“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ ಸುಗಮವಾಗುತ್ತದೆ. ನಾವು ಹೊಸದೊಂದು ಸಮಾಜವನ್ನು ಕಟ್ಟಬೇಕಾದರೆ ಮಾನವ ಇತಿಹಾಸವನ್ನು ಮೆಲುಕುಹಾಕಲೇಬೇಕು. ಮಾನವ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ನಾವು ಅನೇಕ ಕ್ರಾಂತಿಗಳನ್ನು ಕಾಣುತ್ತೇವೆ. ಪ್ರತಿಯೊಂದು ಕ್ರಾಂತಿಯೂ ಒಂದಲ್ಲಾ ಒಂದು ರೀತಿಯ ಬದಲಾವಣೆಯನ್ನು ತಂದಿದೆ. ಕ್ರಮೇಣ ಈ ಬದಲಾವಣೆಗಳನ್ನು ಜಾರಿಗೊಳಿಸುವ ಸ್ವರೂಪ ಪಡೆದುಕೊಂಡಾಗ ಅವುಗಳು ಕಾನೂನುಗಳಾಗುತ್ತವೆ.
ಸಾಲ್ಮಂಡ್ ಎಂಬ ಹೆಸರಾಂತ ನ್ಯಾಯಶಾಸ್ತ್ರ ತಜ್ಞರ ಅಭಿಪ್ರಾಯದಂತೆ ಸಂಪ್ರದಾಯಗಳು, ರಚನೆಯಾದ ಶಾಸನಗಳು ಮತ್ತು ನ್ಯಾಯಾಲಯದ ತೀರ್ಪುಗಳು ನ್ಯಾಯಶಾಸ್ತ್ರದ (Jurisprudence) ಬೆಳವಣಿಗೆಗೆ ಕಾರಣ. ವಿಜ್ಞಾನದ ಬೆಳವಣಿಗೆ ಹೊಸ ರಾಜಕೀಯ ಸಿದ್ಧಾಂತಗಳಿಗೆ ದಾರಿಮಾಡಿಕೊಟ್ಟಿದೆ. ಹೊಸ ರಾಜಕೀಯ ಸಿದ್ಧಾಂತಗಳು ಹೊಸದಾದ ಮಾನವ ಹಕ್ಕುಗಳಿಗೆ ಜನ್ಮ ನೀಡಿದವು. ಅದೇ ರೀತಿ ಕೆಲವು ಪ್ರಮುಖ ಕ್ರಾಂತಿಗಳಿಂದ ಹುಟ್ಟಿದ ಕಾನೂನುಗಳೂ ಸಹ ನ್ಯಾಯಶಾಸ್ತ್ರದ ಬೆಳವಣಿಗೆಗೆ ಕೊಡುಗೆಯನ್ನು ನೀಡಿವೆ ಎಂಬ ಸತ್ಯವನ್ನು ನಾವು ಮರೆಯಬಾರದು.
13ನೇ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡಿನ ದೊರೆ ಕಿಂಗ್ ಜಾನ್ ಮತ್ತು ಅಲ್ಲಿನ ಜಹಗೀರುದಾರರಿಗೆ ನಡೆದ ಸಂಘರ್ಷದ ಫಲವಾಗಿ ಜಗತ್ತಿನ ಮೊದಲನೇ ಸಂವಿಧಾನವೆಂದು ಕರೆಯಲ್ಪಡುವ ಮ್ಯಾಗ್ನಕಾರ್ಟ ಕ್ರಿ.ಶ. 1215ರಲ್ಲಿ ರಚನೆಯಾಯಿತು. 20ನೇ ಶತಮಾನದ ನ್ಯಾಯಾಂಗದ ದಂತಕತೆಯೆಂದು ಕರೆಯಲ್ಪಡುವ ಇಂಗ್ಲೆಂಡಿನ ನ್ಯಾಯಮೂರ್ತಿ “ಲಾರ್ಡ್ ಡೆನ್ನಿಂಗ್” ಅವರು ಮ್ಯಾಗ್ನಕಾರ್ಟದ ಬಗ್ಗೆ ಹೀಗೆ ಹೇಳಿದ್ದಾರೆ:
“The greatest constitutional document of all times….. the foundation of the freedom of the individual against the arbitrary of despot.”
ಈ ಮ್ಯಾಗ್ನಕಾರ್ಟದ ಪ್ರಮುಖ ಅಂಶಗಳೆಂದರೆ:
- ಕಿಂಗ್‌ಜಾನ್ ದೊರೆಯ ಅಧಿಕಾರಕ್ಕೆ ಕಡಿವಾಣ ಹಾಕಲಾಯಿತು.
- ನ್ಯಾಯಾಂಗವನ್ನು ಬಲಪಡಿಸಲಾಯಿತು.
- ಗುಲಾಮರನ್ನು ಹೊರತುಪಡಿಸಿ ಉಳಿದವರನ್ನು ಶಿಕ್ಷಿಸಬೇಕಾದರೆ ಅಥವಾ ದಂಡ ವಿಧಿಸಬೇಕಾದರೆ ನ್ಯಾಯಾಂಗದ ಪ್ರಕ್ರಿಯೆಗೆ ಒಳಪಡಿಸುವುದನ್ನು ಕಡ್ಡಾಯ ಮಾಡಲಾಯಿತು.
- ಜಹಗೀರುದಾರರಿಗೆ ಕೆಲವು ರಾಜಕೀಯ ಹಕ್ಕುಗಳನ್ನು ನೀಡಲಾಯಿತು.
- ನ್ಯಾಯ ಪಡೆಯುವ ಹಕ್ಕನ್ನು ಯಾರಿಗೂ ಮಾರುವುದಿಲ್ಲ, ವಿಳಂಬ ಮಾಡುವುದಿಲ್ಲ, ಯಾರಿಗೂ ನಿರಾಕರಿಸುವುದಿಲ್ಲವೆಂದು ಘೋಷಿಸಲಾಯಿತು. (To no one will we sell, to no one deny or delay right of justice)
1776ರಲ್ಲಿ ನಡೆದ ಅಮೇರಿಕಾ ದೇಶದ ಮಹಾನ್ ಕ್ರಾಂತಿಯ ಮಹಾನ್ ಘೋಷಣೆಯೆಂದರೆ, ‘ಎಲ್ಲಾ ಜನರನ್ನು ಸಮಾನವಾಗಿ ಸೃಷ್ಟಿಸಲಾಗಿದೆ’ (All men are created equal) ಈ ಕ್ರಾಂತಿಯ ನಂತರ ಅಮೇರಿಕಾದ ವಿವಿಧ ರಾಜ್ಯಗಳು ತಮ್ಮ ತಮ್ಮ ಸಂವಿಧಾನಗಳನ್ನು ರಚಿಸಿಕೊಂಡವು. ನಂತರದ ದಿನಗಳಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನವು ರಚನೆಯಾಯಿತು. ಈ ಸಂವಿಧಾನಗಳ ಮುಖ್ಯಾಂಶಗಳೆಂದರೆ:
- ಅಮೇರಿಕ ದೇಶದಲ್ಲಿ ವಸಾಹತುಶಾಹಿ ಪದ್ಧತಿಯನ್ನು ರದ್ದು ಮಾಡಲಾಯಿತು.
- ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು.
- ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಪ್ರತ್ಯೇಕ ಮತ್ತು ಸ್ವತಂತ್ರ ಅಂಗಗಳನ್ನು ರಚಿಸಲಾಯಿತು.
- ಕೆಲವರಿಗೆ ರಾಜಕೀಯ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯ, ವಾಸಸ್ಥಳದ ಸ್ವಾತಂತ್ರ್ಯ, ಸಂಚರಿಸುವ ಸ್ವಾತಂತ್ರ್ಯ ಇತ್ಯಾದಿಗಳನ್ನು ನೀಡಲಾಯಿತು.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಗುಲಾಮ ಪದ್ಧತಿ, ವರ್ಣಬೇಧ, ವರ್ಗ ಬೇಧ, ಲಿಂಗ ಬೇಧ ಇತ್ಯಾದಿಗಳು ಮುಂದುವರೆದವು.
ಫ್ರೆಂಚ್ ಮಹಾಕ್ರಾಂತಿ 1789ರಲ್ಲಿ ಪ್ರಾರಂಭವಾಗಿ 1799ರಲ್ಲಿ ಕೊನೆಗೊಂಡಿತು. ಈ ಮಹಾ ಕ್ರಾಂತಿಯ ಮಹಾನ್ ಘೋಷಣೆಯೆಂದರೆ, ‘ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ’ ಈ ಕ್ರಾಂತಿಯ ಪರಿಣಾಮವಾಗಿ ಬೆಳೆದು ಬಂದ ಕಾನೂನುಗಳೆಂದರೆ:
- ರಾಜರ ಮತ್ತು ಪಾಳೆಗಾರರ ಆಳ್ವಿಕೆಯನ್ನೂ ರದ್ದು ಮಾಡಲಾಯಿತು.
- ಚುನಾಯಿತ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು.
- ಪಾಳೆಗಾರರಿಗೆ ಮತ್ತು ಕ್ರೈಸ್ತ ದೇವಾಲಯಗಳಿಗೆ ಕೊಡಬೇಕಾದ ಸಾಲವನ್ನು ಮನ್ನಾ ಮಾಡಲಾಯಿತು.
- ರಾಜವಂಶಸ್ಥರ ಮತ್ತು ಕ್ರೈಸ್ತ ದೇವಾಲಯಗಳಿಗೆ ಸೇರಿದ ಭೂಮಿಯನ್ನು ರಾಷ್ಟ್ರೀಕರಣ ಮಾಡಲಾಯಿತು.
- ಖಾಸಗಿ ಕಂದಾಯ ವಸೂಲಾತಿ ಪದ್ಧತಿ ರದ್ದುಪಡಿಸಲಾಯಿತು.
- ಜನಸಾಮಾನ್ಯರಿಗೆ ರಾಜಕೀಯ ಹಕ್ಕುಗಳನ್ನು ನೀಡಲಾಯಿತು.
1917ರಲ್ಲಿ ನಡೆದ ರಷ್ಯಾ ದೇಶದ ಕ್ರಾಂತಿಯ ಮಹಾನ್ ಘೋಷಣೆ ‘ಸಾಮರ್ಥ್ಯಕ್ಕೆ ಅನುಸಾರವಾಗಿ ದುಡಿಯಬೇಕು, ಅಗತ್ಯಕ್ಕೆ ಅನುಸಾರವಾಗಿ ಪಡೆಯಬೇಕು’ (Each according to his ability, cach according to his need).
ರಷ್ಯಾ ದೇಶದ ಈ ಕ್ರಾಂತಿ ಜಗತ್ತಿನ ಚಿಂತನೆಯನ್ನೇ ಬದಲಾಯಿಸಿತು. ಈ ಕ್ರಾಂತಿಯ ಪರಿಣಾಮವಾಗಿ ಬೆಳೆದು ಬಂದ ಕಾನೂನುಗಳೆಂದರೆ:
- ಝರ್ ದೊರೆಗಳ ಆಡಳಿತ ಕೊನೆಗೊಂಡು, ಮೊದಲನೇ ಬಾರಿಗೆ ಜಗತ್ತಿನಲ್ಲಿ ಕಾರ್ಮಿಕರ ಮುಖಂಡತ್ವದ ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬಂದಿತು.
- ಸಮಾಜವಾದಿ ಸಂವಿಧಾನ ರಚಿಸಲಾಯಿತು.
- ರಾಜ್ಯವೆಂದರೆ ಕೇವಲ ದೇಶದ ಗಡಿಯನ್ನು ರಕ್ಷಿಸುವುದು, ಸಾಧ್ಯವಾದರೆ ಗಡಿಯನ್ನು ವಿಸ್ತರಿಸುವುದು ಮತ್ತು ದೇಶದಲ್ಲಿ ತಲೆ ಎತ್ತುವ ದಂಗೆಗಳನ್ನು ಸದೆಬಡಿಯುವುದು ಎಂಬ ಅರ್ಥವನ್ನು ಮರುವ್ಯಾಖ್ಯಾನ ಮಾಡಲಾಯಿತು. ಜನಸಾಮಾನ್ಯರ ಕನಿಷ್ಠ ಅಗತ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ಇತ್ಯಾದಿಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಎಂಬ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು.
- ಕೇವಲ ರಾಜಕೀಯ ಹಕ್ಕುಗಳನ್ನು ನೀಡಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ರಾಜಕೀಯ ಹಕ್ಕುಗಳ ಜೊತೆಗೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ನೀಡಿದರೆ ಮಾತ್ರ ಪ್ರಜಾಪ್ರಭುತ್ವ ಪರಿಪೂರ್ಣವಾಗುತ್ತದೆ ಎಂಬ ತಾತ್ಪರ್ಯವನ್ನು ನೀಡಲಾಯಿತು.
- ಭೂಮಿ, ನೀರು, ಖನಿಜ ಸಂಪತ್ತು ಇತರೆ ನೈಸರ್ಗಿಕ ಸಂಪತ್ತು ಸಮಾಜಕ್ಕೆ ಸೇರಿದ್ದು, ಪ್ರತಿಯೊಬ್ಬ ಪ್ರಜೆಗೂ ಇದರಲ್ಲಿ ಹಕ್ಕು ಇದೆ ಎಂದು ಘೋಷಿಸಲಾಯಿತು.
- ವರ್ಗ ಬೇಧ, ವರ್ಣ ಬೇಧ ಮತ್ತು ಲಿಂಗ ಬೇಧವನ್ನು ರದ್ದು ಮಾಡಿ ಸಮಾನತೆಯನ್ನು ಸಾರಲಾಯಿತು.
- ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸಲಾಯಿತು. ಧರ್ಮವನ್ನು ಒಬ್ಬ ವ್ಯಕ್ತಿಯ ಖಾಸಗಿ ಹಕ್ಕನ್ನಾಗಿ ಮಾಡಲಾಯಿತು. ನಿಜವಾದ ಅರ್ಥದಲ್ಲಿ ಜಾತ್ಯತೀತತೆ ಜಾರಿಗೆ ಬಂತು.
- ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಇತ್ಯಾದಿಗಳು ಮೂಲಭೂತ ಹಕ್ಕುಗಳಾದವು.
- ದುಡಿದು ತಿನ್ನಬೇಕು ಎಂಬ ಕರ್ತವ್ಯವನ್ನು ಘೋಷಿಸಲಾಯಿತು.
- ಜನರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರಲಾಯಿತು.
- ಜಗತ್ತಿನ ಎಲ್ಲಾ ಸ್ವಾತಂತ್ರ್ಯ ಹೋರಾಟಗಳಿಗೆ ಮತ್ತು ವಿಮೋಚನಾ ಹೋರಾಟಗಳಿಗೆ ಬೆಂಬಲ ಸೂಚಿಸಲಾಯಿತು.
ಸಾಧನೆಗಳು
- ರಷ್ಯಾ ದೇಶ ಬಹುಜನಾಂಗೀಯ ದೇಶವಾಗಿತ್ತು ಮತ್ತು ಬೇರೆ ವಿದೇಶಿ ಆಧಿಪತ್ಯಕ್ಕೊಳಪಟ್ಟು ಗುಲಾಮಿ ರಾಜ್ಯಗಳಿಂದ ಕೂಡಿದ ದೇಶವಾಗಿತ್ತು. ಇಂತಹ ದೇಶವನ್ನು ಒಟ್ಟುಗೂಡಿಸಿ ಒಂದು ರಾಜಕೀಯ ಆಡಳಿತಕ್ಕೆ ಒಳಪಡಿಸಿ, ಸಂಯುಕ್ತ ಸಮಾಜವಾದಿ ಒಕ್ಕೂಟ ರಚನೆ ಮಾಡಲಾಯಿತು.
- ದೇಶದ ಎಲ್ಲರಿಗೂ ಉದ್ಯೋಗ, ಕಡಿಮೆ ಬಾಡಿಗೆಯಲ್ಲಿ ವಸತಿ, ಉಚಿತ ವೈದ್ಯಕೀಯ ಸೌಲಭ್ಯಗಳು, ಎಲ್ಲರಿಗೂ ಆಹಾರ, ವಿದ್ಯೆ, ಬಟ್ಟೆ ಇತ್ಯಾದಿಗಳನ್ನು ಒದಗಿಸಲಾಯಿತು.
- ಎಲ್ಲ ಗಣರಾಜ್ಯಗಳಿಗೂ ಸ್ವಾಯತ್ತ ಆಡಳಿತ ಮತ್ತು ಅಲ್ಲಿಯ ಜನಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಮಾಡಲಾಯಿತು.
- ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿ ಬೇರೆ ದೇಶಗಳಿಗೆ ಕಡಿಮೆ ಇಲ್ಲದಂತಹ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ನಿರ್ಮಾಣ ಮಾಡಲಾಯಿತು.
ಭಾರತ ದೇಶದ ಮೇಲಾದ ಪರಿಣಾಮ
- 1917ರ ರಷ್ಯಾ ಕ್ರಾಂತಿ ಭಾರತ ದೇಶದ ಸ್ವಾತಂತ್ರ ಹೋರಾಟಕ್ಕೆ ಸ್ಪೂರ್ತಿಯನ್ನು ನೀಡಿತು. ಭಗತ್‌ಸಿಂಗ್‌ರಂಥ ಯುವ ಜನರು ರಷ್ಯಾ ಕ್ರಾಂತಿಯಿಂದ ಪ್ರೇರಣೆ ಪಡೆದು ಬಲಿದಾನಗಳನ್ನು ಮಾಡಿದರು.
- ಸ್ವಾತಂತ್ರ್ಯದ ನಂತರ ಅದು ನಮ್ಮ ಸಂವಿಧಾನ ರಚನಾಕಾರರ ಮೇಲೆ ಪ್ರಭಾವ ಬೀರಿತು. ಜನರ ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳನ್ನು ನೀಡುವಲ್ಲಿ ಕಾರಣವಾಯಿತು.
- ರಷ್ಯಾ ದೇಶದ ಪಂಚವಾರ್ಷಿಕ ಯೋಜನೆಗಳ ಅನುಕರಣೆಯನ್ನು ಭಾರತದಲ್ಲಿ ಮಾಡಲಾಯಿತು.
- ಸ್ವಾವಲಂಬನೆ ನೀತಿಯ ಯಶಸ್ಸಿಗೆ ಸೋವಿಯತ್ ದೇಶ ಮರೆಯಲಾಗದ ಬೆಂಬಲ ಸೂಚಿಸಿತಲ್ಲದೆ ವಿದ್ಯುಚ್ಛಕ್ತಿ, ಉಕ್ಕು ಕಾರ್ಖಾನೆ, ಅಂತರಿಕ್ಷ ವಿಜ್ಞಾನ, ರಕ್ಷಣಾ ವ್ಯವಸ್ಥೆ ಇತ್ಯಾದಿ ಹಲವು ಕ್ಷೇತ್ರಗಳಿಗೆ ತಂತ್ರಜ್ಞಾನ ಮತ್ತು ಆರ್ಥಿಕ ನೆರವನ್ನು ನೀಡಿತು.
ಜಗತ್ತಿನ ಮೇಲೆ ಆದ ಪರಿಣಾಮ
- ವಿಶ್ವದಲ್ಲಿ ಮೊದಲನೇ ಬಾರಿಗೆ ಸೋವಿಯತ್ ರಷ್ಯಾ ಬೇರೆ ದೇಶಗಳ ಸ್ವಾತಂತ್ರ್ಯ ಹೋರಾಟಗಳಿಗೆ ಮತ್ತು ವಿಮೋಚನಾ ಚಳುವಳಿಗಳಿಗೆ ತನ್ನ ಸಂವಿಧಾನದಲ್ಲಿ ಬೆಂಬಲ ಸೂಚಿಸಿ ನೆರವನ್ನೂ ಸಹ ನೀಡಿತು. ಇದರ ಪರಿಣಾಮವಾಗಿ 1917ರಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ವತಂತ್ರ ರಾಷ್ಟ್ರಗಳಿದ್ದ ವಿಶ್ವದಲ್ಲಿ ಇಂದು 195 ಸ್ವತಂತ್ರ ದೇಶಗಳಿವೆ.
- 1939 ರಿಂದ 1945 ರವರೆಗೆ ನಡೆದ ಎರಡನೇ ಜಾಗತಿಕ ಯುದ್ಧದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಲ್ಲಿ ರಷ್ಯಾದ ಜನತೆ ಮಹತ್ತರ ತ್ಯಾಗಮಾಡಿ ಜಗತ್ತನ್ನು ಕಾಪಾಡಿದರು.
- ವಿಶ್ವಸಂಸ್ಥೆಯಲ್ಲಿ ಸೋವಿಯತ್ ದೇಶ ಅತಿಹೆಚ್ಚು ಶಾಂತಿಯ ನಿರ್ಣಯಗಳನ್ನು ಮಂಡಿಸಿ, ಜಾಗತಿಕ ಮಟ್ಟದಲ್ಲಿ ವಿಶ್ವಶಾಂತಿ ಸ್ಥಾಪನೆಗೆ ಬಹುದೊಡ್ಡ ಚಳುವಳಿಯನ್ನು ರೂಪಿಸಿ ಸಾಮ್ರಾಜ್ಯಶಾಹಿ ಯುದ್ಧಕೋರ ನೀತಿಯನ್ನು ಹಿಮ್ಮೆಟ್ಟಿಸಿತು.
- ಸೋವಿಯತ್ ದೇಶದ ಕಲ್ಯಾಣ ರಾಜ್ಯದ ಕಲ್ಪನೆ ಮತ್ತು ಪ್ರಜಾಪ್ರಭುತ್ವಕ್ಕೆ ನೀಡಿದ ಹೊಸ ತಾತ್ಪರ್ಯ ಜಗತ್ತಿನ ಬೇರೆ ದೇಶಗಳು ಸಹ ಆ ಬಗ್ಗೆ ಚಿಂತಿಸುವಂತೆ ಮಾಡಿತಲ್ಲದೆ, ತಮ್ಮ ತಮ್ಮ ದೇಶಗಳಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳನ್ನು ಪಡೆಯುವಲ್ಲಿ ಪ್ರೇರಕಶಕ್ತಿಯಾಗಿ ಕೆಲಸ ಮಾಡಿತು.
- ಜಗತ್ತಿನ ಶ್ರಮಜೀವಿಗಳ ಘನತೆಯನ್ನು ಹೆಚ್ಚಿಸುವಲ್ಲಿ ರಷ್ಯಾದ ಕ್ರಾಂತಿ ಮಹತ್ತರ ಪಾತ್ರ ವಹಿಸಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕಾರ್ಮಿಕರು ಸಂಘಟಿತರಾಗಿ, ಹೋರಾಟಗಳನ್ನು ನಡೆಸಿ ತಮ್ಮ ಜೀವನದ ಸ್ಥಿತಿಗತಿಗಳನ್ನು ಉತ್ತಮಗೊಳಿಸಿಕೊಂಡರು.
- ಸಮಾಜವಾದದ ಚಿಂತನೆ ಬೆಳೆದು ಜಗತ್ತಿನಾದ್ಯಂತ ವರ್ಣ ಬೇಧ ಮತ್ತು ಲಿಂಗ ಬೇಧ ಹಿಮ್ಮೆಟ್ಟಿಸುವಲ್ಲಿ ಸಹಾಯ ಮಾಡಿದೆ.
ಸೋವಿಯತ್ ದೇಶದ ವಿಘಟನೆ:
ಬಂಡವಾಳಶಾಹಿ ರಾಷ್ಟ್ರಗಳು ಕಾಲ್ಕೆರೆದು ಕೆಣಕಿದಾಗ ಅನಿವಾರ್ಯವಾಗಿ ಅವುಗಳೊಡನೆ ಸೋವಿಯತ್ ದೇಶ ಶಸ್ತ್ರಾಸ್ತ್ರ ತಯಾರಿಕೆಯ ಸ್ಪರ್ಧೆಗೆ ಇಳಿಯಬೇಕಾಯಿತು. ಇದಕ್ಕಾಗಿ ತನ್ನ ಅಪಾರವಾದ ಸಂಪನ್ಮೂಲಗಳನ್ನು, ಖನಿಜ ಸಂಪತ್ತು ಮತ್ತು ತಜ್ಞರನ್ನು ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸಿಕೊಳ್ಳಬೇಕಾಯಿತು. ಇದರಿಂದ ಜೀವನಾವಶ್ಯಕ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುವುದು ಕಷ್ಟವಾಗತೊಡಗಿತು. ಸುಖಸಮೃದ್ಧಿಗಳನ್ನು ಜನತೆಗೆ ಒದಗಿಸಿದ ಸೋವಿಯತ್ ದೇಶ ಕ್ರಮೇಣ ಆರ್ಥಿಕ ಬಿಕ್ಕಟ್ಟಿಗೊಳಗಾಗುತ್ತ ಬಂದಿತು. ಸಮರ್ಥವಾದ ಆರ್ಥಿಕ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಲು ಅಲ್ಲಿನ ನಾಯಕರುಗಳಿಗೆ ಅಸಾಧ್ಯವಾಯಿತು. ಜನರಲ್ಲಿ ಅತೃಪ್ತಿ ಅಸಮಾಧಾನ ಹೆಚ್ಚಿತು. ಈ ಅತೃಪ್ತಿಯು ದೇಶದಲ್ಲಿ ಜನಾಂಗೀಯವಾದ, ಕೋಮುವಾದ ಹಾಗೂ ಉಪರಾಷ್ಟ್ರೀಯತಾ ವಾದಗಳಿಗೆ ಬಲಿಯಾಗುವಂತೆ ಮಾಡಿತು. ಕಾರ್ಮಿಕ ವರ್ಗದ ಸರ್ವಾಧಿಕಾರ ಕೆಲವೇ ನಾಯಕರ ಹಾಗೂ ಅಧಿಕಾರಿಗಳ ಕೈಯಲ್ಲಿ ಕೇಂದ್ರೀಕೃತವಾಯಿತು. ಶಿಕ್ಷಣ, ಸಾಹಿತ್ಯ ಮತ್ತು ಸಮೂಹ ಮಾಧ್ಯಮಗಳಲ್ಲಿ ಸಮಾಜವಾದದ ಚಿಂತನೆಗೆ ಆದ್ಯತೆ ಕಡಿಮೆಯಾಯಿತು. ವರ್ಗ ದೃಷ್ಟಿಕೋನ ಜೀವನದ ಪ್ರಮುಖ ಅಂಶವೆಂಬ ಕಲ್ಪನೆ ಗೋರ್ಬಚೆವ್ ನಾಯಕತ್ವದಲ್ಲಿ ಮಾಯವಾಯಿತು. ಪೆರಿಸ್ಕೊಯಿಕ ಹಾಗೂ ಗ್ಲಾಸನೋಸ್ತ ಎಂಬ ಹೊಸ ಚಿಂತನೆ ಬಂಡವಾಳಶಾಹಿಗೆ ಹೊಸ ಹೊಸ ರಿಯಾಯಿತಿಗಳನ್ನು ಕೊಡುತ್ತಲೇ ಹೋಯಿತು. ಸಮಾಜವಾದದಲ್ಲಿ ಉದಾರತೆಯನ್ನು ತರುವ ಹೆಸರಿನಲ್ಲಿ ಸಮಾಜವಾದದ ಚಿಂತನೆಯನ್ನೇ ಹಂತಹಂತವಾಗಿ ಬಿಟ್ಟುಕೊಡಲಾಯಿತು. ಈ ಎಲ್ಲ ಕಾರಣಗಳ ಪರಿಣಾಮವಾಗಿ ಸೋವಿಯತ್ ರಷ್ಯಾವನ್ನೂ ಒಳಗೊಂಡಂತೆ ವಿಶ್ವದೆಲ್ಲೆಡೆ ಸಮಾಜವಾದಿ ಶಕ್ತಿಗಳಿಗೆ ಸೋಲು, ಹಿನ್ನಡೆಗಳುಂಟಾಗುವಂತಾಯಿತು.
ಇಂದಿನ ಪರಿಸ್ಥಿತಿ
- 1991ರಲ್ಲಿ ಸೋವಿಯತ್ ದೇಶದ ವಿಘಟನೆಯ ನಂತರ ವಿಶ್ವದಲ್ಲಿ ಶೀತಲಯುದ್ಧ ಕೊನೆಯಾಯಿತೆಂದು ಸಾರಲಾಯಿತು. ಆದರೆ ಇಂದು ಯುದ್ಧ ಸಾಮಗ್ರಿಗಳನ್ನು ತಯಾರು ಮಾಡುವ ಮತ್ತು ಮಾರಾಟ ಮಾಡುವ ಉದ್ಯಮ ಬಹುದೊಡ್ಡ ಉದ್ಯಮವಾಗಿದೆ ಮತ್ತು ಹೆಚ್ಚು ಲಾಭಗಳಿಸುವ ಉದ್ಯಮವೂ ಆಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ತಮ್ಮ ವಾರ್ಷಿಕ ಮುಂಗಡ ಪತ್ರಗಳಲ್ಲಿ ರಕ್ಷಣಾ ಇಲಾಖೆಗೆ ಅತಿ ಹೆಚ್ಚು ಹಣವನ್ನು ಮೀಸಲಿಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 1.8 ಟ್ರಿಲಿಯನ್ ಡಾಲರ್ ಗಳಷ್ಟು ಹಣವನ್ನು ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ಸೈನ್ಯವನ್ನು ಕಟ್ಟಲು ಜಗತ್ತಿನ ದೇಶಗಳು ಖರ್ಚು ಮಾಡುತ್ತಿವೆ. ಹಿಂದೆಂದಿಗಿಂತ ಇಂದು ಜಗತ್ತಿನ ಜನರು ಯುದ್ಧ ಭೀತಿಯಿಂದ ಹೆಚ್ಚು ನರಳುತ್ತಿದ್ದಾರೆ.
- 1991ರಲ್ಲಿ ಸೋವಿಯತ್ ದೇಶದ ವಿಘಟನೆಯ ನಂತರ ಜಾಗತೀಕರಣ ಪ್ರಾರಂಭವಾಯಿತು. ಜಾಗತೀಕರಣವೆಂದರೆ ಖಾಸಗೀಕರಣ, ಉದಾರೀಕರಣ ಮತ್ತು ಮುಕ್ತವಾದ ಮಾರುಕಟ್ಟೆ. ಇದರ ಪರಿಣಾಮವಾಗಿ ಸರ್ಕಾರಗಳ ಅಧಿಕಾರವು ಕ್ರಮೇಣ ಕಡಿಮೆಯಾಗುತ್ತಿದೆ. ಒಂದು ನಿರ್ದಿಷ್ಟ ಭೂಪ್ರದೇಶದ ಮೇಲಿರುವ ರಾಜಕೀಯ ಅಧಿಕಾರದ ಸ್ಥಾನವನ್ನು ಬಹುರಾಷ್ಟ್ರೀಯ ಕಂಪನಿಗಳು ಆಕ್ರಮಿಸುವಂತಾಗಿದೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ನಾಶಗೊಳ್ಳುವಂತಾಗಿದೆ. ಜಾಗತೀಕರಣವೆಂದರೆ ಮೂರನೇ ಜಗತ್ತಿನ ರಾಷ್ಟ್ರಗಳು ಏನನ್ನೂ ಉತ್ಪಾದಿಸಬಾರದು ಮತ್ತು ಅವರ ಪ್ರತಿಭೆ ಮತ್ತು ಸೃಜನಶೀಲತೆ ನಾಶವಾಗಬೇಕು ಎಂಬಂತಾಗಿದೆ. ಮಾನವೀಯ ಮೌಲ್ಯಗಳಾದ ತ್ಯಾಗ, ತಾಳ್ಮೆ, ಸಹನೆ, ಸಹಕಾರ ಜೀವನ ಕಡಿಮೆಯಾಗುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕವಾದ ವ್ಯಾಪಾರೀಕರಣ ತಲೆದೋರಿದೆ. ಜಾಗತೀಕರಣ ಸಂಸ್ಕೃತಿ ಜನರನ್ನು ಅವರ ದಿನನಿತ್ಯದ ವಾಸ್ತವತೆಗಳಿಂದ ದೂರಮಾಡುತ್ತಿದೆ. ಜನರಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ಕೊಂದುಹಾಕುತ್ತಿದೆ. ಜಾಗತೀಕರಣ ಕೇವಲ ಮಾರುಕಟ್ಟೆಗಳನ್ನು ನಿಯಂತ್ರಿಸುತ್ತಿಲ್ಲ. ಜನರ ಮೆದುಳನ್ನು ಸಹ ನಿಯಂತ್ರಿಸುತ್ತಿದೆ.
- ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ನಡೆದಿವೆ. ಇದರ ಪರಿಣಾಮವಾಗಿ ಅಪಾರ ಉತ್ಪಾದನೆಯಾಗಿದೆ. ಜಗತ್ತು ಹಿಂದೆಂದಿಗಿಂತ ಇಂದು ಬಹಳ ಶ್ರೀಮಂತವಾಗಿದೆ. ಆದರೆ ಈ ಸಂಪತ್ತು ಯಾರ ಹಿಡಿತದಲ್ಲಿದೆ ಎಂಬುದು ಪ್ರಶ್ನೆ. ಜಗತ್ತಿನ ಒಟ್ಟು ಸಂಪತ್ತಿನ ಶೇ. 60 ರಷ್ಟು ಸಂಪತ್ತು ಶೇ. 1 ರಷ್ಟು ಜನರ ಕೈಯಲ್ಲಿದೆ. ಶೇ. 20 ರಷ್ಟು ಸಂಪತ್ತು ಶೇ. 9 ರಷ್ಟು ಜನರ ಕೈಯಲ್ಲಿದೆ, ಉಳಿದ ಶೇ. 20 ರಷ್ಟು ಸಂಪತ್ತು ಶೇ. 90 ರಷ್ಟು ಜನರ ಕೈಯಲ್ಲಿದೆ. ಹೆಚ್ಚು ಸಂಪತ್ತು ಉತ್ಪಾದನೆಯಾಗಿ ಶ್ರೀಮಂತರ ಕೈಸೇರಿದರೆ ಅದು ಹನಿಹನಿಯಾಗಿ ಹರಿದು ಬಡವರ ಕೈಸೇರುತ್ತದೆ ಎಂಬ ವಾದ ಸುಳ್ಳಾಗಿದೆ. ಈ ರೀತಿಯ ಅಸಮಾನ ಜಗತ್ತನ್ನು ಕಟ್ಟಲಾಗಿದೆ. ಜಗತ್ತಿನ ಬಹು ಸಂಖ್ಯಾತ ಜನರನ್ನು ಹಸಿವು, ಬಡತನ, ನಿರುದ್ಯೋಗ, ಅಭದ್ರತೆ ಇತ್ಯಾದಿಗಳು ಕಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಹಿಂಸೆ, ಲೂಟಿ, ದರೋಡೆ, ದಂಗೆ ಇತ್ಯಾದಿಗಳು ಜಗತ್ತನ್ನು ಕಾಡುತ್ತವೆ.
- ಜಗತ್ತಿನಾದ್ಯಂತ ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ರಾರಾಜಿಸುತ್ತಿವೆ. ಜಗತ್ತೇ ಒಂದು ಹಳ್ಳಿಯೆಂದು ಹೇಳುತ್ತಲೇ ಆ ಹಳ್ಳಿಯ ಸರದಾರ ನಾನೇ ಎಂದು ಬೀಗುತ್ತಿವೆ. ಜಗತ್ತಿನ ಪೊಲೀಸು ಕೆಲಸ ನಮ್ಮ ಗುತ್ತಿಗೆ ಎಂದು ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿವೆ. ತಮ್ಮ ಮೂಗಿನ ನೇರವಾಗಿ ಯಾರು ಕುಣಿಯುವುದಿಲ್ಲವೋ ಅಂಥ ರಾಷ್ಟ್ರಗಳ ಮೇಲೆ ಆರ್ಥಿಕ ದಿಗ್ಬಂಧನವನ್ನು ಹೇರಲಾಗುತ್ತಿದೆ. ಜಗತ್ತಿನ ಜನರನ್ನು ಒಂದು ಕಡೆ ಬಾಂಬು ಮತ್ತು ಗನ್ ಭಯೋತ್ಪಾದನೆ ಕಾಡುತ್ತಿದ್ದರೆ ಮತ್ತೊಂದು ಕಡೆ ಆರ್ಥಿಕ ಭಯೋತ್ಪಾದನೆ ಮತ್ತು ಸಾಮಾಜಿಕ ಭಯೋತ್ಪಾದನೆ ಕಾಡುತ್ತಿದೆ. ಹೋರಾಟಗಳ ಮುಖಾಂತರ ಗಳಿಸಿದ ಹಕ್ಕುಗಳನ್ನು ಜನರು ಕಳೆದುಕೊಳ್ಳುತ್ತಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದೆ. ಇಡೀ ಜಗತ್ತಿನ ಜನರನ್ನು ಗುಲಾಮರನ್ನಾಗಿಸಿಕೊಳ್ಳುವ ಅಮಾನವೀಯ ಪ್ರಯತ್ನ ನಡೆಯುತ್ತಿದೆ.
ಕೊನೆಯದಾಗಿ
ಎಲ್ಲಿಯವರೆಗೆ ಮಾನವನಿಂದ ಮಾನವನ ಶೋಷಣೆ ಹಾಗೂ ದೇಶದಿಂದ ದೇಶದ ಶೋಷಣೆಗಳು ಮುಂದುವರಿಯುತ್ತೋ ಅಲ್ಲಿಯವರೆಗೆ ವಿಮೋಚನೆಗಾಗಿ ಮಾನವನ ನಿರಂತರ ಹಂಬಲವನ್ನು ಹೊಸಕಿ ಹಾಕಲು ಸಾಧ್ಯವಿಲ್ಲ. ಎಲ್ಲಿಯವರೆಗೂ, ಬೌದ್ಧಿಕ ಚಿಂತನೆಯ ಮೇಲೆ ದಾಳಿ ನಡೆಯುತ್ತದೋ ಅಲ್ಲಿಯವರೆಗೂ ಜ್ಞಾನ ಮತ್ತು ಸತ್ಯಕ್ಕಾಗಿ ಹುಡುಕಾಟ ನಡೆಯುತ್ತಿರುತ್ತದೆ. ಎಲ್ಲಿಯವರೆಗೂ ಯುದ್ಧವಿರುತ್ತದೋ ಅಲ್ಲಿಯವರೆಗೂ ಶಾಂತಿಗಾಗಿ ಹಂಬಲವಿರುತ್ತದೆ. ಇದು ಮಾನವ ಇತಿಹಾಸ ಕಲಿಸಿ ಕೊಟ್ಟ ಪಾಠ. ಇತಿಹಾಸದ ಈ ಪಾಠವನ್ನು ಮರೆಯದಿರೋಣ.
ಇಂದು ಬೇಕಾಗಿರುವುದು ಹಿಂಸಾತ್ಮಕ ಸಂಘರ್ಷವಲ್ಲ, ಸೈದ್ಧಾಂತಿಕ ಸಂಘರ್ಷ, ಇದನ್ನು ಮಾಡುವವರು ಯಾರು? ನಾವು ಮತ್ತು ನೀವು!