April 19, 2024 11:22 pm

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು ಆಗದು” ಎಂದು ಸ್ಪಷ್ಟಪಡಿಸಿದೆ. ಪ್ರಮುಖವಾದ ಮೂರು ಮೂಲ ತತ್ವಗಳೆಂದರೆ: ಪ್ರಜಾಪ್ರಭುತ್ವ, ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯ.

ಪ್ರಜಾಪ್ರಭುತ್ವ ಎಂದರೆ ‘ಜನರಿಂದ ಜನರಿಗಾಗಿ ಜನರಿಗೋಸ್ಕರ’ ಎಂಬುದಾಗಿ ಹೇಳುತ್ತಾ ಬಂದಿದ್ದೇವೆ. ಆದರೆ ಅನುಭವದಿಂದ ಕಂಡುಕೊಂಡ ಸತ್ಯವೆಂದರೆ ಪ್ರಜಾಪ್ರಭುತ್ವ ಸಂಸ್ಥೆಗಳು, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳನ್ನು ಒಳಗೊಂಡಿರುವುದೇ ನಿಜವಾದ ಪ್ರಜಾಪ್ರಭುತ್ವ. ನಮ್ಮ ಸಂವಿಧಾನದಲ್ಲಿ ಪಾಳೆಗಾರಿಕೆ ಪದ್ಧತಿಯನ್ನು ರದ್ದುಪಡಿಸಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ಕೇಂದ್ರದಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯಮಟ್ಟದಲ್ಲಿ ವಿಧಾನ ಸಭೆ, ವಿಧಾನ ಪರಿಷತ್ತು ಎಂಬ ಶಾಸಕಾಂಗ ಸಂಸ್ಥೆಗಳನ್ನು, ರಾಷ್ಟ್ರಾಧ್ಯಕ್ಷರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿಯೆಂಬ ಕಾರ್ಯಾಂಗದ ಸಂಸ್ಥೆಗಳನ್ನು ಮತ್ತು ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲ್ಲೂಕು ನ್ಯಾಯಾಲಯಗಳೆಂಬ ನ್ಯಾಯಾಂಗ ಸಂಸ್ಥೆಗಳನ್ನು ಕಟ್ಟಿದ್ದೇವೆ.

ಪ್ರತಿಯೋರ್ವ ಪ್ರಜೆಯ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆದು ವಿಕಾಸವಾಗಬೇಕಾದರೆ ಅವರಿಗೆ ಕೆಲವು ಹಕ್ಕುಗಳನ್ನು ನೀಡಬೇಕಾಗುತ್ತದೆ. ಇಂತಹ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ. ಸಮಾನತೆಯ ಹಾಗೂ ಸ್ವಾತಂತ್ರ್ಯದ ಹಕ್ಕುಗಳನ್ನು ಮತ್ತು ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮತ್ತು ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ಹಾಗೂ ಶೋಷಣೆಯ ವಿರುದ್ಧದ ಹಕ್ಕುಗಳನ್ನು ನೀಡಲಾಗಿದೆ. ಈ ರೀತಿಯಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ, ಸಂಘ ಸಂಸ್ಥೆಗಳನ್ನು ರಚಿಸುವ, ಸಂಚರಿಸುವ, ವಾಸಿಸುವ, ಯಾವುದೇ ಕಸುಬು, ಉದ್ಯೋಗ, ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ನಾವು ಅನುಭವಿಸಿಕೊಂಡು ಬಂದಿದ್ದೇವೆ.

ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿದ್ದೇವೆ. ಭೂ ಸಂಬಂಧಗಳಲ್ಲಿ, ಶಿಕ್ಷಣದಲ್ಲಿ, ಆರೋಗ್ಯದಲ್ಲಿ, ಕೃಷಿಯಲ್ಲಿ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದು ಜನ ಜೀವನವನ್ನು ಉತ್ತಮಗೊಳಿಸಲಾಗಿದೆ.

ಇಷ್ಟೆಲ್ಲ ಸಾಧನೆಗಳು ಮತ್ತು ಅಭಿವೃದ್ಧಿಯ ನಂತರ, ಸ್ವಾತಂತ್ರ್ಯ ಮತ್ತು ಸಮಗ್ರತೆಯ ನಂತರ, ಇಂದು ಸಂವಿಧಾನವೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹಾಗಾಗಿ ಇಂದು ಸಂವಿಧಾನದ ಮುಂದಿರುವ ಹಾಗೂ ದೇಶದ ಮುಂದಿರುವ ಸವಾಲುಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ.

ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವ

ಇಂದು ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ನಡೆಯುವ ಚುನಾವಣೆಗಳು ಧರ್ಮ, ಜಾತಿ, ಹಣ ಮತ್ತು ಅಪರಾಧೀಕರಣದಂತಹ ಅನಿಷ್ಟಗಳಿಗೆ ಬಲಿಯಾಗಿವೆ. ಹೆಚ್ಚು ಹಣ ಹೊಂದಿರುವ ಮತ್ತು ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಲಾಗಿರುವ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸುತ್ತಿದ್ದು, ನಿಷ್ಠಾವಂತರು ಠೇವಣಿ ಕಳೆದುಕೊಳ್ಳುತ್ತಿದ್ದಾರೆ. ರಾಜಕಾರಣದಲ್ಲಿ ವಿದ್ಯಾವಂತರ, ಪ್ರಾಮಾಣಿಕರ, ಪರಿಣತರ ಹಾಗೂ ಯೋಗ್ಯರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಭ್ರಷ್ಟರು, ಕ್ರಿಮಿನಲ್ ಕೇಸು ಹಾಕಿಸಿಕೊಂಡವರು, ರಾಜಕಾರಣಿಗಳ ಮಕ್ಕಳು, ಅವರ ಬಂಧುಗಳು, ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಇದರ ಪರಿಣಾಮ ನಮ್ಮ ಲೋಕಸಭೆ ಮತ್ತು ರಾಜ್ಯಸಭೆ ನಡಾವಳಿಗಳ ಮೇಲೆ ಪ್ರಭಾವ ಬೀರಿದೆ. ಹೊಸದಾಗಿ ಮಂಡಿಸುವ ಶಾಸನಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತಿವೆ. ಅಸಹನೆ, ವಿಭಜನಶೀಲತೆ, ಭ್ರಷ್ಟಾಚಾರ, ಘರ್ಷಣೆಗಳು ಹಾಗೂ ಭಿನ್ನಮತಕ್ಕೆ ಅಗೌರವ ತೋರುವುದು ಸದನದ ಕಲಾಪಗಳ ದಿನನಿತ್ಯದ ಸಂಗತಿಯಾಗಿದೆ. ಈ ಸಂಸ್ಥೆಗಳಲ್ಲಿ ಕಿರುಚಾಟ, ಕೂಗಾಟ, ಗದ್ದಲ, ಪ್ರತಿಭಟನೆ ಇತ್ಯಾದಿಗಳು ಆವರಿಸಿಕೊಂಡು ಜನಸಾಮಾನ್ಯರಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ.

ಚುನಾವಣಾ ಪ್ರಣಾಳಿಕೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ. ಅವಕಾಶವಾದಿತನ ಹೆಚ್ಚಾಗುತ್ತಿದ್ದು, ಅನುಕೂಲಕ್ಕೆ ತಕ್ಕಂತೆ ನಿಲುವುಗಳನ್ನು ಬದಲಾಯಿಸುತ್ತಾರೆ, ಪಕ್ಷ ಬದಲಾಯಿಸುತ್ತಾರೆ, ನೈತಿಕ ಮೌಲ್ಯಗಳನ್ನು ಬದಿಗೊತ್ತಿ ಹಣಕ್ಕಾಗಿ ಹಾಗೂ ಅಧಿಕಾರಕ್ಕಾಗಿ ಅಪವಿತ್ರ ಹೊಂದಾಣಿಕೆಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ.

ಪ್ರಜಾಪ್ರಭುತ್ವದ ಹಕ್ಕುಗಳ ದಮನ

ಸರ್ಕಾರಗಳು ತಮ್ಮ ಹಿಡಿತದಲ್ಲಿರುವ ದೂರದರ್ಶನ ಮತ್ತು ಆಕಾಶವಾಣಿಯೆಂಬ ಸಾರ್ವಜನಿಕ ಮಾಧ್ಯಮಗಳನ್ನು ತಮ್ಮ ವಕ್ತಾರರನ್ನಾಗಿ ಬಳಸಿಕೊಳ್ಳುತ್ತಿವೆ. ಜಾಹೀರಾತುಗಳ ಮೂಲಕ ಖಾಸಗಿ ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತಿವೆ. ಸರ್ಕಾರ ತನ್ನ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಪುಸ್ತಕಗಳನ್ನು, ಸಿನಿಮಾಗಳನ್ನು, ಚಿತ್ರಕಲೆಗಳನ್ನು ನಿಷೇಧಿಸುತ್ತಿದೆ. ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸುವ ಕಲಾವಿದರನ್ನು, ಸಾಮಾಜಿಕ ಕಾರ್ಯಕರ್ತರನ್ನು, ವಿದ್ಯಾರ್ಥಿಗಳನ್ನು, ಸಾಹಿತಿಗಳನ್ನು ರಾಜದ್ರೋಹದ ಆಪಾದನೆ ಹೊರಿಸಿ ಬಂಧಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಎನ್‌ಕೌಂಟರ್, ಗೋಲಿಬಾರ್ ಇತ್ಯಾದಿಯ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತಿದೆ. ಇತ್ತೀಚಿನ ದೆಹಲಿಯ ಗಲಭೆಗಳು, ಉತ್ತರಪ್ರದೇಶ, ಕರ್ನಾಟಕ ಪ್ರಕರಣಗಳು ಇದಕ್ಕೆ ಸಾಕ್ಷಿ. ಸಭೆ ಸಮಾರಂಭ, ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳಗಳಿಗೆ ಇಂದು ಪ್ರವೇಶಾವಕಾಶ ನೀಡುತ್ತಿಲ್ಲ. ಸಾಲದ್ದೆಂದು ಕಲಂ 144 ಜಾರಿ ಮಾಡಲಾಗುತ್ತಿದೆ. ಹತ್ತು ಲಕ್ಷ ರೂಪಾಯಿಗಳ ಬಾಂಡ್ ಕೇಳುತ್ತಾರೆ. ನಾವು ಗಳಿಸಿ ಅನುಭವಿಸುತ್ತಿದ್ದ ಪ್ರಜಾಪ್ರಭುತ್ವ ಹಕ್ಕುಗಳನ್ನು ಇಂದು ಕಳೆದುಕೊಳ್ಳುತ್ತಿದ್ದೇವೆ.

ಗಂಡಾಂತರದಲ್ಲಿ ಕಾನೂನಿನ ನ್ಯಾಯ (Rule of law)

ದೇಶದ ಎಲ್ಲ ಸಂಸ್ಥೆಗಳು ಮತ್ತು ಎಲ್ಲ ಪ್ರಜೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಂವಿಧಾನಕ್ಕಿಂತ ದೊಡ್ಡವರು ಯಾರು ಇಲ್ಲ. ‘ರಾಜನೇ ಕಾನೂನಲ್ಲ, ಕಾನೂನ ರಾಜ ಎನ್ನುವಂತೆ King is not law, law is the King’ ಆಗಬೇಕಾಗಿರುವುದು ಅಗತ್ಯ.

ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ‘ರೂಲ್ ಆಫ್ ಲಾ’ ಎಂಬ ತತ್ವಕ್ಕೆ ವಿರುದ್ಧವಾಗಿವೆ. ದೇಶದ ಪ್ರತಿ ನಗರದಲ್ಲಿ ಕ್ರಿಮಿನಲ್ ಮಾಫಿಯಾಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದಂತೆ ಮಾಫಿಯಾಗಳು ರೇಟುಗಳನ್ನು ನಿಗದಿಗೊಳಿಸಿದ್ದಾರೆ. ಕಾಲು ತೆಗೆದರೆ ಒಂದು ರೇಟು, ಕೈ ತೆಗೆದರೆ ಒಂದು ರೇಟು, ತಲೆ ತೆಗೆದರೆ ಒಂದು ರೇಟು ಎಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ದಲಿತರ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಮೇಲೆ ದಿನೇ ದಿನೇ ದೌರ್ಜನ್ಯಗಳು ಹೆಚ್ಚುತ್ತಿವೆ. ಮಕ್ಕಳನ್ನು ಅಪಹರಿಸಿ, ಭಿಕ್ಷಾಟನೆ, ವೇಶ್ಯಾವೃತ್ತಿಗೆ ನೂಕುತ್ತಿರುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಕಾಫ್ ಪಂಚಾಯತಿಗಳು ದೇಶದ ಕಾನೂನನ್ನು ಧಿಕ್ಕರಿಸಿ ಹೆಣ್ಣು ಮಕ್ಕಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತಿವೆ. ಪೋಲಿಸ್ ಠಾಣೆಗಳಲ್ಲಿ ಮತ್ತು ಜೈಲುಗಳಲ್ಲಿ ಚಿತ್ರಹಿಂಸೆ ನೀಡುವ ಮೂಲಕ ನೂರಾರು ಕೈದಿಗಳನ್ನು ಸಾಯಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೂಲ್ ಆಫ್ ಲಾ ಎನ್ನುವುದು ಎಲ್ಲಿರಲು ಸಾಧ್ಯ?

ಪ್ರಜಾತಂತ್ರ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ

ನ್ಯಾಯಾಧೀಶರ ನೇಮಕಾತಿ, ವರ್ಗಾವಣೆ ಹಾಗೂ ಬಡ್ತಿ ವಿಚಾರದಲ್ಲಿ ಕಾರ್ಯಾಂಗ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ಸಾವಿರಾರು ಮಂಜೂರಾದ ನ್ಯಾಯಾಧೀಶರ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ನ್ಯಾಯಮೂರ್ತಿಗಳ ನಿವೃತ್ತಿಯ ನಂತರದ ನೇಮಕಾತಿಗಳಲ್ಲಿ ಕಾರ್ಯಾಂಗ ರಾಜಕೀಯ ಹಿತಾಸಕ್ತಿಯನ್ನು ತೋರುತ್ತಿದೆ. ಇತ್ತೀಚಿನ ಕೆಲವು ತೀರ್ಪುಗಳು ಇದಕ್ಕೆ ಸಾಕ್ಷಿ. ಇಂತಹ ಬೆಳವಣಿಗೆಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ. ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್, ವರಮಾನ ತೆರಿಗೆ ಇಲಾಖೆ, ಕೇಂದ್ರ ತನಿಖಾ ದಳ, ಸೆಂಟ್ರಲ್ ಎನ್‌ಫೋರ್ಸ್‌ ಮೆಂಟ್‌ ಇತ್ಯಾದಿ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಈ ಸಂಸ್ಥೆಗಳ ಸ್ವಾಯತತ್ತೆಗೆ ಧಕ್ಕೆ ಆಗುತ್ತಿದೆ. ಈ ಸಂಸ್ಥೆಗಳ ಕಾರ್ಯ ನಿರ್ವಹಣೆಯ ವೈಖರಿಯು ಜನರಲ್ಲಿ ಅಸಂತೋಷವನ್ನು ಉಂಟುಮಾಡಿದೆ.

ಆಪತ್ತಿನಲ್ಲಿರುವ ಜಾತ್ಯಾತೀತತೆ/ಧರ್ಮನಿರಪೇಕ್ಷತೆ

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮೂಲಭೂತವಾದಿ ಮತ್ತು ಕೋಮುವಾದಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಈ ಶಕ್ತಿಗಳು ಜನರ ಐಕ್ಯತೆಯನ್ನು ಮುರಿಯುತ್ತಿವೆ. ಜನರ ಮಧ್ಯೆ ಗೋಡೆಗಳನ್ನು ನಿರ್ಮಾಣ ಮಾಡಿವೆ. ಜನರಲ್ಲಿ ದ್ವೇಷ, ಹಿಂಸೆ, ಅಸೂಯೆ, ಅಪನಂಬಿಕೆಗಳನ್ನು ಹುಟ್ಟು ಹಾಕಿವೆ. ಆತಂಕದ ವಿಚಾರವೆಂದರೆ ಈ ಶಕ್ತಿಗಳು ಎಲ್ಲಾ ಕ್ಷೇತ್ರಗಳಿಗೆ ಅಂದರೆ ರಾಜಕಾರಣ, ಆಡಳಿತ, ಶಿಕ್ಷಣ, ಸಿನಿಮಾ, ಕ್ರೀಡೆ, ಸಂಗೀತ, ಕಲೆ, ಪೋಲಿಸ್ ಇತ್ಯಾದಿಗಳಲ್ಲಿ ಪ್ರವೇಶಿಸಿವೆ.

ಈ ಶಕ್ತಿಗಳು ಜನರು ಏನನ್ನು ತಿನ್ನಬೇಕು, ಎಂತಹ ಬಟ್ಟೆ ಧರಿಸಬೇಕು, ಏನನ್ನು ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ವ್ಯವಹರಿಸಬೇಕು, ಎಷ್ಟು ಮಕ್ಕಳನ್ನು ಹೆರಬೇಕೆಂಬ ಖಾಸಗಿ ಬದುಕಿನ ವಿಚಾರಗಳ ಮೇಲೆ ಫರ್‌ಮಾನುಗಳನ್ನು ಹೊರಡಿಸಿ ನಮ್ಮ ಬಹುತ್ವದ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ.

ಈ ಗುಂಪುಗಳಿಗೆ ಸೇರಿದ ಕೆಲವು ಮುಖಂಡರು ತಮಗೆ ಸಮ್ಮತವಲ್ಲದ ವ್ಯಕ್ತಿಗಳ ತಲೆ ಕಡಿದರೆ, ನಾಲಗೆ ಸೀಳಿದರೆ, ಕಾಲು-ಕೈ ಕತ್ತರಿಸಿದರೆ ಲಕ್ಷಗಟ್ಟಲೆ ಹಣ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಧರ್ಮನಿರಪೇಕ್ಷತೆ ಮತ್ತು ಬಹುತ್ವಕ್ಕೆ ಧಕ್ಕೆ ಬಂದೊದಗಿದೆ.

ಮಾಯವಾಗುತ್ತಿರುವ ಕಲ್ಯಾಣ ರಾಜ್ಯದ ಕಲ್ಪನೆ

ಕಲ್ಯಾಣ ರಾಜ್ಯವೆಂದರೆ ಜನಸಾಮಾನ್ಯರ ಕನಿಷ್ಠ ಅಗತ್ಯಗಳಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇರುವುದು. ಆದರೆ ಸರ್ಕಾರಗಳು ಶಿಕ್ಷಣ, ಆರೋಗ್ಯ, ಸಾರಿಗೆ, ವಸತಿ ಇತ್ಯಾದಿಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಾ ತಮ್ಮ ಜವಾಬ್ದಾರಿಯಿಂದ ದೂರ ಸರಿಯುತ್ತಿವೆ. ಖಾಸಗಿ ಕ್ಷೇತ್ರದಲ್ಲಿ ಲಾಭವೇ ಮುಖ್ಯ ಉದ್ದೇಶವಾಗಿರುವುದರಿಂದ ಸಾಮಾನ್ಯ ಜನರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸಂಪತ್ತು ಕೆಲವೇ ಜನರ ಕೈಯಲ್ಲಿ ಸಂಗ್ರಹವಾಗಿದ್ದು, ಬಹುಸಂಖ್ಯಾತ ಜನರ ಕೈಯಲ್ಲಿ ಅತ್ಯಲ್ಪ ಸಂಪತ್ತು ಉಳಿದಿದೆ. ಈ ರೀತಿಯ ಅಸಮಾನ ಭಾರತವನ್ನು ನಾವು ಕಟ್ಟಿದ್ದೇವೆ. ಅಸಮಾನತೆಯಿಂದ ದೇಶದಲ್ಲಿ ಬಹುಸಂಖ್ಯಾತ ಜನರನ್ನು ಹಸಿವು, ಬಡತನ, ನಿರುದ್ಯೋಗ, ಅಭದ್ರತೆ ಇತ್ಯಾದಿಗಳು ಕಾಡುತ್ತಿವೆ.

ಅಪ್ರಸ್ತುತವಾಗುತ್ತಿರುವ ಸಾಮಾಜಿಕ ನ್ಯಾಯ

ಡಾ. ಅಂಬೇಡ್ಕರ್‌ರವರು ‘ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲಿ ಅದೊಂದು ಹಕ್ಕು’ ಎಂಬುದಾಗಿ ಪ್ರತಿಪಾದಿಸಿದರು. ಸಾಮಾಜಿಕ ನ್ಯಾಯವೆಂದರೆ ಹಿಂದುಳಿದವರ, ಬಡವರ, ದುರ್ಬಲರ ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು `ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ’ ಮೇಲಕ್ಕೆತ್ತಲು ಶಾಸನಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವುದು.

ಆದರೆ ಜಾಗತೀಕರಣದ ಪರಿಣಾಮವಾಗಿ ಅತಿಯಾದ ವ್ಯಾಪಾರೀಕರಣ ಬೆಳೆಯುತ್ತಿದೆ. ಲಕ್ಷಗಟ್ಟಲೆ ಮಂಜೂರಾದ ಹುದ್ದೆಗಳು ಭರ್ತಿಯಾಗದೇ ಖಾಲಿ ಬಿದ್ದಿವೆ. ಬಂಡವಾಳ ಹೂಡಿಕೆಯನ್ನು ಹಿಂಪಡೆಯುವ, ಗುತ್ತಿಗೆ ಕಾರ್ಮಿಕರ ನೇಮಕಾತಿ, ಹೊರಗುತ್ತಿಗೆ ಪದ್ಧತಿಯಂತಹ ನೀತಿಗಳ ಪರಿಣಾಮವಾಗಿ ಸಾಮಾಜಿಕ ನ್ಯಾಯ ಅಪ್ರಸ್ತುತವಾಗಿದೆ.

ಸರ್ಕಾರದ ನೀತಿಗಳ ಪರಿಣಾಮವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಾಂತರ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಜನಸಾಮಾನ್ಯರ ದಿನ ನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಮಾನವ ಹಕ್ಕುಗಳ ಉಲ್ಲಂಘನೆ

ನಮ್ಮ ಸಂವಿಧಾನದ ಹಲವು ಅನುಚ್ಛೇದಗಳಲ್ಲಿ ಮಾನವ ಹಕ್ಕುಗಳನ್ನು ಅಳವಡಿಸಲಾಗಿದೆ. ಉದಾಹರಣೆಗೆ ಜೀವಿಸುವ ಹಕ್ಕು, ಮೂಲ ಸವಲತ್ತುಗಳನ್ನು ಪಡೆಯುವ ಮತ್ತು ಘನತೆಯಿಂದ ಬದುಕುವ ಹಕ್ಕು, ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಹಕ್ಕು, ತಿಳಿದುಕೊಳ್ಳುವ ಹಕ್ಕು, ಮಾಹಿತಿಹಕ್ಕು, ಖಾಸಗಿ ಹಕ್ಕು, ತ್ವರಿತ ವಿಚಾರಣೆಯ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ಉಚಿತ ಕಾನೂನು ನೆರವಿನ ಹಕ್ಕು ಇತ್ಯಾದಿಯಾಗಿ.

ಇಂದು ರೈತರು ಆರ್ಥಿಕವಾಗಿ, ನೈತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಿವಾಳಿಯಾಗಿ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಿರುದ್ಯೋಗ ಹೆಚ್ಚಾಗಿ ಯುವಜನರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಮಹಿಳೆಯರು, ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮತ್ತು ಸಾಮಾಜಿಕ ಭಯೋತ್ಪಾದನೆ ತಲೆದೋರಿದೆ.

ಸರ್ಕಾರ, ಪೊಲೀಸ್ ಮತ್ತು ಸೈನ್ಯದಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಭಯೋತ್ಪಾದಕರಿಂದ, ಉಗ್ರಗಾಮಿಗಳಿಂದ, ಮೂಲಭೂತವಾದಿಗಳಿಂದ, ಕೋಮುವಾದಿಗಳಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಆಯೋಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಹೀಗೆ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಪ್ರಜಾಸತ್ತಾತ್ಮಕವಲ್ಲದ ಸುಧಾರಣೆಗಳು

ನಮ್ಮ ತಪ್ಪಿನಿಂದ, ಇತರರ ತಪ್ಪಿನಿಂದ ಮತ್ತು ಚಾರಿತ್ರಿಕ ತಪ್ಪಿನಿಂದ ನಮಗೆ ಕಷ್ಟಗಳು ಒದಗಿಬರುತ್ತವೆ. ಸರ್ಕಾರವು ಮುಂದಾಗಿ ಪ್ರಜಾಪ್ರಭುತ್ವ ಸುಧಾರಣೆಗಳನ್ನು ತರುವುದರ ಮೂಲಕ ನಮ್ಮ ಕಷ್ಟಗಳಿಗೆ ಪರಿಹಾರವನ್ನು ಸೂಚಿಸಬೇಕು. ಇಂತಹ ಕೆಲಸ ಗಣರಾಜ್ಯ ಭಾರತದಲ್ಲಿ ನಡೆದಿದ್ದು ಇದರಿಂದ ಜನಜೀವನ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಆದರೆ, ಇಂದು ಬದುಕಿಗೆ ಸಂಬಂಧಿಸಿದ ವಿಷಯಗಳಿಗಿಂತ ಭಾವನಾತ್ಮಕ ವಿಷಯಗಳು ಮೇಲುಗೈ ಸಾಧಿಸಿವೆ. ಅಪನಗದೀಕರಣ(ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ), ಜಿ.ಎಸ್.ಟಿ., ಕಾಶ್ಮೀರ ಕಣಿವೆಯಲ್ಲಿ ಲಾಕ್ ಔಟ್ (Lock out) ಸಿ.ಎ.ಎ, ಎನ್.ಪಿ.ಆರ್., ಗೋಹತ್ಯಾ ನಿಷೇಧ ಕಾಯ್ದೆ, ಲವ್ ಜಿಹಾದಿ ಕಾಯ್ದೆ, ಎನ್.ಸಿ.ಆರ್ ಇತ್ಯಾದಿ ಸುಧಾರಣೆಗಳಿಂದ ಜನರಿಗೆ ಸಂಕಷ್ಟಗಳು ಹೆಚ್ಚಾಗಿವೆ. ಇಂತಹ ಪ್ರಜಾಸತ್ತಾತ್ಮಕವಲ್ಲದ ಸುಧಾರಣೆಗಳ ಕೂಗು ಕೇಳಿಬರುತ್ತಿದೆ. ಅನೇಕ ಪ್ರಜಾಸತ್ತಾತ್ಮವಲ್ಲದ ಸುಧಾರಣೆಗಳ ಕೂಗು ಕೇಳಿಬರುತ್ತಿದೆ.  

ಕೊನೆಯದಾಗಿ

ಗಣರಾಜ್ಯ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಏನೂ ಸಾಧನೆ ಆಗಿಲ್ಲ ಎಂಬ ವಾದವನ್ನು ಒಪ್ಪಲಾಗದು. ನಮ್ಮೆಲ್ಲ ಸಾಧನೆಗಳಿಗೆ ಕಾರಣ ನಮ್ಮ ಸಂವಿಧಾನ. ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಸರಿ ದಾರಿ ಸಂವಿಧಾನವೇ. ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ, ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಿ ಜಾರಿಗೊಳಿಸಬೇಕು. ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು. ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ