August 14, 2026 3:26 am

ಭಾಗ- VI – [ರಾಜ್ಯಗಳು] ((1956ನೆಯ ಇಸವಿಯ ಸಂವಿಧಾನ (ಏಳನೇ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ ಮೊದಲನೆಯ ಅನುಸೂಚಿಯ ಭಾಗ ಎ ಯಲ್ಲಿ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.)

ಅಧ್ಯಾಯ 1 – ಸಾಮಾನ್ಯ

152. ಪರಿಭಾಷೆ:- ಈ ಭಾಗದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು “ರಾಜ್ಯ” ಎಂಬ ಪದವು “[ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಳಗೊಳ್ಳುವುದಿಲ್ಲ.] (29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ ಎಂದರೆ “ಮೊದಲನೆಯ ಅನುಸೂಚಿಯ ಭಾಗ ‘ಎ’ ಯಲ್ಲಿ ನಿರ್ದಿಷ್ಟಪಡಿಸಿರುವ ಒಂದು ರಾಜ್ಯವೆಂದು ಅರ್ಥ” ಎಂಬುದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.)

ಅಧ್ಯಾಯ II – ಕಾರ್ಯಾಂಗ

ರಾಜ್ಯಪಾಲ

153. ರಾಜ್ಯಗಳ ರಾಜ್ಯಪಾಲರು:- ಪ್ರತಿಯೊಂದು ರಾಜ್ಯಕ್ಕೂ ಒಬ್ಬ ರಾಜ್ಯಪಾಲನಿರತಕ್ಕದ್ದು:

(ಪರಂತು, ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನನ್ನಾಗಿ ನೇಮಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.) (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 6ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.)

154. ರಾಜ್ಯದ ಕಾರ್ಯಾಂಗ ಅಧಿಕಾರ:-

(1) ರಾಜ್ಯದ ಕಾರ್ಯಾಂಗ ಅಧಿಕಾರವು ರಾಜ್ಯಪಾಲನಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅವನು ಅದನ್ನು ನೇರವಾಗಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕ ಈ ಸಂವಿಧಾನಕ್ಕನುಸಾರವಾಗಿ ಚಲಾಯಿಸತಕ್ಕದ್ದು.

(2) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, –

(ಎ) ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಮೂಲಕ ಇತರ ಯಾವುದೇ ಪ್ರಾಧಿಕಾರಕ್ಕೆ ಪ್ರದಾನ ಮಾಡಿರುವ ಯಾವುದೇ ಪ್ರಕಾರ್ಯಗಳನ್ನು ರಾಜ್ಯಪಾಲನಿಗೆ ವರ್ಗಾಯಿಸುತ್ತದೆಂದು ಭಾವಿಸತಕ್ಕದ್ದಲ್ಲ; ಅಥವಾ

(ಬಿ) ರಾಜ್ಯಪಾಲನಿಗೆ ಅಧೀನವಾಗಿರುವ ಯಾವುದೇ ಪ್ರಾಧಿಕಾರಕ್ಕೆ ಸಂಸತ್ತು ಅಥವಾ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಪ್ರಕಾರ್ಯಗಳನ್ನು ಪ್ರದಾನ ಮಾಡುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.

155. ರಾಜ್ಯಪಾಲನ ನೇಮಕ:- ರಾಷ್ಟ್ರಪತಿಯು ಒಂದು ರಾಜ್ಯದ ರಾಜ್ಯಪಾಲನನ್ನು ತಾನು ಸಹಿ ಮಾಡಿ ಮೊಹರು ಹಾಕಿದ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು.

156. ರಾಜ್ಯಪಾಲನ ಪದಾವಧಿ:-

(1) ರಾಜ್ಯಪಾಲನು ರಾಷ್ಟ್ರಪತಿಯ ಇಷ್ಟಪರ್ಯಂತ ಪದದಲ್ಲಿರತಕ್ಕದ್ದು.

(2) ರಾಜ್ಯಪಾಲನು ತಾನು ಸಹಿ ಮಾಡಿದ ಪತ್ರವನ್ನು ರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು.

(3) ಈ ಅನುಚ್ಛೇದದಲ್ಲಿ ಹಿಂದೆ ಹೇಳಿದ ಉಪಬಂಧಗಳಿಗೊಳಪಟ್ಟು, ರಾಜ್ಯಪಾಲನು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದದಲ್ಲಿರತಕ್ಕದ್ದು:

ಪರಂತು, ರಾಜ್ಯಪಾಲನು ತನ್ನ ಅವಧಿಯು ಮುಕ್ತಾಯವಾದಾಗ್ಯೂ, ತನ್ನ ಉತ್ತರಾಧಿಕಾರಿಯು ಪದವನ್ನು ವಹಿಸಿಕೊಳ್ಳುವವರೆಗೆ ಆ ಪದದಲ್ಲಿ ಮುಂದುವರಿಯತಕ್ಕದ್ದು.

157. ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹತೆಗಳು:- ಯಾರೇ ವ್ಯಕ್ತಿಯು ಭಾರತದ ನಾಗರಿಕನಾಗಿರುವ ಹೊರತು ಮತ್ತು ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.

158. ರಾಜ್ಯಪಾಲನ ಪದದ ಷರತ್ತುಗಳು:-

(1) ರಾಜ್ಯಪಾಲನು ಸಂಸತ್ತಿನ ಯಾವುದೇ ಒಂದು ಸದನದ ಅಥವಾ ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಒಂದು ಸದನದ ಸದಸ್ಯನೊಬ್ಬನು ರಾಜ್ಯಪಾಲನಾಗಿ ನೇಮಕಗೊಂಡರೆ, ಅವನು ರಾಜ್ಯಪಾಲನಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು.

(2) ರಾಜ್ಯಪಾಲನು ಇತರ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡತಕ್ಕದ್ದಲ್ಲ.

(3) ರಾಜ್ಯಪಾಲನು ಬಾಡಿಗೆಯನ್ನು ಸಂದಾಯ ಮಾಡದೆ ತನ್ನ ಅಧಿಕೃತ ನಿವಾಸಗಳನ್ನು ಬಳಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಸಹ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಹಕ್ಕುಳ್ಳವನಾಗಿರತಕ್ಕದ್ದು.

[(3ಎ) ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನಾಗಿ ನೇಮಕ ಮಾಡಿರುವಲ್ಲಿ, ಆ ರಾಜ್ಯಪಾಲನಿಗೆ ಸಂದಾಯ ಮಾಡಬೇಕಾದ ಉಪಲಬ್ಧಿಗಳನ್ನು ಮತ್ತು ಭತ್ಯೆಗಳನ್ನು ರಾಷ್ಟ್ರಪತಿಯು ಆದೇಶದ ಮೂಲಕ, ನಿರ್ಧರಿಸಬಹುದಾದಂಥ ಪ್ರಮಾಣದಲ್ಲಿ ಆ ರಾಜ್ಯಗಳೊಳಗೆ ಹಂಚಿಕೆ ಮಾಡತಕ್ಕದ್ದು. (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 7ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.)

(4) ರಾಜ್ಯಪಾಲನ ಪದಾವಧಿಯಲ್ಲಿ ಅವನ ಉಪಲಬ್ಧಿಗಳನ್ನು ಮತ್ತು ಭತ್ಯೆಗಳನ್ನು ಕಡಿಮೆ ಮಾಡತಕ್ಕದ್ದಲ್ಲ.

159. ರಾಜ್ಯಪಾಲನಿಂದ ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಚನ:- ಪ್ರತಿಯೊಬ್ಬ ರಾಜ್ಯಪಾಲನು ಮತ್ತು ರಾಜ್ಯಪಾಲನಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಆ ರಾಜ್ಯದ ಸಂಬಂಧದಲ್ಲಿ ಅಧಿಕಾರ ವ್ಯಾಪ್ತಿಯುಳ್ಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅಥವಾ ಅವನ ಗೈರುಹಾಜರಿಯಲ್ಲಿ ಆ ನ್ಯಾಯಾಲಯದ ನ್ಯಾಯಾಧೀಶರ ಪೈಕಿ ಲಭ್ಯವಿರುವ ಜೇಷ್ಠ ನ್ಯಾಯಾಧೀಶನ ಸಮಕ್ಷಮದಲ್ಲಿ ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು; ಎಂದರೆ:-

“… ಎಂಬ ಹೆಸರಿನ ನಾನು ನಿಷ್ಠಾಪೂರ್ವಕವಾಗಿ (ರಾಜ್ಯದ ಹೆಸರು) ರಾಜ್ಯಪಾಲನ ಪದದ ಕಾರ್ಯಪಾಲನೆಯನ್ನು (ಅಥವಾ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಯನ್ನು) ಮಾಡುತ್ತೇನೆಂದೂ ಮತ್ತು ನನಗೆ ಸಾಮರ್ಥ್ಯವಿದ್ದಷ್ಟೂ ಭಾರತ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಮಾಡುತ್ತೇನೆಂದೂ…… (ರಾಜ್ಯದ ಹೆಸರು) ರಾಜ್ಯದ ಜನತೆಯ ಸೇವೆಯಲ್ಲಿ ಮತ್ತು ಯೋಗಕ್ಷೇಮ ಸಾಧನೆಯಲ್ಲಿ ನಿರತನಾಗಿರುತ್ತೇನೆಂದೂ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ / ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ”.

160. ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆ:- ಈ ಅಧ್ಯಾಯದಲ್ಲಿ ಉಪಬಂಧಿಸಿರದ ಯಾವುದೇ ಆಕಸ್ಮಿಕ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಗಾಗಿ ರಾಷ್ಟ್ರಪತಿಯು ತಾನು ಸೂಕ್ತವೆಂದು ಭಾವಿಸುವಂಥ ಉಪಬಂಧವನ್ನು ಮಾಡಬಹುದು.

161. ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ, ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಕಡಿಮೆ ಮಾಡಲು ರಾಜ್ಯಪಾಲನ ಅಧಿಕಾರ:- ರಾಜ್ಯದ ಕಾರ್ಯಾಂಗ ಅಧಿಕಾರವು ವ್ಯಾಪ್ತವಾಗುವ ಯಾವುದೇ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ಅಪರಾಧದ ಅಪರಾಧಿಯೆಂದು ನಿರ್ಣಿತನಾದ ಯಾರೇ ವ್ಯಕ್ತಿಗೆ ವಿಧಿಸಿರುವ ದಂಡನೆಯ ಬಗ್ಗೆ ಕ್ಷಮಾದಾನವನ್ನು, ಪ್ರವಿಲಂಬನವನ್ನು, ಮುಂದೂಡಿಕೆ ಅಥವಾ ಮಾಫಿಯನ್ನು ಮಾಡಲು ಅಥವಾ ಶಿಕ್ಷೆಯನ್ನು ಆಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಜ್ಯದ ರಾಜ್ಯಪಾಲನಿಗೆ ಅಧಿಕಾರವಿರತಕ್ಕದ್ದು.

162. ರಾಜ್ಯದ ಕಾರ್ಯಾಂಗ ಅಧಿಕಾರ ವ್ಯಾಪ್ತಿ:- ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು, ರಾಜ್ಯದ ಕಾರ್ಯಾಂಗ ಅಧಿಕಾರವು, ಯಾವ ವಿಷಯಗಳ ಬಗ್ಗೆ ಆ ರಾಜ್ಯದ ವಿಧಾನಮಂಡಲವು ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿದೆಯೋ ಆ ವಿಷಯಗಳಿಗೆ ವ್ಯಾಪ್ತವಾಗತಕ್ಕದ್ದು:

ಪರಂತು, ರಾಜ್ಯದ ವಿಧಾನಮಂಡಲ ಮತ್ತು ಸಂಸತ್ತು ಯಾವ ವಿಷಯದ ಬಗ್ಗೆ ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿವೆಯೋ, ಆ ಯಾವುದೇ ವಿಷಯದ ಬಗ್ಗೆ ಆ ರಾಜ್ಯದ ಕಾರ್ಯಾಂಗ ಅಧಿಕಾರವು, ಈ ಸಂವಿಧಾನದ ಮೂಲಕ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಒಕ್ಕೂಟಕ್ಕೆ ಅಥವಾ ಅದರ ಪ್ರಾಧಿಕಾರಗಳಿಗೆ ವ್ಯಕ್ತವಾಗಿ ಪ್ರದಾನ ಮಾಡಲಾಗಿರುವ ಕಾರ್ಯಾಂಗ ಅಧಿಕಾರಕ್ಕೆ ಒಳಪಟ್ಟಿರತಕ್ಕದ್ದು ಮತ್ತು ಅಷ್ಟಕ್ಕೇ ಸೀಮಿತವಾಗಿರತಕ್ಕದ್ದು.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 61-62

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]