ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಎನ್ನುವಂತಹ ಮಾಜಿ ರಾಷ್ಟ್ರಪತಿಗಳ ವರದಿಯ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೊಂದು ಐತಿಹಾಸಿಕ ತೀರ್ಮಾನ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದೆ. ನಿಜಕ್ಕೂ ಈ ತೀರ್ಮಾನದ ಹಿಂದೆ ಇರುವ ಹಲವಾರು ಸಮಸ್ಯೆಗಳನ್ನ ಗಂಭೀರವಾಗಿ ಚಿಂತಿಸಬೇಕಾಗಿದೆ.
ಲೋಕಸಭಾ ಚುನಾವಣೆಗಳು ನಡೆಯುವುದು ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ, ಅಲ್ಲಿ ಚರ್ಚೆ ನಡೆಯುವುದು ದೇಶದ ಆರ್ಥಿಕ ನೀತಿ, ವಿದೇಶಾಂಗ ನೀತಿ, ಉದ್ಯೋಗ ನೀತಿ ಮುಂತಾದಂತಹ ಪ್ರಮುಖ ವಿಚಾರಗಳ ಮೇಲೆ. ಆದರೆ, ವಿಧಾನಸಭೆ ಚುನಾವಣೆಗಳು ನಡೆಯುವುದು ರಾಜ್ಯದ ಭಾಷೆ, ಸಂಸ್ಕೃತಿ, ಬದುಕು, ಮತ್ತು ಸ್ಥಳೀಯ ಸಮಸ್ಯೆಗಳ ವಿಚಾರದಲ್ಲಿ.
ಒಂದು ದೇಶ ಒಂದು ಚುನಾವಣೆ ಎಂಬ ಕಾರಣಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ರಾಷ್ಟ್ರೀಯ ನಾಯಕರ ಅಬ್ಬರದ ಪ್ರಚಾರಗಳು, ರಾಷ್ಟ್ರೀಯ ಪಕ್ಷಗಳ ಪ್ರಚಾರದ ವೈಖರಿ, ಇವುಗಳ ಮುಂದೆ ಪ್ರಾದೇಶಿಕ ವಿಚಾರಗಳು, ಪ್ರಾದೇಶಿಕ ನಾಯಕತ್ವ ಮತ್ತು ಪ್ರಾದೇಶಿಕತೆ ಹೆಚ್ಚು ಚರ್ಚೆಗೆ ಬರುವುದಿಲ್ಲ. ಇದರಿಂದಾಗಿ ಪ್ರಾದೇಶಿಕ ವಿಚಾರಗಳೆಲ್ಲವೂ ಸಹ ಮೂಲೆ ಸೇರುತ್ತವೆ.
ಹಂತಹಂತವಾಗಿ ದೇಶದಲ್ಲಿ ಪ್ರಾದೇಶಿಕ ನಾಯಕತ್ವವೂ ಇರುವುದಿಲ್ಲ, ಪ್ರಾದೇಶಿಕ ಪಕ್ಷಗಳು ಉಳಿಯುವುದೇ ಇಲ್ಲ. ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಉಳಿದುಕೊಳ್ಳುತ್ತದೆ ಹಾಗೂ ದೇಶದಾದ್ಯಂತ ಏಕವ್ಯಕ್ತಿ, ಏಕ ಪಕ್ಷ, ಏಕ ಆಲೋಚನೆಯ ವಿಚಾರಧಾರೆಗಳು, ವಿಜೃಂಭಿಸುತ್ತವೆ.
ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗಳನ್ನು ಒಂದು ಬಾರಿಗೆ, ಅದೇ ರೀತಿಯಲ್ಲಿ ದೇಶದ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಮತ್ತೊಂದು ದಿನದಲ್ಲಿ, ನಡೆಸಲಿ. ಇದರಿಂದ ರಾಷ್ಟ್ರೀಯತೆಯು ಉಳಿಯುತ್ತದೆ, ಪ್ರಾದೇಶಿಕತೆಯು ಉಳಿಯುತ್ತದೆ.
ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ. ಭಾರತದ ಸಂಸ್ಕೃತಿ ಸಾಮಾಜಿಕ ವ್ಯವಸ್ಥೆಯೇ ವಿವಿಧತೆಯಲ್ಲಿ ವಿಜೃಂಭಿಸುತ್ತಿದೆ .ಇಂತಹ ಸಂದರ್ಭದಲ್ಲಿ ಏಕತೆಯ ಹೆಸರಿನಲ್ಲಿ ನಮ್ಮ ಭಾರತದ ಮೂಲ ವೈವಿಧ್ಯತೆಯ ಸಂಸ್ಕೃತಿಯ ಬೇರುಗಳನ್ನು ಹಾಳು ಮಾಡಬಾರದು.
ಒಂದು ದೇಶ ಒಂದು ಚುನಾವಣೆಯ ಮಾತು ಹಾಗಿರಲಿ, ನಮ್ಮ ಪ್ರಧಾನ ಮಂತ್ರಿಗಳು ದೇಶದ ಲೋಕಸಭಾ ಚುನಾವಣೆಯನ್ನು 100 ದಿನಗಳ ಮಟ್ಟಿಗೆ ವಿಸ್ತರಿಸಿಕೊಂಡು ದೇಶದ ಜನರಿಗೆ ಸಾಕು ಎನಿಸುವ ಮಟ್ಟಿಗೆ ಚುನಾವಣಾ ಭಾಷಣಗಳು, ಸಭೆಗಳು, ರಸ್ತೆ ಮೆರವಣಿಗೆಗಳು ಇತ್ಯಾದಿ ನಡೆಯುತ್ತಿವೆ. ಮೊದಲು ದೇಶದ ಲೋಕಸಭಾ ಚುನಾವಣೆಯನ್ನು ನೂರು ದಿನಗಳ ಮಟ್ಟಿಗೆ ವಿಸ್ತರಿಸುವ ಬದಲಿಗೆ, ಕೆಲವು ದಿನಗಳ ಮಟ್ಟಿಗೆ ಮಾಡುವಂತಹ ಬದಲಾವಣೆಯನ್ನು ತರಲಿ.
ತಮಗೆ ಬೇಕಾದ ರಾಜ್ಯದಲ್ಲಿ ಹಲವಾರು ಹಂತದ ಚುನಾವಣೆ, ತಮಗೆ ಅನುಕೂಲವಿಲ್ಲದ ರಾಜ್ಯಗಳಲ್ಲಿ ಒಂದು ಹಂತದ ಚುನಾವಣೆ ಇವುಗಳನ್ನು ನೋಡುತ್ತಿದ್ದೇವೆ. ಈಗಾಗಲೇ ಭದ್ರತೆ ಸಿಬ್ಬಂದಿ ವ್ಯವಸ್ಥೆ, ಇವುಗಳ ಕಾರಣದಿಂದ ಲೋಕಸಭಾ ಚುನಾವಣೆಯನ್ನು ಏಳು ಹಂತಕ್ಕೆ ನಡೆಸುತ್ತಿರುವ ಚುನಾವಣೆ ಆಯೋಗದವರಿಗೆ, ಏಕಕಾಲದಲ್ಲಿ ರಾಜ್ಯಗಳು ಮತ್ತು ಲೋಕಸಭೆಗಳಿಗೆ ಚುನಾವಣೆಗಳನ್ನು ನಡೆಸಲು ಅಷ್ಟೊಂದು ಸಿಬ್ಬಂದಿ, ಅಷ್ಟೊಂದು ವ್ಯವಸ್ಥೆ, ಜೊತೆಗೆ ಭದ್ರತೆಯನ್ನು ಒದಗಿಸಲು ಸಾಧ್ಯವೇ ಎನ್ನುವುದನ್ನು ಚಿಂತಿಸಲಿ.
ಭದ್ರತೆಯ ನೆಪವನ್ನ ಹೇಳುತ್ತಾ ಹಲವಾರು ರಾಜ್ಯಗಳಲ್ಲಿ ಹಲವಾರು ಹಂತದಲ್ಲಿ ಚುನಾವಣೆ ನಡೆಸುತ್ತಿರುವ ಸಂದರ್ಭದಲ್ಲಿ ಇವುಗಳೆಲ್ಲವೂ ಸಾಧ್ಯವೇ ಎನ್ನುವುದನ್ನ ಪರಿಶೀಲಿಸಬೇಕಾಗಿದೆ. ಕೇವಲ ಯಾರನ್ನೋ ಮೆಚ್ಚಿಸಲು ಮಾತನಾಡುವುದಲ್ಲ, ಕೆಲವು ಮಾಧ್ಯಮದವರಿಗೆ ಮೋದಿಯವರು ಹೇಳುವುದೆಲ್ಲವೂ ವೇದವಾಕ್ಯವಾಗಿರುತ್ತದೆ. ಅದನ್ನು ವಿಮರ್ಶಿಸುವಂತಹ ಆಲೋಚನೆಯನ್ನು ಮಾಡುವುದಿಲ್ಲ.
ಒಂದು ದೇಶ ಒಂದು ಚುನಾವಣೆ ಅಷ್ಟು ಸಾಧು ಅಲ್ಲ, ಸಾಧ್ಯವೂ ಅಲ್ಲ. ಇದು ಕೇವಲ ಪ್ರಚಾರದ ವಿಚಾರವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ತಂದಂತಹ ಅನೇಕ ಮಸೂದೆಗಳು ಇಂದಿಗೂ ಸಹ ಕಾರ್ಯರೂಪಕ್ಕೆ ಬರದೆ ಕೇವಲ ಪ್ರಚಾರದಲ್ಲಿಯೇ ಉಳಿದುಕೊಂಡಿವೆ. ಅಂತಹ ಸಾಲಿಗೆ ಈ ವಿಚಾರವು ಸೇರಿಕೊಳ್ಳುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು








