October 1, 2023 8:08 am

ನ್ಯಾಯಾಂಗದ ದಂತಕಥೆ ನ್ಯಾಯಮೂರ್ತಿ ಕೃಷ್ಣ ಅಯ್ಯರ್

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ನ್ಯಾಯಮೂರ್ತಿ ವೈದ್ಯನಾಥಪುರಂ ರಾಮ ಅಯ್ಯರ್‌ ಕೃಷ್ಣ ಅಯ್ಯರ್‌ರವರು ದಿನಾಂಕ 1915 ನವೆಂಬರ್ 15ರಂದು ಕೇರಳ ರಾಜ್ಯದ ಪಾಲ್ಛಾಟ್‌ನಲ್ಲಿ ಜನಿಸಿದರು. ಅವರ ತಂದೆ ವಕೀಲರಾಗಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಕುಟುಂಬವಾಗಿತ್ತು. ಪ್ರಾಥಮಿಕ ಶಿಕ್ಷಣವನ್ನು ಪಾಲ್ಫಾಟ್‌ನಲ್ಲಿ ಮುಗಿಸಿ ಕಾಲೇಜು ಶಿಕ್ಷಣವನ್ನು ಮದ್ರಾಸಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಿ ಕಾನೂನಿನ ಪದವಿಯನ್ನು ಪಡೆದರು. 1938ರಲ್ಲಿ ತಮ್ಮ ತಂದೆಯ ಕಚೇರಿಯಲ್ಲಿಯೇ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು.

ನ್ಯಾಯಾಲಯಗಳಲ್ಲಿ ರೈತರ, ಗೇಣಿದಾರರ, ಕಾರ್ಮಿಕರ ಮತ್ತು ಬಡವರ ಪರವಾಗಿ ವಕಾಲತ್ ವಹಿಸಿದರು. ನ್ಯಾಯಾಲಯದ ಹೊರಗಡೆಯು ಸಹ ಈ ಜನರ ಪರವಾದ ಹೋರಾಟಗಳಿಗೆ ಬೆಂಬಲ ಸೂಚಿಸಿ ತಮ್ಮ ಧ್ವನಿ ಎತ್ತಿದರು. ತಮ್ಮ ವಕೀಲ ವೃತ್ತಿ ಅನುಭವವನ್ನು ತಮ್ಮ ಜೀವನ ಚರಿತ್ರೆಯಲ್ಲಿ ಹೀಗೆ ದಾಖಲಿಸಿದ್ದಾರೆ: “ಆದರ್ಶ ಹಾಗೂ ಸಮಾಜವಾದಿ ಚಿಂತನೆ ಉಳ್ಳ ಒಬ್ಬ ಯುವ ವಕೀಲನಾದ ನನ್ನನ್ನು ರೈತರ ಹೋರಾಟಗಳು ಕಾರ್ಮಿಕರ ವ್ಯಾಜ್ಯಗಳು ಅಯಸ್ಕಾಂತದಂತೆ ಸೆಳೆದವು. ಅಗತ್ಯ ಇರುವವರು ನನ್ನನ್ನು ಸಂಪರ್ಕಿಸಿದರು. ನೇಮಕ ಮಾಡಿಕೊಂಡರು. ಹಾಗೂ ಪ್ರಸಿದ್ಧಗೊಳಿಸಿದರು. ಇದರಿಂದಾಗಿ ಸಾಕಷ್ಟು ಅಸಲು ದಾವೆಗಳನ್ನು ಹಾಗೂ ಮೇಲ್ಮನವಿ ಕೇಸುಗಳನ್ನು ನಡೆಸುವಂತಾದೆ. ಅಷ್ಟೇ ಅಲ್ಲದೇ ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳನ್ನು ನಡೆಸುವುದೂ ಕೂಡ ನೀರು ಕುಡಿದಷ್ಟು ಸಲೀಸಾದವು. ಹೀಗೆ ಪಕ್ಷಾತೀತವಾದ ವಿಶೇಷ ಮಾನ್ಯತೆಯ ಸಾರ್ವಜನಿಕ ವ್ಯಕ್ತಿಯಾಗಿ ಹೊರಹೊಮ್ಮಿದೆ”.

ಪ್ರಾಮಾಣಿಕವಾಗಿ ಜನರ ಸೇವೆ ಮಾಡಿ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡರೆ ಜನರು ಅಂತಹವರನ್ನು ಜನನಾಯಕನನ್ನಾಗಿ ಮಾಡುತ್ತಾರೆ, ಪ್ರಸಿದ್ಧರನ್ನಾಗಿಸುತ್ತಾರೆ ಮತ್ತು ಅಂತಹ ನಾಯಕನನ್ನು ಹಸಿವಿನಿಂದಿರಲು ಜನ ಬಿಡುವುದಿಲ್ಲ. ಇದಕ್ಕೆ ಸಾಕ್ಷಿ ಎ.ಆರ್. ಕೃಷ್ಣ ಅಯ್ಯರ್ ಬದುಕು.

ಎಷ್ಟರ ಮಟ್ಟಿಗೆ ಕೃಷ್ಣ ಅಯ್ಯರ್‌ರವರು ಜನರ ಜೊತೆ ಬೆರೆತಿದ್ದರೆಂದರೆ 1948ರಲ್ಲಿ ಭೂಗತ ಕಮ್ಯುನಿಸ್ಟ್ ಮುಖಂಡರಿಗೆ ಆಶ್ರಯ ಕೊಟ್ಟಿದ್ದಾರೆಂಬ ಆರೋಪದ ಮೇಲೆ ಪೋಲಿಸರ ಬಂಧನಕ್ಕೊಳಗಾದರು. ಈ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ್ದರಿಂದ ಒಂದು ತಿಂಗಳು ಜೈಲುವಾಸದ ನಂತರ ಬಿಡುಗಡೆಗೊಂಡರು. ಆದರೆ ಈ ಜೈಲು ವಾಸ ಮುಂದೆ ಕೃಷ್ಣ ಅಯ್ಯ‌ರವರು ಶಾಸಕನಾಗಲು, ಮಂತ್ರಿಯಾಗಲು ಮತ್ತು ನ್ಯಾಯಮೂರ್ತಿಯಾಗಲು ಅಡ್ಡಿಯಾಗಲಿಲ್ಲ.

ಮುಂದೆ ಕೃಷ್ಣ ಅಯ್ಯರ್‌ರವರು 1952ರಲ್ಲಿ ಮದ್ರಾಸ್ ಪ್ರಾಂತೀಯ ಶಾಸನ ಸಭೆಗೆ ಶಾಸಕರಾಗಿ ಚುನಾಯಿತರಾದರು. ರಾಜ್ಯಗಳ ಪುನರ್ ವಿಂಗಡಣೆಯ ನಂತರ 1957ರಲ್ಲಿ ಕೇರಳ ವಿಧಾನ ಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕೇರಳ ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ನುಂಬೂದರಿಪಾಡ್ ನೇತೃತ್ವದ ಸರ್ಕಾರದಲ್ಲಿ ಕೃಷ್ಣ ಅಯ್ಯರ್‌ರವರು ಗೃಹ, ಕಾನೂನು, ನೀರಾವರಿ, ಒಳನಾಡ ಸಾರಿಗೆ, ಇಂಧನ, ಬಂಧೀಖಾನೆ, ಸಮಾಜ ಕಲ್ಯಾಣ, ಕೃಷಿ ಹಾಗೂ ಸಹಕಾರಿ ಖಾತೆಗಳನ್ನು ನಿರ್ವಹಿಸುವ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಒಬ್ಬ ದಕ್ಷ ಆಡಳಿತಗಾರರಾಗಿ ಪೊಲೀಸ್ ಮತ್ತು ಜೈಲುಗಳ ಸುಧಾರಣೆಯನ್ನು ತಂದರು. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿ ಸರಬರಾಜಿಗೆ ಮಾದರಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅಂದಿನ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ನೆಹರೂರವರು ಕೂಡ ಇವರ ಕಾರ್ಯನಿಷ್ಠೆಯನ್ನು ಮೆಚ್ಚಿಕೊಂಡಿದ್ದರು. ಹೀಗೆ ಕೃಷ್ಣ ಅಯ್ಯರ್‌ರವರು ಒಬ್ಬ ದಕ್ಷ ಆಡಳಿತಗಾರರೆಂದು ತೋರಿಸಿಕೊಟ್ಟರು.

ಒಳ್ಳೆಯ ಕೆಲಸ ಮಾಡುವವರು ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ. 1965ರ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಅಯ್ಯರ್ ಸೋತರು. ಸೋತ ಮರುದಿನವೇ ವಕೀಲಿ ವೃತ್ತಿಗೆ ಮರಳಿದರು. ಕೇರಳ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಕೆಲವೇ ತಿಂಗಳಲ್ಲಿ ಪ್ರಸಿದ್ಧ ವಕೀಲರಾಗಿ ಹೊರಹೊಮ್ಮಿದರು. ಇವರ ಪ್ರತಿಭೆ, ಕಾರ್ಯವೈಖರಿ ಮತ್ತು ಪ್ರಾಮಾಣಿಕತೆಯನ್ನು ಗಮನಿಸಿ 1968ರಲ್ಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಅವರು ಆಡಿದ ಮಾತುಗಳು: “The forensic institution and the legal system itself need a new orientation, a modern grammar and vocabulary and simpler techniques of social engineering. If they are not be accused of exotic, expensive, obsolescent and tardy features. I shall endeavor, in a humble measure, to be a judicial activist and treat my career ahead as a fresh call to service in the cause of the rule of law, which not merely keeps the executive in leash but insists upon the basic and equal right of every individual to a really free and good life”.

“ವಿದೇಶಿನಡೆ, ದುಬಾರಿ, ಪ್ರಸ್ತುತವಲ್ಲದ ಮತ್ತು ನಿಧಾನ ಕಾರ್ಯಶೈಲಿಗಳ ಆರೋಪಗಳು, ವಾದ-ವಿವಾದಗಳ, ವಿಚಾರಣಾ ಪ್ರಕ್ರಿಯೆಗಳನ್ನು ಹಾಗೂ ವಿತರಣಾ ವ್ಯವಸ್ಥೆಯನ್ನು ಸರಳಗೊಳಿಸುವ ಹೊಸದೊಂದು ಕಣ್ಣೋಟ, ಆಧುನಿಕ ವ್ಯಾಖ್ಯಾನ, ನವೀನ ಪದ ಸಂಪತ್ತು ಹಾಗೂ ಸಾಮಾಜಿಕ ಸಮೀಕರಣಗೊಳಿಸುವ ಸರಳ ಉಪಾಯಗಳನ್ನು ಕಂಡುಕೊಳ್ಳಬೇಕಿದೆ. ಕಾನೂನಿನ ಆಳ್ವಿಕೆಯ ಸದುದ್ದೇಶದ ಸೇವೆಗೆ ಹೊಸ ಕರೆಯೆಂದೇ ನನ್ನ ಈ ವೃತ್ತಿ ಜೀವನವನ್ನು ಪರಿಗಣಿಸಿ, ವಿನಯಶೀಲ ಕ್ರಮಗಳ ಮೂಲಕ ನ್ಯಾಯಾಂಗ ಕ್ರಿಯಾಶೀಲತೆಯನ್ನು ಎತ್ತಿ ಹಿಡಿಯುವ ಪ್ರಯತ್ನಗಳನ್ನು ದೃಢವಾಗಿ ಮಾಡುತ್ತೇನೆ. ತೋರಿದ ದಾರಿಯಲ್ಲಿ ಮಾತ್ರ ಸಾಗುವ ರೂಢಿಯನ್ನು ಅನುಸರಿಸದೇ ನಿಜವಾಗಿಯೂ, ಸ್ವತಂತ್ರ ಹಾಗೂ ಸಮಾನ ಹಕ್ಕುಗಳನ್ನು ರಕ್ಷಿಸಿ, ಪೋಷಿಸುವ ಕರ್ತವ್ಯ ಬದ್ಧತೆಯು ನನ್ನ ಸೇವಾಧ್ಯೆಯವಾಗಿದೆ.”

1968ರಲ್ಲಿನ ಈ ಮಾತುಗಳು ಇಂದಿಗೂ ಪ್ರಸ್ತುತ. ಇಂದಿನ ಮುಂದಿನ ನ್ಯಾಯಮೂರ್ತಿಗಳು ಈ ದಾರಿಯಲ್ಲಿ ಮುನ್ನಡೆದರೆ ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದು, ಘನತೆ ಮತ್ತು ಗೌರವಗಳನ್ನು ಕಾಪಾಡಬಹುದು.

ಹೈಕೋರ್ಟಿನ ನ್ಯಾಯಮೂರ್ತಿಗಳಾಗಿ ಮಹತ್ತರ ತೀರ್ಪುಗಳನ್ನು ನೀಡಿ ತಾನೊಬ್ಬ ಪ್ರತಿಭಾವಂತ ನ್ಯಾಯಮೂರ್ತಿಯೆಂದು ಹೆಸರು ಗಳಿಸಿದರು. ಮುಂದುವರೆದು ಅಂದಿನ ಕೇಂದ್ರ ಸಚಿವರಾದ ಕುಮಾರಮಂಗಳಂರವರ ಆಸಕ್ತಿ ಮತ್ತು ಕೋರಿಕೆ ಮೇರೆಗೆ 1971ರಲ್ಲಿ ಭಾರತದ ಕಾನೂನು ಆಯೋಗದ ಸದಸ್ಯರಾಗಿ ಕರ್ತವ್ಯ ವಹಿಸಿಕೊಂಡರು. ನಂತರ 1973ರಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಸ್ವಲ್ಪ ಇದೇ ಸಮಯದಲ್ಲೇ ನ್ಯಾಯಮೂರ್ತಿಗಳಾದ ಪಿ.ಎನ್. ಭಗವತಿ, ಹೆಚ್.ಆರ್. ಖನ್ನಾ, ದೇಸಾಯಿ, ಚಿನ್ನಪ್ಪರೆಡ್ಡಿಯಂತವರು ಸರ್ವೋಚ್ಛ ನ್ಯಾಯಾಲಯವನ್ನು ಪ್ರವೇಶಿಸಿದರು. ಇವರುಗಳು ಇಡೀ ನ್ಯಾಯಾಂಗದ ಚಿತ್ರಣವನ್ನೇ ಬದಲಿಸಿದರು.

ದೇಶದಲ್ಲಿ ಬದಲಾಗುತ್ತಿರುವ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯನ್ನು ನ್ಯಾಯ ವಿತರಣಾ ಪ್ರಕ್ರಿಯೆಗೆ ಸಮೀಕರಿಸುವ ವಿನೂತನ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಸ್ವದೇಶಿ ನ್ಯಾಯಶಾಸ್ತ್ರಕ್ಕೆ ಹಾಗೂ ಕಾಮನ್ ಲಾ ನ್ಯಾಯಶಾಸ್ತ್ರಕ್ಕೆ ಮಹಾನ್ ಕೊಡುಗೆ ನೀಡಿದರು. ತಮ್ಮ ತೀರ್ಪುಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದರು. ಮತ್ತು ಸಾಮಾಜಿಕ ನ್ಯಾಯದ ವ್ಯಾಖ್ಯಾನವನ್ನು ವಿಸ್ತರಿಸಿದರು. ಇವರ ದೃಷ್ಠಿಯಲ್ಲಿ ಕಾನೂನು ಎಂಬುದು ಜಡ ಉಪಕರಣವಾಗದೇ ಶೋಷಣೆ ಮತ್ತು ಅನ್ಯಾಯವನ್ನು ಹಿಮ್ಮೆಟ್ಟಿಸುವ ‘ಸಾಣೆ ಹಿಡಿಯಬಹುದಾದ ದಿಟ್ಟ ಆಯುಧ’ ಯೆಂಬುದಾಗಿ ಪ್ರತಿಪಾದಿಸಿದರು.

ಸಣ್ಣ ಅತೀ ಸಣ್ಣ ಪ್ರಕರಣಗಳಲ್ಲಿ ಮಹತ್ತರ ನ್ಯಾಯ ಶಾಸ್ತ್ರವನ್ನು ಬೆಳೆಸಿದರು. ಜೈಲುಗಳ ಪರಿಸ್ಥಿತಿಯನ್ನು ಮಾನವೀಯಗೊಳಿಸಿದರು. ಸಾಮಾನ್ಯವಾಗಿ ಬೇಲ್ ಪಡೆಯುವುದು ಒಂದು ಹಕ್ಕು. ಬೇಲು ನಿರಾಕರಣೆ ಅಪರೂಪ. ಜೈಲಿನಲ್ಲಿರುವ ಕೈದಿಗಳಿಗೂ ಕೂಡ ಘನತೆಯಿಂದ ಜೀವಿಸುವ ಹಕ್ಕು ಇದೆ. ಸರಪಳಿ ತೊಡಿಸುವುದು, ಕೈ ಕೋಳ ತೊಡಿಸುವುದು, ಯಾರೊಂದಿಗೂ ಬೆರೆಯದಂತೆ ನಿರ್ಬಂಧಿಸುವುದು ಮುಂತಾದುವುಗಳನ್ನು ಅಸಿಂಧುಗೊಳಿಸಿದರು. ಕೈದಿ ಬರೆದ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿದರು. ಬಡವರ, ದಲಿತರ, ಮಹಿಳೆಯರ, ಕಾರ್ಮಿಕರ ಹಕ್ಕುಗಳಿಗೆ ಹೊಸ ರೂಪ ನೀಡಿದರು. ಇವು ಕೇವಲ ಕೆಲವು ತೀರ್ಪುಗಳು ಮಾತ್ರ.

8 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ 1980 ನವೆಂಬರ್ 15ರಂದು ನಿವೃತ್ತಿಯಾದರು. ಅಂದಿನ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಎಲ್‌.ಎಂ. ಸಿಂಘ್ವಿರವರು ಬೀಳ್ಕೊಡುಗೆ ಸಮಾರಂಭದಲ್ಲಿ ಈ ರೀತಿ ಹೇಳಿದ್ದಾರೆ: “ವಕೀಲರ ಸಂಘ ಎಂಬುದು ನ್ಯಾಯಾಧೀಶರಿಗೇ ನ್ಯಾಯಾಧೀಶನಿದ್ದಂತೆ, ವಕೀಲರ ಸಂಘದ ತೀರ್ಪುಗಳನ್ನು ಯಾವ ನ್ಯಾಯಾಧೀಶರು ಕಡೆಗಣಿಸುವುದಾಗಲೀ ತಪ್ಪಿಸಿಕೊಳ್ಳುವುದಕ್ಕಾಗಲೀ ಸಾಧ್ಯವಿಲ್ಲ ಎಂಬುದನ್ನು ನೆನಪಿಸಲು ದಯಮಾಡಿ ಅವಕಾಶ ನೀಡಿ. ನಮ್ಮ ನಿರ್ಣಾಯಕವಾದ ತೀರ್ಪನ್ನು ಆಲಿಸಲು ಈ ಸಂಜೆ ನಿಮಗೆ ಸಮನ್ ಮಾಡಲಾಗಿದೆ. ಮಮತೆ ಮತ್ತು ಮೆಚ್ಚುಗೆಯ ಕಟ್ಟಾಜ್ಞೆಯೇ ನಮ್ಮ ಈ ತೀರ್ಪು. ಸ್ವಯಂ ಪ್ರೇರಿತವಾಗಿ ನಡೆಯುತ್ತಿರುವ ಈ ವಿಚಾರಣಾ ಪ್ರಕ್ರಿಯೆಗಳಲ್ಲಿ ನಾವೆಲ್ಲರೂ ಘೋಷಿಸಿಕೊಳ್ಳುತ್ತಿರುವುದೇನೆಂದರೆ, ನಾವುಗಳು ತಮ್ಮ ನ್ಯಾಯಾಧೀಶರಷ್ಟೇ ಅಲ್ಲ, ನಿಮ್ಮ ಜಡ್ಜ್‌ಮೆಂಟ್‌ಗಳ ಋಣಭಾರವನ್ನು ಕೂಡ ಹೊತ್ತುಕೊಂಡಿರುವರಾಗಿದ್ದೇವೆ” ಎಂದು ಪ್ರಶಂಸಿದರು.

ನ್ಯಾಯಮೂರ್ತಿ ಕೃಷ್ಣ ಅಯ್ಯರ್‌ರವರು ವೃತ್ತಿಯಿಂದ ನಿವೃತ್ತರಾದರು. ಆದರೆ ವಿಶ್ರಾಂತರಾಗಲಿಲ್ಲ. ಉಪನ್ಯಾಸ, ಬರವಣಿಗೆ, ಪ್ರತಿಭಟನೆ, ಹೀಗೆ ಬಹುಮುಖೀಯ ವಿಷಯಗಳಲ್ಲಿ ಪ್ರತಿಕ್ರಿಯೆ, ಬೇಡಿಕೆ, ಮಂಡನೆ ಮುಂತಾದ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಜನಾಂಗಭೇದದ ವಿರುದ್ಧ ಹೋರಾಡಿದರು. ನೆಲ್ಸನ್ ಮಂಡೇಲಾ ಬಿಡುಗಡೆಗೆ ಒತ್ತಾಯಿಸಿದರು. ವಿಯಟ್ನಾಂನಿಂದ ಅಮೇರಿಕ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು. ಪ್ಯಾಲೆಸ್ತೇನರಿಗೆ ಮಾತೃಭೂಮಿ ಹಕ್ಕನ್ನು ಸಮರ್ಥಿಸಿದರು. ಹೀಗೆ ಅಂತರರಾಷ್ಟ್ರೀಯ ವಿಷಯಗಳಿಗೂ ಸಂಬಂಧಿಸಿದಂತೆ ಪರಿಹಾರ ಸೂಚಿಸುತ್ತಿದ್ದರು. ದೇಶದ ಸಮಸ್ಯೆಗಳ ಬಗ್ಗೆ ಮತ್ತು ಸವಾಲುಗಳ ಬಗ್ಗೆ ಧ್ವನಿಯನ್ನು ಎತ್ತಿದರು. ಭ್ರಷ್ಟಾಚಾರ, ಕೋಮುವಾದ, ಮೂಲಭೂತವಾದ ಮತ್ತು ಜಾಗತೀಕರಣ ವಿರುದ್ಧ ತಮ್ಮ ಗಟ್ಟಿ ಧ್ವನಿಯನ್ನು ಎತ್ತಿದರು. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಪ್ರಜಾಪ್ರಭುತ್ವ ಹಕ್ಕುಗಳಿಗೆ ಅಪಾಯ ಉಂಟಾದಾಗ, ಸಾಮ್ರಾಜ್ಯಶಾಹಿ ತನ್ನ ಕರಾಳ ಸ್ವರೂಪವನ್ನು ತೋರಿದಾಗ ಅವರು ಯಾವುದೇ ಹಿಂಜರಿಕೆ ತೋರದೆ ತಮ್ಮ ಧ್ವನಿ ಎತ್ತಿದರು. ಈ ರೀತಿಯ ಚಟುವಟಿಕೆಗಳಿಂದ ಕೇರಳದ ಹೈಕೋರ್ಟಿನಲ್ಲಿ ಎರಡು ನ್ಯಾಯಾಂಗ ನಿಂದನೆ ಕೇಸ್‌ಗಳನ್ನು ಎದುರಿಸಬೇಕಾಯಿತು.

ನಿವೃತ್ತಿಯ ನಂತರ ತಮ್ಮ ಜೀವನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ: “ನಾನೊಬ್ಬ ಮನುಷ್ಯ ಎಂಬ ಪ್ರಜ್ಞೆ ನನ್ನ ಮನಸ್ಸಿನಾಳದಲ್ಲಿ ಸ್ಥಿರವಾಗಿರುವುದರಿಂದಲೇ ಯಾವುದಾದರೂ ಜೀವ ಸೃಷ್ಟಿ ಸಂಕಷ್ಟಕ್ಕೆ ಸಿಲುಕಿದಾಗ ತೀವ್ರವಾದ ಕಳವಳಕ್ಕೀಡಾಗುತ್ತೇನೆ. ಆಗ ಈ ಪ್ರಯತ್ನ ವಿಫಲವಾದರೂ ಸರಿ ಪರಿಹಾರಾತ್ಮಕ ಕ್ರಿಯೆಗಿಳಿಯುವಂತೆ ಸುಪ್ತ ಮನಸ್ಸು ಆದೇಶಿಸುತ್ತದೆ. ನನ್ನ ದೌರ್ಬಲ್ಯಗಳ ಬಗ್ಗೆ ಅರಿವಿದ್ದರೂ, ಸಹ ಜೀವಿಗಳ ಮೇಲೆ ನಡೆಯುವ ಅನ್ಯಾಯವನ್ನು ತಡೆಗಟ್ಟಲು ಆಗದೆ ನೋವಿನ ಅಸಹಾಯಕತೆಯನ್ನು ಅನುಭವಿಸುತ್ತೇನೆ.”

ಸುಮಾರು ನೂರಕ್ಕೂ ಹೆಚ್ಚು ಪುಸ್ತಕ, ವಿವಿಧ ವಿಷಯಗಳ ಮೇಲೆ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿದ್ದಾರೆ. ಹಲವು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಗಳು ಹಾಗೂ ಕಾನೂನು ಸಂಘ ಸಂಸ್ಥೆಗಳ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದರು. ಹಲವಾರು ಸಮಿತಿ, ಆಯೋಗಗಳಲ್ಲಿ ಸೇವೆ ಸಲ್ಲಿಸಿ, ಅವರು ನೀಡಿದ ವರದಿಗಳು ಮಹತ್ವದ್ದಾಗಿದ್ದು ಘನತೆಯನ್ನು ತಂದುಕೊಟ್ಟಿವೆ. ನಮ್ಮ ದೇಶದ ಎರಡನೇ ಅತಿದೊಡ್ಡ ನಾಗರಿಕ ಸನ್ಮಾನವಾದ “ಪದ್ಮವಿಭೂಷಣ” ಸೇರಿದಂತೆ ಹಲವಾರು ಪ್ರಶಸ್ತಿ ಹಾಗೂ ಗೌರವಗಳಿಗೆ ಅವರು ಭಾಜನರಾಗಿದ್ದಾರೆ.

ಕೃಷ್ಣ ಅಯ್ಯರ್‌ರವರು ಕೇವಲ ಕಾನೂನು ತಜ್ಞ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಷ್ಟೇ ಅಲ್ಲ, ಅಭೂತಪೂರ್ವ ಸಂಗೀತ ಪ್ರಿಯರೂ ಕೂಡ. ಅವರ ಪತ್ನಿ ವೀಣೆ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಮೈಸೂರಿನ ಪಿಟೀಲು ಚೌಡಯ್ಯನವರು ಅವರ ಕುಟುಂಬ ಸ್ನೇಹಿತರಾಗಿದ್ದರು. ತಮ್ಮ 99 ವಸಂತಗಳನ್ನು ಪೂರ್ಣಗೊಳಿಸಿ 100ನೇ ವರ್ಷಕ್ಕೆ ಕಾಲಿಟ್ಟಿದ್ದ ಶ್ರೀಯುತರು 2014 ಡಿಸೆಂಬರ್ 4ರಂದು ನಿಧನರಾದರು.

ನ್ಯಾಯವಾದಿಯಾಗಿ, ನ್ಯಾಯಮೂರ್ತಿಯಾಗಿ, ಮಾನವ ಹಕ್ಕುಗಳ ಪ್ರತಿಪಾದಕರಾಗಿ, ಒಳ್ಳೆಯ ಆಡಳಿತಗಾರರಾಗಿ, ಪ್ರಭಾವಿ ವಾಗ್ಮಿಯಾಗಿ, ಬರಹಗಾರರಾಗಿ, ಜನಪರ ಹೋರಾಟಗಾರರಾಗಿ ಸಮಾಜ ಸೇವೆ ಮಾಡಿದ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್‌ರವರ ಜೀವನ ನಮಗೆಲ್ಲ ಮಾದರಿ. ಅವರು ನಡೆದ ದಾರಿಯಲ್ಲಿ ನಾವು ಒಂದಷ್ಟು ದೂರ ನಡೆದು ಹೋಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು