March 25, 2023 5:25 pm

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಭಕ್ತಿ ಪಂಥ

‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ ಒಂದು ಪವಿತ್ರವಾದ ಪದ.

ಭಕ್ತಿಪಂಥಯೆಂಬುದು ಒಂದು ಚಳುವಳಿ. ಭಕ್ತಿಪಂಥ ಭಾರತ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಮಹತ್ತರ ಅಧ್ಯಾಯ. ಎಂಟನೇ ಶತಮಾನದಲ್ಲಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಪ್ರಾರಂಭವಾಗಿ ಕ್ರಮೇಣ ಇಡೀ ಭಾರತದೇಶವನ್ನು ವ್ಯಾಪಿಸಿತು. 15ನೇ ಶತಮಾನದಿಂದ 17ನೇ ಶತಮಾನದವರೆಗೆ ಭಕ್ತಿ ಚಳುವಳಿ ಭಾರತ ದೇಶದಲ್ಲಿ ಅತ್ಯುನ್ನತ ಶಿಖರಕ್ಕೇರಿತು. ಇಂದಿಗೂ ಸಹ ಭಕ್ತಿ ಚಳುವಳಿ ದೇಶದ ವಿವಿಧ ಭಾಗಗಳಲ್ಲಿ ಜನಜನಿತವಾಗಿದೆ.

ಪ್ರಾಚೀನ ಭಾರತದಲ್ಲಿ ಅಂದರೆ ಸಿಂಧೂ ನಾಗರೀಕತೆಯಲ್ಲಿ ಸುವ್ಯವಸ್ಥಿತ ಮತ್ತು ಗಮನಾರ್ಹವಾದ ನಗರಗಳು ಇದ್ದುವೆಂದು, ಉತ್ತಮವಾದ ಜನಜೀವನವಿಧಾನ, ಸಂಸ್ಕೃತಿ, ವ್ಯಾಪಾರ, ಕಲಾಕುಶಲತೆ, ಬರವಣಿಗೆಯನ್ನು ಬಲ್ಲವರಾಗಿದ್ದರೆಂದು ಅನೇಕ ಸಂಶೋಧನೆಗಳಿಂದ ಮತ್ತು ದೊರೆತಿರುವ ಮುದ್ರಿಕೆಗಳಿಂದ ವ್ಯಕ್ತವಾಗುತ್ತದೆ. ಲಿಂಗ ತಾರತಮ್ಯವಿರಲಿಲ್ಲ, ಜಾತಿ ಬೇಧವಿರಲಿಲ್ಲ, ವರದಕ್ಷಿಣೆ ಇರಲಿಲ್ಲ, ಸತಿ ಪದ್ಧತಿ ಇರಲಿಲ್ಲ, ವಿಧವೆಯರು ಮರು ಮದುವೆಯಾಗಬಹುದಾಗಿತ್ತು, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು, ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಹಕ್ಕು ಇತ್ತು, ಒತ್ತಾಯದ ಗುಲಾಮಸೇವೆಯ ಪದ್ಧತಿ ಇರಲಿಲ್ಲ, ಜನರು ಶಾಂತಿ ಪ್ರಿಯರಾಗಿದ್ದರು. ಹೆಚ್ಚು ಸಮಾನತೆ ಹಾಗೂ ಸೌಹಾರ್ದತೆಯಿಂದ ಬಾಳುತ್ತಿದ್ದರು.

ಸುಮಾರು ವರ್ಷಗಳ ನಂತರ (ಸುಮಾರು ಕ್ರಿ.ಪೂ. 2000) ಈ ಪ್ರದೇಶಗಳಿಗೆ ಆರ್ಯರು ಬಂದು ನೆಲೆಸಿದರು. ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳನ್ನು ರಚಿಸಲಾಯಿತು. ವೈದಿಕ ಯುಗದ ಕೊನೆಯ ಘಟ್ಟದಲ್ಲಿ ವರ್ಣ ವ್ಯವಸ್ಥೆ ಜಾರಿಗೆ ಬಂತು. ಮುಂದೆ ಈ ಸಮಾಜದ ವರ್ಣವ್ಯವಸ್ಥೆಯು ಜಾತಿಗಳಾಗಿ, ಉಪಜಾತಿಗಳಾಗಿ ಒಡೆಯುತ್ತಲೇ ಹೋಯಿತು. ಬಾಲ್ಯ ವಿವಾಹ, ಬಾಲೆಯರ ಬಲಿ, ಸತಿ ಪದ್ಧತಿ, ವರದಕ್ಷಿಣೆ, ದೇವದಾಸಿ ಪದ್ಧತಿ, ವಿಧವೆಯರ ಮರುಮದುವೆ ನಿಷೇಧ ಇತ್ಯಾದಿಗಳು ಜಾರಿಗೆ ಬಂದವು. ಚಾರ್ತುವರ್ಣ್ಯದ ಹೊರಗೆ ಮತ್ತೊಂದು ಸಾಮಾಜಿಕ ವರ್ಗವಾದ ಅಸ್ಪೃಶ್ಯರ ನಿರ್ಮಾಣವಾಯಿತು.

ಕ್ರಿ.ಶ. 13ನೇ ಶತಮಾನದಿಂದ ಭಾರತದಲ್ಲಿ ಮುಸಲ್ಮಾನರ ರಾಜಕೀಯ ಆಡಳಿತ ಪ್ರಾರಂಭವಾಯಿತು. ಇಸ್ಲಾಂ ಇವರ ರಾಜಧರ್ಮವಾಗಿತ್ತು. ಈ ಕಾಲಮಾನದಲ್ಲಿ ಭಾರತವನ್ನು ಆಳಿದ ಪ್ರಮುಖ ಮುಸಲ್ಮಾನರೆಂದರೆ ಸುಲ್ತಾನರು, ಖಿಲ್ಜಿಗಳು, ತುಘಲಕರು, ತುರ್ಕಿಗಳು, ಸಯಿದ್ದೀಸ್, ಲೋದಾಸ್ ಮತ್ತು ಮೊಘಲರು. ಈ ಮಧ್ಯಕಾಲೀನದಲ್ಲಿ ಧಾರ್ಮಿಕ ಅತಿರೇಕಗಳು ನಡೆದು ಜನರಲ್ಲಿ ಅಭದ್ರತೆ ಉಂಟಾಯಿತು. ಯುದ್ಧಗಳ ಮೇಲೆ ಯುದ್ಧಗಳು ನಡೆದು ಜನಸಾಮಾನ್ಯರ ಬದುಕು ಬಹಳ ಸಂಕಷ್ಟಕ್ಕೆ ಈಡಾಯಿತು. ಇದರಿಂದ ತತ್ತರಿಸಿದ ಜನ ಒಂದು ಸರಳ ಅಹಿಂಸಾತ್ಮಕ ಮತ್ತು ಶಾಂತಿಯುತ ಪರ್ಯಾಯವನ್ನು ಬಯಸಿದರು.

ಇಂತಹ ಪರಿಸ್ಥಿತಿಯಲ್ಲಿ ಹಿಂದೂ ಧರ್ಮದಲ್ಲಿ ಸುಧಾರಣೆಗಳನ್ನು ತರಲು ಭಕ್ತಿ ಚಳುವಳಿ ಪ್ರಾರಂಭವಾಯಿತು. ಇದೇ ರೀತಿ ಇಸ್ಲಾಂ ಧರ್ಮದಲ್ಲಿ ಸುಧಾರಣೆಯನ್ನು ತರಲು ಸೂಫಿ ಪಂಥ ಪ್ರಾರಂಭವಾಯಿತು. ಇವೆರಡು ಜನ ಸಾಮಾನ್ಯರ ಆಸೆ- ಆಕಾಂಕ್ಷೆಗಳಿಗೆ ಸ್ಪಂದಿಸಿದವು. ಇವರು ಪ್ರಮುಖವಾಗಿ ಮೂರು ಕ್ಷೇತ್ರಗಳಿಗೆ ತಮ್ಮ ಕೊಡುಗೆಯನ್ನು ನೀಡಿದರು. ಅವುಗಳೆಂದರೆ:

1. ಧಾರ್ಮಿಕ ಕ್ಷೇತ್ರ

2. ಸಾಮಾಜಿಕ ಕ್ಷೇತ್ರ

3. ನೈತಿಕ ಕ್ಷೇತ್ರ

ಧಾರ್ಮಿಕ ಕ್ಷೇತ್ರ

ಭಕ್ತಿಪಂಥವಾಗಲಿ ಅಥವಾ ಸೂಫಿ ಸಂತರಾಗಲೀ ಧರ್ಮವಿರೋಧಿಗಳಾಗಿರಲಿಲ್ಲ ಮತ್ತು ದೇವರ ವಿರೋಧಿಗಳಾಗಿರಲಿಲ್ಲ. ಎಲ್ಲಾ ಧರ್ಮಗಳು ಮಾನವನ ಒಳಿತಿಗೆ ಎಂದು ಸಾರಿದರು. ರಾಮ, ರಹೀಮ, ಈಶ್ವರ, ಅಲ್ಲಾ ಎಂಬ ಹಲವು ಹೆಸರುಗಳು ಒಂದೇ ದೇವರಿಗೆ ಎಂದರು. ಒಬ್ಬರು ಮತ್ತೊಬ್ಬರನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕೆಂದರು. ಮೂಲಭೂತವಾದವನ್ನು ಮತ್ತು ಕೋಮುವಾದವನ್ನು ವಿರೋಧಿಸಿದರು. ಧಾರ್ಮಿಕ ಅಂಧಶ್ರದ್ಧೆಗಳಿಂದ ಮತ್ತು ಆಚರಣೆಗಳಿಂದ ಜನರು ಹೊರ ಬರಬೇಕೆಂದರು. ಧಾರ್ಮಿಕ ಸಹಿಷ್ಣುತೆಯನ್ನು ಸಾರಿದರು. ಮೂಢನಂಬಿಕೆಗಳನ್ನು ವಿರೋಧಿಸಿದರು. ಮಾನವೀಯತೆಯನ್ನು ಸಾರಿದರು. ಅಂತಹ ಸಂತರ ಕೆಲವು ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

ಗೋರಕನಾಥರು:

‘ದೇವಾಲಯದ ಯಾತ್ರೆ ಶೂನ್ಯವಾದುದು.

ಇದರಿಂದ ಯಾವ ಫಲವೂ ಸಿಗುವುದಿಲ್ಲ.

ತೀರ್ಥಯಾತ್ರೆ ನೀರಿನ ಯಾತ್ರೆಯಾಗುತ್ತದೆ ಅಷ್ಟೆ.

ಅತೀತ ಯಾತ್ರೆಯೇ ಸಫಲವಾದದ್ದು. ಅ

ಮೃತ ನುಡಿಗಳನ್ನು ನುಡಿಯುವರಲ್ಲಿಗೆ

ಯಾತ್ರೆ ಮಾಡಿದಾಗ ಬೇರೆ ಯಾತ್ರೆಗಳಿಗೆ

ಹೋಗಬೇಕಾದ ಸಂಭವ ಬರುವುದಿಲ್ಲ’.

ಸಾಲಗುಂದ ಗುರುಖಾದರಿ ಪೀರರು:

‘ಕಲ್ಮ ತಿಳಿಯದೆ ನಮಾಜ ಎಂಬುದು

ಯಾವುದು ಅದು ಎಲೈತಂತೆ.

ಮಸೀದಿ ಎಂಬುದು ಹಾಳಾದ ಜಾಗ.

ಆದರ ಗೊಡವಿ ನಿನಗ್ಯಾಕಂತೆ.

ಮಾನವನಿಗೆ ಮಾನವ ತಾ ತಿಳಿದರೆ

ಎಲ್ಲ ನಿನ್ನೊಳಗಡಗೈತಂತೆ.

ಗುರುಪೀರ ಖಾದರಿ ಹೇಳಿದಂತೆ

ನೋಡಿ ತಿಳಿದು ನಡಿ ಬೇಕಂತೆ.

ಸ್ವರ್ಗ ನರಕದ ಭಯ ನಮಗ್ಯಾಕೆ

ಗುರುವಿನ ದಯೆ ನಮಗಿರಲಂತೆ.

ಸಂತ ಕಬೀರರು:

‘ನನ್ನ ದೇವರ ಪ್ರತಿರೂಪವನ್ನು

ಮನುಷ್ಯನ ಹೃದಯದಲ್ಲಿ ಕಾಣುತ್ತೇನೆ

ಕಟ್ಟಡಗಳಲ್ಲಿ ದೇವರಿದ್ದಾನೆಯೆ ?

ನಿಮ್ಮ ಹೃದಯದಲ್ಲಿ ಅವನನ್ನು ಹುಡುಕಿರಿ’.

ಸಾಮಾಜಿಕ ಕ್ಷೇತ್ರ

ಜಾತಿ ಪದ್ಧತಿ, ಸತಿ ಪದ್ಧತಿ, ಅಸ್ಪೃಶ್ಯತೆ, ಬಲಿ, ಯಾಗ, ಯಜ್ಞ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ಖಂಡಿಸಿದರು. ಲಿಂಗಭೇದ, ವರ್ಣಬೇಧ ಮತ್ತು ವರ್ಗ ಬೇಧವನ್ನು ನಿರಾಕರಿಸಿದರು. ಎಲ್ಲಾ ಮಾನವರು ಸಮಾನರೆಂದರು.

ತುಕಾರಾಮರು:

ದೀನದಲಿತನನಪ್ಪಿಕೊಳ್ಳುವವನೇ ನಿಜವಾದ ಸಂತನು

ದೇವ ದೊರೆವನು ಅವನಲಿ

ಅಣ್ಣಮಾರ್ಚಾಯರು:

ಯಾರಾದರೇನು, ಜಾತಿ ಏನಾದರೇನು

ಹರಿಯ ನಂಬಿದಾತನೆ ಗಣ್ಯನು

ಕನಕದಾಸರು:

ಕುಲಕುಲ ಕುಲವೆನ್ನುತಿಹರು

ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ

ಆತ್ಮ ಯಾವ ಕುಲ ಜೀವ ಯಾವ ಕುಲ

ತತ್ವೇಂದ್ರಿಯಗಳ ಕುಲ ಪೇಳಿರಯ್ಯ

ಆತ್ಮಾಂತರಾತ್ಮ ನೆಲೆಯಾದಿ ಕೇಶವ

ಆತನೊಲಿದ ಮೇಲೆ ಯಾತರ ಕುಲವಯ್ಯ

ಗುರು ನಾನಕರು

‘ಕೆಳ ಜಾತಿಯಲ್ಲಿ ತೀರ ಕೆಳಜಾತಿಯವರಿದ್ದಾರೆ

ಅವರ ಜೊತೆ ನಾನಿರುತ್ತೇನೆ

ದೊಡ್ಡ ಜಾತಿಯವರ ಜೊತೆ ನನಗೇನು ಕೆಲಸ?’

ಸಂತ ಕಬೀರರು:

‘ನನ್ನ ದೇವರ ಕಣ್ಣಿನಲ್ಲಿ ಯಾರೂ

ಮುಸಲ್ಮಾನನಲ್ಲ, ಹಿಂದುವೂ ಅಲ್ಲ

ಅವನು ಕೇವಲ ಮನುಷ್ಯ.’

ಕೈವಾರದ ನಾರಾಯಣ ತಾತಯ್ಯ:

‘ಜಾತಿ ಕೀಳಿನ ಜನರಿಲ್ಲ ಯಾರು

ಜಾತಿ ವಿಜಾತಿ ಎಂದೆಣಿಸಬಾರದು

ಎಲ್ಲ ಒಂದೇ ಜಾತಿ, ಇಲ್ಲ ಇನ್ನೊಂದು

ನಾದ ಬ್ರಹ್ಮಾನಂದ ನಾರೇಯಣ ಕವಿ’.

‘ಉಚ್ಚೆ ಬಾಗಿಲೊಳು ಬಂದರು ನರರು

ಉತ್ತಮ ಕುಲದವರು ಯಾರಿಲ್ಲ ಇಲ್ಲಿ

ಉತ್ತಮ ಕುಲವೆಂಬುದು ಬರೀ ಸುಳ್ಳು

ನಾದ ಬ್ರಹ್ಮಾನಂದ ನಾರೇಯಣ ಕವಿ’.

ನೈತಿಕ ಕ್ಷೇತ್ರ

ಕೋಪ, ದುರಾಸೆ, ಸ್ವಾರ್ಥ, ಇತ್ಯಾದಿಗಳನ್ನು ತ್ಯಜಿಸಬೇಕೆಂದರು. ದಯೆ, ಕರುಣೆ, ಕಾಯಕದ ಬದುಕು, ತ್ಯಾಗ ಇತ್ಯಾದಿ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಳ್ಳಬೇಕೆಂದರು. ವ್ಯಭಿಚಾರ, ಮದ್ಯಪಾನ ಇತ್ಯಾದಿಗಳನ್ನು ನಿರ್ಮೂಲನೆ ಮಾಡಬೇಕೆಂದರು. ಸರಳ ಜೀವನ, ಸಮಾಜಸೇವೆ, ಸಾಮೂಹಿಕ ಜೀವನವನ್ನು ಬೋಧಿಸಿದರು. ದೇವರಿಗೆ ಭಕ್ತಿ, ಪ್ರೀತಿ ಮತು ಸಮರ್ಪಣೆಯನ್ನು ನೀಡುವು ಮೂಲಕ ಮೋಕ್ಷವನ್ನು ಪಡೆಯಬಹುದೆಂದು ಸಾರಿದರು.

ಮಹಾಗಾಂವಿ ಮೀರಸಾಬ

ಹಣವು ಗಳಿಸಿ ಇಟ್ಟಿದಿ ಅಚ್ಚಾ ಸಾಯುತನಕ

ತಿಂದೀದಿ ನುಚ್ಚ

ಬಾಯಿ ಮಾತ್ರ ಬೆಲ್ಲದ ಅಚ್ಚಾ ಪರೋಪಕಾರ

ಮಾಡಲಿಲ್ಲ ಹುಚ್ಚ

ಕೈವಾರದ ನಾರಾಯಣ ತಾತಯ್ಯ:

‘ಲಂಚವು ಮಂತ್ರಿ ಅಧಿಕಾರಿಗಳಿಗೆ

ಲಂಚವು ಗುಮಾಸ್ತ ಗ್ರಾಮ ಲೆಕ್ಕಿಗರಿಗೆ

ದೊರೆಯ ದಂಡನೆ ಇರದೆ ದೋಚುವರು ಲಂಚಗಳ

ನಾದ ಬ್ರಹ್ಮಾನಂದ ನಾರೇಯಣ ಕವಿ’

‘ದುಷ್ಟರ ಪಟ್ಟಾಭಿಷೇಕವಾಗುತ್ತದೆ

ರಾಜನೆ ಇಲ್ಲ, ರಾಜ್ಯವು ಕೆಡುತ್ತದೆ

ಕಳ್ಳರು ದೋಚುವರು

ನಿಂದ ಪರತತ್ವ ಪ್ರಚಂಡ ನಾರೇಯಣ ಕವಿ’

ಸಂತ ಕಬೀರ್:

ಜಗಕೆ ಬಂದಾಗ ನಾನು ಅಳುತ್ತಿದ್ದೆನು

ಪ್ರತಿಯೊಬ್ಬರು ನಗುತ್ತಿದ್ದರು

ನಿನ್ನ ಬದುಕು ಹೀಗಿರಲಿ

ವಿದಾಯದ ಕ್ಷಣದಲ್ಲಿ

ನಿನ್ನ ತುಟಿಗಳು ನಗುತಿರಲಿ

ಉಳಿದವರು ಅಳುತ್ತಿರಲಿ

ಮನುಷ್ಯ ಹೀಗೆ ಬದುಕಿದರೆ ಚಂದ, ಅಲ್ಲವೇ ?

ಜಲಾಲುದ್ದೀನ್‌ ರೂಮಿ:

ಪ್ರೀತಿ ಕಹಿ ವಸ್ತುಗಳನ್ನು ಸಿಹಿಯಾಗಿಸುತ್ತದೆ

ಪ್ರೀತಿ ತಾಮ್ರದ ಚೂರುಗಳನ್ನು ಬಂಗಾರದ ಚೂರುಗಳನ್ನಾಗಿ ಮಾಡುತ್ತದೆ

ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಪ್ರೀತಿಯಿಂದ ಸತ್ತವನು ಜೀವಂತವಾಗುತ್ತಾನೆ

ದಾಸವಾಣಿ:

ಆತ್ಮ ಪೂಜೆಯಿಲ್ಲದ ಅಗ್ರ ಜನ್ಮವೇಕೆ ?

ಮನಸ್ಸು ನಿಲ್ಲಿಸದ ಮಂತ್ರವೇಕೆ ?

ಅನ್ನದಾನವಿಲ್ಲದ ಶ್ರೀಮಂತಿಕೆಯೇಕೆ ?

ಕಾಸಿಗಾಗಿ ರಚಿಸುವ ಕಾವ್ಯವೇಕೆ ?

ಕೂಲಿಗಾಗಿ ಪೂಜಿಸುವ ವೈಷ್ಣವ ಮತವೇಕೆ ?

ವಯಸ್ಸಾದ ವೇಶ್ಯೆಗೆ ಅಲಂಕಾರವೇಕೆ ?

ಮನಸ್ಸಿಗೆ ನಿಲ್ಲದ ಯೋಗತ್ವವೇಕೆ ?

ಮೋಹಕ್ಕೆ ಬಿದ್ದ ಮೇಲೆ ತತ್ವವೇಕೆ ?

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ