ಬೆಳಗಾವಿ: ಬಹುನಿರೀಕ್ಷಿತ ಬೆಳಗಾವಿ ಲೋಕಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಕಾಂಗ್ರೆಸ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲಿದ್ದಾರೆ. ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ್ದ ಇವರು ಈ ಬಾರಿ ಕೂಡ ಸರಳವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಸರಳವಾಗಿ ನಾಮಪತ್ರ ಸಲ್ಲಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದು, ಜನರ ಬೆಂಬಲ ಕೋರಿದ್ದಾರೆ.
ನನ್ನನ್ನು ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪಕ್ಷ ಘೋಷಣೆ ಮಾಡಿದೆ. ಆದ್ದರಿಂದ ಸೋಮವಾರ ದಿ. 29-03-2021ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ, ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಮತ್ತು ವಿಧಾನಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್. ಪಾಟೀಲ, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಗಣ್ಯರು ಮಾತ್ರ ಅವರು ಉಪಸ್ಥಿತರಿರುತ್ತಾರೆ ಎಂದಿದ್ದಾರೆ.
ಈ ಹಿಂದೆಯೂ ನಾವು ಕೂಡ ಐದು ಬಾರಿ ವಿಧಾನಪರಿಷತ್ ಮತ್ತು ವಿಧಾನಸಭೆಗೆ ನಾಮಪತ್ರ ಸಲ್ಲಿಸುವಾಗ ಕೇವಲ 5 ಜನ ಪಕ್ಷದ ಕಾರ್ಯಕರ್ತರ ಜೊತೆಗೆ ನಾಮಪತ್ರ ಸಲ್ಲಿಸಿದ ಉದಾಹರಣೆಗಳು ಇವೆ. ನಾಮಪತ್ರ ಸಲ್ಲಿಸಲು ಹಿಂದಿನಂತೆ ಯಾವುದೇ ಆಡಂಬರ, ಮೆರವಣಿಗೆ ಮಾಡದೇ ಅತ್ಯಂತ ಸರಳವಾಗಿ ಪಕ್ಷದ ಮುಖಂಡರು ಮಾತ್ರ ಭಾಗವಹಿಸಲು ನಿರ್ಧರಿಸಲಾಗಿದೆ. ಇದನ್ನು ಪಕ್ಷದಕಾರ್ಯಕರ್ತರು ಮತ್ತು ಅಭಿಮಾನಿಗಳು ಗಮನಿಸಬೇಕಾಗಿ ವಿನಂತಿ ಎಂದು ಅವರು ಹೇಳಿದ್ದಾರೆ.
ಈ ಮೂಲಕ ನಾಮಪತ್ರ ಸಲ್ಲಿಸುವ ವೇಳೆ ಅನವಶ್ಯಕವಾಗಿ ಹೆಚ್ಚು ಜನ ಸೇರದಮತೆ ಮತ್ತು ಪಟಾಕಿ, ಹೂವಿನ ಹಾರ ಇತ್ಯಾದಿಗಳನ್ನು ಬಳಸುವುದಕ್ಕೆ ತಮ್ಮ ಎಂದಿನ ವಿರೋಧ ಇರುವ ಸಂಗತಿಯನ್ನು ಸೂಕ್ಷ್ಮವಾಗಿ ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ.
