ಭಾರತ ದೇಶ 1947ರಿಂದ ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ಅದೇ ರೀತಿ 1950ರಿಂದ ಜನವರಿ 26ನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಮೊದಲನೇ ಬಾರಿಗೆ 1979ರಲ್ಲಿ ಸುಪ್ರೀಂ ಕೋರ್ಟಿನ ವಕೀಲರ ಸಂಘ ನವಂಬರ್ 26ನ್ನು ‘ಕಾನೂನು ದಿನ’ ವನ್ನಾಗಿ ಆಚರಿಸಬೇಕೆಂದು ಕರೆ ನೀಡಿತು. ಮುಂದುವರೆದು 2015ರಿಂದ ಕಾನೂನು ದಿನವನ್ನು ‘ಸಂವಿಧಾನ ದಿನ’ ಯೆಂಬುದಾಗಿ ಮರುನಾಮಕರಣ ಮಾಡಲಾಗಿದೆ. ಪ್ರಾರಂಭದಲ್ಲಿ ಕೇವಲ ವಕೀಲರು ಮತ್ತು ನ್ಯಾಯಾಧೀಶರು ಆಚರಣೆ ಮಾಡುತ್ತಿದ್ದ ಕಾನೂನು ದಿನವನ್ನು ಇಂದು ದೇಶದ ವಿವಿಧ ಜನ ವಿಭಾಗ ‘ಸಂವಿಧಾನ ದಿನ’ವಾಗಿ ಆಚರಿಸುತ್ತಿವೆ.
ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಅಂದರೆ 1946 ಜುಲೈ ತಿಂಗಳಲ್ಲಿ ನಮ್ಮ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಈ ಸಭೆಯಲ್ಲಿ 272 ಸದಸ್ಯರಿದ್ದರು. ಡಾ. ಬಾಬು ರಾಜೇಂದ್ರ ಪ್ರಸಾದ್‌ರವರು ಅದರ ಅಧ್ಯಕ್ಷರಾಗಿದ್ದರು. ಡಾ.ಬಿ.ಆರ್.ಅಂಬೇಡ್ಕರವರು ಕರಡು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. 2 ವರ್ಷ 11 ತಿಂಗಳು 17 ದಿವಸ ನಿರಂತರ ಕೃಷಿಯ ನಂತರ ಅಂತಿಮ ಕರಡು ಸಂವಿಧಾನವನ್ನು ಸಂವಿಧಾನ ಸಭೆ ನವೆಂಬರ್ 26 ರಂದು ಸರ್ಕಾರದ ಅಂಗೀಕಾರಕ್ಕೆ ಮಂಡಿಸಿತು. ಅಂದೇ ಸರ್ಕಾರ ಕರಡು ಸಂವಿಧಾನವನ್ನು ಒಪ್ಪಿತು. ಈ ಮಹತ್ವದ ದಿನದ ಸವಿನೆನಪಿಗಾಗಿ ಇಂದು ನಾವು ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದೇವೆ.
ಕರಡು ಸಂವಿಧಾನವನ್ನು 1949 ನವೆಂಬರ್ 26 ರಂದು ಒಪ್ಪಿದ್ದರೂ, ಅದನ್ನು ಜಾರಿಗೆ ತಂದಿದ್ದು 1950 ಜನವರಿ 26 ರಂದು. ನಮ್ಮ ಸಂವಿಧಾನ ಜಾರಿಗೆ ಬಂದು 72 ವರ್ಷಗಳು ಕಳೆಯಿತು. ಈ 72 ವರ್ಷಗಳಲ್ಲಿ ನಾವು ಒಂದಷ್ಟು ಸಾಧನೆ ಮಾಡಿದ್ದೇವೆ. ಇಂದಿಗೂ ನಮ್ಮ ಸಂವಿಧಾನ ಉತ್ತಮ ಮತ್ತು ಪ್ರಸ್ತುತವಾಗಿ ಉಳಿದಿದೆ. ಇಂತಹ ಮಹತ್ತರ ಸಂವಿಧಾನವನ್ನು ನೀಡಿದ ಸಂವಿಧಾನ ಸಭೆಯ ಸದಸ್ಯರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸಬೇಕು. ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷರಾದ ಟಿ.ಟಿ.ಕೃಷ್ಣಮಾಚಾರಿ ಮತ್ತು ಅಂದಿನ ಪ್ರಧಾನಿ ಪಂಡಿತ್ ನೆಹರೂರವರು ಡಾ.ಅಂಬೇಡ್ಕರ್‌ರವರ ಕೊಡುಗೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಇಂದು ನಾವೆಲ್ಲರೂ ಡಾ.ಅಂಬೇಡ್ಕರ್‌ರವರಿಗೆ ಒಂದು ರಾಯಲ್ ಸೆಲ್ಯೂಟ್ ನೀಡುವುದರ ಮೂಲಕ ನಮ್ಮ ಕೃತಜ್ಞತೆ ಸಲ್ಲಿಸೋಣ.
ಕಳೆದ 72 ವರ್ಷಗಳಲ್ಲಿ ಈ ಸಂವಿಧಾನದ ಅಡಿಯಲ್ಲಿ ನಾವು ಏನನ್ನು ಸಾಧಿಸಿದ್ದೇವೆ, ಎಲ್ಲಿ ಸೋತಿದ್ದೇವೆ ಮತ್ತು ನಮ್ಮ ಮುಂದಿನ ದಾರಿ ಯಾವುದು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ದಿನ ಇದು. ಈ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಿರುವುದು ಕರ್ನಾಟಕ ವಕೀಲರ ಪರಿಷತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಹುಪಾಲು ಸಭಿಕರು ವಕೀಲರು ಮತ್ತು ನ್ಯಾಯಾಧೀಶರು. ಆದ್ದರಿಂದ ನಾವೆಲ್ಲರೂ ಚಿಂತನೆ ಮಾಡಬೇಕಾಗಿರುವುದು ನಾವೆಲ್ಲ ಕೆಲಸ ಮಾಡುತ್ತಿರುವ ನ್ಯಾಯಾಂಗದ ಬಗ್ಗೆ, ನ್ಯಾಯಾಂಗ ಏನನ್ನು ಸಾಧಿಸಿದೆ. ಎಲ್ಲಿ ತಪ್ಪು ಮಾಡಿದೆ, ಸಮಸ್ಯೆಗಳೇನು, ಸವಾಲುಗಳೇನು ಮತ್ತು ಮುಂದೆ ನಾವು ಮಾಡಬೇಕಾದ ಕರ್ತವ್ಯದ ಬಗ್ಗೆ ಚರ್ಚೆ ಮಾಡುವ ದಿನ ಇದು.
ನಮ್ಮ ಸಂವಿಧಾನ ಜಾರಿಗೆ ಬಂದ ನಂತರ ನಾವು ಪ್ರಜಾಪ್ರಭುತ್ವ ಸಂಸ್ಥೆಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಕಟ್ಟಿದ್ದೇವೆ. ಬಹು ದೊಡ್ಡದಾದ ಮತ್ತು ಬಲಿಷ್ಠವಾದ ಸಂಸ್ಥೆಯೆಂದರೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಿಂದ ಪ್ರತ್ಯೇಕಿಸಲ್ಪಟ್ಟಿರುವ ನ್ಯಾಯಾಂಗವು ಒಂದು ಸ್ವತಂತ್ರವಾದಂತಹ ಅಂಗ. ಭಾರತದ ನ್ಯಾಯಾಂಗದ ವ್ಯವಸ್ಥೆ ಸರ್ವೋಚ್ಛ ನ್ಯಾಯಾಲಯ, ರಾಜ್ಯಗಳ ಹೈಕೋರ್ಟ್‌ಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲ್ಲೂಕು ನ್ಯಾಯಾಲಯಗಳನ್ನು ಒಳಗೊಂಡಿದೆ.
ಸರ್ವೋಚ್ಛ ನ್ಯಾಯಾಲಯ ಸರಾಸರಿ ಒಂದು ವರ್ಷದಲ್ಲಿ ಸುಮಾರು 65 ಸಾವಿರ ಕೇಸುಗಳನ್ನು ದೇಶದ ಎಲ್ಲಾ ಉಚ್ಚ ನ್ಯಾಯಾಲಯಗಳು ಸುಮಾರು 20 ಲಕ್ಷ ವ್ಯಾಜ್ಯಗಳನ್ನು ಮತ್ತು ಜಿಲ್ಲಾ ನ್ಯಾಯಾಲಯಗಳು ಸುಮಾರು 2 ಕೋಟಿಯಷ್ಟು ಕೇಸುಗಳನ್ನು ಇತ್ಯರ್ಥ ಮಾಡುತ್ತಿವೆ. ಜಗತ್ತಿನ ಇತರೆ ಯಾವ ದೇಶದ ನ್ಯಾಯಾಂಗವು ಇಷ್ಟೊಂದು ದೊಡ್ಡ ಪ್ರಮಾಣದ ಕೇಸುಗಳನ್ನು ಇತ್ಯರ್ಥ ಮಾಡುತ್ತಿಲ್ಲ. ಇದು ಸಂವಿಧಾನವನ್ನು ಉಳಿಸಿದೆ ಮೂಲತತ್ವಗಳಾದ ಪ್ರಜಾಪ್ರಭುತ್ವ ಜಾತ್ಯಾತೀತ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಎತ್ತಿ ಹಿಡಿದಿದೆ. ಮಾನವ ಹಕ್ಕುಗಳನ್ನು ಮತ್ತು ಸಂವಿಧಾನದ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿದೆ. ನ್ಯಾಯಾಂಗದ ಕ್ರಿಯಾಶೀಲತೆ ಎಂಬ ಹೊಸ ಪರ್ವವನ್ನು ಪ್ರಾರಂಭಿಸಿದೆ. ಕಾಮನ್ ಲಾ ಜೂರಿಸ್ ಪ್ರೂಡೆನ್ಸ್‌ಗೆ ಮಹತ್ತರ ಕೊಡುಗೆಯನ್ನು ನೀಡಿದೆ. ನಮ್ಮದೇ ದೇಶಿಯ ಜೂರಿಸ್ ಪ್ರೂಡೆನ್ಸ್ ಕಟ್ಟಿ ಬೆಳೆಸಿದೆ.
ನ್ಯಾಯಾಲಯವು ಎಲ್ಲಾ ತಾಂತ್ರಿಕ ನಿಯಮಗಳನ್ನು ಬದಿಗೊತ್ತಿ ನ್ಯಾಯಾಂಗ ಕ್ರಿಯಾಶೀಲತೆ – ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಗಳ ಹೊಸ ಪರ್ವವನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಅನೇಕ ಹಗರಣಗಳು ಬೆಳಕಿಗೆ ಬಂದವು. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರು ಮಾಡಿದ್ದ ಭ್ರಷ್ಟಾಚಾರ, ಅವ್ಯವಹಾರ ಮತ್ತು ಅತಿರೇಕಗಳ ಬಗ್ಗೆ ದೇಶದ ಜನರಿಗೆ ವಿವರಣೆ ನೀಡುವಂತೆ ಮಾಡಿತು. ಕೆಲವರನ್ನು ಜೈಲಿಗೆ ಕಳುಹಿಸಿತು. ವನ್ಯಜೀವಿ ಮತ್ತು ಪರಿಸರ ರಕ್ಷಿಸುವಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಗಣನೀಯ ಪಾತ್ರ ವಹಿಸಿದೆ. ಬಡತನ, ಅನಕ್ಷರತೆ, ಅಜ್ಞಾನ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆ ಕಾರಣಗಳಿಂದ ಬಡ ಹಾಗೂ ಶೋಷಿತ ವರ್ಗಕ್ಕೆ ಮುಚ್ಚಿಕೊಂಡಿದ್ದ ನ್ಯಾಯಾಂಗದ ಬಾಗಿಲು ಈಗ ಮುಕ್ತವಾಗಿ ತೆರೆದಿದೆ.
ನ್ಯಾಯಾಂಗಕ್ಕೆ ಜನರ ಹಕ್ಕುಗಳನ್ನು ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ, ದಂಡ ವಿಧಿಸುವ, ಜೈಲಿಗೆ ಕಳುಹಿಸುವ, ನೇಣುಗಂಬಕ್ಕೆ ನೇಣು ಹಾಕುವ ಅಧಿಕಾರವಿದೆ ಎಂದು ಭಯಪಟ್ಟ ಜನರು ಗೌರವ ಕೊಡುತ್ತಿಲ್ಲ. ಬದಲಿಗೆ ನ್ಯಾಯಾಂಗ ತನ್ನ ಜನಪರ ಕೆಲಸದ ಮೂಲಕ ಜನರ ನಂಬಿಕೆಯನ್ನು ಮತ್ತು ವಿಶ್ವಾಸವನ್ನು ಗಳಿಸಿದೆ. ಈ ಕಾರಣದಿಂದಲೇ ಜನರು ನ್ಯಾಯಾಂಗಕ್ಕೆ ಗೌರವ ನೀಡುತ್ತಿರುವುದು.
ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿರುವ ನ್ಯಾಯಾಂಗ ತಪ್ಪುಗಳನ್ನು ಮಾಡಿದೆ. ಇಂದೂ ಸಹ ತಪ್ಪು ಮಾಡುತ್ತಿದೆ. ಮುಂದೆ ತಪ್ಪು ಮಾಡುವುದಿಲ್ಲವೆಂದು ಹೇಳಲಾಗದು. ಆದರೆ ತಪ್ಪುಗಳ ಅರಿವಾದಾಗ ಸರಿ ತಿದ್ದುಕೊಂಡು ಮುನ್ನಡೆಯುತ್ತಿದೆ.
ಕಳೆದ 72 ವರ್ಷಗಳಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಒಂದಷ್ಟು ಸುಧಾರಣೆಗಳನ್ನು ತರಲಾಗಿದೆ. ಇನ್ನೂ ಅನೇಕ ಸುಧಾರಣೆಗಳ ಅಗತ್ಯವಿದೆ. ಪ್ರಮುಖ ಮತ್ತು ತುರ್ತಾಗಿ ತರಬೇಕಾದ ಸುಧಾರಣೆಗಳೆಂದರೆ:
- ನ್ಯಾಯಾಲಯಗಳ ಮತ್ತು ನ್ಯಾಯಾಧೀಶರ ಸಂಖ್ಯೆ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಈಗಿರುವ 20 ರಷ್ಟರಿಂದ 50ಕ್ಕೆ ಹೆಚ್ಚಿಸಬೇಕಾಗಿದೆ.
- ಮಂಜೂರಾದ ನ್ಯಾಯಾಧೀಶರುಗಳ ಹುದ್ದೆಗಳ ಪೈಕಿ ಯಾವಾಗಲೂ 1/4ರಷ್ಟು ಹುದ್ದೆಗಳು ಖಾಲಿ ಬಿದ್ದಿರುತ್ತವೆ. ನೇಮಕಾತಿಯಲ್ಲಿ ಸೂಕ್ತ ಸುಧಾರಣೆಗಳನ್ನು ತಂದು ಮಂಜೂರಾದ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಬೇಕು.
- ಸಿವಿಲ್ ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಲ್ಲಿ ಒಂದಷ್ಟು ಸುಧಾರಣೆಗಳನ್ನು ತರಲಾಗಿದೆ. ಇನ್ನೂ ಬಹಳಷ್ಟು ಸುಧಾರಣೆಗಳ ಅಗತ್ಯತೆ ಇದೆ.
- ನ್ಯಾಯಾಂಗದ ಅಧಿಕಾರವನ್ನು ಸ್ವಲ್ಪಮಟ್ಟಿಗೆ ಮತ್ತು ಕೆಲವು ನ್ಯಾಯಾಲಯಗಳಿಗೆ ವಿಕೇಂದ್ರೀಕರಣಗೊಳಿಸಬೇಕಾಗಿದೆ.
- ಸಿವಿಲ್ ಮತ್ತು ಕ್ರಿಮಿನಲ್ ಅಪೀಲುಗಳನ್ನು ಇತ್ಯರ್ಥಪಡಿಸಲು ಸರ್ವೋಚ್ಛ ನ್ಯಾಯಾಲಯದ ರೀಜನಲ್ ಪೀಠಗಳನ್ನು ಸ್ಥಾಪಿಸಬೇಕಾಗಿದೆ.
- ನ್ಯಾಯಾಧೀಶರಿಗೆ ಮತ್ತು ನ್ಯಾಯವಾದಿಗಳಿಗೆ ನಿರಂತರ ಶಿಕ್ಷಣ ಮತ್ತು ತರಬೇತಿಯ ಅಗತ್ಯತೆ ಇದೆ.
- ನ್ಯಾಯಮೂರ್ತಿಗಳ ನೇಮಕಾತಿ, ಬಡ್ತಿ, ವರ್ಗಾವಣೆ ಮತ್ತು ಆರೋಪಗಳ ವಿಚಾರಣೆ ವಿಷಯಗಳಿಗೆ ಸಂಬಂಧಿಸಿದ ಸ್ವತಂತ್ರವಾದ ರಾಷ್ಟ್ರೀಯ ನ್ಯಾಯಾಂಗ ಆಯೋಗ ರಚಿಸಬೇಕು.
ಇಂದು ನ್ಯಾಯಾಂಗದ ಮುಂದೆ ಸಮಸ್ಯೆಗಳು ಇವೆ ಮತ್ತು ಸವಾಲುಗಳೂ ಇವೆ. ನ್ಯಾಯಾಧೀಶರ ಕೊರತೆ ಮತ್ತು ಮೂಲ ಸೌಕರ್ಯಗಳ ಕೊರತೆ ಮುಖ್ಯವಾದ ಸಮಸ್ಯೆಗಳು. ಸರ್ಕಾರ ಮನಸ್ಸು ಮಾಡಿದರೆ ಈ ಸಮಸ್ಯೆಗಳನ್ನು ಬಹಳ ಬೇಗ ಪರಿಹರಿಸಿಕೊಳ್ಳಬಹುದು. ಆದರೆ ನ್ಯಾಯಾಂಗ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದಿದ್ದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ಪ್ರಮುಖವಾದ ಮೂರು ಸವಾಲುಗಳೆಂದರೆ:
(1) ಹೊರಗಿನ ಒತ್ತಡ, (2) ಆಂತರಿಕ ಒತ್ತಡ ಮತ್ತು (3) ಸಾಂಪ್ರದಾಯಿಕ ಗುಲಾಮಗಿರಿ.
ಪ್ರಮುಖವಾಗಿ ಹೊರಗಿನ ಒತ್ತಡ ಕಾರ್ಯಾಂಗದಿಂದ ಬರುತ್ತಿದೆ. ಕಾರ್ಯಾಂಗ ಯಾವಾಗಲೂ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತದೆ. ಉದಾ:
- ರಾಜಕೀಯ ಕಾರಣಕ್ಕಾಗಿ ನ್ಯಾಯಾಧೀಶರ ನೇಮಕಾತಿ ಶಿಫಾರಸ್ಸುಗಳನ್ನು ತಿರಸ್ಕರಿಸುವುದು, ವಿಳಂಬ ಮಾಡುವುದು ಮತ್ತು ವಿನಾಕಾರಣ ನ್ಯಾಯಾಂಗಕ್ಕೆ ಹಿಂತಿರುಗಿಸುವುದು
- ನ್ಯಾಯಾಧೀಶರ ನಿವೃತ್ತಿಯ ನಂತರ ಆಯ್ದ ಕೆಲವರನ್ನು ಕೆಲವು ಹುದ್ದೆಗಳಿಗೆ ನೇಮಿಸುವುದು, ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸುವುದು
- ನ್ಯಾಯಾಂಗಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದೇ ಇರುವುದು
- ನ್ಯಾಯಾಧೀಶರ ಹುದ್ದೆಗಳನ್ನು ಹೆಚ್ಚಿಸದೇ ಇರುವುದು
- ಅವಶ್ಯಕವಾಗಿ ಬೇಕಾದ ಆರ್ಥಿಕ ಸಂಪನ್ಮೂಲ ಒದಗಿಸದೇ ಇರುವುದು ಇತ್ಯಾದಿ
ಜಾಗತೀಕರಣದ ಬೆಳವಣಿಗೆಗಳೂ ಸಹ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರಿವೆ, ಸರ್ವೋಚ್ಛ ನ್ಯಾಯಾಲಯದ ಶೇ. 90ರಷ್ಟು ಸಮಯವು ದೇಶದ ಶೇ. 10 ರಷ್ಟು ಜನರ ಅಂದರೆ ರಾಜಕೀಯ, ಶ್ರೀಮಂತ ಮತ್ತು ಕಾರ್ಪೋರೇಟ್ ವ್ಯಾಜ್ಯಗಳಿಗೆ ಬಳಕೆಯಾಗುತ್ತಿದೆ. ಉಳಿದ ಶೇ. 10ರಷ್ಟು ಸಮಯ ಸಾಮಾನ್ಯ ಜನರ ವ್ಯಾಜ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಸಂಸದೀಯ ಉಪ ಸಮಿತಿ ತನ್ನ ವರದಿಯಲ್ಲಿ ತಿಳಿಯಪಡಿಸಿದೆ. ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಇತ್ತೀಚಿನ ಅನೇಕ ತೀರ್ಪುಗಳಲ್ಲಿ ಖಾಸಗಿ ಹಕ್ಕುಗಳ ರಕ್ಷಣೆಗೆ ಸಾಕಷ್ಟು ಮಾನ್ಯತೆ ಸಿಕ್ಕಿದಷ್ಟು ಸಾಮೂಹಿಕ ಹಿತಕ್ಕೆ ಸಿಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.
ನ್ಯಾಯಾಂಗದ ವ್ಯವಸ್ಥೆಯಲ್ಲಿ ಶಿಸ್ತು ಬಹಳ ಮುಖ್ಯ. ಒಂದು ನ್ಯಾಯಪೀಠದ ತೀರ್ಪನ್ನು ಮತ್ತೊಂದು ನ್ಯಾಯಪೀಠ ಅನುಸರಿಸದೇ ಇರುವುದು ಹಲವು ಬಾರಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಮತ್ತು ಕೆಲವು ಬಾರಿ ತದ್ವಿರುದ್ಧದ ನಿಲುವನ್ನು ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ರೋಸ್ಟರ್ ನಿಗದಿಪಡಿಸುವ ಮತ್ತು ವ್ಯಾಜ್ಯಗಳ ಹಂಚಿಕೆ ವಿಚಾರದಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಸ್ಟೇಚ್ಛಾಚಾರವನ್ನು ಪ್ರದರ್ಶಿಸಿರುವುದು, ನ್ಯಾಯಮೂರ್ತಿಗಳ ನೇಮಕಾತಿ, ಬಡ್ತಿ ಮತ್ತು ವರ್ಗಾವಣೆ ವಿಚಾರದಲ್ಲಿಯೂ ನಿಯಮಗಳನ್ನು ರೂಪಿಸಿ ಪಾಲಿಸದೇ ಇರುವುದು, ನ್ಯಾಯಾಧೀಶರ ಹೊಣೆಗಾರಿಕೆ ಎಂಬುದು ಇಲ್ಲದಿರುವುದು ಇತ್ಯಾದಿಯಾಗಿ ಆಂತರಿಕವಾಗಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ.
ನ್ಯಾಯಾಧೀಶರು ಪ್ರತಿಯೊಂದಕ್ಕೂ ದಾಖಲೆ ಇದೆಯೇ? ಹಿಂದಿನ ತೀರ್ಪು (Precedent) ಇದೆಯೇ? ಕಾನೂನು ಇದೆಯೇ? ನಿಯಮಗಳು ಇವೆಯೇ? ಇತ್ಯಾದಿಯಾಗಿ ಕೇಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಒಂದು ಶತಮಾನಕ್ಕೂ ಹಳೆಯದಾದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆಧುನಿಕ ವಿಜ್ಞಾನದ ಸಾಧನೆಗಳನ್ನು ಬಳಸಿಕೊಂಡು ಸತ್ಯವನ್ನು ಕಂಡುಹಿಡಿಯುವ ಮಾರ್ಗವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಮತ್ತು ಜನರ ಹಕ್ಕುಗಳನ್ನು ರಕ್ಷಿಸುವ ನ್ಯಾಯ ವಿತರಣಾ ಪದ್ಧತಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸುಮಾರು 15 ದಶಕಗಳ ಹಳೆಯ ವಿಧಾನದ ವ್ಯಾಜ್ಯಗಳ ವಿಚಾರಣೆ, ವಾದವನ್ನು ಕೇಳುವ ಮತ್ತು ತೀರ್ಪುಗಳನ್ನು ಬರೆಯುವುದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ವಸಾಹತುಶಾಹಿ ನ್ಯಾಯಾಲಯಗಳಲ್ಲಿ ಬಳಸಲಾಗುತ್ತಿರುವ My Lord / Your Honour ಇನ್ನೂ ಮುಂದುವರೆಸಿಕೊಂಡು ಬರಲಾಗಿದೆ. ಈ ರೀತಿಯ ಸಾಂಪ್ರದಾಯಿ ಗುಲಾಮತನದಿಂದ ಹೊರ ಬರಬೇಕಾಗಿದೆ.
ಇತ್ತೀಚಿನ ಕೆಲವು ತೀರ್ಪುಗಳು ಜನಸಾಮಾನ್ಯರಲ್ಲಿ ಆತಂಕವನ್ನು ಉಂಟು ಮಾಡಿವೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರದ ಬಗ್ಗೆ ತನಿಖೆ ಬೇಡವೆಂದು ನಿರಾಕರಿಸಲಾಯಿತು, ನ್ಯಾಯಾಧೀಶರಾದ ಲೋಯಾರವರ ಸಾವಿನ ಬಗ್ಗೆ ಹಲವು ಅನುಮಾನಗಳಿವೆ, ತನಿಖೆ ಆಗಬೇಕೆಂದರೆ ಬೇಡವೆಂದು ಹೇಳಿತು, ಕೋರೆಗಾಂವ್ ಪ್ರಕರಣದಲ್ಲಿ ಒಂದು ಭಾವನೆಯನ್ನು ಅಪರಾಧವೆಂಬುದಾಗಿ ನೋಡಿದ್ದು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಕೆಲವರಿಗೆ ಬೇಲ್ ನೀಡಿದ್ದು, ಕೆಲವರಿಗೆ ನಿರಾಕರಿಸಿದ್ದು ಮತ್ತು ಕೆಲವರನ್ನು ಕೆಳ ನ್ಯಾಯಾಲಯಕ್ಕೆ ಹೋಗಿ ಎಂಬ ಸಾಮ್ಯತೆ ಇಲ್ಲದ ನೀತಿಯನ್ನು ಅನುಸರಿಸಿದ್ದು, ಬಹುಪಕ್ಷೀಯತೆಯು ರಾರಾಜಿಸುತ್ತಿರುವಾಗ ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದ್ದು, ಕಾಶ್ಮೀರಿ ಕಣಿವೆಯ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಂದಾಗ ಆದ್ಯತೆ ಮೇಲೆ ತೀರ್ಮಾನ ಮಾಡುವ ಬದಲು ನುಣುಚಿಕೊಂಡಿದ್ದು, ಪ್ರಶಾಂತ್ ಭೂಷಣ್ ಪ್ರಕರಣದಲ್ಲಿ ಸಹನೆಯನ್ನು, ತಾಳ್ಮೆಯನ್ನು ತೋರಿಸದಿರುವುದು, ಸಂವಿಧಾನದ ಅನುಚ್ಛೇದ 32 ರಲ್ಲಿ ಸಲ್ಲಿಸುವ ರಿಟ್ ಅರ್ಜಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದು, ಬಾಬರಿ ಮಸೀದಿ ಪ್ರಕರಣದಲ್ಲಿ ಮಾಲೀಕತ್ವವನ್ನು ತೀರ್ಮಾನ ಮಾಡದೆ ಒಂದು ಸಮುದಾಯದ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ವ್ಯಾಜ್ಯವನ್ನು ವಿಲೇ ಮಾಡಿದ್ದು ಇತ್ಯಾದಿ. ಹಲವು ತೀರ್ಪುಗಳು ಜನಸಾಮಾನ್ಯರು ನ್ಯಾಯಾಂಗದ ಬಗ್ಗೆ ಹೊಂದಿದ ನಂಬಿಕೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.
ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು ದೇಶವಾಸಿಗಳಲ್ಲಿ ಅಸಂತೋಷವನ್ನುಂಟು ಮಾಡಿವೆ. ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ನಾರಾಯಣ ಶುಕ್ಲರವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಾಗ ಸರ್ವೋಚ್ಛ ನ್ಯಾಯಾಲಯ 2018ರಲ್ಲಿ ತನಿಖಾ ಸಮಿತಿಯನ್ನು ರಚಿಸಿ ವರದಿಯನ್ನು ಪಡೆಯಿತು. ಈ ವರದಿಯಲ್ಲಿ ನ್ಯಾ. ಶುಕ್ಲರವರ ವಿರುದ್ಧ ಮಾಡಿರುವ ಆರೋಪಗಳು ಸಾಬೀತಾಗಿದೆ ಎಂದು ಹೇಳಿತು. ಇದರಂತೆ ನ್ಯಾಯಮೂರ್ತಿ ಶುಕ್ಲರವರ ವಿರುದ್ಧ ಇಂಪೀಚ್‌ಮೆಂಟ್ ಕ್ರಮ ಕೈಗೊಳ್ಳಬೇಕೆಂದು ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಕೋರಿತು. ಆದರೆ ಕೇಂದ್ರ ಸರ್ಕಾರ ಎರಡು ವರ್ಷಗಳು ಕಳೆದರು ಏನೂ ಕ್ರಮ ಕೈಗೊಳ್ಳಲಿಲ್ಲ. ಈ ಮಧ್ಯೆ ನ್ಯಾಯಮೂರ್ತಿ ಶುಕ್ಲರವರು ಎಲ್ಲಾ ಲಾಭಗಳನ್ನು ಪಡೆದುಕೊಂಡು ನಿವೃತ್ತಿಯಾದರು. ಸರ್ವೋಚ್ಛ ನ್ಯಾಯಾಲಯದ ನಾಲ್ಕು ಹಾಲಿ ನ್ಯಾಯಮೂರ್ತಿಗಳು ಜನವರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಅಂದಿನ ಮುಖ್ಯನ್ಯಾಯಮೂರ್ತಿಗಳ ಕಾರ್ಯ ವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಪ್ರಮುಖವಾಗಿ ರೋಸ್ಟರ್ ನಿಗದಿಪಡಿಸುವ ವಿಚಾರ ಮತ್ತು ಕೇಸುಗಳ ಹಂಚಿಕೆಯ ವಿಚಾರ ಗಂಭೀರವಾದ ಆರೋಪವಾಗಿತ್ತು. ಈ ವಿಚಾರದಲ್ಲಿ ಇದುವರೆಗೂ ಸೂಕ್ತ ಕ್ರಮಕೈಗೊಂಡಿಲ್ಲ ಮತ್ತು ನಿಯಮಗಳನ್ನು ರೂಪಿಸಲಿಲ್ಲ. ಈ ಹಿಂದೆ 2018ರಲ್ಲಿ ಸರ್ವೋಚ್ಛ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀಯುತ ದೀಪಕ್ ಮಿಶ್ರರವರ ವಿರುದ್ದ 71 ರಾಜ್ಯಸಭಾ ಸದಸ್ಯರು ಸಹಿ ಮಾಡಿದ ಇಂಪೀಚ್‌ಮೆಂಟ್ ನೋಟಿಸನ್ನು ರಾಜ್ಯಸಭಾ ಅಧ್ಯಕ್ಷರು ಸಾರಾಸಗಟಾಗಿ ತಿರಸ್ಕರಿಸಿದರು. ಸರ್ವೋಚ್ಛ ನ್ಯಾಯಾಲಯದ ಮಹಿಳಾ ಸಿಬ್ಬಂದಿ 2019ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀರಂಜನ್ ಗೋಗಾಯ್‌ರವರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪವನ್ನು ಎಲ್ಲಾ ನ್ಯಾಯ ಪ್ರಕ್ರಿಯೆಗಳನ್ನು ಬದಿಗೊತ್ತಿ, ಯಾವ ನಿಯಮಗಳನ್ನೂ ಪಾಲಿಸದೆ ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು. 2020 ಅಕ್ಟೋಬರ್ ತಿಂಗಳಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಲಿಖಿತ ಪತ್ರ ಬರೆದು ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿ ಶ್ರೀ ಎನ್.ವಿ. ರಮಣರವರ ಮತ್ತು ಆಂಧ್ರಪ್ರದೇಶ ಹೈಕೋರ್ಟಿನ ಐದು ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರಿದರು. ಆಂತರಿಕ ತನಿಖೆಯನ್ನು ನಡೆಸಿ, ದೂರು ಸತ್ಯಕ್ಕೆ ದೂರವಾದುದೆಂದು ವಿಲೇ ಮಾಡಲಾಯಿತು. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಯಾಕೆ ಜರುಗಿಸಲಿಲ್ಲ? ಎನ್ನುವುದು ಪ್ರಶ್ನೆಯಾಗಿದೆ.
ಇಂದು ಶಾಸಕಾಂಗ ಮತ್ತು ಕಾರ್ಯಾಂಗ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಸರ್ಕಾರವು ಜನರ ಕಷ್ಟಗಳನ್ನು ಪರಿಹರಿಸುವ ಬದಲು ಹಲವು ರೀತಿಯ ಸಂಕಷ್ಟಗಳಿಗೆ ತಳ್ಳಿದೆ. ಜನ ಸಾಮಾನ್ಯರು ತಾವು ಗಳಿಸಿದ್ದನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳು ಬಲಹೀನಗೊಳ್ಳುತ್ತಿವೆ. ಭಿನ್ನಮತವನ್ನು ಅಸಹನೆಯಿಂದ ಕಾಣಲಾಗುತ್ತಿದೆ. ದೇಶ ಇಂದು ಯುದ್ಧ ಭೀತಿಯಲ್ಲಿ ಇಲ್ಲದಿದ್ದರೂ ಆಪತ್ಕಾಲೀನ ಸ್ಥಿತಿಯಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನ್ಯಾಯಾಂಗ ತನ್ನ ಕ್ರಿಯಾಶೀಲತೆಯನ್ನು ತೋರಿ ಸಂವಿಧಾನವನ್ನು ರಕ್ಷಿಸಬೇಕು. ನ್ಯಾಯಾಂಗದ ಘನತೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಬೇಕು.