October 1, 2023 8:23 am

ಬಾಬಾಗೌಡ ಪಾಟೀಲ ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ

ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ, ರೈತನಾಯಕ ಶ್ರೀ ಬಾಬಾಗೌಡ ಪಾಟೀಲರ ಅಕಾಲಿಕ ನಿಧನ ನೋವನ್ನುಂಟು ಮಾಡಿದೆ.

ಮಾನವ ಬಂದುತ್ವ ವೇದಿಕೆಯ ಜೈಕುಮಾರ್ ಮತ್ತು ಅನಂತನಾಯ್ಕ್ ಅವರೊಂದಿಗೆ, ಬಾಬಗೌಡಪಾಟೀಲರನ್ನು ಅವರ ಚಿಕ್ಕಬಾಗೇವಾಡಿಯ ಅವರ ಜಮೀನಿನಲ್ಲೇ ಮೊದಲು ಭೇಟಿಯಾದೆ. ನಂತರ ನಾಲ್ಕಾರು ದಿನಗಳ ಒಡನಾಟ ಆತ್ಮೀಯತೆಯಾಗಿ ಸ್ಮರಣೀಯವಾಗಿದೆ.

ರಾಜ್ಯದ ಮಾನವತಾವಾದಿಗಳ ಸಾಕ್ಷಿಪ್ರಜ್ಞೆಯಂತಿರುವ  ಶ್ರೀಯುತ ಸತೀಶಜಾರಕಿಹೊಳಿಯವರ  ಉಪಚುನಾವಣೆಯ ಸ್ಪರ್ಧೆಯನ್ನು  ಬಾಬಾಗೌಡಪಾಟೀಲರು ಮತ್ತು ಹಿರಿಯ ಮಾರ್ಕ್ಸ್‌ವಾದಿ ನಾಯಕ ವಿ.ಪಿ.ಕುಲಕರ್ಣಿಯವರು ಒಂದು ಜನಪರ ಹೋರಾಟದ ಮೌಲ್ಯವೆಂದೇ ಪರಿಗಣಿಸಿದ್ದರು.

ಎಪ್ಪತ್ತೈದರ ವಯೋಮಾನದ ಬಾಬಾಗೌಡ ಪಾಟೀಲ ಅವರ ಕ್ರಿಯಾಶೀಲ ವ್ಯಕ್ತಿತ್ವ, ಚುರುಕುತನ ಅವರ ವಯಸ್ಸನ್ನು ಒಂದು ದಶಕಕ್ಕೆ ಇಳಿಸಿದಂತೆ ಭಾಸವಾಗುತ್ತಿತ್ತು. ವಚನ ಚಳುವಳಿ ಮತ್ತು ವಿಜ್ಞಾನದ ಬಗ್ಗೆ ಅವರಿಗೆ ಇದ್ದ ಆಳವಾದ ಜ್ಞಾನ ಬೆರಗು ಹುಟ್ಟಿಸುವಂತಹದ್ದು. ಅವರ ಸರಳತೆ, ಸಜ್ಜನಿಕೆ ಅವರ ವ್ಯಕ್ತಿತ್ವದ ಭಾಗವಾಗಿತ್ತು.

ಹಲವಾರು ಪಕ್ಷಗಳಿಗೆ ಹೋಗಿ ಬಂದಿದ್ದ ಅವರನ್ನು ರಾಜಕೀಯ ವಲಯ ಹೇಗೆ ಗುರುತಿಸುತ್ತಿತ್ತು ಎಂಬುದು ಮುಖ್ಯವಲ್ಲ. ಆದರೆ ಗ್ರಾಮ ಭಾರತದ ಬಗ್ಗೆ ಇದ್ದ ಚಡಪಡಿಕೆಯೇ, ಪ್ರಯೋಗಗಳೇ ಅವರಿಗೆ ಹಲವಾರು ಪಕ್ಷಗಳ ಕದ ತಟ್ಟುವಂತೆ ಮಾಡಿತೇನೋ ಎನ್ನಿಸುತ್ತದೆ.

ಎಪ್ಪತ್ತರ ದಶಕದಲ್ಲಿ ಐಎಎಸ್ ಪಾಸು ಮಾಡಿದ್ದರೂ ಅವರು ಅಧಿಕಾರಶಾಹಿಯ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಶಿವಮೊಗ್ಗೆಯ ಹಿರಿಯಗಾಂಧಿವಾದಿಗಳಾಗಿದ್ದ ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊಫೆಸರ್ ನಂಜುಂಡ ಸ್ವಾಮಿಯವರ ಒಡನಾಟದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಕಟ್ಟುತ್ತಲೇ ಅದರ ಬೆನ್ನೆಲುಬು ಆಗಿದ್ದರು. ನಂಜುಂಡಸ್ವಾಮಿಯವರು ವಿಧಾನಸಭೆ ಪ್ರವೇಶಕ್ಕೆ ಪ್ರತ್ಯಕ್ಷ ಕಾರಣರಾಗಿದ್ದರು.

ಹಿಂದುತ್ವದ ಆಳ ಸುಳಿಯ ಅರಿಯದೇ ಬಿಜೆಪಿ ಸೇರ್ಪಡೆಯಾಗಿದ್ದ ಇವರನ್ನು ಬಿಜೆಪಿಯು ಬಳಸಿಕೊಂಡಿತ್ತು. ಗ್ರಾಮೀಣ ಅಭಿವೃದ್ಧಿಯ ಪರ ಅಪಾರ ಕಾಳಜಿ ಇದ್ದ ಬಾಬಾಗೌಡಪಾಟೀಲರು ಸಹಜವಾಗೇ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂದಿನ ಪ್ರಧಾನಿ ವಾಜಪೇಯಿ ಅವರ ಆತ್ಮೀಯ ವಲಯದಲ್ಲಿದ್ದರು. ದಶಕಗಳ ನಂತರ ಆ ಪಕ್ಷ ಜನವಿರೋಧಿ, ಜನತಂತ್ರ ವಿರೋಧಿಯಾಗಿ ಇಬ್ಬರು ವ್ಯಕ್ತಿಗಳ ಮಾಫಿಯಾ ಆಗಿದ್ದರ ಬಗ್ಗೆಯೂ ಸಹಜ ಆಕ್ರೋಶ ಅವರಲ್ಲಿತ್ತು.

ಅವರ ಜೀವನ ಗಾಥೆ ಕೃತಿಯಾಗಿ ಹೊರಬಂದಿದ್ದರೆ  ರೈತಚಳವಳಿಯ ಹೆಜ್ಜೆಗುರುತುಗಳ ಮತ್ತೊಂದು ಆಯಾಮವೂ ದಾಖಲಾಗುತ್ತಿತ್ತು. ಶ್ರೀ ಬಾಬಾಗೌಡಪಾಟೀಲರ ಅಕಾಲಿಕ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಬಂದುಗಳಿಗೆ ಕುಟುಂಬ ವರ್ಗದವರಿಗೆ ಬರಲಿ ಅಂತಿಮ ನಮನಗಳು.  

  • ಕೆ.ಎಸ್.ಸತೀಶ್ ಕುಮಾರ್, ಮಾನವಬಂಧುತ್ವ ವೇದಿಕೆ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು