ಅಧ್ಯಾಯ I – ಭಾರತದ ಅಟಾರ್ನಿ ಜನರಲ್
76. ಭಾರತದ ಅಟಾರ್ನಿ ಜನರಲ್:- (1) ರಾಷ್ಟ್ರಪತಿಯು, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹತೆಯುಳ್ಳ ವ್ಯಕ್ತಿಯನ್ನು, ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡತಕ್ಕದ್ದು. (2) ಅಟಾರ್ನಿ ಜನರಲ್‌ನು, ರಾಷ್ಟ್ರಪತಿಯು ಕಾಲಕಾಲಕ್ಕೆ ತನಗೆ ಕಳುಹಿಸಬಹುದಾದಂಥ ಅಥವಾ ಒಪ್ಪಿಸಬಹುದಾದಂಥ ಕಾನೂನು ವಿಷಯಗಳ ಮೇಲೆ ಭಾರತ ಸರ್ಕಾರಕ್ಕೆ ಸಲಹೆ ಕೊಡುವುದು ಮತ್ತು ಕಾನೂನು ಸ್ವರೂಪದ ಅಂಥ ಇತರ ಕರ್ತವ್ಯಗಳನ್ನು ನೆರವೇರಿಸುವುದು ಹಾಗೂ ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ತನಗೆ ಪ್ರದಾನ ಮಾಡಿದ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರತಕ್ಕದ್ದು. (3) ಅಟಾರ್ನಿ ಜನರಲ್‌ನು, ತನ್ನ ಕರ್ತವ್ಯಗಳನ್ನು ನೆರವೇರಿಸುವಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿನ ಎಲ್ಲ ನ್ಯಾಯಾಲಯಗಳಲ್ಲಿ ವಾದಿಸುವ ಹಕ್ಕನ್ನು ಹೊಂದಿರತಕ್ಕದ್ದು. (4) ಅಟಾರ್ನಿ ಜನರಲ್‌ನು ರಾಷ್ಟ್ರಪತಿಯ ಇಷ್ಟಪರ್ಯಂತ ಪದದಲ್ಲಿರತಕ್ಕದ್ದು ಮತ್ತು ರಾಷ್ಟ್ರಪತಿಯು ನಿರ್ಧರಿಸಬಹುದಾದಷ್ಟು ಸಂಭಾವನೆಯನ್ನು ಪಡೆಯತಕ್ಕದ್ದು.








