ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸ್ಥಾಪಿಸಿದ ಪೀಪಲ್ಸ್ ಎಜುಕೇಷನ್ ಸೊಸೈಟಿ

ಇದೇ ದಿನ ಅಂದರೆ ಜುಲೈ 8, 1945 ರಂದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪೀಪಲ್ಸ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶವನ್ನು ಹೀಗೆ ವಿವರಿಸಿದ್ದಾರೆ: ‘ಪೀಪಲ್ಸ್ ಎಜುಕೇಶನ್ ಸೊಸೈಟಿಯ ಉದ್ದೇಶ ಕೇವಲ ಶಿಕ್ಷಣ ನೀಡುವುದಲ್ಲ, ಬೌದ್ಧಿಕ, ನೈತಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ರೀತಿಯಲ್ಲಿ ಶಿಕ್ಷಣ ನೀಡುವುದು’

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜತೆಗೆ ಶಿಕ್ಷಣ ಸಂಸ್ಥೆಗೆ ಹೆಗಲಾದವರು ಈ ಚಿತ್ರದಲ್ಲಿದ್ದಾರೆ. ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರೊಂದಿಗೆ ತೆಗೆಸಿಕೊಂಡ ಈ ಛಾಯಾಚಿತ್ರದಲ್ಲಿ (ಎಡದಿಂದ) ಪ್ರೊ. ವಿ.ಜಿ. (ವಿನಾಯಕ್ ಗಣಪತ್) ರಾವ್, ಪ್ರಾಂಶುಪಾಲರಾದ ಎ.ಬಿ. ಗಜೇಂದ್ರಗಡ್ಕರ್, ಎಂ.ವಿ. ದೋಂಡೆ, ಡಾ. ಅಂಬೇಡ್ಕರ್, ರಾವ್ ಬಹದ್ದೂರ್ ಸಿ.ಕೆ. ಬೋಲೆ, ಡಿ.ಜಿ. ಜಾಧವ್ ಮತ್ತು ಕಮಲಕಾಂತ್ ಚಿತ್ರೆ (ಕಾಲೇಜಿನ ರಿಜಿಸ್ಟ್ರಾರ್) ಅವರುಗಳಿದ್ದಾರೆ.
ಇದೀಗ ದೇಶವ್ಯಾಪಿ ಪೀಪಲ್ಸ್ ಎಜುಕೇಶನ್ ಸೊಸೈಟಿ 12 ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳನ್ನು ನಡೆಸುತ್ತಿದೆ, ಅವುಗಳಲ್ಲಿ 6 ಮುಂಬೈ ವಿಶ್ವವಿದ್ಯಾಲಯಕ್ಕೆ, 5 ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಮತ್ತು ಒಂದು ಪುಣೆ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದು, 30,000 ವಿದ್ಯಾರ್ಥಿಗಳಿಗೆ ಸಂಸ್ಥೆಯು ಶಿಕ್ಷಣವನ್ನು ನೀಡುತ್ತಿದೆ, ಅವರಲ್ಲಿ 15,000 ಕ್ಕೂ ಹೆಚ್ಚು ಜನರು ಹಿಂದುಳಿದ ವರ್ಗಗಳಿಗೆ ಸೇರಿದವರು. ಇವುಗಳಲ್ಲದೆ, ಪಿ.ಇ.ಎಸ್ ಸಂಸ್ಥೆಯು ಅನೇಕ ಪ್ರೌಢಶಾಲೆಗಳು, ಡಿಪ್ಲೊಮಾ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳನ್ನು ನಡೆಸುತ್ತಿದೆ. ಸಾಮಾನ್ಯವಾಗಿ ಬಡ ಜನರಿಗೆ ಮತ್ತು ಮುಖ್ಯವಾಗಿ ದಮನಿತ ಸಮುದಾಯಗಳಾದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಶಿಕ್ಷಣ ನೀಡಲು ಈ ಸಂಸ್ಥೆಯು ದೊಡ್ಡ ಆಲದ ಮರದಂತೆ ಹರಡಿದೆ, ಅದರ ಪ್ರಭಾವದಿಂದ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾಪಿಸಿದ ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿಯನ್ನು ಒಳಗೊಂಡಂತೆ ಭಾರತದಾದ್ಯಾಂತ ಶಿಕ್ಷಣ ಸಂಸ್ಥೆಗಳಿವೆ.








