October 1, 2023 7:20 am

ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ

ಇಂದು ದೇಶ ದುರಾತ್ಮರ ಕೈಯ್ಯಲ್ಲಿ ಸಿಲುಕಿದೆ. ದುರಾತ್ಮರ ಉರವಣಿಗೆಯಲ್ಲಿ ಮಹಾತ್ಮರ ವಿಚಾಧಾರೆಗಳು ಮೂಲೆಗುಂಪಾಗಿವೆ. ಫುಲೆ ಜನಿಸಿದ್ದು ಮಹಾರಾಷ್ಟ್ರದ ಕಟಗುಣದಲ್ಲಿ. 1827ರಲ್ಲಿ ಫುಲೆ ಜನಿಸಿ ಬೆಳೆಯುತ್ತಿದ್ದ ಕಾಲ ಜಾತಿ ವ್ಯವಸ್ಥೆಯು ಅತ್ಯಂತ ಬಿಗಿಯಾಗಿ ತನ್ನೆಲ್ಲ ವಿಕಾರಗಳನ್ನು ಮೆರೆಯುತ್ತಿದ್ದ ವಿಷಮ ಕಾಲ.

ಫುಲೆಯವರು ಜನಿಸುವುದಕ್ಕೆ ಕೇವಲ ಒಂಬತ್ತು ವರ್ಷಗಳ ಹಿಂದೆ ಅಂದರೆ 1818ರಲ್ಲಿ ಮರಾಠಾ ಪೇಶ್ವೆಗಳ ಸಾಮ್ರಾಜ್ಯ ಬ್ರಿಟೀಷರಿಗೆ ಸೋತು ಮಂಡಿ ಊರಿತ್ತು, ಪತನವಾಗಿತ್ತು. ಆದರೆ ವರ್ಣಾಶ್ರಮ ವ್ಯವಸ್ಥೆಯ ಮಹಾ ಪೋಷಕರಾಗಿದ್ದ ಪೇಶ್ವೆಗಳು ಹುಟ್ಟುಹಾಕಿದ್ದ ನಿಕೃಷ್ಟ ಜಾತಿ ವ್ಯವಸ್ಥೆ ಬಿಗಿಯಾಗೇ ಇತ್ತು. ಬೆಳೆಯುತ್ತ ಬೆಳೆಯುತ್ತಾ ಸಮಾಜದ ಶೋಷಣೆಗಳ ಎಲ್ಲಾ ಮುಖಗಳನ್ನೂ ಕಂಡುಕೊಂಡ ಜ್ಯೋತಿಬಾ ಆ ವ್ಯವಸ್ಥೆಯನ್ನು ಮುರಿದು ಹಾಕುವ ಹಾದಿಯಲ್ಲಿ ಕ್ರಮಿಸಿ ಸಮ ಸಮಾಜದ ನಿರ್ಮಿತಿಗಾಗಿ ಹೋರಾಡಿದ್ದು ಒಂದು ಬಗೆಯ ಸ್ವಾತಂತ್ರ್ಯ ಹೋರಾಟವೇ ಆಗಿತ್ತು‌. ಪೇಶ್ವೆಗಳು ನಿರ್ಮಿಸಿ ಹೋಗಿದ್ದ ಶ್ರೇಣೀಕೃತ ಸಮಾಜ ಅಮಾನುಷವಾಗಿತ್ತು‌. ಅಂತಹ ಕಾಲಘಟ್ಟದಲ್ಲೇ ಅದಕ್ಕೆ ಎದುರಾಗಿ ನಿಲ್ಲುವುದೆಂದರೆ ಅದು ಮೈಮೇಲೆ ಉರುಳುವ ದೊಡ್ಡ ಬಂಡೆಯನ್ನು ತಡೆದು ನಿಲ್ಲಿಸಿಕೊಳ್ಳುವ ಸಾಹಸ. ಫುಲೆ ಆ ಬೃಹತ್ ಬಂಡೆಯನ್ನು ತಡೆದು ನಿಲ್ಲಿಸಿಕೊಂಡರು, ಮಾತ್ರವಲ್ಲ ಅದನ್ನು ಪಾರ್ಶ್ವಕ್ಕೆ ದೂಡಿ ಉರುಳಿಸಿದರು. ಅದು ಈಗ ಉರುಳುತ್ತಲೇ ಇದೆ. ಉರುಳುವ ಜಾತಿ ಭೂತದ ಬಂಡೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಪುರೋಹಿತರು ತಮ್ಮ ಜನಿವಾರಗಳನ್ನು ಬೀಸಿ ಹೋರಾಡುತ್ತಿದ್ದಾರೆ.

ಜ್ಯೋತಿಬಾ ಫುಲೆ ಈ ದೇಶದ ದಲಿತರ ಶೂದ್ರರ ಹಿಂದುಳಿದವರ ಮಕ್ಕಳ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಹರಿಕಾರ. ಅಷ್ಟೇ ಅಲ್ಲ ಈ ದೇಶದ ಮಹಾನ್ ರೈತ ನಾಯಕ. ರೈತ ಚಳುವಳಿಯನ್ನು ಕಟ್ಟಿ ಇಂದಿನ ಎಲ್ಲಾ ರೈತ ಸಂಘಟನೆಗಳಿಗೆ ಸ್ಫೂರ್ತಿಯಾದ ನಾಯಕ. ಒಂದು ಕಾಲದಲ್ಲಿ ಮೇಲ್ಜಾತಿಯ ಪಾರಂಪರಿಕ ಸ್ವತ್ತಾಗಿದ್ದ ಶಿಕ್ಷಣ ಇಂದು ಒಂದು ಲಾಭದಾಯಕ ವ್ಯಾಪಾರವಾಗಿ ಖಾಸಗಿ ವ್ಯವಸ್ಥೆಯ ಕಪಿ ಮುಷ್ಠಿಯಲ್ಲಿ ಸಿಲುಕಿ ಬಡವರ ಮಕ್ಕಳಿಗೆ ದುಡಿವ ಶ್ರಮಿಕರು ದಲಿತರುಗಳು ಗ್ರಾಮೀಣ ಪ್ರದೇಶದ ಮಕ್ಕಳು ಆದಿವಾಸಿಗಳ ಮಕ್ಕಳು ಅಲೆಮಾರಿಗಳ ಗಿರಿಜನರ ಮಕ್ಕಳಿಗೆ ನಿಲುಕಲಾರದ ಸ್ಥಿತಿ ತಲುಪಿರುವಾಗ, ಸರ್ಕಾರಿ ಶಾಲೆಗಳೆಲ್ಲ ಬಾಗಿಲು ಮುಚ್ಚಿ ಶೋಷಿತರ ಮಕ್ಕಳು ಅತ್ತ ಖಾಸಗಿ ಎಂಬ ದುಬಾರಿ ಶಾಲೆಗೆ ಸೇರಲಾಗದೆ ಸರ್ಕಾರಿ ಶಾಲೆಗಳನ್ನೂ ಕಳೆದುಕೊಂಡು ಮತ್ತದೇ ಕೂಲಿಗಳಾಗುವ ನಿರಕ್ಷರಕುಕ್ಷಿಗಳಾಗುವ ಹಂತ ತಲುಪಿರುವಾಗ ಇಲ್ಲಿಗೆ ನೂರೈವತ್ತು ಅರವತ್ತು ವರ್ಷಗಳ ಹಿಂದೆಯೇ ತನ್ನ ಪತ್ನಿಯನ್ನು ಓದಿಸಿ ಆಕೆಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಹೋರಾಟ ಭಾರತದ ಚರಿತ್ರೆಯ ಒಂದು ಮಹಾ ಅಧ್ಯಾಯ.

ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರದವ್ವನನ್ನು ದೇಶಕ್ಕೆ ಕೊಟ್ಟ ಮಹಾತ್ಮ ಜ್ಯೋತಿಬಾ. ಒಬ್ಬ ಗಂಡ ತನ್ನ ಹೆಂಡತಿಯನ್ನು ತನ್ನ ಸಮಾನಕ್ಕೆ ನಡೆಸಿಕೊಳ್ಳುವ ಗೌರವಿಸುವ ಆಕೆಯ ಹಾದಿಗೆ ಹೂವಾಗುವ ಜೀವವಾಗುವ ಹಾಗೂ ಆ ಸಾಧನೆ ತನ್ನದೆಂದು ಹೇಳಿಕೊಳ್ಳದ ನಿರಪೇಕ್ಷ ನಾಯಕ ಪತಿ ಈ ದೇಶದಲ್ಲಿ ಯಾರಾದರು ಇದ್ದರೆ ಅದು ಜ್ಯೋತಿಬಾ ಫುಲೆ ಮಾತ್ರ.

ಆ ಕಾಲದ  ಅವರ ಶಿಕ್ಷಣ ಸೇವೆ ಸಾವಿರಾರು ವರ್ಷಗಳ ಕಾಲ ಪುರೋಹಿತಶಾಹಿ ಮತ್ತು ಪ್ರಭುತ್ವ ಪೋಷಿಸಿದ್ದ ವ್ಯವಸ್ಥೆಯನ್ನು ಅಲುಗಾಡಿಸಲು ಆರಂಭಿಸಿದ್ದಕ್ಕೆ ದಂಪತಿಗೆ ಉಪಟಗಳು ತಪ್ಪಲಿಲ್ಲ. ಕೊಲ್ಲುವ ಸಂಚುಗಳು ಮೇಲಿಂದ ಮೇಲೆ ನಡೆದೇ ಇದ್ದವು‌. ಅಂಗುಲಿಮಾಲನೆಂಬ ಕೊಲೆಗಾರನ ಮುಂದೆ ನಿಂತು ತನ್ನ ಶಾಂತ ಮುಖ, ಪ್ರೇಮ ತುಂಬಿದ ಕಣ್ಣುಗಳು, ಮಮತೆ ಸೂಸುವ ಮಾತುಗಳಿಂದ ಸೆಳೆದು ಆತನನ್ನು ಕ್ರೂರಾತ್ಮನಿಂದ ಪುಣ್ಯಾತ್ಮನನ್ನಾಗಿಸಿದ ಬುದ್ಧದೇವನಂತೆ, ತಮ್ಮನ್ನು ಕೊಲ್ಲಲು ಬಂದ ಆಗಂತುಕರ ಮನಸನ್ನೇ ಕರಗಿಸಿ ಅವರನ್ನು ಉದ್ಧರಿಸಿದ ಜ್ಞಾನ ಮಾರ್ಗದಲ್ಲಿ ನಡೆಸಿದ ಮಹಾತ್ಮರು ಫುಲೆ ದಂಪತಿಗಳು.

ಇಂದು ಸಂಘಪರಿವಾರ ಹಾಗೂ ಅದರ ಹಿಡಿತದಲ್ಲಿರುವ ರಾಜಕೀಯ ಪಕ್ಷಗಳು ಅದರಲ್ಲೂ ಮಹಾರಾಷ್ಟ್ರದ ಬಲಪಂಥೀಯ ರಾಜಕಾರಣ ಉಸಿರಾಡುವುದೇ ಶಿವಾಜಿ ಮಹಾರಾಜನ ಹೆಸರಲ್ಲಿ. ತಳ ಸಮುದಾಯದ ಶಿವಾಜಿಯನ್ನು ಹಿಂದುತ್ವದ ಮುಖವಾಣಿಯಾಗಿಸಿಕೊಂಡು ರಾಜಕೀಯ ಅಧಿಕಾರ ಹಿಡಿದು ಮತ್ತದೇ ಧಾರ್ಮಿಕ ವ್ಯವಸ್ಥೆಯನ್ನು ನಿರ್ಮಿಸಲು ಹೊರಟಿರುವವರು ಶಿವಾಜಿಯನ್ನು ಒಂದು ಕಾಲಕ್ಕೆ ಇನ್ನಿಲ್ಲದಂತೆ ಕಾಡಿ ಅವಮಾನಿಸಿದ್ದರು ಎಂಬುದು ಈಗ ಯಾರ ಸ್ಮೃತಿಯಲ್ಲೂ ಇಲ್ಲ.

ಅದೂ ಹೋಗಲಿ ಮಸುಕುಮಸುಕಾಗಿದ್ದ ಛತ್ರಪತಿ ಶಿವಾಜಿ ಮಹಾರಾಜನ ಇತಿಹಾಸವನ್ನು ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಆತನ ಸಮಾಧಿಯನ್ನು ಶೋಧಿಸಿ ಹೊರಗೆಡಹಿದವರು ಇದೇ ಜ್ಯೋತಿಬಾ ಫುಲೆ. ಮಹಾರಾಷ್ಟ್ರದ ಮಹಾ ಚಾರಿತ್ರಿಕ ಪುರುಷನನ್ನು ಅವನ ನಿಜ ಇತಿಹಾಸವನ್ನು ಬೆಳಕಿಗೆ ತಂದು ಮರಾಠರು ಇಂದು ಆತನ ಹೆಸರಲ್ಲಿ ಬೀಗುವಂತೆ ಆದದ್ದು ಅವರಿಗೊಬ್ಬ ಸ್ವಾಭಿಮಾನದ ನಾಯಕನ್ನು ಕೊಟ್ಟವರೂ ಅವರೇ‌‌. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ಹೊಕ್ಕುವಂತೆ ಈಗ ಶಿವಾಜಿ ಹಿಂದೂ ರಾಜಕಾರಣದ ದಾಳವಾಗಿಹೋದ. ಆತ ನಿಜ ಇತಿಹಾಸ ಹೊರ ಗೆಡಹಿದ ಗೋವಿಂದ ಪನ್ಸಾರೆಯವರನ್ನು ಗುಂಡು ಹೊಡೆದು ಕೊಂದರು. ಈಗ ನಿಜ ಶಿವಾಜಿ ಜನಮನ ತಲುಪುತ್ತಿದ್ದಾನೆ‌.

ಇನ್ನು ರೈತ ಚಳುವಳಿಯ ವಿಚಾರಕ್ಕೆ ಬರೋಣ. ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಸ್ವಾತಂತ್ರ್ಯಾನಂತರವೂ ಅನೇಕ ರೈತ ಚಳುವಳಿಗಳನ್ನು ಕಂಡಿದೆ. ಆಂಗ್ಲ ಪ್ರಭುತ್ವ ಹಾಗೂ ಭಾರತೀಯ ಪ್ರಭುತ್ವ ಎರಡೂ ಸಹ ರೈತ ಚಳುವಳಿಗಳನ್ನು ಎದುರುಗೊಂಡಿವೆ. ರೈತ ಹೋರಾಟಕ್ಕೆ ಈ ದೇಶದಲ್ಲಿ ದೀರ್ಘವಾದ ಇತಿಹಾಸವಿದೆ. ಜ್ಯೋತಿಬಾ ರೈತ ಚಳುವಳಿಯ ನೇತಾರರು‌. ಜಮೀನ್ದಾರಿ ಪದ್ದತಿ, ಜಹಗೀರುದಾರಿ, ಇನಾಂದಾರಿಗಳು ಜೀವಂತವೂ ಅತ್ಯಂತ ಬಲಿಷ್ಠವೂ ಆಗಿದ್ದು, ಧರ್ಮ ಮತ್ತು ಜಾತಿ ವ್ಯವಸ್ಥೆಯ ಆಧಾರ ಸ್ಥಂಭಗಳಾಗಿದ್ದ ಕಾಲದಲ್ಲಿ ರೈತ ವಿಮೋಚನೆಗಾಗಿ ನಡೆಸಿದ ಹೋರಾಟ ಇಂದಿನ ಎಲ್ಲ ಹೋರಾಟಗಳಿಗೆ, ಭೂ ಸುಧಾರಣೆಗಳಿಗೆ ಸ್ಫೂರ್ತಿಯಾಗಿದೆ‌. ಜ್ಯೋತಿಬಾ ಜಮೀನ್ದಾರಿ ಪದ್ಧತಿ ಕೊನೆಯಾಗಬೇಕೆಂದು, ಸಾಮಂತಶಾಹಿ ಮತ್ತು ಸಾಹುಕಾರಿ ಪದ್ದತಿ ನಾಶವಾಗಬೇಕು ಹಾಗೂ ರೈತನ ದುಡಿಮೆಯ ಪ್ರತಿಫಲ ರೈತನಲ್ಲಿಯೇ ಉಳಿಯಬೇಕು, ಹೊಸ ವೈಜ್ಞಾನಿಕ ಕೃಷಿ ಪದ್ದತಿ ಜಾರಿಗೆ ಬರಬೇಕು ಎಂದು ಹೋರಾಟ ಹೂಡಿದ್ದರು.

ಈಗ ಏನಾಗಿದೆ? ಈಗ ಈ ದೇಶದ ರೈತ ಬೀದಿಗೆ ಬಂದು ಬಿಸಿಲು ಚಳಿ ಮಳೆ ಎನ್ನದೆ ರೋದಿಸುತ್ತಿದ್ದಾನೆ. ಭೂಮಿ ದುಡಿಸಿಕೊಳ್ಳುವವರ ಕೈಯ್ಯಿಂದ ಈಗಲೂ ಹೆಚ್ಚಿನ ಪಾಲು ದುಡಿಯವವರಿಗೆ ಸಿಕ್ಕೇ ಇಲ್ಲ. ಆದರೆ ಮತ್ತೆ ರೈತರ ಭೂಮಿಯನ್ನು ಕಾನೂನು ಎಂಬ ಅಸ್ತ್ರದಿಂದ ಕಬಳಿಸಿ ಬಂಡವಾಳಗಾರರಿಗೆ ನೀಡಲು ಹೊರಟಿರುವ ಸರ್ಕಾರವಿದೆ. ಭೂ ಸ್ವಾಧೀನ ಕಾಯ್ದೆ, ಭೂ ಮಿತಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆ ಹೀಗೆ ಹತ್ತು ಹಲವಾರು ಕಾಯ್ದೆಗಳು ರೈತನನ್ನು ನಟ್ಟ ನಡುವೆ ನಿಲ್ಲಿಸಿಕೊಂಡು ಸುತ್ತಲೂ ಕೋವಿ ಹಿಡಿದು ನಿಂತ ನರಹಂತಕರಂತೆ ಸುತ್ತುವರೆದಿವೆ. ಜ್ಯೋತಿಬಾ ಅಂದು ಯಾವ ಪೇಶ್ವೆ ಸಂತತಿಯನ್ನು ಪ್ರತಿರೋಧಿಸಿ ಮಹಿಳೆಯರನ್ನೂ ಸೇರಿ ಎಲ್ಲಾ ಶೋಷಿತದ ಸಮುದಾಯಗಳ ಪರವಾಗಿ ಹೋರಾಡಿದ್ದರೋ ಅದೇ ಪೇಶ್ವೆಗಳ ಉತ್ತರಾಧಿಕಾರಿಗಳು ಕಾಲಕ್ಕೆ ತಕ್ಕಂತೆ ವೇಷ ಬದಲಿಸಿಕೊಂಡು ಶತಮಾನಗಳ ಕಾಲ ನಡೆಸಿದ್ದ ಎಲ್ಲಾ ಅಮಾನುಷ ದೌರ್ಜನ್ಯಗಳನ್ನು ಈಗ ಮತ್ತೆ ಎಸಗುತ್ತಿದ್ದಾರೆ. ಅದಕ್ಕೆ ಅಷ್ಟೇ ಬಲವಾದ ಪ್ರತಿರೋಧವೂ ಎದುರಾಗಿದೆ. ಈ ಹೊತ್ತು ಅಂದು ಜ್ಯೋತಿಬಾ ಫುಲೆ ನಡೆಸಿದ್ದ ಹೋರಾಟ ಸ್ಫೂರ್ತಿಯಾಗಲಿ. ಪುರೋಹಿತಶಾಹಿ ನವ ಬಂಡವಾಳಶಾಹಿ ಕೊನೆಯಾಗಲಿ. ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ.

ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು