August 15, 2026 5:46 am

ಕ್ರಿಮಿನಲ್ ವಿಷಯದ ಸಂಬಂಧದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ

134. ಕ್ರಿಮಿನಲ್ ವಿಷಯದ ಸಂಬಂಧದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ:- (1) ಭಾರತದ ರಾಜ್ಯಕ್ಷೇತ್ರದಲ್ಲಿರುವ ಒಂದು ಉಚ್ಚ ನ್ಯಾಯಾಲಯವು, –

(ಎ) ಆಪಾದಿತನನ್ನು ಖುಲಾಸೆ ಮಾಡುವ ಆದೇಶವನ್ನು ಅಪೀಲಿನಲ್ಲಿ ವಿಪರ್ಯಯಗೊಳಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಿದ್ದರೆ; ಅಥವಾ

(ಬಿ) ತನ್ನ ಅಧಿಕಾರಕ್ಕೆ ಅಧೀನವಾಗಿರುವ ಯಾವುದೇ ನ್ಯಾಯಾಲಯದಿಂದ ಯಾವುದೇ ಮೊಕದ್ದಮೆಯನ್ನು ತಾನೇ ಅಧಿವಿಚಾರಣೆ ಮಾಡಲು ತರಿಸಿಕೊಂಡು, ಅಂಥ ಅಧಿವಿಚಾರಣೆಯಲ್ಲಿ ಅಪರಾಧಿಯೆಂದು ನಿರ್ಣಯಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಿದ್ದರೆ; ಅಥವಾ

(ಸಿ) ಮೊಕದ್ದಮೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಲು ಯೋಗ್ಯವಾಗಿದೆಯೆಂದು [1134ಎ ಅನುಚ್ಛೇದದ ಮೇರೆಗೆ ಪ್ರಮಾಣೀಕರಿಸಿದರೆ] [1978ನೇ ಇಸವಿ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 19ನೇ ಪ್ರಕರಣದ ಮೂಲಕ “ಪ್ರಮಾಣನ ಮಾಡಿದರೆ” ಎಂಬ ಪದಗಳಿಗೆ ಬದಲಾಗಿ (1-8-1979ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.]

– ಆ ಉಚ್ಚ ನ್ಯಾಯಾಲಯವು ಕ್ರಿಮಿನಲ್ ವ್ಯವಹರಣೆಯಲ್ಲಿ ನೀಡಿದ ತೀರ್ಪಿನ, ಅಂತಿಮ ಆದೇಶದ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಸರ್ವೊಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದು:

ಪರಂತು, 145ನೆಯ ಅನುಚ್ಛೇದದ (1)ನೆಯ ಖಂಡದ ಮೇರೆಗೆ ಅಪೀಲು ಸಲ್ಲಿಸಲು ಕಲ್ಪಿಸಬಹುದಾದಂಥ ಉಪಬಂಧಗಳಿಗೆ ಮತ್ತು ಉಚ್ಚ ನ್ಯಾಯಾಲಯವು ವಿಧಿಸಬಹುದಾದಂಥ ಅಥವಾ ಅಗತ್ಯಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, (ಸಿ) ಉಪಖಂಡದ ಮೇರೆಗೆ ಅಪೀಲನ್ನು ಸಲ್ಲಿಸಲು ಅವಕಾಶವಿರತಕ್ಕದ್ದು.

(2) ಭಾರತದ ರಾಜ್ಯಕ್ಷೇತ್ರದಲ್ಲಿರುವ ಉಚ್ಚ ನ್ಯಾಯಾಲಯವು ಕ್ರಿಮಿನಲ್ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪಿನ, ಅಂತಿಮ ಆದೇಶದ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಅಪೀಲುಗಳನ್ನು ಸ್ವೀಕರಿಸುವ ಮತ್ತು ಅಪೀಲುಗಳನ್ನು ಸುನಾವಣೆ ಮಾಡುವ ಸಂಬಂಧದಲ್ಲಿ ಸಂಸತ್ತು ಕಾನೂನಿನ ಮೂಲಕ, ಅಂಥ ಕಾನೂನಿನಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಮತ್ತು ಪರಿಮಿತಿಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯಕ್ಕೆ ಇನ್ನೂ ಯಾವುದೇ ಹೆಚ್ಚಿನ ಅಧಿಕಾರಗಳನ್ನು ಪ್ರದಾನ ಮಾಡಬಹುದು.

[134ಎ. ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಪ್ರಮಾಣಪತ್ರ:- [1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 20ನೇ ಪ್ರಕರಣದ ಮೂಲಕ (1-8-79ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.] 132ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 133ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 134ನೇ ಅನುಚ್ಛೇದದ (1)ನೇ ಖಂಡದಲ್ಲಿ ಉಲ್ಲೇಖಿಸಿದ ತೀರ್ಪು, ಡಿಕ್ರಿ, ಅಂತಿಮ ಆದೇಶ ಅಥವಾ ಶಿಕ್ಷೆಯ ಆದೇಶವನ್ನು ಮಾಡುವ ಅಥವಾ ಕೊಡುವ ಪ್ರತಿಯೊಂದು ಉಚ್ಚ ನ್ಯಾಯಾಲಯವು ಹಾಗೆ ಮಾಡಿದ ಅಥವಾ ಕೊಟ್ಟ ತರುವಾಯ, ಸಾಧ್ಯವಾದಷ್ಟು ಬೇಗ ಸಂದರ್ಭಾನುಸಾರ 132ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 133ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 134ನೇ ಅನುಚ್ಛೇದದ (1)ನೇ ಖಂಡದ (ಸಿ) ಉಪಖಂಡದಲ್ಲಿ ಉಲ್ಲೇಖಿಸಲಾದ ಸ್ವರೂಪದ ಪ್ರಮಾಣಪತ್ರವನ್ನು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಬಹುದೇ ಎಂಬ ಪ್ರಶ್ನೆಯನ್ನು,-

(ಎ) ತನ್ನ ಸ್ವಪ್ರೇರಣೆಯಿಂದ ಹಾಗೆ ಮಾಡುವುದು ಯೋಗ್ಯವೆಂದು ಅದು ಭಾವಿಸಿದರೆ ನಿರ್ಧರಿಸಬಹುದು; ಮತ್ತು

(ಬಿ) ಅಂಥ ತೀರ್ಪು, ಡಿಕ್ರಿ, ಅಂತಿಮ ಆದೇಶ ಅಥವಾ ಶಿಕ್ಷೆಯ ಆದೇಶವನ್ನು ಮಾಡಿದ ಅಥವಾ ಕೊಟ್ಟ ನಿಕಟೋತ್ತರದಲ್ಲಿ, ಬಾಧಿತ ಪಕ್ಷಕಾರನು ಅಥವಾ ಅವನ ಪರವಾಗಿ ಮೌಖಿಕವಾಗಿ ಮನವಿ ಮಾಡಿಕೊಂಡರೆ ನಿರ್ಧರಿಸತಕ್ಕದ್ದು.

135. ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಚಲಾಯಿಸುವುದು:- ಯಾವ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಚಲಾಯಿಸಬಹುದಾಗಿತ್ತೋ ಮತ್ತು ಯಾವ ವಿಷಯಕ್ಕೆ 133ನೆಯ ಅಥವಾ 134ನೆಯ ಅನುಚ್ಛೇದದ ಉಪಬಂಧಗಳು ಅನ್ವಯಿಸುವುದಿಲ್ಲವೋ ಆ ವಿಷಯಕ್ಕೆ ಸಂಬಂಧಿಸಿದಂತೆಯೂ ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ ಸರ್ವೋಚ್ಚ ನ್ಯಾಯಾಲಯವು ಆ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಹೊಂದಿರತಕ್ಕದ್ದು.

136. ಅಪೀಲು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯದಿಂದ ವಿಶೇಷ ಅನುಮತಿ:- (1) ಈ ಅಧ್ಯಾಯದಲ್ಲಿ ಏನೇ ಇದ್ದಾಗ್ಯೂ, ಭಾರತದ ರಾಜ್ಯಕ್ಷೇತ್ರದಲ್ಲಿರುವ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧಿಕರಣವು ಯಾವುದೇ ವ್ಯಾಜ್ಯದಲ್ಲಿ ಅಥವಾ ವಿಷಯದಲ್ಲಿ ಮಾಡಿದ ಅಥವಾ ಕೊಟ್ಟ ಯಾವುದೇ ತೀರ್ಪಿನ, ಡಿಕ್ರಿಯ, ನಿರ್ಧರಣೆಯ, ಶಿಕ್ಷೆಯ ಆದೇಶದ ಅಥವಾ ಆದೇಶದ ವಿರುದ್ಧ ಅಪೀಲು ಹೂಡಲು, ಸರ್ವೋಚ್ಚ ನ್ಯಾಯಾಲಯವು ತನ್ನ ವಿವೇಚನಾನುಸಾರ ವಿಶೇಷ ಅನುಮತಿಯನ್ನು ನೀಡಬಹುದು.

(2) (1)ನೆಯ ಖಂಡದಲ್ಲಿ ಇರುವುದು ಯಾವುದೂ, ಸಶಸ್ತ್ರ ಬಲಗಳಿಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ರಚಿಸಲಾದ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧಿಕರಣವು ಮಾಡಿದ ಅಥವಾ ಕೊಟ್ಟ ಯಾವುದೇ ತೀರ್ಪಿಗೆ, ನಿರ್ಧರಣೆಗೆ, ಶಿಕ್ಷೆಯ ಆದೇಶಕ್ಕೆ ಆಥವಾ ಆದೇಶಕ್ಕೆ ಅನ್ವಯಿಸತಕ್ಕದ್ದಲ್ಲ.

137. ಸರ್ವೋಚ್ಚ ನ್ಯಾಯಾಲಯವು ತೀರ್ಪುಗಳನ್ನು ಅಥವಾ ಆದೇಶಗಳನ್ನು ಪುನರವಲೋಕನ ಮಾಡುವುದು:- ಸಂಸತ್ತು ರಚಿಸಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಅಥವಾ 145ನೆಯ ಅನುಚ್ಛೇದದ ಮೇರೆಗೆ ರಚಿತವಾದ ಯಾವುದೇ ನಿಯಮಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯವು ತಾನು ನೀಡಿದ ತೀರ್ಪನ್ನು ಅಥವಾ ಮಾಡಿದ ಆದೇಶವನ್ನು ಪುನರವಲೋಕನ ಮಾಡಲು ಅಧಿಕಾರವನ್ನು ಹೊಂದಿರತಕ್ಕದ್ದು.

138. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ವಿಸ್ತರಣೆ:- (1) ಒಕ್ಕೂಟ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಸಂಸತ್ತು ಕಾನೂನಿನ ಮೂಲಕ ಪ್ರದಾನ ಮಾಡಬಹುದಾದಂಥ ಇನ್ನೂ ಹೆಚ್ಚಿನ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಹೊಂದಿರತಕ್ಕದ್ದು.

(2) ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರವು ಮತ್ತು ಯಾವುದೇ ರಾಜ್ಯ ಸರ್ಕಾರವು ವಿಶೇಷ ಒಪ್ಪಂದದ ಮೂಲಕ ಪ್ರದಾನ ಮಾಡಬಹುದಾದಂಥ ಇನ್ನೂ ಹೆಚ್ಚಿನ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು, ಸರ್ವೋಚ್ಚ ನ್ಯಾಯಾಲಯವು ಚಲಾಯಿಸಬೇಕೆಂದು ಸಂಸತ್ತು ಕಾನೂನಿನ ಮೂಲಕ ಉಪಬಂಧಿಸಿದರೆ, ಸರ್ವೋಚ್ಚ ನ್ಯಾಯಾಲಯವು ಅಂಥ ಅಧಿಕಾರ ವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಹೊಂದಿರತಕ್ಕದ್ದು.

139. ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ರಿಟ್‌ಗಳನ್ನು ಹೊರಡಿಸುವ ಅಧಿಕಾರಗಳನ್ನು ನೀಡುವುದು:- 32ನೆಯ ಅನುಚ್ಛೇದದ (2)ನೆಯ ಖಂಡದಲ್ಲಿ ನಮೂದಿಸಿರುವ ಉದ್ದೇಶಗಳನ್ನು ಹೊರತುಪಡಿಸಿ ಯಾವುದೇ ಉದ್ದೇಶಗಳಿಗಾಗಿ ನಿರ್ದೇಶನಗಳನ್ನು, ಆದೇಶಗಳನ್ನು ಅಥವಾ ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೊಹಿಬಿಷನ್, ಕೋವಾರಂಟೊ ಮತ್ತು ಸರ್‌ ಶಿಯೋರರಿ ಸ್ವರೂಪದ ರಿಟ್ ಗಳೂ ಒಳಗೊಂಡಂತೆ ರಿಟ್‌ಗಳನ್ನು ಅಥವಾ ಅವುಗಳ ಪೈಕಿ ಯಾವುದನ್ನಾದರೂ ಹೊರಡಿಸಲು ಸಂಸತ್ತು, ಕಾನೂನಿನ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಅಧಿಕಾರವನ್ನು ಪ್ರದಾನ ಮಾಡಬಹುದು.

[139ಎ. ಕೆಲವು ಮೊಕದ್ದಮೆಗಳ ವರ್ಗಾವಣೆ:- [1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 24ನೆಯ ಪ್ರಕರಣದ ಮೂಲಕ (1-2-1977 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.] [1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 21ನೆಯ ಪ್ರಕರಣದ ಮೂಲಕ (1)ನೆಯ ಖಂಡಕ್ಕೆ ಬದಲಾಗಿ (1.8.1979 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. (1) ಒಂದೇ ಬಗೆಯ ಅಥವಾ ಬಹುಮಟ್ಟಿಗೆ ಒಂದೇ ಬಗೆಯ ಕಾನೂನು ಪ್ರಶ್ನೆಗಳನ್ನು ಒಳಗೊಂಡಿರುವ ಮೊಕದ್ದಮೆಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತು ಒಂದು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳ ಮುಂದೆ ಅಥವಾ ಎರಡು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳ ಮುಂದೆ ಇತ್ಯರ್ಥದಲ್ಲಿರುವಲ್ಲಿ ಮತ್ತು ಅಂಥ ಪ್ರಶ್ನೆಗಳು ಸಾರ್ವಜನಿಕ ಮಹತ್ವದ ಮುಖ್ಯ ಪ್ರಶ್ನೆಗಳಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ವತಃ ಮನದಟ್ಟಾದರೆ ಅಥವಾ ಭಾರತದ ಅಟಾರ್ನಿ ಜನರಲ್ಲನು ಅಥವಾ ಅಂಥ ಯಾವುದೇ ಮೊಕದ್ದಮೆಯ ಪಕ್ಷಕಾರನು ಅರ್ಜಿಯನ್ನು ಸಲ್ಲಿಸಿದ ತರುವಾಯ ಮನದಟ್ಟಾದರೆ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಅಥವಾ ಉಚ್ಚ ನ್ಯಾಯಾಲಯಗಳ ಮುಂದೆ ಇತ್ಯರ್ಥದಲ್ಲಿರುವ ಆ ಮೊಕದ್ದಮೆಯನ್ನು ಅಥವಾ ಮೊಕದ್ದಮೆಗಳನ್ನು ತರಿಸಿಕೊಳ್ಳಬಹುದು ಮತ್ತು ತಾನೇ ಆ ಎಲ್ಲ ಮೊಕದ್ದಮೆಗಳನ್ನು ವಿಲೆಮಾಡಬಹುದು:

ಪರಂತು, ಸರ್ವೋಚ್ಚ ನ್ಯಾಯಾಲಯವು, ಸದರಿ ಕಾನೂನು ಪ್ರಶ್ನೆಗಳನ್ನು ನಿರ್ಧರಿಸಿದ ತರುವಾಯ ಯಾವ ಉಚ್ಚ ನ್ಯಾಯಾಲಯದಿಂದ ಆ ಮೊಕದ್ದಮೆಯನ್ನು ತರಿಸಿಕೊಳ್ಳಲಾಗಿತ್ತೋ ಆ ಉಚ್ಚ ನ್ಯಾಯಾಲಯಕ್ಕೆ ಹಾಗೆ ತರಿಸಿಕೊಂಡಿದ್ದ ಯಾವುದೇ ಮೊಕದ್ದಮೆಯನ್ನು ಅಂಥ ಪ್ರಶ್ನೆಗಳ ಬಗ್ಗೆ ತನ್ನ ತೀರ್ಪಿನ ಒಂದು ಪ್ರತಿಯೊಡನೆ ವಾಪಸ್ಸು ಕಳುಹಿಸಬಹುದು ಮತ್ತು ಆ ಉಚ್ಚ ನ್ಯಾಯಾಲಯವು ಅದನ್ನು ಸ್ವೀಕರಿಸಿದ ಮೇಲೆ ಅಂಥ ತೀರ್ಪಿಗನುಸಾರವಾಗಿ ಮೊಕದ್ದಮೆಯನ್ನು ಎಲೆ ಮಾಡಲು ಕ್ರಮ ಕೈಗೊಳ್ಳತಕ್ಕದ್ದು.]

(2) ಸರ್ವೋಚ್ಚ ನ್ಯಾಯಾಲಯವು, ಯಾವುದೇ ಉಚ್ಚ ನ್ಯಾಯಾಲಯದ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ಮೊಕದ್ದಮೆಯನ್ನು, ಅಪೀಲನ್ನು ಅಥವಾ ಇತರ ವ್ಯವಹರಣೆಗಳನ್ನು ಇತರ ಯಾವುದೇ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದು ನ್ಯಾಯೋದ್ದೇಶದಿಂದ ವಿಹಿತವೆಂದು ಭಾವಿಸಿದರೆ ಹಾಗೆ ವರ್ಗಾವಣೆ ಮಾಡಬಹುದು.]

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 54-56

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]