- ಸಂವಿಧಾನದ ಪ್ರಾರಂಭದಲ್ಲಿ ನಾಗರಿಕತ್ವ:- ಈ ಸಂವಿಧಾನದ ಪ್ರಾರಂಭದಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಅಧಿವಾಸವುಳ್ಳ ಮತ್ತು- (ಎ) ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿರುವ; ಅಥವಾ (ಬಿ) ತನ್ನ ತಾಯಿಯಾಗಲಿ, ತಂದೆಯಾಗಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿದ್ದ; ಅಥವಾ (ಸಿ) ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಐದು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲದಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ನಿವಾಸಿಯಾಗಿರುವ – ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ನಾಗರಿಕನಾಗಿರತಕ್ಕದ್ದು.
- ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು: 5ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಈಗ ಪಾಕಿಸ್ತಾನದಲ್ಲಿ ಸೇರಿರುವ ರಾಜ್ಯಕ್ಷೇತ್ರದಿಂದ ಭಾರತ ರಾಜ್ಯಕ್ಷೇತ್ರಕ್ಕೆ ವಲಸೆ ಬಂದಿರುವ ಯಾರೇ ವ್ಯಕ್ತಿಯು –
(ಎ) ಅವನಾಗಲಿ, ಅವನ ತಾಯಿ ಅಥವಾ ತಂದೆಯಾಗಲಿ ಅಥವಾ ಅವನ ಅಜ್ಜಿ ಅಥವಾ ತಾತನಾಗಲಿ (ಮೂಲತಃ ಅಧಿನಿಯಮಿಸಿದಂತೆ) ಭಾರತ ಸರ್ಕಾರ ಅಧಿನಿಯಮ, 1935ರಲ್ಲಿ ಪರಿಭಾಷಿಸಿರುವಂತೆ ಭಾರತದಲ್ಲಿ ಹುಟ್ಟಿದ್ದರೆ; ಮತ್ತು (ಬಿ) (1) ಅಂಥ ವ್ಯಕ್ತಿಯು 1948ನೆಯ ಇಸವಿಯ ಜುಲೈ ತಿಂಗಳ ಹತ್ತೊಂಬತ್ತನೆಯ ತಾರೀಖಿಗಿಂತ ಮುಂಚಿತವಾಗಿ ಹಾಗೆ ವಲಸೆ ಬಂದಿದ್ದ ಸಂದರ್ಭದಲ್ಲಿ, ತಾನು ವಲಸೆ ಬಂದ ತಾರೀಖಿನಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ನಿವಾಸಿಯಾಗಿದ್ದರೆ; ಅಥವಾ
(ii) ಅಂಥ ವ್ಯಕ್ತಿಯು 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೆಯ ತಾರೀಖಿನ ದಿನ ಅಥವಾ ಆ ತರುವಾಯ, ಹಾಗೆ ವಲಸೆ ಬಂದಿದ್ದ ಸಂದರ್ಭದಲ್ಲಿ, ತನ್ನನ್ನು ಭಾರತದ ನಾಗರಿಕನೆಂದು ನೋಂದಾಯಿಸಿಕೊಳ್ಳುವಂತೆ ಆ ಕಾರ್ಯಕ್ಕಾಗಿ ಡೊಮಿನಿಯನ್ ಆಫ್ ಇಂಡಿಯಾ ಸರ್ಕಾರದಿಂದ ನೇಮಕಗೊಂಡಿರುವ ಅಧಿಕಾರಿಗೆ ಈ ಸಂವಿಧಾನದ ಪ್ರಾರಂಭಕ್ಕೆ ಮೊದಲು, ಆ ಸರ್ಕಾರವು ನಿಯಮಿಸಿರುವಂಥ ನಮೂನೆಯಲ್ಲಿ ಮತ್ತು ರೀತಿಯಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ಆ ಅಧಿಕಾರಿಯು ಅವನನ್ನು ಆ ರೀತಿಯಾಗಿ ನೋಂದಾಯಿಸಿಕೊಂಡಿದ್ದರೆ
- ಈ ಸಂವಿಧಾನವು ಪ್ರಾರಂಭವಾದಂದಿನಿಂದ, ಅವನನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದು:
ಪರಂತು, ಯಾರೇ ವ್ಯಕ್ತಿಯು, ಅವನ ಅರ್ಜಿಯ ತಾರೀಖಿಗೆ ನಿಕಟಪೂರ್ವದಲ್ಲಿ ಕನಿಷ್ಠ ಪಕ್ಷ ಆರು ತಿಂಗಳ ಕಾಲ ಭಾರತದ ರಾಜ್ಯಕ್ಷೇತ್ರದ ನಿವಾಸಿಯಾಗಿಲ್ಲದಿದ್ದರೆ, ಅವನನ್ನು ಹಾಗೆ ನೋಂದಾಯಿಸಿಕೊಳ್ಳತಕ್ಕದ್ದಲ್ಲ.
7. ಪಾಕಿಸ್ತಾನಕ್ಕೆ ವಲಸೆಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು:- 5ನೆಯ ಮತ್ತು 6ನೆಯ ಅನುಚ್ಛೇದಗಳಲ್ಲಿ ಏನೇ ಇದ್ದಾಗ್ಯೂ, 1947ನೆಯ ಇಸವಿ ಮಾರ್ಚ್ ತಿಂಗಳ ಮೊದಲನೆಯ ತಾರೀಖಿನ ತರುವಾಯ ಭಾರತದ ರಾಜ್ಯಕ್ಷೇತ್ರದಿಂದ ಈಗ ಪಾಕಿಸ್ತಾನದಲ್ಲಿ ಸೇರಿರುವ ರಾಜ್ಯಕ್ಷೇತ್ರಕ್ಕೆ ವಲಸೆ ಹೋದ ಯಾರೇ ವ್ಯಕ್ತಿಯನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದಲ್ಲ:
ಪರಂತು, ಈಗ ಪಾಕಿಸ್ತಾನದಲ್ಲಿ ಸೇರಿರುವ ರಾಜ್ಯಕ್ಷೇತ್ರಕ್ಕೆ ಹಾಗೆ ವಲಸೆ ಹೋಗಿದ್ದು, ಮತ್ತೆ ನೆಲೆಸುವುದಕ್ಕಾಗಿ ಅಥವಾ ಖಾಯಂ ಆಗಿ ಹಿಂತಿರುಗುವುದಕ್ಕಾಗಿ ಯಾವುದೇ ಕಾನೂನಿನ ಪ್ರಾಧಿಕಾರದ ಮೂಲಕ ಅಥವಾ ಅದರ ಮೇರೆಗೆ ಕೊಡಲಾದ ರಹದಾರಿಯ ಪ್ರಕಾರ ಭಾರತದ ರಾಜ್ಯಕ್ಷೇತ್ರಕ್ಕೆ ವಾಪಸ್ಸು ಬಂದ ಯಾವ ವ್ಯಕ್ತಿಗೇ ಆಗಲೀ, ಈ ಅನುಚ್ಛೇದದಲ್ಲಿ ಹೇಳಿರುವುದು ಯಾವುದೂ ಅನ್ವಯಿಸತಕ್ಕದ್ದಲ್ಲ ಮತ್ತು ಅಂಥ ಪ್ರತಿಯೊಬ್ಬ ವ್ಯಕ್ತಿಯನ್ನು 6ನೆಯ ಅನುಚ್ಛೇದದ (ಬಿ) ಖಂಡದ ಉದ್ದೇಶಗಳಿಗಾಗಿ 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೆಯ ತಾರೀಖಿನ ತರುವಾಯ ಭಾರತದ ರಾಜ್ಯಕ್ಷೇತ್ರಕ್ಕೆ ವಲಸೆ ಬಂದವನೆಂದು ಭಾವಿಸತಕ್ಕದ್ದು.
8. ಭಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು:- 5ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಯಾರೇ ವ್ಯಕ್ತಿಯು ತಾನಾಗಲಿ ಅಥವಾ ತನ್ನ ತಾಯಿ ಅಥವಾ ತಂದೆಯಾಗಲಿ ಅಥವಾ ತನ್ನ ಅಜ್ಜಿ ಅಥವಾ ತಾತನಾಗಲಿ (ಮೂಲತಃ ಅಧಿನಿಯಮಿಸಲಾದಂತೆ) ಭಾರತ ಸರ್ಕಾರ ಅಧಿನಿಯಮ, 1935ರಲ್ಲಿ ಪರಿಭಾಷಿತವಾಗಿರುವಂತೆ ಭಾರತದಲ್ಲಿ ಹುಟ್ಟಿದ್ದು ಭಾರತದ ಹೊರಗಿನ ದೇಶವೆಂದು ಪರಿಭಾಷಿತವಾಗಿರುವಂಥ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದರೆ, ಅಂಥ ವ್ಯಕ್ತಿಯು ಡೊಮಿನಿಯನ್ ಆಫ್ ಇಂಡಿಯಾ ಸರ್ಕಾರವು ಅಥವಾ ಭಾರತ ಸರ್ಕಾರವು ನಿಯಮಿಸಿದ ನಮೂನೆಯಲ್ಲಿ ಮತ್ತು ರೀತಿಯಲ್ಲಿ, ತಾನು ತತ್ಕಾಲದಲ್ಲಿ ವಾಸಿಸುತ್ತಿರುವ ದೇಶದಲ್ಲಿನ ಭಾರತದ ರಾಜತಾಂತ್ರಿಕ ಪ್ರತಿನಿಧಿಗೆ ಅಥವಾ ಕಾನ್ಸುಲರ್ ಪ್ರತಿನಿಧಿಗೆ, ಈ ಸಂವಿಧಾನದ ಪ್ರಾರಂಭಕ್ಕೆ ಮುಂಚಿತವಾಗಿ ಆಗಲಿ ಅಥವಾ ತರುವಾಯ ಆಗಲಿ ಅರ್ಜಿಯನ್ನು ಸಲ್ಲಿಸಿ, ಆ ಪ್ರತಿನಿಧಿಯಿಂದ ತಾನು ಭಾರತದ ನಾಗರಿಕನೆಂದು ನೋಂದಾಯಿಸಿಕೊಂಡಿದ್ದರೆ, ಅಂಥ ವ್ಯಕ್ತಿಯನ್ನು ಭಾರತದ ನಾಗರಿಕನೆಂಬುದಾಗಿ ಭಾವಿಸತಕ್ಕದ್ದು.
9. ಸ್ವಯಿಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ:- ಯಾರೇ ವ್ಯಕ್ತಿಯು ಸ್ವಯಿಚ್ಛೆಯಿಂದ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದಿದ್ದರೆ, 5ನೆಯ ಅನುಚ್ಛೇದದ ಆಧಾರದ ಮೇಲೆ ಅವನು ಭಾರತದ ನಾಗರಿಕನಾಗತಕ್ಕದ್ದಲ್ಲ ಅಥವಾ 6ನೆಯ ಅನುಚ್ಛೇದದ ಅಥವಾ 8ನೆಯ ಅನುಚ್ಛೇದದ ಆಧಾರದ ಮೇಲೆ ಅವನನ್ನು ಭಾರತದ ನಾಗರಿಕನೆಂದು ಭಾವಿಸತಕ್ಕದ್ದಲ್ಲ.
10. ನಾಗರಿಕತ್ವದ ಹಕ್ಕುಗಳ ಮುಂದುವರಿಕೆ:- ಈ ಭಾಗದಲ್ಲಿ ಹಿಂದೆ ಹೇಳಿರುವ ಯಾವುದೇ ಉಪಬಂಧದ ಮೇರೆಗೆ ಭಾರತದ ನಾಗರಿಕನಾಗಿರುವ ಅಥವಾ ಭಾರತದ ನಾಗರಿಕನೆಂದು ಭಾವಿಸಲಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ, ಸಂಸತ್ತು ಮಾಡಬಹುದಾದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು, ಭಾರತದ ನಾಗರಿಕನಾಗಿ ಮುಂದುವರಿಯತಕ್ಕದ್ದು.
11. ಸಂಸತ್ತು ನಾಗರಿಕತ್ವದ ಹಕ್ಕನ್ನು ಕಾನೂನಿನ ಮೂಲಕ ವಿನಿಯಮಿಸುವುದು:- ಈ ಭಾಗದಲ್ಲಿ ಹಿಂದೆ ಹೇಳಿರುವ ಉಪಬಂಧಗಳಲ್ಲಿ ಇರುವುದು ಯಾವುದೂ, ನಾಗರಿಕತ್ವದ ಆರ್ಜನೆಯ ಮತ್ತು ಸಮಾಪ್ತಿಯ ಬಗ್ಗೆ ಮತ್ತು ನಾಗರಿಕತ್ವಕ್ಕೆ ಸಂಬಂಧಪಟ್ಟ ಇತರ ಎಲ್ಲಾ ವಿಷಯಗಳ ಬಗ್ಗೆ ಯಾವುದೇ ಉಪಬಂಧವನ್ನು ಮಾಡಲು ಸಂಸತ್ತಿಗಿರುವ ಅಧಿಕಾರವನ್ನು ಅಲ್ಪೀಕರಿಸತಕ್ಕದ್ದಲ್ಲ.
ಮೂಲ: ಭಾರತದ ಸಂವಿಧಾನ (1ನೇ ಮೇ, 2011ರಂದು ಇದ್ದಂತೆ), ಭಾರತ ಸರ್ಕಾರ, ಕಾನೂನು ಮತ್ತು ನ್ಯಾಯ ಮಂತ್ರಾಲಯ, ವಿಧಾಯಿ ಇಲಾಖೆ, ಕರ್ನಾಟಕ ರಾಜ ಭಾಷಾ (ವಿಧಾಯೀ) ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಪು. 4 ಮತ್ತು 5








