125. ನ್ಯಾಯಾಧೀಶರ ಸಂಬಳಗಳು, ಇತ್ಯಾದಿ:- [1986ನೇ ಇಸವಿಯ ಸಂವಿಧಾನ (ಐವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ (1)ನೇ ಖಂಡಕ್ಕೆ ಬದಲಾಗಿ (1.4.1986 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] (1) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಕಾನೂನಿನ ಮೂಲಕ ಸಂಸತ್ತು ನಿರ್ಧರಿಸಬಹುದಾದಂಥ ಸಂಬಳಗಳನ್ನು ಸಂದಾಯ ಮಾಡತಕ್ಕದ್ದು ಮತ್ತು ಆ ಬಗ್ಗೆ ಉಪಬಂಧವನ್ನು ಹಾಗೆ ಕಲ್ಪಿಸುವವರೆಗೆ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂಥ ಸಂಬಳಗಳನ್ನು ಸಂದಾಯ ಮಾಡತಕ್ಕದ್ದು.
(2) ಪ್ರತಿಯೊಬ್ಬ ನ್ಯಾಯಾಧೀಶನು ಸಂಸತ್ತು ಮಾಡಿದ ಕಾನೂನಿನ ಮೂಲಕ ಅಥವಾ ಮೇರೆಗೆ ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ವಿಶೇಷಾಧಿಕಾರಗಳಿಗೆ ಮತ್ತು ಭತ್ಯೆಗಳಿಗೆ, ಗೈರುಹಾಜರಿ ರಜೆಗೆ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದಂಥ ಹಕ್ಕುಗಳಿಗೆ ಮತ್ತು ಅವುಗಳನ್ನು ಹಾಗೆ ನಿರ್ಧಾರ ಮಾಡುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂಥ ವಿಶೇಷಾಧಿಕಾರಗಳಿಗೆ, ಭತ್ಯೆಗಳಿಗೆ ಮತ್ತು ಹಕ್ಕುಗಳಿಗೆ ಹಕ್ಕುಳ್ಳವನಾಗಿರತಕ್ಕದ್ದು:
ಪರಂತು. ನ್ಯಾಯಾಧೀಶನ ವಿಶೇಷಾಧಿಕಾರಗಳು, ಭತ್ಯೆಗಳು, ಗೈರುಹಾಜರಿ ರಜೆಗೆ ಅಥವಾ ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಅವನ ಹಕ್ಕುಗಳು, ಅವನ ನೇಮಕದ ತರುವಾಯ, ಅವನಿಗೆ ಅನಾನುಕೂಲವಾಗುವಂತೆ ವ್ಯತ್ಯಸ್ತಗೊಳ್ಳತಕ್ಕದ್ದಲ್ಲ.
126. ಕಾರ್ಯಾರ್ಥ ಮುಖ್ಯ ನ್ಯಾಯಮೂರ್ತಿಯ ನೇಮಕ:- ಭಾರತದ ಮುಖ್ಯ ನ್ಯಾಯಮೂರ್ತಿಯ ಪದವು ಖಾಲಿ ಆದಾಗ ಅಥವಾ ಮುಖ್ಯ ನ್ಯಾಯಮೂರ್ತಿಯು ಗೈರುಹಾಜರಾದ ಕಾರಣದಿಂದ ಅಥವಾ ಇತರ ಕಾರಣಗಳಿಂದ ತನ್ನ ಪದದ ಕರ್ತವ್ಯಗಳನ್ನು ನೆರವೇರಿಸಲು ಅವನು ಅಸಮರ್ಥನಾದಾಗ, ಆ ನ್ಯಾಯಾಲಯದ ಇತರ ನ್ಯಾಯಾಧೀಶರ ಪೈಕಿ ಆ ಉದ್ದೇಶಕ್ಕಾಗಿ ರಾಷ್ಟ್ರಪತಿಯು ನೇಮಕ ಮಾಡಬಹುದಾದಂಥ ನ್ಯಾಯಾಧೀಶನು ಆ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
127. ಅಡ್‌ಹಾಕ್ ನ್ಯಾಯಾಧೀಶರ ನೇಮಕ:- (1) ಯಾವುದೇ ಕಾಲದಲ್ಲಿ ಸರ್ವೋಚ್ಚ ನ್ಯಾಯಾಲಯದ ಯಾವುದೇ ಅಧಿವೇಶನವನ್ನು ನಡೆಸಲು ಅಥವಾ ಮುಂದುವರಿಸಲು, ಆ ನ್ಯಾಯಾಲಯದ ನ್ಯಾಯಾಧೀಶರ ಕೋರಂ ಇಲ್ಲದಿರುವಲ್ಲಿ [ಸಂವಿಧಾನ (99ನೆಯ ತಿದ್ದುಪಡಿ) ಅಧಿನಿಯಮ, 2014ನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶ ದಿನಾಂಕ:16-10-2015ರಲ್ಲಿ ಅಸಿಂಧುಗೊಳಿಸಿದೆ.] [ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗವು, ಭಾರತದ ಮುಖ್ಯ ನ್ಯಾಯಮೂರ್ತಿಯು ತನಗೆ ಉಲ್ಲೇಖ ಮಾಡಿದಾಗ ರಾಷ್ಟ್ರಪತಿಯ ಪೂರ್ವಸಮ್ಮತಿ ಪಡೆದು] ಮತ್ತು ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಡನೆ ಸಮಾಲೋಚನೆ ನಡೆಸಿದ ತರುವಾಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳುವುದಕ್ಕೆ ತಕ್ಕ ಅರ್ಹತೆ ಪಡೆದಿರುವ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯು ಹೆಸರಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶನೊಬ್ಬನನ್ನು ಅವಶ್ಯವಾಗಬಹುದಾದಷ್ಟು ಅವಧಿಯವರೆಗೆ, ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ ಆಡ್ ಹಾಕ್ ನ್ಯಾಯಾಧೀಶನಾಗಿ ಹಾಜರಿರುವಂತೆ ಲಿಖಿತದ ಮೂಲಕ ಕೋರಬಹುದು.
(2) ಹಾಗೆ ಹೆಸರಿಸಲಾದ ನ್ಯಾಯಾಧೀಶನು ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ, ಅವನ ಹಾಜರಾತಿಯು ಅವಶ್ಯವಿರುವ ಕಾಲದಲ್ಲಿ ಮತ್ತು ಅವಶ್ಯವಿರುವ ಅವಧಿಯವರೆಗೆ ಹಾಜರಾಗಿ ಕೆಲಸ ಮಾಡಲು ತನ್ನ ಪದದ ಇತರ ಕರ್ತವ್ಯಗಳಿಗಿಂತ ಹೆಚ್ಚು ಆದ್ಯತೆ ಕೊಡುವುದು ಅವನ ಕರ್ತವ್ಯವಾಗಿರತಕ್ಕದ್ದು, ಮತ್ತು ಅವನು ಹಾಗೆ ಹಾಜರಾಗಿ ಕೆಲಸ ಮಾಡುವಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನ ಎಲ್ಲ ಅಧಿಕಾರ ವ್ಯಾಪ್ತಿಯನ್ನು, ಅಧಿಕಾರಗಳನ್ನು ಮತ್ತು ವಿಶೇಷಾಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಅವನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
128. ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ ನಿವೃತ್ತ ನ್ಯಾಯಾಧೀಶರ ಹಾಜರಾತಿ:- ಈ ಅಧ್ಯಾಯದಲ್ಲಿ ಏನೇ ಇದ್ದಾಗ್ಯೂ, [ಸಂವಿಧಾನ (99ನೆಯ ತಿದ್ದುಪಡಿ) ಅಧಿನಿಯಮ, 2014ನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶ ದಿನಾಂಕ:16-10-2015ರಲ್ಲಿ ಅಸಿಂಧುಗೊಳಿಸಿದೆ.] [ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗವು ರಾಷ್ಟ್ರಪತಿಯ ಪೂರ್ವಸಮ್ಮತಿ ಪಡೆದು ಸರ್ವೋಚ್ಚ ನ್ಯಾಯಾಲಯದ ಅಥವಾ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶನಾಗಿದ್ದ [1963ನೆಯ ಇಸವಿಯ ಸಂವಿಧಾನ (ಹದಿನೈದನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.] [ಅಥವಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿದ್ದ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ತಕ್ಕ ಅರ್ಹತೆಯುಳ್ಳ ಯಾರೇ ವ್ಯಕ್ತಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಕುಳಿತು ಕಾರ್ಯನಿರ್ವಹಿಸುವಂತೆ ಯಾವುದೇ ಕಾಲದಲ್ಲಿ ಕೋರಬಹುದು ಮತ್ತು ಯಾವ ವ್ಯಕ್ತಿಯನ್ನು ಹಾಗೆ ಕೋರಲಾಗಿದೆಯೋ ಆ ಪ್ರತಿಯೊಬ್ಬ ವ್ಯಕ್ತಿಯು ಹಾಗೆ ಕಾರ್ಯ ನಿರ್ವಹಿಸುವಾಗ ರಾಷ್ಟ್ರಪತಿಯು ಆದೇಶದ ಮೂಲಕ ನಿರ್ಧರಿಸಬಹುದಾದಂಥ ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಅವನು ಆ ನ್ಯಾಯಾಲಯದ ನ್ಯಾಯಾಧೀಶನ ಎಲ್ಲ ಅಧಿಕಾರ ವ್ಯಾಪ್ತಿಯನ್ನು ಅಧಿಕಾರಗಳನ್ನು ಮತ್ತು ವಿಶೇಷಾಧಿಕಾರಗಳನ್ನು ಹೊಂದಿರತಕ್ಕದ್ದು; ಆದರೆ, ಅವನನ್ನು ಆ ನ್ಯಾಯಾಲಯದ ನ್ಯಾಯಾಧೀಶನೆಂದು ಅನ್ಯಥಾ ಭಾವಿಸತಕ್ಕದ್ದಲ್ಲ:
ಪರಂತು. ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಹಿಂದೆ ಹೇಳಿದ ಯಾರೇ ವ್ಯಕ್ತಿಯು, ಆ ನ್ಯಾಯಾಲಯದ ನ್ಯಾಯಾಧೀಶನಾಗಿ ಕುಳಿತು ಕಾರ್ಯನಿರ್ವಹಿಸಲು ಸಮ್ಮತಿಸಿದ ಹೊರತು, ಹಾಗೆ ಕಾರ್ಯ ನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸುವುದಾಗಿ ಭಾವಿಸತಕ್ಕದ್ದಲ್ಲ.
129. ಸರ್ವೋಚ್ಚ ನ್ಯಾಯಾಲಯವು ಅಭಿಲೇಖ ನ್ಯಾಯಾಲಯವಾಗಿರತಕ್ಕದ್ದು:- ಸರ್ವೋಚ್ಚ ನ್ಯಾಯಾಲಯವು ಅಭಿಲೇಖ ನ್ಯಾಯಾಲಯವಾಗಿರತಕ್ಕದ್ದು ಮತ್ತು ಅದಕ್ಕೆ ಆದ ನಿಂದನೆಗೆ ದಂಡಿಸುವ ಅಧಿಕಾರವನ್ನೂ ಒಳಗೊಂಡಂತೆ ಅಂಥ ನ್ಯಾಯಾಲಯದ ಎಲ್ಲ ಅಧಿಕಾರಗಳನ್ನು ಅದು ಹೊಂದಿರತಕ್ಕದ್ದು.
130. ಸರ್ವೋಚ್ಚ ನ್ಯಾಯಾಲಯದ ಕಾರ್ಯಸ್ಥಾನ:- ಸರ್ವೋಚ್ಚ ನ್ಯಾಯಾಲಯವು ದೆಹಲಿಯಲ್ಲಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಯು ರಾಷ್ಟ್ರಪತಿಯ ಅನುಮೋದನೆ ಪಡೆದು ಕಾಲಕಾಲಕ್ಕೆ ಗೊತ್ತು ಮಾಡಬಹುದಾದಂಥ ಇತರ ಸ್ಥಳದಲ್ಲಿ ಅಥವಾ ಸ್ಥಳಗಳಲ್ಲಿ ಉಪವೇಶನಗೊಳ್ಳತಕ್ಕದ್ದು.
131. ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ:- ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು,
(ಎ) ಭಾರತ ಸರ್ಕಾರದ ಮತ್ತು ಒಂದು ಅಥವಾ ಹೆಚ್ಚು ರಾಜ್ಯಗಳ ನಡುವೆ: ಅಥವಾ
(ಬಿ) ಭಾರತ ಸರ್ಕಾರದ ಮತ್ತು ಯಾವುದೇ ರಾಜ್ಯ ಅಥವಾ ಯಾವುದೇ ರಾಜ್ಯಗಳು ಒಂದು ಕಡೆ ಹಾಗೂ ಒಂದು ಅಥವಾ ಹೆಚ್ಚು ಇತರ ರಾಜ್ಯಗಳು ಇನ್ನೊಂದು ಕಡೆ – ಇವುಗಳ ನಡುವೆ; ಅಥವಾ
(ಸಿ) ಎರಡು ಅಥವಾ ಹೆಚ್ಚು ರಾಜ್ಯಗಳ ನಡುವೆ
– ಇರುವ ಯಾವುದೇ ವಿವಾದವು ಯಾವ ಪ್ರಶ್ನೆಯ ಮೇಲೆ (ಅದು ಕಾನೂನಿನದಾಗಿರಲಿ ಅಥವಾ ಸಂಗತಿಯದಾಗಿರಲಿ) ಕಾನೂನು ಸಮ್ಮತ ಹಕ್ಕಿನ ಅಸ್ತಿತ್ವವು ಅಥವಾ ವ್ಯಾಪ್ತಿಯು ಅವಲಂಬಿತವಾಗಿರುವುದೋ ಆ ಯಾವುದೇ ಪ್ರಶ್ನೆಯನ್ನು ಒಳಗೊಂಡಿದ್ದರೆ ಮತ್ತು ಒಳಗೊಂಡಿರುವಷ್ಟರ ಮಟ್ಟಿಗೆ ಸರ್ವೋಚ್ಚ ನ್ಯಾಯಾಲಯವು ಇತರ ಯಾವುದೇ ನ್ಯಾಯಾಲಯವನ್ನು ಹೊರತುಪಡಿಸಿ ಅಂಥ ವಿವಾದದಲ್ಲಿ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದು:
[1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ ಪರಂತುಕಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.] ಪರಂತು, ಸದರಿ ಅಧಿಕಾರ ವ್ಯಾಪ್ತಿಯು ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಮಾಡಿಕೊಂಡ ಅಥವಾ ಬರೆದುಕೊಟ್ಟ ಮತ್ತು ಈ ಸಂವಿಧಾನದ ಪ್ರಾರಂಭದ ನಂತರವೂ ಜಾರಿಯಲ್ಲಿರುವ ಅಥವಾ ಸದರಿ ಅಧಿಕಾರ ವ್ಯಾಪ್ತಿಯನ್ನು ಅಂಥ ವಿವಾದಕ್ಕೆ ವಿಸ್ತರಿಸತಕ್ಕದ್ದಲ್ಲವೆಂದು ಉಪಬಂಧಿಸುವ ಯಾವುದೇ ಕೌಲು, ಒಪ್ಪಂದ, ಒಡಂಬಡಿಕೆ, ವಚನಬಂಧ. ಸನದು ಅಥವಾ ಅಂಥದೇ ಇತರ ಲಿಖಿತಗಳಿಂದ ಉದ್ಭವಿಸುವ ವಿವಾದಕ್ಕೆ ವಿಸ್ತೃತವಾಗತಕ್ಕದ್ದಲ್ಲ.
[1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 23ನೆಯ ಪ್ರಕರಣದ ಮೂಲಕ 131ಎ ಎಂಬ ಹೊಸ ಅನುಚ್ಛೇದವನ್ನು (1-2-77ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿತ್ತು.]
[131ಎ ಕೇಂದ್ರ ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವದ ಬಗೆಗಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅನನ್ಯ ಅಧಿಕಾರ ವ್ಯಾಪ್ತಿ]. 1977ನೆಯ ಇಸವಿಯ ಸಂವಿಧಾನ (ನಲವತ್ತ ಮೂರನೆಯ ತಿದ್ದುಪಡಿ) ಅಧಿನಿಯಮದ 4ನೆಯ ಪ್ರಕರಣದ ಮೂಲಕ (13-4-78ರಿಂದ ಜಾರಿಗೆ ಬರುವಂತೆ) ನಿರಸನಗೊಳಿಸಲಾಗಿದೆ.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 51-52








