ಭಾರತಕ್ಕೆ ಸ್ವಾತಂತ್ರ್ಯಸಿಕ್ಕಿ ಇಷ್ಟು ವರ್ಷಗಳಾದ ನಂತರ ನಾವು ಕೆಲವರು ನಮ್ಮ ಸಂವಿಧಾನದ ಬಗ್ಗೆ ಯೋಚಿಸಲು, ಮಾತಾಡಲು, ಬರೆಯಲು ಮತ್ತು ಚರ್ಚಿಸಲು ಆರಂಭಿಸಿದ್ದೇವೆ. ಇದು ಬಹಳ ಉತ್ತಮವಾದ ಮತ್ತು ಅಗತ್ಯವಾದ ಬೆಳವಣಿಗೆ. ನಾವೆಲ್ಲ ಯಾವ ಸೂತ್ರಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಅರಿವು ನಮಗೆಲ್ಲರಿಗೂ ಬೇಕು. ಈ ಅರಿವು ನಮ್ಮನ್ನು ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುತ್ತದೆ. ನಿಮ್ಮೆಲ್ಲರ ಕೈಯಲ್ಲಿರುವ ಈ ಪುಸ್ತಕ ‘ಸಂವಿಧಾನ ಓದು’ ಅಂತಹ ತಿಳುವಳಿಕೆಯನ್ನು ಹೆಚ್ಚಿಸಿ, ನಮ್ಮನ್ನು ಆಧುನಿಕ ಭಾರತಕ್ಕೆ ಸಜ್ಜುಗೊಳಿಸಲು ಜತನದಿಂದ ತಯಾರು ಮಾಡಿದ ಒಂದು ಕೈಪಿಡಿ. ಇದನ್ನು ತಯಾರು ಮಾಡಿದ ನ್ಯಾಯಮೂರ್ತಿ ಶ್ರೀ ಎಚ್.ಎನ್. ನಾಗಮೋಹನ ದಾಸ್ ಅವರಿಗೆ ನಿಮ್ಮೆಲ್ಲರ ಪರವಾಗಿ ನಾನು ಅಭಿನಂದನೆಯನ್ನೂ, ಕೃತಜ್ಞತೆಯನ್ನೂ ಅರ್ಪಿಸುತ್ತಿದ್ದೇನೆ. ಇಂಥದ್ದೊಂದು ಚಾರಿತ್ರಿಕ ಮಹತ್ವದ ಪುಸ್ತಕವನ್ನು ಬರೆಯಿಸಿ, ಅದನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡ ಸಹಯಾನ ಮತ್ತು ಸಮುದಾಯ ಕರ್ನಾಟಕದ ದಣಿವರಿಯದೆ ದುಡಿವ ಸಂಗಾತಿಗಳಿಗೆ ನಾಡು ಋಣಿಯಾಗಿರುತ್ತದೆ.
ಈಚೆಗೆ (ಅಗೋಸ್ತು 9, 2018) ದೆಹಲಿಯಲ್ಲಿ ಕೆಲವರು ಸಂವಿಧಾನದ ಪ್ರತಿಯನ್ನು ಸುಟ್ಟರು. ಇದಾದ ಎಷ್ಟೋ ದಿನಗಳ ನಂತರ ಅವರ ಮೇಲೆ ಕೇಸು ದಾಖಲಿಸಲಾಯಿತು. ಸಂವಿಧಾನವನ್ನು ರಕ್ಷಿಸುವ ಹೊಣೆ ಹೊತ್ತು, ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಯಾರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೆಚ್ಚಿನ ಮಾಧ್ಯಮಗಳಿಗೂ ಇದು ಚರ್ಚೆಯ ವಿಷಯವಾಗಲಿಲ್ಲ. ಕರ್ನಾಟಕದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೂಡಾ ಸಂವಿಧಾನವನ್ನು ಬದಲಾಯಿಸುವ ಮಾತು ಕೆಲವು ಬಲಪಂಥೀಯ ರಾಜಕಾರಣಿಗಳಿಂದ ಸಾರ್ವಜನಿಕ ಘೋಷಣೆಯಾಗಿ ಕೇಳಿಬಂತು. ಇವೆಲ್ಲವನ್ನೂ ಗಮನಿಸಿದಾಗ ಇಂದಿನ ಭಾರತದ ಅನೇಕರು 1950ರ ಜನವರಿ 26ರಂದು ಜಾರಿಗೆ ತಂದ ಸಂವಿಧಾನದ ಬಗ್ಗೆ ಗೌರವ ಹೊಂದಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.
ಇದು ಸದ್ಯದ ಪರಿಸ್ಥಿತಿ ಎಂಬುದನ್ನು ಒಪ್ಪಿಕೊಳ್ಳೋಣ. ಹಾಗಾದರೆ ಸಂವಿಧಾನ ವಿರೋಧಿಗಳು ಪರ್ಯಾಯವಾಗಿ ನಮಗೆ ಏನನ್ನು ಕೊಡುತ್ತಾರೆ? ಮನುಸ್ಮೃತಿಯನ್ನೋ? ಭಗವದ್ಗೀತೆಯನ್ನೋ? ವೇದ, ಉಪನಿಷತ್ತು, ಪುರಾಣ, ಕಾವ್ಯ. ಸ್ಮೃತಿಗಳನ್ನೋ? ಇದು ಸ್ಪಷ್ಟವಿಲ್ಲ. ಜಾತಿ ಪದ್ಧತಿ, ವರ್ಣಾಶ್ರಮ ಧರ್ಮ, ಅಸಮಾನತೆ ಮೊದಲಾದವುಗಳನ್ನು ಒಂದಲ್ಲ ಒಂದು ರೀತಿಯಿಂದ ಸಮರ್ಥಿಸುವ ಈ ಮೇಲಿನ ಜ್ಞಾನ ಸಂಪತ್ತಿನ ಬಗ್ಗೆ ಬಹುತೇಕ ಭಾರತೀಯರಿಗೆ ಏನೂ ತಿಳಿದಿಲ್ಲ. ಸಂಸ್ಕೃತವನ್ನು ದೇವ ಭಾಷೆ ಎಂದು ಘೋಷಿಸಿ ಮನುಷ್ಯರಿಂದ ದೂರ ಇರಿಸಿದ ಈ ಪಾರಂಪರಿಕ ಲೋಕದಲ್ಲಿನ ಬಹುತೇಕ ಅಂಶಗಳು ಇಂದಿನ ಭಾರತಕ್ಕೂ, ವಿಶ್ವಕ್ಕೂ ಅನ್ವಯವಾಗುವುದೇ ಇಲ್ಲ. ಸೆಗಣಿಯಲ್ಲಿ ಚಿನ್ನವಿದೆ, ನವಿಲುಗಳು ಕೇವಲ ಕಣ್ಣೀರಿನಿಂದ ಮೊಟ್ಟೆಯಿಡುವ ಸಾಮರ್ಥ್ಯವನ್ನು ಹೊಂದಿವೆ, ಪ್ರಾಚೀನ ಕಾಲದಲ್ಲಿಯೇ ಇಂಟರ್ನೆಟ್, ಪ್ಲಾಸ್ಟಿಕ್ ಸರ್ಜರಿ ಎಲ್ಲವೂ ಇತ್ತು ಎಂದೆಲ್ಲಾ ವಾದಿಸುವ ಕೆಲವು ಪೊಳ್ಳು ಪಂಡಿತರುಗಳಿಂದ ಇವತ್ತು ಭಾರತವು ವಿಶ್ವದಾದ್ಯಂತ ನಗೆಪಾಟಲಿಗೆ ಗುರಿಯಾಗುತ್ತಿದೆ. ಇವರುಗಳ ಮಾತು ಹೇಗಿದೆಯೆಂದರೆ, ‘ನಮ್ಮಲ್ಲಿ ಎಲ್ಲವೂ ಇತ್ತು. ಮಲ ವಿಸರ್ಜನೆ ಮಾಡಲು ಪಾಯಿಖಾನೆಗಳು ಮಾತ್ರ ಇರಲಿಲ್ಲ. ಅದಕ್ಕಾಗಿ ತಲೆ ಮೇಲೆ ಹೇಲು ಹೊರಲು ಒಂದು ಸಮುದಾಯವನ್ನೇ ನಾವು ಸೃಷ್ಟಿಸಿಕೊಂಡೆವು’ ಎನ್ನುವಂತೆ. ಇದರರ್ಥ ನಮ್ಮಲ್ಲಿ ಹೆಮ್ಮೆ ಪಡಲು ವಿಷಯಗಳೇ ಇಲ್ಲವೆಂದಲ್ಲ. ನಾಚಿಕೆ ಪಟ್ಟುಕೊಳ್ಳಲೂ ಸಾಕಷ್ಟು ವಿಷಯಗಳಿವೆ ಎಂಬುದನ್ನು ಅರಿತುಕೊಳ್ಳಬೇಕು.
ಈಚೆಗೆ 2011ರ ಜನಗಣತಿ ಪ್ರಕಟವಾಗಿದೆ. ಅದರ ಪ್ರಕಾರ ಭಾರತ ದೇಶದಲ್ಲಿ 125 ಕೋಟಿಗೂ ಹೆಚ್ಚು ಜನರಿದ್ದಾರೆ. 19,569 ಮಾತೃಭಾಷೆಗಳಿವೆ. 4,635 ಬಗೆಯ ಸಮುದಾಯಗಳಿವೆ. ಈ ದೇಶದಲ್ಲಿ ಹಲವಾರು ಬಗೆಯ ಧರ್ಮಗಳಿವೆ. ಲಕ್ಷಾಂತರ ರೀತಿಯ ಆಚರಣೆಗಳಿವೆ. ಇಲ್ಲಿರುವ ದೇವರುಗಳ ಸಂಖ್ಯೆಯನ್ನು ಲೆಕ್ಕ ಹಾಕಿದವರಿಲ್ಲ.
ದೇಶ ಬಿಡಿ, ನಮ್ಮ ಕರ್ನಾಟಕವನ್ನೇ ಗಮನಿಸೋಣ. ಇಲ್ಲಿಗೆ ಉತ್ತರ ಭಾರತದಿಂದ ಬಂದ ಜೈನಧರ್ಮ ಪಂಪ, ರನ್ನ, ನಾಗಚಂದ್ರ, ಜನ್ನ, ರತ್ನಾಕರವರ್ಣಿಗಳಂಥ ಮಹಾಕವಿಗಳನ್ನು ನೀಡಿತು. ಗೊಮ್ಮಟನಂಥಾ ವಿಶ್ವಖ್ಯಾತಿಯ ಮಹಾಶಿಲ್ಪವನ್ನೂ ಅದು ಸೃಷ್ಟಿಸಿತು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳಲೆಲ್ಲ ವಾಸಿಸಿ. ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳುವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು.
ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. ಕ್ರಿಸ್ತಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ್ಯ ಭೂತಗಳು ಸೃಷ್ಟಿಯಾಗಿ ಪೂರ್ಣ ದೇಸಿ ಎಂದೇ ಪರಿಗಣಿತವಾದ ಪಾಡ್ಡನಗಳ ಒಳಗೂ ಮುಸ್ಲಿಮ್ ನಾಯಕರು ಕಾಣಿಸಿಕೊಂಡರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆದದ್ದು ನಮಗೆಲ್ಲ ತಿಳಿದೇ ಇದೆ. ಚಾರಿತ್ರಿಕವಾಗಿ ಕನ್ನಡದ ಮಣ್ಣು ಬರಮಾಡಿಕೊಂಡ ಜನ ಸಮುದಾಯಗಳೆಷ್ಟು? ಕ್ರಿಸ್ತಶಕದಾರಂಭದಲ್ಲಿ ಇಥಿಯೋಪಿಯಾದಿಂದ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ ‘ಹಬಶಿ’ ಗುಂಪಿನ ಯೋಧರು, ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, 1459ರ ಹೊತ್ತಿಗೆ ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕರ್ನಾಟಕದ ಬಹಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕದಲ್ಲಿಯೇ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ದಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು.
ಇದೇ ರೀತಿ ಭಾರತದ ಭೌಗೋಳಿಕ ವ್ಯಾಪ್ತಿಯೂ ಹಿರಿದಾದುದು. ಅದರ ಭೂಲಕ್ಷಣವೂ ವೈವಿಧ್ಯಮಯವಾಗಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳೆಂಬ ಸ್ಥೂಲ ಪ್ರಬೇಧಗಳನ್ನು ಗಮನಿಸುವುದರ ಜೊತೆಗೆ ಇವತ್ತಿನ 29 ರಾಜ್ಯಗಳನ್ನು ಅಥವಾ ಕೇವಲ ನಮ್ಮ ಕರ್ನಾಟಕವನ್ನು ಗಮನಿಸಿದರೂ ಸಾಕು- ಮಳೆ ಕಡಿಮೆ ಇರುವ ಉತ್ತರ ಕರ್ನಾಟಕ, ಭಾರೀ ಮಳೆ ಬೀಳುವ ಕೊಡಗು, ತುಳು ಮಾತಾಡುವ ಕರಾವಳಿ- ಹೀಗೆ ಭಿನ್ನತೆಗಳು ಕಣ್ಣ ಮುಂದೆ ಬರುತ್ತವೆ. ಭಾರತೀಯ ಸಾಹಿತ್ಯವೂ ಹಲವು ಭಾಷೆಗಳಲ್ಲಿ ಸೃಷ್ಟಿಯಾಗುತ್ತಿದೆ! ಸಂತಾಲಿಯಿಂದ ಸಂಸ್ಕೃತದವರೆಗೆ ಅವುಗಳ ಆಳ ಮತ್ತು ವಿಸ್ತಾರಗಳನ್ನು ಗಮನಿಸಬೇಕು. ನಾವು ದೂರದಿಂದ ‘ಒಂದು’ ಎಂದು ಭಾವಿಸುವ ಸಂಸ್ಕೃತದಲ್ಲಿಯೇ ನೂರಾರು ಪ್ರಾದೇಶಿಕ ವ್ಯತ್ಯಾಸಗಳಿವೆ. ವ್ಯಾಸರು ಬರೆದ ಮಹಾಭಾರತದಲ್ಲಿಯೇ 1129 ಭಿನ್ನ ಪಾಠಗಳನ್ನು ಗುರುತಿಸಲಾಗಿದೆ.
ಭಾರತದ ಯಾವ ಶಾಸ್ತ್ರಗಳೂ ಈ ದೇಶದ ವೈವಿಧ್ಯಕ್ಕೆ ಸರಿಯಾದ ವ್ಯಾಕರಣ ಬರೆದಿಲ್ಲ. ಬರೆದಿದ್ದರೆ ಅದು ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಸಿದ್ದಗೊಂಡ ಸಂವಿಧಾನ ಮಾತ್ರ. ಭಾರತದ ಎಲ್ಲ ಬಗೆಯ ನಿರೂಪಣೆಗಳಿಗೆ ಸಮಾನ ಗೌರವ ನೀಡಿ, ಅವುಗಳನ್ನು ಒಂದು ಸೂತ್ರದಲ್ಲಿ ಮೊದಲ ಬಾರಿಗೆ ಹಿಡಿದಿಟ್ಟ ಏಕೈಕ ಗ್ರಂಥವೆಂದರೆ ನಮ್ಮ ಸಂವಿಧಾನ. ಅದನ್ನು ಗೌರವಿಸುವುದೆಂದರೆ ದೇಶವನ್ನು ಗೌರವಿಸಿದಂತೆ. ಅದನ್ನು ವಿರೋಧಿಸುವುದೆಂದರೆ ದೇಶವನ್ನು ವಿರೋಧಿಸಿದಂತೆ.
ನಮ್ಮ ಸಂವಿಧಾನವು ಇಲ್ಲಿನ ಪಾರಂಪರಿಕ ರಾಜತ್ವ, ಧಾರ್ಮಿಕತೆ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ, ನಮಗೆ ದೇಶದ ಪೌರತ್ವವನ್ನು ಒದಗಿಸಿಕೊಟ್ಟಿದೆ. ಮೌಖಿಕ ಪರಂಪರೆಯ ಅನೇಕ ಹುಸಿ ಮಾತುಗಳಿಂದ ನಮ್ಮನ್ನು ಬಿಡಿಸಿ, ನಾವೆಲ್ಲರೂ ಖಂಡಿತವಾಗಿಯೂ ನಂಬಬಹುದಾದ ಒಂದು ಆಶ್ವಾಸನೆಯನ್ನು ನೀಡಿದೆ. ಕೋಟ್ಯಂತರ ಭಾರತೀಯರ ಬದುಕಿಗೊಂದು ಭದ್ರತೆಯನ್ನು ನೀಡಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಗಗನ ಕುಸುಮಗಳಾಗಿದ್ದ ಭಾರತದಲ್ಲಿ ಎಲ್ಲರ ಘನತೆಯನ್ನು ಸಮಾನವಾಗಿ ಎತ್ತಿ ಹಿಡಿದದ್ದು ಸಂವಿಧಾನ ಮಾತ್ರ. ಅದಕ್ಕೆ ಎಲ್ಲರನ್ನೂ ರಕ್ಷಿಸುವ ಹೊಣೆಗಾರಿಕೆಯಿದೆ. ಕೆಲವರನ್ನು ಎತ್ತಿ ಹಿಡಿದು ಹಲವರನ್ನು ತುಳಿಯುತ್ತಿದ್ದ ಭಾರತದಲ್ಲಿ ಸಂವಿಧಾನದ ಅನುಷ್ಠಾನ ಒಂದು ಐತಿಹಾಸಿಕ ಘಟನೆ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಇಷ್ಟೆಲ್ಲಾ ಇದ್ದರೂ ಈಚಿನ ದಿನಗಳಲ್ಲಿ ನಾವೆಲ್ಲ ನಿಜವಾಗಿ ಆತಂಕ ಪಡುವ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಶಾಸಕಾಂಗವು ನ್ಯಾಯಾಂಗವನ್ನು ನಿಯಂತ್ರಿಸಲು ವಿವಿಧ ಬಗೆಯ ಸಂಚುಗಳನ್ನು ಹೆಣೆಯುತ್ತಿದೆ. ನ್ಯಾಯಾಂಗದ ಕೆಲವರು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸದೆ, ಕೋಮುವಾದೀ ಹೇಳಿಕೆಗಳನ್ನು ನೀಡುತ್ತಾ ಸಂವಿಧಾನದ ಮೂಲ ಆಶಯಗಳಿಂದ ದೂರ ಸರಿಯುತ್ತಿದ್ದಾರೆ. ನಿರ್ಲಜ್ಜ ರಾಜಕಾರಣವು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ. ಮಾನವನ ಘನತೆಗೆ ಧಕ್ಕೆತರುವಂಥ ಕೆಲಸಗಳನ್ನು ಕೆಲವು ಜನಪ್ರತಿನಿಧಿಗಳೇ ಮಾಡುತ್ತಿದ್ದಾರೆ ಮತ್ತು ಅಂಥವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ಸರಕಾರವು ವಿಫಲವಾಗುತ್ತಿದೆ. ಆಹಾರ, ಭಾಷೆ, ಧರ್ಮ ಮತ್ತಿತರ ವಿಷಯಗಳಲ್ಲಿ ಸರಕಾರ ಬಲಾತ್ಕಾರದಿಂದ ಹಸ್ತಕ್ಷೇಪ ಮಾಡಲು ಸುರು ಮಾಡಿದೆ. ಎಲ್ಲ ಭಾರತೀಯರಿಗೆ ಒಂದೇ ಕಾನೂನು ಎಂಬ ಮಾತು ಜಾರಿಗೆ ಬರದೆ, ಉಳ್ಳವರಿಗೊಂದು, ಬಡವರಿಗೊಂದು ಎಂಬಂತಾಗಿ ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತಲಿದೆ. ವಿದ್ಯಾವಂತರು ಸಾಮಾಜಿಕ ನ್ಯಾಯದ ವಿರುದ್ಧ ಮಾತನಾಡುವಷ್ಟು ಭ್ರಷ್ಟರಾಗಿದ್ದಾರೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಅತಿ ದೊಡ್ಡ ಕೊಡುಗೆ ನೀಡಿದ ಮಾಧ್ಯಮಗಳು ಇದೀಗ ಬಹುತೇಕ ಕೊಳೆತು ಹೋಗಿವೆ. ಧರ್ಮನಿರಪೇಕ್ಷತೆಯು ನಮ್ಮ ಆದರ್ಶವಾಗಿರಬೇಕಾಗಿರುವ ಹೊತ್ತು ಧರ್ಮಾಧಿಕಾರಿಗಳೇ ಶಾಸಕಾಂಗದ ಹೊಣೆ ಹೊತ್ತುಕೊಂಡು ಸಂವಿಧಾನವನ್ನು ಹಾಸ್ಯ ಮಾಡುತ್ತಿದ್ದಾರೆ. ಇಂಥ ವಿಚಾರಗಳ ಕುರಿತು ಗಂಭೀರವಾದ ವಿಶ್ಲೇಷಣೆ ನಡೆಸಿ ಸರಕಾರಕ್ಕೆ ಸೂಕ್ತವಾದ ಶಿಫಾರಸುಗಳನ್ನು ಕೊಡಬೇಕಾದ ಉನ್ನತ ಶಿಕ್ಷಣ ಸಂಸ್ಥೆಗಳು ಬಲಹೀನಗೊಂಡು ನರಳುತ್ತಲಿವೆ.
ಇಂತಹ ದಯನೀಯ ಸಂದರ್ಭದಲ್ಲಿ ಬದುಕುತ್ತಿರುವ ನಾವು ಮೊದಲು ಮಾಡಬೇಕಾದ ಕೆಲಸವೆಂದರೆ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡು ಅದನ್ನು ರಕ್ಷಿಸಲು ಹೋರಾಡುವುದು. ಸಂವಿಧಾನವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿದವ ನಾನು. ಸಂವಿಧಾನವನ್ನು ಓದೋಣ. ಅದನ್ನು ರಕ್ಷಿಸೋಣ. ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯೋಣ. ನಿಮ್ಮ ಕೈಯಲ್ಲಿರುವ ಈ ಪುಟ್ಟ ಪುಸ್ತಕ ಅಂಥ ಕೆಲಸಗಳಿಗೆ ಖಂಡಿತಾ ಸಹಾಯ ಮಾಡುತ್ತದೆ.
(ಆಗಸ್ಟ್ 25, 2018ರಂದು ಬೆಂಗಳೂರಿನಲ್ಲಿ ‘ಸಂವಿಧಾನ ಓದು’ ಅಭಿಯಾನದ ಉದ್ಘಾಟನಾ ಭಾಷಣ)








