ಬೆಳಗಾವಿ: ಮಾನವ ಬಂಧುತ್ವ ವೇದಿಕೆ ವತಿಯಿಂದ ಗೋಕಾಕ್ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಬಸವ ಪಂಚಮಿಯನ್ನು ಆಯೋಜಿಸಲಾಗಿತ್ತು. ನಾಗರ ಪಂಚಮಿಯಂದು ಹುತ್ತ, ಹಾವು, ಕಲ್ಲು ಮತ್ತು ಲೋಹದ ನಾಗರ ಮೂರ್ತಿಗಳಿಗೆ ಹಾಲೆರೆಯುವ ಬದಲಿಗೆ ಗರ್ಭಿಣಿಯರು, ರೋಗಿಗಗಳಿಗೆ ಹಾಲು, ಹಣ್ಣು ಮತ್ತು ಬಿಸ್ಕೆಟ್ ವಿತರಣೆ ಮಾಡಲಾಯಿತು. ಈ ಸಮಾರಂಭಕ್ಕೆ ಸತೀಶ್ ಶುಗರ್ಸ್ ನಿರ್ದೇಶಕಿ ಪ್ರಿಯಾಂಕ ಜಾರಕಿಹೊಳಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತಾಡಿದ ಶಿಕ್ಷಣ ಸಮನ್ವಯಾಧಿಕಾರಿ ರಮೇಶ್ ಕೋಲ್ಕಾರ್, ಸತೀಶ್ ಜಾರಕಿಹೊಳಿಯವರು ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರ ಪಂಚಮಿ ಬದಲಿಗೆ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಹಾಲನ್ನು ವ್ಯರ್ಥವಾಗಿ ಚೆಲ್ಲುವುದಕ್ಕಿಂತ ಬಡವರು, ಶೋಷಿತರು, ಗರ್ಭಿಣಿಯರು, ವೃದ್ಧರಿಗೆ ಮತ್ತು ಅನಾಥಾಶ್ರಮ ಹಾಗೂ ವೃದ್ಧಾಶ್ರಮದಲ್ಲಿರುವವರಿಗೆ ಕೊಡುವ ಕೆಲಸವನ್ನು ಕಳೆದ 8 ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ನಡೆಸಿಕೊಂಡು ಬರುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಾದ್ಯಂತ ಬಸವ ಪಂಚಮಿ ಕಾರ್ಯಕ್ರಮ ಜನಪ್ರಿಯವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಜನರು ಆಚರಿಸಲು ಮುಂದಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಕಾಂಗ್ರೆಸ್ ನಾಯಕ ವಿವೇಕ್ ಜತ್ತಿ, ಹಿಲ್ ಗಾರ್ಡನ್ ಕಚೇರಿ ಸಿಬ್ಬಂದಿ ಎ.ಬಿ.ಖಾಜಿ, ಗೋಕಾಕ್ ತಾಲೂಕು ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರ ಅಂಟಿನ್ ಮತ್ತು ಇತರ ಹಿರಿಯ ಮತ್ತು ಕಿರಿಯ ವೈದ್ಯರು, ಸಿಬ್ಬಂದಿ ಮತ್ತು ನಾಗರಿಕರು ಹಾಜರಿದ್ದರು. ಇದೇ ವೇಳೆ ಪ್ರಿಯಾಂಕ ಜಾರಕಿಹೊಳಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿವಿಧ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ನಾಗರಿಕರಿಗೆ ಪ್ರಿಯಾಂಕ ಜಾರಕಿಹೊಳಿ, ರವೀಂದ್ರ ನಾಯ್ಕರ್, ರವೀಂದ್ರ ಅಂಟಿನ್, ರಮೇಶ್ ಕೋಲ್ಕಾರ್, ಸಂತೋಷ್ ಮೆಳವಂಕಿ, ಆಂಜಿನಪ್ಪ ಲೋಕಿಕೆರೆ, ಮಹಾಲಿಂಗಪ್ಪ ಆಲಬಾಳ, ಸಂತೋಷ್ ಪಾಟೀಲ್, ಮೋಹಸಿನ್ ಹುದಲಿ, ಡಾ.ಪ್ರದೀಪ್ ಮಾಲ್ಗುಡಿ ಸೇರಿದಂತೆ ಇನ್ನಿತರರು ಹಾಲು, ಹಣ್ಣು, ಬಿಸ್ಕೆಟ್ ವಿತರಿಸಿದರು.