October 1, 2023 7:01 am

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಪತ್ರಿಕೋದ್ಯಮದಲ್ಲಿ ಕೆಲವು ಕಾಲ ಸಕ್ರಿಯವಾಗಿದ್ದ ಇವರು, ನಿರಂತರ ಓದು, ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರು. ಇಡೀ ಕರ್ನಾಟಕವನ್ನು ಪಾದಯಾತ್ರೆಯ ಮೂಲಕ ಸಂಚರಿಸಿ ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ಸಾಧನೆ ಮಾಡಿದವರು.

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ……..

ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ…..

ಧರ್ಮ ( ಮತ ) ಎಂಬುದು ವಿಭಿನ್ನ ಚಿಂತನೆಗಳ, ಪ್ರದೇಶಗಳ, ವ್ಯಕ್ತಿಗಳ, ಸಮೂಹಗಳ, ಭಾವನೆಗಳ, ಭಕ್ತಿಯ, ಭಯದ, ಮೌಡ್ಯಗಳ, ಶ್ರೇಷ್ಠತೆಯ, ಅನುಭವದ, ನಿರ್ದಿಷ್ಟ ಮತ್ತು ಕ್ರಮಬದ್ಧವಾದ ರೀತಿ ನೀತಿಗಳ ಜೀವನ ವಿಧಾನ…..

ಆದರೆ ವಿಜ್ಞಾನ ಯಾವುದೇ ವ್ಯಕ್ತಿಯ ಅಥವಾ ವ್ಯಕ್ತಿಗಳ ಅಥವಾ ಪ್ರದೇಶದ ಅಥವಾ ಭಾಷೆಯ ಅಥವಾ ನಿರ್ದಿಷ್ಟ – ಕ್ರಮಬದ್ಧ ವಿಧಾನವಲ್ಲ. ಅದು ಅನುಭವ – ಅಧ್ಯಯನ – ಸಂಶೋಧನೆ – ಪರಿಣಾಮ – ಫಲಿತಾಂಶಗಳ ಆಧಾರದ ಮೇಲೆ ರೂಪಗೊಳ್ಳುವ ಸಾರ್ವತ್ರಿಕ ಮತ್ತು ಈ ಕ್ಷಣದ ಸತ್ಯ. ಅದು ನಿರಂತರ ಚಲನಶೀಲವಾದುದು, ಪ್ರಯೋಗಾತ್ಮಕವಾದುದು, ಬದಲಾವಣೆ ಒಪ್ಪಿಕೊಳ್ಳುವುದು, ತಿದ್ದಿಕೊಳ್ಳುವುದು, ಸಹಜವಾದದ್ದು, ಸ್ವಾಭಾವಿಕವಾದದ್ದು, ಪ್ರಾಕೃತಿಕವಾದದ್ದು, ತನ್ನ ತಪ್ಪುಗಳನ್ನು, ಮಿತಿಗಳನ್ನು ಅರಿತುಕೊಳ್ಳುವುದು. ಅದು ಯಾರ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಮನುಷ್ಯನ ಅನುಕೂಲಕ್ಕೆ ತಕ್ಕಂತೆ ರೂಪಗೊಳ್ಳುವ ಪ್ರಕಿಯೆ…..

ಧರ್ಮವನ್ನು ಪ್ರಶ್ನಿಸಬಹುದು, ವಿರೋಧಿಸಬಹುದು, ತಿರಸ್ಕರಿಸಬಹುದು, ಒಪ್ಪಿಕೊಳ್ಳಬಹುದು, ಅನುಸರಿಸಬಹುದು. ಆದರೆ ವಿಜ್ಞಾನವನ್ನು ಆ ರೀತಿ ಮಾಡಲಾಗುವುದಿಲ್ಲ. ಪ್ರಶ್ನೆಯೂ ವಿಜ್ಞಾನವೇ ಉತ್ತರವೂ ವಿಜ್ಞಾನವೇ, ತಪ್ಪು ವಿಜ್ಞಾನವೇ, ಸರಿಯೂ ವಿಜ್ಞಾನವೇ, ಆಕಸ್ಮಿಕವೂ ವಿಜ್ಞಾನವೇ. ಅದನ್ನು ಸಮರ್ಥಿಸುವವರೂ ಇಲ್ಲ. ವಿರೋಧಿಸುವವರು ಇಲ್ಲ. ಏಕೆಂದರೆ ಅದು ಯಾರೋ ಒಬ್ಬರ ಆಸ್ತಿಯೂ ಅಲ್ಲ, ಅಭಿಪ್ರಾಯವೂ ಅಲ್ಲ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲೂಬಹುದು, ಸಿಗದೇ ಇರಲೂಬಹುದು. ನಿಗೂಢವೂ ಆಗಿರಬಹುದು. ಅದಕ್ಕೆ ಅಸ್ತಿತ್ವವೇ ಇಲ್ಲ. ಏಕೆಂದರೆ ವಿಜ್ಞಾನ ಸತ್ಯದ ವಾಸ್ತವದ ನಮ್ಮ ಅನುಕೂಲಕರ ಒಂದು ವಿಧಾನ ಅಷ್ಟೇ….‌‌‌

ವಿಜ್ಞಾನ ಒಂದು ನಿರಂತರ ಹುಡುಕಾಟ. ಅಲ್ಲಿ ಎಲ್ಲಕ್ಕೂ ಪರಿಹಾರವಿಲ್ಲ. ಆದರೆ ಪರಿಹಾರದ ಅಂತಿಮ ಭರವಸೆ ವಿಜ್ಞಾನವೇ ಹೊರತು ಧರ್ಮವಲ್ಲ. ವಿಜ್ಞಾನದಲ್ಲಿ ಶೋಷಣೆ ಇರುವುದಿಲ್ಲ. ಆದರೆ ಧರ್ಮದಲ್ಲಿ ಶೋಷಣೆ ಅಸಮಾನತೆ ಇರುತ್ತದೆ. ಧರ್ಮ ಒಂದು ನಂಬಿಕೆ. ವಿಜ್ಞಾನ ವಾಸ್ತವ. ಆದ್ದರಿಂದ ಧರ್ಮ ದೇವರು ವಿಜ್ಞಾನದ ವಿಷಯದಲ್ಲಿ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವಾಗುತ್ತದೆ…..

ಪ್ರತಿಕ್ಷಣ ದೇವರ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ, ಇಲ್ಲಿನ ಎಲ್ಲಾ ಆಗುಹೋಗುಗಳಿಗೆ ದೇವರೇ ಕಾರಣ ಎಂದು ಭಾವಿಸುವ, ತನ್ನ ಪ್ರತಿದಿನದ ಬೆಳಗಿನ ಎಚ್ಚರ ದೇವರ ಕೊಡುಗೆ ಎಂದು ನಂಬುವ, ತನ್ನ ಧರ್ಮದ ಪವಿತ್ರ ಗ್ರಂಥಗಳ ಅಂಶಗಳನ್ನು ತಪ್ಪದೇ ಆಚರಿಸುವ, ತನ್ನೆಲ್ಲಾ ನೋವು ನಲಿವುಗಳಿಗೆ ಆತನೇ ಕಾರಣ ಎಂದು ಭಾವಿಸಿರುವ, ಹಿಂದಿನ, ಇಂದಿನ, ಮುಂದಿನ ಜನ್ಮಕ್ಕೂ ಆತನೇ ಕಾರಣ ಎಂದು ನಂಬಿರುವ ಜನರು ತಮ್ಮ ಸಂಪೂರ್ಣ ಚಿಂತನೆಗಳನ್ನು ದೇವರು ಧರ್ಮಕ್ಕೆ ಶರಣಾಗಿಸಿರುತ್ತಾರೆ…..

ಇದು ಸರಿಯೋ ತಪ್ಪೋ ಚರ್ಚೆಯ ವಿಷಯ. ಅನೇಕ ಬಗೆಹರಿಯದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ತಾವು ಕಂಡುಕೊಳ್ಳಬಯಸುವ ಪಲಾಯನವಾದಿ ಸಿದ್ಧಾಂತವೂ ಇರಬಹುದು. ಅದು ಅವರಿಗೆ ಸಾಕಷ್ಟು ಮಾನಸಿಕ ಶಾಂತಿ ನೀಡಿರಬಹುದು. ಇದನ್ನು ಇನ್ನೊಬ್ಬರಿಗೆ ಒತ್ತಾಯಿಸದಿದ್ದರೆ, ಆ ಹೆಸರಿನಲ್ಲಿ ಮತ್ತೊಬ್ಬರನ್ನು ಶೋಷಿಸದಿದ್ದರೆ ತಮ್ಮ ಸ್ವಾತಂತ್ರ್ಯವನ್ನು ತಾವು ಅನುಭವಿಸಿದರೆ ನಾವು ಒಪ್ಪದಿದ್ದರೂ ಅದನ್ನು ಗೌರವಿಸಬೇಕಾಗುತ್ತದೆ ಅಥವಾ ಅವರಿಗೆ ಚರ್ಚಿಸಲು ಇಷ್ಟವಿಲ್ಲದಿದ್ದರೆ ನಾವು ನಿರ್ಲಿಪ್ತರೂ ಆಗಬಹುದು……

ಹಾಗೆಯೇ, ದೇವರ ಅಸ್ತಿತ್ವವನ್ನು ಪ್ರಶ್ನಿಸುವ, ಯಾವುದೇ ಧರ್ಮದ ದೇವಾಲಯ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಕಾಲಿಡಲೂ ಒಪ್ಪದ, ಧರ್ಮದ ಮೂಢ ಆಚರಣೆಗಳನ್ನು ಧಿಕ್ಕರಿಸುವ, ಅಸಮಾನತೆಯ, ಅಮಾನವೀಯ ಸಂಪ್ರದಾಯಗಳನ್ನು ಖಂಡಿಸುವ, ತಮ್ಮ ಕಷ್ಟಸುಖಗಳಿಗೆ ತಾವು ಮತ್ತು ವಾಸಿಸುತ್ತಿರುವ ಪರಿಸರ ಕಾರಣ ಎನ್ನುವ ಮತ್ತು ನಂಬಿಕೆಗಳಿಗಿಂತ ವಾಸ್ತವವನ್ನೇ ಅವಲಂಬಿಸಿರುವ, ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದಿರುವ ಜನರೂ ನಮ್ಮ ನಡುವೆ ಇದ್ದಾರೆ. ಅವರು ಕೂಡ ಇದನ್ನು ಇತರರ ಮೇಲೆ ಹೇರದೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು, ತಾವು ಕಂಡ ಸತ್ಯಗಳನ್ನು ಹೇಳಲು ಸ್ವಾತಂತ್ರ್ಯ ಕಲ್ಪಿಸಬೇಕಿದೆ. ವಿರುದ್ಧ ಧ್ವನಿಗಳನ್ನು ರಕ್ಷಿಸಬೇಕಿದೆ………

ಒಟ್ಟಾರೆ ವ್ಯಕ್ತಿ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನೊಬ್ಬರಿಗೆ ಒತ್ತಾಯಿಸದೆ, ದುರುಪಯೋಗಪಡಿಸಿಕೊಳ್ಳದೆ ನಮ್ಮ ಸ್ವಾತಂತ್ರ್ಯವನ್ನು ಅನುಭವಿಸುವುದೇ ಪ್ರಬುದ್ಧ ನಾಗರೀಕತೆಯ ಲಕ್ಷಣ. ಅದು ಸಾಧ್ಯವಾಗುವುದಾದರೆ ಸಮಾಜ, ದೇಶ ಶಾಂತಿಯೆಡೆಗೆ, ಅಭಿವೃದ್ಧಿಯೆಡೆಗೆ ಮುನ್ನಡೆಯುತ್ತದೆ. ಸಹಜವಾಗಿ ಘರ್ಷಣೆಗಳು ಕಡಿಮೆಯಾಗುತ್ತದೆ.  

ಹೇಗಿದ್ದರೂ ಸಮಾಜವನ್ನು ನಿಯಂತ್ರಿಸಲು ಸಂವಿಧಾನದ ಕಾನೂನು ಕಟ್ಟಳೆ ಇದ್ದೇ ಇದೆ. ಧರ್ಮ, ದೇವರು, ನಂಬಿಕೆ, ವಾಸ್ತವ ಇತ್ಯಾದಿ ಚರ್ಚೆಗಳು ನಮಗೆ ಸಂಪೂರ್ಣ ಮನದಟ್ಟಾಗುವವರೆಗೆ ನಿರಂತರವಾಗಿರಲಿ. ಅದಕ್ಕೆ ಯಾವುದೇ ಮಿತಿ ಮತ್ತು ವಿರೋಧ ಬೇಡ. ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳುವುದು ಬೇಡ. ಪ್ರಶ್ನಿಸುತ್ತಲೇ ಉತ್ತರಗಳನ್ನು ಕಂಡುಕೊಳ್ಳೋಣ…

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು