October 1, 2023 7:43 am

ಕೊರೊನಾ ಕುರಿತ ವಾಟ್ಸಪ್ ಸಂದೇಶ ನೋಡಬೇಡಿ, ಫಾರ್ವರ್ಡ್ ಮಾಡಬೇಡಿ: ಡಾ. ಮೋಹನ್

ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ ವೆಬಿನಾರ್

ಬೆಂಗಳೂರು: ಕೋವಿಡ್ ನಲ್ಲಿ ತೀರಿಹೋಗಿರುವವರ ಬೆಲೆ ಅವರ ಮನೆಯವರಿಗೆ ಮಾತ್ರ ಗೊತ್ತು. ಅವರಿಗೆಲ್ಲ ಸಮಾಧಾನದ ಅಗತ್ಯವಿದೆ. ಸರ್ಕಾರ ಎಲ್ಲರಿಗೂ ಅಗತ್ಯ ಸೌಲಭ್ಯ ಒದಗಿಸಬೇಕು. ಎಷ್ಟೋ ಜನ ಮಾಸ್ಕ್ ಹಾಕುವುದಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಬೆಂಗಳೂರಿನ ಸ್ಮಶಾನ ಕಾರ್ಮಿಕ ಶೌರಿ ರಾಜ್ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ 10 ದಿನಗಳ ಕಾಲದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ ಎರಡನೇ ದಿನ 11/06/2021ರಂದು ಸಂಜೆ 7 ಗಂಟೆಗೆ “ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ” ವಿಷಯದ ಕುರಿತು ಜೂಮ್ ಮೀಟಿಂಗ್ ಮೂಲಕ ನಡೆದ ಉಪನ್ಯಾಸದ ಕಾರ್ಯಕ್ರಮದಲ್ಲಿ ಮಾತಾಡಿದ ಶೌರಿ ರಾಜ್, ಮಾಸ್ಕ್ ಧರಿಸದ ಒಬ್ಬ ವ್ಯಕ್ತಿಗೆ ಸರಿಯಾಗಿ ಮಾಸ್ಕ್ ಧರಿಸಿ ಎಂದು ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಿರಲಿಲ್ಲ. ಒಂದು ವಾರದ ಒಳಗೆ ಅವರು ಕೊರೊನಾದಿಂದ ತೀರಿಹೋದ ಸಂದೇಶ ಬಂತು. ಅನಂತರ ಅವರ ಮನೆಯಲ್ಲಿ ಮತ್ತೊಬ್ಬರು ತೀರಿಹೋದರು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಅಲ್ಲದೇ, ಪಿಪಿಇ ಕಿಟ್ ಇಲ್ಲದೇ ಸಂಸ್ಕಾರ ಮಾಡಿದ್ದೇನೆ. ಇಂತಹ ಪರಿಸ್ಥಿತಿ ಸದ್ಯಕ್ಕೆ ಇದೆ ಎಂದು ತಮ್ಮ ಅಳಲು ತೋಡಿಕೊಂಡರು.  

ಯಾವಾಗ ಸಾಯುತ್ತೇವೆ ಎಂದು ಗೊತ್ತಿಲ್ಲ. ಸ್ಮಶಾನವನ್ನೆಲ್ಲ ನಾವೇ ಸುತ್ತಿದ್ದೇವೆ. ವೈದ್ಯರು ತರಬೇತಿ ನೀಡಬೇಕಿತ್ತು. ಆದರೆ, ನಾವೇ ಬೆಂಗಳೂರಿನ ಸ್ಮಶಾನಗಳಿಗೆ ತಿರುಗಿದ್ದೇವೆ. ಹೇಗೆ ಕೊರೊನಾ ರೋಗಿಗಳ ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ಎಂದು ಹೇಳಿಕೊಟ್ಟೆವು ಎಂದರು.

ನಾವು 2 ತಿಂಗಳು ಮನೆಗಳಿಗೆ ಹೋಗಿಲ್ಲ. ಸ್ಮಶಾನಕ್ಕೆ ಬಂದವರಿಗೆ ಮಾಸ್ಕ್ ಧರಿಸಿ ಎಂದರೆ ನಿಮ್ಮ ಕೆಲಸ ನೀನು ನೋಡಪ್ಪ ಎನ್ನುತ್ತಾರೆ. ಸರ್ಕಾರ, ವೈದ್ಯರು ಏನು ಹೇಳುತ್ತದೆಯೋ ಅದನ್ನು ಪಾಲಿಸಿ, ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈಗಳನ್ನು ನಿರಂತರವಾಗಿ ತೊಳೆದುಕೊಳ್ಳಿ ಎಂದು ಸಲಹೆ ನೀಡಿದರು.

ನಾವು ದೇವರನ್ನು ನೋಡಿಲ್ಲ. ನಿಜವಾಗಿಯೂ ವೈದ್ಯರೇ ದೇವರು. ಎಲ್ಲರಿಗೂ ಕುಟುಂಬವಿದೆ. ಅವುಗಳನ್ನು ಬಿಟ್ಟು ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಕೆಲಸ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಮಾತಾಡಿದ ಬಾಗೇಪಲ್ಲಿಯ ವಿ.ರಾಧಮ್ಮ, ಕೊರೊನಾ ಸಮಯದಲ್ಲಿ ಎಲ್ಲರಿಗೂ ಕಷ್ಟವಿದೆ. ಎಲ್ಲರೂ ನೋವು ಅನುಭವಿಸಿದೆ. ಎರಡನೇ ಅಲೆಯಲ್ಲಿ ಕೊರೊನಾ ಪಾಸಿಟಿವ್ ಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. ಜನ ನಮ್ಮ ಸಲಹೆಯನ್ನು ಪಾಲಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಜನ ಸಹಕಾರ ನೀಡುತ್ತಿಲ್ಲ. ಜೊತೆಗೆ ಸರ್ಕಾರ ನಮಗೆ ಅಗತ್ಯ ಸೌಲಭ್ಯಗಳನ್ನು ಕೊಟ್ಟಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಕೊರೊನಾ ರೋಗಿಗಳ ಬಳಿ ಅವರು ಕುಟುಂಬದವರೇ ಹೋಗುವುದಿಲ್ಲ. ಆದರೆ, ಆಶಾ ಕಾರ್ಯಕರ್ತೆಯರು ಅವರ ಪಲ್ಸ್ ಚೆಕ್ ಮಾಡಬೇಕು. ನಮಗೆ ಮಾಸ್ಕ್, ಸ್ಯಾನಿಟೈಜರ್ ಕೊಡುವುದಿಲ್ಲ. ಮೂರು ತಿಂಗಳಿಂದ ಗೌರವ ಧನ ಕೂಡ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. 3-4 ಗ್ರಾಮಗಳಿಗೆ ತೆರಳಿ ಆಶಾಕಾರ್ಯಕರ್ತೆಯರು ಫಾಲೋ ಅಪ್ ಮಾಡಬೇಕು. ಅದಕ್ಕಾಗಿ ಓಡಾಡಲು ಗಾಡಿಗೆ ನೂರು ರೂ. ಪೆಟ್ರೋಲ್ ಬೇಕಾಗುತ್ತದೆ. 14 ದಿನ ರೋಗಿಯ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಕೊರೊನಾ ಬಂದಾಗಿನಿಂದ ಕೆಲಸ ಜಾಸ್ತಿ, ಸಂಬಳ ಕಡಿಮೆ. ನಾವು ಸುತ್ತಾಡಲು ಕೂಡ ಕಷ್ಟವಾಗಿದೆ. ಹೇಳಿಕೊಳ್ಳಲು ಕೂಡ ಸಾಧ್ಯವಾಗದಷ್ಟು ಕಷ್ಟವನ್ನು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದರು.

ಕಲಬುರಗಿಯ ಅಂಗನವಾಡಿ ಕಾರ್ಯಕರ್ತೆ ಶಾಂತಾ ಘಂಟಿ ಮಾತಾಡಿ, ನಗರದಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲ. ಒಬ್ಬ ಕಾರ್ಯಕರ್ತರಿಗೆ 2,500 ಜನರ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಮೊದಲ ಅಲೆಯ ವೇಳೆ, ಹೊರಪ್ರದೇಶಗಳಿಂದ ಯಾರು ಮನೆಗೆ ಬಂದರು ಎಂದು ವಿಷಯ ಸಂಗ್ರಹಿಸಿ, ಅವರಿಗೆ ಹೇಗೆ ಇರಬೇಕು ಎಂದು ಸಲಹೆ ಕೊಟ್ಟು ಫೋಟೋವನ್ನು ಆರೋಗ್ಯ ಇಲಾಖೆಗೆ ಕಳಿಸಬೇಕಿತ್ತು ಎಂದರು.

60 ವರ್ಷ ಮೇಲ್ಪಟ್ಟವರ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಬೇಕಿತ್ತು. ಈ ಅವಧಿಯಲ್ಲಿ ನಮಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ಕೊಟ್ಟಿಲ್ಲ. 30-40 ಕಾರ್ಯಕರ್ತೆಯರು ಸಾವಿಗೀಡಾಗಿದ್ದಾರೆ. ಆದ್ದರಿಂದ ನಮಗೆ ವಿಮೆ ಸೌಲಭ್ಯಕ್ಕೆ ಒತ್ತಾಯಿಸಿದೆವು. ಆಶಾಕಾರ್ಯಕರ್ತೆರಯೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ಕೆಲಸ ಮಾಡುತ್ತಿದ್ದಾರೆ ಎಂದರು.

350 ಮನೆಗಳಿಗೆ ಹೋಗಬೇಕು. ಮನೆ ಬಳಿ ಹೋದಾಗ ನಮಗೆ ಅವಮಾನ ಮಾಡುತ್ತಾರೆ. ನಮ್ಮನ್ನು ಹತ್ತಿರ ಸೇರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ನಮಗೆ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸ್ಲಂ ಕೇಂದ್ರಗಳಲ್ಲಿ ಐಸೋಲೇಷನ್ ಮಾಡಲು ಅವಕಾಶವಿರುವುದಿಲ್ಲ. ಅವರೆಲ್ಲರ ಮನವೊಲಿಸಿ ಕೋವಿಡ್ ಕೇಂದ್ರಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತೇವೆ. ಪಟ್ಟಣ ಪಂಚಾಯಿತಿ, ಸರ್ಕಾರದ ವತಿಯಿಂದ ನಮಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಗಳನ್ನು ಕೊಟ್ಟಿಲ್ಲ ಎಂದರು.

ಪ್ರತಿಯೊಬ್ಬರ ಮನೆಗೆ ಹೋಗಿ ಪಲ್ಸ್ ಚೆಕ್ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಜನ ಇದಕ್ಕೆ ಸಿದ್ಧರಿಲ್ಲ. ಪರೀಕ್ಷೆ ಕಡಿಮೆಯಾಗಿರುವುದರಿಂದ ಕೊರೊನಾ ದರ ಕಡಿಮೆಯಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮೂರನೇ ಅಲೆಯ ವೇಳೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರೇ ಮನೆಗೆ ತೆರಳಿ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಆದರೆ, ನಾವು ಮುಂಚಿತವಾಗಿ ಹೋಗಿ ಜನರಿಗೆ ತಿಳಿಸಲು ಹೋದರೆ ನಿಮಗೆ ಹೇಗೆ ಗೊತ್ತಾಗುತ್ತೆ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಇತರ ಸೌಕರ್ಯಕ್ಕಗಾಗಿ ನಾವು ಹೋರಾಡಿದ್ದೇವೆ. ಹೆಚ್ಚಿನ ಹಣ ಕೊರೊನಾ ನಿಯಂತ್ರಣಕ್ಕೆ ಬಂದರೂ ನಮಗೆ ಅದರಿಂದ ಯಾವುದೇ ಸೌಕರ್ಯ ಕೊಟ್ಟಿಲ್ಲ. ಇವೆಲ್ಲ ಸಮಸ್ಯೆಗಳ ನಡುವೆ ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ ಎಂದರು.

ಬೆಂಗಳೂರಿನ ಪೌರ ಕಾರ್ಮಿಕರ ಮುಂಖಡರಾದ ಚಂದ್ರಕಲಾ ಆರ್ ಮಾತನಾಡಿ, ಎಲ್ಲಿ ಕೊರೊನಾ ಇದೆ ಎಂಬುದು ಗೊತ್ತಿಲ್ಲ. ಆದರೆ ನಾವು ಎಲ್ಲೆಡೆ ಕಸ ಎತ್ತುವ ಕೆಲಸ ಮಾಡುತ್ತೇವೆ. ಎಲ್ಲರೂ ಮನೆಯಲ್ಲಿರೋಣ, ಜೀವ ಉಳಿದರೆ ನೋಡೋಣ ಎಂದು ಮನೆಯಲ್ಲಿ ಉಳಿದಿದ್ದಾರೆ. ಆದರೆ ಬೀದಿಬೀದಿಗಳ ಬಳಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರದಿಂದ ಇದುವರೆಗೆ ನಮಗೆ ಯಾವುದೇ ಸೌಕರ್ಯ ಸಿಕ್ಕಿಲ್ಲ ಎಂದು ಹೇಳಿದರು.

ಸುಶೀಲಮ್ಮ ಎಂಬ ಪೌರಕಾರ್ಮಿಕರು ತೀರಿಹೋದರು. ಅವರ ಕುಟುಂಬಕ್ಕೆ ನೆರವು ಸಿಕ್ಕಿಲ್ಲ. ನಮ್ಮ ಕೆಲಸವನ್ನು ಯಾರೂ ಗುರುತಿಸಿಲ್ಲ. ಕಳೆದ ವರ್ಷ 10,000 ರೂ. ಘೋಷಿಸಲಾಗಿತ್ತು. ಆದರೆ, ನಮಗೆ ಸಿಕ್ಕಿಲ್ಲ. ಪೊರಕೆ, ಬಿಸಿಯೂಟ, ಬಸ್ ಪಾಸ್ ಇತ್ಯಾದಿಗಳಿಗೆ ನಾವು ಹೋರಾಡಬೇಕಾದ ಪರಿಸ್ಥಿತಿ ಇದೆ. ಕೊರೊನಾ ವಾರಿಯರ್ಸ್ ಗೆ 50  ಲಕ್ಷ ವಿಮೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ನಮಗೆ ಇಂತಹ ಯಾವುದೇ ರೀತಿಯ ಸೌಲಭ್ಯಗಳು ಸಿಕ್ಕಿಲ್ಲ. ಸರ್ಕಾರ ಪೌರ ಕಾರ್ಮಿಕರ ಕಡೆಗೆ ಗಮನ ಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು.  

ಕೊರೊನಾದಿಂದ ಗುಣಮುಖರಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಡಾ. ನಿತ್ಯಾನಂದ ಆರಾಧ್ಯ ಮಾತನಾಡಿ, 28 ಮಾರ್ಚ್ 2021ರಂದು ಫಸ್ಟ್ ಡೋಸ್ ಕೋವ್ಯಾಕ್ಸಿನ್ ಪಡೆದುಕೊಂಡೆ. ಇದರಿಂದ ನಮಗೆ ಆತ್ಮಸ್ಥೈರ್ಯ ಬಂದಿತ್ತು. ಇದರ ನಡುವೆ ನಮ್ಮ ಸಂಬಂಧಿಗೆ ಎಷ್ಟೆ ಜಾಗರೂಕತೆ ಇಂದ ಇದ್ದರೂ ಕೊರೊನಾ ತಗುಲಿತ್ತು. ಎಲ್ಲ ಮುಂಜಾಗ್ರತೆ ತೆಗೆದುಕೊಂಡರೂ ನಮ್ಮ ಜೊತೆ ಇರುವವರಿಗೂ ಕೊರೊನಾ ತಗುಲಿತ್ತು. ನನಗೂ ಅನಾರೋಗ್ಯದ ಲಕ್ಷಣ ಕಂಡಿತು ಎಂದರು.

ಏಪ್ರಿಲ್ 6ರಂದು ಪರೀಕ್ಷೆ ನಡೆಸಿದ ನಂತರ ಮೂರು ದಿನಗಳ ನಂತರ ನಿಮಗೆ ಕೊರೊನಾ ಪಾಸಿಟಿವ್ ಇದೆ ಎಂದು ಕರೆ ಬಂತು. ಆಗ ಪಾಸಿಟಿವ್ ಇದ್ದರೆ ಒಂದೇ ದಿನದಲ್ಲಿ ಮಾಹಿತಿ ನೀಡಲಾಗುತ್ತದೆ. ಇಲ್ಲವಾದಲ್ಲಿ ಮೂರುದಿನ ಎಂದು ಹೇಳಲಾಗುತ್ತಿತ್ತು. ಆದರೆ ನನಗೆ 3 ದಿನಗಳ ನಂತರ ಕರೆ ಬಂದು, ನಿಮಗೆ ಪಾಸಿಟಿವ್ ಎಂದರು. ನಿಮ್ಮ ಮನೆಗೆ ಅರ್ಧ ಗಂಟೆಯೊಳಗೆ ಆಂಬುಲೆನ್ಸ್ ಬರುತ್ತೆ ಎಂದರು. ಆಂಬುಲೆನ್ಸ್ ಬಂದ ನಂತರ ಅಪಾರ್ಟ್ ಮೆಂಟ್ ನಿಂದ ಯಾರೊಬ್ಬರು ಬಂದು ಟಾಟಾ ಮಾಡಲಿಲ್ಲ. ಸ್ಪರ್ಶ್ ಆಸ್ಪತ್ರೆಗೆ ಹೋದಾಗ 12 ಗಂಟೆ. ಎಲ್ಲ ಲಿಸ್ಟ್ ನೋಡಿ 3:45ರವರೆಗೆ ನನ್ನನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ನಿಮಗೆ ಯಶವಂತಪುರದಲ್ಲಿ ಬೆಡ್ ಅಲಾಟ್ ಆಗಿದೆ ಎಂದರು. ಅನಂತರ ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯವರೆಗೆ ನಾನು ಆಂಬುಲೆನ್ಸ್ ನಲ್ಲೇ ಇದ್ದೆ. ಕಡೆಗೆ 35 ಬೆಡ್ ಸಾಮರ್ಥ್ಯದ ಗಂಡು, ಹೆಣ್ಣುಮಕ್ಕಳು ಜೊತೆಯಲ್ಲಿರುವ ವಾರ್ಡ್ ಗೆ ನನ್ನನ್ನು ಶಿಫ್ಟ್ ಮಾಡಿದರು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಬೆಳಿಗ್ಗೆ 2 ಇಡ್ಲಿ ತಿಂದಿದ್ದೆ. ರಾತ್ರಿ 8:45ರವರೆಗೆ ನನ್ನನ್ನು ಯಾರೂ ವಿಚಾರಿಸಲಿಲ್ಲ. ಅಲ್ಲಿಯವರೆಗೆ ಊಟ, ಇತ್ಯಾದಿ ಏನು ಇಲ್ಲ. ಸಂಜೆ ಕಾಫಿಯನ್ನೂ ಕೊಡಲಿಲ್ಲ. ಕೇಳಿದಾಗ ಇದೇ ಮೊದಲ ದಿನ ಎಂದರು. ಅನಂತರ ಕಾಫಿ ಬಿಸ್ಕೇಟ್ ತರಿಸಿಕೊಂಡೆ, ಅಂದು ನನಗೆ ಅನ್ನದ ಬೆಲೆ ಗೊತ್ತಾಯಿತು. ಅನಂತರ ಆಕ್ಸಿಮೀಟರ್ ತಂದು ಪರೀಕ್ಷೆ ಮಾಡಿದರು ಎಂದರು.

ನನ್ನ ಸುತ್ತಮುತ್ತ ಇರುವ ಶೇ. 40ರಷ್ಟು ಜನ ಕ್ರಿಟಿಕಲ್ ಪರಿಸ್ಥಿತಿಯಲ್ಲಿದ್ದರು. ನನಗೆ ಜ್ವರ ಹೊರತುಪಡಿಸಿದರೆ ಯಾವುದೇ ಲಕ್ಷಣ ಇಲ್ಲ. ಬೆಳಿಗ್ಗೆ ನಮಗೆ ಮಾತ್ರೆ ಕೊಟ್ಟರು. ರಾತ್ರಿ ಊಟವಿಲ್ಲ. ಬೆಳಿಗ್ಗೆ ತಿಂಡಿ ಕೊಟ್ಟರು. ಮರುದಿನ ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದರು. ಅನಂತರ ಕ್ರಿಟಿಕಲ್ ಕಂಡೀಷನ್ ನಲ್ಲಿರುವವರಿಗೆ ವ್ಯವಸ್ಥೆ ಮಾಡಲಾಯಿತು ಎಂದರು.

ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಇರಲಿಲ್ಲ. ಶೇ. 80-90ರಷ್ಟು ಜನ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಗುಣಮಟ್ಟವನ್ನು ಪರೀಕ್ಷೆ ಮಾಡಿರಲಿಲ್ಲ. ಎರಡೇ ಟಾಯ್ಲೆಟ್ ಇತ್ತು. 40 ರೋಗಿಗಳು, ಸಿಬ್ಬಂದಿಗೆ ಸೇರಿ ಇಷ್ಟೇ ವ್ಯವಸ್ಥೆ. ರಾತ್ರಿ 12:30ರಿಂದ 4 ಗಂಟೆಯ ಹೊತ್ತಿಗೆ ಎಲ್ಲ ಶವಗಳನ್ನು ಪ್ಯಾಕ್ ಮಾಡಿ ಕಳಿಸಲಾಗುತತಿತ್ತು. ಏಕೆಂದರೆ, ಜನ ಭಯಭೀತರಾಗುತ್ತಾರೆ ಎಂಬ ಕಾರಣಕ್ಕೆ. ಎಂದು ಅವರು ಕಂಡ ಪರಿಸ್ಥಿತಿಯನ್ನು ಕಂಡದ್ದನ್ನು ಅವರು ವಿವರಿಸಿದರು.

ನಮಗೆ ಈ ಅವಧಿಯಲ್ಲಿ ಕಾಲ ಎಲ್ಲವನ್ನೂ ಕಲಿಸಿತು. ಎಷ್ಟೋ ಜನರಿಗೆ ಹೊಡೆತ ಬಿತ್ತು, ಜನಕ್ಕೆ ಪಾಠವೂ ಆಗಿದೆ. ಪರಿಚಿತ ವಕೀಲರು ನನಗೆ ಊಟದ ವ್ಯವಸ್ಥೆ ಕೇಳಿದರು. ನಾನುಅಲ್ಲಿದ್ದ ಅವಧಿಯಲ್ಲಿ ಅವರು 3 ದಿನ ಮಾತ್ರ ಅವರು ತಂದುಕೊಟ್ಟ ಊಟ ಮಾಡಿದೆ ಎಂದರು.

1 ಬಕೆಟ್ ನೀರನ್ನು ತೆಗೆದುಕೊಂಡು ಹೋಗಿ ಟಾಯ್ಲೆಟ್ ನಲ್ಲಿ ಸ್ನಾನ ಮಾಡಿದೆ. 5 ದಿನಗಳಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿದೆ. ನನ್ನನ್ನು ಡಿಸ್ಚಾರ್ಜ್ ಕೂಡ ಮಾಡದೆ ಸತಾಯಿಸಿದರು. 13ರಂದು ಸಂಜೆ 5:30ಕ್ಕೆ ಡಿಸ್ಚಾರ್ಜ್ ಮಾಡಿದರು. ಹೋಮ್ ಐಸೋಲೇಷನ್ ನಲ್ಲಿ ಇರುವಂತೆ ಹೇಳಿದರು. ಅದಾದ ನಂತರ ನನಗೆ ಕೊರೊನಾ ಬಂದಿಲ್ಲ. ಆದರೆ, ನನಗೆ ಇಂದಿಗೂ ನನಗೆ ಮೋಷನ್ ಸಮಸ್ಯೆ, ಡೈಜೇಷನ್ ಆಗುತ್ತಿಲ್ಲ ಎಂದರು.

ನನ್ನ ಸಮಸ್ಯೆ ಕುರಿತು ಕೇಳಲು ನಾನು ವೈದ್ಯರೊಬ್ಬರಿಗೆ ನಿರಂತರವಾಗಿ ಕರೆ ಮಾಡಿದೆ. ಅವರು ರಾತ್ರಿ 11:30ಕ್ಕೆ ಕರೆ ಮಾಡಿದರು. ಇದೀಗ ತಾನೇ ಮನೆಗೆ ಬಂದೆ ಎಂದರು. ಇಂಹತ ರೀತಿಯಲ್ಲಿ ವೈದ್ಯರು ಕೆಲಸ ಮಾಡುತ್ತಾರೆ ಎಂದು ವೈದ್ಯರ ಸೇವೆಯನ್ನು ಶ್ಲಾಘಿಸಿದರು.

ಕೊರೊನಾ ಕೇರ್ ಕೇಂದ್ರದಲ್ಲಿ ನೀಡಲಾಗುತ್ತಿದ್ದ ದೋಸೆಯನ್ನು ಯಾರೂ ತಿನ್ನಲು ಸಾಧ್ಯವಿಲ್ಲ. ಅಲ್ಲಿ ವೈದ್ಯರು ಯಾರು, ನರ್ಸ್ ಯಾರು, ಇತರ ಸಿಬ್ಬಂದಿ ಯಾರು ಎಂದು ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಎಲ್ಲರೂ ಪಿಪಿಇ ಕಿಟ್ ಧರಿಸಿರುತ್ತಿದ್ದರು ಎಂದರು.

ಅನಂತರ ನನ್ನ ಹೆಂಡತಿಗೆ ಪಾಸಿಟಿವ್ ಬಂತು. ಅವರಿಗೆ ಐಸಿಯೂನಲ್ಲಿ ಇಡಲಾಯಿತು. ಪರೀಕ್ಷೆ ಮಾಡಿ 3 ದಿನಗಳಾದರೂ ವರದಿ ಬರುವುದಿಲ್ಲ. ಖಾಸಗಿಯಲ್ಲಿ ಕೊಟ್ಟರೆ ಸಂಜೆ ವರದಿ ಬರುತ್ತದೆ. ಇಂತಹ ಪರಿಸ್ಥಿತಿ ಇರಬಾರದು ಎಂದರು.

ಧಾರವಾಡದಲ್ಲಿ ಸರ್ಕಾರ, ಸಮುದಾಯ, ಎನ್ ಜಿ ಒ ಬಳಸಿಕೊಂಡು ಸಾಧನೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಇದೆ. ಎಲ್ಲ ಹಂತಕ್ಕೂ ಕೆಲಸದ ಹಂಚಿಕೆಯಾಗಬೇಕು. ಗ್ರಾಮಪಂಚಾಯತಿಗಳಲ್ಲಿ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಇದೀಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಲಾಕ್ ಡೌನ್ ಘೋಷಿಸಿದಾಗ ಇಲ್ಲಿಂದ ಜನ ಅಲ್ಲಿಗೆ ಹೋದರು. ಮತ್ತೆ ಈಗ ಅಲ್ಲಿಂದ ಇಲ್ಲಿಗೆ ಬರುತ್ತಾರೆ ಎಂದು ಕೊರೊನಾ ಹರಡುವ ಮತ್ತು ಇಳಿಯುವ ಕುರಿತು ಮಾಹಿತಿ ಹಂಚಿಕೊಂಡರು.

ಹೆಲ್ತ್ ಎಮರ್ಜೆನ್ಸಿ ಘೋಷಿಸಿ ವ್ಯವಸ್ಥಿತವಾಗಿ ಜವಾಬ್ದಾರಿಯನ್ನು ಹಂಚಬೇಕು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯ ಮಾಹಿತಿ ಇದೆ. ಅವರಿಗೆ ಜವಾಬ್ದಾರಿ ಹಂಚಿಕೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮ ಮನೆಯಲ್ಲಿ ಎಲ್ಲರಿಗೂ ಕೊರೊನಾ ಬಂತು. ಎಲ್ಲರೂ ಹುಷಾರಾಗಿದ್ದಾರೆ. ಆದರೆ ನನಗಿಂತ ಕಿರಿಯರು, ಹಿರಿಯರು ಸಾವಿಗೀಡಾದರು. ಮಾಸ್ಕ್ ಧರಿಸುವ ಕುರಿತು ಅನೇಕ ಹೇಳಿಕೆಗಳಿವೆ. ಕೆಲವರು ಪ್ರತಿದಿನ ಹೊಸ ಮಾಸ್ಕ್ ಧರಿಸಿ ಎನ್ನುತ್ತಾರೆ. ತೊಳೆದು ಧರಿಸಿ, ಬಿಸಿಲಿಗೆ ಒಣಗಿಸಿ ಧರಿಸಿ ಎಂದೆಲ್ಲ ಹೇಳಲಾಗುತ್ತಿದೆ. ಎನ್ 95 ಮಾಸ್ಕ್ ಅನ್ನು ತೊಳೆಯಬಾರದು, ಬಿಸಿಲಿಗೆ ಒಣಗಿಸಿ ಎನ್ನುತ್ತಾರೆ. ಡೋಲೋ 650 ತೆಗೆದುಕೊಳ್ಳುವುದು, ಅರಿಶಿಣ, ಬಿಸಿನೀರು ಕುಡಿಯುವುದು ಕುರಿತು ಅನೇಕ ಊಹಾಪೋಹಗಳಿವೆ. ಇವುಗಳ ಕುರಿತು ಸ್ಪಷ್ಟೀಕರಣ ಅಗತ್ಯವಿದೆ ಎಂದರು.

ಡಾ. ಗಿರೀಶ್ ಮೂಡ್, ಕೊರೊನಾ ಕುರಿತು ಅನುಭವಗಳನ್ನು ಕೇಳಿದರೆ ದುಃಖವಾಗುತ್ತದೆ. ಆಶಾ ಕಾರ್ಯಕರ್ತೆಯರು ಸಂಕಟದ ನಡುವೆ ನಗುವಿನಿಂದ ಕೆಲಸ ಮಾಡುತ್ತಿದ್ದಾರೆ. ಅದು ಬಹಳ ಮುಖ್ಯ. ಇದರೊಂದಿಗೆ ಸ್ವತಃ ಅನುಭವಗಳನ್ನು ಹಂಚಿಕೊಂಡ ಅನುಭವ ದೊಡ್ಡ ಪಾಠ ಎಂದರು.

ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತಾಡಿದ ಪ್ರಕ್ರಿಯಾ ಆಸ್ಪತ್ರೆಯ ಅರವಳಿಕೆ ತಜ್ಞ ಹಾಗೂ ತುರ್ತು ವಿಭಾಗದ ಡಾ. ಮೋಹನ್, 2020ರ ಜನವರಿಯಲ್ಲಿ ಚೀನಾದಲ್ಲಿ ಲಾಕ್ ಡೌನ್ ಮಾಡುತ್ತಿದ್ದಾರೆ ಎಂದು ಓದುತ್ತಿದ್ದೆವು. ಆದರೆ, ಅದೇನು ಅಂತ ಗೊತ್ತಿರಲಿಲ್ಲ. ಆದರೆ, ಅನಂತರ ಎಲ್ಲೆಡೆ ಸಾವಿನ ಸಂಖ್ಯೆ ಏರತೊಡಗಿತು. ಅನಂತರ ಆಸ್ಪತ್ರೆಯಲ್ಲಿ ಸಿದ್ಧತೆಗಳನ್ನು ಆರಂಭಿಸಿದೆವು ಎಂದರು.

ಕೊರೊನಾ ಮನೆಯ ಎಲ್ಲರಿಗೂ ಬರುತ್ತೆ, ಜೀವ ಹೋಗುತ್ತೆ ಎಂದುಕೊಂಡರು. ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ ಸಿದ್ಧತೆಗೆ ಸಜ್ಜಾಯಿತು. ಆಗ ನಾವು ನಮ್ಮ ಎಲ್ಲ ಸಿಬ್ಬಂದಿಗೆ ಕೊರೊನಾ ಎಲ್ಲರಿಗೂ ಹರಡುತ್ತದೆ ಎಂದು ಮಾಹಿತಿ ನೀಡಿದೆವು. ನಮ್ಮ ಸ್ಟಾಫ್ ಗೆ ಎಲ್ಲ ರೀತಿ ಸಜ್ಜುಗೊಳಿಸಿದೆವು. ಆರಂಭದಲ್ಲಿ ಉಸಿರಾಟದ ತೊಂದರೆಯಾದಾಗ ಅಡ್ಮಿಟ್ ಮಾಡಿಕೊಳ್ಳುತ್ತಿರಲಿಲ್ಲ. ನಾವು ಅಡ್ಮಿಟ್ ಮಾಡಿಕೊಂಡೆವು. ನಾವು ನಮ್ಮ ಸಿಬ್ಬಂದಿ ಮತ್ತು ನೆರೆಹೊರೆಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದೆವು ಎಂದರು.

ಆರಂಭಧಲ್ಲಿ ಪಿಪಿಇ ಕಿಟ್ ಕೊರತೆ ಇತ್ತು. ಅದನ್ನು ನಾವೇ ಪರಿಹರಿಸಿಕೊಂಡೆವು. ಕರ್ನಾಟಕದಿಂದ ಒಂದು ತಿಂಗಳು ಐಸಿಯುನಲ್ಲಿದ್ದ ವ್ಯಕ್ತಿ ಡಿಸ್ಚಾರ್ಜ್ ಆದರು. ಅನಂತರ ನಮ್ಮ ಸಿಬ್ಬಂದಿಗೆ ಧೈರ್ಯಬಂತು. ಆಸ್ಪತ್ರೆಯಲ್ಲಿ ಕೂಡ ಭಯದ ವಾತಾವರಣ ಇತ್ತು. ಸೆಕ್ಯುರಿಟಿಯವರಿಂದ ಎಲ್ಲರೂ ಹೇಗೆ ಇರಬೇಕು ಎಂದು ಹೇಳಿಕೊಡಲಾಯಿತು. ದಿನಕಳೆದಂತೆ ಹೊಸಹೊಸ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತ ಇದ್ದೆವು ಎಂದು ಕೊರೊನಾ ಕಾಲದ ಸಮಸ್ಯೆಳು ಪರಿಹಾರಗಳನ್ನು ವಿವರಿಸಿದರು.

ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೌಕರ್ಯವಿಲ್ಲದೇ ಕೆಲಸ ಮಾಡಿದ್ದಾರೆ. ಅವರು ಸೇರಿದಂತೆ ಸರ್ಕಾರದ ಎಲ್ಲ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಕೆಲಸ ಮಾಡಿದ್ದಾರೆ. ವಾಲೆಂಟಿಯರ್ಸ್ ಆಗಿ, ಪುಸ್ತಕ ವಿತರಣೆ, ಇತ್ಯಾದಿ ವಿಷಯಗಳಲ್ಲಿ ಅನೇಕರು ಕೆಲಸ ಮಾಡಿದ್ದಾರೆ. ಕೆಲವರಿಗೆ ಭಯ ಇರುತ್ತಿತ್ತು. ಅವರಿಗೆ ಧೈರ್ಯ ತುಂಬಿದಾಗ ಅವರು ಕೆಲಸಕ್ಕೆ ಕೈಜೋಡಿಸಿದ್ದಾರೆ ಎಂದರು.

ಐಸಿಯುನಲ್ಲಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದೆವು. ಅನಂತರ ಐಸಿಯುಗೆ ರೋಗಿ ಹೋಗದಂತೆ ರೋಗವನ್ನು ತಡೆಗಟ್ಟಿದೆರೆ ಹೆಚ್ಚು ಜೀವಗಳನ್ನು ಉಳಿಸಬಹುದು ಎಂದು ಯೋಜನೆ ರೂಪಿಸಿದೆವು ಎಂದರು.

ನನಗೆ ಕೊರೊನಾ ಬಂತು, ಅನಂತರ ಮನೆಯಲ್ಲಿ ಎಲ್ಲರಿಗೂ ಕೊರೊನಾ ಬಂತು. ಮೊದಲ 2 ದಿನ ತಲೆ ಸುತ್ತಿ ಬೀಳುವಂತಾಯಿತು. ನಾನು ಮನೆಯಲ್ಲಿರದೆ ಆಸ್ಪತ್ರೆಗೆ ಹೋದೆ. ಏಕೆಂದರೆ, ನಾನು ಕೆಲಸ ಮಾಡುತ್ತಿರುವುದ ಕೊರೋನ ಕೇರ್ ಸೆಂಟರ್ನಲ್ಲಿ. ಈ ವಿಷಯವನ್ನು ನಾನು ನಮ್ಮ ಸಿಬ್ಬಂದಿಗೆ ತಿಳಿಸಿದ್ದೆ. ನಾನು ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುತ್ತೇನೆ. ನೀವು ನನ್ನನ್ನೂ ಕೊರೊನಾ ರೋಗಿ ಎಂದು ಪರಿಗಣಿಸಿ ಎಂದು ಹೇಳಿದ್ದೆ ಎಂದರು.

ಕೊರೊನಾ ಅವಧಿಯಲ್ಲಿ ನಮ್ಮ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿದ್ದೆವು. ಏಕೆಂದರೆ ಎಲ್ಲರೂ ಕೆಲಸ ಮಾಡಿದರೆ ಒಂದೆರಡು ಜೀವ ಉಳಿಯಯುತ್ತದೆ ಎಂಬ ಕಾರಣಕ್ಕಾಗಿ. 15 ತಿಂಗಳಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅನುಭವ ಆಗಿದೆ. ಆರಾಧ್ಯ ಅವರು ಹೇಳಿದಂತೆ ಕೆಲವರಿಗೆ ಸಮಸ್ಯೆಯಾಗಿದೆ. ಊಟ ಸರಿಯಾಗಿ ಸಿಕ್ಕಿಲ್ಲ. ನಾವು ಕೂಡ ಅಂತಹ ಊಟವನ್ನೇ ಮಾಡಿದ್ದೇವೆ. ಕೆಲವೊಮ್ಮೆ ಪೇಷೆಂಟ್ಸ್ ಕಡೆಯಿಂದ ಮನೆಯವರಿಗೆ ದೂರು ಹೋಗುತ್ತಿತ್ತು. ಇನ್ನೂ ಊಟ ಕೊಟ್ಟಿಲ್ಲ ಎನ್ನುತ್ತಿದ್ದರು. ನಾವು ಊಟ ಮಾಡಿಲ್ಲ ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ನಾವು ಮಧ್ಯಾಹ್ನ ಊಟಕ್ಕೆ ಪಿಪಿಇ ಕಿಟ್ ತೆಗೆದರೆ ರೋಗಿಗಳಿಗೆ ಅನವಶ್ಯಕವಾಗಿ ಹೊರೆಯಾಗುತ್ತಿತ್ತು. ಅದರ ಖರ್ಚನ್ನೂ ರೋಗಿಗಳೇ ಭರಿಸಬೇಕಿತ್ತು. ಏಕೆಂದರೆ, ಪಿಪಿಇ ಕಿಟ್ ಒಮ್ಮೆ ತೆರೆದರೆ ಹೊಸದನ್ನು ಹಾಕಿಕೊಳ್ಳಬೇಕಿತ್ತು. ಇದರಿಂದಾಗಿ ನಾವು ಮೂತ್ರಕ್ಕೂ ಹೋಗದೆ, ಊಟ ಮಾಡದೆ ಕೆಲಸ ಮಾಡಿದೆವು ಎಂದರು.

ಕೆಲವರು ಮೋಸ ಮಾಡಿದ್ದಾರೆ, 90 % ಪ್ರಾಮಾಂಣಿಕವಾಗಿ ಕೆಲಸ ಮಾಡಿದ್ದಾರೆ. ಅವರೂ ಕೂಡ ಕೆಲಸ ಮಾಡದೆ ಇದ್ದರೆ ತುಂಬಾ ಜನರ ಪ್ರಾಣ ಹೋಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಡಬಲ್ ಲೇಯರ್ ಮಾಸ್ಕ್ ಧರಿಸಬಾರದು. ವೈರಸ್ ಒಳಗೆ ಹೋಗಲು ಇರುವ ದಾರಿ ಮೂಗು, ಬಾಯಿ. ಕಣ್ಣಿಂದ ಕೂಡ ಹೋಗುತ್ತದೆ. ನೀವು ಧರಿಸುವ ಮಾಸ್ಕ್ ನಿಂದ ನಿಮ್ಮ ಕೈ ಪದೇಪದೇ ಮುಖದ ಬಳಿ ಹೋದರೆ ಅದೂ ಕೂಡ ಅಪಾಯಕಾರಿ ಎಂದು ಅವರು ಸಲಹೆ ನೀಡಿದರು. ಜೊತೆಗೆ, ಕೇಂದ್ರ ಆರೋಗ್ಯ ಇಲಾಖೆ ಕೊರೊನಾದಿಂದ ದೂರವಾಗಲು ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಅವುಗಳನ್ನು ಮಾತ್ರ ಪಾಲಿಸಿ. ಉಳಿದಂತೆ ವ್ಯಾಟ್ಸಪ್ ನಲ್ಲಿ ಬರುವ ಯಾವುದೇ ಸುದ್ದಿಗಳನ್ನು ನೋಡಬೇಡಿ ಮತ್ತು ಫಾರ್ವರ್ಡ್ ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡರು.

ಕಾರ್ಯಕ್ರಮವನ್ನು ನಿರ್ವಹಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕಿ ಡಾ. ಲೀಲಾ ಸಂಪಿಗೆ, ಇಂದು ನಿಧನರಾದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕೊರೊನಾ ಸಂದರ್ಭದಲ್ಲಿ ಆತಂಕವಿತ್ತು. ಚಿಕಿತ್ಸೆ ಇರಲಿಲ್ಲ. ದಿನನಿತ್ಯ ಅನೇಕ ಸವಾಲುಗಳು ಎದುರಾದವು. ತುಂಬಾ ಆಪ್ತರನ್ನ ಕಳೆದುಕೊಂಡೆವು. ಇಂತಹ ಸಂದರ್ಭವನ್ನು ಹೇಗೆ ಎದುರಿಸುವುದು ಹೇಗೆ ಎಂಬುದು ಸಮಸ್ಯೆಯಾಗಿತ್ತು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಸಿದ್ದಲಿಂಗಯ್ಯನವರ ಬಿಸಿಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ ಗೀತೆಯ ಹಾಡುವ ಮೂಲಕ ಅಗಲಿದ ಕವಿಗೆ ಗೌರವ ಸಲ್ಲಿಸಲಾಯಿತು.   

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು