ಸಂವಿಧಾನ ಜಾರಿಗೆ ಬಂದ ನಂತರ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಸಾಮಾನ್ಯವಾಗಿ ಕಾಣುವುದು ಗುಪ್ತರ ಭಾರತ, ಮೌರ್ಯರ ಭಾರತ, ಹರ್ಷವರ್ಧನರ ಭಾರತ, ಕಾನಿಷ್ಕರ ಭಾರತ, ಮೊಘಲರ ಭಾರತ, ಫ್ರೆಂಚರ ಭಾರತ ಮತ್ತು ಬ್ರಿಟಿಷರ ಭಾರತ ಎಂದು ಹಂಚಿ ಹೋದ ಹಲವು ಭಾರತಗಳು. ಯಾಕೆಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ಭೂಪ್ರದೇಶ ಹಿಂದೆಂದೂ ಒಂದೇ ರಾಜಕೀಯ ಆಡಳಿತಕ್ಕೆ ಒಳಪಟ್ಟಿರಲಿಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದ ಸಮಯದಲ್ಲಿ ಭಾರತದಲ್ಲಿ ಸುಮಾರು 600 ಅರಸೊತ್ತಿಗೆಗಳಿದ್ದವು. ಅವುಗಳನ್ನೆಲ್ಲಾ ರದ್ದುಗೊಳಿಸಿ ಇಡೀ ದೇಶವನ್ನು, ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ರಾಜಕೀಯ ಆಡಳಿತಕ್ಕೆ ಒಳಪಡಿಸಲಾಯಿತು. ಒಂದೇ ಸಂವಿಧಾನ, ಒಂದೇ ಗಡಿ, ಒಂದೇ ರಾಷ್ಟ್ರಗೀತೆ, ಒಂದೇ ರಾಷ್ಟ್ರ ಧ್ವಜ, ಒಂದೇ ರಾಷ್ಟ್ರ ಚಿಹ್ನೆ. ಇದು ನಿಜವಾದ ಭಾರತ ರಾಷ್ಟ್ರ ನಿರ್ಮಾಣ. ಇದು ನಿಜಕ್ಕೂ ಮಹತ್ತರವಾದ ಸಾಧನೆ.
ಪಾಳೆಗಾರಿ ಪದ್ಧತಿಯನ್ನು ರದ್ದುಪಡಿಸಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ಕೇಂದ್ರದಲ್ಲಿ ಲೋಕಸಭೆ-ರಾಜ್ಯಸಭೆ, ರಾಜ್ಯಮಟ್ಟದಲ್ಲಿ ವಿಧಾನ ಸಭೆ-ವಿಧಾನ ಪರಿಷತ್ತು ಎಂಬ ಶಾಸಕಾಂಗ ಸಂಸ್ಥೆಗಳನ್ನೂ, ರಾಷ್ಟ್ರಾಧ್ಯಕ್ಷರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯೆಂಬ ಕಾರ್ಯಾಂಗದ ಸಂಸ್ಥೆಗಳನ್ನು ಮತ್ತು ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲ್ಲೂಕು ನ್ಯಾಯಾಲಯಗಳೆಂಬ ನ್ಯಾಯಾಂಗ ಸಂಸ್ಥೆಗಳನ್ನು ಕಟ್ಟಿದ್ದೇವೆ. ಸುಧಾರಣೆಗಳನ್ನು ತಂದಿದ್ದೇವೆ.
ಭಾರತ ದೇಶದಲ್ಲಿ ವಿಭಿನ್ನ ಧರ್ಮಗಳು, ಜಾತಿಗಳು, ಭಾಷೆಗಳು, ಸಂಸ್ಕೃತಿ, ಉಪಸಂಸ್ಕೃತಿ, ಆಚಾರ, ವಿಚಾರಗಳು, ಹಲವು ರಾಜಕೀಯ ಪಕ್ಷಗಳು, ವಿಭಿನ್ನ ಅಭಿಪ್ರಾಯಗಳು, ರಾಜಕೀಯ ಸಿದ್ಧಾಂತಗಳಿದ್ದರೂ ಕೂಡ, ನಮ್ಮ ಸಂವಿಧಾನದ ಪ್ರಕಾರ ಎಲ್ಲರನ್ನು ಒಳಗೊಳ್ಳುವ ಪ್ರಯತ್ನ ಮಾಡುತ್ತಾ ಸರ್ಕಾರ ರಚಿಸಿಕೊಂಡು, ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಿಕೊಂಡು, ಸರ್ಕಾರಗಳನ್ನು ಶಾಂತಿಯುತವಾಗಿ ಬದಲಾಯಿಸಿಕೊಂಡು ಮುಂದುವರಿದಿದ್ದೇವೆ.
1947ರಲ್ಲಿ ಶೇ.20ಕ್ಕಿಂತ ಕಡಿಮೆ ಇದ್ದ ಸಾಕ್ಷರತೆಯ ಪ್ರಮಾಣವನ್ನು ಇಂದು ಶೇ.78ರಷ್ಟಕ್ಕೆ ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಬಂದಾಗ 50 ದಶಲಕ್ಷ ಟನ್ನುಗಳಷ್ಟಿದ್ದ ವಾರ್ಷಿಕ ಕೃಷಿ ಉತ್ಪನ್ನವನ್ನು ಇಂದು 280 ದಶಲಕ್ಷ ಟನ್ನುಗಳಿಗೆ ಏರಿಸಿದ್ದೇವೆ. ಸ್ವಾತಂತ್ರ್ಯ ಬಂದಾಗ ಸರಾಸರಿ 32 ವರ್ಷ ಇದ್ದ ಜನರ ಆಯುಷ್ಯದ ಪ್ರಮಾಣವನ್ನು ಇಂದು ಸರಿಸುಮಾರು 69 ವರ್ಷಕ್ಕೆ ಏರಿಸಿದ್ದೇವೆ. ಉದ್ಯೋಗ, ವಸತಿ, ಆರೋಗ್ಯ, ಕುಡಿಯುವ ನೀರು, ರಸ್ತೆ, ದೀಪ, ಸಾರಿಗೆ ಇತ್ಯಾದಿಯಾಗಿ ಮೂಲಭೂತ ಸವಲತ್ತುಗಳನ್ನು ಒದಗಿಸಲಾಗಿದೆ. ಬಡತನ, ಹಸಿವು, ಬರಗಾಲ, ಪ್ರವಾಹಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಲಾಗಿದೆ. ಖಗೋಳ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಅಣುಶಕ್ತಿ, ರಕ್ಷಣಾ ವ್ಯವಸ್ಥೆ ಹೀಗೆ ಹಲವು ಕ್ಷೇತ್ರಗಳಲ್ಲಿ ಭಾರತ ವಿಶ್ವದ ಮೊದಲ ಹತ್ತು ದೇಶಗಳಲ್ಲಿ ಒಂದಾಗಿದೆ.
ನಮ್ಮ ಸಂವಿಧಾನ ಕೊಡಮಾಡಿರುವ ಹಲವು ಕಾನೂನುಗಳನ್ನು ಬಳಸಿಕೊಂಡು ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪರಿಣಾಮವಾಗಿ ಮಹಿಳೆಯರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಸ್ಥಿತಿಗತಿಗಳಲ್ಲಿ ಸುಧಾರಣೆಯನ್ನು ಹಾಗೂ ಅಭಿವೃದ್ಧಿಯನ್ನು ಕಾಣುತ್ತೇವೆ. ಈ ವರ್ಗಗಳ ಜನರು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಪ್ರವೇಶಿಸಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಣ, ವಿಜ್ಞಾನ, ವೈದ್ಯಕೀಯ, ವಕೀಲಿವೃತ್ತಿ, ಪತ್ರಿಕೋದ್ಯಮ, ಕ್ರೀಡಾ ಕ್ಷೇತ್ರ ಇತ್ಯಾದಿಗಳಲ್ಲಿ ಹೆಸರು ಮಾಡಿದ್ದಾರೆ.
ಇಷ್ಟೆಲ್ಲ ಸಾಧನೆಗಳಿದ್ದರೂ ಸಹ, ಮೂಲಭೂತ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ. ಇನ್ನೂ ಒಂದಷ್ಟು ಅನಕ್ಷರಸ್ಥರು, ನಿರುದ್ಯೋಗಿಗಳು, ವಸತಿಹೀನರು, ಭಿಕ್ಷುಕರು ನಮ್ಮ ಮುಂದೆ ಇದ್ದಾರೆ. ಎಲ್ಲರಿಗೂ ಶುದ್ಧವಾದ ಕುಡಿಯುವ ನೀರು, ಆರೋಗ್ಯದ ಸೌಲಭ್ಯ, ಎಲ್ಲಾ ಹಳ್ಳಿಗಳಿಗೂ ರಸ್ತೆ, ವಿದ್ಯುತ್ ದೀಪ, ಇತ್ಯಾದಿಗಳನ್ನು ಒದಗಿಸಲು ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಕೃಷಿ ಬಿಕ್ಕಟ್ಟು ಮತ್ತು ಕೈಗಾರಿಕಾ ಬಿಕ್ಕಟ್ಟು ದೇಶವನ್ನು ಕಾಡುತ್ತಿದೆ. ನಾವೆಲ್ಲರೂ ಇನ್ನೂ ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ, ಒಗ್ಗಟ್ಟಾಗಿ ಕೆಲಸ ಮಾಡಿದರೆ, ನಮ್ಮ ನೀತಿಯಲ್ಲಿ ಸ್ವಲ್ಪ ಬದಲಾವಣೆಯನ್ನು ತಂದುಕೊಂಡು, ಆಡಳಿತದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು, ಆಧುನಿಕ ವಿಜ್ಞಾನದ ಸಾಧನೆಗಳನ್ನು ಬಳಸಿಕೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.








