ಡಾ. ಹೆಚ್.ಎಸ್.ಅನುಪಮ
ಇಲ್ಲಿ ಸೆರಿರುವ ಎಲ್ಲರಿಗೂ ನನ್ನ ನಮಸ್ಕಾರ. ಡಿಸೆಂಬರ್ 6 ನೇ ತಾರೀಖು ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯ ದಿನವೇ ಅದನ್ನು ಪರಿವರ್ತನ ದಿನವೆಂದು ಪರಿವರ್ತಿಸಿ, ಬದಲಾವಣೆಯೇ ಜಗದ ನಿಯಮವೆಂದು, ಬುದ್ಧನನ್ನು ವಿಭಿನ್ನವಾಗಿ ನೆನಪಿಸಿಕೊಳ್ಳಲು ಮಾಡಿರುವ, ಮಾನವ ಬಂಧುತ್ವ ವೇದಿಕೆಯ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ, ನನ್ನ ಕೆಲವು ವಿಚಾರಗಳನ್ನು ಹೇಳುವುದಕ್ಕೆ ಇಚ್ಛಿಸುತ್ತೇನೆ.
ಈ ಕಾರ್ಯಕ್ರಮ ನಡೆಯುತ್ತಿರವ ಸ್ಥಳ ಸ್ಮಶಾನವಾಗಿರುವುದರಿಂದ ಎರಡು ಶವಗಳು ದಹನವಾಗುತ್ತಿವೆ. ನಮ್ಮ ಮಧ್ಯೆಯೆ ನಮ್ಮ ಪೂರ್ವಜರು ಮಲಗಿದ್ದಾರೆ. ಘೋರಿಗಳೂ ಕೂಡ ಇಲ್ಲೇ ಇವೆ. ಅವರೆಲ್ಲರ ಸಮ್ಮುಖದಲ್ಲಿ ನಾವೆಲ್ಲರು ಪರಿವರ್ತನೆಗಾಗಿ ಇಲ್ಲಿ ಸೇರಿದ್ದೇವೆ. ಇದೊಂದು ಅನನ್ಯ ಸಮಾವೇಶವೆಂದು ಭಾವಿಸುತ್ತೇನೆ. ನಾನು ವೈದ್ಯೆ ಆಗಿರುವುದರಿಂದ ಪದೆಪದೇ ನಾನೊಂದು ಸನ್ನಿವೇಶವನ್ನು ಎದುರು ನೋಡುತ್ತಿರುತ್ತೇನೆ. ತುಂಬಾ ಗಂಭೀರವಾಗಿರುವ ರೋಗಿಗಳನ್ನು ಯಾವುದೋ ಕಾಡಿನಲ್ಲಿ, ಯಾರದ್ದೋ ಟೆಂಪೋದಲ್ಲಿ, ಇನ್ನೇನದ್ದರಲ್ಲೋ ಹಾಕಿ ಕರೆದುಕೊಂಡು ಬರುತ್ತಾರೆ. ಹಳ್ಳಿಗಳಿಂದ. ನಾವು ಪಲ್ಸ್ ನೋಡಿ, ಬೀಪಿ ನೋಡಿ, ಇಲ್ಲ ನೀವು ಕರೆದುಕೊಂಡು ಬರುವುದರಲ್ಲೇ ಈ ವ್ಯಕ್ತಿ ತೀರಿಕೊಂಡಿದ್ದಾರೆ ಎಂದು ಹೇಳಿದ ಮೇಲೆ ತಂದಿರುವ ವಾಹನ ಆ ಶವವನ್ನು ತೆಗೆದುಕೊಂಡು ಹೋಗುವುದಕ್ಕೆ ಒಪ್ಪುವುದಿಲ್ಲ. ಜೀವ ಹೋಗಿದೆ ಎಂದು ಗೊತ್ತಾಗುವುದಕ್ಕೂ ಮೊದಲು ಬದುಕಿರುವ ಮನುಷ್ಯ ಎಂದು ಇರುವಾಗ ವಾಹನದಲ್ಲಿ ಹಾಕಿಕೊಂಡು ಬರುತ್ತಾರೆ. ನಾವು ನೋಡಿ ಇಲ್ಲ ಇದಾಗಲೇ ಶವವಾಗಿದೆ. ಇದರಲ್ಲಿ ಜೀವವಿಲ್ಲ ಎಂದು ಹೇಳಿದ ಮೇಲೆ ಹೆದರಿ ವಾಹನದಲ್ಲಿ ಹಾಕದೆ, ಅದನ್ನು ಹಾಗೆಯೇ ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಇಟ್ಟಿರುತ್ತಾರೆ. ಆಮೇಲೆ ಅದಕ್ಕೆ ಆಂಬುಲೆನ್ಸ್ ಬರಬೇಕು ಅಥವಾ ಅದಕ್ಕೆಂದೆ ಇಟ್ಟಿರುವಂತಹ ಶವಾಗಾರ ವಾಹನ ಬರಬೇಕು. ಇಲ್ಲಿ ನಾವು ಯಾರದ್ದು ಮೂಢನಂಬಿಕೆ ಎಂದು ಹೇಳುವುದು? ಯಾರಿಗೆ ಬುದ್ದಿ ಹೇಳುವುದು? ಗಾಡಿಯವನಿಗೋ ಅಥವಾ ಆ ಪೇಷಂಟನ್ನು ಕರೆದುಕೊಂಡು ಬಂದಿರುವಂತಹ ಸಂಬಂಧಿಕರಿಗೆ ಸಮಾಧಾನ ಹೇಳುವುದೋ. ಇಂತಹ ಇಕ್ಕಟ್ಟುಗಳಲ್ಲಿ ಹಲವಾರು ವೈದ್ಯರು ಪತ್ರಿನಿತ್ಯ ಸಿಕ್ಕಿಹಾಕಿಕೊಳ್ಳುತ್ತಿರುತ್ತಾರೆ. ಇದನ್ನು ದಿನನಿತ್ಯ ನೋಡುತ್ತಲಿದ್ದೇವೆ. ಹಾಗಾಗಿ ಸ್ಮಶಾನದ ಮಧ್ಯೆ ಈ ಕಾರ್ಯಕ್ರಮವನ್ನು ಏರ್ಪಡಿಸುವುದೇನಿದೆಯೋ ಇದು ತುಂಬಾ ಅರ್ಥಪೂರ್ಣವೆಂದು ನಾನು ಭಾವಿಸುತ್ತೇನೆ.
ಇವತ್ತು ಉರಿಯುತ್ತಿರುವ ಚಿತೆಯ ಎದುರು ನಾವು ನಿಂತು ಮಾತನಾಡುವುದಕ್ಕೆ ಯಾವ ಧೈರ್ಯವನ್ನು ಗಳಿಸಿಕೊಂಡಿದ್ದೀವೋ ಇದೇ ಧೈರ್ಯವನ್ನು ಜನಸಾಮಾನ್ಯರಿಗೂ ಕೂಡ ನಾವು ಮನೆಗೆ ಹೋಗಿ ವಾಪಸ್ಸು ಕೊಡುವುದಕ್ಕೆ ಸಾಧ್ಯವಾಗಬೇಕು. ನೋಡಿ ನಾನು ಸ್ಮಶಾನದ ಎದುರಲ್ಲಿ ಶವ ಸಾಕ್ಷಿಯಾಗಿ ಮಾತನಾಡಿ ಬಂದಿದ್ದೇನೆ. ಹಾಗಾಗಿ ಬರೀ ಮನುಷ್ಯರ ಸಾಕ್ಷಿ ಅಷ್ಟೇ ಅಲ್ಲ, ಶವ ಸಾಕ್ಷಿಯಾಗಿ ಆಡಿರುವಂತಹ ಮಾತುಗಳು ಇನ್ನೂ ತೂಕದ್ದಾಗಿರಬೇಕು. ಏಕೆಂದರೆ ಅದನ್ನು ನಾವು ಸ್ವರ್ಗ-ನರಕವೆಂದು ನಂಬುತ್ತೇವೋ, ಬಿಡುತ್ತೇವೋ ಆ ಚೇತನಗಳು ಕೂಡ ನಮ್ಮ ಜೊತೆಗೆ ಇದ್ದು ಹೋಗುತ್ತಿರುವುದರಿಂದ ನಾವು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿರುತ್ತದೆ. ಆ ಒಂದು ಪ್ರತಿಜ್ಞೆಯ ಜೊತೆಗೆ ನಮ್ಮ ಮಾತುಗಳು, ಕ್ರಿಯೆಗಳು ಇರಬೇಕಾಗುತ್ತದೆಂದು ನಾನು ಭಾವಿಸುತ್ತೇನೆ.
ಒಂದೆರಡು-ಮೂರು ಪ್ರಕರಣಗಳನ್ನ ನೆನಪು ಮಾಡಿಕೊಳ್ಳುತ್ತಾ ನನ್ನ ಮಾತುಗಳನ್ನು ಹೇಳುವುದಕ್ಕೆ ಇಚ್ಛಿಸುತ್ತೇನೆ. ಇತ್ತೀಚೆಗೆ ನಾನೊಂದು ವರದಿಯನ್ನು ಓದಿದೆ. ಅದರಲ್ಲಿ ಸಂಶೋಧನ ವರದಿಯನ್ನು ಓದಿದೆ. ಇದೇ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಒಂದು ಮೂರ್ನಾಲ್ಕು ವರ್ಷದ ಕೆಳಗೆ ಹೆಸರು ಬದಲಿಸುವ ಒಂದು ಅಭಿಯಾನ ಶುರುವಾಯಿತು. ಸತಾರ ಜಿಲ್ಲೆಯಲ್ಲಿ 280 ಹೆಣ್ಣು ಮಕ್ಕಳನ್ನು ಗುರುತಿಸಿದರು. ಅವರನ್ನೇಕೆ ವಿಶೇಷವಾಗಿ ಗುರುತಿಸಿದರೆಂದರೆ ಅವರೆಲ್ಲರಿಗು ಒಂದೇ ಹೆಸರನ್ನಿಟ್ಟಿದ್ದರು ಆ ಹೆಸರು “ನಕುಶಿ” ಎಂದು. ನಕುಶಿ ಮತ್ತು ನಕುಶ ಎಂದು ಹೆಸರಿಟ್ಟುಕೊಂಡಿರುವ ಎಲ್ಲ 250 ಹೆಣ್ಣು ಮಕ್ಕಳನ್ನು, 1 ವರ್ಷದಿಂದ 48 ವರ್ಷದ ಎಲ್ಲ ವಯೋಮಾನ ಹೆಣ್ಣು ಮಕ್ಕಳನ್ನು ಅವರ ತಂದೆ-ತಾಯಿಯ ಮೂರನೆಯ ಅಥವಾ ನಾಲ್ಕನೆಯ ಹೆಣ್ಣು ಮಕ್ಕಳಾಗಿದ್ದರು. ಕುಟುಂಬದ ನಂಬಿಕೆ ಏನಿತ್ತೆಂದರೆ ನಕುಶಿ ಎಂದರೆ ಇಲ್ಲಿಯ ಭಾಷೆಯಲ್ಲಿ ವಲ್ಲದ ಅಥವಾ ಬೇಡ ಅಂತ ಹೇಳಿದ ಹಾಗೆ. ಒಂದು ಹೆಣ್ಣು ಮಗುವಿಗೆ ನಕುಶಿ ಅನ್ನುವ ಹೆಸರಿಡುವ ಮೂಲಕ, ಮತ್ತವಳಿಗೆ ನಾಮಕರಣ ಮಾಡಲಾರದೆ, ಕಿವಿ ಚುಚ್ಚಲಾರದೆ, ಉಳಿದೆಲ್ಲ ಮಕ್ಕಳಿಗೆ ಬಂಗಾರವಿಟ್ಟರೆ ಇವರ ಕಿವಿಗೆ ಬಂಗಾರ ಇಡುವುದಿಲ್ಲ. ಹೆಣ್ಣು ಮಗು ನೋಯಬೇಕು. ಹಾಗೆ ನೊಂದುಕೊಂಡಾಗಲಾದರೂ ಹೆಣ್ಣನ್ನೇ ಮತ್ತೆಮತ್ತೆ ಕೊಡುತ್ತಿರುವ ಆ ದೇವರು, ಇಲ್ಲಪ್ಪ ಇವರಿಗೊಂದು ಗಂಡು ಬೇಕಾಗಿದೆ, ಮುಂದೆ ಒಂದು ಗಂಡು ಹುಟ್ಟಿಸುತ್ತಾನೆ ಅನ್ನುವಂತಹ ಒಂದು ನಂಬಿಕೆಯ ಮೇಲೆ, 285 ಶಾಲೆಗೆ ಹೋಗುವಂತಹ ಹೆಣ್ಣು ಮಕ್ಕಳು “ನಕುಶಿ” ಎನ್ನುವ ಹೆಸರಿನಲ್ಲಿದ್ದರು. ಅವರನ್ನು ಸತಾರ ಜಿಲ್ಲೆಯ ಅಡ್ಮಿನಿಷ್ಟ್ರೇಶನ್ ಗುರುತಿಸಿ, 2011 ರಲ್ಲಿ ಅವರೆಲ್ಲರ ಹೆಸರು ಬದಲಿಸುವಂತಹ ಅಭಿಯಾನವನ್ನು ಶುರುಮಾಡಿದರು. ಕೆಲವರು ಅವರೇ ತಮ್ಮ ಹೆಸರುಗಳನ್ನು ಆಯ್ದುಕೊಂಡರು. ಇನ್ನು ಕೆಲವರು ಅವರ ತಾಯಿ-ತಂದೆಯರು ಅಥವಾ ಪಾಲಕರು ಆಯ್ದುಕೊಂಡರು. ಆದಾದ 2 ವರ್ಷ ಕಳೆದ ಮೇಲೆ ಒಂದು ಸರ್ವೇ ನಡೆಯಿತು. ಹೆಸರು ಬದಲಿಸಿಕೊಂಡ ಮೇಲೆ ಹೆಸರು ಬದಲಿಸಿಕೊಂಡವರ ಜೀವನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದು. ತುಂಬಾ ಜನ ಹೇಳಿದರು ನನಗೆ ಸರ್ಕಾರಿ ದಾಖಲೆಗಳಲ್ಲಿ ಸುನಿತ, ಐಶ್ವರ್ಯ ಎಂದು ಬೇರೆ ಹೆಸರು ಬಂದಿದೆ, ಆದರೆ ನಮ್ಮ ಹಳ್ಳಿಯಲ್ಲಿ ಈಗಲೂ ನನ್ನನ್ನು ನಕುಸ ಎಂದೇ ಕರೆಯುತ್ತಾರೆ. ಮತ್ತೆ ಕೆಲವರು ಹೇಳುತ್ತಾರೆ, ನೀನು ಹೆಸರು ಬದಲಾಯಿಸಿದ ಮಾತ್ರಕ್ಕೆ ನಿನ್ನ ತಾಯಿ-ತಂದೆಗೆ ಬೇಕಾದವಳಾಗಿಬಿಡುತ್ತೀಯಾ? ನೀನು ಇವತ್ತಿಗೂ ಕೂಡ ಬೇಡವಾದವಳೆ. ಮತ್ತೆ ಒಬ್ಬ ಅಪ್ಪ ಹೇಳುತ್ತಾನೆ, ಬರೀ ಇವರ ಹೆಸರು ಬದಲಾವಣೆ ಮಾಡಿದರೆ ಆಯಿತೆ, ಅವಳನ್ನು ನಾನು ಖರ್ಚು ಮಾಡೋದಕ್ಕೆ ಎಷ್ಟು ವರದಕ್ಷಿಣೆ ಕೊಡಬೇಕಾಗುತ್ತದೋ ಅಷ್ಟು ವರದಕ್ಷಿಣೆಯನ್ನು ಸರ್ಕಾರ ಕೊಟ್ಟರೆ ನಾನು ನಕುಸ ಬದಲು ಐಶ್ವರ್ಯ ಎಂದು ಕರೆಯುತ್ತೇನೆ ಎಂದು ಅವರ ತಂದೆ ಹೇಳುತ್ತಾರೆ. ಹೀಗೆ ಕೇವಲ ಹೆಸರು ಬದಲಿಸುವಿಕೆ ಕಾನೂನುಗಳಿಂದ ಮಾತ್ರ ಬದಲಾಗುವುದಿಲ್ಲ ಎಂದು ಹೇಳುವುದಕ್ಕೆ ಇದೊಂದು ಘಟನೆಯಿಂದ ಹೇಳಲು ನಾನು ಇಚ್ಛಿಸಿದೆ. ತುಂಬಾ ಜನರು ನೀವು ಓದಿರಬಹುದು, ಇದೇ ಮಹಾರಾಷ್ಟ್ರದ ಅಹಮದಾ ನಗರ ಜಿಲ್ಲೆಯಲ್ಲಿ, ಶನಿಸಿಂಗ್ಣಾಪುರ ಅನ್ನುವ ಒಂದು ಊರು. ಆ ಊರಿನಲ್ಲಿ ಐದೂವರೆ ಎತ್ತರದ ಒಂದು ಕಪ್ಪು ಕಲ್ಲಿನ ಒಂದು ಬಂಡೆ ಇದೆ. ಅದು ಮೂರ್ತಿ ಅಲ್ಲ. ಅದನ್ನು ನಮ್ಮ ಜನ ಶನಿ ಎಂದು ನಂಬಿಕೊಂಡಿದ್ದಾರೆ. ಶನಿ ಎಂದರೆ ಸಿಕ್ಕಾಪಟ್ಟೆ ಹೆದರಿಕೆ. ಸಾಡೇಸಾತಿ ಎಂದು ಕೆಲವರು ಹೇಳುತ್ತಾರೆ. ಶನಿ ಎಂಥಲೂ ಹೆಸರು ಹೇಳುವುದಿಲ್ಲ. ಹೇಳಿಬಿಟ್ಟರೆ ಎಲ್ಲಿ ಅವನು ಕಣ್ಣು ಬಿಡುತ್ತಾನೋ ಎಂಬ ಭಯ. ನೋಡಿ ಎಂತಹ ಐರನಿ ಎಂದರೆ, ಆ ಶನಿಯನ್ನು ಮುಟ್ಟಿ, ಅಳ್ಳೆಣ್ಣೆ ಹಾಕಿ, ಪೂಜೆ ಮಾಡಬೇಕಾದ ಅಧಿಕಾರ ಯಾರಿಗಿದೆ ಎಂದರೆ, ಕೇವಲ ಗಂಡಸರಿಗೆ ಮಾತ್ರ. ಗಂಡಸರು ಬಯಲಲ್ಲಿರುವಂತಹ ಆ ಐದುವರೆ ಅಡಿಯ ಕಪ್ಪು ಕಲ್ಲಿನ ಮೂರ್ತಿಯನ್ನು ಎಲ್ಲರೂ ಹೋಗಿ ಮುಟ್ಟಿ, ಎಳ್ಳೆಣ್ಣೆ ಹಾಕಿ, ದೀಪ ಹಚ್ಚಿ, ಪೂಜೆ ಮಾಡಿ ತಮಗೆ ಅಂಟಿಕೊಂಡಿರುವ ಶನಿಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದರಂತೆ. ಇತ್ತೀಚೆಗೆ ಒಂದು ಹೆಣ್ಣು ಮಗಳಿಗೆ ತುಂಬಾ ಸಂಕಟವಾಯಿತು. ಆಕೆಯು ಶನಿಮಹಾತ್ಮನ ಎದುರಿಗೆ ಹೋಗಿ ಮುಟ್ಟಿದಳು. ಮುಟ್ಟಿ, ಎಣ್ಣೆ ಹಾಕಿ, ದೀಪ ಹಚ್ಚಿ, ಶನಿ ಮಹಾತ್ಮ ನನ್ನನ್ನು ಬಿಟ್ಟು ಹೋಗಪ್ಪಾ, ನನಗೆ ಬಹಳ ಕಷ್ಟಗಳು ಬಂದಿದ್ದಾವೆ ಎಂದು ಹೇಳುತ್ತಾಳೆ. ನೋಡಿ ಶನಿಮಹಾತ್ಮನಿಗಿಂತಲೂ ಶನಿಮಹಾತ್ಮನ ಹೆಚ್ಚು ಫೋರ್ಸ್ ಹೆಂಗಸಿಗಿದೆ. ಏಕೆಂದರೆ ಹೆಣ್ಣು ಮುಟ್ಟಿದ ಕೂಡಲೇ ಆ ಶನಿಯ ಪೋರ್ಸೆಲ್ಲವೂ ಕೂಡ ಇಳಿದು ಹೋಗುತ್ತದಂತೆ. ಹಾಗೆ ಹೇಳಿ ಈಗ ಅಲ್ಲಿ ಶನಿ ಸಿಂಗ್ಣಾಪುರದಲ್ಲಿ ಶನಿ ದೇವರ ಶಕ್ತಿಯನ್ನು ವೃದ್ಧಿಸಲು ಹೋಮ-ಹವನಗಳು ನಡೆಯುತ್ತಲಿವೆ. ಅದಕ್ಕೆ ಊರು, ಊರವರಿಂದ ಎಷ್ಟು ಒತ್ತಡ ಬಂದಿತೆಂದರೇ, ಈ ಹೆಣ್ಣು ಮಗಳು ಮುಟ್ಟಿದ್ದರಿಂದಲೇ ನಮ್ಮ ಶನಿ ದೇವರ ಮಹಾತ್ಮೆ ಎಲ್ಲ ಕಡಿಮೆ ಆಯಿತು. ಹಾಗಾಗಿ ಆ ದೇವರಲ್ಲಿ ಮತ್ತೆ ಪವಾಡವನ್ನು ಮರುಗಳಿಸಿಕೊಡಲು ನೀವು ಹೋಮ, ಯಜ್ಞ, ಯಾಗಾದಿಗಳನ್ನು ಮಾಡಬೇಕೆಂದು ಊರಿನವರಿಂದಲೇ ಒತ್ತಡ ಬಂದಿತು. ಅಂದರೆ ಶನಿಯ ಮುಟ್ಟಿದ ಮಾತ್ರಕ್ಕೆ ಶನಿಯ ಪೋರ್ಸೆಲ್ಲವೂ ಇಳಿದು ಹೋಗುತ್ತದೆಂದರೇ, ಹೆಣ್ಣುಮಕ್ಕಳಿಗೆ ಅದೆಷ್ಟು ಶಕ್ತಿ ಇರಬಹುದಲ್ಲವೇ? ಇದನ್ನು ನಾವು ಹೆಮ್ಮೆಯೆಂದು ತಿಳಿದುಕೊಳ್ಳುವುದೋ ಅಥವಾ ಮೂಢನಂಬಿಕೆ ಎಂದು ತಿಳಿದುಕೊಳ್ಳುವುದೋ ತಿಳಿಯುತ್ತಿಲ್ಲ. ಇಂತಹ ಒಂದು ಕಾಲ ಘಟ್ಟದಲ್ಲಿ ನಾವಿದ್ದೇವೆ. ಇದನ್ನು ನಾನು ಏಕೆ ಒತ್ತು ಕೊಟ್ಟು ಹೇಳುತ್ತಿದ್ದೇನೆಂದರೇ, ನಾವಿವತ್ತು ಮೂಢನಂಬಿಕೆ ವಿರೋಧಿ ಕಾನೂನಿನ ಬಗ್ಗೆ ಮಾತನಾಡುತ್ತಲಿದ್ದೇವೆ. ಮೂಢನಂಬಿಕೆ ತೊಲಗಬೇಕೆಂದು ಮಾತನಾಡುತ್ತಲಿದ್ದೇವೆ. ಈ ಶನಿಸಿಂಗ್ಣಾಪುರದಲ್ಲಿ ನರೇಂದ್ರ ಧಾಬೋಲ್ಕರ್ ವೈಜ್ಞಾನಿಕ ವಿಚಾರವಾದಿ ಸಮಿತಿ ಅಸ್ತಿತ್ವದಲ್ಲಿದೆ. ಅದು ನಿರಂತರವಾಗಿ ಪವಾಡ ಬಯಲು ಕಾರ್ಯಕ್ರಮಗಳನ್ನು ಮಾಡುತ್ತಾ, ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಹಾಗಾದರೆ ಆ ಪ್ರಯತ್ನಗಳೆಲ್ಲವೂ ಎಲ್ಲಿಗೆ ಹೋದವು? ಆ ಹೆಣ್ಣು ಮಗಳು ಶನಿ ದೇವರನ್ನು ಮುಟ್ಟಿದರೆ ತನ್ನ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ ಎಂದು ಅಂದುಕೊಂಡಿದ್ದಳು. ಅವಳದ್ದು ಮೂಢನಂಬಿಕೆಯೋ? ದೇವರನ್ನು ಒಬ್ಬ ಹೆಣ್ಣು ಮುಟ್ಟಿದ ಮಾತ್ರಕ್ಕೆ ಆ ಶನಿ ದೇವರ ಪವಾಡ ಶಕ್ತಿಯೆಲ್ಲಾ ಕಳೆದು ಹೋಯಿತು ಎಂದು ಹೇಳಿದ್ದ ಜನರದ್ದು ಮೂಢನಂಬಿಕೆಯೋ? ಯಜ್ಞ-ಯಾಗಾದಿ ಮಾಡುವುದರಿಂದ ಆ ಕಲ್ಲಿಗಿರುವ ಶಕ್ತಿಯೆಲ್ಲಾ ಮತ್ತೆ ಮರುಕಳಿಸುವುದೆಂದು ಭಾವಿಸಿರುವ ಭಕ್ತರದ್ದು ಮೂಢನಂಬಿಕೆಯೋ? ನೀವೇನಾದರೂ ಮೂಢನಂಬಿಕೆಯ ಕಾಯ್ದೆಯಲ್ಲಿ ಶಿಕ್ಷೆ ಕೊಡುವುದಾದರೇ ಈ ಮೂವರಲ್ಲಿ ಯಾರನ್ನು ಶಿಕ್ಷೆಗೆ ಗುರಿಪಡಿಸುತ್ತೀರಿ?
ಇದೇ ವಿಚಾರವನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಗ್ಗೆ ಕೂಡ ಹೇಳಬಹುದು. ಕಳೆದ ದಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯವರಾಗಿರುವಂತಹ ಗೋಪಾಲಕೃಷ್ಣ ಎನ್ನುವವರು ಹೇಳುತ್ತಾರೆ ಅಕಸ್ಮಾತ್ ಮುಟ್ಟಾಗಿದ್ದಾರೋ ಇಲ್ಲವೋ ಎಂದು ಕಂಡುಹಿಡಿಯುವ ಮಿಷನ್ ಏನಾದರೂ ಬಂದರೆ, ಅದನ್ನು ದೇವಸ್ಥಾನದ ಬಾಗಿಲಿಗೆ ಅಳವಡಿಸಿ, ಬರುವಾಗ ಅವರು ಆಗಿಲ್ಲವೆಂದು ಖಚಿತವಾದರೆ ನಾವು ಆಗ ಬೇಕಾದರೇ ಹೆಣ್ಣು ಮಕ್ಕಳನ್ನೂ ನಾವು ಒಳಗೆ ಬಿಡುತ್ತೇವೆಂದು ಹೇಳುತ್ತಾರೆ. ಆಹಾ ದೇವರ ಮಹಾತ್ಮೆಯೇ! ಇಷ್ಟಾದರೂ ಕೂಡ ಎಂಟತ್ತು ವರ್ಷಗಳ ಕೆಳಗೆ ನಮ್ಮ ಸಿನಿಮ ತಾರೆ ಜಯಮಾಲ ಗಂಡಸಿನ ವೇಷ ಧರಿಸಿ, ಹದಿನೆಂಟು ಮೆಟ್ಟಲು ಹತ್ತಿ ಬಂದೇ ಬಿಟ್ಟರು. ಅದಾದ ನಂತರ ಎಷ್ಟೋ ವರ್ಷಗಳ ಮೇಲೆ ಅವರಿಗೆ ಸಂಕಟವಾದಾಗ ಅವರೇ ಜೋತಿಷಿಯ ಹತ್ತಿರ ಹೇಳಿಕೊಂಡರು. ಹೋಗಬಾರದಾಗಿದ್ದಂತಹ ಒಂದು ನಿಷಿದ್ಧ ದೇವಸ್ಥಾನಕ್ಕೆ ನಾನು ಹೋಗಿದ್ದರಿಂದ ನನಗೆ ಈ ಸಂಕಟ ಬಂದಿದೆಯೆ? ಅವರು ತಾನೆ ಹೇಳಿಕೊಂಡಿದ್ದರಿಂದಲೇ ಅದು ಜಗದ್ಜಾಹೀರವಾಗಿ ಎಲ್ಲ ಕಡೆಗೆ ಚರ್ಚೆಯಾಯಿತು. ಗೊತ್ತಿಲ್ಲದಂತೆ ಒಬ್ಬ ಹೆಂಗಸು ದೇವಸ್ಥಾನ ಪ್ರವೇಶ ಮಾಡಿದ್ದಳು ಎಂದು ತಿಳಿದಾಕ್ಷಣ ಅದು ದೇವಸ್ವಾಮ್ಯದ ಕರ್ತವ್ಯ ಲೋಪ ಅನ್ನುವ ಮಟ್ಟಿಗೆ ಚರ್ಚೆಗಳು ಬಂದವೇ ಹೊರತು, 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳಿಗೆ ಮೂರನೇ ಒಂದು ಭಾಗ ಮೀಸಲಾತಿ ಕೊಡಬೇಕಾಗಿರುವಂತಹ ಕಾಲದಲ್ಲೂ ಯಾಕೆ ಒಬ್ಬ ಹೆಣ್ಣು ಮಗಳು, ಆ ದೇವರ ಭಕ್ತೆ ಆ ದೇವಸ್ಥಾನಕ್ಕೆ ಹೋಗಬಾರದೆಂದು ಯಾರೂ ಸಪೋರ್ಟಿಗೆ ಬರಲಿಲ್ಲ. ಯಾವ ಭಕ್ತರ ಮನಸ್ಸಿನಲ್ಲೂ ಹಾಗೆ ಅನ್ನಿಸಲಿಲ್ಲ ಅಥವಾ ಅನ್ನಿಸಿದವರೂ ಕೂಡ ಮುಕ್ತವಾಗಿ ಹೇಳುವಂತಹ ಧೈರ್ಯವನ್ನು ತೋರಲಿಲ್ಲ. ಇಲ್ಲಿ ನಾವು ಮೂಢನಂಬಿಕೆಯೆಂದು ಹೇಳುವುದಾದರೇ ಯಾರಲ್ಲಿ ಮೂಢನಂಬಿಕೆ?
ಬೇಕಾದಷ್ಟು ಶ್ರೀಮಂತಿಕೆಯನ್ನು ಹೊಂದಿರುವ, ಹೆಸರು ಪಡೆದುಕೊಂಡಿರುವ ಜಯಮಾಲರದ್ದು ಮೂಢನಂಬಿಕೆಯೋ ಅಥವಾ ಹೆಣ್ಣಿನ ಮುಟ್ಟನ್ನ ನಿರ್ಧರಿಸುವಂತಹ ಡಿಟೆಕ್ಟರ್ ಮಿಷನ್ ಇದ್ದರೆ ಹೆಣ್ಣು ಮಕ್ಕಳನ್ನು ಒಳಗೆ ಬಿಡುತ್ತೇವೆ ಎನ್ನುವ ಗೋಪಾಲಕೃಷ್ಣನದ್ದು ಮೂಢನಂಬಿಕೆಯೋ? ಅಥವಾ ಅದನ್ನು ತಪ್ಪೆಂದು ಹೇಳಲಿಕ್ಕಾಗದೇ ಅದನ್ನು ಹಾಗೆಯೇ ಒಪ್ಪಿಕೊಂಡು ಕೋಟ್ಯಾಂತರ ಸಂಖ್ಯೆಯಲ್ಲಿ ಇವತ್ತಿಗು ಕೂಡ ಅಯ್ಯಪ್ಪ ಸ್ವಾಮಿಯ ವ್ರತವನ್ನು ನಿಯಮಧಾರಿಗಳಾಗಿ ಹೋಗಿಬರುತ್ತಿರುವವರದು ಮೂಢನಂಬಿಕೆಯೋ? ಇದರಲ್ಲಿ ಯಾರದ್ದು ಮೂಢನಂಬಿಕೆ?
ನನಗನ್ನಿಸುತ್ತದೆ ಮೂಢನಂಬಿಕೆಯನ್ನು ನಾವಷ್ಟು ಸುಲಭವಾಗಿ ಗೆರೆ ಎಳೆದು, ಇದು ತಪ್ಪು-ಸರಿ ಎಂದು ಹೇಳಿ ಕಾಯ್ದೆಯಲ್ಲಿ ನಿರ್ಧರಿಸಲಾಗದು. ಮೂಢನಂಬಿಕೆ ಕಾನೂನುಗಳು ಬರಬೇಕೆಂದು ಯಾರೆಲ್ಲ ಹೋರಾಡುತ್ತಿರುವರೋ ಅವರೆಲ್ಲರಿಗೂ ಗೌರವಿಸುತ್ತಾ, ನಾನೊಂದು ವಿಚಾರವನ್ನು ಮತ್ತೆಮತ್ತೆ ಹೇಳಲು ಇಚ್ಛಿಸುತ್ತೇನೆ. ಮನದಲ್ಲಿ ಪರಿವರ್ತನೆ ಆಗದ ಹೊರತು, ಬರೀ ಮೂಢನಂಬಿಕೆಯ ಕಾನೂನು ಬಂದರೆ ಏನೂ ಆಗದು. ಏಕೆಂದರೇ, ಈಗಿರುವ ಐ.ಪಿ.ಸಿ. ಸೆಕ್ಷನ್‍ಗಳು ನರಬಲಿಯನ್ನು ಶಿಕ್ಷಿಸುವುದಕ್ಕೆ ಸಾಕಾಗುವುದಿಲ್ಲವೇ? ಜನರನ್ನು ಮೂಢರನ್ನಾಗಿಸುತ್ತಿರುವ ಸ್ವಯಂ ಘೋಷಿತ ದೇವಮಾನವರನ್ನು ಶಿಕ್ಷಿಸಲು ಸಾಕಾಗುವುದಿಲ್ಲವೇ? ಈಗಿರುವ ಸಿ.ಆರ್.ಪಿ ಮತ್ತು ಐ.ಪಿ.ಸಿ ಸೆಕ್ಷನ್‍ಗಳು ಇಂತಹುದಕ್ಕೆ ಶಿಕ್ಷಿಸಲು ಸಾಕು. ಆದರೆ ಯಾಕಾಗುತ್ತಿಲ್ಲವೆಂದರೇ ಅಷ್ಟೊಂದು ಇಚ್ಛಾಶಕ್ತಿ ನಮ್ಮ ಹತ್ತಿರವಿಲ್ಲ, ಅಷ್ಟೊಂದು ಧೈರ್ಯ ನಮ್ಮ ಹತ್ತಿರವಿಲ್ಲ. ಹಾಗಿರುವಾಗ ಕೇವಲ ಒಂದು ಮೂಢನಂಬಿಕೆಯ ಕಾನೂನು ಬಂದ ಕೂಡಲೇ ಈ ಜಗತ್ತೇ ಒಂದು ವೈಚಾರಿಕಮಯ ಆಗುತ್ತದೆಂದು ನಾವು ತಿಳಿದುಕೊಂಡರೆ ಅದು ನಮ್ಮ ಪೊಳ್ಳುತನ ಆಗುತ್ತೆ ಹೊರತು, ಮತ್ತೇನೂ ಆಗಲಾರದು. ಹಾಗಾಗಿ ಮೂಢನಂಬಿಕೆಯ ಕಾನೂನಿಗೆ ನಾವು ಒತ್ತಾಯಿಸುತ್ತಲೇ ಅದರ ಜೊತೆಗೆ ತುಂಬಾ ಮುಖ್ಯವಾಗಿ ನಾವು ಮಾಡಬೇಕಾಗಿರುವಂತಹ ಕೆಲಸವೆಂದರೇ ಈ ರೀತಿಯಾಗಿ ಸ್ಮಶಾನದ ಮಧ್ಯೆ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ವಾಸ್ತು ಸುಳ್ಳೆಂದು ಹೇಳುವುದು. ಮತ್ತೆ ಒಬ್ಬ ಜನನಾಯಕನಾಗಿ ಸತೀಶ್ ಜಾರಕಿಹೊಳಿಯವರಂತವರು ಮತ್ತು ಸ್ವಾಮೀಜಿಗಳಾಗಿ ಪಂಡಿತಾರಾಧ್ಯರವರಂತವರು ಭಕ್ತರಿಗೆ ಮತ್ತು ಅನುಯಾಯಿಗಳಿಗೆ ನಾನು ಹೋಮ-ಹವನಗಳಲ್ಲಿ ನಂಬಿಕೆ ಇಟ್ಟಿಲ್ಲ, ನಾನು ವಾಸ್ತುವಿನಲ್ಲಿ ನಂಬಿಕೆ ಇಟ್ಟಿಲ್ಲ. ಆದರೂ ಕೂಡ ನನ್ನ ಬದುಕಿನಲ್ಲಿ ನಾನು ಏನೆಂದುಕೊಂಡಿದ್ದೀನೋ ಅದನ್ನು ಸಾಧಿಸುವುದಕ್ಕೆ ಸಾಧ್ಯವಾಗಿದೆ. ಸ್ವತಃ ಮಾದರಿಗಳಾಗಿ ನಿಲ್ಲುವಂತದ್ದು. ಕಾನೂನಿಗಿಂತಲೂ ಸತೀಶ್ ಜಾರಕಿಹೊಳಿಯವರ ಈ ಕ್ರಮ ಏನಿದೆಯೋ, ಪಂಡಿತಾರಾಧ್ಯರ ಆ ಮಾತುಗಳು ಮಠದ ಭಕ್ತರ ಎದುರುಗಡೆ ಹೇಳುವುದೇನಿದೆಯೋ ಅದು ತುಂಬಾ ಪರಿಣಾಮಕಾರಿಯಾಗಿ ಮೂಡುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಾವು ಅಂಬೇಡ್ಕರ್ ಅವರನ್ನು ಮತ್ತವರ ಚಿಂತನೆಯನ್ನು ನೋಡಬೇಕು. ಏಕೆಂದರೆ ಅಂಬೇಡ್ಕರ್ ಮೊದಲಿನಿಂದಲೂ ಕೂಡ ಪರಿವರ್ತನೆಯ ಬಗ್ಗೆ ಬಹಳ ಗಮನವನ್ನು ಕೊಟ್ಟಂತಹ ವ್ಯಕ್ತಿ. ಅವರು ಮಾಡಿರುವ ಪ್ರತಿಯೊಂದು ಕ್ರಿಯೆಯೂ ಕೂಡ, ಅದು ಜಾತಿ ವಿನಾಶವಿರಬಹುದು, ಹೋರಾಟ, ಸಂಘಟನೆ, ಸಂವಿಧಾನವನ್ನು ಬರೆದಿದ್ದಿರಬಹುದು, ಮಂತ್ರಿ ಆಗಿದ್ದಿರಬಹುದು, ರಾಜಿನಾಮೆ ಕೊಟ್ಟು ಹೊರಗೆ ಬಂದಿರುವುದ್ದಿರಬಹುದು. ಅಂಬೇಡ್ಕರ್ ಮಾಡಿರುವ ಪ್ರತಿಯೊಂದು ಹಂತಗಳೇನಿವೆಯೋ ಅದು ಈ ಸಮಾಜದ ಜಡತ್ವವನ್ನು ಅದರಿಂದ ಧಿಕ್ಕರಿಸಿ ಹೊರಗೆ ಬರುವುದಕ್ಕಂತಲೇ ಮಾಡಿರುವುದಾಗಿದೆ. ಕೊಟ್ಟ ಕೊನೆಯದಾಗಿ ಅವರು ಮಾಡಿರುವಂತಹ ಮತಾಂತರ ಕ್ರಿಯೆಯಿದೆಯಲ್ಲ, ಅದಂತೂ ಈ ಎಲ್ಲದರದ ಪರ್ಯಾಯವಾಗಿ ಪರಿವರ್ತನೆಯಾಗುವುದಕ್ಕೆ ಮನುಷ್ಯನಿಗೆ ಬೇಕಾದ ಮನಃಪರಿವರ್ತನೆ. ಕೇವಲ ಬಾಹ್ಯ ಪರಿವರ್ತನೆಯಿಂದ ನಮ್ಮ ಮನೆಯಲ್ಲಿರುವ ಮಾರಿ, ಮಸಣಿಯನ್ನು ತೆಗೆದು ಬುದ್ಧನ ಮೂರ್ತಿಯನ್ನು ಕೂರಿಸುವುದರಿಂದ ಯಾವ ಪರಿವರ್ತನೆಯೂ ಆಗದು. ಆಗಬೇಕಿರುವುದು ಮನಃಪರಿವರ್ತನೆ.
ಬುದ್ಧ ಒಂದೇ ಸಮಯಕ್ಕೆ ನಮ್ಮ ಅತಃಪರಿವರ್ತನೆಯ ಬಗ್ಗೆಯೂ ಹೇಳಿದ್ದಾನೆ, ಮತ್ತು ಸಾಮಾಜಿಕವಾಗಿ ನಾವು ಕೆಲಸ ಮಾಡಬೇಕೆಂದಲೂ ಹೇಳಿದ್ದಾನೆ. “ನಿನ್ನ ಬೆಳಕು ನೀನೆ, ನಿನಗೆ ನೀನೇ ಬೆಳಕು” ಎಂದು ಹೇಳುತ್ತಲೇ ಭಿಕ್ಕುವಾಗಿ ಇಡೀ ಸಮಾಜಕ್ಕಾಗಿ ಯೋಚಿಸಬೇಕೆಂದು ಹೇಳಿದ್ದಾನೆ. ಆ ಬುದ್ಧನ ದಾರಿಯನ್ನು ತುಳಿಯುವುದರ ಮೂಲಕ ಅಂಬೇಡ್ಕರ್ ನನಗೆ ನನ್ನ ಮನಃಪರಿವರ್ತನೆ ಅಂದರೆ ಸ್ವಯಂ ಪರಿವರ್ತನೆ ಹಾಗು ಸಮಾಜದ ಪರಿವರ್ತನೆ ಎರಡರ ಬಗ್ಗೆಯೂ ನೀವು ಏಕಕಾಲದಲ್ಲಿ ಗಮನ ಕೊಡಿರೆಂದು ಹೇಳಿದರು. ಅಂಬೇಡ್ಕರ್ ಹೇಳಿರುವಂತಹ ಆ ಆಶಯಗಳೇನಿವೆಯೋ ಅದನ್ನು ನಾವಿವತ್ತು ಮರೆಯುತ್ತಾ ಬಂದಿದ್ದೇವೆ. ಹಾಗಾಗಿ ನಾವು ಅಂಬೇಡ್ಕರ್ ಅವರನ್ನು ಭಾಗಶಃ ಕುರುಡರು ಆನೆಯನ್ನು ಮುಟ್ಟಿ ನೋಡುತ್ತೇವೆಯೋ ಆ ರೀತಿಯಾಗಿ ನೋಡುತ್ತಾ ಬಂದು, ಕೆಲವು ವಿಷಯಗಳನ್ನು ಮಾತ್ರವೆ ತೆಗೆದುಕೊಂಡು ಅಂಬೇಡ್ಕರ್ ಅಂದರೆ ಇದೇ ಅನ್ನುವ ಹಾಗೆ ಮಾಡುತ್ತಲಿದ್ದೇವೆ. ಇದು ನಿಜವಾಗಿಯೂ ಅಂಬೇಡ್ಕರ್ ಅವರ ಅನುಯಾಯಿಗಳಾಗಿ ನಾವು ಮಾಡುತ್ತಿರುವ ದೊಡ್ಡ ತಪ್ಪೆಂದು ನನಗೆ ಅನ್ನಿಸುತ್ತಿದೆ.
ಮೂಢನಂಬಿಕೆ ಎಂದು ನಾವು ಹೇಳುತ್ತೀವಲ್ಲ, ಜಾತಿ ಎಂಬುವುದು ಅತೀ ದೊಡ್ಡ ಮೂಢನಂಬಿಕೆ. ಈ ದೇಶದ ಮೊದಲನೇ ಮೂಢನಂಬಿಕೆ ಯಾವುದೆಂದರೇ ಜಾತಿ ಪದ್ಧತಿ. ಜಾತಿ ಪದ್ಧತಿಗೆ ಯಾವ ವೈಜ್ಞಾನಿಕ ಆಧಾರಗಳಿವೆ? ಅದಿಲ್ಲವೆಂದು ಸಾರಿ ಸಾರಿ ಹೇಳಿದ್ದಾಗಲೂ ಕೂಡ, ಈ ದೇಶದ ಪ್ರತಿಯೊಂದು ಆಗುಹೋಗು ಅದು ಸಾಮಾಜಿಕ, ರಾಜಕೀಯ, ಧಾರ್ಮಿಕ ಈ ಎಲ್ಲ ಆಗುಹೋಗುಗಳು ಕೂಡ ಜಾತಿ ಎನ್ನುವ ಒಂದು ವ್ಯವಸ್ಥೆಯ ಮೇಲೆಯೇ ನಿಂತಿರುವವು. ನಾವು ಕಟ್ಟಿಕೊಂಡಿರುವ ಮನೆಯ ಬುನಾದಿ ಇದೆಯಲ್ಲವೇ ಅದೇ ಮೂಢನಂಬಿಕೆಯ ಮೇಲೆ ನಿಂತಿರುವಾಗ ನಾವು ಮೇಲಿನ ಮಹಲಿನ ಇಮಾರತವನ್ನು ಒಂದು ಸಾರಿ ಬಿಳಿ ಬಣ್ಣ, ಒಂದು ಸಾರಿ ಹಸಿರು ಬಣ್ಣ, ಒಂದು ಸಾರಿ ಕೇಸರಿ ಬಣ್ಣ ಹಚ್ಚಿದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ.
ಅಂಬೇಡ್ಕರ್ ಜಾತಿ ವಿನಾಶವೆಂದು ಏನು ಹೇಳಿದ್ದಾರೋ ಮತಾಂತರದ ಬಗ್ಗೆ ಏಕೆ ಒತ್ತು ಕೊಟ್ಟರೋ ನಾವು ಅದನ್ನು ಇವತ್ತು ಮನಸ್ಸಿನ ಆಳಕ್ಕೆ ಇಳಿಸಿಕೊಂಡು ಅದನ್ನು ಅನುಸರಿಸಿದರೆ ಮಾತ್ರವೇ ಮೂಢನಂಬಿಕೆ ಅನ್ನುವುದು ಹೋಗುತ್ತದೆ ಮತ್ತು ಅಂಬೇಡ್ಕರ್ ಅವರ ಆಶಯಗಳನ್ನೂ ಕೂಡ ನಾವು ಜಾರಿಗೆ ತಂದಹಾಗೆ ಆಗುತ್ತದೆಂದು ನಾನು ಭಾವಿಸುತ್ತೇನೆ.
ಇನ್ನೂ ಒಂದು ವಿಚಾರವನ್ನು ನಮ್ಮ ಹಾಗೆ ಯೋಚನೆ ಮಾಡುವವರು ಗಮನಿಸಬೇಕಾದ ಅಗತ್ಯತೆ ಇದೆ ಎಂದು ನನಗೆ ಪದೇ ಪದೆ ಅನ್ನಿಸುತ್ತದೆ. ನಾವೆಲ್ಲಾ ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಾ ಅದಷ್ಟೋ ಸಾರಿ, ನಾನು ದೇವರನ್ನು ನಂಬುವುದಿಲ್ಲ, ನಾನು ದೇವಸ್ಥಾನಕ್ಕೆ ಹೋಗುವುದಿಲ್ಲ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ ಎಂದು ಹೇಳುತ್ತಾ ಜನರಿಂದ ದೂರವಾಗುತ್ತಿದ್ದೇವೆಂದು ನನಗೆ ಅನ್ನಿಸುತ್ತಿದೆ. ವಿಚಾರವಾದ ಅಂದರೆ, ದೇವರನ್ನು ನಂಬದಿರುವುದು, ಮೂಢನಂಬಿಕೆಯನ್ನು ನಂಬದಿರುವುದಷ್ಟೇ ಹೊರತೂ ಅನಾಧ್ಯಾತ್ಮವಾದವಲ್ಲ. ಅಂಬೇಡ್ಕರ್ ಅವರು ಕೂಡ ಬುದ್ಧನನ್ನು ನಂಬಿದರು, ಒಂದು ಧರ್ಮವನ್ನು ಪ್ರತಿಪಾದಿಸಿದರು. ಅಂದರೆ ಅವರು ಅಧಾರ್ಮಿಕನೆಂದು ಯಾವತ್ತಿಗೂ ಹೇಳಿಕೊಳ್ಳಲಿಲ್ಲ, ಅನಾಧ್ಯಾತ್ಮಿಕವಾದಿ ಎಂದು ಎಲ್ಲಿಯೂ ಅವರು ಹೇಳಿಕೊಳ್ಳಲಿಲ್ಲ. ನಾವು ಕಬೀರರನ್ನು, ಶಿಶುನಾಳ ಶರೀಫರನ್ನು ಏಕೆ ಬಿಡಬೇಕು..? ಎನ್ನ ಕಾಲೇ ಕಂಬ, ದೇಹವೇ ದೇಗುಲ ಎಂದು ಹೇಳಿರುವ ವಾಸ್ತುವನ್ನು ನಿರಾಕರಿಸಿರುವ ಬಸವಣ್ಣನವರನ್ನು ನಾವು ಏಕೆ ಮರೀಬೇಕು? ನಾವು ಅನಾಧ್ಯಾತ್ಮಕವಾದಿಗಳಾಗಬೇಕಾಗಿಲ್ಲ. ಮೂಢನಂಬಿಕೆಗಳನ್ನು ಮಾತ್ರವೇ ಬಿಟ್ಟು, ನಾನು ಯಾವ ಧರ್ಮದವರಲ್ಲ, ನನಗೆ ದೇವರೆಂದರೆ ನಂಬಿಕೆಯಿಲ್ಲ, ನಾನು ನಾಸ್ತಿಕ ಎಂದು ಹೇಳುವುದೇ ವಿಚಾರವಾದ ಅಂತ ನಾವು ಅದಷ್ಟೋ ಸಲ ಅಂದುಕೊಂಡು ಜನರಿಂದ ದೂರ ಹೋಗುತ್ತಿದ್ದೀವಿ ಅನ್ನುವ ಅನುಮಾನ ಇತ್ತೀಚೆಗೆ ಕಾಡುತ್ತಿರುವುದರಿಂದ ಯಾರು ಜನಪರವಾಗಿ ಮಾತಾಡಿದ್ದಾರೋ ಅವರು ಶರೀಫ ಆಗಿರಲೀ, ಕಬೀರರಾಗಿರಲೀ ಅಥವಾ ತತ್ವಪದಕಾರರಾಗಿರಲೀ ಅಥವಾ ಯಾರೇ ಆಗಿರಲೀ. ಅವರನ್ನೂ ಕೂಡ ಸ್ವಲ್ಪ ಆಗೀಗ ಹೊಕ್ಕು ನೋಡುವುದರಿಂದ ನಮ್ಮ ಆತ್ಮವನ್ನು ನಾವು ಶೋಧಿಸಿಕೊಳ್ಳಲು ಸಾಧ್ಯವಾಗುತ್ತದೆಂದು ನಾನು ಭಾವಿಸುತ್ತೇನೆ.
ಇಷ್ಟೆಲ್ಲವನ್ನು ಹೇಳುತ್ತಲೇ ಮಹಿಳೆಯಾಗಿ ಕೆಲವು ಮಾತುಗಳನ್ನು ಹೇಳಿಕೊಳ್ಳಬೇಕಾದ ಕೆಲವು ಜವಾಬ್ದಾರಿಗಳಿವೆ. ವೇದಿಕೆಯ ಮೇಲೆ ಅವಕಾಶವಿರುವ ಏಕೈಕ ಮಹಿಳೆ ನಾನೇ ಆಗಿರುವುದರಿಂದ, ಅದೆಲ್ಲವೂ ನಾನೇನು ಲೋಪವೆಂದು ಹೇಳುತ್ತಿಲ್ಲ. ಹಾಗಾಗಿ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಮತ್ತೆ ಇಲ್ಲಿ ಕೂತಿರುವ ಅಕ್ಕ-ತಂಗಿಯರ ಪ್ರತಿನಿಧಿಯಾಗಿ ನಾನು ಕೆಲವು ಮಾತುಗಳನ್ನು ಆಡಲೇಬೇಕಾಗಿದೆ. ಇವತ್ತು ಈ ಭಾರತ ದೇಶದ ಪ್ರಜಾಜಾಪ್ರಭುತ್ವ ಅನ್ನುವಂತದ್ದು, ಒಂದು ಪ್ರಹಸನದ ಮಟ್ಟಕ್ಕೆ ಇಳಿದಿದ್ದರೇ, ಬರೀ ಒಂದು ಬೊಂಬೆಯ ಹಾಗೆ ಇಳಿದಿದ್ದರೆ, ಅದಕ್ಕೆ ಕಾರಣ ಶೇಕಡಾ 50% ಹೆಣ್ಣು ಮಕ್ಕಳು ತಮ್ಮ ನಿಜವಾದ ಹಕ್ಕನ್ನು ಚಲಾಯಿಸಲು ವಿಫಲವಾಗಿರುವುದು. ನೋಡಿ ಇದೇ ವಿಷಯವನ್ನು ನಾವು ದಲಿತರ ಬಗ್ಗೆಯೂ ಹೆಳಬಹುದು. ಈ ದೇಶದ 16% ದಲಿತರು ಮನಸ್ಸು ಮಾಡಿದರೆ ಅವರು ಮುಂದಿನ ರಾಜರಾಗುತ್ತಾರೆ. ಆದರೆ ಅವರು ಆಗುತ್ತಿಲ್ಲ. ಏಕೆಂದರೇ, ಆ 16% ದಲಿತ ಜನರು ಛಿದ್ರಛಿದ್ರವಾಗಿ ನಾನಾ ಪಕ್ಷದಲ್ಲಿ ಒಡೆದು ಹೋಗಿದ್ದಾರೆ. ಇದೇ ಆಗಬಾರದೆಂದು ಪೂಣೆ ಒಪ್ಪಂದದಲ್ಲಿ ಸಮಯದಲ್ಲಿ ಅಂಬೇಡ್ಕರ್ ಪ್ರತಿಪಾದನೆ ಮಾಡಿದರು. ಆದರೆ ಅವರು ಯಾವುದನ್ನು ಆಗಬಾರದೆಂದು ಹೇಳಿದ್ದರೋ ಇವತ್ತು ಅದೇ ಆಗುತ್ತಿದೆ. ಆಗಲೀ ದಲಿತ ನಾಯಕಿಯೇ ಇರುವಂತಹ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿತು. ಆದರೆ ಬಂದ ಮೇಲೆ ದಲಿತರ ಸ್ಥಿತಿಗತಿಗಳೆಲ್ಲವೂ ಸುಧಾರಣೆ ಆಗಿಬಿಟ್ಟವೇ? ಅತ್ಯಂತ ಸಾಮಾನ್ಯ ಮಹಿಳೆಯಾಗಿರುವಂತಹ ಮಾಯಾವತಿ ಪ್ರಭುದಾಸ್ ಅಲ್ಲಿಯ ಮುಖ್ಯಮಂತ್ರಿಯಾಗಿದ್ದೇನೋ ನಿಜ. ಕಳೆದ ವರ್ಷ ಜೂನ್ ತಿಂಗಳಲ್ಲಿ, ಬಾದಾವ್ ಎಂಬ ಒಂದು ಹಳ್ಳಿಯಲ್ಲಿ, ಇಬ್ಬರು ದಲಿತ ಹೆಣ್ಣು ಮಕ್ಕಳು ಮಾವಿನ ಮರದಲ್ಲಿ ಮಾವಿನ ಹಣ್ಣು ತೂಗಾಡುವ ಹಾಗೆ ತೂಗಾಡುತ್ತಿದ್ದು, ಅತ್ಯಾಚಾರಗೊಂಡು ಶವವಾಗಿ ತೂಗಾಡುತ್ತಿದ್ದ ಆ ಹೆಣ್ಣು ಮಕ್ಕಳಿಗೆ ಆ ರಾಜ್ಯದಲ್ಲಿ ಅಷ್ಟೆಲ್ಲಾ ವರ್ಷಗಳೂ ಆಳಿರುವ ಒಬ್ಬ ದಲಿತ ಮಹಿಳೆಗೆ ಏಕೆ ಸಶಕ್ತಗೊಳಿಸಲು ಸಾಧ್ಯವಾಗಲಿಲ್ಲ.
ಈ ವರ್ಷ ಮಾರ್ಚ್ ತಿಂಗಳಲ್ಲಿ, ಖುಷಿ ನಗರ ಅನ್ನುವ ಒಂದು ಊರಿನಲ್ಲಿ ಇಂಟರ್ಮೀಡಿಯೆಟ್ ಪರೀಕ್ಷೆ ಕಟ್ಟಿದ ಒಬ್ಬ ದಲಿತ ಹುಡುಗಿ, ಅದೇ ಊರಿನ ಅವರಿಗಿಂತ ಸ್ವಲ್ಪ ಮೇಲಿನ ಸಮುದಾಯದ ಹುಡುಗರು ಪದೇಪದೆ ಇಂಟರ್ಮೀಡಿಯೆಟ್ ಪರೀಕ್ಷೆಗೆ ಕೂತು ಫೇಲ್ ಆಗಿದ್ದರು. ಆ ಸಮುದಯದ ಹೆಣ್ಣು ಮಕ್ಕಳು ಅವಳು ಒಲೆಯ ಎದುರು ಕೂತು ರೊಟ್ಟಿ ಬಡೆಯುತ್ತಿರುವಾಗ ಅವಳನ್ನು ಒಲೆಯಲ್ಲಿ ಸುಟ್ಟು ಹಾಕಿದರು. ಒಬ್ಬ ದಲಿತ ಹೆಣ್ಣು ಮಗಳಾಗಿ ನೀನು ಇಂಟರ್ಮೀಡಿಯೆಟ್ ಪರೀಕ್ಷೆ ಬರೆದು ಮೇಲೆ ಹೋಗಿಬಿಟ್ಟರೆ, ನಮ್ಮ ಸಮುದಾಯದ ಹೆಣ್ಣು ಮಕ್ಕಳ ಮರ್ಯಾದೆ ಏನಾಗಬಾರದು, ನೀನು ಪರೀಕ್ಷೆ ಬರೆಯಬಾರದೆಂಬ ಒತ್ತಡ ಹೆಚ್ಚಾಗಿತ್ತು ಆ ಹಳ್ಳಿಯಲ್ಲಿ. ಅದೆಲ್ಲವನ್ನೂ ವಿರೋಧಿಸಿ ಅವಳು ಪರೀಕ್ಷೆ ಬರದ ನಂತರ ಅವಳನ್ನು ಜೀವಂತ ಸುಟ್ಟು ಹಾಕಿದರು.
ಇದೇ ವರ್ಷ ಗಣೇಶಪುರ ಅನ್ನುವ ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಒಬ್ಬ ದಲಿತ ಹುಡುಗಿ ನೀರು ತರುತ್ತಿರುವಾಗ ಆಕೆಯ ನೆರಳು ಯಾರೋ ಮೇಲ್ಜಾತಿಯವರು ಸ್ನಾನ, ಮಡಿತೊಟ್ಟು ಬರುತ್ತಿರುವಾಗ ಅವರ ಮೇಲೆ ಬೀಳುತ್ತದೆ. ಅವಳ ನೆರಳು ಬಿತ್ತೆಂದು ನಮ್ಮ ಮಡಿಯನ್ನು ಹಾಳು ಮಾಡಿದೆ ಎಂದು ಹೇಳಿ, ಅವಳನ್ನು ಅಲ್ಲಿಯೇ ಸಾಯುವ ಹಾಗೆ ಹೊಡೆದಿದ್ದಾರೆ. ಆಕೆ ಆ ನಂತರ ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಾಗಾಯಿತು. ಎಷ್ಟು ವರ್ಷಗಳು ಕಳೆದಿವೆ ನಮ್ಮ ದೇಶದಲ್ಲಿನ ಅಸ್ಪ್ರಶ್ಯತೆ ನಿಷೇಧ ಕಾನೂನು ಜಾರಿಯಾಗಿ? ಎಷ್ಟು ವರ್ಷಗಳು ಕಳೆದಿವೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಕ್ಕಿದೆ ಎಂದು ಈ ದೇಶದಲ್ಲಿ? ಅಂಬೇಡ್ಕರ್ ಸಂವಿಧಾನವನ್ನು ಬರೆದು ಎಷ್ಟು ವರ್ಷಗಳಾದವು? ಎಷ್ಟು ವರ್ಷಗಳಿಂದ ಒಬ್ಬ ದಲಿತ ಹೆಣ್ಣು ಮಗಳು ಉತ್ತರ ಪ್ರದೇಶದಂತಹ ಒಂದು ಬೃಹತ್ ರಾಜ್ಯವನ್ನು ಆಳುತ್ತಿದ್ದರೂ ಕೂಡ ಅದೇ ರಾಜ್ಯದಲ್ಲಿ ಮಹಿಳೆಯರ ಅದರಲ್ಲೂ ದಲಿತ ಮಹಿಳೆಯರ ಸ್ಥಿತಿಗತಿ ಏಕೆ ಹೀಗೆ ಆಯಿತೆಂದರೆ ಒಬ್ಬ ಮಹಿಳೆ, ಒಬ್ಬ ಅವತಾರ ಪುರುಷ, ಒಬ್ಬ ನಮ್ಮನ್ನು ಕಾಪಾಡಿ ಬಿಡುತ್ತಾನೆ. ಉಳಿದವರೆಲ್ಲರೂ ಕೂಡ ಅವನು ಹೇಳಿದ್ದನ್ನು ಕೇಳುತ್ತಾ ಕೂರುವುದೆಂದು ತಿಳಿದುಕೊಂಡಿರುವಂತಹ ನಮ್ಮ ಕುರಿತನದಲ್ಲಿ ಈ ಎಲ್ಲ ಕಾರಣಗಳು ಅಡಗಿವೆ. ಅದಕ್ಕಾಗಿ ಈ ಎಲ್ಲ ಜನರು ಕೂಡ ಇವತ್ತು ನಮ್ಮ ನಾಯಕರನ್ನು ಜಾಗೃತಗೊಳಿಸುತ್ತಲೇ ನಾವೂ ಕೂಡ ಜಾಗೃತರಾಗಬೇಕಾಗಿದೆ. ಆಗಲಷ್ಟೇ ಭಾರತವೆನ್ನುವ ಒಂದು ಜನತಂತ್ರ ಅರ್ಥಪೂರ್ಣವಾಗುವುದಕ್ಕೆ ಸಾಧ್ಯವಾಗುತ್ತದೆ. ಇದರಲ್ಲಿ ನಿಜವಾಗಿಯೂ ಹೆಣ್ಣು ಮಕ್ಕಳು ದೊಡ್ಡ ಪಾತ್ರವನ್ನು ವಹಿಸಬೇಕಾಗಿದೆ. ಏಕೆಂದರೇ ಶೇಕಡ 50 ಮತದಾರ ಹೆಣ್ಣು ಮಕ್ಕಳಿದ್ದೇವೆ, ನಾವೇನಾದರೂ ನಿಜವಾಗಿಯೂ ಮನಸ್ಸು ಮಾಡಿದರೆ ಯಾರು ರೇಪಿಸ್ಟ್ ಅಭ್ಯರ್ಥಿ ಇರುವನೋ ಅವನಿಗೆ ಓಟೇ ಹಾಕುವುದಿಲ್ಲ. ಯಾವುದು ಅತೀ ಕೆಟ್ಟದಾಗಿ ಹೆಣ್ಣು ಮಕ್ಕಳನ್ನು ಚಿತ್ರಿಸುತ್ತಾ ಇರುವ ಸೀರಿಯಲ್ ಮತ್ತು ಚಾನಲ್ ಗಳನ್ನೇ ನೋಡುವುದಿಲ್ಲ, ನಮಗೆ ಅಂತಹ ಪ್ರಾಡೆಕ್ಟ್‍ಗಳೇ ಬೇಡವೆಂದು 50% ಇರುವ ಈ ದೇಶದ ಮಹಿಳೆಯರೇನಾದರೂ ನಿರಾಕರಿಸಿದ್ದೇ ಆಗಿದ್ದರೆ, ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಬೇಕಾಗುತ್ತದೆ. ಏಕೆ ನಮಗೆ ಆ ರೀತಿಯಾಗಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಣ್ಣು ಮಕ್ಕಳಲ್ಲಿ ಜಾಗೃತಿಗೆ ಶ್ರಮಿಸಿದಂದಹ “ಸಾವಿತ್ರಿಬಾಯಿ ಫುಲೆ”ಯನ್ನು ನಾನು ನೆನಪಿಸಿಕೊಳ್ಳುತ್ತಾ, ನಾವೆಲ್ಲರು ಜಾಗೃತಿಯೆಂದರೇ ಬರೀ ಅ, ಆ, ಇ, ಈ ಬರೆಯುವುದಲ್ಲ, ಏಳು, ಹತ್ತು, ಪಿಯುಸಿ ಪಾಸು ಮಾಡಿದರೇ ಆಗುವುದಿಲ್ಲ. ಇವತ್ತಿಗೂ ಕೂಡ ಹೆಣ್ಣು ಮಕ್ಕಳು ಗೃಹ ಪ್ರವೇಶ, ಗಣಪತಿ ಹಬ್ಬ, ದೀಪಾವಳಿ ಬಂತೆಂದರೇ ಮುಟ್ಟು ಮುಂದೆ ಹೋಗಲಿಕ್ಕೆ ಮಾತ್ರೆ ತೆಗೆದುಕೊಳ್ಳಲು ಆಸ್ಪತ್ರೆಗಳಲ್ಲಿ ಕ್ಯೂ ನಿಲ್ಲುತ್ತಾರೆ. ಒಂದು ಮುಟ್ಟು ಎನ್ನುವುದು ಅತೀ ಸಹಜ ಮತ್ತು ನೈಸರ್ಗಿಕ ಕ್ರಿಯೆಯೂ ಕೂಡ ನಾವು ದಾಟುವುದಕ್ಕೆ ಆಗುತ್ತಿಲ್ಲವೆಂದರೇ ನಮ್ಮೊಳಗೆ ತೋಡಿಕೊಂಡಿರುವ ಬಾವಿಯಲ್ಲಿ ನಾವು ಈ ರೀತಿಯಾಗಿ ಮುಳುಗುತ್ತಿರುವಾಗ ನಾವಿನ್ನು ಯಾವ ಕ್ರಾಂತಿಯನ್ನು ಮಾಡುವುದಕ್ಕೆ ಸಾಧ್ಯವಿದೆ? 33% ಅಲ್ಲಾ 50% ಮೀಸಲಾತಿಯನ್ನು ಕೊಟ್ಟರೂ ಕೂಡ ಹೆಣ್ಣು ಮಕ್ಕಳ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗುವುದಕ್ಕೆ ಸಾಧ್ಯವಿಲ್ಲ. ಈ ದೃಷ್ಟಿಯಿಂದ ಮಹಿಳೆಯರೆಲ್ಲರೂ ಜಾಗೃತರಾಗಬೇಕಾಗುವ ಅವಶ್ಯಕತೆ ಈಗ ಹೆಚ್ಚಾಗಿದೆ. ಅದರಲ್ಲೂ ಸಮಾಜಕ್ಕೆ ಕನ್ನಡಿ ಹಿಡಿಯುವಂದಹದ್ದೀಗ ಅಷ್ಟು ಸುಲಭವಲ್ಲ. ನಮಗೆ ನಾವೇ ಕನ್ನಡಿ ಹಿಡಿದು ಮುಖವನ್ನು ನೋಡಿಕೊಂಡುಬಿಡಬಹುದು, ಆದರೆ ಸಮಾಜಕ್ಕೆ ನೀವು ಕನ್ನಡಿ ಹಿಡಿಯಲು ಹೋದ ಕೂಡಲೇ ನಿಮ್ಮ ಕೈಯನ್ನು ಕತ್ತರಿಸುವುದಕ್ಕೆ ಎಲ್ಲೆಲ್ಲಿಯೋ ಕತ್ತಿಗಳು ಹರಿತಾಗುತ್ತವೆ. ನಿಮ್ಮ ಬಾಯಿಯನ್ನು ಹೊಲೆಯುವುದಕ್ಕೆ ಎಲ್ಲೆಲ್ಲೋ ಸೂಜಿ-ದಾರಗಳು ತಯಾರಾಗುತ್ತವೆ. ಇಂತಹ ಈ ಕಾಲದಲ್ಲಿ ತುಂಬಾ ಹರಿತವಾಗಿ ನಾವು ಯೋಚಿಸಬೇಕಾದ ಮತ್ತು ಇದ್ದ ನಿಜವನ್ನು ಇದ್ದ ಹಾಗೆ ಹೇಳಬೇಕಾಗಿರುವ ಅವಶ್ಯಕತೆ ಮೊದಲಿಗಿಂತಲೂ ಈಗ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ. ಅಷ್ಟೇ ಅಲ್ಲ ಹೆಣ್ಣು ಮಕ್ಕಳಿಗೆ ಇನ್ನೂ ಒಂದು ತುಂಬಾ ಗಹನವಾಗಿರುವಂತಹ ಜವಾಬ್ದಾರಿ ಇದೆ. ಇವತ್ತು ಇಡೀ ಸಮಾಜ ಒಂದುತರ ಕೆರಳಿದ ಸ್ಥಿತಿಯಲ್ಲಿದೆ. ಯಾವುದೋ ದೇವಸ್ಥಾನದಲ್ಲಿ ಯಾರೋ ಗೋಮಾಂಸವನ್ನು ಹಾಕಿದರೇ ಯಾರಿಗೋ ಸಿಟ್ಟು ಬರುತ್ತದೆ. ಯಾವುದೋ ಮಸೀದಿಯಲ್ಲಿ ಹಂದಿ ಮಾಂಸ ಹಾಕಿದರೆ ಇನ್ನೊಂದಿಷ್ಟು ಜನರಿಗೆ ಸಿಟ್ಟು ಬರುತ್ತದೆ. ಯಾವುದೋ ಬೀದಿ ಹೆಸರನ್ನು ಬದಲು ಮಾಡಿದರೆ ಒಂದಷ್ಟು ಜನರಿಗೆ ಸಿಟ್ಟು ಬರುತ್ತದೆ. ಯಾರದ್ದೋ ಜಯಂತಿ ಆಚರಿಸಿದರೇ ಒಂದಷ್ಟು ಜನರು ಕೆರಳುತ್ತಾರೆ. ಇಡೀ ಸಮಾಜ ಒಂದು ರೀತಿಯಲ್ಲಿ ಕೆರಳುವಿಕೆಯಲ್ಲಿ ನಿಂತಿರುವಾಗ, ಈ ಕೆರಳುವಿಕೆಯನ್ನು ಪರಿವರ್ತನೆಯಾಗಿ ಬದಲಾಯಿಸಲು ತಾಕತ್ತು ಯಾರಿಗಾದರೂ ಇದ್ದರೇ ಅದು ಹೊಟ್ಟೆಯಲ್ಲಿ ಪುಟ್ಟ ಚೀಲವನ್ನು ಇಟ್ಟುಕೊಂಡಿರುವಂತಹ ಹೆಣ್ಣು ಮಕ್ಕಳಿಗೆ ಮಾತ್ರ ಸಾಧ್ಯ. ಹೆಣ್ಣು ಮಕ್ಕಳು ನಿಜವಾಗಿಯೂ ಬುದ್ಧ ಹೇಳಿರುವಂತೆ ಕರುಣೆ ಮತ್ತು ಮಾನವತ್ವ ಅವೆರಡನ್ನು ಆ ಪುಟ್ಟ ಚೀಲದ ರೂಪದಲ್ಲಿ ತಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡುರುವರು. ಅವರು ತಮ್ಮ ಮೆದುಳಿನಲ್ಲಿರುವ ಜ್ಞಾನ, ವಿವೇಚನೆ ಏನಿದೆಯೋ ಅದನ್ನು ಎಲ್ಲ ಕಡೆಗೂ ಪ್ರದರ್ಶಿಸಿ ಕೆರಳುವಿಕೆಯನ್ನು ಬುದ್ಧ ಕರುಣೆಯನ್ನಾಗಿ, ಜಾಗೃತಿಯನ್ನಾಗಿ ಪರಿವರ್ತಿಸಲು ಸಾಧ್ಯವಾದರೆ ಆಗ ಬಹುಶಃ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನಾವೀಗ ಇರುವಂತಹ ಭಾರತಕ್ಕಿಂತ, ಈ ಭೂಮಿಗಿಂತ ಇನ್ನೂ ಸುಂದರವಾದ ನೆಲದಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳುತ್ತಾ ಇಷ್ಟು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಎಲ್ಲ ಸಂಘಟನೆಯವರಿಗೂ, ಮತ್ತೆ ನಿಮಗೆಲ್ಲರಿಗೂ ವಂದಿಸುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ನಮಸ್ಕಾರ…