆ.

ಈ ಶಕ್ತಿಗಳು ನಾವು ಏನನ್ನು ತಿನ್ನಬೇಕು, ಎಂತಹ ಬಟ್ಟೆ ಧರಿಸಬೇಕು, ಏನನ್ನು ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ವ್ಯವಹರಿಸಬೇಕು, ಎಷ್ಟು ಮಕ್ಕಳನ್ನು ಹೆರಬೇಕೆಂಬ ಖಾಸಗಿ ಬದುಕಿನ ವಿಚಾರಗಳ ಮೇಲೆ ಫರಮಾನುಗಳನ್ನು ಹೊರಡಿಸಿ ನಮ್ಮ ಬಹುತ್ವದ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ.

ಈ ಶಕ್ತಿಗಳು ಕ್ರಿಶ್ಚಿಯನ್ ಪಾದ್ರಿಗಳನ್ನು ಸುಟ್ಟವು, ಸನ್ಯಾಸಿನಿಯರನ್ನು ರೇಪ್ ಮಾಡಿದವು. ಚರ್ಚ್‌ಗಳನ್ನು ಧ್ವಂಸ ಮಾಡಿದವು. ನೈತಿಕ ಪೊಲೀಸ್‌ಗಿರಿ, ಗೋರಕ್ಷಣೆ ಇತ್ಯಾದಿ ಹೆಸರಿನಲ್ಲಿ ಈ ಮೂಲಭೂತವಾದಿ ಗುಂಪುಗಳು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಎಲ್ಲ ಧರ್ಮದಲ್ಲಿಯೂ ಮತಾಂಧರು, ಮೂಲಭೂತವಾದಿಗಳಿದ್ದಾರೆ. ಅವರು ಜನರಲ್ಲಿ ಭಯ, ಭೀತಿ ಮತ್ತು ಅಭದ್ರತೆಯನ್ನು ಹುಟ್ಟು ಹಾಕುತ್ತಿದ್ದಾರೆ. ಅವರೆಲ್ಲರವನ್ನು ನಾವು ಹಿಮ್ಮೆಟ್ಟಿಸಬೇಕಾಗಿದೆ.

ಈ ಗುಂಪುಗಳಿಗೆ ಸೇರಿದ ನಾಯಕರು ತಮಗೆ ಸಮ್ಮತವಲ್ಲದ ವ್ಯಕ್ತಿಗಳ ತಲೆ ಕಡಿದರೆ, ನಾಲಿಗೆ ಸೀಳಿದರೆ, ಕಾಲು ಕೈ ಕತ್ತರಿಸಿದರೆ ಲಕ್ಷಗಟ್ಟಲೆ ಹಣ ಕೊಡುತ್ತೇವೆಂದು ಘಂಟಾಘೋಷವಾಗಿ ಬಹಿರಂಗ ಸಭೆಗಳಲ್ಲಿ ಹೇಳುತ್ತಿದ್ದಾರೆ. ಚುನಾಯಿತ ಜನ ಪ್ರತಿನಿಧಿಗಳು ಮತ್ತು ಜವಾಬ್ದಾರಿ ಸ್ಥಾನದಲ್ಲಿರುವ ಮುಖಂಡರು ಜನರಲ್ಲಿ ದ್ವೇಷ ಹುಟ್ಟಿಸುವ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಆತಂಕಕಾರಿಯಾಗಿದೆ. ಇಂತಹ ಹೇಳಿಕೆಗಳನ್ನು ಖಂಡಿಸಿ, ಹೇಳಿಕೆ ನೀಡಿದವರನ್ನು, ಹಿಂಸೆಗೆ ಪ್ರಚೋದನೆ ನೀಡುವವರನ್ನು ಸರ್ಕಾರವು ಶಿಕ್ಷಿಸುವ ಬದಲು ಇಂತಹ ವ್ಯಕ್ತಿಗಳ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುತ್ತಿದೆ.

ಧರ್ಮನಿರಪೇಕ್ಷತೆ ಎಂದರೆ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು. ದುರಾದೃಷ್ಟವೆಂದರೆ ಧರ್ಮಗುರುಗಳು ಮತ್ತು ಧರ್ಮ ಪೀಠಗಳು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅನೇಕ ಧರ್ಮಗುರುಗಳು ಚುನಾವಣಾ ಕಣದಲ್ಲಿದ್ದಾರೆ. ರಾಜಕೀಯ ಅಧಿಕಾರ ಧರ್ಮಗುರುಗಳ ಕೈಗೆ ಹೋಗುತ್ತಿರುವುದೂ ಕೂಡ ಅಪಾಯಕಾರಿ ಬೆಳವಣಿಗೆಯಾಗಿದೆ.

ಈ ಬೆಳವಣಿಗೆಗಳಿಂದ ಧರ್ಮನಿರಪೇಕ್ಷತೆ ಮತ್ತು ಬಹುತ್ವಕ್ಕೆ ಧಕ್ಕೆ ಬಂದೊದಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಶಾಂತಿ ಕದಡಿದೆ. ಪ್ರಗತಿ ಕುಂಠಿತವಾಗಿದೆ. ಹಿಂಸೆ ಹೆಚ್ಚುತ್ತಿದೆ, ಜನರನ್ನು ಭಯ ಮತ್ತು ಅಭದ್ರತೆ ಕಾಡುತ್ತಿದೆ.

6. ಮಾಯವಾಗುತ್ತಿರುವ ಕಲ್ಯಾಣ ರಾಜ್ಯದ ಕಲ್ಪನೆ: ನಮ್ಮ ಸಂವಿಧಾನದಲ್ಲಿ ಭಾರತ ದೇಶವನ್ನು ಒಂದು ಕಲ್ಯಾಣ ರಾಜ್ಯವನ್ನಾಗಿ ಕಟ್ಟುವ ಸಂಕಲ್ಪ ಮಾಡಲಾಗಿದೆ. ಕಲ್ಯಾಣ ರಾಜ್ಯವೆಂದರೆ ಸರ್ಕಾರಕ್ಕೆ ಜನಸಾಮಾನ್ಯರ ಕನಿಷ್ಠ ಅಗತ್ಯತೆಗಳಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಹೆಚ್ಚು ಜವಾಬ್ದಾರಿ ಇರುವುದು. ಆದರೆ ಇತ್ತೀಚಿನ ಸರ್ಕಾರಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಖಾಸಗಿಯವರ ಕೈಗೆ ಒಪ್ಪಿಸುತ್ತಾ ತನ್ನ ಜವಾಬ್ದಾರಿಯಿಂದ ದೂರ ಸರಿಯುತ್ತಿವೆ. ಖಾಸಗೀಕರಣವು ಸೌಲಭ್ಯಗಳನ್ನು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡುವುದರಿಂದ ಹಾಗೂ ಲಾಭ ಮಾಡುವುದು ಕಂಪನಿಗಳ ಮುಖ್ಯ ಉದ್ದೇಶವಾಗಿರುವುದರಿಂದ ಸಾಮಾನ್ಯ ಜನರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಭಾರತವು ಉನ್ನತ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಮಾಹಿತಿ – ತಂತ್ರಜ್ಞಾನ, ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸಾಧನೆಯನ್ನು ಮಾಡಿದೆ. ಈ ಸಾಧನೆಗಳ ಪರಿಣಾಮವಾಗಿ ಕೈಗಾರಿಕಾ ಉತ್ಪಾದನೆ, ಕೃಷಿ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಅಪಾರ ಸಂಪತ್ತನ್ನು ಗಳಿಸಿದೆ. ಹಿಂದೆಂದಿಗಿಂತ ಭಾರತ ಇಂದು ಬಹಳ ಶ್ರೀಮಂತವಾಗಿದೆ. ಆದರೆ ಸಂಪತ್ತು ಯಾರ ಹಿಡಿತದಲ್ಲಿದೆ ಎಂಬುದು ಪ್ರಶ್ನೆಯಾಗಿದೆ. ಹೆಚ್ಚು ಸಂಪತ್ತು ಉತ್ಪಾದನೆಯಾಗಿ ಶ್ರೀಮಂತರ ಕೈಸೇರಿದರೆ ಅದು ಹನಿಹನಿಯಾಗಿ ಹರಿದು ಬಡವರ ಕೈಸೇರುತ್ತದೆ ಎಂಬ ವಾದ ಸುಳ್ಳಾಗಿದೆ. ಕೆಲವೇ ಜನರ ಕೈಯಲ್ಲಿ ಅಪಾರ ಸಂಪತ್ತು ಸಂಗ್ರಹವಾಗಿದ್ದು, ಬಹುಸಂಖ್ಯಾತ ಜನರು ಅತ್ಯಲ್ಪ ಸಂಪತ್ತು ಹಂಚಿಕೊಂಡಿದ್ದಾರೆ. ಹೆಚ್ಚುಹೆಚ್ಚು ಜನರು ಸಂಪತ್ತು ಮತ್ತು ಸೌಲಭ್ಯಗಳ ಅಸಮಾನ ಹಂಚಿಕೆಯಿಂದ ತತ್ತರಿಸಿದ್ದಾರೆ. ಈ ರೀತಿಯ ಅಸಮಾನ ಭಾರತವನ್ನು ನಾವು ಕಟ್ಟಿದ್ದೇವೆ. ಅಸಮಾನತೆಯಿಂದ ದೇಶದಲ್ಲಿ ಬಹುಸಂಖ್ಯಾತ ಜನರನ್ನು ಹಸಿವು, ಬಡತನ, ನಿರುದ್ಯೋಗ, ಅಭದ್ರತೆ ಇತ್ಯಾದಿಗಳು ಕಾಡುತ್ತಿವೆ.

ದೇಶದ ಸಂಪತ್ತಿನ ಹಂಚಿಕೆ             ಶೇ.ವಾರು ಜನಸಂಖ್ಯೆ          ಶೇ.ಸಂಪತ್ತು

1.                                                         1                                              58

2.                                                         9                                              22

3.                                                         90                                            20

ಇಂದು ಭ್ರಷ್ಟಾಚಾರ ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಹಬ್ಬಿದೆ. ಗಂಭೀರವಾದ ವಿಚಾರವೆಂದರೆ, ನಮ್ಮ ದೇಶದ ಸೂಕ್ಷ್ಮ ಕ್ಷೇತ್ರಗಳಾದ ರಕ್ಷಣಾ ಇಲಾಖೆ, ಸಂಶೋಧನೆ, ನ್ಯಾಯಾಂಗ, ಶಿಕ್ಷಣ, ಆರೋಗ್ಯ ಇತ್ಯಾದಿ ಕ್ಷೇತ್ರಗಳಿಗೂ ಹಬ್ಬಿದೆ. ರಾಜಕೀಯ ಭ್ರಷ್ಟಾಚಾರವು ದೇಶದ ಉಳಿದೆಲ್ಲಾ ಭ್ರಷ್ಟಾಚಾರಗಳನ್ನು ನಿಯಂತ್ರಿಸುತ್ತಿದೆ. ಎಲ್ಲಿ ಭ್ರಷ್ಟಾಚಾರವಿರುತ್ತದೆಯೋ ಅಲ್ಲಿ ಪ್ರತಿಭೆಗೆ, ದುಡಿಮೆಗೆ ಮತ್ತು ಪ್ರಾಮಾಣಿಕತೆಗೆ ಬೆಲೆ ಇರುವುದಿಲ್ಲ. ಎಲ್ಲವನ್ನು ಲಂಚಕೊಟ್ಟು ಕೊಂಡುಕೊಳ್ಳಬಹುದಾದರೆ ಅಲ್ಲಿ ನ್ಯಾಯಕ್ಕೆ ಬೆಲೆ ಇರುವುದು ಹೇಗೆ ಸಾಧ್ಯ?

ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದವರು ನಮ್ಮ ಸಾರ್ವಜನಿಕ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದು ಮರುಪಾವತಿ ಮಾಡದೆ ವಿದೇಶಗಳಿಗೆ ಪಲಾಯನ ಮಾಡಿ, ಅಲ್ಲಿ ಭೋಗ ಜೀವನ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಂದರೆ 2007ರಿಂದ 2017ರ ಅವಧಿಯಲ್ಲಿ ಬ್ಯಾಂಕುಗಳು ಅನುತ್ಪಾದಕ ಸಾಲಗಳು (Non-performing Assets) ಎಂಬ ಎಂಬ ಹೆಸರಿನಲ್ಲಿ ಲಕ್ಷಕೋಟಿಗಟ್ಟಲೆ ರೂಪಾಯಿಗಳನ್ನು ಇಂತಹ ಸಿರಿವಂತರಿಗೆ ಮಾಫಿ ಮಾಡಿವೆ. ಇಂತಹ ಕಳ್ಳರನ್ನು ಕರೆತಂದು ಶಿಕ್ಷೆಗೆ ಒಳಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗೆ ಸಾಮಾನ್ಯ ಜನರ ದುಡಿಮೆಯನ್ನು ಲೂಟಿ ಹೊಡೆಯಲಾಗುತ್ತಿದೆ.

ದೊಡ್ಡ ದೊಡ್ಡ ಕಂಪನಿಗಳು ಮತ್ತು ಉದ್ಯಮಿಗಳು ಕಟ್ಟಬೇಕಾದ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ವಸೂಲಿ ಮಾಡಲಾಗುತ್ತಿಲ್ಲ. ಮತ್ತೊಂತರ ಕಡೆ ಜನ ಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಜನ ಸಾಮಾನ್ಯರ ಬದುಕು ದಿನೇದಿನೇ ಬಹಳ ಸಂಕಷ್ಟಕ್ಕೆ ಒಳಗಾಗುತ್ತಿದೆ.

7. ಅಪ್ರಸ್ತುತವಾಗುತ್ತಿರುವ ಸಾಮಾಜಿಕ ನ್ಯಾಯ: 20ನೇ ಶತಮಾನದವರೆಗೆ ಸಾಮಾಜಿಕ ನ್ಯಾಯ ನಮ್ಮ ಸಮಾಜದಲ್ಲಿ ಒಂದು ನೀತಿಯಾಗಿತ್ತು. ಆದರೆ ರಾಜನೀತಿಯಾಗಿರಲಿಲ್ಲ. ಕಡ್ಡಾಯವಾಗಿ ಜಾರಿ ಮಾಡಲಾಗದ ಒಂದು ನೀತಿಯಾಗಿಯೇ ಉಳಿಯಿತು. ಮೊದಲನೇ ಬಾರಿಗೆ ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರು ‘ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು’ ಎಂಬುದಾಗಿ ಪ್ರತಿಪಾದಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಕೇವಲ ಸಮಾಜದ ನೀತಿಯಾಗಿ ಉಳಿಯದೆ ಸರ್ಕಾರದ ನೀತಿಯಾಗಿ ಸ್ಥಾನಗಳಿಸುವಂತಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ನ್ಯಾಯದ ಪರವಾದ ಕೆಲವು ಕಾನೂನುಗಳು ಜಾರಿಗೆ ಬಂದವು.

ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯವು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸರಿ ಸಮಾನರು. ಯಾವುದೇ ಜಾತಿ, ವರ್ಣ, ಲಿಂಗ, ಧರ್ಮದ ಹೆಸರಿನಲ್ಲಿ ಭೇದಭಾವ ತೋರಬಾರದು. ಸಮಸ್ತ ಜನತೆಯ ಕಲ್ಯಾಣವೇ ಸರ್ಕಾರದ ಗುರಿ. ಸಮಾನತೆಯೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಮನಾದ ಅವಕಾಶಗಳನ್ನು ನೀಡುವುದು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.

ಸಾಮಾಜಿಕ ನ್ಯಾಯವೆಂದರೆ ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲಕ್ಕೆತ್ತಲು ಶಾಸನಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆ ಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವುದು. ಆ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವುದು. ಕಳೆದ 70 ವರ್ಷಗಳ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಹಲವು ಶಾಸನಗಳನ್ನು ಮತ್ತು ಕಾರ್ಯಕ್ರಮಗಳನ್ನು ತಂದು ಒಂದಷ್ಟು ಸುಧಾರಣೆಯಾಗಿದೆ. ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ, ವಿಕಲಚೇತನರ, ವೃದ್ಧರ, ಬಡವರ, ಇತ್ಯಾದಿ ಜನವಿಭಾಗದ ಬದುಕು ಸಲ್ಪಮಟ್ಟಿಗೆ ಸುಧಾರಣೆಯಾಗಿದೆ.

ಶಾಸಕಾಂಗದಲ್ಲಿ, ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯದ ಒಂದು ಭಾಗ ಮಾತ್ರ. ಆದರೆ ಮೀಸಲಾತಿ ಒಂದೇ ಸಾಮಾಜಿಕ ನ್ಯಾಯವಲ್ಲ. ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರುವುದೇ ಸಾಮಾಜಿಕ ನ್ಯಾಯದ ಗುರಿ. ದುಡಿಮೆಗೆ ಸಮನಾದ ಪ್ರತಿಫಲ ನೀಡುವುದು, ಜನರ ಕನಿಷ್ಠ ಅಗತ್ಯತೆಗಳನ್ನು ಪೂರೈಸುವುದು ಸಹ ಸಾಮಾಜಿಕ ನ್ಯಾಯ.

ಜಾಗತೀಕರಣದ ಪರಿಣಾಮವಾಗಿ ಅತಿಯಾದ ವ್ಯಾಪಾರೀಕರಣ ಬೆಳೆಯುತ್ತಿದೆ. ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಾಂತರ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ನಗರಗಳಲ್ಲಿ ಕೊಳಚೆ ಪ್ರದೇಶಗಳು ಬೆಳೆಯುತ್ತಿವೆ. ದಿನೇ ದಿನೇ ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ಖಾಸಗೀಕರಣದ ಪರಿಣಾಮವಾಗಿ ಸರ್ಕಾರದ ಅಧಿಕಾರವು ಕ್ರಮೇಣ ಕಡಿಮೆಯಾಗುತ್ತಿದೆ. ಒಂದು ನಿರ್ದಿಷ್ಟ ಭೂ ಪ್ರದೇಶದ ಮೇಲಿರುವ ರಾಜಕೀಯ ಅಧಿಕಾರದ ಸ್ಥಾನವನ್ನು ಬಹುರಾಷ್ಟ್ರೀಯ ಕಂಪನಿಗಳು ಆಕ್ರಮಿಸುತ್ತಿವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಪ್ರಸ್ತುತಗೊಳ್ಳುತ್ತಿದೆ.

ಎಲ್ಲಿಯವರೆಗೆ ಸರ್ಕಾರ ಹೆಚ್ಚುಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದಿಲ್ಲವೋ, ದುಡಿಮೆಗೆ ಸಮನಾದ ಪ್ರತಿಫಲವನ್ನು ಮತ್ತು ಉದ್ಯೋಗದ ಭದ್ರತೆಯನ್ನು ನೀಡುವುದಿಲ್ಲವೋ  ಅಲ್ಲಿಯವರೆಗೆ ಮೀಸಲಾತಿ, ಒಳಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ, ಬೇರೆ ಜಾತಿಯವರಿಗೆ  ಮೀಸಲಾತಿ ಬೇಡಿಕೆ ಇತ್ಯಾದಿಗಳು ಮುಂದುವರಿಯುತ್ತವೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಸರ್ಕಾರ ತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಹೆಚ್ಚು ಹೆಚ್ಚು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಭೂ ಸುಧಾರಣಾ ಕ್ರಮಗಳನ್ನು ಕೈಗೊಂಡು, ಕೃಷಿ ಭೂಮಿಯ ಒಡೆತನ ಮತ್ತು ಮನೆ ನಿವೇಶನಗಳ ಒಡೆತನವನ್ನು ಎಲ್ಲ ದುರ್ಬಲ ವರ್ಗಗಳಿಗೆ ಒದಗಿಸಬೇಕು. ಸರ್ಕಾರ ಈ ಕೆಲಸವನ್ನು ಮಾಡಿದಾಗ ಮೀಸಲಾತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಹಿಂದಕ್ಕೆ ಸರಿಯುತ್ತವೆ. ಸರ್ಕಾರ ಕಡ್ಡಾಯವಾಗಿ ಈ ಕೆಲಸ ಮಾಡಬೇಕಾದರೆ ಉದ್ಯೋಗ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಬೇಕು.

8. ಮಾನವ ಹಕ್ಕುಗಳ ಉಲ್ಲಂಘನೆ: ವಿಶ್ವಸಂಸ್ಥೆಯು 1948ರಲ್ಲೇ ಮಾವನಹಕ್ಕುಗಳನ್ನು ಘೋಷಿಸಿತು. ಆ ದಿನಗಳಲ್ಲಿ ನಮ್ಮ ದೇಶದ ಸಂವಿಧಾನ ಸಭೆ ಕರಡು ಸಂವಿಧಾನ ರಚನೆಯ ಕಾರ್ಯದಲ್ಲಿ ತೊಡಗಿತ್ತು. ನಮ್ಮ ಸಂವಿಧಾನದ ರಚನಕಾರರು ಮಾನವ ಹಕ್ಕುಗಳ ಘೋಷಣೆಯಿಂದ ಪ್ರಭಾವಿತರಾಗಿ ಅವುಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದರು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಮತ್ತು ಹಲವು ಅನುಚ್ಛೇದಗಳಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿರುವ ಮಾನವ ಹಕ್ಕುಗಳನ್ನು ಕಾಣಬಹುದು.

ಭಾರತದ ಸಂವಿಧಾನವು ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಜಾರಿಗಳಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿದೆ. ಅನುಚ್ಛೇದ 32ರ ಅನುಸಾರ ಭಾರತದ ಸರ್ವೋಚ್ಛ ನ್ಯಾಯಾಲಯವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಪಡೆದಿದೆ. ಅನುಚ್ಛೇದ 226ರಲ್ಲಿ ರಾಜ್ಯದ ಉಚ್ಚ ನ್ಯಾಯಾಲಯಗಳು ರಿಟ್ ಗಳನ್ನು ಹೊರಡಿಸಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿವೆ.

ಭಾರತದ ದೇಶದ ಸಂಸತ್ತು 1993ರಲ್ಲಿ ಮಾನವ ಹಕ್ಕುಗಳ ಕಾಯಿದೆಯನ್ನು ಜಾರಿಗೆ ತಂದಿದೆ. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಲಾಗಿದೆ. ಹೀಗೆ ಸಮಾಜದ ಬಹುಪಾಲು ಚಟುವಟಿಕೆಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಿದ್ದೇವೆ.

ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ನ್ಯಾಯಾಂಗ ಮಹತ್ತರ ಕೊಡುಗೆಯನ್ನು ನೀಡಿದೆ. ಭಾರತ ಸರ್ವೋಚ್ಛ ನ್ಯಾಯಾಲಯ ನೂರಾರು ತೀರ್ಪುಗಳಲ್ಲಿ ಭಾರತ ಸಂವಿಧಾನದ ಹಲವು ಅನುಚ್ಛೇದಗಳನ್ನು ವ್ಯಾಖ್ಯಾನ ಮಾಡುತ್ತಾ ಮಾನವ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಉದಾಹರಣೆಗೆ ಜೀವಿಸುವ ಹಕ್ಕು, ಮೂಲ ಸವಲತ್ತುಗಳನ್ನು ಪಡೆಯುವ ಮತ್ತು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಒಳಗೊಳ್ಳುತ್ತದೆ. ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಹಕ್ಕು, ಮಹಿಳೆಯರನ್ನು ಸಭ್ಯತೆ ಮತ್ತು ಸೂಕ್ತ ಘನತೆಯಿಂದ ನಡೆಸಿಕೊಳ್ಳುವ ಹಕ್ಕು, ತಿಳಿದುಕೊಳ್ಳುವ ಹಕ್ಕು, ಮಾಹಿತಿ ಹಕ್ಕು, ಖಾಸಗಿ ಹಕ್ಕು, ವಿದೇಶ ಪ್ರವಾಸದ ಹಕ್ಕು, ತ್ವರಿತ ವಿಚಾರಣೆಯ ಹಕ್ಕು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯುವ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ಬೇಡಿ ತೊಡಿಸುವುದರ ವಿರುದ್ಧ ಹಕ್ಕು, ಉಚಿತ ಕಾನೂನು ನೆರವಿನ ಹಕ್ಕು, ವೈದ್ಯಕೀಯ ನೆರವಿನ ಹಕ್ಕು, ಆರೋಗ್ಯಕರ ಪರಿಸರ ಹಕ್ಕು ಇತ್ಯಾದಿಯಾಗಿ.

ಇಂದು ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಿವಾಳಿಯಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಿರುದ್ಯೋಗ ಹೆಚ್ಚಾಗಿ ಯುವಜನರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಮಹಿಳೆಯರು, ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮತ್ತು ಸಾಮಾಜಿಕ ಭಯೋತ್ಪಾದನೆ ತಲೆದೋರಿದೆ.

ಸರ್ಕಾರ, ಪೊಲೀಸ್ ಮತ್ತು ಸೈನ್ಯದಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಭಯೋತ್ಪಾದಕರಿಂದ, ಉಗ್ರಗಾಮಿಗಳಿಂದ, ಮೂಲಭೂತವಾದಿಗಳಿಂದ, ಕೋಮುವಾದಿಗಳಿಂದ ಮತ್ತು ಮಾಫಿಯಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಆಯೋಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಹೀಗೆ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಕೇವಲ ಅಭಿವೃದ್ಧಿ ಆದರೆ ಸಾಲದು, ಅಭಿವೃದ್ಧಿಯ ಸಾಧನೆ ಜನರ ಜೀವನಮಟ್ಟವನ್ನು ಸುಧಾರಿಸಿದಾಗ ಅದು ನಿಜವಾದ ಅಭಿವೃದ್ಧಿ ಎನ್ನಿಸಿಕೊಳ್ಳುವುದು. ಮಾನವೀಯತೆಯನ್ನೊಳಗೊಂಡ ಅಭಿವೃದ್ಧಿ ನಮಗೆ ಬೇಕಾಗಿದೆ.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]