April 20, 2024 5:18 am

ಸ್ಮಶಾನದಲ್ಲಿ ನಾಮಕರಣ ಮಾಡಿದ ಸತೀಶ್ ಜಾರಕಿಹೊಳಿ

ನಿಪ್ಪಾಣಿ: ದೇಶದಲ್ಲಿಯೇ ಇದೊಂದು ವಿನೂತನ ಹಾಗೂ ಐತಿಹಾಸಿಕ ಕಾರ್ಯಕ್ರಮ. ನಂಬಿಕೆ ಬೇರೆ, ಮೂಢ ನಂಬಿಕೆ ಬೇರೆ, ನಂಬಿಕೆಗಳನ್ನೇ ಕೆಲವರು ವ್ಯಾಪಾರಕ್ಕಾಗಿ ಮೂಢನಂಬಿಕೆಯನ್ನಾಗಿ ಪರಿವರ್ತಿಸಿದ್ದಾರೆ. ಬಿಸಿಲಲ್ಲಿ ದುಡಿಯದೇ ಹೆದರಿಸಿ ಕೆಲವರು ದುಡ್ಡು ಮಾಡುತ್ತಿದ್ದಾರೆ. ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ್ ಅವರ ಕಾಲದಿಂದಲೂ ಇಂಥವರ ವಿರುದ್ಧ ಹೋರಾಟಗಳು ನಡೆಯುತ್ತಲೇ ಬಂದಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಸ್ಮಶಾನ ಭೂಮಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ, ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿಯ ಶಾಸಕರೂ ಆದ ಸತೀಶ ಜಾರಕಿಹೊಳಿಯವರು ಇಂದು ಮತ್ತೊಂದು ಐತಿಹಾಸಿಕ ಕಾರ್ಯಕ್ರಮವನ್ನು ಸ್ಮಶಾನದಲ್ಲಿಯೇ ನಡೆಸಿದರು. ಇಂದು ಮಗುವಿಗೆ ನಾಮಕರಣ ಮಾಡುವ ಮೂಲಕ ಪರಿವರ್ತನೆಯ ಮತ್ತೊಂದು ಮಜಲನ್ನು ವಿಸ್ತರಿಸಿದರು. ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಾಳು ಬರಗಾಲೆಯವರ ಮೊಮ್ಮಗನಿಗೆ ಸ್ಮಶಾನದಲ್ಲಿ ತೊಟ್ಟಿಲು ತೂಗಿ, ‘ಭೀಮರಾವ್’ ಎಂದು ನಾಮಕರಣ ಮಾಡಿದರು. ಕೃಷ್ಣಾ ನದಿ ತೀರದಿಂದ ಮತ್ತೊಬ್ಬ ಭೀಮರಾವ್ ಹೋರಾಟ ಮಾಡಲಿ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಬೆಳೆಯಲಿ, ದೇಶದ ಕೊಳೆ ತೊಳೆಯಲಿ ಎಂದು ಸತೀಶ್ ಜಾರಕಿಹೊಳಿ ಹರಸಿದರು.

ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ್, ಪೆರಿಯಾರ್, ನಾರಾಯಣ ಗುರು, ಫುಲೆ ದಂಪತಿಗಳ ತತ್ವ ಆದರ್ಶಗಳು ನಮಗೆ ಮಾದರಿಯಾಗಲಿ. ದೇವಸ್ಥಾನ, ಸ್ಮಶಾನ ಎಲ್ಲವೂ ಪವಿತ್ರ ಸ್ಥಳಗಳೇ. ಆದರೆ ಕೆಲವೇ ಕೆಲವರು ತಮ್ಮ ಹೊಟ್ಟೆಪಾಡಿಗಾಗಿ ಜನರನ್ನು ಹೆದರಿಸುತ್ತಿದ್ದಾರೆ. ಪ್ರತಿಯೊಬ್ಬರು ಸತ್ತ ನಂತರ ಹೋಗುವುದು ಸ್ಮಶಾನಕ್ಕೆ. ಹೀಗಾಗಿ ಸ್ಮಶಾನ ಕೆಟ್ಟ ಸ್ಥಳ ಎಂಬುದನ್ನು ನಾವು ಬಿಡಬೇಕು. ಹಂತ ಹಂತವಾಗಿ ಪರಿವರ್ತನೆಯಾಗಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮೌಢನಂಬಿಕೆ, ಕಂದಾಚಾರ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯ ಮೂಲಕ ಮಹತ್ವದ ಕೆಲಸಗಳನ್ನು ನಡೆಸುತ್ತಿದ್ದಾರೆ. ಇದರ ರಾಜ್ಯ ಸಂಚಾಲಕರಾಗಿ ರವೀಂದ್ರ ನಾಯ್ಕರ್ ರಾಜ್ಯಾದ್ಯಂತ ಸಂಘಟನೆಯನ್ನು ಸಕ್ರಿಯವಾಗಿಟ್ಟಿದ್ದಾರೆ.

ಈ ಸಂಘಟನೆ ಮೂಢನಂಬಿಕೆಗಳ ವಿರುದ್ಧದ ಹೋರಾಟವನ್ನು ಆಧರಿಸಿರುವ ಅನೇಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಆಯೋಜಿಸುವ ಮೂಲಕ ಪ್ರಸಿದ್ಧಿಯಾಗಿದೆ. ಡಿಸೆಂಬರ್ 6ರಂದು ಬೆಳಗಾವಿ, ಗೋಕಾಕ್ ಸೇರಿದಂತೆ ಅನೇಕ ಕಡೆ ಸ್ಮಶಾನದಲ್ಲಿ ಪರಿವರ್ತನಾ ದಿನದ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಢನಂಬಿಕೆಗಳ ವಿರುದ್ಧ ಹೋರಾಟವನ್ನು ನಡೆಸಲಾಗುತ್ತಿದೆ.

ಇತ್ತೀಚಿಗೆ ಸತೀಶ ಜಾರಕಿಹೊಳಿಯವರು ತಮ್ಮ ಹೊಸ ಕಾರನ್ನು ಸ್ಮಶಾನದಿಂದಲೇ ಚಾಲನೆ ಮಾಡಿಸಿದ್ದರು. ಈ ಮೂಲಕ ಮೂಢನಂಬಿಕೆಯನ್ನು ತೊಡೆದುಹಾಕಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಜಿಪಂ ಉಪಾಧ್ಯಕ್ಷ ಅರುಣ್ ಕಟಾಂಬಳೆ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ