ಭಾರತದ ಸಂವಿಧಾನ ಭಾಗ – VI – 1 ರಾಜ್ಯಗಳು
ಅಧ್ಯಾಯ I – ಸಾಮಾನ್ಯ ಮಂತ್ರಿಮಂಡಲ
74. ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ:- (1976ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ, 13ನೆಯ ಪ್ರಕರಣದ ಮೂಲಕ (1)ನೆಯ ಖಂಡಕ್ಕೆ ಬದಲಾಗಿ (3-1-77ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) [(1) ರಾಷ್ಟ್ರಪತಿಗೆ ನೆರವು ಮತ್ತು ಸಲಹೆಯನ್ನು ನೀಡಲು ಪ್ರಧಾನಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲವು ಇರತಕ್ಕದ್ದು ಮತ್ತು ರಾಷ್ಟ್ರಪತಿಯು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಾಗ ಮಂತ್ರಿಮಂಡಲದ ಸಲಹೆಗನುಸಾರ ಕಾರ್ಯನಿರ್ವಹಿಸತಕ್ಕದ್ದು:] (1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 11ನೆಯ ಪ್ರಕರಣದ ಮೂಲಕ (20-6-79ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) [ಪರಂತು, ಅಂಥ ಸಲಹೆಯನ್ನು ಸಾಮಾನ್ಯವಾಗಿ ಅಥವಾ ಅನ್ಯಥಾ ಪುನರ್‌ಪರಿಶೀಲಿಸುವಂತೆ ರಾಷ್ಟ್ರಪತಿಯು ಮಂತ್ರಿಮಂಡಲವನ್ನು ಅಗತ್ಯಪಡಿಸಬಹುದು ಮತ್ತು ಅಂಥ ಪುನರ್ ಪರಿಶೀಲನೆಯ ತರುವಾಯ ನೀಡಿದ ಸಲಹೆಗನುಸಾರ ರಾಷ್ಟ್ರಪತಿಯು ಕಾರ್ಯ ನಿರ್ವಹಿಸತಕ್ಕದ್ದು.] (2) ಮಂತ್ರಿಗಳು ರಾಷ್ಟ್ರಪತಿಗೆ ಯಾವುದೇ ಸಲಹೆಯನ್ನು ನೀಡಿದ್ದರೇ ಮತ್ತು ಹಾಗೆ ನೀಡಿದ್ದರೆ ಯಾವ ಸಲಹೆಯನ್ನು ನೀಡಿದ್ದರು ಎಂಬ ಪ್ರಶ್ನೆಯನ್ನು ಕುರಿತು ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಮಾಡತಕ್ಕದ್ದಲ್ಲ.
75. ಮಂತ್ರಿಗಳ ಬಗ್ಗೆ ಇತರ ಉಪಬಂಧಗಳು:– (1) ರಾಷ್ಟ್ರಪತಿಯು ಪ್ರಧಾನಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಪ್ರಧಾನಮಂತ್ರಿಯ ಸಲಹೆಗನುಸಾರ ರಾಷ್ಟ್ರಪತಿಯು ಇತರ ಮಂತ್ರಿಗಳನ್ನು ನೇಮಕ ಮಾಡತಕ್ಕದ್ದು. (2003 ನೆಯ ಇಸವಿಯ ಸಂವಿಧಾನ (ತೊಂಬತ್ತೊಂದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ. [(1ಎ) ಮಂತ್ರಿಮಂಡಲದಲ್ಲಿ ಪ್ರಧಾನ ಮಂತ್ರಿಯೂ ಸೇರಿದಂತೆ, ಮಂತ್ರಿಗಳ ಒಟ್ಟು ಸಂಖ್ಯೆಯು, ಲೋಕಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಶೇಕಡ ಹದಿನೈದನ್ನು ಮೀರತಕ್ಕದ್ದಲ್ಲ. (1ಬಿ) ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವ, ಸಂಸತ್ತಿನ ಸದನಗಳಲ್ಲಿ ಯಾವುದೇ ಒಂದು ಸದನದ ಸದಸ್ಯನು,
ಹತ್ತನೇ ಅನುಸೂಚಿಯ 2ನೇ ಪ್ಯಾರಾದ ಅಡಿಯಲ್ಲಿ ಆ ಸದನದ ಸದಸ್ಯನಾಗಿರಲು ಅನರ್ಹನಾಗಿದ್ದಲ್ಲಿ, ಆತನು ಅನರ್ಹತೆ ಹೊಂದಿದ ದಿನಾಂಕದಿಂದ ಪ್ರಾರಂಭವಾಗಿ ಹಾಗೆ ಸದಸ್ಯನಾಗಿ ಆತನ ಪದಾವಧಿಯು ಮುಕ್ತಾಯಗೊಳ್ಳುವ ದಿನಾಂಕದವರೆಗೆ ಅಥವಾ ಅಂಥ ಅವಧಿಯು ಮುಕ್ತಾಯವಾಗುವ ಮೊದಲು ಆತನು ಸಂಸತ್ತಿನ ಸದನಗಳಲ್ಲಿ ಯಾವುದೇ ಒಂದು ಸದನಕ್ಕೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆತನು ಚುನಾಯಿತನಾಗಿದ್ದಾನೆ ಎಂದು ಘೋಷಿಸುವ ದಿನಾಂಕದವರೆಗೆ, ಅವೆರಡರಲ್ಲಿ ಯಾವುದು ಮುಂಚೆಯೋ, ಅಲ್ಲಿಯವರೆಗೆ (1)ನೇ ಖಂಡದ ಅಡಿಯಲ್ಲಿ ಆತನು ಮಂತ್ರಿಯಾಗಿ ನೇಮಕಗೊಳ್ಳುವುದಕ್ಕೂ ಅನರ್ಹನಾಗತಕ್ಕದ್ದು.] (2) ರಾಷ್ಟ್ರಪತಿಯ ಇಷ್ಟಪರ್ಯಂತ ಮಂತ್ರಿಗಳು ಪದಧಾರಣ ಮಾಡತಕ್ಕದ್ದು. (3) ಮಂತ್ರಿಮಂಡಲವು ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರತಕ್ಕದ್ದು. (4) ಯಾರೇ ಮಂತ್ರಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯು ಅವನಿಗೆ ಪದದ ಮತ್ತು ಗೋಪ್ಯತಾ ಪಾಲನೆಯ ಪ್ರಮಾಣ ವಚನಗಳನ್ನು ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಡಲಾದ ನಮೂನೆಗಳಿಗೆ ಅನುಸಾರವಾಗಿ ಬೋಧಿಸತಕ್ಕದ್ದು. (5) ಯಾರೇ ಮಂತ್ರಿಯು, ನಿರಂತರವಾಗಿ ಆರು ತಿಂಗಳ ಯಾವುದೇ ಅವಧಿಯವರೆಗೆ ಸಂಸತ್ತಿನ ಸದನಗಳ ಯಾವುದೇ ಸದನದ ಸದಸ್ಯನಾಗಿರದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಅವನು ಮಂತ್ರಿಯಾಗಿರುವುದು ನಿಂತುಹೋಗತಕ್ಕದ್ದು. (6) ಮಂತ್ರಿಗಳ ಸಂಬಳಗಳು ಹಾಗೂ ಭತ್ಯೆಗಳು ಕಾಲಕಾಲಕ್ಕೆ ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ಸಂಸತ್ತು ಆ ರೀತಿ ನಿರ್ಧರಿಸುವವರೆಗೆ ಅವು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 30 and 31








