March 25, 2023 4:24 pm

ದಮನಿತರ ಎದೆಯ ಬೆಳಕು ಬೂಕರ್ ವಾಷಿಂಗ್ಟನ್

KS Sathishkumar

ಅಂಬೇಡ್ಕರ್ ಅಮಲಿನಲ್ಲಿ ನಾವೆಲ್ಕರೂ ಇದ್ದೇವೆಯೇ ಹೊರತು ಅರಿವಿನಲ್ಲಿಲ್ಲ: ಜಸ್ಟಿಸ್ ನಾಗಮೋಹನ ದಾಸ್.

ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಸ್ನೇಹಿತರ ವಾಟ್ಸಾಪ್ ಗುಂಪುಗಳಲ್ಲಿ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರದ, “ಅಸ್ಪೃಶ್ಯತೆ ಎಂದರೆ ವರ್ಣಭೇದದ ಮುತ್ತಾತ” ಎಂಬ ಲೇಖನದ ಎರಡು ಪ್ಯಾರಾಗಳನ್ನು ಹಾಕಿದ್ದರು.

ದಕ್ಷಿಣ ಆಫ್ರಿಕಾದ ಕರಿಯರೆಂಬ ಆನೆಯನ್ನು ಖೆಡ್ಡಾಕ್ಕೆ ಬೀಳಿಸಲಾಯಿತು. ಬಂಧಿಸಿಯೂ ಆಯಿತು. ಹೊಡೆದು, ಬಡಿದು ಹಿಂಸಿಸಲು ಪಳಗಿಸಲು ಪ್ರಯತ್ನ ಮಾಡಲಾಯಿತು. ಆದರೆ ದಕ್ಷಿಣ ಆಫ್ರಿಕಾದ ಕರಿಯರೆಂಬ ಆನೆ ಪಳಗಲಿಲ್ಲ. ಪಳಗದಿದ್ದಕ್ಕೆ, ಹೆಚ್ಚಿನ ಹಿಂಸೆ ಕೊಲೆ-ಸುಲಿಗೆ ದೌರ್ಜನ್ಯ ಎದುರಿಸಬೇಕಾಯಿತು. ಆದರೆ ಭಾರತದ ಅಸ್ಪೃಶ್ಯರೆಂಬ ಆನೆ ಪಳಗಿಬಿಟ್ಟಿದೆ. ಇದು ಪುರಾತನ ಕಾಲದಲ್ಲೇ ಪಳಗಿಸಲ್ಪಟ್ಟ ಕಾರಣ, ಆ ಕ್ರೌರ್ಯ ನಮಗೆ ಕಾಣುತ್ತಿಲ್ಲ. ಜೊತೆಗೆ ಪಳಗಿಸಿದವನಿಗೂ, ಈಗ ತಾನು ಪಳಗಿಸಿದವನು ಎಂಬ ನೆನಪಿಲ್ಲ. ಪಳಗಿಸಲ್ಪಟ್ಟವನಿಗೂ, ತಾನು ಪಳಗಿಸಲ್ಪಟ್ಟವನು ಎಂಬ ನೆನಪಿಲ್ಲ. ತಾರತಮ್ಯವು ಸಮಾಜದಲ್ಲಿ ಆಂತರಿಕವಾಗಿ ವ್ಯಾಪಿಸಿ, ಸ್ವಭಾವವಾಗಿ ಸಹಜ ಪದ್ದತಿಯಾಗಿಬಿಟ್ಟಿದೆ.

ಇದನ್ನು ಕಂಡಾಗ ಕರಿಯರ ಬದುಕಿಗೆ ಸ್ವಾತಂತ್ರ ಸ್ವಾಭಿಮಾನದ, ಜಗತ್ ಹೆದ್ದಾರಿಯನ್ನು ನಿರ್ಮಿಸಿಕೊಟ್ಟ ಅಮೇರಿಕಾದ ಕರಿಯ ಬೂಕರ್ ಟಿ ವಾಷಿಂಗ್ಟನ್ ನೆನಪಾದ.

ಅದರೊಂದಿಗೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ದಲಿತ ಸಂಘಟನೆಗಳ ಮುಖಂಡರ ಸಭೆಯೊಂದರಲ್ಲಿ ಮಾತನಾಡಿದ ವಿವರಗಳು ಮೂಲವಾಗಿ ನೆನಪಾದವು.

ಜೆ.ಎಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ದಲಿತರ ಮೇಲಿನ ದೌರ್ಜನ್ಯದ ಕುರಿತು ದಲಿತ ಮುಖಂಡರ ಅಭಿಪ್ರಾಯ ಆಲಿಸುವ ನಿಟ್ಟಿನಲ್ಲಿ ಸಭೆಯೊಂದನ್ನು ಕರೆದಿದ್ದರು. ನೂರಾರು ದಲಿತ ಸಂಘಟನೆಗಳ  ಮುಖಂಡರು ಪಾಲ್ಗೊಂಡಿದ್ದರು. ಅವರಲ್ಲಿ ಬಹುತೇಕರ ಅಭಿಪ್ರಾಯ ಆಲಿಸಿದ ನಂತರ, ಜೆ.ಎಚ್.ಪಟೇಲರು ಸಹ ಮಾತನಾಡಿದರು. ಆಫ್ರಿಕಾದ ಕರಿಯರನ್ನು ಮೊದಲು ಬೇಟೆಯಾಡುತ್ತಿದ್ದರು. ನಂತರ ಅವರನ್ನು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.

ನೋವು, ದೌರ್ಜನ್ಯ, ದಮನ, ಅಪಮಾನ ಎಲ್ಲವನ್ನು ಸಹಿಸಿಕೊಂಡ ಕರಿಯರು ಈಗ ಜಗತ್ತು ನಿಬ್ಬೆರಗಾಗುವಂತೆ ಬೆಳೆದರು. ಅಮೆರಿಕಾದಲ್ಲಿ ಕರಿಯರನ್ನು ಹೊರತುಪಡಿಸಿದ ಕ್ರೀಡೆ ಸಂಸ್ಕೃತಿಗಳಿಲ್ಲ.  ಅವರು ಕಸುಬುದಾರಿಕೆಯನ್ನು ಆರಿಸಿಕೊಂಡರು. ಇವತ್ತು ಒಲಂಪಿಕ್ಸ್ ನಲ್ಲಿ ದೇಶಗಳ ದಾಖಲೆಗಳನ್ನು ತೆಗೆದರೆ ಸಿಂಹಪಾಲು ಕರಿಯದ್ದೆ ಇರುತ್ತವೆ. ಹಾಲಿವುಡ್ ಸಿನಿಮಾಗಳಿಂದ  ಹಿಡಿದು, ಜಗತ್ತಿನ ಸಂಗೀತದಲ್ಲಿ ಕರಿಯರು ತಮ್ಮ ಛಾಪು ಮೂಡಿಸಿದ್ದಾರೆ. ಕರಿಯರು ಅಮೇರಿಕಾ ಸೈನ್ಯದ ಬೆನ್ನುಮೂಳೆಯಂತೆ ಇದ್ದಾರೆ. ನಂತರದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ವಿವಾಹಗಳು ಏರ್ಪಟ್ಟು ಮಿಶ್ರ ಜನಾಂಗವೊಂದು ಸೃಷ್ಟಿಯಾಗಿದೆ.

ಒಟ್ಟಾರೆ, ತುಳಿತಕ್ಜೆ ಒಳಗಾದ ಜನ ಕಲೆ, ಸಂಸ್ಕೃತಿ, ಕ್ರೀಡೆ ಕೃಷಿ ,ಕೈಗಾರಿಕೆಗಳನ್ನು ಹೇಗೆ ತಮ್ಮ ವಶಕ್ಕೆ ತೆಗೆದುಕೊಂಡರು ಎಂಬುದು ಜೆ.ಎಚ್.ಪಟೇಲರ ಮಾತಿನ ಇಂಗಿತವಾಗಿತ್ತು

ಬೂಕರ್ ಟಿ ವಾಷಿಂಗ್ಟನ್ ಅಮೇರಿಕಾ ಅಷ್ಟೇ ಏಕೆ ಜಗತ್ತಿನ ಕರಿಯರ ಕಣ್ಣು ತೆರೆಸಿದ ಅಸಾಧಾರಣ ಪ್ರತಿಭಾವಂತ. ಅಪಮಾನಿತ ಕರಿಯರ ಎದೆಯಲ್ಲಿ ಬೆಳಕಾಗಿ ಉಳಿದ. ಆತ ಆರಂಭಿಸಿದ  ಟಸ್ಕಿಜಿ. ವೃತ್ತಿಪರ ಶಾಲೆ, ಇಂದಿಗೆ ವಿಶ್ವದ ಟಸ್ಕಿಜಿ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಹತ್ತೊಂಭತ್ತನೆಯ ಶತಮಾನದ ಆರಂಭದಿಂದ ಅಮೆರಿಕಾದ ಆರ್ಥಿಕತೆಗೆ ಅದರ ಕೊಡುಗೆಯೂ ಅಪಾರವಾದ್ದು.

ಬೂಕರ್ ಟಿ ವಾಷಿಂಗ್ಟನ್ 1856ರ ಏಪ್ರಿಲ್ 5ರಂದು, ಅಮೆರಿಕಾದ ವರ್ಜೀನಿಯಾ ಪ್ರಾಂತ್ಯದಲ್ಲಿ ಹುಟ್ಟಿದ. ಉಪ್ಪಿನ ಗಣಿಯೊಂದರಲ್ಲಿ, ಆತನ ತಾಯಿ ಜ್ಹೇನ್, ಗುಲಾಮಳಾಗಿದ್ದಳು. ಅಪ್ಪ ಒಬ್ಬ ಅನಾಮಧೇಯ ಬಿಳಿಯನಾಗಿದ್ದ‌. ಹುಟ್ಟುತ್ತಲೇ ಈತನಿಗೆ ಬೂಕರ್ ಎಂದು ಹೆಸರನ್ನು ಇಟ್ಟಿದ್ದ ಆತನ ತಾಯಿ, ನಂತರ ವಾಷಿಂಗ್ಟನ್ ಎಂಬಾತನ್ನು ಮದುವೆಯಾಗಿ, ಬೂಕರ್ ಟ್ಯಾಲಿಯಾಫರ್ ವಾಷಿಂಗ್ಟನ್ ಎಂದು ಹೆಸರು ಬದಲಿಸಿದ್ದಳು.

ಉಪ್ಪಿನ ಗಣಿ ಸಮೀಪವೇ ಅಸಾಧ್ಯ ಬಿಸಿಲ ಬೇಗೆಯಲ್ಲಿ ಆಡಿಕೊಂಡು ಬೆಳೆದ ಬೂಕರ್ ಗೆ ಅಲ್ಲಿ ಬಿದ್ದಿರುತ್ತಿದ್ದ ರದ್ದಿ ಕಾಗದಗಳೆಂದರೆ ಅತೀವ ಪ್ರೀತಿ. ಕಾಗದಗಳನ್ನು ಹೆಕ್ಕಿ ಅದರಲ್ಲಿ ಚಿತ್ರದಂತಿದ್ದ ಅಕ್ಷರಗಳನ್ನು ನೋಡಿ, ಅನಂದಿಸುವುದನ್ನು ರೂಢಿಮಾಡಿಕೊಂಡಿದ್ದ. ಕಡುಬಡತನದಲ್ಲಿ ಆತನ ತಾಯಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂಬ ಹಂಬಲ. ಆದರೆ ಕರಿಯರಿಗೆ ವಿದ್ಯೆ ಎನ್ನುವುದು ಮರೀಚಿಕೆಯಾಗಿದ್ದ ಕಾಲವದು.

ಒಂಭತ್ತು ವರ್ಷದವರಿಗೆ ಬೂಕರ್ ಉಪ್ಪಿನ ಗಣಿಯಲ್ಲಿ ಬಾಲಕಾರ್ಮಿಕರಾಗಿ ದುಡಿದ. ಹತ್ತರಿಂದ ಹನ್ನೆರಡು ವರ್ಷದವರೆಗೆ ಕಲ್ಲಿದ್ದಲು ಗಣಿಯಲ್ಲಿ ದುಡಿಯುತ್ತಿದ್ದ. ಆತನ ತಾಯಿಯ ಪ್ರಯತ್ನದಿಂದ ಯಾರೋ ಒಬ್ಬ ಶಿಕ್ಷಕನನ್ನು ಹಿಡಿದು, ದುಡಿಮೆಯ ನಂತರ ರಾತ್ರಿಯಲ್ಲಿ ಈತ ಓದಲು-ಬರೆಯಲು ಕಲಿಯುವಂತೆ ಮಾಡಿದಳು. ಆತನ ಎದೆಗೆ ಬಿದ್ದ ಅಕ್ಷರದಿಂದ ಆತ ಹಿಂದಿರುಗಿ ನೋಡಲಿಲ್ಲ. ಅಮೇರಿಕಾವೇ ಏಕೆ, ಜಗತ್ತೇ ಬೆರಗಾಗುವಂತೆ ಬೆಳೆದ.

1871ರಲ್ಲಿ ಬೂಕರ್, ಗಣಿಮಾಲಿಕ ಲೆವಿಸ್ ರಿಫ್ರೆನರ್ ಎಂಬಾತನ ಮನೆಯಲ್ಲಿ ಮನೆಕೆಲಸದವನಾಗಿ ದುಡಿದ. ಹದಿನಾರನೇ ವಯಸ್ಸಿಗೆ, ಹ್ಯಾಂಪ್ಟನ್ ಕೃಷಿ ಮತ್ತು ಸಾಮಾನ್ಯ ಶಿಕ್ಷಣ ಶಾಲೆಗೆ ಸೇರಿಕೊಂಡ. ಆ ಶಾಲೆಗೆ ಸೇರಬೇಕೆಂದು ಆತ ನಿರ್ಧರಿಸಿದಾಗ ಕೈಯಲ್ಲಿ ಒಂದು ನಯಾಪೈಸೆ ಹಣವಿರಲಿಲ್ಲ. ಇದ್ದ ಸ್ಥಳದಿಂದ ನೂರಾರು ಕಿಲೋಮೀಟರ್ ಅಂತರದವರೆಗೆ ಕಾಲ್ನಡಿಗೆಯಲ್ಲಿ ಹ್ಯಾಂಪ್ಟನ್ ಗೆ ತಲುಪಿದ್ದ. ಶಾಲೆಗೆ ಸೇರಲು ಹಣವಿಲ್ಲ ಎಂದಾಗ ಅಲ್ಲಿನ ಪ್ರಾಂಶುಪಾಲ ಸ್ಯಾಮ್ಯುಯೆಲ್ ಆಮ್ ಸ್ಟ್ರಾಂಗ್, ಬೂಕರ್ ಗೆ ತರಗತಿಯ ಕೊಠಡಿಯೊಂದನ್ನು ಶುಚಿಗೊಳಿಸಲು ಸೂಚಿಸಿದರು.

ಈತನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು, ಶಿಕ್ಷಕರು, ಬಿಳಿ ಬಣ್ಣದ ಕರವಸ್ತ್ರದಲ್ಲಿ, ಕೊಠಡಿಯ ನೆಲವನ್ನು ಒರೆಸಿದಾಗ, ಒಂದು ಕಣ ಧೂಳಿರಲಿಲ್ಲ. ಬೂಕರ್ ಬದ್ದತೆ ಶಿಕ್ಷಕರ ಮನ ಗೆದ್ದಿತು. ಈತನ ಶಾಲಾಶುಲ್ಕ ಭರಿಸಲು, ರಾತ್ರಿ ವೇಳೆ ಶಾಲಾ ಕಾವಲುಗಾರನಾಗಿ ನೇಮಕ ಮಾಡಿದರು.

1875ರಲ್ಲಿ ಬೂಕರ್, ಕೃಷಿ, ಕೈಗಾರಿಕೆ, ತಂತ್ರಜ್ಞಾನ ವಿಭಾಗದಲ್ಲಿ ಪದವಿ ಪಡೆದ. ಕರಿಯರು ಪ್ರಾಯೋಗಿಕ ಶಿಕ್ಷಣ ಪಡೆಯಬೇಕು. ಕೃಷಿ, ತಂತ್ರಜ್ಞಾನ ಕೈಗಾರಿಕಾ ಕೌಶಲ್ಯಗಳನ್ನು, ಸಹನಶೀಲತೆಯಿಂದ ಅಧ್ಯಯನ ಮಾಡಬೇಕು. ಆ ಮೂಲಕ ಜ್ಞಾನದಿಂದಲೇ ಆರ್ಥಿಕವಾಗಿ ಬಲಾಢ್ಯರಾದರೆ, ಜಗತ್ತನ್ನು ಎದುರಿಸಬಹುದು ಎಂಬ ಸತ್ಯವನ್ನು ಕಂಡುಕೊಂಡ. ಪದವಿ ಮುಗಿಯುವ ವೇಳೆಗೆ ಎಲ್ಲ ವಿಷಯಗಳ ಪಾರಂಗತನಾಗಿ, ಆಕರ್ಷಕವಾಗಿ ಅವನ್ನು ಮಂಡಿಸಬಲ್ಲ ಭಾಷಣಕಾರನಾಗಿ ರೂಪುಗೊಂಡಿದ್ದ ಬೂಕರ್.

ಈ ನಡುವೆ ಅಲಬಾಮಾ ಪ್ರಾಂತ್ಯ ಸರ್ಕಾರ ಕರಿಯರಿಗೆ ಮತ್ತು ಗುಲಾಮಿ ಜನರಿಗೆ ಶಾಲೆಗಳನ್ನು ಆರಂಭಿಸಬೇಕು ಎಂದು ಎರಡು ಸಾವಿರ ಡಾಲರ್ ಅನುದಾನವನ್ನು ಪ್ರಕಟಿಸಿತು. ಈ ಶಾಲೆ ಆರಂಭಿಸಬೇಕು ಎಂಬ ಒತ್ತಾಸೆ ನೀಡಿದ ಅಲ್ಲಿದ ಜನಪ್ರತಿನಿಧಿಗಳು ಎಂದರೆ, ಮಾಜಿ ಗುಲಾಮ ಲೆವಿಸ್ ಆದಂ ಹಾಗೂ ಗುಲಾಮರ ಮಾಲಿಕನಾಗಿದ್ದ ಜಾರ್ಜ್ ಕ್ಯಾಂಪಬೆಲ್ ಎನ್ನುವುದು ಒಂದು ವಿಶೇಷ.

ಟಸ್ಕಿಜಿ ಪ್ರದೇಶದಲ್ಲಿ ಶಾಲೆ ಆರಂಭಿಸಬೇಕು ಎಂದಾಗ, ಹ್ಯಾಂಪ್ಟನ್ ಶಾಲೆಯ ಪ್ರಾಂಶುಪಾಲರಾಗಿದ್ದ, ಸ್ಯಾಮ್ಯುಯೆಲ್ ಆಮ್ ಸ್ಟ್ರಾಂಗ್ ಗೆ, ಬಿಳಿಯ ಪ್ರಾಂಶುಪಾಲರು ಒಬ್ಬರನ್ನು ಕೊಡಿ ಎಂದು ಜನಪ್ರತಿನಿಧಿಗಳು ಕೋರಿದ್ದರು. ಆದರೆ ಆಮ್ ಸ್ಟ್ರಾಂಗ್, ಬೂಕರ್ ವಾಷಿಂಗ್ಟನ್ ಸೂಕ್ತ ವ್ಯಕ್ತಿಯೆಂದು ಅವರನ್ನೇ ಶಿಫಾರಸು ಮಾಡಿದರು. ಈ ನಡುವೆ ಬೂಕರ್ ಕ್ರಿಶ್ಚಿಯನ್ ಮಿಷನರಿಯ ಒಂದು ಶಾಲೆಯಲ್ಲಿ ಎಂಟು ತಿಂಗಳ ಕಾಲ ಶಿಕ್ಷಕರಾಗಿ ದುಡಿದಿದ್ದರು.

1888ರಲ್ಲಿ ಟಸ್ಕಿಜಿ ಪ್ರದೇಶದಲ್ಲಿ 540 ಎಕರೆಯಲ್ಲಿ ಸಾಮಾನ್ಯ ಶಿಕ್ಷಣ ಹಾಗೂ ಕೈಗಾರಿಕಾ ಶಾಲೆ ಆರಂಭಗೊಳ್ಳುತ್ತದೆ. 400 ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಬಡಗಿ, ಪ್ರಿಂಟಿಂಗ್, ಶೂ ಮೇಕಿಂಗ್, ಕೃಷಿ, ಪಶುಸಂಗೋಪನೆ ಹಾಗೂ ಮಹಿಳೆಯರಿಗೆ ಅಡುಗೆ ಮತ್ತು ಟೈಲರಿಂಗ್ ತರಬೇತಿ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳು ಬೆಳಗ್ಗೆ 5.30ರಿಂದ ದಿನಚರಿ ಆರಂಭಿಸಿದರೆ, ರಾತ್ರಿ 9:30ರ ತನಕ ಅಧ್ಯಯನದಲ್ಲಿ ತೊಡಗಬೇಕು. ಭಾನುವಾರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಶ್ರಮಜೀವಿ ಬದುಕು ಇರಬೇಕು ಎನ್ನುವುದು ಬೂಕರ್ ಆಶಯ.

ಸರ್ಕಾರ ನೀಡಿರುವ 2 ಸಾವಿರ ಡಾಲರ್ ಅನುದಾನ ಶಿಕ್ಷಕರ ವೇತನಕ್ಕೆ ಸಾಲುವುದಿಲ್ಲ. ಶಾಲೆಗೆ ಬೇಕಾದ ಕಟ್ಟಡಗಳು, ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲು, ವಿದ್ಯಾರ್ಥಿಗಳಿಂದಲೇ ಕೃಷಿ ಉತ್ಪಾದಿಸಿ ಅದನ್ನು ಮಾರುಕಟ್ಟೆಯಲ್ಲಿ ಇಟ್ಟು ಶಾಲೆಗೆ ಲಾಭವನ್ನು ಮಾಡಲಾಯಿತು. ವಿದ್ಯಾರ್ಥಿಗಳೆ ಕಟ್ಟಡ ನಿರ್ಮಾಣದಲ್ಲೂ ತೊಡಗಿದರು.

ಟಸ್ಕಿಜಿ ವಿದ್ಯಾಲಯದ 25ನೇ ವರ್ಷದ ಸಂಭ್ರಮಾಚರಣೆಯ ವೇಳೆಯಲ್ಲಿ 1500 ಎಕರೆ ಪ್ರದೇಶಕ್ಕೆ ವಿಸ್ತರಿಸಿ, 83 ಬೃಹತ್ ಕಟ್ಟಡಗಳನ್ನು ಹೊಂದಿತ್ತು. 1500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ವಸತಿ ಶಾಲೆಯಾಗಿತ್ತು. ಟಸ್ಕಿಜಿ ವಿದ್ಯಾಲಯದ ಕೃಷಿ ಉತ್ಪನ್ನದಿಂದಲೇ 8,31,895 ಡಾಲರ್ ಗಳಿಕೆ ಮಾಡಿತ್ತು. ಟಸ್ಕಿಜಿ ಖಾತೆಯಲ್ಲಿ 12,75,644 ಡಾಲರ್ ಹಣ ಸಂಗ್ರಹವಿತ್ತು. 37 ಕೈಗಾರಿಕೆಗಳಿಗೆ ಅಧಿಕೃತ ತರಬೇತಿ ಕೇಂದ್ರವಾಗಿತ್ತು. ಇದು ಬೂಕರ್ ರವರ ಪರಿಶ್ರಮದಿಂದ ಬೆಳೆದಿತ್ತು.

ಬೂಕರ್ ಟಿ ವಾಷಿಂಗ್ಟನ್ ಸುಮಾರು 40 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಜನಪ್ರಿಯಗೊಂಡಿರುವ ಕೃತಿಗಳೆಂದರೆ, ಅಪ್ ಫ್ರಮ್ ಸ್ಲೇವರಿ (1911), ಚಾಟರ್ಲಿ ಎಜುಕೇಶನ್ (1911), ದಿ ಮ್ಯಾನ್ ಫಾರ್ ಥೀಸ್ಟ್ ಡೌನ್ (1911). ಅವರು ತಮ್ಮ ಬಹುತೇಕ ಕೃತಿಗಳಲ್ಲಿ ತಮ್ಮ ಗುರುಗಳಾದ ಆಮ್ ಸ್ಟ್ರಾಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

1901 ಅಕ್ಟೋಬರ್ 16 ರಂದು ಅಂದಿನ ಅಮೆರಿಕಾ ಅದ್ಯಕ್ಪ ಥಿಯೊಡರಸ್ ರೂಸ್ ವೆಲ್ಟ್, ಬೂಕರ್ ಅವರನ್ನು ಭೋಜನಕೂಟಕ್ಜೆ ಆಹ್ವಾನಿಸಿದ್ದರು. ಅಮೆರಿಕ ಅಧ್ಯಕ್ಷರ ವೈಟ್ ಹೌಸ್ ನಲ್ಲಿ ಭೋಜನಕ್ಜೆ ಆಹ್ವಾನ ಪಡೆದ ಮೊದಲ ಕರಿಯ ಜನಾಂಗದ ವ್ಯಕ್ತಿ ಬೂಕರ್ ಎಂದು ಹೇಳಲಾಗಿದೆ.

ಬೂಕರ್ ಅವರ ವೈಯಕ್ತಿಕ ಜೀವನ ಏರಿಳಿತದಿಂದ ಕೂಡಿತ್ತು. ಮೊದಲ ಪತ್ನಿ ಜಲಿನಾ ಡೇವಿಡ್ ಸನ್ ನಿಧನರಾದ ನಂತರ, ಫಾನ್ನಿ ಸ್ಮಿತ್ ಅವರನ್ನು ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳು. ನಂತರ ಮಾರ್ಗರೇಟ್‌ ಅವರನ್ನು ವಿವಾಹವಾದರು. ಅವರಿಗೂ ಮಕ್ಕಳಿರಲಿಲ್ಲ. ಅವರು ಸಹ ಟಸ್ಕಿಜಿಯಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಶ್ರಮಜೀವನ, ಶಿಕ್ಷಣ, ಸ್ವಾವಲಂಬನೆ, ಕಠಿಣ ದುಡಿಮೆಯಿಂದಲೇ ವರ್ಣಭೇದ ನೀತಿಯನ್ನು ಹೋಗಲಾಡಿಸಬಹುದು ಎಂಬುದು ಅವರ ಧೃಡ ನಂಬಿಕೆಯಾಗಿತ್ತು. ಇಷ್ಟೆಲ್ಲ ಸಾಧನೆಗಳನ್ನು ಮಾಡಿದ ಬೂಕರ್ ಜೀವಿಸಿದ್ದು ಅಲ್ಪಾವಧಿ ಎಂದೇ ಹೇಳಬೇಕು. ಪ್ರಜ್ವಲಿಸುವ ಬೆಂಕಿ ಧಗಧಗನೆ ಉರಿದು ಜಗತ್ತಿಗೆ ಬೆಳಕು ನೀಡಿ, ನಂದಿ ಹೋದ ಬದುಕು ಅವರದ್ದು.

ಅವರು ತಮ್ಮ 59ನೇ ವರ್ಷದಲ್ಲಿ  1915ರ ನವೆಂಬರ್ 14ರಂದು, ತಮ್ಮ ಮನೆಯಲ್ಲೇ ಅಧಿಕ ರಕ್ತದೊತ್ತಡದಿಂದ ಮೃತಪಟ್ಟರು. ಇದಕ್ಕು ಮುನ್ನ ಕೆಲ ದಿನಗಳು ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚು ದಿನಗಳು ಬದುಕುವುದಿಲ್ಲ ಎನ್ನಿಸಿದ ಮೇಲೆ ತಮ್ಮ ಕರ್ಮ ಭೂಮಿಯಲ್ಲೆ ಮರಣಹೊಂದಲು ಇಚ್ಚಿಸಿದ್ದರು ಎನ್ನಲಾಗಿದೆ. ನಂಬರ್ 17ಕ್ಕೆ ಟಸ್ಕಿಜಿ  ವಿಶ್ವವಿದ್ಯಾಲಯದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ಆ ಕಾಲದಲ್ಲಿಯೇ ಅವರ ಅಂತಿಮ ಯಾತ್ರೆಯಲ್ಲಿ ಎಂಟು ಸಾವಿರ ಜನ ಸೇರಿದ್ದರು. ಅವರ ಸಮಾಧಿ ಇರುವ ಪ್ರದೇಶದಿಂದ ಟಸ್ಕಿಜಿ ವಿಶ್ವವಿದ್ಯಾಲಯವನ್ನೇ ವೀಕ್ಷಿಸುವ ವಿಹಂಗಮ ನೋಟವಿದೆ. ಅಂತಹ ಸ್ಥಳವನ್ನೇ ವಿದ್ಯಾರ್ಥಿಗಳು ಅವರ ಸಮಾಧಿಗಾಗಿ ಗುರುತಿಸಿದ್ದರು.

  • ಕೆ.ಎಸ್. ಸತೀಶ್ ಕುಮಾರ್, ಮಂಗಳೂರು ವಲಯ ಸಂಚಾಲಕ, ಮಾನವ ಬಂಧುತ್ವ ವೇದಿಕೆ

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ