September 22, 2023 1:28 am

ತುಪ್ಪ ತಿಂದವರಿಂದ ದೇಶ ಹಾಳಾಗಿದೆ

ಶ್ರೀ ಗುರು ಬಸವಲಿಂಗಾಯ ನಮಃ 
ಬಸವ ತಂದೆಯನ್ನು ಸ್ಮರಿಸಿ,

 ಎಲ್ಲೋ ಹುಡುಕಿದೆ ಇಲ್ಲದ ದೇವರ 
ಕಲ್ಲು ಮಣ್ಣಿನ ಗುಡಿಯೊಳಗೆ...

ಇಲ್ಲೇ ಇರುವ ಪ್ರೀತಿ ಸ್ನೇಹಗಳ 
ಗುರುತಿಸಲಾರೆವು ನಮ್ಮೊಳಗೆ

ಎಲ್ಲಿದೆ ನಂದನ, ಎಲ್ಲಿದೆ ಬಂಧನ, 
ಎಲ್ಲಾ ಇದೆ ಈ ನಮ್ಮೊಳಗೆ 
ಒಳಗಿನ ತಿಳಿಯನು ಕಲಕದೆ ಇದ್ದರೆ 
ಅಮೃತದ ಸವಿಯಿದೆ ನಾಲಿಗೆಗೆ 

ಎಲ್ಲೋ ಹುಡುಕಿದೆ ಇಲ್ಲದ ದೇವರ 
ಕಲ್ಲು ಮಣ್ಣಿನ ಗುಡಿಯೊಳಗೆ 

ಹತ್ತಿರವಿದ್ದರೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ 
ಎಷ್ಟು ಕಷ್ಟವೊ ಹೊಂದಿಕೆಯೆಂಬುದು 
ನಾಲ್ಕು ದಿನದ ಈ ಬದುಕಿನಲಿ

ಎಲ್ಲೋ ಹುಡುಕಿದೆ ಇಲ್ಲದ ದೇವರ 
ಕಲ್ಲು ಮಣ್ಣಿನ ಗುಡಿಯೊಳಗೆ
 
– ಜಿ.ಎಸ್.ಶಿವರುದ್ರಪ್ಪ

ಬೆಳಗ್ಗೆಯಿಂದ ಬಾಳ ಮಾತುಗಳನ್ನು ಕೇಳ್ಕೋತಾ ಬಂದಿದ್ದೀರಿ. ಮಾತು ಕೇವಲ ಶಬ್ದ ಆಗಬಾರದು, ಕೃತಿ ಆಗಬೇಕಾಗಿದೆ. ಮುಖ್ಯವಾಗಿ ಕ್ರಿಯೆ ಆಗಬೇಕಾಗಿದೆ. ನಾವೆಲ್ಲರೂ ಪ್ರತೀ ವರ್ಷ ಇಲ್ಲಿ ಸೇರ್ತೇವೆ. ನೀವು ಒಬ್ಬರು ಹತ್ತು ಜನರನ್ನು ಪರಿವರ್ತನೆ ಮಾಡಿ, ಅವರಲ್ಲಿ ವೈಚಾರಿಕತೆ ತಂದಾಗ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಿದ್ದಕ್ಕೂ ಸಾರ್ಥಕ ಆಗ್ತದೆ. ಇದನ್ನ ನೀವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಇಲ್ಲ ಅಂದ್ರೆ ನಮ್ಮ ಮಾತುಗಳು ನಿಮಗೆಲ್ಲಾ ಎಂಟರ್‍ಟೈನ್‍ಮೆಂಟ್ ಆಗ್ತದೆ. ನಮ್ಮ ಶ್ರಮ, ಸತೀಶ್ ಜಾರಕಿಹೊಳಿಯವರ ಶ್ರಮ, ಎಲ್ಲ ಮಾತನಾಡಿರುವವರ ಶ್ರಮ ಈ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ತರಬೇಕಾಗ್ತದೆ, ಬದಲಾವಣೆಯನ್ನು ತರಬೇಕಾಗ್ತದೆ. ಆವಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ನೀವು ಬಂದದ್ದಕ್ಕೂ ಸಾರ್ಥಕ, ನಮ್ಮಂತವರು ಹೇಳಿದ್ದಕ್ಕೂ ಸಾರ್ಥಕ ಆಗ್ತದೆ. ಇಲ್ಲಾ ಅಂತಂದ್ರೆ, ಇಂತಹ ಕಾರ್ಯಕ್ರಮಗಳಲ್ಲಿ ಮಾತಾಡಿ ಹೋಗ್ತೇವೆ. ನಂತರ ರಾತ್ರಿ ಮಲಗುವಾಗ ನಾಲ್ಕು ಸಲ ಬಾಕಲು ಹಾಕಿದಿನೊ ಇಲ್ವೋ ನೋಡಿ ಮಲಗಬೇಕಾಗ್ತದೆ. ನಾವು ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಕಳೆದುಕೊಂಡ ದೇಶದೊಳಗೆ ಇದ್ದೇವೆ. ಪ್ರಜಾಪ್ರಭುತ್ವ ಎಲ್ಲೋ ಇನ್ನೂ ಇದೆ ಅಂತ ಉಳ್ಕೊಂಡಿದ್ದೀವಿ. ಆದರೂ ಆ ಸಂಪ್ರದಾಯವಾದಿಗಳ ಕೈವಾಡದ ಅಸ್ತಿತ್ವದಲ್ಲಿ ಸಿಕ್ಕಿಕೊಂಡು, ನಾವು ಹೇಗೆ ನರಳುತ್ತಾ ಇದ್ದೇವೆ ಅನ್ನೋದನ್ನು  ತಿಳಿಯೋದು ನಮಗೆಲ್ಲರಿಗೂ ಇನ್ನೂ ಬಹಳ ದೊಡ್ಡ ಕಷ್ಟದ ಕೆಲಸ ಆಗಿದೆ. ಇವತ್ತು ಬೆಳಿಗ್ಗೆ ಇದನ್ನೇ ನಾನು ಯುನಿವರ್ಸಿಟಿಯಲ್ಲಿ ಮಾತಾಡಿ ಬಂದೆ. ಮಧ್ಯಾಹ್ನ ಇನ್ನೊಂದು ಕಡೆ ಹೋಗಿ ಇಲ್ಲಿಗೆ ಬಂದೆ.     

 ನಮ್ಮತ್ರ ಫೋನಿರೋದೇ ಸಾಯಿಸ್ತೀವಿ ಅಂತ ಬೆದರಿಸೋಕೆ ಅಂತಾ ಆಗೋಗಿದೆ. ನಾನು ಅದಕ್ಕೆ ಹೇಳಿದೆ ಆಕ್ಸಿಡೆಂಟ್ ಆಗಿ ಸಾಯೋದಕ್ಕಿಂತ, ರೋಗ ಬಂದು ಸಾಯೋದಕ್ಕಿಂತ, ದುರ್ಮರಣ ಬಂದು ಸಾಯೋದಕ್ಕಿಂತ, ಇಂತಹ ವಿಚಾರಗಳನ್ನು ಹೇಳಿ ಹುತಾತ್ಮರಾಗೋದು ಬಹಳ ಲೇಸು ಅನ್ನೋದನ್ನು ನಾವು ಕಂಡುಕೊಳ್ಳಬೇಕಾಗಿದೆ. ಕಾರಣ ಏನಂದ್ರೆ, ಈ ದೇಶದೊಳಗಡೆ ಬುದ್ಧನನ್ನು ಓಡಿಸಿದಂತಹ ಸಮುದಾಯ ಇದೆ. ಬಸವಣ್ಣನವರನ್ನು ಗಡೀಪಾರು ಮಾಡಿದಂತಹ ಸಮುದಾಯವಿದೆ. ಕಲಬುರ್ಗಿಯವರನ್ನು ಗುಂಡಿಟ್ಟು ಕೊಂದ ಸಮುದಾಯವಿದೆ. ಗೌರಿ ಲಂಕೇಶ್ ಅವರನ್ನು ಒಂದು ಗುಬ್ಬಿಯಂತೆ ಹೊಡೆದು ರೋಡಿನಲ್ಲಿ ಮಲಗಿಸಿರುವವರಿದ್ದಾರೆ. ಈ ಸಮಾಜದೊಳಗೆ ಬಹಳ ಎಚ್ಚರ ಇರಬೇಕು. ಇಲ್ಲಿಗೆ ನೀವೆಲ್ಲ ಬಂದು ಕೇವಲ ಕೇಳಿ ಹೋಗೋದಲ್ಲ. ಪರಿಸ್ಥಿತಿ ಏನಿದೆ ಅನ್ನೋದನ್ನು ನೀವು ಗಮನಿಸಬೇಕು. ಪ್ರಗತಿಪರರು, ವಿಚಾರವಾದಿಗಳು, ನಾವು ಜೀವನವನ್ನು ಅನುಭವಿಸುತ್ತೇವೆ, ಸಾವನ್ನು ಪ್ರೀತಿಸುತ್ತೇವೆ. ಈ ಸಮಾಜದೊಳಗೆ ಸಾವನ್ನು ಪ್ರೀತಿಸ್ತಾ ಇದ್ದೇವೆ. ಕಾರಣ ಧಾರ್ಮಿಕ ಮುಖಂಡರೊಳಗೇ ಬಹಳ ದೊಡ್ಡ ಟಾರ್ಗೆಟ್ ಅಂದರೆ ನಿಜಗುಣಾನಂದ ಸ್ವಾಮೀಜಿ. ದೊಡ್ಡ ಟಾರ್ಗೆಟ್, ಬಹಳ ದೊಡ್ಡ ಟಾರ್ಗೆಟ್. ಆದರೆ ನಾವು ಅದಕ್ಕೆ ಹೆದರುವುದಿಲ್ಲ. ಯಾಕೆ? ಕೊಲ್ಲು ಎಂಬ ಭಾಷೆ ದೇವನದಾದರೆ ಗೆಲುಂಬ ಭಾಷೆ ಭಕ್ತರದು ನೋಡಾ ಅನ್ನತಕ್ಕಂತ ಸಾಲಿನಲ್ಲಿ ನಿಂತವರು.

ಬಸವಣ್ಣನವರನ್ನು ಈ ಸಮಾಜದಿಂದ ಓಡಿಸಿದವರು ಯಾರು? ಕ್ರೈಸ್ತರಲ್ಲ, ಇಸ್ಲಾಂ ಧರ್ಮದವರಲ್ಲ. ಬಹಳ ದೂರ ಹೋಗಬೇಕಾಗಿಲ್ಲ. ಈ ನೆಲದಿಂದ ಬಸವಣ್ಣನವರನ್ನು ಓಡಿಸಿದವರು ಯಾರು? ಹರಳಯ್ಯನನ್ನು ಮಧುವರಸರನ್ನು ಕಾಲಿಗೆ ಆನೆ ಕಾಲಿಗೆ ಕಟ್ಟಿ ಎಳೆದವರಾರು? ಇದು ನಮ್ಮ ಲಿಂಗಾಯತ ಮಠಾಧೀಶರಿಗೆ ಗೊತ್ತಾಗುವುದಿಲ್ಲ. ಬಸವಣ್ಣನವರು ಏನು ತಪ್ಪು ಮಾಡಿದರೂ ಅಂತೇಳಿ ಓಡಿಸಿದರು ಸ್ವಾಮಿ? ಜಾತಿ ಹೋಗಬೇಕು ಅಂತ ಹೇಳಿದ್ದೇ ಒಂದು ದೊಡ್ಡ ಅಪರಾಧವಾಗಿದ್ದಕ್ಕಾಗಿ ಅವರನ್ನು ಅಲ್ಲಿಂದ ಓಡಿಸಿದರಲ್ಲ! ಯಾರು ಮುಸಲ್ಮಾನರು ಓಡಿಸಿದರಾ? ಕ್ರೈಸ್ತರು ಓಡಿಸಿದರಾ? ಬಸವಣ್ಣನನ್ನು ಇಲ್ಲಿಂದ ಓಡಿಸಿದ್ದು ಈ ದೇಶದ ಸನಾತನವಾದಿಗಳು ತಾನೇ? ಈ ದೇಶದ ಮನುವಾದಿಗಳು ತಾನೆ? ಈ ದೇಶದ ಸಂಪ್ರದಾಯವಾದಿಗಳೂ ತಾನೇ? ಕೊಂಡಿ ಮಂಚಣ್ಣ, ನಾರಾಯಣ ಕ್ರಮಿತ, ವಿಷ್ಣು ಭಟ್ಟ ಮೊದಲಾದ ಸನಾತನವಾದಿಗಳು ತಾನೇ ಅವರನ್ನು ಓಡಿಸಿದ್ದು?

ಬುದ್ಧನನ್ನು ಈ ದೇಶದಿಂದ ಓಡಿಸಿದರು, ಬಸವಣ್ಣನವರನ್ನು ಗಡೀಪಾರು ಮಾಡಿದರು. ಪ್ರಗತಿಪರ ವಿಚಾರಧಾರೆಗಳವರನ್ನು ಗುಂಡಿಕ್ಕಿ ಕೊಲ್ಲುವ ಪರಿಸ್ಥಿತಿಗೆ ಈ ದೇಶಬಂದು ನಿಂತಿದೆ. ಯಾವ ಪರಿಸ್ಥಿತಿಯಲ್ಲಿ ನಾವಿಂದು ಮಾತಾಡಬೇಕಿದೆ ಎಂದು ಆಲೋಚಿಸಬೇಕಿದೆಯಲ್ಲವೇ? ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಈ ದೇಶದಲ್ಲಿ ಉಳೀಬೇಕು ಅಂತ ಹೇಳಿದರೆ, ಏಕಸಂಸ್ಕೃತಿಯ ಪರಾಕಾಷ್ಠೆಯಲ್ಲಿರುವ, ಏಕಸಂಸ್ಕೃತಿಯನ್ನೇ ಹೇರುವ ರಾಜಕೀಯ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಬೇಕು. ಆಧುನಿಕ ಕಾಲದಲ್ಲಿ ಸಮುದಾಯದಲ್ಲಿ ವೈಚಾರಿಕತೆಗೆ ಬೆಲೆನೇ ಇಲ್ಲ ಎನ್ನುವ ರೀತಿಯಲ್ಲಿ ಸಂಪ್ರದಾಯವಾದಿಗಳು ಹಿಂದಿನ ಕಾಲಕ್ಕಿಂತ ಇಂದು ಅಟ್ಟಹಾಸದಲ್ಲಿ ಮೇರೀತಾ ಇದಾರೆ. ಇವುಗಳನ್ನೆಲ್ಲ ನೋಡಿದರೆ ಬಸವಣ್ಣನವರ ಹೊಲೆ ಹತ್ತಿ ಉರಿದರೆ ನಿಲಬಹುಲ್ಲದಲ್ಲದೇ, ಧರೆ ಹತ್ತಿ ಉರಿದರೆ ನಿಲಬಾರದು. ಏರಿ ನೀರು ನೀರುಂಬೊಡೆ ಬೇಲಿ ಕೈಯ ಮೇವುಡೆ ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯಿಯ ಮೊಲೆಹಾಲು ನಂಜಾಗಿ ಕೊಲುವೆಡೆ ಇನ್ನಾರಿಗೆ ದೂರಲಿ ಕೂಡಲ ಸಂಗಮದೇವಾ… ವಚನ ನೆನಪಾಗ್ತದೆ.

ನಾವೆಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ಪರಿವರ್ತನೆ ಆಗಬೇಕು. ಕುಳಿತವರು ನೀವು ಕೇಳಿ ಹೋಗ್ತೀರಿ. ಮಾತನಾಡುವರು ಬಹಳ ಕಷ್ಟದಲ್ಲಿದ್ದೇವೆ. ಕೇಳುವವರು ಬಹಳ ಚಲೊ ಕುಂತೀರಿ, ಚಪ್ಪಾಳೆ ಹೊಡಿತೀರಿ. ಹೇಳು ಮಗನಾ. ನಮ್ಮಪ್ಪನ ಗಂಟೇನು ಹೇಳು. ಅದು ಹೇಳಿದ ಮೇಲೆ, ರೆಕಾರ್ಡ್ ಮಾಡ್ಕೊಂಡು ನನ್ನ ವಿಡಿಯೋನ ಅರ್ಧಂಬರ್ಧ ಎಡಿಟ್ ಮಾಡಿ ಪ್ರಸಾರ ಮಾಡ್ತಾರೆ. ಪೂರ್ಣ ಪ್ರಸಾರ ಮಾಡೋದೇ ಇಲ್ಲ. ನಾನೇನು ಬೈದಿರ್ತೀನಿ ಅದನ್ನಷ್ಟೇ ಹಾಕೋದು. ಅದಕ್ಕೇನು ಕಾಮೆಂಟ್‍ಗಳು ತುಂಬಾ ಬರುತ್ವೆ. ವಿಡಿಯೋ ಮಾಡ್ಕೊಳ್ಳೋರಿಗೆ ದಯವಿಟ್ಟು ಕೇಳ್ಕೋತೀನಿ. ಮೊನ್ನೆ ಕೊಪ್ಪಳದಲ್ಲಿ ಹೇಳಿದ ಒಂದು ಮಾತು; “ಈ ದೇಶದಲ್ಲಿ ತುಪ್ಪ ತಿಂದವರಿಂದ ದೇಶ ಹಾಳಾಗಿದೆಯೇ ಹೊರತು, ಮಾಂಸ ತಿಂದವರಿಂದ ಅಲ್ಲ” ಅಂತ ಹೇಳಿದ್ದೆ. ಇದೇ ಡೈಲಾಗ್ ಇಟ್ಟುಕೊಂಡು ಬಬ್ಬಲ್ ಗಮ್ ಎಳೆದಂಗ ಎಳೆಯೋಕೆ ಶರುಮಾಡಿದರು. ನನ್ನನ್ನು ಬಬ್ಬಲ್ ಗಮ್ ಎಳದಂಗ ಸೋಷಿಯಲ್ ಮೀಡಿಯಾದಾಗ ಹಿಂಗಾ ಎಳೆಡಾಡಿದರು. ನಾಗರಾಜ ಅವರೆ ಹಿಂಗಾ ಎಳೆಯಕತ್ತಿದ್ರು ಏನ್ ನಿಜಗುಣಾನಂದ ಸ್ವಾಮೀ, ಸ್ವಾಮೀನೋ, ಕಾಮೀನೋ? ಅಂತೆಲ್ಲ ಕೇಳಿದರು. ನಾನು ಸ್ವಾಮೀಜಿ. ನಾನು ಮನುಷ್ಯ. ನಾನು ಪ್ರೊಫೆಷನಲ್ ಸ್ವಾಮಿ. ಅರ್ಥ ಆಯ್ತಾ? ವೃತ್ತಿ ಸ್ವಾಮೀಜಿ ಇದ್ದೀನಿ ನಾನು. ನಾನು ಎಲ್ಲರಂತೆ ನಿಮಗಿಷ್ಟವಾಗುವಂತೆ ಇರುವ ಸ್ವಾಮೀಜಿ ಅಲ್ಲ. ಆದ್ದರಿಂದ ನಿಮಗ ಬಹಳ ತ್ರಾಸ್ ಆಗ್ತದೆ. ಈ ಶಬ್ದಗಳೂ ಅರ್ಥ ಆಗೋರಿಗೆ ಅರ್ಥ ಆಗ್ತದೆ. ನಾ ಮನುಷ್ಯನಾದ್ದರಿಂದ ಮಾತಾಡ್ತಿದೀನಿ. ನಾನು ಎಲ್ಲ ಸಾಮಾನ್ಯ ಸ್ವಾಮೀಜಿಗಳಂತೆ ಆಗಿದ್ರೆ ಪಾದಪೂಜೆ ಮಾಡಿಸ್ಕೋತಿದ್ದೆ, ಪಲ್ಲಕ್ಕಿ ಏರ್ತಿದ್ದೆ. ಎರಡೂ ಕೈಲಿ ಆಶೀರ್ವಾದ ಮಾಡಿ ಮಳೆ ಬರೋದಿಲ್ಲ, ವೇದ ಹೇಳಿದರೆ ಬೆಳೆ ಬರೋದಿಲ್ಲ. ನೆಲದಾಗ ಕುಂತ್ಕೊಂಡು ಬರೀ ಉಸುರಿದರೆ ಬೆಳೆ ಬರಂಗ ಮಾಡ್ತಿದ್ದೆ. ಸೋ ಅಂದರೆ ಬರಬೇಕು ಬೆಳೆ. ನಿಮಗೆಲ್ಲ ಭಯ ಹೋಗಿಲ್ಲ. ಎಲ್ಲಿಯವರೆಗೆ ಧರ್ಮ ಮತ್ತು ದೇವರುಗಳ ಕುರಿತು ಸ್ಪಷ್ಟೀಕರಣ ಈ ಸಮಾಜದಲ್ಲಿ ಜನರಿಗಾಗೋದಿಲ್ಲ; ಅಲ್ಲಿಯವರೆಗೆ ನಮ್ಮಂತವರು ನಿಮ್ಮನ್ನು ಆಳ್ತಾ ಇರ್ತೇವೆ ಎಂಬ ಮಾತನ್ನು ನೀವು ಅರ್ಥ ಮಾಡಿಕೊಳ್ಳಬೇಕು. ದೇವರು ಮತ್ತು ಧರ್ಮದ ಬಗೆಗೆ ನಿಮಗೆ ಸ್ಪಷ್ಟತೆ ಬರಬೇಕು. ಬುದ್ಧ, ಬಸವಣ್ಣ ಇದನ್ನೇ ಹೇಳಿದರು. ನಾನು ಬೆಳಿಗ್ಗೆ ಮಾತನಾಡೋವಾಗ ಅದನ್ನೇ ಹೇಳಿದೆ. ಮಾದಲಾಂಬಿಕೆಯ ಹತಿರ ಬಸವಣ್ಣ ಬಂದು ದಲಿತರು ಬಂದು ಕೊಟ್ಟಿರುವ ಚಪ್ಪಲಿಯನ್ನು ಶುದ್ಧಿ ಮಾಡಿದ ಪ್ರಸಂಗ ನೆನಪಾಗುತ್ತದೆ. 

ಜನ ಹೇಗಿದ್ದಾರೆ ಅಂದರೆ, ಏಯ್ ಅವರು ಮಾಂಸ ತಿನ್ತಾರೆ, ಅದಕ್ಕಾಗಿ ಅವರನ್ನು ಒಳಗ ಬರಬೇಡ ಅಂತ ಹೇಳ್ತಾರೆ. ಮನೆಯೊಳಗೆ ಬೆಕ್ಕು ಇಲಿ ತಿನ್ನುತ್ತೆ. ಅದನ್ನು ಒಳಗೆ ಬಿಟ್ಕೊಂಡೀಯಲ್ಲೋ, ಒಂದು ಬೆಕ್ಕು ಇಲಿ ತಿಂತದ ಅದು ಮನೆಯೊಳಗೆ ಇರ್ತದೆ. ಆದರೆ ಮಾಂಸ ತಿನ್ನೋನು ಮನೆಯಿಂದ ಹೊರಗೆ ಇರ್ತಾನೆ. ನೋಡ್ರಿ ಮಜಾ ಎಂಗದ, ಇವರು ದೇಶ ಕಟ್ತೀನಿ ಅಂತ ಹೊಂಟಾರ. ಜಗತ್ತಿನಲ್ಲಿ ಕಲ್ಲನ್ನು ಯಾಕ ದೇವರು ಮಾಡಿದ್ರು ಅಂದಾಗ ಮೀನಕ್ಷಿ ಬಾಳಿ ಹೇಳಿದ್ರಲ್ಲ; ಇದು ಮೋಸದ ಅಂತ ಅವರಿಗೆ ಗೊತ್ತದ, ಅದಕ್ಕಾಗಿ ಅವರು ಮೋಸ ಮಾಡ್ತಾನೆ ಇರ್ತಾರೆ. ನೀವು ಹೋಗಿ ಕೈ ಮುಗೀತಾನೇ ಇರ್ತೀರಿ, ತಲೆ ಬೋಳಿಸ್ಕೋತಾನೇ ಇರ್ತೀರಿ. ನೀವೇನು ಸಾಮಾನ್ಯ ಏನು? ನಮಗೂ ನಮಗೂ ಚಪ್ಪಾಳೆ ತಟ್ತೀರಿ, ಅವರಿಗೂ ಚಪ್ಪಾಳೆ ತಟ್ತೀರಿ. ನಮ್ಮಂತವರಿಗೆ ನೀವು ಡೇಂಜರ್. ಧೈರ್ಯ ಐತೇನ್ ನಿಮಗ, ನಿಮಗ ಧೈರ್ಯ ಇದ್ರ ಮನಿಯೊಳಗೆ ಕಾಕು ಪೂಕು ದೇವರ ಫೋಟೋಗಳನ್ನು ತೆಗೀರಿ ನೋಡೋಣ. ಹಾಂ. ಹಾಕ್ರಿ ನೋಡೋಣು, ಆ ಜಾಗದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಫೋಟೋಗಳನ್ನು ಹಾಕಿ. ನಿಮ್ಮ ಗದ್ಗಿ ಮೇಲೆ ನನಗೆ ಅನ್ನ ಕೊಟ್ಟವನು ಅಂತ ಅಂಬೇಡ್ಕರ್ ಫೋಟೋ ಹಾಕಿ. ಇವುಗಳನ್ನೆಲ್ಲ ಬಹಳ ಜನ ಮಾಡೋದಿಲ್ಲ. ಆದ್ರಿಂದ ನಾನು ಕಳೆದ ಬಾರಿಯೇ ಹೇಳಿದ್ದೇನೆ. ಈ ಸಮಾಜದೊಳಗೆ ಶಂಕರಾಚಾರ್ಯರಿಂದ ನ್ಯಾಯ ಸಿಗಲಿಲ್ಲ, ಮಧ್ವಾಚಾರ್ಯರಿಂದ ನ್ಯಾಯ ಸಿಗಲಿಲ್ಲ, ರಾಮಾನುಜಾಚಾರ್ಯರಿಂದ ನ್ಯಾಯ ಸಿಗಲಿಲ್ಲ. ಕೇವಲ ಭಕ್ತಿ, ಜ್ಞಾನದ ಪರಂಪರೆಗಳಿಂದ ಮಾತ್ರ ಚಳುವಳಿಗಳು ನಡೆದವು. ಈ ಸಮಾಜಕ್ಕೆ ಕಲ್ಲುಗಳಿಂದ ನಿರ್ಮಾಣವಾಗಿರುವ ಮುನ್ನೂರು ಮೂವತ್ತು ಕೋಟಿ ದೇವರುಗಳಿಂದ ನ್ಯಾಯ ಸಿಕ್ಕಿಲ್ಲ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ನಿಮಗೆ ನ್ಯಾಯ ಸಿಕ್ಕಿದೆ ಎಂನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕಲ್ಲಿನ ದೇವರುಗಳು ಏನು ಕೊಡುತ್ತವೆ. ಅವುಗಳಿಗೇ ಊಟ ಇಲ್ಲ! ಅವುಗಳಿಗೆ ಎಡೆ, ಪ್ರಸಾದ ಅಂತ ನೀವು ಕೊಡುತ್ತೀರಿ. ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವಾಗ ಚಲೊ ಜಳಕ ಮಾಡಿ, ತಟ್ಟೆ ಒಳಗೆ ಬಾಳೆಹಣ್ಣು ತಗೊಂಡು, ಹಣ್ಣು ತಗೊಂಡು, ಹೂವು ತಗೊಂಡು, ಗುಡಿಗೋಗಿ ಪೂಜಾರಿ ಕೈಯ್ಯಾಗ ಕೊಟ್ಟು, ದೇವರ ಪೂಜೆ ಮಾಡ್ಸು ಎಂದು ಹೇಳಿದ್ದು ಯಾರು? ನೀವು ದೇವರಿಗೆ ಪೂಜೆ ಮಾಡಿಸೋಕೆ ಒಬ್ಬ ಪೂಜಾರೀನ ದಲ್ಲಾಳಿ ಇಟ್ಕೊಂಡಿದ್ದೀರಿ ಅಂದರೆ, ದೇವಸ್ಥಾನ ಏನು ಎ.ಪಿ.ಎಂ.ಸಿ. ಮಾರ್ಕೆಟ್ಟಾ? ಎ.ಪಿ.ಎಂ.ಸಿ. ಮಾರ್ಕೆಟ್‍ನಲ್ಲಿ ತರಕಾರಿ ವ್ಯಾಪಾರ ಮಾಡಿದಂತೆ ಆ ದೇವರಿಗೂ ಭಕ್ತನ ಮಧ್ಯೆ ಒಬ್ಬ ಪೂಜಾರಿನ ಇಟ್ಟುಬಿಟ್ಟರೆ ಹೇಗೆ? ನೀವು ತೆಗೆದುಕೊಂಡು ಹೋಗಿದ್ದನ್ನು ಕೊಟ್ಟ ಕೂಡಲೇ ಪೂಜಾರಿ ಪೂಜೆ ಮಾಡುತ್ತಾನೆ. “ಯಜ್ಞೇನ ಯಜ್ಞ ಮೇವೋ” ಅಂತ ಏನೋ ಹೇಳ್ತಾನೆ. ಯಾವ ಜಂತು ಹುಳವೋ? ಕಂಡೋರು ಯಾರು? ನೋಡಿದವರು ಯಾರು? 

ನೀವು ನಂಬಿರುವ ದೇವರ ಪೂಜೆ ಮಾಡೋಕೆ ನಡುವೆ ಒಬ್ಬರನ್ನು ಇಟ್ಟುಕೊಂಡಿದ್ದೀರಿ. ನೀವು ಎಷ್ಟು ದೊಡ್ಡವರು? ದೇವರು ಮತ್ತು ನಿಮ್ಮ ನಡುವೆ ಕೂಡ ಒಬ್ಬ ದಲ್ಲಾಳಿ ಇಟ್ಟುಕೊಂಡಿದ್ದೀರಿ. ನೀವೆಲ್ಲ ಎಷ್ಟು ದೊಡ್ಡ ಸಾಹುಕಾರರು ಎಂಬುದನ್ನು ವಿಚಾರ ಮಾಡಿ. ಪೂಜಾರಿ ಪೂಜೆ ಮುಗಿದ ಮೇಲೆ ದೇವರು ಅನುಗ್ರಹ ಮಾಡಬೇಕು. ಯಾರಿಗೆ ಮಾಡ್ಬೇಕು? ಪೂಜಾರಿಗೆ ಮಾಡಬೇಕೋ ಭಕ್ತನಿಗೋ? ಪೂಜಾರಿ ಏನು ಕಷ್ಟಪಟ್ಟು ಹಣ್ಣು ತಂದನೇ? ಇವುಗಳನ್ನೆಲ್ಲ ನೀವು ಆಲೋಚಿಸಬೇಕು. ದಲ್ಲಾಳಿ ವ್ಯಾಪಾರವನ್ನು ಬಿಡಿ ಎಂದು ಬಸವಣ್ಣ ಹೇಳಿದ್ದಾರೆ. ಈ ಸಂಗತಿಯನ್ನು ನೀವು ಮನದಟ್ಟುಮಾಡಿಕೊಳ್ಳಬೇಕು. ದೇವರು ಮತ್ತು ನಿಮ್ಮ ನಡುವೆ ಇರುವ ಪೂಜಾರಿ ಹೆಸರಿನ ದಲ್ಲಾಳಿಯನ್ನ ಬಿಟ್ಟರೆ ಮಾತ್ರ್ರ ಈ ದೇಶ ಉದ್ಧಾರ ಆಗುತ್ತದೆ. ಅಲ್ಲಿಯವರೆಗೂ ದೇಶ ಉದ್ಧಾರ ಆಗುವುದಿಲ್ಲ. ಮೊದಲು ನಾವು ಪೂಜಾರಿಗಳನ್ನು, ದಲ್ಲಾಳಿಗಳನ್ನು ಬಿಡಬೇಕು. ಅವರನ್ನು ಬಿಡಲಿಲ್ಲವಾದರೆ ಏನಾಗುತ್ತದೆ ಎಂಬುದನ್ನು ಬಸವಣ್ಣ ತಮ್ಮ ವಚನದಲ್ಲಿ ಅರ್ಥಗರ್ಭಿತವಾಗಿ ಹೇಳಿದ್ದಾರೆ. ತನ್ನ ಆಶ್ರಯದ ರತಿ ಸುಖವನು, ತಾನುಂಬುವ ಊಟವನು, ತಾ ಮಾಡಬೇಕಲ್ಲದೇ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ? ಕೆಮ್ಮನೇ ಉಪಚಾರಕ್ಕೆ ಮಾಡುವರಲ್ಲದೇ, ನಿಮ್ಮನ್ನೆತ್ತ ಬಲ್ಲರು ಕೂಡಲ ಸಂಗಮದೇವಾ… ಎನ್ನುವ ಮೂಲಕ ದೇವರು ಮತ್ತು ಭಕ್ತನ ನಡುವೆ ದಳ್ಳಾಳಿಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ವಚನದ ತಾತ್ಪರ್ಯವೇನು ಎಂದರೆ, ನಿನ್ನ ಸಂಸಾರ ನೀನು ಮಾಡಬೇಕು, ಇನ್ನೊಬ್ಬರು ಮಾಡಬಾರದು. ಅರ್ಥ ಆಯ್ತಾ? ಅದಕ್ಕೆ ಚಪ್ಪಾಳೆ ತಟ್ತಾರೆ ಅವರು. ಯಾಕೆಂದರೆ, ಇರೋದು ಮುನ್ನೂರು ಮೂವತ್ಮೂರು ಕೋಟಿ ದೇವರು, ನೂರ ಇಪ್ಪತ್ತು ಕೋಟಿ ಜನಸಂಖ್ಯೆ. ಎಷ್ಟು ಹಂಚಿದ್ರು ಖಾಲಿಯಾಗೋದಿಲ್ಲ. ಮುನ್ನೂರು ಮೂವತ್ಮೂರು ಕೋಟಿ ದೇವರಿಗೆ ನೂರಾ ಇಪ್ಪತ್ತು ಕೋಟಿ ಜನಸಂಖ್ಯೆ ಅಂದರೆ ಇನ್ನೂ ಎಷ್ಟು ದೇವರುಗಳನ್ನು ಹುಟ್ಟಿಸಬೇಕು? ದೇವರುಗಳನ್ನು ಹುಟ್ಟಿಸೋದೇನು ದೊಡ್ಡ ಮಾತಲ್ಲ. ದಿನ ಬೆಳಗಾಗುವುದರೊಳಗೆ, ಬೆಳಿಗ್ಗೆ, ಸಾಯಂಕಾಲ ಹುಟ್ಟಿಸಬಹುದು. ಬಸವಣ್ಣ ಎಷ್ಟು ಚೆನ್ನಾಗಿ ಬರೆದಿದ್ದಾನೆ ನೋಡಿ; “ತನ್ನಾಶ್ರಯದ ರತಿ ಸುಖವನು, ತಾನುಂಬುವ ಊಟವನು” ನಿನ್ನ ಊಟವನ್ನು ನೀನೇ ಮಾಡಬೇಕಲ್ಲಪ್ಪ, ನಿನ್ನ ಪೂಜೆ ನೀನೇ ಮಾಡಬೇಕಲ್ಲ. ನಿನ್ನ ಸಂಸಾರ ನೀನೇ ಮಾಡಬೇಕಲ್ಲಾ. ಇನ್ನೊಬ್ಬರ ಕೈಲಿ ಮಾಡಿಸಿದರೆ ಹೇಗೆ. ಬಸವಣ್ಣ ಎಷ್ಟು ಕಳಕಳಿಯ ಮಾತು ಹೇಳ್ತಾರೆ. ಕೊನೆಗೆ ನೊಂದು ಹೇಳ್ತಾರೆ. “ತನ್ನಾಶ್ರಯದ ರತಿ ಸುಖವನು, ತಾನುಂಬುವ ಊಟವನು, ತಾ ಮಾಡಬೇಕಲ್ಲದೇ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ, ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೇ ನಿಮ್ಮನೆತ್ತ ಬಲ್ಲರು ಕೂಡಲ ಸಂಗಮದೇವಾ” 

ಗುಡಿಗಳಿಗೆ ನಿರಂತರವಾಗಿ ಹೋಗುವುದು, ದೇವರ ಸುತ್ತ ಸುತ್ತುವುದು, ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡು ಬರುವುದು ಇವುಗಳನ್ನೆಲ್ಲ ಮಾಡುತ್ತಾರೆ. ತಲೆ ಬೋಳಿಸ್ಕೊಂಡು ಬರುತ್ತಾರೆ. ತಿಮ್ಮಪ್ಪನಿಗೆ ಕಿವಿ ಕೊಟ್ಟವರನ್ನ ಎಲ್ಲಿಯಾದರೂ ನೋಡಿದಿರಾ? ಪುರೋಹಿತರು ನಿಮ್ಮ ಕೂದಲು ಬೋಳಿಸುವುದನ್ನು ನಿಮಗೆ ಕಲಿಸಿದ್ದಾರೆ. ಅವರು ಎಂದಿಗೂ ದೇವಸ್ಥಾನದಲ್ಲಿ ತಲೆ ಬೋಳಿಸಿಕೊಂಡಿಲ್ಲ. ಇಂತಹ ವಿಷಯಗಳ ಕುರಿತು ನೀವೆಲ್ಲ ಗಮನಹರಿಸಬೇಕು. ಅವರು ನಮ್ಮಂತವರಿಗೆ ತಲೆ ಬೋಳಿಸುವುದನ್ನು ಕಲಿಸಿದ್ದಾರೆ. ಅವರು ಯಾವಾಗ ತಲೆ ಬೋಳಿಸ್ತಾರೆ? ಅವರು ದೇವರ ಹೆಸರಲ್ಲಿ ತಲೆ ಬೋಳಿಸೋದಿಲ್ಲ. ತಂದೆ ತಾಯಿ ಸತ್ತಾಗ ಮಾತ್ರ ತಲೆ ಬೋಳಿಸುತ್ತಾರೆ. “ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ” ಎಂದು ಬಸವಣ್ಣ ಹೇಳಿದ್ದಾನೆ. ಇದರಲ್ಲಿರುವ ಸೂಕ್ಷ್ಮ ವಿಷಯಗಳನ್ನು ಗಮನಿಸಿರಿ. 

ಇತ್ತೀಚೆಗೆ ಅಯ್ಯಪ್ಪನ ಗಲಾಟೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಅಯ್ಯಪ್ಪ ಹರಿಹರ ಸುತ. ಗಂಟೆ ಅಲ್ಲಾಡಿಸುವವರು ಮ್ಯಾಜಿಕ್ ಮಾಡುತ್ತಾರಾ? ಇತಿಹಾಸ ಸೃಷ್ಟಿ ಮಾಡುತ್ತಾರಾ? ಬೆಳಗಾಯಿತಂದ್ರೆ ಇಂತಹ ದೇವರುಗಳನ್ನು ಸೃಷ್ಟಿ ಮಾಡ್ತಾರೆ. ಇವುಗಳನ್ನೆಲ್ಲ ಕೇಳಿದ ಮೇಲೆ ನೀವೆಲ್ಲರೂ ಧೈರ್ಯವಂತರಾಗಬೇಕು, ಆತ್ಮಸ್ಥೈರ್ಯವಂತರಾಗಬೇಕು. ಈ ದೇಶದಲ್ಲಿ ಅಂಬೇಡ್ಕರ್ ಅವರಿಗೆ ಮದುವೆ ಮಾಡಿಕೊಳ್ಳಲು ಜಾಗ ಕೊಡಲಿಲ್ಲ. ಇಲ್ಲಿ ಕುಳಿತವರಿಗೊಂದು ಪ್ರಶ್ನೆ ಕೇಳ್ತೇನೆ; ನಾನೇನು ಇಸ್ಲಾಂ, ಕ್ರೈಸ್ತ ಧರ್ಮಗಳ ವಿರೋಧಿಯಲ್ಲ. ಈ ದೇಶವನ್ನು ನಾವು ಉಳಿಸ್ತೇವೆ. ಈ ದೇಶವನ್ನು ಸನಾತನ ಧರ್ಮದಲ್ಲಿ ಉಳಿಸ್ತೇವೆ. ಈ ದೇಶವನ್ನು ನಾವು ಸಂಸ್ಕøತಿಯ ಪರಂಪರೆಯಲ್ಲಿ ಉಳಿಸ್ತೇವೆ. ಈ ದೇಶವನ್ನು ಗುಡಿ ಗುಂಡಾರದ ವ್ಯವಸ್ಥೆಯೊಳಗೆ ಉಳಿಸ್ತೇವೆ ಎಂದು ಹೇಳುವವರಿಗೆ ಒಂದು ವಿಷಯ ಮೊದಲು ಅರಿವಾಗಬೇಕಿದೆ. ಈ ದೇಶವನ್ನು ಮೊಟ್ಟಮೊದಲು ಜಾತಿ ವ್ಯವಸ್ಥೆಯಿಂದ ಉಳಿಸಿದ ಮೊದಲನೆಯವನು ಬಸವಣ್ಣ. ಚಾತುರ್ವರ್ಣದ ವ್ಯವಸ್ಥೆಯ ಮೇಲೆ ನಲುಗುತ್ತಿದ್ದ ಭಾರತದಲ್ಲಿ ಜ್ಯಾತ್ಯತೀತವಾದ ಲಿಂಗಾಯತ ಎಂಬ ಧರ್ಮವನ್ನು ಸ್ಥಾಪಿಸಿದವನು ಬಸವಣ್ಣ. ಲಿಂಗಾಯತ ಧರ್ಮದ ಮೂಲಕ ಮೊಟ್ಟಮೊದಲಿಗೆ ರಾಷ್ಟ್ರ ಕಟ್ಟುವುದರೊಂದಿಗೆ ರಾಷ್ಟ್ರ ಧರ್ಮವನ್ನು ಆಚರಣೆಗೆ ತಂದ ಮೊದಲಿಗ ಬಸವಣ್ಣ. ನಂತರ ಅಂಬೇಡ್ಕರ್ ಅವರು ಏನಾದರೂ ಇಸ್ಲಾಂ ಧರ್ಮ ಸ್ವೀಕರಿಸಿದ್ದರೆ ಭಾರತದ ಪರಿಸ್ಥಿತಿ ಏನಾಗ್ತಿತ್ತು ಎನ್ನುವುದನ್ನು ಸ್ವಲ್ಪ ಗಮನವಿಟ್ಟು ಆಲೋಚಿಸಿ. ಈ ನೆಲದಿಂದ ಓಡಿಸಿರುವ ಬೌದ್ಧ ಧರ್ಮವನ್ನು ಪುನಃ ಅಂಬೇಡ್ಕರ್ ಸ್ವೀಕರಿಸುವುದರ ಮುಖಾಂತರ ಈ ಭಾರತ ದೇಶವನ್ನು ಸಂರಕ್ಷಿಸಿದರು. ಈ ಸಂಗತಿಯನ್ನು ನಾವೆಲ್ಲ ನೆನಪಿಟ್ಟುಕೊಳ್ಳಬೇಕಿದೆ. 

ನಾವು ಎಲ್ಲಿದ್ದೇವೆ, ಯಾವ ನೆಲಗಟ್ಟಿನ ಮೇಲೆ ನಿಂತಿದ್ದೆವೆ ಎಂಬುದನ್ನು ವಿಚಾರ ಮಾಡಬೇಕು. ಸಂವಿಧಾನವನ್ನು ಬದಲಾಯಿಸ್ತೀವಿ ಅಂತ ಹೊರಟಿರುವ ರಾಜಕಾರಣಿಗಳು ಇದಾರೆ. ಇವರ ಪಕ್ಷವೇ ಅಧಿಕಾರದಲ್ಲಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಾಯಿಸ್ತೀವಿ ಎಂದಮೇಲೆ ನಮ್ಮಂತವರನ್ನು ಗುಂಡಿಟ್ಟು ಕೊಲ್ಲುವುದೇನು ದೊಡ್ಡದೇ? ಅಂಬೇಡ್ಕರ್ ಅವರ ಸಂವಿಧಾನವನ್ನು ಸುಡುತ್ತ್ತಾರೆ ಎಂದರೆ, ನೀವು ಮೀಸಲಾತಿ ದಲಿತರಾಗಬೇಡಿ, ನೀವು ಅಂಬೇಡ್ಕರ್ ಅವರು ಕೊಟ್ಟಿರುವ ಮೀಸಲಿಟ್ಟಿರುವ ದಲಿತರಾದರೆ ನೀವು ಅಂಬೇಡ್ಕರ್ ಅವರಿಗೆ ಮೋಸ ಮಾಡಿದಂತೆ. ನಮ್ಮದು ದ್ರಾವಿಡ ಸಂಸ್ಕೃತಿಯ ನೆಲಗಟ್ಟಿನ ದೇಶ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ಅಖಂಡ ಭಾರತ ದಲಿತರ ದೇಶ. ಈ ದೇಶದ ಸಂವಿಧಾನವನ್ನು ಕೊಟ್ಟಿರುವ ಅಂಬೇಡ್ಕರ್ ಅವರನ್ನು ಉಳಿಸಬೇಕು ಎಂದರೆ ನೀವೆಲ್ಲರೂ ಅಂಬೇಡ್ಕರ್ ಅವರು ಹೇಳಿದ “ನಾನು ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂ ಆಗಿ ಸಾಯುವುದಿಲ್ಲ” ಎಂಬ ಮಾತನ್ನು ಮರೆಯಬಾರದು. ಈ ದೇಶದಲ್ಲಿ ಚಾತುರ್ವಣದ ವಿರುದ್ಧ, ಅದರ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿರುವ ಅಂಬೇಡ್ಕರ್ ಸಿದ್ಧಾಂತವನ್ನು ಉಳಿಸುವ ಶಕ್ತಿ ಯುವಕರ, ದಲಿತರ ಪಡೆಯಲ್ಲಿ ಬರಬೇಕಾಗಿದೆ. ನಾವು ಇಂತಹ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಾನೇನು ಎಲೆಕ್ಷನ್‍ಗೆ ನಿಲ್ಲೋದಿಲ್ಲ. ಸತೀಶ್ ಜಾರಕಿಹೊಳಿಯವರ ಕೈಯಲ್ಲಿ ಅಪ್ಲಿಕೇಷನ್ ಕೊಡೋದಿಲ್ಲ. ಆದರೆ ಅಂಬೇಡ್ಕರ್, ಬುದ್ಧ, ಬಸವಣ್ಣ ಉಳಿಯಬೇಕಾಗಿದೆ. ಆದರೆ, ಪುರೋಹಿತಶಾಹಿಳು ಇವರನ್ನು ಉಳಿಯಲು ಬಿಡುವುದಿಲ್ಲ. ಯಾವುದಾದರೂ ಕುತಂತ್ರ ನಡೆಸುತ್ತಾರೆ. ಎಂತಹ ಕುತಂತ್ರ ನಡೆಸ್ತಾರೆ ಎಂಬುದಕ್ಕೆ ಒಂದು ಉದಾಹರಣೆಯೇ ರಾಮ. ಉತ್ತರ ಭಾರತದಲ್ಲಿ ರಾಮನನ್ನು ಹಿಡಿದುಕೊಂಡು ಕುತಂತ್ರ ಮಾಡಿದರು, ದಕ್ಷಿಣಭಾರತಕ್ಕೆ ಅಯ್ಯಪ್ಪನನ್ನು ಇಟ್ಟರು. ನನ್ನ ಭಾಷಣವನ್ನು ಲೈವ್ ಕೊಡ್ರಿ. ನನ್ನ ಭಾಷಣದ ಆಧಾರದಲ್ಲಿ ನನ್ನನ್ನೇನಾದರೂ ಕೋರ್ಟಿಗೆ ಎಳೆದರೆ, ನನ್ನ ವಿರುಧ ಕೇಸ್ ಹಾಕಿದರೆ, ನಾಗಮೋಹನ್ ದಾಸ್ ಇದಾರೆ. ಬಿಡಿಸಿಕೊಂಡು ಬರುತ್ತಾರೆ. ಅನಂತ್ ನಾಯಕ್ ಅವರು ಇದಾರೆ. ಅದು ಇರಲಿ, ಹೇಗೆ ಟೆಕ್ನಿಕಲ್ ಆಗಿ ದಕ್ಷಿಣದಲ್ಲಿ ಅಯ್ಯಪ್ಪನ ವಿಷಯವನ್ನು ಇಟ್ಟುಕೊಂಡು ನಾಟಕವಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಲಾರದ ಗುಡಿ ಗುಂಡಾರಗಳು ಬೇಕೋ? ಈ ದೇಶದಲಿ ಹೆಣ್ಣುಮಕ್ಕಳಿಗೂ ಆಸ್ತಿ ಕೊಟ್ಟಿರುವ ಅಂಬೇಡ್ಕರ್ ಅವರ ಸಂವಿಧಾನ ಬೇಕೋ? ಅನ್ನೋದು ತೀರ್ಮಾನ ಆಗಬೇಕು. ಒಂದು ನ್ಯಾಯಾಲಯದ ತೀರ್ಪನ್ನೇ ಧಿಕ್ಕರಿಸುವಂತಹ ಮನಃಸ್ಥಿತಿ ನಮ್ಮಲ್ಲಿ ಬಂತು ಎಂದರೆ ಪ್ರಜಾಪ್ರಭುತ್ವ ಎಲ್ಲಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿಗೇ ವಿರುದ್ಧವಾದ ನಡೆಯನ್ನು ಇಟ್ಟರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಮಾಧ್ಯಮಗಳ ಮುಂದೆ ಬಂದು, ಒತ್ತಡವಿರುವ ಸಂಗತಿಯನ್ನು ಹೇಳುವ ಪರಿಸ್ಥಿತಿ ನಿರ್ಮಾಣವಾದರೆ, “ಹೊಲೆ ಹತ್ತಿ ಉರಿದರೆ ನಿಲಬಹುದಲ್ಲದೇ, ಧರೆ ಹತ್ತಿ ಉರಿದರೆ ನಿಲಬಾರದು ಏರಿ ನೀರುಂಬೊಡೆ, ಬೇಲಿ ಮೇವೊಡೆ ನಾರಿ ತನ್ನ ಮನೆಯಲ್ಲಿ ಕಳುವೊಡೆ” ಎಂಬ ಬಸವಣ್ಣನ ವಚನ ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ವಿವರಿಸುತ್ತದೆಯಲ್ಲವೇ? 

ಈಗ ಮಾಧ್ಯಮಗಳನ್ನು ಖರೀದಿ ಮಾಡುವ ಕಾಲ ಬಂದಿದೆ. ಅವರನ್ನು ಖರೀದಿಸಿ, ಹೀಗೇ ಸುದ್ದಿ ಪ್ರಸಾರ ಮಾಡಬೇಕು ಎಂದು ಒಪ್ಪಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ಮೀರಿದವರು ಮಾಧ್ಯಮದವರು ಎಂದು ನಾವೆಲ್ಲ ತಿಳಿದುಕೊಂಡಿದ್ದೆವು. ದೇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಾಗ, ನ್ಯಾಯ ಸಿಗದಿದ್ದಾಗ ಮಾಧ್ಯಮ ನ್ಯಾಯ ಕೊಡುತ್ತೆ ಎಂದು ನಾವು ಕಾಯುತ್ತಿರುತ್ತೇವೆ. ಮಾಧ್ಯಮಗಳಲ್ಲಿ ಕುಳಿತುಕಂಡಿರುವ ನಿರೂಪಕರು ಯಾರ ಪರ ಚರ್ಚೆ ಮಾಡ್ತಿದಾರೆ ಅಂತ ತೀರ್ಮಾನ ಮಾಡಿಬಿಡಬಹುದಾದಂತ ಪರಿಸ್ಥಿತಿಗೆ ಮಾಧ್ಯಮಗಳು ಬಂದಿವೆ. ಮಾಧ್ಯಮ ಕೂಡ ಮಾರಾಟ ಆಯ್ತು. ಪ್ರಜ್ಞಾವಂತರು ಒಂದು ಕಡೆಯಿಂದ ಮಾರಾಟ ಆದರು. ಬಂಡವಾಳಶಾಹಿಗಳು, ಸಂಪ್ರದಾಯವಾದಿಗಳ ಕೈಯಲ್ಲಿ ಮಾಧ್ಯಮ ಸೇರಿಕೊಂಡಿದೆ. 

ನಾನು ಇದುವರೆಗೆ ಇಲ್ಲಿ ಮಾಡಿರುವ ಭಾಷಣದಂತೆ ಬೇರೆ ಯಾವ ಸ್ವಾಮೀನೂ ಭಾಷಣ ಮಾಡುವುದಿಲ್ಲ. ನಾನು ಯಾಕೆ ಮಾತಾಡ್ತಿದೀನಿ ಅಂದ್ರೆ, ರಾಜು ಅಂಕಲಗಿ, ಉಮೇಶ್ ಬಾಳಿ ಅವರು ಕೂತಿದಾರೆ. ನಾನು ಈ ಸಮಾಜದೊಳಗಡೆ ಈ ಹೋರಾಟ ಯಾಕ ಮಾಡ್ತಾ ಇದೀನಿ ಅಂದರೆ, ನನಗೆ ಬುದ್ಧನ ಶಾಂತಿಯ ಸಂದೇಶ, ಬಸವಣ್ಣನ ಸಮಾನತೆ ಬೇಕಾಗಿದೆ. ಅಂಬೇಡ್ಕರ್ ಅವರ ಸಂವಿಧಾನದ ನೀತಿ ನಿಯಮಗಳು ದೇಶದಲ್ಲಿ ಉಳಿಯಬೇಕಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಬ್ರಾಹ್ಮಣರ ವಿರೋಧಿಗಳಲ್ಲ. ನಾವು ಬ್ರಾಹ್ಮಣರ ವಿರೋಧ ಮಾಡುವಂತಿದ್ದರೆ, ಬಸವಣ್ಣನನ್ನು ವಿರೋಧ ಮಾಡಬೇಕಲ್ಲವೇ? ನಾವು ಬಸವಣ್ಣನನ್ನು ಮಾಡಲಾಗುತ್ತದೆಯೇ? ನಾವು ಬ್ರಾಹಣರ ವಿರೋಧಿಗಳಲ್ಲ. ಇದು ಬ್ರಾಹ್ಮಣರಲ್ಲಿರುವ ಭ್ರಮಾತ್ಮಕ ನೀತಿಗಳ ವಿರೋಧಿ ವೇದಿಕೆ. ಅನೇಕರು ನನಗೆ ಫೋನ್ ಮಾಡಿ, ಪುರೋಹಿತಶಾಹಿ ವಿರುದ್ಧ ಮಾತಾಡೋದನ್ನ ಬಿಟ್ಟುಬಿಡಿ ಅಂತಾರೆ. ನಾನೇನು ಐದು ಜನನ್ನ ಮದುವಿ ಆಗಿಲ್ಲ. ನಾನು ಇರೋದು ಒಬ್ಬನೇ. ನಾನು ಈಗ ಪ್ರಸ್ತಾಪಿಸಿರುವ ವಿಷಯಗಳಿಂದ ಹಣ ಬರುತ್ತದೆಯೇ? ಮುಂಜಾನೆ ಯಜ್ಞ ಯಜ್ಞೇನ ಮೇವೇನ ಜಂತು, ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರುಮೇ ದೇವ, ಮಂಗಳಂ ಗಜಾನನಂ ಭೂತಗಣಾದಿ ಸೇವಿತಂ ಕಪಿತ್ತ ಜಂಬೂ ಫಲಸಾರ ಭಕ್ಷಿತಂ, ಉಮಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ, ನಮೋ ಸೂರ್ಯಾಯ, ನಮೋ ಚಂದ್ರಾಯ, ನಮೋ ಮಂಗಳಾಯ, ನಮೋ ಬುಧಾಯ, ನಮೋ ಗುರು ಶುಕ್ರ ಶನಿಯಾ ರಾಹು ಕೇತುವೇ ನಮಃ ಎಂದು ಜನರಿಗೆ ಅರ್ಥವಾಗದ ಮಂತ್ರಗಳನ್ನ ಹೇಳಬೇಕು. ಧೂಪ, ದೀಪಾರತಿ ಮಾಡಿದರೆ, ಆಗ ತಟ್ಟೆಗೆ ರೊಕ್ಕ ಬಂದು ಬೀಳುತ್ತೆ. ನಿಮಗ ನನ್ನನ್ನು ನೋಡಿದಾಗ ಸ್ವಾಮೀನೋ ಅಲ್ಲೊ ಅನ್ನೋ ಅನುಮಾನ ಬರುತ್ತೆ. ಈ ದೇಶದಲ್ಲಿ ಖಾವಿ ಭಯ ಹುಟ್ಟಿಸಿದೆ. ಅದೇ ಖಾವಿ ಬಟ್ಟೆ ಹಾಕಿಕೊಂಡೇ ಭಯ ನಿವಾರಿಸಬೇಕಾಗಿದೆ. ಅದಕ್ಕಾಗಿಯೇ ನಾನು ಖಾವಿ ಹಾಕಿಕೊಂಡು ನಿಂತಿದ್ದೀನಿ. ಪವಾಡ ಪುರುಷನಾದವು ಶಾಪ ಕೊಡುತ್ತಾನೆಯೇ? ಶಾಪ ಕೊಡೋನು ಸ್ವಾಮಿಯೇ? ಸ್ವಾಮಿಗಳು ಜನರ ತಾಪ ಕಳೆಯಬೇಕಲ್ಲವೇ? ಎಂತೆಂತ ಸ್ವಾಮಿಗಳು ಹುಟ್ಟಿದ್ದಾರೆ ನಿಮಗೆ ಗೊತ್ತೇ? ಒಬ್ಬ ತಮಿಳುನಾಡಿನಲ್ಲಿ ಊಟ ಮಾಡಿದ ಮ್ಯಾಗ ಬಹಿರ್ದೆಸೆಗೆ ಹೋಗದ ಸ್ವಾಮಿ. ಊಟ ಮಾಡಿದ ನಂತರ ಹೋಗ್ತಿರಲಿಲ್ಲ. ಪವಾಡ ನಡೆದುಬಿಡ್ತು. ಆದರೆ ಸ್ನಾನಕ್ಕೆ ಐದು ಬಕೆಟ್ ನೀರು ಬೇಕಿತ್ತು. ಎಲ್ಲ ಅಲ್ಲೇ ಮುಗಿಸಿ ಬರ್ತಿದ್ದ ಈ ಸ್ವಾಮಿ. ಎಂತೆಂತಹ ಸ್ವಾಮಿಗಳು ಹುಟ್ಟಿದ್ದಾರೆ ನೋಡಿ. ನೀವು ಪರಿಶುದ್ಧರಾಗಿ ಬದುಕಬೇಕು ಎಂದರೆ ಬುದ್ಧ ತನುವಾಗಲಿ, ಬಸವ ಮನ ಆಗಲಿ, ಅಂಬೇಡ್ಕರ್ ಆತ್ಮ ಆಗಲಿ. ಆತ್ಮವೆಂದರೆ ಪುರೋಹಿತಶಾಹಿಗಳು ಹೇಳುವ ಆತ್ಮವಲ್ಲ. ಸತ್ತ ಮೇಲೆ ಕೈಲಾಸ, ಸ್ವರ್ಗ, ವೈಕುಂಠ ಏಕಾದಶಿ, ಬಾಗಿಲು ಇತ್ಯಾದಿ ಕತೆಗಳಿವೆ. ಅಲ್ಲಿ ರಂಬೆ, ಊರ್ವಶಿ, ಮೇನಕೆ ಇರ್ತಾರೆ. ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾರಂತೆ. ಅಲ್ಲಿಗೆ ಹೋದವರು ವರದಿ ತರಲಿಲ್ಲ. ಪತ್ರ ಬರಲಿಲ್ಲ. ಸತ್ತ ಮೇಲೆ ಮುಕ್ತಿಯಂತೆ. ಬಸವಣ್ಣ ವೇದ ಆಗಮಗಳನ್ನು ಮೀರಿ ಪಶು ಪಕ್ಷಿ ಪ್ರಾಣಿಗಳನ್ನು ನೋಡಿ ಬದುಕಿ ಅಂತ ಹೇಳಿದ್ದಾರೆ. ಕಾಗೆ ಒಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಬಳಗನೆಲ್ಲವವನು ಕೋಳಿ ಒಂದು ಗುಟುಕು ಕಂಡರೆ ಕೂಗಿ ಕರೆಯದೇ ತನ್ನ ಕುಲವನೆಲ್ಲವನು, ಶಿವಭಕ್ತರಾಗಿರ್ದು ಭಕ್ತಿ ಪಕ್ಷವಿಲ್ಲದಿದ್ದರೆ ಆ ಕಾಗೆ ಕೋಳಿಗಿಂತಲೂ ಕರಕಷ್ಟ ಕಾಣಾ… ನೋಡಿ ಬದುಕಿ ಎಂದು ಬಸವಣ್ಣ ಹೇಳಿದರು. ಪುರೋಹಿತಶಾಹಿಗಳು ಕಾಗೆ ಚಾಂಡಾಳ ಪಕ್ಷಿ ಎಂದರು. ಸಹಕಾರ ಸಂಘದವರು ಎರಡು ಕೈ ಹಸ್ತಲಾಘವ ಮಾಡುತ್ತಿರುವ ಚಿಹ್ನೆ ಇಟ್ಟುಕೊಂಡಿದ್ದಾರೆ. ಅವರು ಕಾಗೆ ಚಿತ್ರ ಹಾಕಬೇಕು. ಕಾಗೆ ಬದುಕಿದಂತೆ ಬದುಕಿ. ಕಾಗೆ ತೋರಿಸಿ ಬಸವಣ್ಣ ಬದುಕಿಸಿದರು. ಅಪ್ಪ ಸತ್ತಾಗ ಪಿಂಡ ಇಡಲು ಬೇಕಾದಾಗ ಕಾಗೆ ಒಳ್ಳೆಯದು. ಪಿಂಡ ಇಟ್ಟ ಕೂಡಲೇ ಕಾಗೆ ತಿನ್ನುತ್ತದೆ. ನಮ್ಮಪ್ಪ ತಿಂದ ನಮ್ಮಜ್ಜ ತಿಂದ ಎಂದು ಹೇಳುವವರು, ಕಾಗೆ ಮನೆಗೆ ಬಂದಾಗ ನಮ್ಮಪ್ಪ ನಮ್ಮಜ್ಜ ಬಂದ ಅಂತ ಮನೆಯೊಳಗೆ ಏಕೆ ಕರೆಯುವುದಿಲ್ಲ? ಜನರಿಗೆ ಕಾಗೆ ಕಂಡರೆ ಭಯ. ಮನೆ ಮುಂದೆ ಒಂದು ಎರಡು ಮೆಣಸಿನಕಾಯಿ, ಒಂದು ಇದ್ದಿಲು, ಒಂದು ನಿಂಬೆಹಣ್ಣು ಹಿಂಗ ಕೊರೆದು ಇಟ್ಟರೆ ಭಯ. ನಿಮ್ಮನ್ನು ಒಂದ್ ಮೆಣಸಿನಕಾಯಿ ಎದುರಿಸುತ್ತೆ. ಒಂದು ಮೆಣಸಿನಕಾಯಿ, ಒಂದು ಇದ್ದಲು, ಅರ್ಧ ಓಳು ನಿಂಬೆಹಣ್ಣು ಭಯಕ್ಕೆ ಕಾರಣವಾಗುತ್ತದೆ. ಮೆಣಸಿನಕಾಯಿ, ಇದ್ದಿಲ ಚೂರು, ನಿಂಬೆ ಹೋಳು ನಿಮ್ಮನ್ನು ಎದುರಿಸುವಷ್ಟು ಮೌಢ್ಯವನ್ನು ನಮಗೆ ಪುರೋಹಿತಶಾಹಿಗಳು ತುಂಬಿದ್ದಾರೆ.

  • ನಿಜಗುಣಾನಂದಸ್ವಾಮಿ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು