March 25, 2023 3:35 pm

ಮನುಸ್ಮೃತಿಯಲ್ಲಿರುವ ಕೆಲವು ಸುಳ್ಳುಗಳು: ಭಾಗ 1

Dr. Pradeep Malgudi

ಕನ್ನಡ ಸ್ನಾತಕೋತ್ತರ ಪದವೀಧರರಾದ ಡಾ. ಪ್ರದೀಪ್ ಮಾಲ್ಗುಡಿಯವರು ಬೆಂಗಳೂರಿನಲ್ಲಿ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಎಂ.ಫಿಲ್, ಪಿಎಚ್.ಡಿ., ಪದವಿಗಳನ್ನು ಕನ್ನಡ ವಿವಿಯಿಂದ ಪಡೆದಿದ್ದಾರೆ. ಅನಂತರ ಮೈಸೂರಿನ ಕನ್ನಡ ಜನಮನ, ರಾಜ್ಯಧರ್ಮ ಪತ್ರಿಕೆಗಳ ಸಂಪಾದಕೀಯ ಪುಟ ನಿರ್ವಹಣೆ, ಸುದ್ದಿ ಟಿವಿಯಲ್ಲಿ ಇನ್ ಪುಟ್ ಮುಖ್ಯಸ್ಥ, ಡೆಮಾಕ್ರಟಿಕ್ ಟಿವಿಯಲ್ಲಿ ಕಾರ್ಯನಿರ್ವಹಾಕ ಸಂಪಾದಕ ಮತ್ತು ಜನಸಂಸ್ಕೃತಿ ಮಾಸಿಕ ಹಾಗೂ ಮಾಲ್ಗುಡಿ ಎಕ್ಸ್ ಪ್ರೆಸ್ ವೆಬ್ ತಾಣದ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮನುಸ್ಮೃತಿಯನ್ನು ದೇಶದಲ್ಲಿ ಅಲಿಖಿತ ಸಂವಿಧಾನವನ್ನಾಗಿ ಇಂದಿಗೂ ಜಾರಿಯಲ್ಲಿಡಲಾಗಿದೆ. ವಿಶೇಷವಾಗಿ ಯಥಾಸ್ಥಿತಿವಾದಿಗಳಿಗೂ ಮತ್ತು ಪರಿವರ್ತನಾವಾದಿಗಳ ನಡುವೆ ನಡೆದಿರುವ ಚಳುವಳಿಯ ಇತಿಹಾಸವನ್ನು ಗಮನಿಸಿದರೆ ಯಥಾಸ್ಥಿತಿವಾದಿಗಳು ಅಡಿಗಡಿಗೆ ಮನುಸ್ಮೃತಿಯನ್ನು ಜಾರಿಗೆ ತರಲು ಯತ್ನಿಸಿರುವ ಕ್ರಮವನ್ನು ಮತ್ತು ಸುಧಾರಣಾವಾದಿಗಳು ಅದರ ವಿರುದ್ಧ ರಾಜಿರಹಿತ ಹೋರಾಟ ನಡೆಸಿರುವುದು ಕಂಡುಬರುತ್ತದೆ.

ಮನುಸ್ಮೃತಿಯಲ್ಲಿರುವ ಜೀವವಿರೋಧ, ಮನುಷ್ಯವಿರೋಧಿ, ಸಮಾನತೆ ವಿರೋಧಿ ಯಥಾಸ್ಥಿತಿವಾದಿ ಅನೈತಿಕ ಚಿಂತನೆಗಳನ್ನು ಅರಿತರೆ ನಾವು ಯಾವ ಖೆಡ್ಡಾದಲ್ಲಿ ಬಿದ್ದಿದ್ದೇವೆ? ನಮ್ಮ ಹೀನಾಯ ಸ್ಥಿತಿಗೆ ಕಾರಣಗಳೇನು? ನಮ್ಮನ್ನು ಶತಮಾನಗಳಿಂದ ಯಾರು? ಹೇಗೆ? ಏಕೆ? ಶೋಷಿಸಿದ್ದಾರೆ ಎಂಬ ಸಂಗತಿ ಬಯಲಿಗೆ ಬರುತ್ತವೆ.

“ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನೂ, ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರನನ್ನೂ ಸೃಷ್ಟಿಸಿದನು” ಎಂದು ಮನುಸ್ಮೃತಿಯಲ್ಲಿ (ಅಧ್ಯಾಯ – 1:31) ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ತಾಯಿಯ ಯೋನಿಯಿಂದ ಜನಿಸುವ ಬದಲಿಗೆ ಬ್ರಹ್ಮನ ವಿವಿಧ ಅಂಗಗಳಿಂದ ಜನಿಸಿದ್ದಾರೆ. ಮನುಧರ್ಮಕ್ಕೆ ಪ್ರಶ್ನೆಗಳು ಎದುರಾಗಿರುವುದು ಇಂದೇನಲ್ಲ. ಬುದ್ಧ ದೇವರು, ವೇದ, ಯಜ್ಞ, ಯಾಗಗಳನ್ನು ಕೈಬಿಟ್ಟು ಧರ್ಮವನ್ನು ಕಟ್ಟುವ ಪ್ರಯತ್ನ ಮಾಡಿದೆ. ಜೊತೆಗೆ ಚಾರ್ವಾಕರು ಮನುಧರ್ಮದ ಕರ್ಮಠ ಆಚರಣೆಗಳನ್ನು ನಿಕಷಕ್ಕೆ ಒಡ್ಡಿದ್ದಾರೆ. ಸ್ವರ್ಗ ಅಥವಾ ನರಕದಲ್ಲಿರುವ ಪಿತೃಗಳಿಗೆ ಭೂಲೋಕದಲ್ಲಿ ಪಿಂಡ ಅರ್ಪಿಸಿ ಸಂತೃಪ್ತಿಪಡಿಸುವುದು ಸಾಧ್ಯವಾದರೆ, ಪಕ್ಕದ ಊರಿನಲ್ಲಿರುವ ಹಸಿದಿರುವ ವ್ಯಕ್ತಿಗೆ ಇಲ್ಲಿಂದಲೇ ಪಿಂಡ ಬಿಟ್ಟು ಹಸಿವನ್ನು ಹೋಗಲಾಡಿಸಿ ಎಂದು ಚಾರ್ವಾಕರು ಸವಾಲೆಸೆದರು. ಬಸವಣ್ಣ ಕೂಡ ಮನುಧರ್ಮಶಾಸ್ತ್ರವನ್ನು ಮುಖಾಮುಖಿಯಾಗಿದ್ದಾನೆ.

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,

ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ!

ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ!?

ಇದು ಕಾರಣ ಕೂಡಲಸಂಗಮದೇವ,

ಲಿಂಗಸ್ಥಲವನರಿದವನೇ ಕುಲಜನು!

–           ಬಸವಣ್ಣ

ಮನುಸ್ಮೃತಿಯಲ್ಲಿರುವ ತಪ್ಪು ಗ್ರಹಿಕೆಯನ್ನು ಬಸವಣ್ಣ ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಪ್ರಶ್ನಿಸಿದ್ದಾನೆ. ಬಸವಣ್ಣನ ಪ್ರಕಾರ ವರ್ಣಾಶ್ರಮದ ವಿಭಜನೆಯ ಪರಿಕಲ್ಪನೆಯೇ ತಪ್ಪು. ವೃತ್ತಿಯಾಧಾರಿತವಾಗಿ ಜಾತಿ ರೂಪುಗೊಂಡಿದೆ, ತನ್ನ ವೃತ್ತಿಯಿಂದಾಗಿಯೇ ಮೇಲುಕೀಳು ಸೃಷ್ಟಿಯಾಗಿದೆ. ಇದರಲ್ಲಿ ಬಸವಣ್ಣ ಮನುಷ್ಯರು ಕರ್ಣದಿಂದ ಜನಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಪ್ರಸ್ತಾಪಿಸಿದ್ದಾನೆ.

ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಮನುಸ್ಮೃತಿಯಲ್ಲಿ ಉಲ್ಲೇಖವಾಗಿರುವಂತೆ ಮನುಷ್ಯರು ಅದರಲ್ಲೂ ಮುಖದಿಂದ ಬ್ರಾಹ್ಮಣರು, ಭುಜದಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು, ಪಾದದಿಂದ ಶೂದ್ರರು ಜನಿಸುವುದು ಸಾಧ್ಯವೇ ಎಂದು ಕ್ಷಣಕಾಲ ಆಲೋಚನೆ ಮಾಡಬೇಕಿದೆ. ನಮಗೆ ಗೊತ್ತಿರುವಂತೆ ಸಾಮಾನ್ಯವಾಗಿ ಪ್ರಾಣಿ ಮತ್ತು ಮನುಷ್ಯರು ತಾಯಿ ಗರ್ಭದಲ್ಲಿ ಅಂಕುರಿಸಿ ಯೋನಿಯಲ್ಲಿ ಜನಿಸುತ್ತಾರೆ. ತಂತ್ರಜ್ಞಾನ ಮತ್ತು ವಿಜ್ಞಾನ ಯುಗದ ಬೆಳವಣಿಗೆಯಿಂದಾಗಿ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಸಿಸೇರಿಯನ್ ಮೂಲಕ ಮನುಷ್ಯರು ಜನಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಯಾವುದೇ ರೀತಿಯಲ್ಲೂ ಮೇಲೆ ಹೇಳಿರುವಂತೆ ಮನುಷ್ಯಮಾತ್ರರಾದವರು ಜನಿಸಲು ಸಾಧ್ಯವಿಲ್ಲ. ಆದ್ದರಿಂದ ಮನುಸ್ಮೃತಿಯಲ್ಲಿ ಉಲ್ಲೇಖಿತವಾದಂತೆ ಬ್ರಾಹ್ಮಣನನ್ನು ಮುಖದಿಂದ, ಕ್ಷತ್ರಿಯನನ್ನು ಭುಜದಿಂದ, ವೈಶ್ಯನನ್ನು ತೊಡೆಯಿಂದ ಮತ್ತು ಶೂದ್ರನನ್ನು ಪಾದದಿಂದ ಸೃಷ್ಟಿಸುವುದು ಹೇಗೆ ಸಾಧ್ಯ?

ಇಲ್ಲಿ ವಾಸ್ತವದಲ್ಲಿ ಮನುಷ್ಯರ ಸೃಷ್ಟಿಗೆ ಸಮಪಾಲು ಉಳ್ಳ ಮತ್ತು ಗರ್ಭಧಾರಣೆ, ಮಗುವಿನ ಹೆರಿಗೆ, ಹಾಲು ಕುಡಿಸುವುದು, ಲಾಲನೆ, ಪಾಲನೆ, ಪೋಷಣೆ ಮೊದಲಾದ ಬಹುಮುಖ್ಯ ಪಾತ್ರಗಳನ್ನು ನಿರ್ವಹಿಸುವ ಹೆಣ್ಣು ಮನುವಿನ ಪ್ರಕಾರ ಹುಟ್ಟಿಯೇ ಇಲ್ಲವೇ? ದೇಶದಲ್ಲಿರುವ ಮನು ಉಲ್ಲೇಖಿಸದೇ ಇರುವ ಜಾತಿ, ಧರ್ಮದ ಜನ ಅಸ್ತಿತ್ವದಲ್ಲಿ ಇಲ್ಲವೇ? ಇಂತಹ ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳಬೇಕಿದೆ.

“ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ” (ಅ- 1:91) ಎಂದು ಇದೇ ಮನುಸ್ಮೃತಿಯಲ್ಲಿ ಆದೇಶ ಹೊರಡಿಸಲಾಗಿದೆ.  ಇಷ್ಟಕ್ಕೆ ನಿಲ್ಲದೆ, “ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ” (ಅ-1:99) ಎಂದು ಸಾರಲಾಗಿದ್ದು, “ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣನು ಶ್ರೇಷ್ಠವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ” (ಅ-1:100) ಎಂದು ಅಸಮಾನತೆಯನ್ನು ಹುಟ್ಟುಹಾಕಲಾಗಿದೆ.

ಆದರೆ, ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ

“ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ

ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ

ನಿಮ್ಮ ದಾನವನುಂಡು ಅನ್ಯರ ಹೊಗಳುವ

ಕುನ್ನಿಗಳನೇನೆಂಬೆ ರಾಮನಾಥ” ಎಂದು ಜೇಡರ ದಾಸೀಮಯ್ಯ ಪ್ರಶ್ನಿಸಿದ್ದಾನೆ. ಮನುಧರ್ಮಶಾಸ್ತ್ರದ ಪ್ರಕಾರ ಮೇಲಿನ ಮೂರು ವರ್ಣಗಳ ಸೇವೆ ಮಾಡುವುದೇ ಶೂದ್ರರ ಕರ್ತವ್ಯ. ಆದರೆ, ಇಳೆ, ಬೆಳೆ, ಗಾಳಿ ಮೊದಲಾದವು ಪ್ರಕೃತಿಯ ಸಹಜ ಕೊಡುಗೆಗಳು. ಇವುಗಳ ಬಳಕೆಗೆ ಯಾರ ಅಪ್ಪಣೆಯೂ ಅಗತ್ಯವಿಲ್ಲ. ದಾಸೀಮಯ್ಯನ ವಚನ ಮೇಲಿನ ಅಸಮಾನತೆಯನ್ನಷ್ಟೇ ಪ್ರಶ್ನಿಸುತ್ತಿಲ್ಲ; ದಾಸತ್ವವನ್ನು ಕೂಡ ಆತ್ಯಂತಿಕ ಮಟ್ಟದಲ್ಲಿ ಪ್ರಶ್ನಿಸಿದೆ.

“ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗೂ ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು” (ಅ-2:31) ಎಂದು ಇದೇ ಮನುಸ್ಮೃತಿಯಲ್ಲಿ ದಾಖಲಿಸಲಾಗಿದೆ. ಈ ಮೂಲಕ ಶೂದ್ರರು ಉತ್ತಮವಾದ ಹೆಸರನ್ನು ಕೂಡ ಇಟ್ಟುಕೊಳ್ಳಲು ಅನರ್ಹರನ್ನಾಗಿಸಲಾಗಿದೆ. ಉತ್ತಮವಾಗಿ ಬದುಕಲು ಅವಕಾಶ ಕೊಡದ ಯಥಾಸ್ಥಿತಿವಾದಿಗಳು ಒಳ್ಳೆಯ ಹೆಸರುಗಳನ್ನು ಇಟ್ಟುಕೊಳ್ಳಲು ಕೂಡ ನಿರ್ಬಂಧ ವಿಧಿಸಿರುವುದರ ಹಿಂದಿನ ಅಮಾನವೀಯತೆಯನ್ನು ಇಲ್ಲಿ ಗುರುತಿಸಬೇಕಿದೆ.

“ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ ಪ್ರೀತಿಯುಂಟಾಗುತ್ತದೆ” (ಅ-3:231) ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ಇಲ್ಲಿ ಅಸಮಾನತೆಯ ಇನ್ನೊಂದು ಹಂತವನ್ನು ಗುರುತಿಸಬಹುದು. ಮನುವಾದಿಗಳಿಗೆ ರುಚಿಕರವಾದ ಎಲ್ಲ ಆಹಾರಗಳನ್ನು ನೀಡಬೇಕು ಎಂಬ ಅಂಶವನ್ನು ಗಮನಿಸಬೇಕಿದೆ. ಹೊಲಗದ್ದೆತೋಟಗಳಲ್ಲಿ ಕೆಲಸ ಮಾಡುವವರು, ಹೊಲ ಹರಗುವವರು, ಬೀಜ ಬಿತ್ತುವವರು, ಗೊಬ್ಬರ ಹಾಕುವವರು, ಕಳೆ ಕೀಳುವವರು, ಕೊಯ್ಲು ಮತ್ತು ಹಸನು ಮಾಡುವವರು ಶೂದ್ರರು ಮತ್ತು ಅಂತ್ಯಜರು. ಆದರೆ, ಅವುಗಳ ಒಡೆತನ ಮಾತ್ರ ಮನುವಾದಿಗಳಿಗೆ ಸೇರಿದ್ದು ಹಾಗೂ ರುಚಿಕರ ಪದಾರ್ಥಗಳು ಅವರ ವಶಕ್ಕೆ ಒಪ್ಪಿಸಬೇಕಿದೆ. ಇನ್ನು ಅವರೊಂದಿಗೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು ಎಂದು ಮನುಸ್ಮೃತಿಕಾರ ನಿಯಮ ಮಾಡಿದ್ದಾನೆ. ಆದರೆ, ಕೆಳವರ್ಗದವರಿಗೆ ಪರಬ್ರಹ್ಮದ ವಿಚಾರವೇ ತಿಳಿಯದಂತೆ ಇದೇ ಮನು ಅಕ್ಷರನಿರಾಕರಣೆಯ ಮೂಲಕ ಜ್ಞಾನವನ್ನೇ ನಿವಾರಿಸಿದ್ದಾನೆ.

“ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ” ( ಅ- 3:241) ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ಇದಂತೂ ಅತ್ಯಂತ ಅವೈಜ್ಞಾನಿಕವಾಗಿದೆ. ಮೊದಲನೆಯದಾಗಿ ಇಲ್ಲಿನ ಹೋಲಿಕೆಗಳನ್ನು ಗಮನಿಸಬೇಕಿದೆ. 1. ಹಂದಿಯ ಮೂಸುವಿಕೆ, 2. ಕೋಳಿಯ ರೆಕ್ಕೆಯ ಗಾಳಿಯ ಸೋಕುವಿಕೆ ಮತ್ತು 3. ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನ ನಾಶವಾಗಿ ಹೋಗುತ್ತದೆ ಎಂದು ಹೇಳಲಾಗಿದೆ. ಈ ಹೋಲಿಕೆಗಳ ಮೂಲಕ ಶೂದ್ರನ ಸ್ಪರ್ಶವನ್ನು ನಿರ್ದೇಶಿಸಲಾಗಿದೆ. ಹಂದಿ ಮತ್ತು ಕೋಳಿಗಳು ಮಲಿನ ಪದಾರ್ಥಗಳನ್ನು ಸೇವಿಸುತ್ತವೆ. ಶೂದ್ರನನ್ನೂ ಇದರೊಂದಿಗೆ ಸಮೀಕರಿಸಲಾಗಿದೆ. ಈ ಮೂಲಕ ಮನುಷ್ಯರ ಘನತೆಯ ಮೇಲೆ ದಾಳಿ ನಡೆಸಲಾಗಿದೆ. ಹಂದಿ ಮತ್ತು ಕೋಳಿಗೆ ಶೂದ್ರನನ್ನು ಸಮಾನವೆಂದು ಪರಿಗಣಿಸಲಾಗಿದೆ. ಸಹಮಾನವರನ್ನು ಇಷ್ಟು ಅಮಾನವೀಯವಾಗಿ ಚಿತ್ರಿಸಿರುವ ಉದಾಹರಣೆಗಳು ಇನ್ನೆಲ್ಲಾದರೂ ಸಿಗಲು ಸಾಧ್ಯವೇ ಆಲೋಚಿಸಬೇಕಿದೆ.

“ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು” ( ಅ-4:61) ಎಂದು ಮನು ಶಾಸನ ವಿಧಿಸಿದ್ದಾನೆ. 1. ಇಲ್ಲಿ ರಾಜಕೀಯ ಅಧಿಕಾರ ಶೂದ್ರನ ಕೈ ಸೇರಬಾರದು ಎಂಬ ಹುನ್ನಾರವಿದೆ. ಆ ಮೂಲಕ ಯಥಾಸ್ಥಿತಿವಾದದ ಮುಂದುವರಿಕೆಗೆ ಸಂಚುರೂಪಿಸಲಾಗಿದೆ. 2. ಪಾಷಂಡಿ=ಸಂಪ್ರದಾಯ ವಿರೋಧಿ. ತಮ್ಮ ಸೈದ್ಧಾಂತಿಕ ವಿರೋಧಿಗಳು ನಡೆಸುವ ವಿಮರ್ಶೆಯನ್ನು ಸಹಿಸದ ಮನಃಸ್ಥಿತಿ ಈ ಭಾಗದಲ್ಲಿ ವ್ಯಕ್ತವಾಗಿದೆ. ಏಕೆಂದರೆ, ಸಂಪೂರ್ಣ ಮನುಧರ್ಮಶಾಸ್ತ್ರ ನಿಂತಿರುವುದೇ ಸುಳ್ಳುಗಳ ಸರಮಾಲೆಯ ಮೇಲೆ. ಮನುಸ್ಮೃತಿಗೆ ವಾದ, ತರ್ಕ, ಪ್ರಶ್ನೆಗಳನ್ನು ಮುಖಾಮುಖಿಯಾಗುವ ಸತ್ವವಿಲ್ಲ. ಏಕೆಂದರೆ ಪ್ರಶ್ನೆಯೊಂದು ಎದುರಾದರೆ ಉತ್ತರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹಾಗೆ ಉತ್ತರ ಕೊಡಲು ಹೋದರೆ ಯಾವುದೇ ರೀತಿಯಲ್ಲೂ ಯಥಾಸ್ಥಿತಿವಾದವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸೈದ್ಧಾಂತಿಕ ವಿರೋಧಿಗಳ ಪ್ರಾಂತ್ಯದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ಎಂದು ವಿಧಿಸಲಾಗಿದೆ. ಈ ಮೂಲಕ ಪಲಾಯನವಾದವನ್ನು ಕಾಣಬಹುದು. 3. ದಲಿತರ ಜೊತೆ ಬ್ರಾಹ್ಮಣರು ವಾಸ ಮಾಡಬಾರದು ಎಂದು ಹೇಳಲಾಗಿದೆ. ಇದಕ್ಕೆ ಜಾತಿ ಮೇಲರಿಮೆಯಲ್ಲದೆ ಯಾವ ವೈಜ್ಞಾನಿಕ ಕಾರಣವನ್ನು ನೀಡಲು ಸಾಧ್ಯ?

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

One Response

  1. ಸಮಾನತೆಗಾಗಿ ಹೋರಾಡುವ ಎಲ್ಲಾ ಮಾನವೀಯತೆಯ ಮನುಷ್ಯರು ತಿಳಿದುಕೊಳ್ಳಬೇಕಾದ ವಿಚಾರ ಈ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಗಾಗಿ ಹೋರಾಡಿ, ಶಿಕ್ಷಣ ಸಂಘಟನೆ ಹೋರಾಟ

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ