ಬೆಳಗಾವಿ: ಸ್ಟುವರ್ಟ್ ಫ್ರೇಸರ್ ಅವರು ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ್, ಬರೋಡಾದ ಸಯ್ಯಾಜಿರಾವ್ ಗಾಯಕ್ವಾಡ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾರ್ಗದರ್ಶನ ಮಾಡಿದ್ದರು ಎಂದು ಚಿಂತಕ ಮಹಾಲಿಂಗಪ್ಪ ಆಲಬಾಳ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಘಟಪ್ರಭಾದ ಎನ್.ಎಸ್.ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಮೀಸಲಾತಿ ಜನಕ, ಸಾಮಾಜಿಕ ಹರಿಕಾರ ಶಾಹು ಮಹಾರಾಜರ 147ನೇ ಜಯಂತಿಯನ್ನು ಆಚರಿಸಲಾಯಿತು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಹು ಮಹಾರಾಜರ ಕುರಿತು ವಿಚಾರವಾದಿ ಮಹಾಲಿಂಗಪ್ಪ ಅಲಬಾಳ ಅವರು ಉಪನ್ಯಾಸ ನೀಡಿದರು.
ಶೂದ್ರ, ಹಿಂದುಳಿದ, ದಲಿತ ಸಮುದಾಯ ಮತ್ತು ಮಹಿಳೆಯರಿಗೆ ಬಿಡುಗಡೆಯ ದಾರಿಯನ್ನು ಮೊಟ್ಟಮೊದಲು ತೋರಿಸಿದವರು ಶಾಹೂ ಮಹಾರಾಜ್. ಶಾಹೂ ಮಹಾರಾಜರು ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ನೆರವು ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ರವೀಂದ್ರ ನಾಯ್ಕರ್, ಶಾಹೂ ಮಹಾರಾಜರು ಕಾನೂನು ರೂಪಿಸಲು ಸಾಧ್ಯವಾಗಿದ್ದು ಏಕೆ? ಅವರು ಕಾನೂನು ರೂಪಿಸಿದ್ದರಿಂದ ಲಾಭ ಆಗಿರುವುದು ಯಾರಿಗೆ ಎಂದು ನಾವು ಸೂಕ್ಷ್ಮವಾಗಿ ಗಮನಹರಿಸಬೇಕು ಎಂದರು.
ಇಂದು ವಿದ್ಯೆ, ಉದ್ಯೋಗ, ಆಸ್ತಿ ಹಕ್ಕನ್ನು ಪಡೆದು ಬೆಳೆದಿರುವ ಲಿಂಗಾಯತ, ಒಕ್ಕಲಿಗ ಸಮುದಾಯದವರು ಶಾಹೂ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಲಾಭ ಪಡೆದಿದ್ದಾರೆ. ಶಾಹೂ ಮಹಾರಾಜರ ಕೈಯಲ್ಲಿ ಅಧಿಕಾರ ಇದ್ದುದರಿಂದ ಅವರು ಕಾಯ್ದೆಗಳನ್ನು ರೂಪಿಸಲು, ಜಾರಿಗೆ ತರಲು ಸಾಧ್ಯವಾಯಿತು. ಇದನ್ನು ಎಲ್ಲರೂ ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊರೊನಾಗೆ ಬಲಿಯಾದ ಮಾನವ ಬಂಧುತ್ವ ವೇದಿಕೆ ಸಂಚಾಲಕರಿಗೆ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಜೀವನ ಮಾಂಜ್ರೇಕರ್, ಭರಮಣ್ಣ ತೋಳಿ, ಡಾ.ಪ್ರದೀಪ ಮಾಲ್ಗುಡಿ, ಬಾಲಕೃಷ್ಣ ನಾಯಕ ಮತ್ತು ಉಷಾ ನಾಯ್ಕ ಭಾಗವಹಿಸಿದ್ದರು.
ಮಾನವ ಬಂಧುತ್ವ ವೇದಿಕೆಯ ಬೆಳಗಾವಿ ಜಿಲ್ಲಾ ಸಂಚಾಲಕರು, ಕಾರ್ಯಕರ್ತರು ಭಾಗವಹಿಸಿದರು. ಸುರೇಶ ಶಿಕಾರಿಪುರ ಅವರು ನಿರೂಪಣೆ ಮಾಡಿದರು.