ಬೆಂಗಳೂರು: ಕಾಲಕಾಲಕ್ಕೆ ಚುನಾವಣೆ ನಡೆಸುವುದು ಭಾರತೀಯ ಸಂವಿಧಾನದ ಮೂಲತತ್ವ ಎಂದು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಬೆಂಗಳೂರಿನ ಶಾಸಕರ ಭವನದಲ್ಲಿ ಆಯೋಜಿಸಲಾಗಿದ್ದ, ಒಬಿಸಿ ಮೀಸಲಾತಿ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು: ಸವಾಲುಗಳು – ಸಾಧ್ಯತೆಗಳು ವಿಷಯದ ಕುರಿತು ಮಾತಾಡಿದ ಅವರು, ಕಾಲಕಾಲಕ್ಕೆ ಚುನಾವಣೆ ನಡೆಸುವುದು ಭಾರತೀಯ ಸಂವಿಧಾನದ ಮೂಲತತ್ವ ಆಗಿರುವುದರಿಂದ ಇಂದಿನ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸಬೇಕು. ಅದರಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದರು.
ಮೀಸಲಾತಿ ನಿಗದಿಯಾಗಿಲ್ಲ, ಬರ ಬಂದಿದೆ, ನೆರೆ ಬಂದಿದೆ ಎಂಬ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡಬಾರದು. ಕಾಲಕಾಲಕ್ಕೆ ಚುನಾವಣೆಗಳನ್ನು ಕಡ್ಡಾಯವಾಗಿ ನಡೆಸುವುದು ಸಾಂವಿಧಾನಿಕ ಜವಾಬ್ದಾರಿ. ಆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲೇಬೇಕು. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಚುನಾವಣೆಗಳನ್ನು ನಡೆಸಬೇಕು ಎಂದರು.
ಚುನಾವಣೆ ನಡೆಸಲು ಸರ್ವೋಚ್ಛ ನ್ಯಾಯಾಲಯಗಳ ಮೂರು ತೀರ್ಪುಗಳು ಅಡ್ಡಬರುತ್ತಿವೆಯಲ್ಲ ಎಂಬ ಮಾತಿದೆ. ಈ ಮೂರು ತೀರ್ಪುಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕು. ವಾರದ ಹಿಂದೆ ಮಧ್ಯಪ್ರದೇಶ ಸರ್ಕಾರ ರಚಿಸಿರುವ 1 ವರದಿಯನ್ನು ಕೊಟ್ಟಿದೆ. ಆ ವರದಿಯ ಆಧಾರದ ಮೇಲೆ ರಾಜಕೀಯವಾಗಿ ಹಿಂದುಳಿದವರು ಯಾರು ಎಂಬುದರ ಆಧಾರದ ಮೇಲೆ ಮೀಸಲಾತಿಯ ಪ್ರಮಾಣವನ್ನು ತೀರ್ಮಾನಿಸಲಾಗಿದೆ. ಇದನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.
ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶವನ್ನು ತಿದ್ದುಪಡಿ ಮಾಡಿ ಮಧ್ಯಪ್ರದೇಶದಲ್ಲಿ ಇದರ ಆಧಾರದಲ್ಲಿ ಚುನಾವಣೆಯನ್ನು ನಡೆಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ದರಿಂದ ಈಗ ನಮಗೆ ಒಂದು ದಾರಿ ಮುಕ್ತವಾಗಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಒಂದು ಆಯೋಗ ರಚಿಸಿ, ಮಾಹಿತಿ ಪಡೆದು, ಕೂಡಲೇ ಮೀಸಲಾತಿಯನ್ನು ನಿರ್ಧರಿಸಿ, ಅದನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದರಿಂದ ತಕ್ಷಣ ಚುನಾವಣೆಗಳನ್ನು ನಡೆಸಲು ಅವಕಾಶವಿದೆ. ಈ ಪ್ರಯತ್ನವನ್ನು ಮಾಡಬೇಕು ಎಂದರು.
ಕರ್ನಾಟದಲ್ಲಿ ಹಿಂದುಳಿದ ವರ್ಗಗಳ ಆಯೋಗ ಕಾಂತರಾಜ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಎಲ್ಲ ಜಾತಿಗಳ ಸಮೀಕ್ಷೆ ನಡೆದಿದೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆದಿದೆ. ಆ ವರದಿ ಸಿದ್ಧವಾಗಿದೆ. ಕಾರಣಾಂತರಗಳಿಂದ ನಮ್ಮ ಸರ್ಕಾರಗಳು ಅದನ್ನು ಸ್ವೀಕರಿಸುತ್ತಿಲ್ಲ. ತಕ್ಷಣ ಈ ಸಮೀಕ್ಷಾ ವರದಿಯನ್ನು ಪಡೆಯಬೇಕು. ಅದನ್ನು ಚರ್ಚೆಗೆ ಇಡಬೇಕು. ಅದರಲ್ಲಿ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು. ಸಾಧ್ಯವಿದೆ ಎಂದರೆ ಅದರ ಆಧಾರದಲ್ಲಿ ರಾಜ್ಯದಲ್ಲಿ ರಾಜಕೀಯವಾಗಿ ಹಿಂದುಳಿದಿರುವ ಜಾತಿಗಳು ಯಾವುವು, ಯಾವ ಜಾತಿಗಳನ್ನು ಎಲ್ಲಿ ಸೇರಿಸಬೇಕು ಎಂದು ವರ್ಗೀಕರಿಸಬಹುದು. ಅದರ ಆಧಾರದಲ್ಲಿ ಯಾವ ಪ್ರವರ್ಗಕ್ಕೆ ಎಷ್ಟು ಮೀಸಲಾತಿಯನ್ನು ಕೊಡಬಹುದು ಎಂದು ನಿರ್ಧರಿಸಬಹುದು. ಈ ಕೆಲಸ ತುರ್ತಾಗಿ ನಡೆಯಬೇಕು ಎಂದರು.