ಜರ್ಮನ್ನರು ಆ ಒಬ್ಬ ಕ್ರೂರಿಯ ಹೆಸರನ್ನು ನೆನಪಿಸಿಕೊಳ್ಳಲು ಈಗಲೂ ಹೇಸುತ್ತಾರೆ. ಯಾವುದಾದರೂ ದೇಶಕ್ಕೆ ಭಾರತೀಯರು ಹೋದರೆ ನೀವು ಗಾಂಧಿ ನಾಡಿನವರಾ? ಎಂದು ಕೇಳುತ್ತಾರೆ. ‘ಓಹ್ ಗಾಂಧಿ ನಾಡಿನವರು….!’ ಎಂದು ಗೌರವದಿಂದ ಉದ್ಗರಿಸುತ್ತಾರೆ. ಭಾರತೀಯರಿಗಿರುವ ಜಾಗತಿಕ ಗೌರವವದು. ಶಾಂತಿ, ತ್ಯಾಗ, ಅಹಿಂಸೆ, ಸತ್ಯಾಗ್ರಹಗಳ ಮೂಲಕ ಸೂರ್ಯ ಮುಳುಗದ ಸಾಮ್ರಾಜ್ಯದ ಪ್ರಭೆಗೆ ತೆರೆಯೆಳೆದರು.
ಗಾಂಧಿ ಕೊಲ್ಲುವ, ಸುಲಿಯುವ, ಸುಳ್ಳು ಹೇಳುವ, ವಂಚಿಸುವ ಸಂಸ್ಕೃತಿಯನ್ನು ಬಿತ್ತಿದವರಲ್ಲ. ಬ್ರಿಟಿಷ್ ಪ್ರಭುತ್ವ ಜಗತ್ತಿನ ತನ್ನ ಯಾವುದೇ ಕಾಲನಿಗಳಲ್ಲಿ ಗಾಂಧಿ ಸ್ವರೂಪದ ಪ್ರತಿರೋಧವನ್ನು ಎದುರಿಸಿರಲಿಲ್ಲ. ಗಾಂಧಿ ಆ ಪ್ರಭುತ್ವವನ್ನು ಭಾರತೀಯರ ಮುಂದೆ ಮಂಡಿಯೂರಿ ಕೂರುವಂತೆ ಮಾಡಿದ್ದರು. ಆ ಮೂಲಕ ಸ್ವರಾಜ್ಯದ ಹೋರಾಟ ನಡೆಸುತ್ತಿದ್ದ ಅನೇಕ ದೇಶಗಳಿಗೆ ಮಾದರಿಯಾದರು.
ವಿಶ್ವದಾದ್ಯಂತ ಗಾಂಧಿ ತತ್ವ ಚಿಂತನೆ ಮಾರ್ಗಗಳು ಅನುಸರಣೆಗೆ ಬಂದು ಆ ಮಹಾತ್ಮನ ದೇಶಕ್ಕೆ ಗೌರವದ ಗರಿ ಮೂಡಿತು. ವಿಶ್ವಕ್ಕೆ ಬೌದ್ಧ ತತ್ವವನ್ನು ನೀಡಿದ ಭರತವರ್ಷ ಒಂದೆಡೆ, ಬುದ್ಧನ ನಾಡೆಂದು ಮತ್ತೊಂದೆಡೆ, ಗಾಂಧಿಯ ನಾಡೆಂದು ಮತ್ತೊಂಡೆ, ಅಂಬೇಡ್ಕರರಂತಹಾ ಜಗದ್ ಜ್ಞಾನಿಗಳ ಬೀಡೆಂದು ಪುರಸ್ಕರಿಸಲ್ಪಡುತ್ತಿದೆ, ಗೌರವಿಸಲ್ಪಡುತ್ತಿದೆ. ಆ ಕಾರಣಕ್ಕೆ ಭಾರತೀಯರು ಜಗತ್ತಿನ ಮುಂದೆ ಹೆಮ್ಮೆಯಿಂದ ತಲೆ ಎತ್ತಿ ನಡೆಯುವ ಅರ್ಹತೆಯನ್ನೂ ಪಡೆದಿದ್ದಾರೆ.
ಆದರೆ ಜರ್ಮನರು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅವರನ್ನು ಗುರುತಿಸೋದೇ ‘ಹಿಟ್ಲರ್ ನಾಡಿನವರು’ ಎಂದು. ಈ ಮಾತು ಕೇಳಿದಾಗ ಜರ್ಮನರು ಮೌನವಾಗುತ್ತಾರೆ. ತಲೆತಗ್ಗಿಸಿ ಕೂತುಬಿಡುತ್ತಾರೆ. ಆತನ ಹೆಸರು ಕೇಳಿದ ಇಡೀ ದಿನ ಅವರು ಅವಮಾನದಿಂದ ಕುದ್ದು, ಪಶ್ಚಾತ್ತಾಪದಿಂದ ಬಳಲಿ ನರಕ ಯಾತನೆ ಅನುಭವಿಸುತ್ತಾರೆ. ಈ ಮಾತುಗಳು ಜರ್ಮನಿಯಿಂದ ಭಾರತಕ್ಕೆ ಬಂದ ಪ್ರವಾಸಿಗಳನ್ನು ಮಾತನಾಡಿಸಿದ ನನ್ನ ಹಲವು ಸ್ನೇಹಿತರು ಆಡುವ ಮಾತು.
ಭಾರತೀಯರು ನಾಳೆ ಜಗತ್ತಿನ ಮುಂದೆ ಹೀಗೆ ತಲೆತಗ್ಗಿಸಬೇಕಾಗಬಹುದು. ಏಕೆಂದರೆ, ಭಾರತದಲ್ಲೀಗ ಅದೇ ಜರ್ಮನಿಯ ಹಿಟ್ಲರನ ಆರ್ಯ ಶ್ರೇಷ್ಠತೆ ಜನಾಂಗಿಕ ದ್ವೇಷದ ವಿಷ ಕುಡಿದ, ನೇರವಾಗಿ ಅವನಿಂದಲೇ ಪ್ರೇರಣೆ ಹೊಂದಿದ ಫ್ಯಾಸಿಸ್ಟರು ಅಧಿಕಾರದ ಗದ್ದುಗೆ ಏರಿದ್ದಾರೆ. ಅವರ ಕಾರ್ಯಸೂಚಿಗಳೆಲ್ಲವೂ ಹಿಟ್ಲರನ ಕಾರ್ಯಸೂಚಿಗಳನ್ನೇ ಹೋಲುತ್ತಿವೆ. ಇದು ಆರ್ಯನ್ ಮೂಲಭೂತವಾದ.
ಭಾರತದಲ್ಲಿ ಸಂಘ ಪರಿವಾರದ ವಾರಸುದಾರರಾದ ಪುರೋಹಿತರು ಜರ್ಮನಿಯ ನಾಜಿಗಳ ಮೂಲ ಒಂದೇ. ಕ್ಯಾಸ್ಪಿಯನ್ ಸಮುದ್ರ ಪ್ರದೇಶ ಕ್ಯಾಕ್ಟಸ್ ಬೆಟ್ಟ ಪ್ರದೇಶಗಳಲ್ಲಿ ವಿಕಾಸ ಹೊಂದಿದ ಕಕೇಷಿಯನ್ನರು, ತಮ್ಮ ಭಯಾನಕ ದಾಳಿಗಳಿಂದ ಜಗತ್ತಿನಾದ್ಯಂತ ಪಸರಿಸಿ ಅನೇಕ ದೇಶಗಳ ಮೂಲ ಸಂಸ್ಕೃತಿ ನಾಗರಿಕತೆಗಳನ್ನು ತಮ್ಮ ರಕ್ತಪಿಪಾಸು ಗುಣದಿಂದ ದಾಳಿ ಮಾಡಿ ಹಾಳುಗೆಡವಿದ ವಿಕೃತರು.
ಬಹುಪಾಲು ಯುರೋಪ್ ಖಂಡವನ್ನು ಅಮೇರಿಕಾ ಖಂಡವನ್ನು ಏಷಿಯಾದ ಇರಾನ್ ಸೇರಿ ಮಧ್ಯಪ್ರಾಚ್ಯದ ದೇಶಗಳು ಸೇರಿ ರಷ್ಯಾ, ಟರ್ಕಿ, ಉಕ್ರೇನ್ ಮೊದಲಾದ ಭೂ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ಇವರು ಈಗಾಗಲೇ ನಡೆಸಿರುವ ವಿಧ್ವಂಸಕ ಕೃತ್ಯಗಳು ಒಂದೆರೆಡಲ್ಲ. ಎರಡು ಮಹಾ ಯುದ್ಧಗಳನ್ನು ನಡೆಸಿ ಜಗತ್ತಿನಲ್ಲಿ ಕೋಟಿಗಟ್ಟಲೆ ನರ ರುಂಡಗಳ ಚೆಂಡಾಡಿದ ರಾಕ್ಷಸೀಯ ಗುಣದವರು.
ಈಗ ಜಗತ್ತು ಜನಾಂಗಿಕ ದ್ವೇಷ, ಗಡಿ ವಿವಾದಗಳು, ವ್ಯಾಪಾರಿ ಪೈಪೋಟಿ, ಗುಲಾಮಗಿರಿ, ಭಯೋತ್ಪಾದನೆ ಮೊದಲಾದ ಪಿಡುಗುಗಳಿಗೆ ಸಿಲುಕಿದ್ದರೆ ಅದರ ಹಿಂದಿನ ಶಕ್ತಿ ಈ ಕಕೇಷಿಯನ್ ಮಿದುಳೇ ಆಗಿದೆ. ಭಾರತ ಮೇಲೂ ದಾಳಿ ಮಾಡಿದ ಇವರು ಇಲ್ಲಿ ಪ್ರಭುತ್ವಗಳನ್ನೆಲ್ಲಾ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಸಾವಿರಾರು ವರ್ಷಗಳಿಂದ ಆಳುತ್ತಲೇ ಬಂದಿರುವವರು. ಬಹು ಸಂಸ್ಕೃತಿಯ ಭಾರತದಲ್ಲಿ ಈಗ ಕಕೇಷಿಯನ್ನರಾಗಲೀ (ಆರ್ಯರು), ದ್ರಾವಿಡರಾಗಲೀ, ಮಂಗೋಲರಾಗಲೀ ಯಾರೆಂದರೆ ಯಾರೂ ಒರಿಜಿನಾಲಿಟಿ ಉಳಿಸಿಕೊಂಡಿಲ್ಲ. ಭಾರತದ ಎಲ್ಲಾ ಜನಾಂಗಗಳೂ ಕಲಬೆರಕೆ.
ಅಂಡಮಾನಿನ ಜರವಾಗಳು, ನೀಲಗಿರಿಯ ಇರುಳರು ಇಂತಹ ಕೆಲವೇ ಕೆಲ ಬುಡಕಟ್ಟು ಜನಾಂಗಗಳು ಒರಿಜಿನಾಲಿಟಿ ಉಳಿಸಿಕೊಂಡಿರಬಹುದು. ಆದರೆ ಸಂಘ ಪರಿವಾರಿಗಳಿಗೆ ತಮ್ಮ ಒರಿಜಿನಾಲಿಟಿಯ ಭ್ರಮೆ ಇದೆ. ಅದನ್ನು ಉಳಿಸಿಕೊಳ್ಳುವ ಹಾಗೂ ಬಿಳಿಯ ಬಣ್ಣದ ಶ್ರೇಷ್ಠತೆಯನ್ನು ಸ್ಥಿರಗೊಳಿಸಿ, ಉಳಿದ ಶೂದ್ರರ, ದಲಿತರ ತಲೆ ಆಳುವ ಮನಸ್ಥಿತಿಯನ್ನು ಇಟ್ಟುಕೊಂಡು ಬಂದಿದೆ. ಇದರ ನಿಜಸ್ವರೂಪಗಳು ಅವರು ದ್ರಾವಿಡರನ್ನು ಕೊಂದು ರಾಕ್ಷಸ ಪಟ್ಟಕ್ಕೇರಿಸಿ ಕಟ್ಟಿದ ಪುರಾಣಗಳು, ತುಕಾರಾಮನ ಹತ್ಯೆ, ಬಸವಣ್ಣನ ಸಾವು, ಕನಕನಿಗೆ ನೀಡಿದ ಉಪಟಳ, ಶಿವಾಜಿಯ ಪಟ್ಟಾಭಿಷೇಕಕ್ಕೆ ನೀಡಿದ ಕಿರುಕುಳ, ಶಂಭೂಕನ ತಲೆ ಕಡಿದ ರಾಮ, ಏಕಲವ್ಯನ ಬೆರಳು ಕಿತ್ತುಕೊಂಡ ದ್ರೋಣಾಚಾರ್ಯ ಇವರೆಲ್ಲರ ಎಲ್ಲವುಗಳ ರೂಪದಲ್ಲಿ ಪ್ರಕಟವಾಗುತ್ತಲೇ ಬಂದಿದೆ. ಅದರ ಮತ್ತೊಂದು ವಿದ್ರೋಹದ ಉದಾಹರಣೆಯೇ ಮಹಾತ್ಮಾ ಗಾಂಧಿಯ ಹತ್ಯೆ.
ಗಾಂಧಿ ಹತ್ಯೆಯ ಬಳಿಕ ನಿಶೇಧಗೊಂಡು ನಿಶೇಧ ತೆರವಾದ ಬಳಿಕ ತನ್ನ ಛದ್ಮವೇಷದ ಮೂಲಕ ದೇಶದಲ್ಲಿ ಹಿಂದುತ್ವದ ಉರಿ ಹಚ್ಚಿ ಈಗ ಅದೇ ಬಲದ ಮೇಲೆ ದಲಿತ ಶೂದ್ರ ವರ್ಗದ ಜನಾಂಗಗಳನ್ನೇ ಇತಿಹಾಸದ ಪುರಾಣದ ಪಾಠಗಳನ್ನು ತಿರುಚಿ, ಸುಳ್ಳನ್ನು ಸತ್ಯದಂತೆ ಮಿದುಳಿನಲ್ಲಿ ತುರುಕಿ, ಆ ವರ್ಗವನ್ನೇ ಸೈನ್ಯ ಮಾಡಿಕೊಂಡು, ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ತೊಡಗಿಸಿ ದೇಶದ ಉದ್ದಗಲಕ್ಕೆ ಹಿಂಸಾಚಾರದ ರಕ್ತ ರಂಗೋಲಿ ಬಿಡಿಸಿದೆ.
ತಮ್ಮ ಕೊಲೆಗಳು, ಸುಲಿಗೆಗಳು, ಅತ್ಯಾಚಾರಗಳು, ಬಲಾತ್ಕಾರಗಳು ಎಲ್ಲವನ್ನೂ ಕಾನೂನುಬದ್ಧಗೊಳ್ಳಲು ತೊಡಗಿವೆ. ಗೋ ರಕ್ಷಕರಿಗೆ ಸರ್ಕಾರವೇ ರಕ್ಷಣೆ ನೀಡುತ್ತವೆ ಎಂದರೆ, ಅವರು ಯಾರನ್ನು ಕೊಂದರೂ ಚರ್ಮ ಸುಲಿದರೂ ಅವರಿಗೆ ಶಿಕ್ಷೆ ಇಲ್ಲ. ಮುಸ್ಲಿಮರನ್ನು ಎದುರಿಗಿಟ್ಟುಕೊಂಡು ದೇಶದ ದಲಿತ, ಶೂದ್ರ ಯುವಕರನ್ನು ರೊಚ್ಚಿಗೆಬ್ಬಿಸಿ, ಅವರನ್ನು ಅಪಾರಾಧ ಲೋಕಕ್ಕೆ ತಳ್ಳಿ, ಅತ್ತ ಯುದ್ಧ ದಾಹ, ಇತ್ತ ಬೆಲೆ ಏರಿಕೆ; ಎಲ್ಲ ರೀತಿಯ ಜನ ವಿರೋಧಿ ಪ್ರಣಾಳಿಕೆಗಳ ಮೂಲಕ ಬಹಿರಂಗವಾಗೇ ಕೊಲೆ ಸುಲಿಗೆಗೆ ದಾಳಿ, ದಬ್ಬಾಳಿಕೆಗೆ ಕರೆ ಕೊಡುತ್ತಾ ಇಡೀ ಭಾರತೀಯರನ್ನು ಜರ್ಮನಿಯ ನಾಜಿ ಹಿಂಸಾಚಾರಕ್ಕೆ ಅಣಿಗೊಳಿಸುತ್ತಿದ್ದಾರೆ.
ನಮ್ಮ ಜನರು ಹುಂಬರಾಗಿ ಮತ ನೀಡಿದ್ದಕ್ಕೆ ಈಗ ಪೌರತ್ವದ ದಾಖಲೆ ತೋರಿಸಬೇಕಾಗಿದೆ. ಖಾಸಗೀಕರಣದಿಂದ ಮೀಸಲಾತಿ ಕಳೆದುಕೊಂಡು ನಿರುದ್ಯೋಗಿಗಳಾಗಬೇಕಾಗಿದೆ. ರೈತರು ಭೂಮಿ ಕಳೆದುಕೊಳ್ಳಬೇಕಾಗಿದೆ. ಶಿಕ್ಷಣ ಕಳೆದುಕೊಳ್ಳಬೇಕಾಗಿದೆ. ಮುಂದೆ ಸಂಘಪರಿವಾರದ ಗುಲಾಮರಾಗಿ ಎಲ್ಲಾ ಹಕ್ಕುಗಳನ್ನು ಸಂಘ ಪರಿವಾರದ ಪಾದಕ್ಕರ್ಪಿಸಿ ಅವರ ಅಂಕೆಯಲ್ಲಿ ತುಟಿ ಕಚ್ಚಿಕೊಂಡು, ಉಸಿರು ಬಿಗಿಹಿಡಿದುಕೊಂಡು, ಹಿಟ್ಲರನ ಗ್ಯಾಸ್ ಚೇಂಬರಿನ ಬಿಲಿಪಶುಗಳಂತೆ, ಯಾತನಾ ಶಿಬಿರದ ಒತ್ತೆಯಾಳುಗಳಂತೆ ಬಲಿಯಾಗಬೇಕಾದ ಸ್ಥಿತಿ ನಿರ್ಮಿಸಿಕೊಂಡಿದ್ದಾರೆ.
ಮುಂದೊಂದು ದಿನ ಭಾರತೀಯರೂ ಜರ್ಮನ್ನರಂತೆ ಜಗತ್ತಿನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಶಾಂತಿಯ, ಪ್ರೇಮದ ಗುಲಾಬಿಯ ಕಂಪನ್ನು ಜಗತ್ತಿಗೆ ಬೀರಿದ ದೇಶ ನಮ್ಮದು. ನಾಳೆ ಅದೇ ಜಗತ್ತಿಗೆ ರಕ್ತದ ಕೊಳೆತ ವಾಸನೆಯನ್ನು ಬೀರುವ ಹಂತ ತಲುಪಿದೆ. ನಿಜವಾಗಲೂ ಭಾರತೀಯರು ಮುಂದೆ ಜಗತ್ತಿನ ಎದುರು ಮುಖ ತೋರಿಸಲು ನಾಚಬೇಕಾಗುತ್ತದೆ.
– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು