October 1, 2023 7:48 am

ಮೌಢ್ಯಾಚರಣೆ – ವೈಚಾರಿಕತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಮೂಢನಂಬಿಕೆಗಳ ಪ್ರಾರಂಭ

ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ ನಡೆಯುತ್ತಲೇ ಇದೆ. ಪ್ರಕೃತಿಯ ಕ್ರಿಯೆಗಳಾದ ಗುಡುಗು, ಸಿಡಿಲು, ಭೂಕಂಪ, ಬೆಂಕಿ, ಪ್ರವಾಹ, ಬಿರುಗಾಳಿಯಂತಹವುಗಳು ಮಾನವನಲ್ಲಿ ಭಯ ಉಂಟು ಮಾಡಿದವು. ಹುಟ್ಟು, ಸಾವು, ರೋಗರುಜಿನಗಳು, ಕನಸುಗಳು ಇತ್ಯಾದಿ ಮಾನವನಲ್ಲಿ ದಿಗ್ಭ್ರಾಂತಿಯನ್ನು ಉಂಟು ಮಾಡಿದವು. ಗ್ರಹಗಳ ಚಲನೆ, ಗ್ರಹಣ ಕಾಲದಲ್ಲಿ ಹಗಲಿನಲ್ಲಿಯೇ ಗಾಢಾಂಧಕಾರ, ಇತ್ಯಾದಿಗಳು ಭಯಂಕರ ಪರಿಣಾಮವನ್ನುಂಟು ಮಾಡಿದವು. ಈ ರೀತಿಯ ಭಯಭೀತಿ ಮಾನವನಲ್ಲಿ ಅನೇಕ ರೀತಿಯ ಮೂಢನಂಬಿಕೆಗಳಿಗೆ, ಅತಾರ್ಕಿಕವಾದಕ್ಕೆ, ವಿರೋಧಾಭಾಸದ ಮನೋಭಾವಕ್ಕೆ ಬುನಾದಿಯಾಯಿತು.

ಅಸ್ಪಷ್ಟವಾಗಿ ಆರಂಭವಾದ ಮೂಢನಂಬಿಕೆಗಳು ಕಾಲಕ್ರಮೇಣ ವ್ಯವಸ್ಥಿತ ರೂಪವನ್ನು ತಾಳಿದವು. ಧರ್ಮಾಂಧತೆ, ಸಂಪ್ರದಾಯ, ಜ್ಯೋತಿಷ್ಯ, ಗ್ರಹಬಲ ಪವಾಡಗಳು, ರಾಹುಕಾಲ, ಯಮಗಂಡಕಾಲ, ವಾಸ್ತು ಇತ್ಯಾದಿಯಾಗಿ ರೂಪ ಪಡೆದುಕೊಂಡು ತಲೆಮಾರಿಂದ ತಲೆಮಾರಿಗೆ ಮುಂದುವರೆಯುತ್ತಾ ಬಂದವು. ಈ ಮೂಢನಂಬಿಕೆಗಳು ಜಗತ್ತಿನ ಪ್ರತಿಯೊಂದು ದೇಶದಲ್ಲಿ, ಪ್ರತಿಯೊಂದು ಜನಾಂಗದಲ್ಲಿ ಮತ್ತು ಎಲ್ಲಾ ಕಾಲದಲ್ಲಿ ಕಾಣಸಿಗುತ್ತವೆ. ಹೀಗೆ ಮೂಢನಂಬಿಕೆಗಳು ಸಾರ್ವತ್ರಿಕವಾದವು.

ಮೂಢನಂಬಿಕೆಗಳು ಮುಂದುವರಿಯಲು ಕಾರಣಗಳು

ಮಗು ಗರ್ಭದಿಂದ ಈ ಪ್ರಪಂಚಕ್ಕೆ ಬಂದಾಗ ಆಗುವ ಮೊದಲ ಅನುಭವ ಭಯ. ಬೆಳೆಯುವುದು ಭಯದ ವಾತಾವರಣದಲ್ಲಿಯೇ. ಮನೆಯಲ್ಲಿ ಮತ್ತು ಮನೆಯ ಹೊರಗಡೆ ದೊಡ್ಡವರು ತಿಳಿದೋ, ತಿಳಿಯದೆಯೋ ಮಕ್ಕಳನ್ನು ಅಂಜುಬುರುಕರನ್ನಾಗಿ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯ ತನಕ ಅಧೈರ್ಯದ ವಿಷಯಗಳನ್ನು ಹೇಳಿ ಅರ್ಥವಿಲ್ಲದ ಕರ್ಮಗಳಲ್ಲಿ ಮಕ್ಕಳನ್ನು ತೊಡಗುವಂತೆ ಮಾಡುತ್ತಾರೆ. ಜೀವನದಲ್ಲಿ ಕಷ್ಟಗಳು ಸಂಭವಿಸಿ ಒಂದಾದ ಮೇಲೊಂದು ಪೆಟ್ಟು ಬಿದ್ದಾಗ ಮನುಷ್ಯನ ವಿವೇಚನಾ ಶಕ್ತಿ ಊಹಿಸಲಾರದಷ್ಟು ಕಡಿಮೆಯಾಗಿ ಹೇಳಿದ್ದನ್ನೆಲ್ಲಾ ನಂಬುವ ಮಟ್ಟಕ್ಕೆ ತಲುಪಿರುತ್ತಾನೆ.

ಧರ್ಮ ಮನುಷ್ಯನನ್ನು ಸೃಷ್ಟಿಸಲಿಲ್ಲ, ಬದಲಾಗಿ ಮನುಷ್ಯ ಧರ್ಮವನ್ನು ಸೃಷ್ಟಿಸಿದ. ಜಗತ್ತಿನ ಎಲ್ಲಾ ಧರ್ಮಗಳು ಪ್ರಾರಂಭವಾದದ್ದು ಜನರ ಕಣ್ಣೀರನ್ನು ಒರೆಸುವುದಕ್ಕಾಗಿ. ಅವರ ಸಂಕಷ್ಟವನ್ನು ಪರಿಹರಿಸುವುದಕ್ಕಾಗಿ. ರೋಮ್ ನಾಗರಿಕತೆಯಲ್ಲಿ ಗುಲಾಮರ ಸಂಕಷ್ಟಗಳನ್ನು ಪರಿಹರಿಸಲು ಕ್ರೈಸ್ತ ಧರ್ಮ ಹುಟ್ಟಿತು. ಮಧ್ಯ ಏಷಿಯಾದಲ್ಲಿ ಕೊಲೆ, ಲೂಟಿ, ದರೋಡೆ, ಹಿಂಸೆಗಳಿಂದ ನೊಂದ ಜನರ ದುಃಖವನ್ನು ಪರಿಹರಿಸಲು ಇಸ್ಲಾಂ ಧರ್ಮ ಹುಟ್ಟಿಕೊಂಡಿತು. ಭಾರತ ಬಲಿ ಹಿಂಸೆಗಳಿಗೆ ತತ್ತರಿಸಿದ ಜನರ ಕಷ್ಟವನ್ನು ಪರಿಹರಿಸಲು ಜೈನ – ಬೌದ್ಧ ಧರ್ಮಗಳು ಹುಟ್ಟಿಕೊಂಡವು. ಮುಂದುವರೆದು ಇದೇ ಉದ್ದೇಶದಿಂದ ಹುಟ್ಟಿದ್ದೇ ಸಿಖ್ ಧರ್ಮ. ಆದ್ದರಿಂದಲೇ ದಮನಕ್ಕೊಳಗಾದ ಜನರ ಧ್ವನಿಯೇ ಧರ್ಮವೆಂದು ಹೇಳಲಾಗಿದೆ. ಕ್ರಮೇಣ ಧರ್ಮವು ಕೆಲವೇ ಜನರ ಹಿತಾಸಕ್ತಿ ಕಾಯುವ ಅಸ್ತ್ರವಾಯಿತು. ಧರ್ಮ ಅಪ್ರಜಾಪ್ರಭುತ್ವಗೊಂಡು, ಮೂಲಭೂತವಾದವಾಯಿತು. ಧರ್ಮ ರಾಜಕಾರಣದ ಜೊತೆ ಬೆರೆತು ಕೋಮುವಾದವಾಯಿತು. ಧರ್ಮದ ಹೆಸರಿನಲ್ಲಿ ಕೆಲವು ಪವಾಡ ಪುರುಷರು ಕೈ ಚಳಕದ ಪ್ರದರ್ಶನಗಳಾದ ಗಾಳಿಯಿಂದ ಬೂದಿ ಉದುರಿಸುವುದು, ಮುಷ್ಟಿಯೊಳಗಿನಿಂದ ಚಿನ್ನದ ಸರ ಹೊರತೆಗೆಯುವುದು, ಬೆಂಕಿಯನ್ನು ನುಂಗುವುದು, ನಾಲಿಗೆಗೆ ತ್ರಿಶೂಲದಿಂದ ಚುಚ್ಚಿಕೊಳ್ಳುವಂತಹ ಪವಾಡಗಳನ್ನು ಮಾಡಿ ಮುಗ್ಧ ಜನರನ್ನು ತಮ್ಮ ಗುಲಾಮರನ್ನಾಗಿಸಿಕೊಂಡು ಶೋಷಿಸ ತೊಡಗಿದರು.

ವರ್ಗ ಸಮಾಜದಲ್ಲಿ ಕೆಲವೇ ಜನರಿಗೆ ತುಂಬ ಅನುಕೂಲವಾಗಿ ಬಹುಸಂಖ್ಯಾತರಿಗೆ ಅನಾನುಕೂಲವಾಗಿರುತ್ತದೆ. ಈ ಅಸಮಾನತೆಯು ಸಮಾಜದಲ್ಲಿ ಬಹುಸಂಖ್ಯಾತರನ್ನು ಬಾಯಿಮುಚ್ಚಿಸಿ ಅವರು ಪ್ರಶ್ನಿಸದಂತೆ ಮಾಡಿ ನಿರಂತರ ಶೋಷಣೆಯನ್ನು ಮುಂದುವರೆಸಲು ಮತ್ತು ಸತ್ಯಾಂಶವನ್ನು ಮರೆಮಾಚಲು ಸಾಂಸ್ಕೃತಿಕ, ಭಾವನಾತ್ಮಕ, ಸನ್ಮಾರ್ಗ, ಮೂಢನಂಬಿಕೆಗಳು, ಕಂದಾಚಾರಗಳು ಇತ್ಯಾದಿ ಹೆಸರುಗಳಲ್ಲಿ ಕರೆಯಲ್ಪಡುವ ಎಲ್ಲಾ ಪ್ರಕಾರಗಳನ್ನು ಉಪಯೋಗಿಸುತ್ತದೆ. ಆದ್ದರಿಂದಲೇ ಇಂದಿಗೂ ಸಹ ಸಮಾಜದ ವರ್ಗದ ಜನರಿಂದ ಮೂಢನಂಬಿಕೆಗಳಿಗೆ, ಗೊಡ್ಡು ಸಂಪ್ರದಾಯಗಳಿಗೆ ಮತ್ತು ಕಂದಾಚಾರಗಳಿಗೆ ಬೆಂಬಲ ಸಿಗುತ್ತಿರುವುದು.

ಸ್ವಾತಂತ್ರ್ಯ ಬಂದಾಗಿನಿಂದ ಶೇ.20ರಷ್ಟು ಅಕ್ಷರಸ್ಥರಿದ್ದ ದೇಶವನ್ನು ಇಂದು ಶೇ.79ರಷ್ಟು ಅಕ್ಷರಸ್ಥರ ದೇಶವನ್ನಾಗಿ ಮಾಡಿದ್ದೇವೆ. ಆದರೂ ನಮ್ಮ ಶಿಕ್ಷಣ ವ್ಯವಸ್ಥೆಯು ಶುದ್ಧವಾದ ವಿವೇಚನಾ ಮಾರ್ಗವನ್ನು ಹೇಳಿಕೊಡಲಿಲ್ಲ. ಮಕ್ಕಳಲ್ಲಿ ತಾರತಮ್ಯ, ಪಕ್ಷಪಾತವನ್ನು ಹುಟ್ಟುಹಾಕುತ್ತಿದೆ, ಬಡವ ಬಲ್ಲಿದರ ನಡುವೆ ಅಂತರವನ್ನು ಹೆಚ್ಚಿಸಿ ಭೇದಭಾವವನ್ನು ಮೂಡಿಸುತ್ತಿದೆ. ಮಕ್ಕಳಿಗೆ ಸಮಾನ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿಲ್ಲ. ಹೀಗೆ ನಮ್ಮ ಶಿಕ್ಷಣ ಪದ್ಧತಿ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡುವಲ್ಲಿ ಸೋತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಮಹತ್ತರ ಸಾಧನೆಯನ್ನು ಮಾಡಿದ್ದೇವೆ. ಇದರ ಪರಿಣಾಮವಾಗಿ ನಮ್ಮ ದೇಶದ ಸಂಪತ್ತು ಹೆಚ್ಚಿದೆ. ಆದರೆ ದಿನೇದಿನೇ ಉಳ್ಳವರ ಮತ್ತು ಬಡವರ ಮಧ್ಯೆ ಅಂತರ ಹೆಚ್ಚುತ್ತಿದೆ. ವಿಜ್ಞಾನ ಬೆಳೆದಿದೆಯೇ ಹೊರತು ವೈಜ್ಞಾನಿಕ ಮನೋಭಾವ ಬೆಳೆಯಲಿಲ್ಲ. ವಿಜ್ಞಾನದ ಸಾಧನೆಗಳ ಲಾಭಗಳು ಬಡವರಿಗೆ ತಲುಪಲೇ ಇಲ್ಲ.

ಸರಿಸುಮಾರು ಶೇ. 66ರಷ್ಟು ಮನೆಗಳಲ್ಲಿ ಟಿ.ವಿ ಇದೆ. ಶೇ. 88ರಷ್ಟು ಜನರು ಟಿ.ವಿಯನ್ನು ನೋಡುತ್ತಾರೆ. ಕನಿಷ್ಠ 150 ವಿವಿಧ ಬಗೆಯ ಚಾನಲ್ಲುಗಳು ನಮ್ಮ ಟಿ.ವಿ.ಗಳಲ್ಲಿ ಸಿಗುತ್ತವೆ. ಪ್ರತಿ ದಿವಸ 24 ಗಂಟೆ ಬೇಕಾದರೂ ನೋಡಬಹುದು. ತಮ್ಮ ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಳ್ಳಲು ವಾಸ್ತು, ಗ್ರಹಬಲ, ವಾರಫಲ, ಜ್ಯೋತಿಷ್ಯ ಇತ್ಯಾದಿಗಳಿಗೆ ಆದ್ಯತೆಯನ್ನು ನೀಡಿ ಇವು ಜನರಲ್ಲಿ ಮೌಡ್ಯತೆಯನ್ನು ಹೆಚ್ಚಿಸುತ್ತಿವೆ.

ನಂಬಿಕೆಗಳು ಮತ್ತು ಮೂಢನಂಬಿಕೆಗಳು

ಮಾನವನಿಗೆ ನಂಬಿಕೆ ಇರಬೇಕು. ನಂಬಿಕೆಗಳು ಮಾನವನ ಉಸಿರು ಮತ್ತು ಅವನ ಬಾಳು ನಂಬಿಕೆಯ ಮೇಲೆ ನಿಂತಿದೆ. ನಾವು ಬಾಲ್ಯದಿಂದಲೇ ಒಂದಲ್ಲಾ ಒಂದು ರೀತಿಯ ನಂಬಿಕೆಗಳನ್ನು ಕಟ್ಟಿಕೊಳ್ಳುತ್ತಲೇ ಹೋಗುತ್ತೇವೆ. ಮುಂದೆ ಬೆಳೆಯುತ್ತಾ ಕೆಲವನ್ನು ಕೈ ಬಿಟ್ಟು ಹೊಸದನ್ನು ಒಪ್ಪಿಕೊಂಡಿರುತ್ತೇವೆ. ಬದುಕಿನಲ್ಲಿ ಎದುರಾಗುವ ಹೊಸ, ಅಪರಿಚಿತ, ವಿಚಿತ್ರ ನಿಗೂಢ ವಿದ್ಯಮಾನಗಳನ್ನು ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು, ಅವುಗಳನ್ನು ನಿರ್ವಹಿಸಲು ನಂಬಿಕೆಗಳು ನಮಗೆ ನೆರವಾಗುತ್ತವೆ. ಹಲವು ನಂಬಿಕೆಗಳು ಜನರಲ್ಲಿ ಆತ್ಮವಿಶ್ವಾಸ, ಧೈರ್ಯ, ಶಾಂತಿ, ಸಮಾಧಾನ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಇಂತಹ ನಂಬಿಕೆಗಳು ಇದ್ದರೆ ತೊಂದರೆಯಿಲ್ಲ. ಆದರೆ ಅವು ಶೋಷಣೆಗೆ ದಾರಿಯಾಗಬಾರದಷ್ಟೆ.

ಇನ್ನೊಬ್ಬರು ನಂಬಿದ ವಿಷಯವನ್ನು, ನಡೆದ ಹಾದಿಯನ್ನು, ಅಂಧಾಭಿಮಾನದಿಂದ ಅನುಸರಿಸಿದರೆ ಅದು ಮೌಡ್ಯವಾಗುತ್ತದೆ. ವಿವೇಚನಾ ರಹಿತವಾದ ಅನುಭವವೇದ್ಯವಲ್ಲದ, ತಿಳುವಳಿಕೆ ಹೊಂದಿಲ್ಲದ ನಂಬಿಕೆಗಳು ಮೂಢನಂಬಿಕೆಗಳಾಗುತ್ತವೆ. ಕೆಲವು ಮೂಢನಂಬಿಕೆಗಳು ಕ್ರೂರ, ಅನಾರೋಗ್ಯಕರ, ಅಪಾಯಕಾರಿ, ಅಮಾನವೀಯ, ವಿಧ್ವಂಸಕಾರಿ ಸ್ವರೂಪದ್ದಾಗಿರುತ್ತವೆ. ಇಂತಹ ಹಾನಿಕಾರಕ ಮೂಢನಂಬಿಕೆಗಳು ಜನರ ಗಮನವನ್ನು ಸಮಸ್ಯೆಯ ಮೂಲಕಾರಣದಿಂದ ಪ್ರತ್ಯೇಕಿಸಿ, ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳದಂತೆ ತಡೆದು ಅವರಲ್ಲಿ ಅಸಹಾಯಕತೆ ಮತ್ತು ಸೋಲಿನ ಭಾವನೆಯನ್ನು ಹುಟ್ಟು ಹಾಕುತ್ತವೆ. ತಿಳುವಳಿಕೆ ಇಲ್ಲದವರ ಮನಸ್ಸನ್ನು ದುರ್ಬಲಗೊಳಿಸಿ ತಮ್ಮ ಶಕ್ತಿ ಸಾಮರ್ಥ್ಯಗಳ ಅರಿವಿಲ್ಲದ ಸೋಮಾರಿಗಳನ್ನಾಗಿ ಮಾಡುತ್ತವೆ. ಜನರ ಅಂತಃಶಕ್ತಿಯನ್ನು ಕುಗ್ಗಿಸಿ ಪ್ರಾರಬ್ಧಕ್ಕೆ ದಾಸರನ್ನಾಗಿ ಮಾಡುತ್ತವೆ. ಇಂತಹ ಮೂಢನಂಬಿಕೆಗಳು ಜಾತಿ, ಮತ, ವರ್ಣ, ಲಿಂಗಾಧಾರಿತ ಅಸಮಾನತೆಯನ್ನು ಹುಟ್ಟುಹಾಕಿ ಶೋಷಣೆ, ಗುಲಾಮಗಿರಿ, ಅಸ್ಪೃಶ್ಯತೆ, ಮೇಲು-ಕೀಳು ಎಂಬ ಭಾವನೆಗಳನ್ನು ಪ್ರಚೋದಿಸುತ್ತವೆ. ಕೆಲವರು ಇಂತಹ ಮೂಢನಂಬಿಕೆಗಳನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ಅರಿವಿಲ್ಲದ ಸಾಮಾನ್ಯ ಜನರನ್ನು ವಂಚಿಸಿ, ಮೋಸಗೊಳಿಸಿ ಶೋಷಣೆಗೆ ಒಳಪಡಿಸುವುದನ್ನು ಕಾಣಬಹುದಾಗಿದೆ.

ಮೌಡ್ಯತೆ ಬಡತನವನ್ನು ತರುವುದರ ಜೊತೆಗೆ ಪಕ್ಷಪಾತ, ಕೋಮುದ್ವೇಷ ಜಾತಿಭೇದ, ಪ್ರಾಂತೀಯಭೇದ ಇತ್ಯಾದಿಗಳು ಬೆಳೆಯಲು ಕಾರಣವಾಗಿದೆ. ಸಾಂಪ್ರದಾಯಿಕ ನಿಯಮಗಳಿಗೆ ಅಡಿಯಾಳಾಗಿದ್ದುಕೊಂಡು ಎಲ್ಲಾ ಸಾಮರ್ಥ್ಯ ಹಾಗೂ ಚಾರಿತ್ರಿಕ ಪರಂಪರೆಯ ಸತ್ಯಗಳಿಂದ ದೂರವಾಗುವಂತೆ ಮಾಡಿದೆ. ಕೊಲೆಯನ್ನೇ ಒಂದು ಧಾರ್ಮಿಕ ಆಚರಣೆಯನ್ನಾಗಿ ರೂಪಿಸಿದೆ. ಸ್ವತಃ ಬೆಳೆಯುವಂತಹ ಸಾಮರ್ಥ್ಯವಿರುವ ಸಮಾಜವನ್ನು ಎಂದಿಗೂ ಬೆಳೆಯಲಾಗದ ಹಾಗೆ ಮಾರ್ಪಡಿಸಲಾಗಿದೆ. ಪ್ರಕೃತಿಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಬೇಕಾಗಿದ್ದ ಮನುಷ್ಯನೇ ಅದಕ್ಕೆ ಶರಣಾಗುವಂತೆ ಮಾಡಿವೆ ಮೂಢನಂಬಿಕೆಗಳು.

ಮೂಢನಂಬಿಕೆಗಳ ವಿರುದ್ಧ ಬಂಡಾಯ

ಭಾರತದಲ್ಲಿ ಸತ್ಯಶೋಧನೆ ಮತ್ತು ಅಂಧಶ್ರದ್ಧೆಗೆ ಸವಾಲುಗಳನ್ನು ಒಡ್ಡಿದ ದೊಡ್ಡ ಇತಿಹಾಸವೇ ಇದೆ. ಮೊತ್ತಮೊದಲು ಇಂಥ ಮೌಢ್ತವನ್ನು ಪ್ರಶ್ನಿಸಿದವನು ನಿರೀಶ್ವರವಾದಿ ಚಾರ್ವಾಕ. ನಂತರ ಬಂದ ಗೌತಮಬುದ್ಧ ಹೀಗೆ ಹೇಳಿದ್ದಾನೆ.

“ಕೇಳಿದ ಮಾತನ್ನೆಲ್ಲಾ ನಂಬಬೇಡ,

ಪೂರ್ವಜರಿಂದ ನನಗೆ ಸಿಕ್ಕಿದೆಯೆಂಬ ಕಾರಣಕ್ಕಾಗಿಯೇ

ಪರಂಪರೆಯನ್ನು ಒಪ್ಪಬೇಡ:

ಹಲವು ಬಾರಿ ಹೇಳಲಾಗಿದೆಯೆಂದೇ ಯಾವುದನ್ನೂ ನಂಬಬೇಡ;

ಯಾವುದೋ ಮುನಿ ಹೇಳಿದ್ದಾನೆಂಬ ಕಾರಣದಿಂದ

ಅವರ ಮಾತುಗಳನ್ನು ನಂಬಬೇಡ;

ಕೇವಲ ಕಲ್ಪನೆಗಳನ್ನು ನಂಬಬೇಡ;

ಅಧಿಕಾರಸ್ಥರು, ಗುರುಗಳು ಅಥವಾ ಹಿರಿಯರು

ಹೇಳಿದ್ದಾರೆಂದು ನಂಬಬೇಡ;

ಪ್ರತಿಯೊಂದನ್ನೂ ಗಮನಿಸು, ವಿಶ್ಲೇಷಿಸು,

ತಾರ್ಕಿಕವಾಗಿ ಸರಿ ಇದ್ದರೆ, ಎಲ್ಲರಿಗೂ ಅದರಿಂದ

ಒಳ್ಳೆಯದಾಗುವಂತಿದ್ದರೆ ಅದನ್ನು ನಂಬು ಮತ್ತು ಪಾಲಿಸು”

ಕರ್ನಾಟಕದಲ್ಲಿ 12ನೆಯ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪವನ್ನು ಕಟ್ಟಿದರು. ಅದು ವೈಚಾರಿಕತೆಗೆ ಮತ್ತು ಮುಕ್ತ ಚಿಂತನೆಗೆ ಒಂದು ವೇದಿಕೆಯಾಗಿತ್ತು. ಭಾರತದ ವಿವಿಧ ಭಾಗಗಳಿಂದ ಬಂದ ವಿವಿಧ ಚಿಂತನೆಗಳುಳ್ಳ ವಿವಿಧ ಜಾತಿ, ವರ್ಗಗಳ ಜನರು ಅನುಭವ ಮಂಟಪದಲ್ಲಿನ ಚರ್ಚೆಗಳಲ್ಲಿ ಭಾಗಿಗಳಾಗಿದ್ದರು. ವೈಚಾರಿಕತೆ, ವಾಸ್ತವ, ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿದ್ದವು. ಪ್ರಶ್ನಿಸುವ ಮನೋಧರ್ಮವನ್ನು ಮುಕ್ತ ಚರ್ಚೆಯನ್ನು ಪ್ರೋತ್ಸಾಹಿಸಿದರು. ಪರಂಪರಾನುಗತವಾದ ನಂಬಿಕೆಗಳನ್ನು ಆಚರಣೆಗಳನ್ನು ವಿಶ್ಲೇಷಣೆಗೆ ಗುರಿಪಡಿಸಿ ಜನರನ್ನು ಮೌಢ್ಯತೆಗಳಿಂದ ಅರ್ಥಹೀನ ಆಚರಣೆಗಳಿಂದ ಬಿಡುಗಡೆಗೊಳಿಸುವ ಪ್ರಯತ್ನ ಮಾಡಿದರು. ವರ್ಗ, ಜಾತಿ, ಲಿಣಗ ಭೇದವಿಲ್ಲದ ಸಮ ಸಮಾಜದ ನಿರ್ಮಾಣಕ್ಕೆ ವಚನಕಾರರು ಶ್ರಮಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ, ಅದೊಂದು ಆರ್ಥಿಕ ಮತ್ತು ಸಾಮಾಜಿಕ ಹೋರಾಟವೂ ಆಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಾಜಕೀಯ ಅಧಿಕಾರ ನಮ್ಮ ಕೈಗೆ ಬರಬೇಕೆಂದು ಒಂದು ಕಡೆ ಹೋರಾಟ ನಡೆದರೆ, ಮತ್ತೊಂದೆಡೆ ಪಾಳೆಗಾರಿಕೆ ಪದ್ಧತಿ ಹೋಗಬೇಕು, ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಕೆಲಸಕ್ಕೆ ಸಮನಾದ ಕೂಲಿ ಸಿಗಬೇಕೆಂಬ ಆರ್ಥಿಕ ಹೋರಾಟವೂ ನಡೆಯಿತು. ಜೊತೆಜೊತೆಯಲ್ಲಿ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಸಾಮಾಜಿಕ ಹೋರಾಟವೂ ನಡೆಯಿತು. ಈ ಹೋರಾಟಗಳ ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಸತಿ ಪದ್ಧತಿ ನಿಷೇಧ ಕಾಯಿದೆ, ಸ್ತ್ರೀ ಭ್ರೂಣ ಹತ್ಯೆ ನಿಷೇಧ ಕಾಯಿದೆ, ದೇವದಾಸಿ ಪದ್ಧತಿ ನಿಷೇಧ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆ, ವಿಧವಾ ಪುನರ್ವಿವಾಹ ಕಾಯಿದೆ, ಅಸ್ಪೃಶ್ಯತೆ ನಿಷೇಧ ಕಾಯಿದೆಗಳನ್ನು ಜಾರಿಗೆ ತಂದಿತು.

ಭಾರತದ ಸಂವಿಧಾನ

ಸ್ವಾತಂತ್ರ್ಯ ಬಂದ ನಂತರ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಲಿಖಿತ ಸಂವಿಧಾನವನ್ನು ಒಪ್ಪಿ ಭಾರತ ಗಣರಾಜ್ಯವಾಯಿತು. ನಮ್ಮ ಸಂವಿಧಾನದಲ್ಲಿ ಪಾಳೆಗಾರಿಕೆ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಎಲ್ಲಾ ವ್ಯಕ್ತಿಗಳು ಕಾನೂನಿನ ದೃಷ್ಟಿಯಲ್ಲಿ ಸಮಾನರು, ಧರ್ಮ, ಜಾತಿ, ಕುಲ, ಲಿಂಗಗಳ ಆಧಾರದ ಮೇಲೆ ತಾರತಮ್ಯ ನಿಷೇಧಿಸಲಾಗಿದೆ. ಸಮಾನ ಅವಕಾಶಗಳು ಎಲ್ಲರಿಗೂ ಸಿಗುವಂತೆ ಮಾಡಿದೆ. ಎಲ್ಲರಿಗೂ ಸಮಾನ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ನಮ್ಮ ಸಂವಿಧಾನದ ಅನುಚ್ಛೇದ 51ಎ ರಲ್ಲಿ ನಾಗರಿಕ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದೆ. ವಿಷಯಕ್ಕೆ ಸಂಬಂಧಿಸಿದ ಕರ್ತವ್ಯವೆಂದರೆ:

‘ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಮತ್ತು ಅನ್ವೇಷಣೆ ಮತ್ತು ಸುಧಾರಣೆ ಪ್ರವೃತ್ತಿಗಳನ್ನು ಬೆಳೆಸುವುದು”

ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು, ನಮ್ಮ ಇಷ್ಟಕ್ಕೆ, ಆಯ್ಕೆಗೆ ಬಿಟ್ಟ ಪಶ್ನೆಯಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದಲ್ಲಿ ತಿಳಿಯಪಡಿಸಿರುವ ಕರ್ತವ್ಯಗಳನ್ನು ಪಾಲಿಸುವುದು ಅವರ ಆದ್ಯ ಕರ್ತವ್ಯ. ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು, ಪ್ರತಿಪಾದಿಸುವುದು, ಪ್ರಸಾರ ಮಾಡುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯ. ನಮ್ಮ ಹಕ್ಕುಗಳ ಬಗ್ಗೆ ತೋರಿಸುವ ಕಾತುರತೆಯನ್ನು ನಮ್ಮ ಕರ್ತವ್ಯಗಳ ಬಗ್ಗೆ ತೋರಿಸುತ್ತಿಲ್ಲ. ಯಾವುದೇ ಒಬ್ಬ ಪ್ರಜೆಗೆ ಇಂತಹ ಕರ್ತವ್ಯಗಳ ನಿರ್ವಹಣೆಯ ದಿಕ್ಕಿನಲ್ಲಿ ಬಾಧಕವುಂಟಾದಾಗ ಅಂತಹ ಪ್ರಜೆಯು ಕಾನೂನಿನ ರಕ್ಷಣೆಯನ್ನು ಪಡೆಯಬಹುದು. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಕಾನೂನಿನ ರಕ್ಷಣೆ ಪಡೆಯಲು ಅವಕಾಶ ಇರುವಂತೆ ಮೂಲಭೂತ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿ ಉಂಟಾದಾಗಲೂ ಸಹ ನ್ಯಾಯಾಲಯದ ಮೊರೆಹೋಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಿಟ್ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

ವೈಚಾರಿಕ ಮನೋಭಾವ

ವೈಚಾರಿಕತೆ ನಮ್ಮಲ್ಲಿ ಧೈರ್ಯವನ್ನು ತುಂಬಿ ಸಮರ್ಥರನ್ನಾಗಿ ಮಾಡುತ್ತದೆ. ಸ್ವತಂತ್ರ ವ್ಯಕ್ತಿತ್ವ ಪ್ರವೃತ್ತಿ, ಸ್ವಾಭಿಮಾನ, ಸ್ವಾವಲಂಬನೆ ಬೆಳೆಯಲು ಸಹಾಯ ಮಾಡುತ್ತದೆ. ವೈಚಾರಿಕ ಬುದ್ಧಿಯು ಪ್ರತಿಯೊಂದನ್ನು ವಸ್ತು ನಿಷ್ಠವಾಗಿ ಪ್ರಶ್ನೆಯ ಓರೆಗಲ್ಲಿನಲ್ಲಿ ತಿಕ್ಕಿ ನೋಡುವುದರಿಂದ ಎಲ್ಲಾ ಕಂದಾಚಾರ, ಸಾಂಪ್ರದಾಯಿಕ ಮೌಡ್ಯಗಳನ್ನು ಹೋಗಲಾಡಿಸಲು ಪ್ರಬಲವಾದ ಸಾಧನದಂತೆ ಕೆಲಸ ಮಾಡುತ್ತದೆ. ನಮ್ಮಲ್ಲಿ ದಾಸ್ಯ ಮನೋಭಾವವನ್ನು ಹಾಗು ಕೀಳರಿಮೆಯನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಪರರನ್ನು ಕರುಣೆ, ಪ್ರೀತಿ, ಮಾನವೀಯತೆ, ಸಮಾನತೆಯಿಂದ ಕಾಣುವ ಗುಣವನ್ನು ಬೆಳೆಸುತ್ತದೆ. ಜಾತಿ, ಮತ, ಲಿಂಗಭೇದವನ್ನು ಹೋಗಲಾಡಿಸಿ, ಎಲ್ಲರಲ್ಲಿ ಸಮಾನತೆಯನ್ನು ಬೆಳೆಸುತ್ತದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು, ಜನಕಲ್ಯಾಣವನ್ನು ಸಾಧಿಸಲು ಮತ್ತು ನಾಗರಿಕತೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ವೈಚಾರಿಕತೆ ಅತ್ಯಗತ್ಯ.

ಮೂಢನಂಬಿಕೆಗಳನ್ನು ಅಳಿಸುವಲ್ಲಿ ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಗಳು ತಕ್ಕ ಮಟ್ಟಿಗೆ ಸಹಾಯಕವಾಗುತ್ತವೆ ಎಂಬುದು ಸತ್ಯ. ಆದರೆ ಅದಕ್ಕಿಂತಲೂ ಮುಖ್ಯವಾಗಿ ವೈಜ್ಞಾನಿಕ ಮನೋಭಾವ ಮತ್ತು ಪ್ರಶ್ನಿಸುವ ಪ್ರಶ್ನೆಗಳ ಅಗತ್ಯವು ಹೆಚ್ಚಿನದ್ದಾಗಿದೆ. ನಮ್ಮ ಸುತ್ತಲಿನ ಜಗತ್ತಿನ ರಚನೆಯನ್ನು, ವಿದ್ಯಮಾನಗಳ ಅರಿವನ್ನು ಹಾಗೂ ಈ ಜಗತ್ತನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು ವೈಜ್ಞಾನಿಕ ಮನೋಭಾವವು ನಮಗೆ ಕಲಿಸುತ್ತದೆ. ಆ ಮೂಲಕ ನಾವು ಇನ್ನೂ ಹೆಚ್ಚು ಸಮರ್ಥವಾಗಿ, ಕಷ್ಟರಹಿತವಾಗಿ ಮತ್ತು ಸಂತೋಷಪೂರ್ಣವಾಗಿ ನಮ್ಮ ಜೀವನವನ್ನು ನಡೆಸಬಹುದು. ಆತ್ಮವಿಶ್ವಾಸ, ಘನತೆಗಳನ್ನು ಹೆಚ್ಚಿಸಿ ಭ್ರಮಾಲೋಕದಿಂದ ನಮ್ಮನ್ನು ಹೊರತಂದು ಜೀವನವನ್ನು ಅದರ ಎಲ್ಲಾ ವಾಸ್ತವತೆಗಳೊಂದಿಗೆ ಅರ್ಥೈಸಿಕೊಳ್ಳುವುದನ್ನು ಕಲಿಸುತ್ತದೆ.

ಮೂಢನಂಬಿಕೆ ವಿರೋಧಿ ಕಾನೂನುಗಳು

ವಿಚಾರವಾದಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪವಾಡಗಳನ್ನು ಬಯಲು ಮಾಡಿ ಸ್ವಯಂಘೋಷಿತ ದೇವಮಾನವರ ಮತ್ತು ಧರ್ಮದ ಹೆಸರಿನಲ್ಲಿ ಜನರಿಗೆ ಮೋಸಮಾಡುತ್ತಿದ್ದ ವಂಚಕರನ್ನು ಬಯಲಿಗೆಳೆದಿವೆ. ಸಮಾಜವನ್ನು ಕಾಡುತ್ತಿರುವ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಮುಂತಾದ ಪಿಡುಗುಗಳ ವಿರುದ್ಧ ಹೋರಾಡುವ ಸಲುವಾಗಿ ಕೆಲವರು ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ಅಂಧಶ್ರದ್ಧೆಯ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್‌ರವರು ಹೋರಾಡಿದರು. ಮೌಢ್ಯಾಚಾರದ ಪ್ರತಿಪಾದಕ ಮನಸ್ಸುಗಳು ಡಾ. ದಾಭೋಲರ್‌ರವರನ್ನು ಗುಂಡಿಕ್ಕಿ ಕೊಂದವು. ನಾಲ್ಕು ದಿವಸಗಳ ನಂತರ ಮಹಾರಾಷ್ಟ್ರ ಸರಕಾರ ಮೂಢನಂಬಿಕೆ ವಿರೋಧಿ ಕಾಯಿದೆಯನ್ನು 2013ರಲ್ಲಿ ಜಾರಿಗೆ ತಂದಿತು. ಕಳೆದ ಎಂಟು ವರ್ಷಗಳಲ್ಲಿ ಈ ಕಾಯಿದೆಯ ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಖಲಾಗಿರುವ ಹಲವು ಪ್ರಕರಣಗಳು ಹಿಂದೂಗಳು ಮತ್ತು ಮುಸಲ್ಮಾನರ ವಿರುದ್ಧ ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ನರಬಲಿಯನ್ನು ತಡೆಯಲಾಗಿದೆ. ಇಷ್ಟಾದರೂ ಮಹಾರಾಷ್ಟ್ರ ರಾಜ್ಯದಲ್ಲಿ ತಿಂಗಳಿಗೊಂದರಂತೆ ನರಬಲಿ ನಡೆಯುತ್ತಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರ ಸರಕಾರ ತಂದ ಕಾಯಿದೆಯಿಂದ ಪ್ರೇರಣೆ ಪಡೆದ ಕರ್ನಾಟಕ ಸರಕಾರವು 2017ರಲ್ಲಿ ಒಂದು ಕಾಯಿದೆಯನ್ನು ತಂದಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈ ಕಾನೂನು ಜಾರಿಯಾಗುತ್ತಿಲ್ಲ. ಕೇವಲ ಕಾನೂನು ತಂದರೆ ಸಾಲದು. ಅದನ್ನು ಜಾರಿಗೊಳಿಸುವ ಮನಸ್ಸುಗಳೂ ಬೇಕು.

ಕೊನೆಯದಾಗಿ

ಸಾವಿರಾರು ವರ್ಷಗಳಿಂದ ಬಂದಿರುವ ಮೂಢನಂಬಿಕೆಗಳು ಕಾನೂನು ರಚಿಸುವುದರಿಂದ ನಿವಾರಣೆ ಆಗುವುದಿಲ್ಲ. ಅಂದರೆ ಮೂಢನಂಬಿಕೆಗಳ ನಿವಾರಣೆಗೆ ಕಾನೂನು ಬೇಡವೆಂಬ ವಾದವಲ್ಲ! ಕಾನೂನುಗಳು ಬೇಕು ಮತ್ತು ಅವುಗಳನ್ನು ಜಾರಿ ಮಾಡುವ ಮನಸ್ಸುಗಳೂ ಬೇಕು. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ನಮ್ಮ ಶಿಕ್ಷಣದಲ್ಲಿ ಸುಧಾರಣೆಗಳನ್ನು ತಂದು ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು. ಸರ್ಕಾರದ ಕಾರ್ಯವೈಖರಿಯಲ್ಲಿ ವೈಜ್ಞಾನಿಕ ದೃಷ್ಟಿಕೋನವಿರಬೇಕು. ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸದೆ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ತಿಳಿಯಬೇಕು.

  • ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿಗಳು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು