December 3, 2023 5:45 am

ಬುದ್ಧ, ಬಸವ, ಮಾರ್ಕ್ಸ್, ಅಂಬೇಡ್ಕರ್ ಬಿಡುಗಡೆ ಹಾದಿಯ ದೀಪಧಾರಿಗಳು

ಧರ್ಮ, ತತ್ವಗಳ ಹುಟ್ಟಿಗೆ ಕಾರಣವೇನಿರಬಹುದು? ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಅವುಗಳು ಹುಟ್ಟಿರುವ ಉದ್ದೇಶ ಸ್ಪಷ್ಟವಾಗುತ್ತದೆ. ಸನಾತನ ಧರ್ಮದ ಸಣ್ಣ ಮಿತಿಗಳು ಬೃಹದಾಕಾರವಾಗಿ ಬೆಳೆದ ಪರಿಣಾಮ ಸಾಮಾಜಿಕ, ಆರ್ಥಿಕ, ವರ್ಣ, ವರ್ಗ, ಲಿಂಗ ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆಗಳ ಬೆಳವಣಿಗೆಗೆ ಕಾರಣವಾಯಿತು. ಇದರಿಂದ ಮಾನವರ ಘನತೆಗೆ ಕುಂದುಂಟಾಗತೊಡಗಿತು. ಇಂತಹ ಸಾಮಾಜಿಕ ಸಮಸ್ಯೆಗಳು ವ್ಯಾಪಕವಾಗಿ ವಿಸ್ತರಿಸಿದಾಗೆಲ್ಲ ಬಹುತೇಕ ಈ ವಿಶ್ವವು ಹೊಸ ಧರ್ಮಗಳನ್ನು ಕಂಡಿದೆ.

ಜೈನ, ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ, ಶೈವ, ಸಿಖ್ ಮೊದಲಾದ ಧರ್ಮಗಳು ಜನ್ಮತಾಳುವಾಗೆಲ್ಲ ಇಂತಹ ಸಾಮಾಜಿಕ ಅಸಮಾನತೆ, ಅಮಾನವೀಯತೆ, ಸಾರ್ವಜನಿಕ ಅಸಹನೆ, ಮಾನವ ಸಮುದಾಯದ ತಾಳ್ಮೆಯ ಪರೀಕ್ಷೆಗಳು ನಡೆದಿವೆ. ಇವೆಲ್ಲವುಗಳಿಂದ ಬಿಡುಗಡೆ ಹೊಂದುವ ಆಂತರಿಕ ಚಿಂತನೆಯ ಬಾಹ್ಯರೂಪವಾಗಿ ಧರ್ಮ, ತತ್ವಗಳು ಹುಟ್ಟಿಕೊಂಡಿವೆ. ಅಂತದೇ ಸಂದರ್ಭದ ಕುಡಿಗಳೇ ಬುದ್ಧ, ಬಸವ, ಮಾರ್ಕ್ಸ್, ಅಂಬೇಡ್ಕರ್.

ತಿಂಗಳ ಅಂತರದಲ್ಲಿ ಈ ನಾಲ್ಕು ಜನ ಮಹಾನುಭಾವರು ಜನಿಸಿದ್ದೊಂದು ಆಕಸ್ಮಿಕ. ಅವರ ಮನುಷ್ಯಪರ ಕಾಳಜಿಗಳು ಮಾತ್ರ ಒಂದೇ ಉದ್ದೇಶದಿಂದ ಆರಂಭವಾಗಿವೆ. ಹಾಗೆಂದ ಮಾತ್ರಕ್ಕೆ ಹೊಸದೆಲ್ಲವೂ ವಿರುದ್ಧವಾಗಿ ಹುಟ್ಟಿಕೊಂಡಿರುವುದು, ಹಳೆಯದಕ್ಕೆ ಪರ್ಯಾಯವಾಗಿ ಕಟ್ಟಿಕೊಳ್ಳುವ ಸಲುವಾಗಿಯೇ ಇವು ಜನ್ಮತಾಳಿವೆ ಎಂದರ್ಥವಲ್ಲ. ಈ ಕ್ಷಣಕ್ಕೆ ಈಗಾಗಲೆ ಅಸ್ತಿತ್ವದಲ್ಲಿರುವ ಧರ್ಮ, ಸಿದ್ಧಾಂತಗಳ ಮಿತಿಗಳನ್ನು ಹೋಗಲಾಡಿಸುವ ಪ್ರಯತ್ನವಾಗಿ ಇವುಗಳನ್ನು ಪರಿಭಾವಿಸಬೇಕಾಗಿದೆ. ಆದರೆ, ಕಾಲಾನಂತರದಲ್ಲಿ ಇವುಗಳೂ ಈ ಹಿಂದಿನ ಧರ್ಮ, ಸಿದ್ಧಾಂತಗಳಂತೆಯೇ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿವೆ. ಅದರ ಫಲಿತವೇ ಇನ್ನೂ ಉದಾರವಾಗಬೇಕಿದ್ದ ಜಗತ್ತು ಸಂಕುಚಿತವಾಗುತ್ತಿರುವ ಅನುಮಾನವನ್ನು ಮೂಡಿಸುತ್ತದೆ.

ಬುದ್ಧನೆಂಬ ಹಾದಿ

ಬುದ್ಧನ (ಕ್ರಿ.ಪೂ. ೫೬೩-೪೮೩) ಕುರಿತು ಅನೇಕ ಕತೆಗಳಿವೆ. ಅದರಲ್ಲಿ ಪ್ರಸಿದ್ಧವಾಗಿರುವ ಕತೆಯೆಂದರೆ ಅವನು ನಾಲ್ಕು ದೃಶ್ಯಗಳನ್ನು ಕಂಡು ಸಿಂಹಾಸನವನ್ನು ತ್ಯಜಿಸಿ, ಮಡದಿ ಯಶೋಧರ ಹಾಗೂ ಮಗ ರಾಹುಲನನ್ನು ತೊರೆದು ಆಳು ಚನ್ನನ ಸಹಾಯದಿಂದ ರಾತ್ರೋರಾತ್ರಿ ಹೊರಟುಹೋದದ್ದು. ಇನ್ನೊಂದು ಕತೆಯ ಪ್ರಕಾರ ಬುಡಕಟ್ಟು ದಂಗೆಯ ಕಾರಣದಿಂದ ಅವನು ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ರಾಜ ಪದವಿಯನ್ನು ಬಿಟ್ಟು ಸಂನ್ಯಾಸ ದೀಕ್ಷೆಯನ್ನು ಪಡೆದ. ಮತ್ತೊಂದು ಕತೆಯ ಪ್ರಕಾರ ಅವನ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಪ್ರಜಾಪಾಲನೆಯ ರಾಜಧರ್ಮವನ್ನು ಪಾಲಿಸಲಾಗದವನು ರಾಜ್ಯಾಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ಅವನು ಸಿಂಹಾಸನವನ್ನು ಬಿಟ್ಟುಕೊಟ್ಟ. ಮಗದೊಂದು ಕತೆಯ ಪ್ರಕಾರ ಶಾಕ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಉದ್ಭವಿಸಿದ ರೋಹಿಣಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಎದುರಾದ ಬಿಕ್ಕಟ್ಟು ಬುದ್ಧ ಅರಮನೆ ತೊರೆಯಲು ಕಾರಣವಾಗಿತ್ತು. ಈ ನಾಲ್ಕೂ ಕತೆಗಳಲ್ಲಿ ಅವನು ಅಧಿಕಾರವನ್ನು ತೊರೆದುದರ ಬಗೆಗೆ ಖಚಿತವಾಗುತ್ತದೆ. ಹಾಗೆಯೇ ಏಕೆ ಎಂಬ ಅನುಮಾನಗಳು ಬಗೆಹರಿಯುವುದಿಲ್ಲ.

ಮೊದಲ ಕತೆಯ ಕುರಿತು ಪ್ರಾಯೋಗಿಕವಾಗಿ ಅನ್ವಯಿಸಬಹುದೇ? ಎಂಬ ಪ್ರಶ್ನೆ ಮೂಡುತ್ತದೆ. ಜಗತ್ತಿನ ದುಃಖವನ್ನು ಕಳೆಯ ಹೊರಟವನು ಹೆಂಡತಿ, ಮಗನನ್ನು ಬಿಟ್ಟು ಹೋದಾಗ ಅವರಿಗಾದ ದುಃಖವನ್ನು ಹೇಗೆ ಪರಿಹರಿಸಿದ? ಎಂಬ ಪ್ರಶ್ನೆ ಎದುರಾಗುತ್ತದೆ. ಉಳಿದ ಮೂರು ಕತೆಗಳಲ್ಲಿ ಕೆಲವಾದರೂ ಅನ್ವಯಿಸಬಹುದಾದ ಅಂಶಗಳು ಸಿಗುತ್ತವೆ. ನದಿ ನೀರಿನ ಹಂಚಿಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಅಹಿಂಸೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ಅವನ ವಾದಕ್ಕೆ ಸಮ್ಮತಿ ದೊರೆಯದಿರುವುದರಿಂದ ಅವನು ಸಿಂಹಾಸನವನ್ನು ತಿರಸ್ಕರಿಸಿರಬಹುದು ಅಥವಾ ಅವನನ್ನು ಸ್ಥಾನಭ್ರಷ್ಟಗೊಳಿಸಿರಬಹುದು. ಅವನ ಮುಂದಿನ ಅನ್ವೇಷಣೆಯ ದಾರಿಯಿಂದ ನಮಗೆ ಹೊಸ ಹೊಳವುಗಳು ಅವನ ಹಿಂದಿನ ಜೀವನದ ಬಗೆಗೆ ಸಿಕ್ಕುತ್ತವೆ. ಅವುಗಳ ಮೂಲಕ ಬುದ್ಧನ ಅಂದಿನ ಆಂತರಿಕ ಮತ್ತು ಬಾಹ್ಯ ಒತ್ತಡಗಳ ಸ್ಪಷ್ಟತೆ ನಮಗೆ ಸಿಗದಿದ್ದರೂ ಒಂದು ಊಹೆಯನ್ನಾದರೂ ಮಾಡಬಹುದು. ಆ ಮೂಲಕ ಅವನ ಮುಂದಿನ ನಡೆಯ ಮೇಲೆ ಈ ಕಾರಣಗಳು ಪರಿಣಾಮ ಬೀರಿರುವ ಸಾಧ್ಯತೆಗಳನ್ನು ಮನಗಾಣಬೇಕಿದೆ.

ಆದ್ದರಿಂದಲೇ ಅವನು ತನ್ನ ಬಗೆಗಾಗಲಿ, ದೇವರ ಬಗೆಗಾಗಲಿ ಮಾತನಾಡುವುದಿಲ್ಲ. ಅದರ ಬದಲಾಗಿ ಜಗತ್ತಿನ ಆತ್ಯಂತಿಕ ಸಮಸ್ಯೆಯಾಗಿ ಇಂದಿಗೂ ಅಸ್ತಿತ್ವದಲ್ಲಿರುವ ಆಸೆಯ ಕುರಿತು ಮಾತನಾಡುತ್ತಾನೆ. ‘ಆಸೆಯೇ ದುಃಖಕ್ಕೆ ಮೂಲ’ಎಂಬ ಸರಳ ಸತ್ಯವನ್ನು ಕಾಣುವುದು ಕಷ್ಟಕರ. ಇನ್ನು ಅದನ್ನು ಅನ್ವಯಿಸಿಕೊಳ್ಳುವುದು, ಒಪ್ಪಿಕೊಳ್ಳುವುದು, ಆಚರಣೆಗೆ ತರುವುದು ಇಂದಿಗೂ ಆದರ್ಶವಾಗಿಯೇ ಉಳಿದಿದೆ. ಬುದ್ಧನ ತತ್ವಗಳು ಆದರ್ಶಲೋಕವೊಂದರ ಹುಡುಕಾಟವೇ ಆಗಿವೆ.

ಬುದ್ಧನ ತತ್ವಗಳು:

೧. ನಾಲ್ಕು ಮೂಲ ತತ್ವಗಳು: ಅ. ಅಹಿಂಸೆ ಆ. ಸತ್ಯ ನುಡಿಯುವಿಕೆ ಇ. ಕಳ್ಳತನ ಮಾಡದಿರುವುದು ಈ. ಪಾವಿತ್ರ್ಯ.

೨. ನಾಲ್ಕು ಮಹಾನ್ ಸತ್ಯಗಳು: ಅ. ದುಃಖ ಆ. ದುಃಖದ ಕಾರಣ ಇ. ದುಃಖದ ನಿವಾರಣೆ ಈ. ದುಃಖ ನಿವಾರಣೆಯ ಮಾರ್ಗ.

೩. ಅಷ್ಟಾಂಗ ಮಾರ್ಗ: ಅ. ಒಳ್ಳೆಯ ನಂಬಿಕೆ ಆ. ಒಳ್ಳೆಯ ಆಲೋಚನೆ ಇ. ಒಳ್ಳೆಯ ಮಾತು ಈ. ಉತ್ತಮ ನಡತೆ ಉ. ಉತ್ತಮ ಜೀವನ ಊ. ಒಳ್ಳೆಯ ಪ್ರಯತ್ನ ಋ. ಉತ್ತಮ ವಿಚಾರಗಳ ನೆನಪು ಎ. ಯೋಗ್ಯ ರೀತಿಯ ಧ್ಯಾನ.

            ಬುದ್ಧ ಎಂದಾಕ್ಷಣ ಜಗತ್ತಿಗೆ ನೆನಪಾಗಬೇಕಿರುವುದು ಕಾರುಣ್ಯ. ಅವನ ಅರೆ ತೆರೆದ ನಿಷ್ಕಲ್ಮಶ ಕಣ್ಣುಗಳು. ಆ ಮೂಲಕ ಯಾವುದನ್ನೂ ಆತ್ಯಂತಿಕವಾಗಿ ನಂಬಲಾರೆನೆಂಬ ಅವನ ನಿಲುವು. ಅವನ ಮಂದಸ್ಮಿತದ ಮುಖ ಜಗತ್ತಿಗೆ ಅನೇಕ ಕಾಣ್ಕೆಗಳನ್ನು ಧಾರೆಯೆರೆಯುತ್ತಿದೆ. ಇನ್ನು ಅವೈದಿಕ ಚಿಂತನೆಯಲ್ಲಿ ಬುದ್ಧನ ಸ್ಥಾನ ಅದ್ವಿತೀಯ. ಅಂತರಂಗದ ತಿಳಿವಳಿಕೆಯ ಮೂಲಕ ಬಾಹ್ಯ ಜಗತ್ತಿನ ಮೇಲೆ ತನಗಿರುವ ಆಸಕ್ತಿ, ದ್ವೇಷ, ಆಸೆ, ಅಸೂಯೆ ಇತ್ಯಾದಿಗಳನ್ನೆಲ್ಲ ಗೆಲ್ಲುವ ಕಡೆಗೆ ಅವನ ಚಿಂತನೆಗಳಿವೆ. ಮುಖ್ಯವಾಗಿ ಸನಾತನ ಧರ್ಮದಲ್ಲಿದ್ದ ದೇವತಾರಾಧಾನೆ, ಪೂಜೆ, ಮೂಢನಂಬಿಕೆ ಮೊದಲಾದುವುಗಳಿಂದ ಹೊರತಾದ ಹೊಸ ನೋಟಕ್ರಮವೊಂದರ ಹುಡುಕಾಟವೂ ಅವನ ಧ್ಯೇಯವಾಗಿದೆ. ಮೂಲತಃ ಬೋಧನೆ ಹಾಗೂ ಆಚರಣೆಗಳ ನಡುವೆ ಅಂತರವಿರುವುದನ್ನು ಮನಗಂಡ ಪರಿಣಾಮ ತಾನು ಬೋಧಿಸುತ್ತೇನೆಂಬ ಅಹಂಭಾವವಿಲ್ಲದೆ, ಸ್ನೇಹಿತರೊಡನೆ ಆಡಿದ ಮೆಲುಮಾತಿನಂತೆ ಅವನ ಧ್ವನಿ ಕೇಳಿಸುತ್ತದೆ.

            ಭಾರತದಲ್ಲಿ ಇಂದಿಗೂ ಅಸ್ಥಿತ್ವದಲ್ಲಿರುವ ಶ್ರಮಣ ಧಾರೆಗಳು, ಭಾರತದಿಂದ ಆಚೆಗೆ ಸಾಗಿದ ಝೆನ್ ಪಂಥಗಳು, ಚೀನಾದಿಂದ ಮುಂದಕ್ಕೆ ಹಬ್ಬಿರುವ ಬೌದ್ಧ ಧರ್ಮ ಇಳಿದ ಬೇರಿನ ಆಳ ಮತ್ತು ಹಿಗ್ಗಿದ ವಿಸ್ತಾರ ಕುತೂಹಲಕಾರಿಯಾದುದು. ತಾನು ಹುಟ್ಟಿದ ದೇಶದಿಂದ ಜಗತ್‌ವಿಸ್ತಾರಕ್ಕೆ ಹಬ್ಬಿದ ಭಾರತೀಯ ವಿರಾಟ್ ತತ್ವವೆಂದರೆ ಅದು ಬೌದ್ಧ ತತ್ವ. ಅದರ ಕುರಿತು ಭಾರತದಲ್ಲಿ ಅಸಡ್ಡೆ ಬೆಳೆದುದಕ್ಕೆ ಇರುವ ಕಾರಣಗಳು ಮತ್ತೊಂದು ವಿಪ್ಲವಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಬಸವನೆಂಬ ಬೆಳಕು

ಕ್ರಿ.ಪೂ.ದಲ್ಲಿ ಬದುಕಿ ವಿಶ್ವಪರ್ಯಟನೆ ಕೈಗೊಂಡ ಬುದ್ಧನ ನಂತರ ಅವನ ಚಿಂತನೆಗಳ ಮುಂದುವರೆದ ಭಾಗದಂತೆ ಬಸವಣ್ಣ ಕರ್ನಾಟಕದಲ್ಲಿ ಹುಟ್ಟುತ್ತಾನೆ. ಇವನ ಕಾಲ ಸು.೧೧೩೪. ನಿಸ್ಸಂಶಯವಾಗಿ ಕನ್ನಡದ ವಚನಕಾರರ ಕಾಲ ಜಾತಿ ವಿರೋಧದ ಚಳವಳಿ. ವಚನಕಾರರು ಅದುವರೆಗೆ ಅಸ್ತಿತ್ವದಲ್ಲಿದ್ದ ಜಾತಿ, ವರ್ಣಾಶ್ರಮ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ ಇತ್ಯಾದಿಗಳನ್ನು ವಿರೋಧಿಸಿದ್ದಾರೆ. ಅವರ ಅನೇಕ ವಚನಗಳು ಈ ಮಾತನ್ನು ಸಾಬೀತು ಮಾಡುತ್ತವೆ.

ವಸುಧೈವ ಕುಟುಂಬ, ವಿಶ್ವಭ್ರಾತೃತ್ವ, ನಾರಿಯರು ಎಲ್ಲಿ ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ – ಎಂಬಂಥ ಉದಾತ್ತ ಧ್ಯೇಯಗಳನ್ನು ಕೇವಲ ನುಡಿದರಷ್ಟೆ ಸಾಲದು; ಅದನ್ನು ಆಚರಣೆಯಲ್ಲಿ ತರಬೇಕೆಂಬುದು ವಚನಕಾರರ ಆಶಯ. ನಡೆ-ನುಡಿಗಳೆರಡನ್ನೂ ಒಂದು ಮಾಡುವ ಬಹುಮುಖ್ಯ ಆಶಯವೇ ವಚನಗಳ ವೈಶಿಷ್ಟ್ಯ. ಹನ್ನೆರಡನೇ ಶತಮಾನದಲ್ಲಿ ವಚನಕಾರರು ಬದುಕಿನಲ್ಲಿ ಡಾಂಬಿಕತೆಯನ್ನು ತ್ಯಜಿಸಿದರು. ಇದರ ಪರಿಣಾಮದಿಂದ; ಅಂದು ಜಾತಿ, ಲಿಂಗ, ಆರ್ಥಿಕ, ಸಾಮಾಜಿಕ ಇತ್ಯಾದಿ ಕಾರಣಗಳಿಂದಾಗಿ, ಅದುವರೆಗೂ ಛಿದ್ರಗೊಂಡಿದ್ದ ಸಮಾಜ ಒಟ್ಟಿಗೆ ಸೇರುವ, ಚರ್ಚಿಸುವ, ಭಿನ್ನಾಭಿಪ್ರಾಯಗಳನ್ನು ದಾಖಲಿಸುವುದು ಸಾಧ್ಯವಾಯಿತು. ಆ ಮೂಲಕ ಸ್ಥಗಿತ ಸ್ಥಿತಿಯಲ್ಲಿದ್ದ ಸಮಾಜಕ್ಕೆ ಚಲನಶೀಲತೆ ದಕ್ಕಿತು. ನಡೆ-ನುಡಿಗಳೆರಡು ವಚನಕಾರರಲ್ಲಿ ಒಂದಾದ ಕಾರಣಕ್ಕೆ ‘ಅನುಭವ ಮಂಟಪ’ದಲ್ಲಿ ಎಲ್ಲ ವರ್ಣ, ವರ್ಗ, ಜಾತಿ, ಲಿಂಗದ ಜನರು ಒಂದೆಡೆ ಸೇರುವ, ಚರ್ಚಿಸುವ ಆರೋಗ್ಯಕರ ವಾತಾವರಣವೊಂದು ಸೃಷ್ಟಿಯಾಯಿತು.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?

  • ಬಸವಣ್ಣ

ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಜನಪ್ರಿಯ ವಚನದಲ್ಲಿ ಕಡೆಯ ಮೂರು ಸಾಲುಗಳು ಮುಖ್ಯವಾಗಿ ನಡೆ-ನುಡಿಯಲ್ಲಿರುವ ವೈರುಧ್ಯಗಳೆಡೆಗೆ ಕೇಂದ್ರಿತವಾದ ಚಿಂತನೆಯೊಂದನ್ನು ಮಂಡಿಸುತ್ತಿವೆ. ಈ ಸಾಲುಗಳಲ್ಲಿರುವುದು ನಡೆನುಡಿ ಒಂದಾಗಬೇಕಾದ ಅನಿವಾರ್ಯತೆ ಹಾಗೂ ಅವಶ್ಯಕತೆಗಳೆರಡರ ಮಂಡನೆ. ಮೊದಲ ಮೂರು ಸಾಲುಗಳು ನುಡಿಯ ಕ್ರಮ, ನುಡಿಯಿಂದ ಉಂಟಾಗಬೇಕಾದ ಬೆಳಕು ಹಾಗೂ ನುಡಿಯ ಮೌಲ್ಯಗಳನ್ನು ಪ್ರತಿಪಾದಿಸಿದರೆ; ಮುಂದಿನ ಸಾಲುಗಳು ಜಡತೆಯಲ್ಲೂ ಚೇತನವನ್ನು ಉಂಟುಮಾಡಬೇಕಾದ ‘ನಡೆ’ಯನ್ನು ಕುರಿತು ಹೇಳುತ್ತಿವೆ.

ಬಸವಣ್ಣನದು ಮಾತಿನ ಮಂಟಪವಲ್ಲ, ಅದು ಅನುಭವ ಮಂಟಪ. ಆದುದರಿಂದಲೇ ಇಲ್ಲಿ ಅನುಭವ, ಅನುಭಾವಗಳೆರಡೂ ಸಂಧಿಸಬೇಕು. ಆ ಮೂಲಕ ನುಡಿಯುವವನ ಘನತೆ ಹೆಚ್ಚಬೇಕು, ಆ ಹೆಚ್ಚಳ ದಕ್ಕುವುದು ಅವನ ನಡೆಯಿಂದ. ಈ ಬಗೆಯ ತತ್ವಗಳನ್ನು ಕೇವಲ ಮಂತ್ರದಂತೆ ಉಚ್ಚರಿಸುವುದರಿಂದ, ಆ ಘನತೆ ಸಿದ್ಧಿಸುವುದಿಲ್ಲವಾದ್ದರಿಂದ ಅದನ್ನು ಆಚರಣೆಯಲ್ಲಿ ತರಬೇಕು. ಆಗ ಜಡದಲ್ಲೂ ಚಲನಶೀಲತೆ ಪ್ರಾಪ್ತವಾಗುತ್ತದೆ. ‘ನುಡಿಯೊಳಗಾಗಿ ನಡೆಯದಿದ್ದರೆ’ ನುಡಿಗೆ ಯಾವುದೇ ಸಾರ್ಥಕತೆಯಿಲ್ಲ.

ನಡೆನುಡಿಗಳರೆಡರ ವೈರುಧ್ಯಗಳು ಮಾತಿನಲ್ಲಿ ಮುಂದುವರಿಯದಿದ್ದರೂ ಆಚರಣೆಯಲ್ಲಿ ಮುಂದುವರಿಯುತ್ತಿರುತ್ತವೆ. ಇಂತಹ ತಪ್ಪುಗಳನ್ನು ಪ್ರಜ್ಞಾಪೂರ್ವಕವಾಗಿ ಮೀರಬೇಕೆಂಬುದು ಈ ವಚನದ ಮುಖ್ಯ ಆಶಯ. ಈ ಬಗೆಯ ಅನೇಕ ಆಶಯಗಳನ್ನು ವಚನಗಳಲ್ಲಿ ಕಾಣಬಹುದು. ವಚನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆಚರಣೆಗಳನ್ನು ವಿರೋಧಿಸುತ್ತಲೇ, ಮನ್ವಂತರದೆಡೆಗೆ ಮಾನವಕುಲವನ್ನು ಕರೆದೊಯ್ಯುವ ಆಚರಣೆಗಳ ಅವಶ್ಯಕತೆಗಳನ್ನು ಈ ಬಗೆಯ ವಚನಗಳು ಪ್ರತಿಪಾದಿಸುತ್ತವೆ.

ಆತ್ಯಂತಿಕ ಮಟ್ಟದಲ್ಲಿ ಮೌಢ್ಯವನ್ನು ಕಟುವಾಗಿ ವಿರೋಧಿಸಿದ್ದೆ ವಚನಕಾಲದ ವೈಶಿಷ್ಟ್ಯತೆ. ಕರ್ಮಠ, ಡಾಂಬಿಕ ಆಚರಣೆಗಳನ್ನು ವಿಮರ್ಶಾತ್ಮಕವಾಗಿ ಮುಖಾಮುಖಿಯಾಗುವುದನ್ನು ವಚನಗಳು ಕಲಿಸಿಕೊಡುತ್ತವೆ. ನಂಬಿಕೆ, ಆಚರಣೆಗಳೆರಡರ ವ್ಯರ್ಥತೆಯನ್ನೂ ಕೂಡ ತಿಳಿದಿರುವ ವಚನಕಾರರು, ಅವುಗಳನ್ನು ದೂರಗಾಮಿ ಚಿಂತನೆಗಳಿಂದ, ತನ್ನ ಅಂತರಂಗ – ಬಹಿರಂಗದ ಆಚರಣೆಗಳಲ್ಲಿ ಯಾವುದು ಅರ್ಥಪೂರ್ಣವಾದುದು ಎಂಬುದನ್ನು ತೋರಿಸುವ ಪ್ರಯತ್ನಗಳನ್ನು ಮಾಡುತ್ತಾರೆ.

ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ

ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ

ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ

ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ!

ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.

– ಬಸವಣ್ಣ

ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ? ಎಂಬ ವಚನವು ವ್ರತಾಚರಣೆಗಳ ಮೌಢ್ಯವನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ, ತನ್ನ ಹಿಂದಿನವರ ಸಾಧನೆಗಳನ್ನು ಜಪಿಸುವವರನ್ನು ವಿಡಂಬನೆಗೊಳಪಡಿಸುತ್ತಿದೆ. ಅದರಿಂದಷ್ಟೇ ಯಾವುದೇ ಉನ್ನತ ಸಾಧನೆಗಳು ಸಾಧ್ಯವಿಲ್ಲವೆಂಬ ಎಚ್ಚರಿಕೆಯನ್ನು ನೀಡುತ್ತದೆ. ‘ಮಾತಿನ ರಂಜಕರ’ ಬಗ್ಗೆ ಇಲ್ಲಿ ಕಟುವಾದ ವಿಮರ್ಶೆಯಿದೆ. ಕೆಂಚ, ಕರಿಕ, ದರಿದ್ರ, ಸಿರಿವಂತರುಗಳ ಸ್ಥಿತಿಗಳು, ಅವರ ವಿರುದ್ಧದ ಸ್ಥಿತಿಯಲ್ಲಿರುವವರನ್ನು ನೆನೆದ ಮಾತ್ರಕ್ಕೆ ಬದಲಾಗುವುದಿಲ್ಲವೆಂಬ ಸತ್ಯದ ಅರಿವಿದ್ದರೂ ಅದನ್ನು ಆಚರಣೆಗೆ ತರದ ಹಾಗೂ ಆ ಆಚರಣೆಯ ಹಿಂದಿರುವ ಮೌಢ್ಯವನ್ನು ಪ್ರಶ್ನಿಸುತ್ತದೆ. ತನ್ನ ಪುರಾತನರ ಸಾಧನೆಗಳ ಅಮಲಿನಲ್ಲಿ ಕಳೆದುಹೋಗದೆ, ಆಧುನಿಕ ಸಂದರ್ಭಕ್ಕೆ ತಕ್ಕಂತೆ, ಆಚರಣೆಗಳನ್ನು ಪರಿಷ್ಕರಿಸದಿದ್ದಲ್ಲಿ, ಅದು ಕೊಳೆತು ಹೋಗುತ್ತದೆಂಬ ಎಚ್ಚರ ಬಸವಣ್ಣನಿಗಿದೆ. ಆದರೆ ಆ ಎಚ್ಚರವನ್ನು ಅರ್ಥೈಸಿಕೊಳ್ಳಲಾಗದ್ದು ನಮ್ಮ ಕಾಲದ ಅನೇಕ ದುರವಸ್ಥೆಗಳಿಗೆ ಕಾರಣವಾಗುತ್ತಿದೆ.

ಬಸವಸಣ್ಣನನ್ನು ಹೊಸ ಧರ್ಮ ಸಂಸ್ಥಾಪಕ, ಹಳೆಯ ಧರ್ಮದ ಸುಧಾರಕ, ಪ್ರಗತಿಪರ, ಚಿಂತಕ, ಮಾನವತಾವಾದಿ, ವೈದಿಕ ಚಿಂತನೆಗಳ ಭಂಜಕ ಇತ್ಯಾದಿ ರೂಪದಲ್ಲಿ ಕಾಣಲಾಗುತ್ತಿದೆ. ಇವೆಲ್ಲವುಗಳ ಏಕೀಕೃತ ರೂಪವಾಗಿ ಬಸವಣ್ಣನನ್ನು ಕಾಣಬೇಕಿದೆ. ಅವನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಜಾತೀಯತೆ, ಮೂಢನಂಬಿಕೆ, ಅಸಮಾನತೆಗಳನ್ನು ಹೋಗಲಾಡಿಸುವುದು ಕೇವಲ ಮಾತಿನ ಮೂಲಕ ಸಾಧ್ಯವಿಲ್ಲ. ಅದಕ್ಕೆ ಕ್ರಿಯಾಶೀಲ ನಡೆ ಅವಶ್ಯಕವೆಂದು ಹರಳಯ್ಯ ಮತ್ತು ಮಧುವರಸರ ಕುಟುಂಬಗಳಲ್ಲಿ ವೈವಾಹಿಕ ಸಂಬಂಧವನ್ನು ಏರ್ಪಡಿಸಲಾಗುತ್ತದೆ. ಇದು ಕಲ್ಯಾಣದ ಪತನಕ್ಕೆ ಕಾರಣವಾಗುತ್ತದೆ. ಆದರೆ ಅವನು ಹಚ್ಚಿದ ಜ್ಯೋತಿ ಮತ್ತೆ ಗಾಂಧಿ, ಅಂಬೇಡ್ಕರ್, ಲೋಹಿಯಾ ಮೊದಲಾದ ರೂಪಗಳಲ್ಲಿ ಭಾರತದಲ್ಲಿ ಮರುಹುಟ್ಟು ಪಡೆಯುತ್ತದೆ.

ಆರ್ಥಿಕ ಸಬಲತೆಯ ಕಡೆಗೆ ಈ ಕಾಲದಲ್ಲಿ ನಡೆದ ಬಿಡುಗಡೆಯ ಪ್ರಯತ್ನಗಳು ಗಮನಾರ್ಹ. ದೇವರ ಪೂಜೆಗಾಗಿ ಕರ್ತವ್ಯವನ್ನು ಮರೆಯಲಾಗದು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕಲ್ಲದೆ, ಡಂಬಾಚಾರದಿಂದ ದೇವರ ಅಸ್ತಿತ್ವ ಸಾಬೀತಾಗುವುದಿಲ್ಲ. ಕಾಯಕವೇ ಕೈಲಾಸವೆಂಬ ತತ್ವ ದುಡಿಮೆಗೆ ಪ್ರಾಧಾನ್ಯತೆಯನ್ನು ಕೊಡುತ್ತದೆ. ಆ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧ್ಯವಾದರೆ ಸಾಮಾಜಿಕವಾಗಿ ತಂತಾನೆ ಚಲನೆ ಸಾಧಿತವಾಗುತ್ತದೆ. ಭಾರತದಲ್ಲಿ ಶ್ರಮ ಮತ್ತು ಶ್ರಮಿಕರಿಬ್ಬರನ್ನೂ ವಿಭಜಿಸಿರುವ ಪರಿಣಾಮದಿಂದಾಗಿ ಸಾಮಾಜಿಕವಾಗಿ ಏಣಿ-ಶ್ರೇಣಿಗಳು ನಿರ್ಮಿತವಾಗಿವೆ. ಇವುಗಳ ನಿವಾರಣೆಯಾಗಬೇಕಾದರೆ ಆರ್ಥಿಕವಾಗಿ ಸಬಲವಾಗಬೇಕೆಂಬ ಆರ್ಥಿಕ ತತ್ವದ ತಳಹದಿಯ ಮೇಲೆ ವಚನ ಚಳವಳಿ ಬೆಳೆಯಿತು. ಆಗ ಶಿವಭಕ್ತರ ಗುಂಪಿನಲ್ಲಿ ಜಾತಿ, ವರ್ಣ, ವರ್ಗ, ಲಿಂಗ ಸಮಾನತೆಯ ಸಮಾಜವನ್ನು ಕಟ್ಟುವ ಪ್ರಯತ್ನ ಆರಂಭವಾಯಿತು. ಇದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿದವನು ರಾಜಕೀಯವಾಗಿ ದೊಡ್ಡ ಹುದ್ದೆಯಲ್ಲಿದ್ದ ಬಸವಣ್ಣ. ಅನುಭವ ಮಂಟಪದ ಅಧ್ಯಕ್ಷನಾದವನು ತಳಸಮುದಾಯದ ಅಲ್ಲಮಪ್ರಭು. ಉದ್ದೇಶ ಪೂರ್ವಕವಾಗಿ ಈ ಆಯ್ಕೆ ನಡೆದಿದೆ. ಅದುವರೆಗೆ ವಿದ್ಯೆ, ಬೋಧನೆ, ಉನ್ನತ ಹುದ್ದೆಯ ಅರ್ಹತೆ ಮೇಲ್ಜಾತಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಈ ಅಪಕಲ್ಪನೆಯನ್ನು ಇಲ್ಲವಾಗಿಸುವ ಸಲುವಾಗಿ ಇಂತಹ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡಲಾಗುತ್ತದೆ. ಭಾರತ, ಕರ್ನಾಟಕದಲ್ಲಿ ಇಂದಿಗೂ ಪ್ರಧಾನಮಂತ್ರಿ, ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗಳಲ್ಲಿ ದಲಿತರು ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಹನ್ನೆರಡನೇ ಶತಮಾನದಲ್ಲೇ ಇಂತಹ ಪ್ರಯೋಗಗಳು ಯಶಸ್ಸಾಗಿರುವುದು ಕನ್ನಡಿಗರ ಹೆಮ್ಮೆ.

ಮಾರ್ಕ್ಸ್ ಎಂಬ ಬಿಡುಗಡೆ

“ಮಾನವ ಧರ್ಮವನ್ನು ಸೃಷ್ಟಿಸುತ್ತಾನೆ, ಆದರೆ ಧರ್ಮ ಮಾನವನನ್ನು ಸೃಷ್ಟಿಸುವುದಿಲ್ಲ. ಧಾರ್ಮಿಕ ನರಳಾಟವೆಂಬುದು, ನಿಜವಾದ ನರಳಾಟದ ಪ್ರಕಟಿತ ರೂಪ ಮಾತ್ರವಲ್ಲ, ಅದು ನಿಜವಾದ ನರಳಾಟದ ವಿರೋಧಿಯೂ ಹೌದು. ಧರ್ಮವೆಂಬುದು ದೌರ್ಜನ್ಯಕ್ಕೆ ಬಲಿಯಾದ ಪಶುವಿನ ನಿಟ್ಟುಸಿರು. ಹೃದಯ ಹೀನ ಪ್ರಪಂಚದ ಭಾವಾತಿರೇಕ ಆತ್ಮಹೀನ ಪರಿಸ್ಥಿತಿಗಳ ಆತ್ಮ ಇದ್ದಂತೆ, ಅದು ಜನರಿಗೆ ಮತ್ತು ಬರಿಸುವ ಮಾದಕ ವಸ್ತು. ಈ ಕೂಡಲೆ ಮಾನವ ಅನಾಥತೆಯ ಅಥವಾ ಪರಕೀಯತೆಯ ಮುಸುಗನ್ನು ಕಿತ್ತೆಸೆಯಬೇಕು.  ಆಗ ಸ್ವರ್ಗದ ವಿಮರ್ಶೆ ಎಂಬುದು ಭೂಮಿಯ ವಿಮರ್ಶೆಯಾಗಿ ರೂಪಾಂತರವಾಗುತ್ತದೆ. ಧರ್ಮದ ವಿಮರ್ಶೆ ಎಂಬುದು ಕಾನೂನಿನ ವಿಮರ್ಶೆಯಾಗುವುದು, ಆಧ್ಯಾತ್ಮ ವಿದ್ಯೆಯ ವಿಮರ್ಶೆ ಎಂಬುದು ರಾಜಕಾರಣದ ವಿಮರ್ಶೆಯಾಗುವುದು. 

                                                                                     – ಕಾರ್ಲ್ ಮಾರ್ಕ್ಸ್

            ಕಾರ್ಲ್ ಮಾರ್ಕ್ಸ್ (ಮೇ ೫, ೧೮೧೮ – ಮಾರ್ಚ್ ೧೪, ೧೮೮೩) ಜರ್ಮನಿಯ ಶ್ರೇಷ್ಠ ತತ್ವಜ್ಞಾನಿ, ಅರ್ಥಶಾಸ್ತಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತಜ್ಞ, ಸಮತಾವಾದಿ ಹಾಗೂ ಕ್ರಾಂತಿಕಾರಿ. ಇವನ ವಿಚಾರಗಳು ಜಗತ್ತಿಗೆ ಸಮತಾವಾದದ ತಳಹದಿಯನ್ನೊದಗಿಸಿದವು. ಮಾರ್ಕ್ಸ್, ತನ್ನ ಕಾರ್ಯಸೂಚಿಯನ್ನ ೧೮೪೮ರಲ್ಲಿ ಅಚ್ಚಾದ ‘ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ದಲ್ಲಿ ಸ್ಪಷ್ಟಪಡಿಸಿದ್ದಾನೆ. “ಇದುವರೆಗೆ ಅಸ್ತಿತ್ವದಲ್ಲಿದ್ದ ಎಲ್ಲ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ” ಎಂಬ ಅವನ ಮಾತು ಆರ್ಥಿಕ ಅಸಮಾನತೆಯ ಆಧಾರದಿಂದ ಶೋಷಣೆಗೊಳಗಾಗಿರುವ ಅಂಶವನ್ನು ಬಹಿರಂಗಪಡಿಸಿತು.

ಕಾರ್ಲ್ ಮಾರ್ಕ್ಸ್ ‘ಜಗತ್ತಿನ ಕಾರ್ಮಿಕರೇ ಒಂದಾಗಿ, ಅದರಿಂದ ನಿಮ್ಮನ್ನು ಬಂಧಿಸಿರುವ ಕೊಂಡಿಗಳು ಕಳಚುತ್ತವೆ’ಎಂದು ಕಾರ್ಮಿಕ ಸಮುದಾಯಕ್ಕೆ ಕರೆ ನೀಡಿದ್ದ. ಇದರ ಹಿಂದೆ ಅದುವರೆಗೆ ಸಮಾಜದಲ್ಲಿ ಶ್ರಮಿಕರನ್ನು ಶೋಷಿಸಿರುವ ಕುರಿತ ತಿಳಿವಳಿಕೆಯಿದೆ. ಅವನ ಪ್ರಕಾರ ಉತ್ಪಾದನಾ ವ್ಯವಸ್ಥೆಯ ವಿಧಾನದಲ್ಲಿ ಬಂಡವಾಳಶಾಹಿಯು ಐತಿಹಾಸಿಕ ಮಹತ್ವ ಪಡೆದಿದ್ದಾನೆ. ಏಕೆಂದರೆ; ಉತ್ಪಾದನೆಯ ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ನಿಯಂತ್ರಿಸುವುದು, ಉತ್ಪಾದಿಸುವ ಶ್ರಮಿಕರು ಹಾಗೂ ಕೊಳ್ಳುವವರ ನಡುವೆ ಸೇತುವೆಯಾಗಿ ಕೆಲಸವನ್ನು ಬಂಡವಾಳಶಾಹಿ ನಿರ್ವಹಿಸುತ್ತಾನೆ. ಆದರೆ ಅದಕ್ಕೆ ಪ್ರತಿಫಲವಾಗಿ ಪಡೆಯುವ ಲಾಭ ಮಾತ್ರ ಅಪಾರ ಪ್ರಮಾಣದ್ದಾಗಿರುತ್ತದೆ. ಅದರ ಬದಲಾಗಿ ಶ್ರಮಿಕರಿಗೆ ಹೆಚ್ಚಿನ ಕೂಲಿ, ಸವಲತ್ತುಗಳನ್ನು ಒದಗಿಸಿ, ನಿಗದಿತ ಸಮಯವನ್ನು ನಿರ್ಧರಿಸಬೇಕು. ಆದರೆ ಬಂಡವಾಳಶಾಹಿ ತನ್ನ ಲಾಭಕ್ಕೆ ಕೊಡುವ ಒತ್ತನ್ನು ಕಾರ್ಮಿಕರ ಹಿತದತ್ತ ಹರಿಸುವುದಿಲ್ಲ. ಉತ್ಪಾದನಾ ಚಟುವಟಿಕೆಯಲ್ಲಿ ಪ್ರಮುಖ ಸ್ಥಾನ ಪಡೆದ ಬಂಡವಾಳಶಾಹಿ ಏಕಕಾಲಕ್ಕೆ ಕಾರ್ಮಿಕರ ಹಾಗೂ ಕೊಳ್ಳುವವರಿಬ್ಬರನ್ನೂ ಶೋಷಿಸುವ ಸಾಧ್ಯತೆಗಳಿವೆ. ಇಂತಹ ಮುಂದುವರೆದ ವಿಷಯಗಳನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ.

ಮಾರ್ಕ್ಸ್ ಅಭಿವೃದ್ಧಿ ಚಿಂತನೆಯ ಪ್ರಕಾರ ‘ಬಂಡವಾಳಶಾಹಿ ಸಮಾಜ’ ಇದುವರೆಗೆ ಸಾಮಾಜಿಕ ಸಂಸ್ಥೆಯ ಆಧುನಿಕ ಪ್ರಕಾರವನ್ನು ಪ್ರತಿನಿಧಿಸುತ್ತಿದ್ದವು. ಆದರೆ ಭವಿಷ್ಯದಲ್ಲಿ ಮೊದಲು ಜಮೀನ್ದಾರಿ ವರ್ಗ, ನಂತರ ಬಂಡವಾಳಗಾರರ ಸಮೂಹ ಅಂತ್ಯಗೊಳ್ಳುತ್ತದೆ. ನಂತರ ಸಮಾಜವು ಸಮಾಜವಾದಿಯಾಗಿ ಪರಿವರ್ತನೆಗೊಳ್ಳುತ್ತದೆ. ಉತ್ಪಾದನಾ ವಲಯದಲ್ಲಿ ಕಾರ್ಮಿಕ ವರ್ಗದ ಪ್ರಭಾವ ಹೆಚ್ಚುತ್ತದೆ. ಅಂತಿಮವಾಗಿ ಉತ್ಪಾದನಾ ವಲಯದಲ್ಲಿ ಕಾರ್ಮಿಕ ವರ್ಗ ತನ್ನ ಪ್ರಭಾವ ಬೀರುತ್ತದೆ ಎಂದು ದೃಢವಾಗಿ ಮಾರ್ಕ್ಸ್ ನಂಬಿದ್ದ. ಕನಿಷ್ಠ ಕೂಲಿಗೆ ಗರಿಷ್ಠ ದುಡಿಸಿಕೊಳ್ಳುವ ಮೂಲಕ ಬಂಡವಾಳಶಾಹಿ ನಿರಂತರವಾಗಿ ಕಾರ್ಮಿಕರನ್ನು ಶೋಷಿಸುತ್ತಿದ್ದಾನೆ ಎಂಬುದು ಅವನ ಖಚಿತ ನಂಬಿಕೆ. ಆದರೆ, ಕಾಲಾನಂತರದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಕುಸಿದು, ಕಾರ್ಮಿಕರ ಪ್ರಾಧಾನ್ಯ ಶುರುವಾಗುತ್ತದೆಂದೂ ಅವನು ಊಹಿಸಿದ್ದ. ಆದರೆ ಆಧುನಿಕೋತ್ತರ ಯುಗದಲ್ಲಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಬೆಳವಣಿಗೆಗೆಳು ನಡೆಯುತ್ತಿವೆ.

ಕಾರ್ಲ್ ಮಾರ್ಕ್ಸ್ ಸಮಾಜವನ್ನು ಆವರಿಸುತ್ತಿರುವ ಪರಕೀಯತೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾನೆ. ಚರಿತ್ರೆಯ ಗತಿತಾರ್ಕಿಕತೆಯ ಖಚಿತವಾದ ತಿಳಿವಳಿಕೆ, ಅದನ್ನು ನಿರ್ವಚಿಸುವಲ್ಲಿ ಇರಬೇಕಾದ ಸಾಮಾಜಿಕ ಚಿಂತನೆಯ ಗುಣಾತ್ಮಕ ಅಂಶಗಳು, ಅದರ ತಿಳಿವಳಿಕೆಯಿಂದ ಮುಂದೆ ಆಗಬೇಕಾದ ಬದಲಾವಣೆಗಳ ಕಡೆಗೆ ಮಾರ್ಕ್ಸ್ ನ ಚಿಂತನೆಗಳು ಬೆಳಕು ಚೆಲ್ಲುತ್ತವೆ. ಅವನ ಇತಿಹಾಸದ ವ್ಯಾಖ್ಯಾನ, ಅದರ ಚೈತನ್ಯವನ್ನು ಅರ್ಥೈಸಿಕೊಳ್ಳುವಿಕೆ, ಅದರ ಆಧಾರದಲ್ಲಿ ಮುಂದೊದಗಬಹುದಾದ ಸ್ಥಿತ್ಯಂತರಗಳನ್ನು ಕುರಿತ ಅವನ ಮಾತುಗಳು ಅವನ ಅಧ್ಯಯನದಿಂದ ಮೂಡಿದವು. ಆದರೆ, ಚರಿತ್ರೆಯನ್ನು ನಿರ್ವಚಿಸುವ ಬದಲು ಜಗತ್ತನ್ನು ಬದಲಾವಣೆಗೆ ಸಜ್ಜುಗೊಳಿಸಬೇಕೆಂಬುದು ಅವನ ವಾದವಾಗಿತ್ತು.

ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡ್ರಿಕ್ ಏಂಗೆಲ್ಸ್ ಕಾರ್ಮಿಕರ ದುಡಿಮೆಯ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಗೆ ನಿಗದಿ ಮಾಡಬೇಕೆಂದು ಪ್ರತಿಪಾದಿಸಿದರು. ೧ ಮೇ ೧೮೮೬ ಕಾರ್ಮಿಕ ಹೋರಾಟಗಳ ಇತಿಹಾಸದಲ್ಲೇ ಮಹತ್ವದ ದಿನ. ಆ ದಿನ ಅಮೆರಿಕದಲ್ಲಿದ್ದ ಸುಮಾರು ಐದು ಲಕ್ಷ ಕಾರ್ಮಿಕರ ಪೈಕಿ ಎರಡು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಮುಷ್ಕರ ಕೈಗೊಂಡರು. ಅಂದು ನಡೆದ ಈ ಹೋರಾಟದ ಪರಿಣಾಮ ಇಂದು ಜಗತ್ತಿನಾದ್ಯಂತ ಕೆಲಸದ ಅವಧಿ ಎಂಟು ಗಂಟೆಗೆ ನಿಗದಿಯಾಗಲು ಕಾರಣವಾಯಿತು. ಇಲ್ಲವಾದಲ್ಲಿ ದಿನದ ಬಹುತೇಕ ಅವಧಿಯನ್ನು ಇಂದಿಗೂ ದುಡಿಯಬೇಕಾದ ದುಃಸ್ಥಿತಿ ಮುಂದುವರೆಯುತ್ತಿತ್ತೇನೋ?

ಅಂಬೇಡ್ಕರ್ ಎಂಬ ಎಚ್ಚರ

“ನಾವು ಮುಖ್ಯವಾಗಿ ಗುರುತಿಸಬೇಕಾದ ಅಂಶವೆಂದರೆ ಹಿಂದೂ ಸಮಾಜವೆನ್ನುವುದು ಒಂದು ಮಿಥ್. ಹಿಂದೂ ಎಂಬ ಪದವೇ ಒಂದು ವಿದೇಶೀ ಪದ. ಅದು ಮಹಮ್ಮದೀಯರು ಸ್ಥಳೀಯರನ್ನು ಗುರುತಿಸಲು ಕೊಟ್ಟ ಪದ. ಮುಸ್ಲಿಮರ ಆಕ್ರಮಣದ ಮುನ್ನ ಇದ್ದ ಸಂಸ್ಕೃತ ಗ್ರಂಥಗಳಲ್ಲಿ ಈ ಪದದ ಸುಳಿವಿಲ್ಲ. ಹಿಂದೂ ಸಮಾಜವೆಂಬುದು ಅಸ್ತಿತ್ವದಲ್ಲೇ ಇಲ್ಲ. ಇರುವುದೇನಿದ್ದರೂ ಜಾತಿಗಳ ಒಂದು ಸಮೂಹ. ಇಲ್ಲಿ ಪ್ರತಿ ಜಾತಿಯೂ ತನ್ನ ಅಸ್ತಿತ್ವದ ಬಗ್ಗೆ ಜಾಗೃತವಾಗಿರುತ್ತದೆ. ಒಂದು ಜಾತಿಗೂ ಇನ್ನೊಂದು ಜಾತಿಗೂ ಸಂಪರ್ಕ ಉಂಟಾಗುವುದು ಹಿಂದೂ ಮುಸ್ಲಿಂ ಜಗಳಗಳಾದಾಗ ಮಾತ್ರ. ಆದರ್ಶ ಹಿಂದೂ ಎಂದರೆ, ಇತರರ ಜೊತೆ ಬೆರೆಯಲು ನಿರಾಕರಿಸುವ, ತನ್ನ ಬಿಲದೊಳಗೇ ಇರುವ ಇಲಿಯಂತಿರಬೇಕೆಂದೇ ಅರ್ಥ. ಹಾಗೆ ನೋಡಿದರೆ ಹಿಂದೂ ಪ್ರಜ್ಞೆ ಎಂಬುದೇ ಇಲ್ಲ. ಅಲ್ಲಿರುವುದು ಜಾತಿ ಪ್ರಜ್ಞೆ. ಆದ್ದರಿಂದಲೇ ಹಿಂದೂಗಳು ಒಂದು ದೇಶವನ್ನಾಗಲೀ ಸಮಾಜವನ್ನಾಗಲೀ ಕಟ್ಟಲಾರರು. ರಾಷ್ಟ್ರೀಯವಾದಿಗಳು, ಭಿನ್ನತೆಯಲ್ಲೂ ಇರುವ ಸಾಮ್ಯತೆ ಹಾಗೂ ಏಕತೆಯನ್ನು ತೋರಿಸುತ್ತಾರೆ. ಆದರೆ ಈ ಸಾಮರ್ಥ್ಯಗಳ ಆಧಾರದ ಮೇಲೆ ಹಿಂದೂಗಳನ್ನು ಸಂವಿಧಾನಿಕ ಸಮಾಜ ಎನ್ನಲಾಗದು. ಈ ಬಗೆಯ ಸಾಮ್ಯತೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಇಟ್ಟಿಗೆಯಂತೆ ಸಾಗಿರಬಹುದು ಅಷ್ಟೇ. ಸಂಸ್ಕೃತಿ ಪ್ರಸರಣದಿಂದಾಗಿ ಎಷ್ಟೋ ಬುಡಕಟ್ಟುಗಳ ನಡುವೆ ಸಾಮ್ಯವಿದೆ. ಆದರೆ ಈ ಕಾರಣದಿಂದಲೇ ಅವು ಸಮಾಜವೊಂದನ್ನು ರೂಪಿಸಲಾರವು. ಹಾಗೆ ನೋಡಿದರೆ ಹಬ್ಬಗಳಲ್ಲಿರುವ ಸಾಮ್ಯತೆಗಳು ವಿವಿಧ ಜಾತಿಗಳನ್ನು ಎಂದೋ ಒಂದಾಗಿ ಬೆಸೆಯಬೇಕಾಗಿತ್ತು. ಪರಸ್ಪರ ಸಮಾನವಾದ ಚಟುವಟಿಕೆಗಳಿಗೆ ಜಾತಿ ಅಡ್ಡಿಯಾಗಿರುವುದರಿಂದಲೇ ಹಿಂದೂಗಳು ಒಂದು ಸಮಾಜವಾಗದೇ ಹೋಗಿರುವುದು.

–           ಡಾ.ಬಿ.ಆರ್.ಅಂಬೇಡ್ಕರ್

ಡಾ.ಬಿ.ಆರ್.ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ – ಡಿಸೆಂಬರ್ ೬, ೧೯೫೬) ಶೂದ್ರ ಮತ್ತು ತಳಸಮುದಾಯದ ಪರವಾಗಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ಇವರು ಕೇವಲ ದಲಿತರ ನಾಯಕನೆಂಬ ತಪ್ಪು ತಿಳಿವಳಿಕೆಯಿದೆ. ಆದರೆ ಅವರು ಶೋಷಿತರೆಲ್ಲರ ಪರವಾದ ಚಿಂತಕರಾಗಿದ್ದರು. ಮಹಿಳೆ, ದಲಿತರು, ಅಸ್ಪೃಶ್ಯರು, ಆರ್ಥಿಕವಾಗಿ ಹಿಂದುಳಿದ ವರ್ಗಗಳೆಲ್ಲರ ಪರವಾಗಿ ಇವರು ಸಂವಿಧಾನದತ್ತ ಹಕ್ಕುಗಳನ್ನು ನೀಡಲು ಕಾರಣರಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಎಲ್ಲ ವರ್ಗ, ವರ್ಣ, ಜಾತಿ, ಲಿಂಗದವರಿಗೂ ಸಮಾನ ಅವಕಾಶಗಳನ್ನು ಸಂವಿಧಾನಿಕ ಹಕ್ಕನ್ನಾಗಿ ನೀಡುವ ಕೆಲಸವನ್ನು ಮಾಡಿದ ಮಹನೀಯರು ಮತ್ತೊಬ್ಬರಿಲ್ಲ. ಬುದ್ಧ, ಬಸವಣ್ಣ, ಮಾರ್ಕ್ಸ್ ಮೊದಲಾದವರು ತಾತ್ವಿಕ ಚಿಂತನೆಗಳಿಗೆ ನೀಡಿದ ಒತ್ತನ್ನು ಅಂಬೇಡ್ಕರ್ ಅವರು ರಾಜಕೀಯ ಪ್ರಾತಿನಿಧ್ಯ, ಔದ್ಯೋಗಿಕ ಮೀಸಲಾತಿ, ಆರ್ಥಿಕ ಹಂಚಿಕೆಯನ್ನು ಸಾಧಿಸಲು ಕಾರಣರಾಗುತ್ತಾರೆ. ಸದ್ಯಕ್ಕೆ ಭಾರತೀಯ ಸಮಾಜದಲ್ಲಿ  ಆಗಿರುವ ಬದಲಾವಣೆಗೆ ಇವರ ಕೊಡುಗೆ ಅಪಾರವಾದುದು.

ಇವರು ಜಾತಿ ಶ್ರೇಣೀಕರಣವನ್ನು ಮೈಗೂಡಿಸಿಕೊಂಡ ಹಿಂದೂ ಧರ್ಮವನ್ನು ಕಟುವಾಗಿ ವಿಮರ್ಶಿಸುತ್ತಾರೆ. ಅವರ ಪ್ರಕಾರ; ‘ಜಾತಿ ವ್ಯವಸ್ಥೆಯೆಂದರೆ ಶ್ರಮದ ವಿಭಜನೆ ಮಾತ್ರ. ಆದರೆ ಜಾತಿ ಕೇವಲ ಶ್ರಮದ ವಿಭಜನೆಯಲ್ಲ; ಅದು ಶ್ರಮಜೀವಿಗಳ ವಿಭಜನೆ ಕೂಡಾ. ಇದು ವಿಭಜನೆಯಷ್ಟೇ ಅಲ್ಲ, ಈ ವಿಭಜನೆಗಳನ್ನು ಒಂದರ ಕೆಳಗೊಂದು ಜೋಡಿಸಿರುವ ಶ್ರೇಣೀಕೃತ ವ್ಯವಸ್ಥೆ. ಯಾವ ದೇಶದಲ್ಲೂ ಕಾಣದ ಶ್ರೇಣೀಕರಣವಿದು. ಈ ಶ್ರೇಣೀಕರಣ ಕೂಡಾ ವ್ಯಕ್ತಿಯ ಸ್ವಂತ ಸಾಮರ್ಥ್ಯದ ಮೇಲೆ ನಿರ್ಧಾರಿತವಾದದ್ದಲ್ಲ. ಅವರ ತಂದೆತಾಯಂದಿರ ಸಾಮಾಜಿಕ ಸ್ಥಾನದ ಮೇಲೆ ನಿರ್ಧಾರಿತವಾದದ್ದು. ಉದ್ಯೋಗದ ಪುನರ್ ಹೊಂದಾಣಿಕೆಯನ್ನೇ ಮಾಡದ ಜಾತಿ ನಿರುದ್ಯೋಗದ ಮೂಲವೂ ಹೌದು. ಜಾತಿಯ ಕಾರಣಕ್ಕಾಗಿಯೇ ಕೀಳೆಂದು ಕಾಣಲಾಗುವ ಎಷ್ಟೋ ಕಸುಬುಗಳು ಇಂಡಿಯಾದಲ್ಲಿವೆ. ಇಂಥ ಕಸುಬುಗಳಿಂದ ತಪ್ಪಿಸಿಕೊಳ್ಳುವ ಬಯಕೆ ನಿರಂತರವಾಗಿರುವುದರಿಂದ, ಮನಸ್ಸೂ ಬುದ್ಧಿಯೂ ತೊಡಗಲಾರದ ಕಸುಬುಗಳಲ್ಲಿ ಎಂಥ ಸಾಮರ್ಥ್ಯವೂ ವ್ಯಕ್ತವಾಗಲಾರದು. ಹೀಗಾಗಿಯೇ ಆರ್ಥಿಕ ವ್ಯವಸ್ಥೆಯಾಗಿ ಕೂಡಾ ಜಾತಿ ಒಂದು ಹಾನಿಕಾರಕ ಸಂಸ್ಥೆಯಾಗಿದೆ.’ (ಅನು: ನಟರಾಜ್ ಹುಳಿಯಾರ್)

ಶ್ರಮ ಮತ್ತು ಶ್ರಮಿಕನನ್ನು ವಿಭಾಗಿಸಿದ ಪರಿಣಾಮದಿಂದ ಭಾರತ ಸೀಮಿತ ಪರಿಧಿಯೊಳಗೆ ಬಂಧಿಸಲ್ಪಟ್ಟಿದೆ. ಆದ್ದರಿಂದ ‘ಜಗತ್ತಿನ ಎಲ್ಲೆಡೆ ಕ್ರಾಂತಿಯಾದರೂ ಇಂಡಿಯಾದಲ್ಲಿ ಆಗದೇ ಹೋದುದಕ್ಕೆ ಕೆಳಜಾತಿಯ ಹಿಂದೂಗಳು ಚಾತುರ್ವರ್ಣ ಪದ್ಧತಿಯಿಂದಾಗಿ ದುರ್ಬಲರಾಗಿರುವುದೇ ಕಾರಣ’ವೆಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಕಟ್ಟಕಡೆಯ ಶೂದ್ರ, ಆದಿವಾಸಿ ಪ್ರತಿನಿಧಿಯೂ ಭಾರತದ ಎಲ್ಲ ಸಂವಿಧಾನಿಕ ಹಕ್ಕುಗಳಿಗೂ ಅರ್ಹನೆಂದು ಸಾರುವ ಆಧುನಿಕ ಮಹಾಕಾವ್ಯವೆಂದರೆ ಅದು ‘ಭಾರತೀಯ ಸಂವಿಧಾನ’. ಅದಕ್ಕೆ ಸ್ಪಷ್ಟರೂಪ ಕೊಡುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿ ‘ಸಂವಿಧಾನ ಶಿಲ್ಪಿ’ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದಲ್ಲಿ ಬಹುಸಂಖ್ಯಾತರಾದ ಹಿಂದುಳಿದ, ದಲಿತ, ಅಸ್ಪೃಶ್ಯ ವರ್ಗಗಳ ಏಳ್ಗೆಗಾಗಿ ದುಡಿದವರಲ್ಲಿ ಅಂಬೇಡ್ಕರ್ ಪ್ರಮುಖರು. ಕರ್ನಾಟಕದಲ್ಲಿ ಮೊಟ್ಟಮೊದಲು ಮೈಸೂರು ಸಂಸ್ಥಾನದಲ್ಲಿ ೧೯೧೦ರ ಅವಧಿಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಅನಂತರ ಡೆನ್ಮಾರ್ಕ್ ನಲ್ಲಿ ಅವಕಾಶ ನೀಡಲಾಯಿತು. ಅಮೆರಿಕಾಕ್ಕೂ ಮೊದಲೇ ಭಾರತೀಯ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವಲ್ಲಿ ಅಂಬೇಡ್ಕರ್ ಪಾತ್ರವಿದೆ.

೧೯೨೭ರಲ್ಲಿ ಆರಂಭವಾದ ಹಿಂದೂ ಧರ್ಮದ ಮಿತಿಗಳ ವಿರುದ್ಧದ ಜನಾಂದೋಲನಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು. ಈ ಸಮಯದಲ್ಲಿ ಅವರು ರೂಪಿಸಿದ ಅಹಿಂಸಾತ್ಮಕ ಆಂದೋಲನಗಳ ಮೂಲಕ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಬಳಸುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ನಡೆಸಿದರು. ನಾಸಿಕ್‌ನ ಕಾಳಾರಾಮನ ದೇವಸ್ಥಾನ ಮತ್ತು ಮಹಾಡ್ ಪ್ರದೇಶದ ಚೌಡಾರ್ ಕೆರೆ ಪ್ರವೇಶಿಸದಂತೆ ಅಸ್ಪೃಶ್ಯರಿಗೆ ನಿಷೇಧವನ್ನು ಹೇರಲಾಗಿತ್ತು. ಇದನ್ನು ವಿರೋಧಿಸಿ ಹೋರಾಟ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟವನ್ನು ಬೆಂಬಲಿಸಿ ಸತ್ಯಾಗ್ರಹಿಗಳು ರಸ್ತೆಗಿಳಿದರು. ಇದಕ್ಕೆ ವ್ಯಕ್ತವಾದ ಬೆಂಬಲದಿಂದ ಸವರ್ಣೀಯರು ರೊಚ್ಚಿಗೆದ್ದರು.

ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. ಅಂತಿಮವಾಗಿ ಕೆರೆಯ ನೀರಿನ ಬಳಕೆ ಕುರಿತು ಕೆಳವರ್ಗಗಳ ಪರವಾಗಿ ತೀರ್ಪು ಬಂದಿತು. ಶೂದ್ರರನ್ನು ಸಮಾಜದಲ್ಲಿ ಹೀನವಾಗಿ ನಡೆಸಿಕೊಳ್ಳುತ್ತಿರುವ ಅಮಾನವೀಯ ನಡೆಗೆ ‘ಮನುಸ್ಮೃತಿ’ ಕಾರಣವೆಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಇದರ ವಿರುದ್ಧವೂ ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡುವ ಮೂಲಕ ಹೋರಾಟವನ್ನು ಕೈಗೊಂಡರು.

ಇವರ ಈ ಹೋರಾಟಗಳಿಂದ ಹಿಂದೂ ಧರ್ಮದಲ್ಲಿ ಯಾವುದೇ ಸುಧಾರಣೆಗಳು ಕಂಡುಬರಲಿಲ್ಲ. ಇದರಿಂದ ನಿರಾಶರಾದ ಅವರು ೧೯೫೬ ಅಕ್ಟೋಬರ್ ೧೪ರಂದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರ ಜತೆಗೆ ಹೆಜ್ಜೆ ಹಾಕಿ ಆ ಸಮಯದಲ್ಲಿ ೩,೮೦,೦೦೦ ಸಾವಿರ ಜನ ಬೌದ್ಧ ಧರ್ಮಾನುಯಾಯಿಗಳಾದರು.

ಬುದ್ಧ, ಬಸವ, ಮಾರ್ಕ್ಸ್ ಮತ್ತು ಅಂಬೇಡ್ಕರ್ ಚಿಂತನೆಗಳು ಮಾನವ ಮನೋಲೋಕವನ್ನು ಇರುವ ರಿಕ್ತ ಸ್ಥಿತಿಯಿಂದ ಮೇಲೆತ್ತುವ ಪ್ರಯತ್ನವನ್ನು ಮಾಡಿವೆ. ಮಾನವರ ಘನತೆಯನ್ನು ಎತ್ತಿಹಿಡಿಯುವ ಮಹತ್ಕಾರ್ಯಕ್ಕೆ ಇವರು ನೀಡಿದ ಕೊಡುಗೆ ಅಭೂತಪೂರ್ವವಾದುದು. ಜಗತ್ತಿನ ಇತಿಹಾಸದಲ್ಲಿ ಸಮಾನ ಮನೋಧರ್ಮವುಳ್ಳ ಸರ್ವರ ಏಳ್ಗೆಗೆ ದುಡಿದ ಕಾಲ, ಖಂಡಗಳನ್ನು ಮೀರುವ ವ್ಯಕ್ತಿತ್ವ ವಿನೂತನ ಚಿಂತನೆಗಳಿಗೆ ನೀರೆರೆದಿದೆ. ಇಂತಹ ವ್ಯಕ್ತಿಗಳು ನೀಡಿದ ಪ್ರೇರಣೆ ಸ್ಮರಣೀಯ.

  • ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

One Response

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು