April 24, 2024 7:21 pm

NEP ಮತ್ತು ಅಗ್ನಿಪಥ ಯೋಜನೆಯಿಂದ ಯವ ಜನಾಂಗಕ್ಕೆ ಸಂಕಟ

ಬೆಳಗಾವಿ: ಹೊಸ ಶಿಕ್ಷಣ ನೀತಿಯಿಂದ ದೇಶದ ಮೇಲ್ಜಾತಿಯವರನ್ನೂ ಒಳಗೊಂಡಂತೆ ಎಲ್ಲ ಜಾತಿಯ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸಂಶೋಧಕ ಡಾ.ಪ್ರದೀಪ್ ಮಾಲ್ಗುಡಿ ಹೇಳಿದರು.

ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಅಕಾಡೆಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಹೊಸ ಶಿಕ್ಷಣ ನೀತಿ, ಅಗ್ನಿಪಥ ಯೋಜನೆ ಮತ್ತು ಯುವಕರ ಭವಿಷ್ಯ ಚಿಂತನ – ಮಂಥನ ಶಿಬಿರದಲ್ಲಿ ಮಾತಾಡಿದ ಅವರು, ಶಿಕ್ಷಣವನ್ನು ಕಾರ್ಪೊರೇಟ್ ಗಳಿಸುವ ಹುನ್ನಾರ ಈ ಕಾಯ್ದೆಯ ಹಿಂದೆ ಇದೆ. ಶಿಕ್ಷಣ ನೀತಿಯನ್ನು ಈ ಹಿಂದಿನ ಸರ್ಕಾರಗಳು ರೂಪಿಸುವ ಸಮಯದಲ್ಲಿ ಶಿಕ್ಷಣ ತಜ್ಞರನ್ನು ನೇಮಿಸುತ್ತಿದ್ದವು. ಆದರೆ ಈಗ ಅದರ ಬದಲಿಗೆ ತಮ್ಮ ಸೈದ್ಧಾಂತಿಕ ವಿಚಾರಗಳಲ್ಲಿ ನಂಬಿಕೆ ಇರುವವರನ್ನು ನೇಮಿಸಿ, ಅವರ ಮೂಲಕ ತಮ್ಮ ಸೈದ್ಧಾಂತಿಕತೆಗೆ ಪೂರಕವಾಗಿ ಶಿಕ್ಷಣ ಕ್ಷೇತ್ರವನ್ನು ತಿರುಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಮನುಧರ್ಮಶಾಸ್ತ್ರದ ಪ್ರಕಾರ ಶೂದ್ರರಾದ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಪರಿಶಿಷ್ಟ ಜಾತಿಗಳು ಸೇರಿದಂತೆ ಇನ್ನಿತರರು ಹಾಗೂ ಮಹಿಳೆಯರಿಗೆ ಶಿಕ್ಷಣ ಕೊಡಬಾರದು. ಇದನ್ನೇ ಹೊಸಶಿಕ್ಷಣ ನೀತಿಯ ಮೂಲಕ ಜಾರಿಗೆ ತರಲು ಯತ್ನಿಸಲಾಗುತ್ತಿದೆ. ಇದರ ಭಾಗವಾಗಿಯೇ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಹೆಸರಿನಲ್ಲಿ ಶಿಕ್ಷಣ ವಂಚಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ ಮೊದಲ ಶಿಕ್ಷಣ ನೀತಿ 1968ರಲ್ಲಿ ಜಾರಿಗೆ ಬಂದ ಸಮಯದಲ್ಲಿ ಅಂದಿನ ಖ್ಯಾತ ಶಿಕ್ಷಣ ತಜ್ಞ ಪ್ರೊ.ಕೊಠಾರಿ ನೇತೃತ್ವದಲ್ಲಿ ಆಯೋಗ ರಚನೆಯಾಯಿತು. ಇದರಲ್ಲಿ ಶೈಕ್ಷಣಿಕ ಕ್ಷೇತ್ರದ 17 ತಜ್ಞರು, ಇವರ ಪೈಕಿ 7 ವಿದೇಶೀ ಶಿಕ್ಷಣ ತಜ್ಞರಿದ್ದರು. 21 ಉಪಸಮಿತಿಗಳನ್ನು ಆಯೋಗ ಹೊಂದಿದ್ದು, 251 ಶಿಕ್ಷಣ ತಜ್ಞರಿಂದ ವೈಜ್ಞಾನಿಕ ಹಾಗೂ ವ್ಯವಸ್ಥಿತ ಶಿಕ್ಷಣ ನೀತಿಯನ್ನು ರೂಪಿಸಿತ್ತು. ಇದರಲ್ಲಿ 9,000 ಶಿಕ್ಷಕರ ಸಲಹೆಯನ್ನು ಪಡೆಯಲಾಗಿತ್ತು. ಆದರೆ ಈಗ ನೇಮಿಸಲಾದ ಸಮಿತಿಯಲ್ಲಿ ಕೇವಲ ಮೇಲ್ಜಾತಿಯವರದು ಮತ್ತು ಸಂಘಪರಿವಾರದ ಹಿನ್ನೆಲೆಯವರನ್ನು ಮಾತ್ರ ತೆಗೆದುಕೊಳ್ಳಲಾಗಿತ್ತು. ಇದು ಎಲ್ಲ ಸಮುದಾಯಗಳ ಪರವಾದ ನೀತಿಯನ್ನು ರೂಪಿಸಲು ಸಾಧ್ಯವಾಗದ ಸಮಿತಿಯಾಗಿತ್ತು ಎಂದರು.

ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ದೇಶದ ಬಜೆಟ್ ನಲ್ಲಿ ಶೇ.10ರಷ್ಟು ಅಥವಾ ಜಿಡಿಪಿಯ ಶೇ.3ರಷ್ಟು ಹಣವನ್ನು ವಿನಿಯೋಗಿಸಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ಇದೇ ಮಾದರಿಯನ್ನು ಅಮೆರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್, ರಷ್ಯಾ ಮೊದಲಾದ ದೇಶಗಳಲ್ಲಿ ಅನುಸರಿಸಲಾಗುತ್ತಿದೆ. ಆದರೆ ಈ ನಿಟ್ಟಿನಲ್ಲಿ ಹಣ ವಿನಿಯೋಗಿಸುವ ಕುರಿತು ಶಿಕ್ಷಣ ನೀತಿಯಲ್ಲಿ ಉಲ್ಲೇಖವಿಲ್ಲ ಎಂದರು.

ಬಡವರು, ದೀನದಲಿತರು, ಶೋಷಿತರು ಇನ್ನು ಮುಂದೆ ಶಿಕ್ಷಣ ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ಹಣ ತುಂಬಿ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಸಣ್ಣಪುಟ್ಟ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು, ಉಪನ್ಯಾಸಕರಿಗೂ ಪ್ರತಿಕೂಲ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಇಷ್ಟು ದಿನ ಶಿಕ್ಷಕರಿಗೆ ಸಿಗುತ್ತಿದ್ದ ಪದೋನ್ನತಿಯ ಸಮಯದಲ್ಲಿ ಸಹೋದ್ಯೋಗಿಗಳ ಮತ್ತು ಮೇಲಧಿಕಾರಿಗಳ ಮೌಲ್ಯಮಾಪನ ಕಡ್ಡಾಯ ಇದರಿಂದ ಜಾತಿ, ಲಿಂಗ ಮತ್ತು ವರ್ಗ ಆಧಾರಿತವಾಗಿ ಮತ್ತಷ್ಟು ಶೋಷಣೆಗೆ ಅವಕಾಶವಾಗಲಿದೆ ಎಂದರು.

ರ್ಯಾಷನಲೈಸೇಷನ್ ಹೆಸರಿನಲ್ಲಿ ಹಳ್ಳಿಗಳಲ್ಲಿರುವ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ. ಇದರಿಂದ ಗ್ರಾಮೀಣ ಪ್ರದೇಶದ ತಳಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇಷ್ಟು ದಿನ ಡ್ರಾಪ್ ಔಟ್ ಸಮಸ್ಯೆಯನ್ನು ನಿವಾರಿಸಲು ಸರ್ಕಾರಗಳು ಬಿಸಿಯೂಟ, ಹಾಲು, ಪುಸ್ತಕಗಳು, ಸಮವಸ್ತ್ರ, ಸೈಕಲ್, ಲ್ಯಾಪ್ ಟಾಪ್ ಗಳನ್ನು ಕೊಡುತ್ತಿದ್ದವು. ಆದರೆ, ಈ ನೀತಿಯಿಂದ ವಿದ್ಯಾರ್ಥಿಗಳು ಯಾವುದೇ ಹಂತದಲ್ಲಿ ಸ್ವತಃ ಡ್ರಾಪ್ ವೌಟ್ ಆಗುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಹೊಸಶಿಕ್ಷಣ ನೀತಿಯನ್ನು ಪ್ರಾಥಮಿಕ ಹಂತದಿಂದ ಆರಂಭಿಸಬೇಕು. ಆದರೆ ರಾಜ್ಯದಲ್ಲಿ ಇದನ್ನು ಉನ್ನತ ಶಿಕ್ಷಣದಿಂದ ಜಾರಿಗೆ ತರಲಾಗಿದೆ. ಬುನಾದಿಯನ್ನೇ ಹಾಕದೆ ರಾಜ್ಯ ಸರ್ಕಾರ ಮೇಲ್ಛಾವಣಿ ಹಾಕಲು ಹೊರಟಿದೆ. ಬುನಾದಿ ಹಾಕದ ಕಟ್ಟಡ ಎಷ್ಟು ದಿನ ಬಾಳಬಲ್ಲದು ಎಂದು ಪ್ರಶ್ನಿಸಿದರು.

ಬ್ರಾಹ್ಮಣರೇ ಇರುವ ಪಠ್ಯ ಪುಸ್ತಕ ಸಮಿತಿ ಪರಿಷ್ಕರಣೆ ಮಾಡಿ ಸೇರಿಸಿರುವವರ ಪೈಕಿ ಎಸ್.ಎಲ್.ಭೈರಪ್ಪ, ಕೆ.ಬಿ.ಹೆಡ್ಗೇವಾರ್, ಗಜಾನನ ಶರ್ಮಾ, ಎನ್.ರಂಗನಾಥ ಶರ್ಮಾ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ್ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಶಿವಾನಂದ ಕಳವೆ, ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ. ಇವರಲ್ಲಿ ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ. ಲಿಂಗಾಯತ, ದಲಿತ, ಮುಸ್ಲಿಂ ಜಾತಿ ಮತ್ತು ಧರ್ಮದವರಿಗೆ ಸೇರಿದ ಪಠ್ಯಗಳನ್ನು ಕೈಬಿಟ್ಟು, ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರಿಗೆ ಅವಮಾನ ಮಾಡಲಾಗಿದೆ. ಇದು ಹೊಸ ಶಿಕ್ಷಣ ನೀತಿಯ ಮುಂದುವರೆದ ಭಾಗ ಎಂದರು.

ಅಗ್ನಿಪಥ್ ಯೋಜನೆ ಕುರಿತು ಮಾತಾಡಿದ ಪತ್ರಕರ್ತ ಮಹಾಲಿಂಗಪ್ಪ ಆಲಬಾಳ, ಕೇಂದ್ರ ಸರ್ಕಾರ ರೂಪಿಸಿರುವ ಅಗ್ನಿಪಥ ಯೋಜನೆಯಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾಗಲಿದೆ. 4 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಸಮಾಜದಲ್ಲಿ ಗೌರವ ಇರುವುದಿಲ್ಲ. ಇವರನ್ನು ಭವಿಷ್ಯದಲ್ಲಿ ತಮ್ಮ ಸಿದ್ಧಾಂತಗಳಿಗೆ ಪೂರಕವಾಗಿ ಬಳಸಿಕೊಳ್ಳುವ ಹುನ್ನಾರವಿದೆ ಎಂದರು.

ಸೈನಿಕರ ವೇತನದಲ್ಲಿ 9,000 ರೂ.ಗಳನ್ನು  ಕಟ್ ಮಾಡಿ, ನಿವೃತ್ತಿ ನಂತರ ಅವರಿಗೆ 11.5 ಲಕ್ಷ ಕೊಟ್ಟು ಮನೆಗೆ ಕಳಿಸುತ್ತಾರೆ. ಅವರು ಇಷ್ಟು ಹಣದಲ್ಲಿ ಜೀವನ ಕಟ್ಟಿಕೊಳ್ಳುವುದು ಹೇಗೆ? ಹಣ ಕರ್ಚಾದ ನಂತರ ಅವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆಯೇ? ಎಂದು ಪ್ರಶ್ನಿಸಿದರು.

ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ಬೆಳವಣಿಗೆಗಳ ಕುರಿತು ಮಾನವ ಬಂಧುತ್ವ ವೇದಿಕೆ ಅನೇಕ ಕಾರ್ಯಗಳನ್ನು ನಡೆಸುತ್ತಿದೆ. ಇದರ ಭಾಗವಾಗಿಯೇ ಹೊಸ ಶಿಕ್ಷಣ ನೀತಿ ಮತ್ತು ಅಗ್ನಿಪಥ ಯೋಜನೆ ಕುರಿತು ಶಿಬಿರವನ್ನು ಆಯೋಜಿಸಲಾಗಿದೆ. ಇಲ್ಲಿ ಕೇಳಿದ ಸಂಗತಿಗಳನ್ನು ನಿಮ್ಮ ಊರುಗಳಲ್ಲಿ ಹಂಚಿಕೊಳ್ಳಿ ಎಂದರು.

ಶಿಬಿರವನ್ನುದ್ದೇಶಿಸಿ ಮಾತಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಸಂತೋಷ್ ಮೆಳವಂಕಿ, ಮಾನವ ಬಂಧುತ್ವ ವೇದಿಕೆ ವತಿಯಿಂದ ಜನರಿಗೆ ತಿಳಿವಳಿಕೆ ನೀಡುವ ಕೆಲಸ ನಡೆಯುತ್ತಿದೆ. ಮೂಢನಂಬಿಕೆ ವಿರುದ್ಧ ಮತ್ತು ಜನಜಾಗೃತಿಯ ಕೆಲಸವನ್ನು ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದರು.

ಉಪನ್ಯಾಸಕ ಹನುಮಂತ ನಂದಿ, ಯುವ ಕಾಂಗ್ರೆಸ್ ಗೋಕಾಕ್ ತಾಲೂಕು ಅಧ್ಯಕ್ಷ ರಾಹುಲ್ ಬಡೇಸ್ ಗೋಳ್, ವಿನಾಯಕ ಪೂಜಾರಿ, ಶಿವಾನಂದ ಹತ್ತರವಾಟ್, ಜುಬೇರ್ ಮಿರ್ಜಾ ಬಾಯ್, ರೆಹಮಾನ್ ಮೊಕಾಶಿ ಮೊದಲಾದವರು ಭಾಗವಹಿಸಿದ್ದರು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ