ಮಾನವ ಬಂಧುತ್ವ ವೇದಿಕೆ, ಕರ್ನಾಟಕ ವತಿಯಿಂದ ಇಂದು ಘಟಪ್ರಭಾದ ಸೇವಾದಳದಲ್ಲಿ ಕಚೇರಿಯಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕುವೆಂಪುರವರ 117ನೆ ಜನ್ಮ ದಿನವಾದ ಇಂದು ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ಮಾತನಾಡಿ, ಕುವೆಂಪುರವರು ಆಧ್ಯಾತ್ಮ ಜೀವಿಯಾಗಿದ್ದರು. ಕರುನಾಡಿನಲ್ಲಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆಗಳನ್ನು ಪ್ರಸಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು ಎಂದರು.
ಮೌಢ್ಯವನ್ನು ನಿವಾರಿಸುವಲ್ಲಿ ವೈಜ್ಞಾನಿಕ ಆಲೋಚನೆಗಳನ್ನು ಬಿತ್ತಿದ ಕುವೆಂಪು ನೇಗಿಲ ಗೆರೆಯಲ್ಲಿ ದೈವ ಕಾಣುವಂತೆ ಶ್ರಮಜೀವಿವರ್ಗಕ್ಕೆ ಕರೆಕೊಟ್ಟರು. ನಮ್ಮ ಶ್ರಮದಿಂದ ಸಂಪಾದಿಸಿದ ಹಣ ವ್ಯರ್ಥವಾಗಿ ದೇವರ ಹುಂಡಿ ಮತ್ತು ಪೂಜಾರಿಯ ಪಾಲಾಗಬಾರದು. ಅದು ನಮ್ಮ ಅಭಿವೃದ್ಧಿಗೆ, ನಮ್ಮ ಏಳಿಗೆಗೆ ಉಪಯೋಗವಾಗಬೇಕೆಂಬ ಚಿಂತನೆಯನ್ನು ಕುವೆಂಪು ಕೊಟ್ಟರು ಎಂದರು.
ಮೌಢ್ಯದಿಂದ ಹೊರ ಬರದ ಹೊರತು ಅಭಿವೃದ್ಧಿ ಇಲ್ಲ. ವೈಜ್ಞಾನಿಕ ಜೀವನ ಮಾರ್ಗವೇ ನಮ್ಮ ಬಡತನ, ದಾರಿದ್ರ್ಯವನ್ನು ಹೋಗಲಾಡಿಸುತ್ತದೆ ಎನ್ನುವ ಮೂಲಕ ಕುವೆಂಪುರವರ ಚಿಂತನೆಗಳೇ ಸಮಾಜದಲ್ಲಿ ಮೇಲ್ಪಂಕ್ತಿಯಾಗಬೇಕು ಎಂದರು.
ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಲಿಂಗಪ್ಪ ಆಲಬಾಳ ಅವರು ಮಾತನಾಡಿ, ಕುವೆಂಪುರವರ ವಿಚಾರಗಳ ಅಡಿಪಾಯದ ಮೇಲೆಯೇ ಮಾನವ ಬಂಧುತ್ವ ವೇದಿಕೆ ಮುನ್ನಡೆಯುತ್ತಿದೆ. ಕುವೆಂಪು ತತ್ವವೇ ನಮ್ಮ ಆಧಾರಸ್ತಂಭವಾಗಿದ್ದು ಮೌಢ್ಯದ ವಿರುದ್ಧದ ನಮ್ಮ ಹೋರಾಟದ ಬಹು ದೊಡ್ಡ ಪ್ರೇರಣೆಯೂ ಆಗಿದ್ದಾರೆ. ಕುವೆಂಪು ಸಾರ್ವಕಾಲಿಕವಾಗಿ ಜನದನಿಯಾಗಿ ಜೀವಂತವಿರುವ ಕವಿ ಎಂದರು.
ಉಪನ್ಯಾಸಕ ಸುರೇಶ ಎನ್ ಶಿಕಾರಿಪುರ ಮಾತನಾಡಿ, ಕುವೆಂಪು ಏಕೆ ಮತ್ತು ಹೇಗೆ ಜಗದ ಕವಿ ಯುಗದ ಕವಿ ಕಾಡು ನಾಡು ಮತ್ತು ರೈತ ಕವಿ ಆಗುತ್ತಾರೆ ಎಂದು ಹೇಳುತ್ತಾ, ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರಬಂದು ವೈಜ್ಞಾನಿಕ ಬದುಕಿನ ಮೂಲಕ ಮನುಷ್ಯರೆಲ್ಲರೂ ಸಮಾನರಾಗಿ ಬದುಕಬೇಕು ಹಾಗೂ ಶಿವ ಅಥವ ನಾವು ನಂಬುವ ದೇವರು ನಮ್ಮ ಪ್ರಾಮಾಣಿಕ ಕೆಲಸ ಕಾರ್ಯ ಬದುಕುವ ಬದುಕಿನಲ್ಲೇ ಇದ್ದಾನೆಂದು ಕುವೆಂಪುರವರು ಸಾರಿದರು ಎಂದರು.
ಕಲಾವಿದ, ಹೋರಾಟದ ಹಾಡುಗಾರ ಆಂಜಿನಪ್ಪ ಲೋಕಿಕೆರೆ ಅವರು ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ’ ಮತ್ತು ‘ನೇಗಿಲಯೋಗಿ’ ಪದ್ಯಗಳನ್ನು ಹಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.