July 26, 2026 8:02 pm

ಭಾರತದ ಸಂವಿಧಾನ: ಭಾಗ – VI ರಾಜ್ಯನೀತಿಯ ನಿರ್ದೇಶಕ ತತ್ವಗಳು

ಭಾರತದ ಸಂವಿಧಾನ: ಭಾಗ – VI ರಾಜ್ಯನೀತಿಯ ನಿರ್ದೇಶಕ ತತ್ವಗಳು

೩೬. ಪರಿಭಾಷೆ : ಈ ಭಾಗದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, “ರಾಜ್ಯ” ಎಂಬ ಪದಕ್ಕೆ ಭಾಗ III ರಲ್ಲಿರುವ ಅರ್ಥವೇ ಇರುತ್ತದೆ.

೩೭. ಈ ಭಾಗದಲ್ಲಿ ಅಡಕವಾಗಿರುವ ತತ್ವ್ವಗಳ ಅನ್ವಯ: ಈ ಭಾಗದಲ್ಲಿ ಅಡಕವಾಗಿರುವ ಉಪಬಂಧಗಳು ಯಾವುದೇ ನ್ಯಾಯಾಲಯದ ಮೂಲಕ ಜಾರಿಗೊಳಿಸುವಂತಹವುಗಳಾಗಿರತಕ್ಕದ್ದಲ್ಲ; ಆದಾಗ್ಯೂ ಈ ಭಾಗದಲ್ಲಿ ಹೇಳಲಾಗಿರುವ ತತ್ವಗಳು ದೇಶದ ಆಡಳಿತ ನಿರ್ವಹಣೆಯಲ್ಲಿ ಮೂಲಭೂತವಾದವುಗಳಾಗಿರುತ್ತವೆ ಮತ್ತು ಕಾನೂನುಗಳನ್ನು ಮಾಡುವಲ್ಲಿ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯವಾಗಿರತಕ್ಕದ್ದು.

೩೮. ಜನತೆಯ ಕಲ್ಯಾಣೋನ್ನತಿಗಾಗಿ ರಾಜ್ಯವು ಸಾಮಾಜಿಕ ವ್ಯವಸ್ಥೆಯನ್ನು ಸುನಿಶ್ಚಿತಗೊಳಿಸುವುದು: [(೧)] ರಾಜ್ಯವು ರಾಷ್ಟ್ರೀಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವು ವ್ಯಾಪ್ತವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸಾಧ್ಯವಾಗಬಹುದಾದಷ್ಟರ ಮಟ್ಟಿಗೆ ಸುನಿಶ್ಚಿತಗೊಳಿಸುವ ಮತ್ತು ಸಂರಕ್ಷಣೆ ಮಾಡುವ ಮೂಲಕ ಜನತೆಯ ಕಲ್ಯಾಣವನ್ನು ಉನ್ನತಿಗೊಳಿಸಲು ಪ್ರಯತ್ನಿಸತಕ್ಕದ್ದು.(೧೯೭೮ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೯ನೇ ಪ್ರಕರಣದ ಮೂಲಕ (೨೦-೦೬-೧೯೭೯ರಿಂದ ಜಾರಿಗೆ ಬರುವಂತೆ) ೩೮ನೇ ಅನುಚ್ಫೇದವನ್ನು ಅದರ ಖಂಡ (೧) ಎಂದು ಪುನರ್‌ಸಂಖ್ಯೆ ನೀಡಲಾಗಿದೆ.)

[(೨) ರಾಜ್ಯವು ವಿಶೇಷವಾಗಿ ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸತಕ್ಕದ್ದು ಮತ್ತು ವ್ಯಕ್ತಿ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿರುವ ಜನರ ಗುಂಪುಗಳಲ್ಲಿ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿರುವ ಅಸಮಾನತೆಗಳನ್ನು ತೆಗೆದುಹಾಕಲು ಪ್ರಯತ್ನಿಸತಕ್ಕದ್ದು.] (೧೯೭೮ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೯ನೇ ಪ್ರಕರಣದ ಮೂಲಕ (೨೦.೬.೧೯೭೯ ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

೩೯. ರಾಜ್ಯವು ಅನುಸರಿಸಬೇಕಾದ ಕೆಲವು ಕಾರ್ಯನೀತಿ ತತ್ವಗಳು : ರಾಜ್ಯವು ವಿಶೇಷವಾಗಿ,- (ಎ) ನಾಗರಿಕರು ಅವರು ಪುರುಷರೇ ಆಗಿರಲಿ, ಸ್ತ್ರೀಯರೇ ಆಗಿರಲಿ ಸಮಾನವಾಗಿ ಜೀವನ ನಿರ್ವಹಿಸುವುದಕ್ಕೆ ಸಾಕಷ್ಟು ಸಾಧನಗಳಿಗೆ ಹಕ್ಕು ಹೊಂದಿರುವುದನ್ನು; (ಬಿ) ಸಮುದಾಯದ ಭೌತಿಕ ಸಾಧನ ಸಂಪತ್ತಿಗಳ ಒಡೆತನವು ಮತ್ತು ನಿಯಂತ್ರಣವು ಸಕಲರ ಹಿತಸಾಧನೆಗೆ ಅತ್ಯುತ್ತಮ ರೀತಿಯಲ್ಲಿ ಸಹಾಯಕವಾಗುವಂತೆ ಹಂಚಿಕೆಯಾಗಿರುವುದನ್ನು; (ಸಿ) ಸಕಲರ ಹಿತಸಾಧನೆಗೆ ಬಾಧಕವಾಗುವ ರೀತಿಯಲ್ಲಿ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೇಂದ್ರೀಕೃತವಾಗದಂತೆ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸುವುದನ್ನು; (ಡಿ) ಪುರುಷರಿಗೆ ಮತ್ತು ಸ್ತ್ರೀಯರಿಗೆ ಇಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವುದನ್ನು; (ಇ) ಪುರುಷ ಮತ್ತು ಮಹಿಳಾ ಕೆಲಸಗಾರರ ಆರೋಗ್ಯ ಮತ್ತು ಶಕ್ತಿ ಹಾಗೂ ಮಕ್ಕಳ ಎಳೆಯ ವಯಸ್ಸು ಇವುಗಳನ್ನು ದುರುಪಯೋಗಪಡಿಸಿಕೊಳ್ಳದಿರುವುದನ್ನು ಮತ್ತು ಆರ್ಥಿಕ ಅವಶ್ಯಕತೆಯ ಒತ್ತಡದಿಂದಾಗಿ ನಾಗರಿಕರು ತಮ್ಮ ವಯಸ್ಸಿಗೆ ಅಥವಾ ಶಕ್ತಿಗೆ ತಕ್ಕದ್ದಲ್ಲದ ಉಪ ಕಸಬುಗಳಲ್ಲಿ ತೊಡಗದೇ ಇರುವುದನ್ನು; [(ಎಫ್) ಆರೋಗ್ಯಕರವಾದ ರೀತಿಯಲ್ಲಿ ಮತ್ತು ಸ್ವತಂತ್ರ ಹಾಗೂ ಘನತೆಯ ವಾತಾವರಣದಲ್ಲಿ ಬೆಳವಣಿಗೆ ಹೊಂದಲು ಮಕ್ಕಳಿಗೆ ಅವಕಾಶ ಮತ್ತು ಅನುಕೂಲತೆಗಳು ದೊರೆಯುವುದನ್ನು ಹಾಗೂ ಬಾಲಕರಿಗೆ ಮತ್ತು ಯುವಕರಿಗೆ ಶೋಷಣೆಯ ಮತ್ತು ನೈತಿಕ ಹಾಗೂ ಐಹಿಕ ಪತನದ ವಿರುದ್ಧ ಸಂರಕ್ಷಣೆ ಒದಗಿಸುವುದನ್ನು]- ಸುನಿಶ್ಚಿತಗೊಳಿಸುವ ದಿಸೆಯಲ್ಲಿ ತನ್ನ ನೀತಿಯನ್ನು ನಿರ್ದೇಶಿಸತಕ್ಕದ್ದು. (೧೯೭೬ರ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೭ನೆಯ ಪ್ರಕರಣದ ಮೂಲಕ (೩.೧.೧೯೭೭ ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.)

[೩೯ಎ. ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು: ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವು ಸಿಗುವಂತೆ ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸತಕ್ಕದ್ದು ಮತ್ತು ವಿಶೇಷವಾಗಿ ಆರ್ಥಿಕ ಅಥವಾ ಇತರ ಅಸಮರ್ಥತೆಗಳ ಕಾರಣದಿಂದಾಗಿ ಯಾರೇ ನಾಗರಿಕನಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸದಿರುವುದನ್ನು ಸುನಿಶ್ಚಿತಗೊಳಿಸಲು ಸೂಕ್ತ ಕಾನೂನು ರಚನೆಯ ಮೂಲಕ ಅಥವಾ ಯೋಜನೆಗಳ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಉಚಿತ ಕಾನೂನು ನೆರವನ್ನು ಒದಗಿಸತಕ್ಕದ್ದು.] (೧೯೭೬ರ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೮ನೇ ಪ್ರಕರಣದ ಮೂಲಕ (ದಿನಾಂಕ ೩.೧.೧೯೭೭ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

೪೦. ಗ್ರಾಮ ಪಂಚಾಯಿತಿಗಳ ಸಂಘಟನೆ: ರಾಜ್ಯವು ಗ್ರಾಮ ಪಂಚಾಯಿತಿಗಳನ್ನು ಸಂಘಟಿಸಲು ಕ್ರಮ ಕೈಗೊಳ್ಳತಕ್ಕದ್ದು ಮತ್ತು ಸ್ವಯಂ ಆಡಳಿತ ಘಟಕಗಳಾಗಿ ಅವು ಕೆಲಸ ಮಾಡುವುದಕ್ಕೆ ಅವಶ್ಯವಾಗಬಹುದಾದಂಥ ಅಧಿಕಾರಗಳನ್ನು ಮತ್ತು ಪ್ರಾಧಿಕಾರವನ್ನು ಅವುಗಳಿಗೆ ಕೊಡತಕ್ಕದ್ದು.

೪೧. ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ, ಶಿಕ್ಷಣ ಪಡೆಯುವ ಮತ್ತು ಸರ್ಕಾರದ ಸಹಾಯ ಪಡೆಯುವ ಹಕ್ಕು: ಕೆಲಸ ಮಾಡುವ, ಶಿಕ್ಷಣ ಪಡೆಯುವ ಮತ್ತು ನಿರುದ್ಯೋಗ, ವೃದ್ಧಾಪ್ಯ, ರೋಗ ಮತ್ತು ಅಸಮರ್ಥತೆಯ ಮತ್ತು ಇತರ ಅನಿವರ‍್ಯ ದೈನ್ಯಾವಸ್ಥೆಯ ಸಂದರ್ಭಗಳಲ್ಲಿ ಸರ್ಕಾರದ ಸಹಾಯವನ್ನು ಪಡೆಯುವ ಹಕ್ಕನ್ನು ಸುನಿಶ್ಚಿತಗೊಳಿಸುವ ಬಗ್ಗೆ ರಾಜ್ಯವು ತನ್ನ ಆರ್ಥಿಕ ಸಾಮರ್ಥ್ಯದ ಮತ್ತು ಅಭಿವೃದ್ಧಿಯ ಪರಿಮಿತಿಗಳಲ್ಲಿ ಪರಿಣಾಮಕಾರಿಯಾದ ಉಪಬಂಧವನ್ನು ಮಾಡತಕ್ಕದ್ದು.

೪೨. ಕೆಲಸ ಮಾಡಲು ನ್ಯಾಯಯುತ ಮತ್ತು ಮಾನವೋಚಿತ ಪರಿಸ್ಥಿತಿಗಳಿರುವಂತೆ ಮತ್ತು ಪ್ರಸೂತಿ ಪ್ರಯೋಜನ ದೊರೆಯುವಂತೆ ಉಪಬಂಧಿಸುವುದು: ಕೆಲಸ ಮಾಡಲು ನ್ಯಾಯಯುತ ಮತ್ತು ಮಾನವೋಚಿತ ಪರಿಸ್ಥಿತಿಗಳಿರುವಂತೆ ಮತ್ತು ಪ್ರಸೂತಿ ಪ್ರಯೋಜನವು ದೊರೆಯುವಂತೆ ರಾಜ್ಯವು ಉಪಬಂಧವನ್ನು ಮಾಡತಕ್ಕದ್ದು.

೪೩. ಕೆಲಸಗಾರರಿಗೆ ಜೀವನ ನಿರ್ವಹಣಾ ಮಜೂರಿ, ಇತ್ಯಾದಿ: ರಾಜ್ಯವು ಸೂಕ್ತ ಕಾನೂನನ್ನು ರಚಿಸುವ ಮೂಲಕ ಅಥವಾ ಅರ್ಥಿಕ ವ್ಯವಸ್ಥೆಯ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಕೃಷಿಯ, ಕೈಗಾರಿಕೆಯ ಅಥವಾ ಇತರ ಎಲ್ಲಾ ಕೆಲಸಗಾರರಿಗೂ ಕೆಲಸ, ಜೀವನ ನಿರ್ವಹಣಾ ಮಜೂರಿ ಮತ್ತು ಉತ್ತಮ ಜೀವನ ಮಟ್ಟವನ್ನು ಸುನಿಶ್ಚಿತಗೊಳಿಸುವ ಕೆಲಸದ ಸ್ಥಿತಿಗಳು ಮತ್ತು ವಿರಾಮದ ವೇಳೆಯ ಸಂಪೂರ್ಣ ಉಪಯೋಗ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಅವಕಾಶಗಳು ದೊರೆಯುವಂತೆ ಮಾಡಲು ಪ್ರಯತ್ನಿಸತಕ್ಕದ್ದು ಮತ್ತು ವಿಶೇಷವಾಗಿ, ರಾಜ್ಯವು ಗ್ರಾಮಾಂತರ ಪ್ರದೇಶಗಳಲ್ಲಿ ವೈಯಕ್ತಿಕ ಆಧಾರದ ಮೇಲೆ ಅಥವಾ ಸಹಕಾರಿ ವ್ಯವಸ್ಥೆಯ ಆಧಾರದ ಮೇಲೆ ಗೃಹಕೈಗಾರಿಕೆಗಳ ಸಂವರ್ಧನೆಗೆ ಪ್ರಯತ್ನಿಸತಕ್ಕದ್ದು.

[೪೩ಎ. ಕೈಗಾರಿಕೆಗಳ ಆಡಳಿತದಲ್ಲಿ ಕೆಲಸಗಾರರು ಭಾಗವಹಿಸುವುದು: ರಾಜ್ಯವು ಸೂಕ್ತ ಕಾನೂನನ್ನು ರಚಿಸುವ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಉದ್ಯಮಗಳ, ಕಾರ್ಯಸಂಸ್ಥೆಗಳ ಅಥವಾ ಯಾವುದೇ ಕೈಗಾರಿಕೆಯಲ್ಲಿ ತೊಡಗಿರುವ ಇತರ ಸಂಘಟನೆಗಳ ಆಡಳಿತದಲ್ಲಿ ಕೆಲಸಗಾರರು ಭಾಗವಹಿಸುವುದನ್ನು ಸುನಿಶ್ಚಿತಪಡಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳತಕ್ಕದ್ದು.] (೧೯೭೬ನೇ ಇಸವಿಯ ಸಂವಿಧಾನ (ನಲವತ್ತರಡನೆಯ ತಿದ್ದುಪಡಿ) ಅಧಿನಿಯಮದ ೯ನೇ ಪ್ರಕರಣದ ಮೂಲಕ (೩.೧.೧೯೭೭ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

[೪೩ಬಿ. ಸಹಕಾರಸಂಘಗಳಸಂವರ್ಧನೆ:- ಸಹಕಾರ ಸಂಘಗಳು ಸ್ವಯಂ ಆಗಿ ರಚನೆಯಾಗುವುದನ್ನು, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವುದನ್ನು, ಅವುಗಳಲ್ಲಿ ಪ್ರಜಾಸತ್ತಾತ್ಮಕವಾದ ನಿಯಂತ್ರಣ ಮತ್ತು ವೃತ್ತೀಯ ನಿರ್ವಹಣೆ ಹೊಂದಿರುವುದನ್ನು ಉತ್ತೇಜಿಸುವುದಕ್ಕೆ ರಾಜ್ಯ ಪ್ರಯತ್ನಿಸತಕ್ಕದ್ದು]. (೨೦೧೧ನೇ ಇಸವಿಯ ಸಂವಿಧಾನ (ತೊಂಬತ್ತೇಳನೇ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ (೧೫.೦೨.೨೦೧೨ ರಿಂದ ಜಾರಿಗೆ ಬರುವಂತೆ), ತಿದ್ದುಪಡಿಯಾದಂತೆ ಸೇರಿಸಲಾಗಿದೆ.)

೪೪. ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆ: ಭಾರತದ ರಾಜ್ಯಕ್ಷೇತ್ರದಾದ್ಯಂತ ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆಯು ಇರುವ ಹಾಗೆ ರಾಜ್ಯವು ಪ್ರಯತ್ನಿಸತಕ್ಕದ್ದು.

[೪೫. ಆರುವರ್ಷಗಳಿಗಿಂತಕಡಿಮೆವಯಸ್ಸಿನಶೈಶವಾವಸ್ಥೆಯಮಕ್ಕಳಆರೈಕೆಮತ್ತುಅವರಿಗೆಶಿಕ್ಷಣ ಒದಗಿಸುವುದು:- ರಾಜ್ಯವು ಆರು ವರ್ಷ ವಯಸ್ಸು ಪೂರ್ತಿಯಾಗುವ ತನಕ ಶೈಶವಾವಸ್ಥೆಯ ಎಲ್ಲ ಮಕ್ಕಳ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದಕ್ಕೆ ಪ್ರಯತ್ನಿಸತಕ್ಕದ್ದು.] (೨೦೦೨ನೆಯ ಇಸವಿಯ ಸಂವಿಧಾನ (ಎಂಭತ್ತಾರನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ ದಿನಾಂಕ ೧.೪.೨೦೧೦ ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ.)

೪೬. ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ: ರಾಜ್ಯವು ದುರ್ಬಲ ವರ್ಗಗಳ, ವಿಶೇಷವಾಗಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ಸಂವರ್ಧಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಸಂರಕ್ಷಿಸತಕ್ಕದ್ದು.

೪೭. ಪೌಷ್ಠಿಕತೆಯ ಮಟ್ಟವನ್ನು ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ: ರಾಜ್ಯವು ತನ್ನ ಜನತೆಯ ಪೌಷ್ಠಿಕತೆಯ ಮಟ್ಟವನ್ನು ಹಾಗೂ ಜೀವನದ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ತನ್ನ ಪ್ರಾಥಮಿಕ ಕರ್ತವ್ಯಗಳಲ್ಲಿ ಸೇರಿದೆಯೆಂದು ಪರಿಗಣಿಸತಕ್ಕದ್ದು ಮತ್ತು ವಿಶೇಷವಾಗಿ ಔಷಧದ ಉದ್ದೇಶಗಳಿಗಲ್ಲದೆ, ಮಾದಕ ಪಾನೀಯಗಳ ಮತ್ತು ಆರೋಗ್ಯಕ್ಕೆ ಹಾನಿಕರವಾದ ಔಷಧಿಗಳ ಸೇವನೆಯನ್ನು ನಿಷೇಧಿಸಲು ರಾಜ್ಯವು ಪ್ರಯತ್ನಿಸತಕ್ಕದ್ದು.

೪೮. ಕೃಷಿಮತ್ತುಪಶುಸಂಗೋಪನೆಯಸಂಘಟನೆ:Š ರಾಜ್ಯವು ಕೃಷಿಯನ್ನು ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಘಟನೆಗೊಳಿಸುವುದಕ್ಕೆ ಪ್ರಯತ್ನಿಸತಕ್ಕದ್ದು ಮತ್ತು ವಿಶೇಷವಾಗಿ ತಳಿಗಳನ್ನು ಸಂರಕ್ಷಿಸಿ ಸುಧಾರಣೆಗೊಳಿಸುವುದಕ್ಕಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ಜಾನುವಾರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಕ್ರಮ ಕೈಗೊಳ್ಳತಕ್ಕದ್ದು.

[೪೮ಎ. ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ ರಕ್ಷಣೆ: ದೇಶದ ಪರಿಸರವನ್ನು ಸಂರಕ್ಷಿಸಲು ಮತ್ತು ಸುಧಾರಿಸಲು ಹಾಗೂ ಅರಣ್ಯಗಳನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ರಾಜ್ಯವು ಪ್ರಯತ್ನಿಸತಕ್ಕದ್ದು.] (೧೯೭೬ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೦ನೆಯ ಪ್ರಕರಣದ ಮೂಲಕ (೩.೧.೧೯೭೭ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

೪೯. ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ, ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ: ರಾಷ್ಟ್ರೀಯ ಮಹತ್ವವುಳ್ಳದ್ದೆಂದು [ಸಂಸತ್ತು ಮಾಡಿದ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಘೋಷಿಸಲಾಗಿರುವ] ಕಲಾತ್ಮಕ ಅಥವಾ ಐತಿಹಾಸಿಕ ಆಸಕ್ತಿ ಹುಟ್ಟಿಸುವ ಪ್ರತಿಯೊಂದು ಸ್ಮಾರಕವನ್ನು ಅಥವಾ ಸ್ಥಳವನ್ನು ಅಥವಾ ವಸ್ತುವನ್ನು, ಸಂದರ್ಭಾನುಸಾರ, ಅಪಹರಿಸದಂತೆ, ವಿರೂಪಗೊಳಿಸದಂತೆ, ನಾಶಗೊಳಿಸದಂತೆ, ತೆಗೆದುಕೊಂಡು ಹೋಗದಂತೆ, ವಿಲೇ ಮಾಡದಂತೆ ಅಥವಾ ರಫ್ತು ಮಾಡದಂತೆ ಸಂರಕ್ಷಿಸುವುದು ರಾಜ್ಯದ ಹೊಣೆಯಾಗಿರತಕ್ಕದ್ದು. (೧೯೫೬ನೇ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ ೨೭ನೆಯ ಪ್ರಕರಣದ ಮೇರೆಗೆ “ಸಂಸತ್ತು ಕಾನೂನು ಮೂಲಕ ಘೋಷಿಸಿರತಕ್ಕ” ಎಂಬ ಪದಗಳಿಗೆ ಬದಲಾಗಿ, ಈ ಪದಗಳನ್ನು ಪ್ರತ್ಯಾಯೋಜಿಸಲಾಗಿದೆ.)

೫೦. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು: ರಾಜ್ಯದ ಲೋಕಸೇವೆಗಳಲ್ಲಿ ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸಲು ರಾಜ್ಯವು ಕ್ರಮ ಕೈಗೊಳ್ಳತಕ್ಕದ್ದು.

೫೧. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಂವರ್ಧನೆ: ರಾಜ್ಯವು, (ಎ) ಅಂತರರಾಷ್ಟ್ರೀಯ ಶಾಂತಿಯನ್ನು ಮತ್ತು ಭದ್ರತೆಯನ್ನು ಸಂವರ್ಧನೆಗೊಳಿಸುವುದಕ್ಕೆ; (ಬಿ) ರಾಷ್ಟ್ರ ರಾಷ್ಟ್ರಗಳ ನಡುವೆ ನ್ಯಾಯಯುತವಾದ ಮತ್ತು ಗೌರವಯುತವಾದ ಸಂಬಂಧಗಳನ್ನಿಟ್ಟುಕೊಂಡು ಬರುವುದಕ್ಕೆ; (ಸಿ) ಸಂಘಟಿತ ಜನರು, ಪರಸ್ಪರ ವ್ಯವಹರಿಸುವಲ್ಲಿ ಅಂತರರಾಷ್ಟ್ರೀಯ ಕಾನೂನುಗಳ ಮತ್ತು ಕೌಲುಗಳ ಬಾಧ್ಯತೆಗಳ ಬಗ್ಗೆ ಗೌರವ ಬೆಳೆಸುವುದಕ್ಕೆ; ಮತ್ತು (ಡಿ) ಅಂತರರಾಷ್ಟ್ರೀಯ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರೋತ್ಸಾಹಿಸುವುದಕ್ಕೆ ಪ್ರಯತ್ನಿಸತಕ್ಕದ್ದು.

[ಭಾಗIVAಮೂಲಭೂತಕರ್ತವ್ಯಗಳು

(೧೯೭೬ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೧ನೇ ಪ್ರಕರಣದ ಮೂಲಕ (೩Š೧Š೧೯೭೭ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

೫೧ಎ. ಮೂಲಭೂತ ಕರ್ತವ್ಯಗಳು: ಕೆಳಕಂಡ ಕರ್ತವ್ಯಗಳನ್ನು ಪಾಲಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರತಕ್ಕದ್ದು ಎಂದರೆ: (ಎ) ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು; (ಬಿ) ನಮ್ಮ ರಾಷ್ಟ್ರೀಯ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು; (ಸಿ) ಭಾರತದ ಸಾರ್ವಭೌಮತ್ವವನ್ನು, ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು; (ಡಿ) ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು; (ಇ) ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದಭಾವಗಳಿಂದ ಅತೀತವಾಗಿ, ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು; (ಎಫ್) ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು; (ಜಿ) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು; (ಹೆಚ್) ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸುವುದು; (ಐ) ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು; (ಜೆ) ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು.]

[(ಕೆ) ತಂದೆ- ತಾಯಿ ಅಥವಾ ಪೋಷಕನು, ಸಂದರ್ಭಾನುಸಾರ ಆರರಿಂದ ಹದಿನಾಲ್ಕು ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು.] (೨೦೦೨ನೇ ಇಸವಿಯ ಸಂವಿಧಾನ (ಎಂಬತ್ತಾನೆಯ ತಿದ್ದುಪಡಿ) ಅಧಿನಿಯಮದ ೪ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ (ಇದು ಇನ್ನೂ ಜಾರಿಗೆ ಬಂದಿರುವುದಿಲ್ಲ, ದಿನಾಂಕವನ್ನು ನಂತರ ಅಧಿಸೂಚಿಸಲಾಗುವುದು).

ಮೂಲ: ಭಾರತದ ಸಂವಿಧಾನ (14ನೇ ಜನವರಿ, 2019ರಂದು ಇದ್ದಂತೆ), ಭಾರತ ಸರ್ಕಾರ, ಕಾನೂನು ಮತ್ತು ನ್ಯಾಯ ಮಂತ್ರಾಲಯ, ವಿಧಾಯಿ ಇಲಾಖೆ, ಕರ್ನಾಟಕ ರಾಜ ಭಾಷಾ (ವಿಧಾಯೀ) ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಪು. 20 ರಿಂದ 23

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]