April 25, 2024 12:53 am

ಸಿರಿವಂತರು ಮೂಢನಂಬಿಕೆ ತೊಲಗಿಸಲು ಮುಂದಾಗಲಿ

ಶ್ರೀ ಸಿದ್ಧಲಿಂಗ ಮಹಾ ಸ್ವಾಮಿ

ತೋಂಟದ ಮಠ, ಗದಗ

ಸ್ಮರಣೀಯರಾದ ಪ್ರಪಂಚದ ಎಲ್ಲ ದಾರ್ಶನಿಕರನ್ನು ನೆನೆದು, ಇಂದು ಇಲ್ಲಿ ನಡೆಯುತ್ತಿರುವಂತಹ ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ.ಆರ್,ಅಂಬೇಡ್ಕರ್ ಅವರ ಪರಿ ನಿರ್ವಾಣದ ದಿನದಂದು ಅವರು ಬಿತ್ತಿದ ಉದಾರವಾದ, ಜಾತ್ಯತೀತವಾದ, ಮಾನವೀಯವಾದ ಮೌಲ್ಯಗಳ ತಿಳುವಳಿಕೆ ಕೋಮುವಾದ, ಕಂದಾಚಾರ, ಮೂಢನಂಬಿಕೆಗಳ ನಿವಾರಣೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಬೆಳಗಾವಿಯಂತಹ ಮಹತ್ವದ ನಗರದ ಸ್ಮಶಾನದಲ್ಲಿ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುವ ನಮ್ಮ ನಾಡಿನ ಕೆಲವೆ ಬುದ್ದಿವಂತ, ವಿಚಾರವಂತ ಉದ್ಯಮಿಗಳಲ್ಲಿ ಸಮಾಜ ಸೇವಾಮುಖಿಗಳಲ್ಲಿ ಒಬ್ಬರಾದಂತಹ ಶ್ರೀ ಸತೀಶ್ ಜಾರಕಿಹೊಳಿಯವರೆ ಹಾಗೂ ಈ ಕಾರ್ಯಕ್ಕೆ ಪೋಷಕರಾದಂತಹ ಎಲ್ಲ ಮಾನ್ಯರೆ, ಮಾತೆಯರೆ ಮತ್ತು ಈ ವೇದಿಕಯ ಮೇಲೆ ಆಸೀನರಾದ ಎಲ್ಲ ಪೂಜ್ಯರಲ್ಲಿ ಪ್ರಣಾಮಗಳು. ಶರಣು ಶರಣಾರ್ಥಿಗಳು. 

ಭಾರತ ಬಹಳ ದೊಡ್ಡ ದೇಶ. ಚೀನಾದ ಜನಸಂಖ್ಯೆಯ ನಂತರ ಭಾರತವೇ ಜನಸಂಖ್ಯೆಯಲ್ಲಿ ಮುಂದಿನದ್ದು. ಆದರೆ ಜಗತ್ತಿನ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ದೇಶವೂ ಭಾರತವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಒಂದೆರಡು ಜಾತಿ-ಧರ್ಮಗಳಿವೆ. ಆದರೆ ಭಾರತದಲ್ಲಿ ಹಾಗಲ್ಲ. ಬಹು ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ದೇಶ ನಮ್ಮದು. ಆಶ್ಚರ್ಯವೆಂದರೆ ಮಂಗಳ ಲೋಕಕ್ಕೆ, ಚಂದ್ರ ಲೋಕಕ್ಕೆ ಮನುಷ್ಯ ಕಾಲಿಟ್ಟಂತಹ ಈ ದೇಶದಲ್ಲಿ ಆರು ಸಾವಿರ ಜಾತಿಗಳಿವೆ. ಬಹಳಷ್ಟು ಕಂದಾಚಾರ, ಕೋಮುವಾದ, ಮೂಢನಂಬಿಕೆಗಳಿವೆ. ಅದರ ಜೊತೆಗೆ ವಿಚಾರವಂತಿಕೆಯೂ, ಮಾನವೀಯತೆಯೂ, ಮನುಷ್ಯತ್ವವೂ ಇದೆ. ಆದರೆ ಅವುಗಳಿಗೆ ಹೋಲಿಸಿಕೊಂಡರೆ ಇದರ ಪ್ರಮಾಣ ಬಹಳ ಕಡಿಮೆ ಇದೆ. ಆದರೆ ಕಡಿಮೆ ಇದ್ದರೂ ಕೂಡ ಬಹಳ ಗಟ್ಟಿಯಾಗಿದೆ. ಹಾಗಾಗಿಯೇ ಜಾರಕಿಹೊಳಿಯವರು ಎಷ್ಟು ಜನರನ್ನು ಸೇರಿಸಿದ್ದಾರೆ. ಸ್ಮಶಾನಕ್ಕೆ ಹೋಗಿ ಬಂದರೆ ಸ್ನಾನ ಮಾಡಿಯೇ ಮನೆಯೊಳಗೆ ಹೋಗುವ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿಯವರು ಸ್ಮಶಾನದಲ್ಲೆ ಕಾರ್ಯಕ್ರಮವನ್ನು ಏರ್ಪಡಿಸಿ, ಊಟ ಉಪಚಾರವನ್ನು ಮಾಡುತ್ತಿದ್ದಾರೆ. ಇದೇ ಬದಲಾವಣೆಯ ಮುಂದಿನ ಹೆಜ್ಜೆ. ಬದಲಾವಣೆ ಎಂದರೆ ನಿಮ್ಮನ್ನು ಬದಲು ಮಾಡುವುದಲ್ಲ. ಬದಲಾಗಿ ನಿಮ್ಮನ್ನು ಆಳುತ್ತಿರುವ ಕೆಟ್ಟ ವಿಚಾರವಂತಿಕೆಗಳನ್ನು ಬದಲು ಮಾಡುವುದು. ಅದನ್ನು ನಿವಾರಣೆ ಮಾಡುವುದಕ್ಕೆ ಆಗದಿದ್ದರೂ ಕೂಡ ಅದನ್ನು ಅಲುಗಾಡಿಸುವುದು. ಆಗ ಏನಾಗುತ್ತದೆಂದು ನೋಡುವುದನ್ನು ಜಾರಕಿಹೊಳಿಯವರು ಮಾಡುತ್ತಿದ್ದಾರೆ. ಏಕೆಂದರೆ ಸಾವಿರ ವರ್ಷಗಳಾಯಿತು ಕಾಗೆ ಕಪ್ಪಗೆ ಇದೆ. ಸ್ವಲ್ಪವಾದರೂ ಬದಲಾಗುವುದು ಬೇಡವೇ? ಆದರೂ ಬೆಳ್ಳಗೆ ಆಗಿಲ್ಲ. ಮನುಷ್ಯ ಸಾವಿರಾರು ವರ್ಷದಿಂದಲೂ ಇದ್ದಾನೆ. ಆದರೆ ಹಾಗೆಯೇ ಇದ್ದಾನೆಯೆ? ಇಲ್ಲ ಎಷ್ಟೊಂದು ಬದಲಾವಣೆಗಳನ್ನು ತನ್ನಲ್ಲಿ ತಂದುಕೊಂಡಿದ್ದಾನೆ. ಅದು ಪ್ರಕೃತಿಯ ಸಹಜದ ಗುಣವಾಗಿದೆ. ಬದಲಾವಣೆಯಾಗಲೇಬೇಕು. ಅಂದಾಗಲೆ ಮನುಷ್ಯ. ಇಲ್ಲವಾಗಿದ್ದಲ್ಲಿ ಮನುಷ್ಯನಾಗಿರಲು ಸಾಧ್ಯವಿಲ್ಲ. 

ಒಂದು ಕಾಲದಲ್ಲಿ ಡಾರ್ವಿನ್, ಕೋಪರ್ನಿಕಸ್, ನ್ಯೂಟನ್ ಅವರೆಲ್ಲರೂ ಹೇಳಿದರು ಪೃಥ್ವಿ ತಿರುಗುತ್ತದೆ. ಒಂಬತ್ತು ನಕ್ಷತ್ರಗಳು ತಿರುಗುತ್ತವೆ. ಆಗಿನ ಜಗತ್ತಿನಲ್ಲಿ ಪೋಪರು ಒಪ್ಪಲಿಲ್ಲ. ಕೋಪರ್ನಿಕಸ್‍ನನ್ನು ಆಗಿನ ಪೋಪ್ ಸರ್ಕಾರ ಜೀವಂತ ಸುಟ್ಟು ಹಾಕುತ್ತದೆ. ಆದರು ಕೋಪರ್ನಿಕಸ್ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳಲಿಲ್ಲ. ಹೀಗೆ ಬೇರೆ ಬೇರೆಯವರಿಗೆ ಬೇರೆಬೇರೆ ರೀತಿಯಾದ ತೊಂದರೆಗಳನ್ನು ಕೊಟ್ಟರು. ಅದರಲ್ಲೊಬ್ಬ ಡಾರ್ವಿನ್ ಕೂಡ ಇದ್ದನು. ಈತ ಮನುಷ್ಯನ ವಿಕಾಸವಾದವನ್ನು ಪ್ರತಿಪಾದಿಸಿದನು. ಅಂದರೆ ವಿಚಾರವಂತಿಕೆ. ಜಗತ್ತಿನಲ್ಲಿ ವಿಚಾರವಂತಿಕೆಗೆ ಸಹಾಯ ಸಿಗಲಿಲ್ಲ. ಅಂದರೆ ಸಾಲ ಮನ್ನಾ ಮಾಡುವವರು, ಬಡ್ಡಿ ಮನ್ನಾ ಮಾಡುವವರು ಇವರೆಲ್ಲ ಸಹಾಯಿಗಳಲ್ಲ. ಆದರೆ ವಿಚಾರ, ಯೋಚನೆ, ಜ್ಞಾನ ಬದಲಾವಣೆ ಮಾಡುತ್ತದೆ. ಒಂದು ಕಾಲದಲ್ಲಿ ಗಂಡ ಸತ್ತರೆ ಗಂಡನ ಜೊತೆಯಲ್ಲಿಯೆ ಹೆಂಡತಿಯನ್ನು ಚಿತೆಯಲ್ಲಿ ಸುಡುತ್ತಿದ್ದರು. ಇದನ್ನು ಮಹಾ ಭಾರತೀಯ ಸಂಸ್ಕೃತಿಯ ವಾದವಾಗಿತ್ತು. ಬೇಡವೆಂದರೂ ಕೇಳದೆ ಆ ಹೆಣ್ಣಿನ ಕೈ-ಕಾಲುಗಳನ್ನು ಕಟ್ಟಿ ಒಗೆಯುತ್ತಿದ್ದರು. ಆಗ ರಾಜಾರಾಮ್ ಮೋಹನ್ ರಾಯ್ ಬಂದನು. ಆಗ ಅವರ ಅಣ್ಣನ ಹೆಂಡತಿಯನ್ನು ಸುಟ್ಟರು. ಆಗ ಭಾರತದ ಸಮಾಜದಲ್ಲಿ ಬಂದ ಮೊದಲ ವಿಚಾರವಂತ ರಾಜಾರಾಮ ಮೋಹನ್ ರಾಯ್. ಆಗ ಇವರಂತಹ ವಿಚಾರವಂತರು ಬಹಳ ಕಡಿಮೆ. ಲಾರ್ಡ್ ವಿಲಿಯಂ ಬೆಂಟಿಂಗ್ ನಂತಹ ಗವರ್ನರ್ ಇದ್ದರು. ಹೀಗೆ ಮಣಿಸಲು ಸಾಧ್ಯವಿಲ್ಲದ ಕಾಲದಲ್ಲಿ ಕಾಯ್ದೆಯ ಮೂಲಕವೆ ಮಣಿಸಲು ಸಾಧ್ಯವಿದೆ ಎಂದು ತಿಳಿದು, ಲಾರ್ಡ್ ವಿಲಿಯಂ ಬೆಂಟಿಂಗ್ ಸತಿ ಸಹಗಮನ ಪದ್ಧತಿ ಕಾಯ್ದೆಯನ್ನು ತೆಗೆದು ಹಾಕಿದರು. ಈ ಕಾಯ್ದೆಯನ್ನು ಆಗಿನ ಬ್ರಾಹ್ಮಣ ಸಮಾಜವು ಒಪ್ಪದಾದಾಗ, ಈ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಒಲ್ಲದ ಮನಸ್ಸಿನಲ್ಲೂ ಮನುವಾದಿಗಳನ್ನು ಒಪ್ಪಿಸುವಂತೆ ಮಾಡಿತು. ಹೀಗೆ ಬಹಳ ಬದಲಾವಣೆಗಳು ಬಂದುದ್ದರಿಂದ ಈಗ ನಾವು ಇಷ್ಟು ಚನ್ನಾಗಿ ಇರುವುದಕ್ಕೆ ಸಾಧ್ಯವಾಗಿದೆ. ಅದಕ್ಕೆ ನಮ್ಮ ನಾಡಿನ ದೊಡ್ಡ ಕವಿ ಕುವೆಂಪು ಹೇಳುತ್ತಾರೆ 

"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು
ನಿನ್ನ ಎದೆಯ ದನಿಗೆ ಮಿಗಿಲೇನು
ನಿನ್ನ ಎದೆಯ ದನಿಯೇ ನಿನಗೆ ಸೂತ್ರ"

 ಇವತ್ತು ಇಂತಹ ಸಮಾರಂಭಗಳು ನಿಮ್ಮ ಎದೆಯ ದನಿಯನ್ನು ಎತ್ತರಿಸುವುದಕ್ಕೆ ನಡೆಯಬೇಕಿದೆ. ಅದನ್ನು ಈ ದೇಶದಲ್ಲಿ ಎಲ್ಲರೂ ಮಾಡಿದ್ದಾರೆ. ಆದರೆ ಒಂದು ತಕ್ಕಡಿಯಲ್ಲಿ ಅಂಬೇಡ್ಕರ್ ಅವರನ್ನು ಕೂರಿಸಿ ಇನ್ನೊಂದರಲ್ಲಿ ಎಲ್ಲರನ್ನೂ ಕೂರಿಸಿದರೂ ಅಂಬೇಡ್ಕರ್ ಅವರ ತೂಕವೇ ಹೆಚ್ಚುತ್ತದೆಯೇ ಹೊರತು, ಆ ಎಲ್ಲರ ತೂಕ ಹೆಚ್ಚಾಗದು. ನಾನು ಬಹಳ ನೇರವಾಗಿ ಹೇಳುತ್ತಿದ್ದೇನೆಯೇ ಹೊರತು ನಿಮ್ಮ ಚಪ್ಪಾಳೆಗಾಗಿ ಹೇಳುತ್ತಿಲ್ಲ.

ಶಂಕರಾಚಾರ್ಯರು ಹೇಳಿದ್ದಾರೆ: “ಬ್ರಹ್ಮ ಸತ್ಯ, ಜಗನ್ ಮಿಥ್ಯ ಜೀವೋ ಬ್ರಹ್ಮಯ್ಯ ನಾಪರಬ” ಅಂದರೆ ಬ್ರಹ್ಮ ಸತ್ಯ, ಜಗತ್ತು ಸುಳ್ಳು, ಕೊನೆಗೆ ಜೀವ ಬ್ರಹ್ಮನಿಗಾಗಿ ಮಾತ್ರವಿದೆ ಎಂದರು. ಇದು ಜಾರಿಗೆ ಬಂದಿದ್ದರೆ ಅಂದರೆ ತನುವನ್ನು ಬಿಟ್ಟು ಜೀವವಿಲ್ಲ. ಮಣ್ಣನ್ನು ಬಿಟ್ಟು ಮಡಿಕೆ ಇಲ್ಲವೆಂಬ ಸಾಮಾನ್ಯರ ಮಾತಿನಲ್ಲಿ ಬರುವ ಅರ್ಥವಿದು. ಇದೇನಾದರೂ ಜಾರಿಗೆ ಬಂದಿದ್ದರೆ ಮನುಷ್ಯರಾದ ನಾವೆಲ್ಲರೂ ಒಂದೇ ಆಗಿರುತ್ತಿದ್ದೆವು. ಈ ಮೊಘಲರು, ಮುಸಲ್ಮಾನರು ಬಂದು ನಾಲ್ಕುನೂರು ವರ್ಷ ಆಳುತ್ತಿರಲಿಲ್ಲ. ಇವರ ಹಿಂದೆ ಹಲವಾರು ರಾಜರು ಬಂದರು. ಅವರು ಹೋದ ನಂತರ ಬ್ರಿಟೀಷರು ಹೈ-ಫೈ ಎಂದು ಬಂದರು. ಇವರು ಎರಡುನೂರು ವರ್ಷ ನಮ್ಮನ್ನು ಆಳಿದರು. ಅಂದರೆ ನಾವೆಲ್ಲರೂ ಒಂದೆ ಆಗಿದ್ದಿದ್ದರೆ ಇವರು ಯಾರೂ ಬರುತ್ತಿರಲಿಲ್ಲ. ನಿಮ್ಮಲ್ಲಿ ಒಗ್ಗಟ್ಟಿಲ್ಲವೆಂದು ಅವರಿಗೆ ಗೊತ್ತಾಗಿದ್ದರಿಂದ ನಿಮ್ಮನ್ನು ಆಳುವುದು ಕಷ್ಟದ ಕೆಲಸವಲ್ಲವೆಂದು ತಿಳಿದು ಸುಮಾರು  ಆರು-ಏಳು ನೂರು ವರ್ಷಗಳ ಕಾಲ ಆಳಿದರು. ಶಂಕರಾಚಾರ್ಯರು ಬಹಳ ಸಣ್ಣ ವಯಸ್ಸಿನಲ್ಲೇ ಬುದ್ದಿವಂತರಾಗಿದ್ದರು. ಅವರು ವೇದ, ಶಾಸ್ತ್ರ, ಪುರಾಣಗಳನ್ನು ಬಾಯಿಪಾಠ ಮಾಡಿಕೊಂಡಿದ್ದರು. ಹುಟ್ಟಿದ್ದು ಕೇರಳದ ಕಾಲಟಿ ಎಂಬಲ್ಲಿ. ಉತ್ತರ ಭಾರತಕ್ಕೂ ದಕ್ಷಿಣ ಭಾರತದ ನಡುವೆ ಅವರೇ ಸೇತುವೆಯಾಗಿದ್ದರು. ಮೊದಲು ಯಾವ ಸಂಬಂಧವೂ ಇರಲಿಲ್ಲ. ನಾಲ್ಕು ಮಠ ಮಾಡಿದರು. ಶೃಂಗೇರಿ, ದ್ವಾರಕ, ಪುರಿ. ಹತ್ತು ಸನ್ಯಾಸಿ ಮಾಡಿದರು. ಬಹಳ ಬುದ್ದಿವಂತಿಕೆಯನ್ನು ತೋರಿಸಿದರು. ನಂತರ ಮದ್ವಾಚಾರ್ಯರು ಬಂದರು. ಉಡುಪಿ ಜಿಲ್ಲೆಯವರು. ಉಡುಪಿ ಎಂದು ಹೆಸರಿರುವ ಹೋಟಲ್ ಗಳಿವೆಯೋ ಅಲ್ಲೆಲ್ಲ ಕೃಷ್ಣ ಮತ್ತು ಮದ್ವಾಚಾರ್ಯರ ಫೋಟೋಗಳಿರುತ್ತವೆ. ಆ ಫೋಟೋವನ್ನು ಗಮನವಿಟ್ಟು ನೋಡಿ. ಆ ಫೋಟೋದಲ್ಲಿ ಅವರ ಎರಡು ಬೆರಳು ವಿ ಆಕಾರದಲ್ಲಿ ತೋರಿಸುತ್ತಿರುತ್ತವೆ. ಶಂಕರಾಚಾರ್ಯರು ಜಗತ್ತು, ದೇವರು ಒಂದೆ ಇದೆ ಎಂದು ಹೇಳಿದರು. ಆದರೆ ಇವರು ದೇವರು ಒಂದೆ ಇಲ್ಲ ಎರಡಿವೆ ಎಂದರು. ಒಂದು ಜೀವಾತ್ಮ ಮತ್ತೊಂದು ಪರಮಾತ್ಮನೆಂದು. ಈ ಜೀವಾತ್ಮ ಎಂದಿಗೂ ಪರಮಾತ್ಮ ಆಗುವುದೇ ಇಲ್ಲ. ಲಕ್ಷ್ಮೀ ಪತಿತ್ವ, ಸರ್ವತ್ವ ಇದಕ್ಕೆ ಬರುವುದೇ ಇಲ್ಲ. ಇದನ್ನು ಯಾರು ಹೇಳುತ್ತಾರೆಂದರೆ ಉಡುಪಿ ಕೃಷ್ಣ ಮಠದ ಮುಖ್ಯ ಸ್ಥಾಪಕರಾದಂತಹ ಮದ್ವಾಚಾರ್ಯರು ಮತ್ತು ಎಂಟು ಮಠದ ಸ್ವಾಮಿಗಳು ಹೇಳುತ್ತಾರೆ. ಪೂಜೆ ಮಾಡುವವರೆಲ್ಲರೂ ಬ್ರಾಹ್ಮಣರು. ಪೂಜೆ ಮಾಡಿಸಿಕೊಳ್ಳುವವನು ಗೊಲ್ಲ. ಎಷ್ಟು ಚಂದವೆಂದರೆ ಪಾಪ ಆ ಕನಕದಾಸ ಇಲ್ಲಿಂದ ಉಡುಪಿಗೆ ಹೋದನು. ಬಹುಶಃ ಕುರುಬರು ವಿಷ್ಣುವಿನ ಪೂಜೆ ಮಾಡುವುದಿಲ್ಲ. ಶಿವನನ್ನು ಪೂಜೆ ಮಾಡುತ್ತಾರೆ. ಕನಕದಾಸ ತಪ್ಪಿ ಹುಟ್ಟಿದರು. ಯಾರಾದರೂ ಕುರುಬರ ಹೆಸರನ್ನು ಕೇಳಿದರೆ ವೈಷ್ಣವ ಪರಂಪರೆಯವರಿದ್ದಾರೆಯೇ? ಇಲ್ಲ. ಹೆಸರುಗಳನ್ನು ಕೇಳಿದರೆ ಕಲ್ಲಪ್ಪ, ಮಲ್ಲಪ್ಪ, ಶಿವಪ್ಪ ಹೀಗೆ ಆದರೆ ಕನಕದಾಸ ಆದಿಕೇಶವನನ್ನು ಪೂಜಿಸಿದ, ಪುರಾಣ ಬರೆದ, ಪುಸ್ತಕ ಬರೆದ, ಪದ ಬರೆದ. ಕೃಷ್ಣನೆಂದರೆ ಪ್ರಾಣ ಅವನಿಗೆ. ಕೃಷ್ಣನ ನಾಮವೇ ಪಾಯಸವೆಂದು ಹೇಳಿದ. ಉಡುಪಿಗೆ ಬಂದನು. ಆದರೆ ಅವನನ್ನು ಬ್ರಾಹಣರು ಒಳಗೆ ಬಿಡಲಿಲ್ಲ. ಸಿನಿಮಾದಲ್ಲು ಇದೆ, ನಾಟಕದಲ್ಲು ಇದೆ. ನಾನೇನು ಕಲ್ಪಿಸಿಕೊಂಡು ಹೇಳುತ್ತಿಲ್ಲ. ಅವನು ದೇವಸ್ಥಾನದ ಹಿಂದೆ ಹೋಗಿ, ಕೃಷ್ಣ ನಿನಗಾಗಿ ಬಂದೆ ಆದರೆ ಇವರೆಲ್ಲ ನಿನ್ನ ನೋಡಲು ಬಿಡುತ್ತಿಲ್ಲವಲ್ಲಾ ಎಂದಾಕ್ಷಣ ಕೃಷ್ಣನೆ ಹಿಂದೆ ತಿರುಗಿ ನಿಂತ. ಅಂದರೇ ಆ ಕೃಷ್ಣನಿಗೂ ಅಲ್ಲಿನ ಬ್ರಾಹ್ಮಣ ಭಕ್ತರ ಭಯವಿದೆ ಎಂಬಂತಾಯ್ತು. ಕನಕದಾಸ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂದು ಪದ್ಯವನ್ನು ಬರೆಯುತ್ತಾನೆ. ಆನಂತರ ಆ ಪವಾಡದಿಂದ ಉಡುಪಿ ಬೆಳೆಯುತ್ತದೆ. ಅಂದರೆ ಕನಕನ ಪವಾಡದಿಂದ ಉಡುಪಿ ಬೆಳೆಯುತ್ತದೆಯೇ ಹೊರತು ಕೃಷ್ಣನ ಪವಾಡದಿಂದಲ್ಲ. ಮತ್ತೆ ಅವರು ಎಂತಹ ವ್ಯಕ್ತಿಗಳೆಂದರೆ ಒಳಗೆ ಯಾರನ್ನೂ ಬಿಡುವುದಿಲ್ಲ. ಒಂಬತ್ತು ಕಿಂಡಿಗಳಿಗೊಂದು ಕಿಟಕಿಯನ್ನು ಹಚ್ಚಿದ್ದಾರೆ. ಕನಕನ ಕಿಂಡಿಗಳೆಂದು ಹೆಸರಿಟ್ಟಿದ್ದಾರೆ. ಆ ಕಿಟಕಿಯಿಂದಲೇ ಆ ಕೃಷ್ಣನನ್ನು ಕಾಣಬೇಕು. ಈ ಎಲ್ಲ ಆಚರಣೆಗಳು ವಿಚಿತ್ರವೆನ್ನಿಸುತ್ತವೆ. ಆ ಪುತ್ತಿಗೆ ಮಠದ ಸ್ವಾಮಿಗಳು ಪರದೇಶಕ್ಕೆ ಹೋಗಿದ್ದರು. ವಿಷ್ಣುವೆ ಗರುಡನ ಮೇಲೆ ಕುಳಿತು ಜಗತ್ತನ್ನೇ ಸುತ್ತುತ್ತಾನೆಂದರೆ ವಿಷ್ಣುವಿನ ಆರಾಧಕರು ಪರದೇಶಕ್ಕೆ ಹೋದರೆ ಯಾವ ಅನಾಹುತವಾಗುತ್ತದೆ. ಆ ಪುತ್ತಿಗೆ ಮಠದ ಸ್ವಾಮಿಗಳಿಗೆ ಪೂಜೆಮಾಡದಂತೆ ಬಹಿಷ್ಕಾರ ಹಾಕಲಾಯಿತು. ಆನಂತರ ಅವರು ಪಕ್ಕದಲ್ಲಿ ಗದ್ದುಗೆ ಮೇಲೆ ಕೂರುವುದು ಪೂಜೆಯನ್ನು ಬೇರೊಬ್ಬರ ಕೈಯಲ್ಲಿ ಮಾಡಿಸುವುದು. ಇದು ಅಲ್ಲಿನ ವ್ಯವಸ್ಥೆ. ಇದನ್ನು ನಾನು ತಮಾಷೆಗೆ ಹೇಳುತ್ತಿಲ್ಲ. ಇದು ಸತ್ಯದ ಘಟನೆ. ವಾಸ್ತವದಲ್ಲಿ ಉಡುಪಿಯ ಮಠದಲ್ಲಿ ನಡೆದಿದ್ದು. ಆ ನಂತರ ಮೂರು ನಾಮದವರಾದ ಅಯ್ಯಂಗಾರದವರು ಬಂದರು. ಶಂಕರಾಚಾರ್ಯರ ಊರು ಮೇಲುಕೋಟೆ. ಇವರು ಇದ್ದ ಬ್ರಾಹ್ಮಣರಲ್ಲಿ ಸ್ವಲ್ಪ ಪಾಡು. ವರ್ಷದಲ್ಲೊಂದು ದಿನ ಪರಿಶಿಷ್ಟ ಜಾತಿಯವರನ್ನು ದೇವಸ್ಥಾನದ ಒಳಗೆ ಬಿಡುತ್ತಾರೆ. ಏಕೆ ಬಿಡುತ್ತಾನೆಂದರೆ ಚಲುವ ನಾರಾಯಣ ಸ್ವಾಮಿ ಹುತ್ತದಲ್ಲಿದ್ದನಂತೆ. ಆ ಜನರ ಕನಸಿನಲ್ಲಿ ಬಂದು ಹುತ್ತದಿಂದ ನನ್ನನ್ನು ತಂದು ಪೂಜೆ ಮಾಡಿ ಎಂದು ಹೇಳಿದನಂತೆ. ಈ ಬ್ರಾಹ್ಮಣರು ಹಾವು ಕಚ್ಚುತ್ತವೆಂದು ಹುತ್ತ ಮುಟ್ಟಲು ಹೆದರಿದರು. ಆಗ ಪರಿಶಿಷ್ಟ ಜಾತಿಯವರಿಂದ ತೆಗೆಸಿದರು. ಆಗ ಅವರಿಗೆ ಆದಿ ಕನ್ನಡಿಗರೆಂದು ಹೆಸರಿಟ್ಟರು. ಹಾಗಾಗಿ ಅವರನ್ನು ವರ್ಷಕ್ಕೊಮ್ಮೆ ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಆನಂತರ ರಾಮಾನುಜಾಚಾರ್ಯರು ಬಂದರು. ಅವರು ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯ ಆರಾಧನೆ ಮಾಡಿದರು. ಮೊದಲೇ ನಾನು ಹೇಳಿದ್ದೇನೆ. ಜಾಣರು ಬಹಳ ಅಪಾಯಕಾರಿ ಎಂದು. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಈ ಮೂವರೂ ಕೂಡ ಬಹಳ ಜಾಣರು. ಈ ಮೂರು ಜನರು ಪ್ರಸ್ಥಾನತ್ರಯದ ಭಾಷೆ ಬರೆದಿದ್ದಾರೆ. ಪ್ರಸ್ಥಾನತ್ರಯವೆಂದರೇ: ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ. ಈ ಮೂರು ಕೂಡಿ ಪ್ರಸ್ಥಾನತ್ರಯ ಎಂದು. ಆ ಮೂರು ಏನು ಹೇಳುತ್ತವೆಯೋ ಅವೆಲ್ಲವೂ ನನ್ನದೆ ಮತ್ತು ನಾ ಹೇಳುತ್ತಿರುವುದನ್ನೇ ಹೇಳುತ್ತವೆ ಎಂದು ಶಂಕರಾಚಾರ್ಯರು ಹೇಳುತ್ತಾರೆ. ಅಂದರೆ ಅದ್ವೈತ ಹೇಳುತ್ತದೆಂದು ಅರ್ಥ. ಮಧ‍್ವಾಚಾರ್ಯರು ಹೇಳುತ್ತಾರೆ ಅದಲ್ಲವೂ ಸುಳ್ಳು. ದ್ವೈತ ಹೇಳುತ್ತದೆ ಎಂದು. ಈ ರಾಮಾನುಜಾಚಾರ್ಯರು ಹೇಳುತ್ತಾರೆ. ಈ ಇಬ್ಬರೂ ಹೇಳುವುದು ಸುಳ್ಳು ನಾನು ಹೇಳುವುದು ಸತ್ಯವೆಂದು ಹೇಳುತ್ತಾರೆ. ನೋಡಿ ಈ ಮೂವರು ಎಷ್ಟು ಅಪಾಯಕಾರಿಗಳೆಂದು. ಈ ಮೂವರೂ ಕೂಡ ಆ ಮೂರೂ ಪುಸ್ತಕದಲ್ಲಿ ತಮ್ಮದನ್ನೇ ಹೇಳುತ್ತಾ ಹೋದರು. ಅಂದರೆ ತಾವೇ ಜಾಣರೆಂಬ ಅರ್ಥದಲ್ಲಿ. ಜೀವಾತ್ಮ, ಪರಮಾತ್ಮ ಮತ್ತು ಜಗತ್ತೆನ್ನುವುದೊಂದಿದೆ ಎಂದು ಹೇಳುತ್ತಾ ಹೋದರು. ಇದರಲ್ಲಿ ನೀವು ಯಾರನ್ನು ನಂಬುತ್ತೀರಿ? ಅದಕ್ಕೆ ಹೇಳಿದ್ದು ಜಾಣರು ಬಹಳ ಅಪಾಯಕಾರಿಗಳೆಂದು. ಈ ಮೂರು ಜನರ ಶಿಷ್ಯಂದಿರು ಭಾರತದಾದ್ಯಂತ ಲಕ್ಷಾಂತರ ಜನರಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಗೊಂದಲಗಳು, ಅತ್ಯಂತ ಕಿರಿಕಿರಿಗಳು ಬಹಳಿವೆ. ವೈವಿಧ‍್ಯತೆ ಇದೆ ಎನ್ನುವುದೆ ಒಂದು ರೀತಿಯಲ್ಲಿ ಚಂದ ಎನ್ನಿಸುತ್ತದೆ. ಆದರೆ ಒಗ್ಗಟ್ಟಿಲ್ಲದಿರುವುದು ಒಂದು ದುರಂತ. ಆದ್ದರಿಂದಲೇ ಇವರ ಕಾಲದಲ್ಲಿ ಯಾರೊಬ್ಬ ಪರಿಶಿಷ್ಟ ಜಾತಿಯವರು ಮಂತ್ರಿಗಳಾಗಲಿಲ್ಲ. ಆದರೆ ಅಂಬೇಡ್ಕರ್ ಅವರ ಕಾಲದಲ್ಲಿ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ಮಂತ್ರಿಗಳಾದರು. ಒಬ್ಬ ಮುಸಲ್ಮಾನ ರಾಷ್ಟ್ರಪತಿಯಾದನು. ಇವತ್ತು ಒಬ್ಬ ಉಪರಾಷ್ಟ್ರಪತಿಯು ಒಬ್ಬ ಮುಸಲ್ಮಾನನು. ಒಬ್ಬ ಮಹಿಳೆ ರಾಷ್ಟ್ರಪತಿಯಾದರು. ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗುತ್ತಾನೆ. ಒಬ್ಬ ಮುಸಲ್ಮಾನ ಸುಪ್ರೀಂ ಕೋರ್ಟ್‍ನ ಜಡ್ಜ್ ಹಿರಾಯಿಕ್ ಉಲ್ಲಾ. ಮಹಮ್ಮದ್ ಆಲಿ ಚಾಗ್ಲಾ ಶಿಕ್ಷಣ ಮಂತ್ರಿಯಾದನು. ಇದೆಲ್ಲವೂ ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾದದ್ದು. ಮನುಷ್ಯರೆಲ್ಲರೂ ಒಂದೆ ಎಂದು ಹೇಳಿದರು. ಇಲ್ಲಿ ಯಾರು ಮೇಲಲ್ಲ. ಯಾರೂ ಕೀಳಲ್ಲವೆಂದು ಹೇಳಿದರು. ಎಂತಹ ಒಂದು ದೊಡ್ಡ ಕೊಡುಗೆಯಾದ ಗ್ರಂಥವನ್ನು ಕೊಟ್ಟವನು,  ಬ್ರಾಹ್ಮಣನಲ್ಲ, ಲಿಂಗಾಯತನಲ್ಲ, ಕ್ಷತ್ರೀಯನಲ್ಲ, ಒಬ್ಬ ಮಹಾನ್ ಜ್ಞಾನದಂತ. ಅವನ ಜ್ಞಾನಕ್ಕೆ ಮಿತಿಯಿಲ್ಲ. ರಾಮಾಯಣ ಬರೆದವನು ಬೇಡರ ಕುಲದವನು ವಾಲ್ಮಿಕಿ, ಮಹಾಭಾರತವನ್ನು ಬರೆದವನು ಅಂಬಿಗ ಕುಲದವನಾದ ವ್ಯಾಸ. ಅಂದರೆ ನಾನು ನಿಮಗೆ ಹೇಳ ಹೊರಟಿರುವುದೆನೆಂದರೆ ಜ್ಞಾನ ಕೇವಲ ಮೇಲ್ವರ್ಗದವರಿಗೆ ಮಾತ್ರವಲ್ಲ. ಕೆಳವರ್ಗದವರಿಗೂ ಕೂಡ ಇದೆ ಎಂದು. ಬೇಡರಂತಹ ಬೇಡ ಕೂಡ ರಾಮಾಯಣದಂತಹ ಪುಸ್ತಕ ಬರೆದಿದ್ದಾನೆ. ಆದರೆ ಅದೇ ಬೇಡನನ್ನೆ ರಾಮನ ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ತಿಳುವಳಿಕೆ, ಕನ್ನಡಿಯ ಮೇಲೆ ಧೂಳು ಬಿದ್ದಿದೆ. ನೀರಿನ ಮೇಲೆ ಹಾಂಸ ಬೆಳೆದಿದೆ. ಧೂಳು ಒರೆಸಬೇಕು ಕನ್ನಡಿ ಸ್ವಚ್ಛವಾಗುತ್ತದೆ. ಹಾವಸೆ ತೆಗೆಯಬೇಕು ನೀರು ಸ್ವಚ್ಛವಾಗುತ್ತದೆ. ಆ ಕೆಲಸ ಈ ಪರಿವರ್ತನ ದಿನದ ಮೂಲಕ ನಡೆಯುತ್ತಿದೆ. ಇಲ್ಲಿ ಎಲ್ಲರ ಫೋಟೋವಿನ ಜೊತೆಯಲ್ಲಿ ಒಂದು ಫೋಟೋ ಇದೆ. ಪೆರಿಯಾರ್ ರಾಮಸ್ವಾಮಿ ಎಂಬ ವಿಚಾರವಂತ ವ್ಯಕ್ತಿ. ಆತ ದೇವರನ್ನು ನಂಬುತ್ತಿರಲಿಲ್ಲ. ಕೋಯಿಮತ್ತುರಿನಲ್ಲಿ ಆತನದ್ದೊಂದು ಮೂರ್ತಿ ಇದೆ. ಆ ಮೂರ್ತಿಯ ಕೆಳಗೆ ದೇವರೆನ್ನುವವನು ಇಲ್ಲ, ದೇವರನ್ನುವವರು ಹುಚ್ಚರು, ದೇವರೆನ್ನುವವರು ಮೂರ್ಖರು, ದೇವರೇ ಇಲ್ಲ. ಇಲ್ಲಿ ಮನುಷ್ಯನೇ ಮುಖ್ಯ ಎಂದು ಪೆರಿಯಾರ್ ಹೇಳಿದ ಮಾತನ್ನು ಆ ಮೂರ್ತಿಯ ಕೆಳಗೆ ಬರೆಯಲಾಗಿದೆ. ಆ ವ್ಯಕ್ತಿ ಹೇಳಿದಂತಹ ಸಿದ್ಧಾಂತದ ಮೇಲೆಯೇ ಒಂದು ಪಕ್ಷವನ್ನು ಕಟ್ಟಿದರು. ಆ ಪಕ್ಷವೇ ದ್ರಾವಿಡ ಕಳಗಂ (ಡಿ.ಕೆ) ಎಂದು. ಅಲ್ಲಿಯವರೆಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಮನುಷ್ಯ ಕಾಮರಾಜ್ ಎಂಬ ವ್ಯಕ್ತಿ. ಆದರೆ ಪೆರಿಯಾರ್ ಈ ಎಲ್ಲ ಪಕ್ಷಗಳನ್ನು ಕಸ ಗುಡಿಸುವ ಹಾಗೆ ಗುಡಿಸಿ, ಡಿ.ಕೆ ಎಂಬ ಪಕ್ಷವನ್ನು ತಂದನು. ಅದರಿಂದಲೇ ಅಣ್ಣಾ ದೊರೈ ಬಂದನು, ಕರುಣಾನಿಧಿ ಬಂದನು, ಎಮ್.ಜಿ.ರಾಮಚಂದ್ರನ್ ಬಂದನು, ಜಯಲಲಿತ ಬಂದಳು. ನಂತರ ಆ ಡಿ.ಕೆ ತೆಗೆದು ಡಿಎಂಕೆ ಎಂದು ಮಾಡಿದರು. ಅಣ್ಣಾ ದೊರೈ ಬಂದನು. ಬಹಳ ಅದ್ಭುತ ಮನುಷ್ಯ. ಎರಡು ರೂಪಾಯಿ ಕೆಜಿ ಅಕ್ಕಿ ದೊರೆಯುವಂತೆ ಮಾಡಿದನು. ಎಂ.ಜಿ.ರಾಮಚಂದ್ರನ್ ಆ ಪಕ್ಷದ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದನು. ಬಹಳ ದೊಡ್ಡ ನಟನಾಗಿದ್ದನು. ಬೆಂಗಳೂರಿನಲ್ಲಿ ಕೆಲವು ಸ್ಲಂ ಏರಿಯಾಗಳನ್ನು ಸರ್ವೇ ಮಾಡಲಾಯಿತು. ಯಾವ ಗುಡಿಸಲಿನಲ್ಲೂ ದೇವರ ಫೋಟೋಗಳಿಲ್ಲ. ಆದರೆ ಎಂ.ಜಿ.ರಾಮಚಂದ್ರನ್ ಅವರ ಫೋಟೋಗಳಿದ್ದವು. ಅಂದರೆ ಈತನನ್ನು ತಮಿಳರು ದೇವರು ಎಂಬಂತೆ ಗ್ರಹಿಸುತ್ತಿದ್ದರು. ಆ ನಂತರ ಅಣ್ಣಾ ದೊರೈ ಸತ್ತನು. ಈತ ಸತ್ತಾಗ ಹಲವಾರು ಜನರು ಭಾವುಕರಾಗಿ ಆತ್ಮಹತ್ಯೆ ಮಾಡಿಕೊಂಡರು. ಏಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ಪಕ್ಷಗಳು ಹೇಗೆ ಹಾಳಾಗುತ್ತವೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಆದರೆ ಪೆರಿಯಾರ್ ಹೆಸರಿನಲ್ಲಿ ಹುಟ್ಟಿದ ಪಕ್ಷ. ಇಲ್ಲಿ ಪೆರಿಯಾರ್ ಅವರನ್ನು ಮತ್ತು ಅವರ ವಿಚಾರಗಳನ್ನು ಮೂಲೆಗುಂಪು ಮಾಡಿದರು. ಆದರೆ ಮತ್ತೀಗ ಸತೀಶ್ ಜಾರಕಿಹೊಳಿಯವರಂತವರು ತಯಾರಾಗುತ್ತಿದ್ದಾರೆ. ಇದು ಜಾತಿ, ಮತ, ಪಂಗಡವನ್ಯಾವುದನ್ನೂ ಲೆಕ್ಕಿಸದೇ ಒಬ್ಬ ಒಳ್ಳೆಯ ಉದ್ಯಮಿ, ರಾಜಕಾರಣಿ, ಚಿಂತಕ, ವಿಚಾರವಂತರಾದ ಸತೀಶ್ ಜಾರಕಿಹೊಳಿ ನಡೆಸುತ್ತಿದ್ದಾರೆ.

ಅಂಬೇಡ್ಕರ್ ಅವರು ಎಂತಹ ದೊಡ್ಡ ಕೆಲಸವನ್ನು ಮಾಡಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಸ್ಥಿತ್ವಕ್ಕೆ ಒಂದು ಬೃಹತ್ ಮಾನವೀಯ ಮೌಲ್ಯವುಳ್ಳ ಸಂವಿಧಾನ ಧರ್ಮ ಗ್ರಂಥವನ್ನು ನಮಗೆ ಕೊಟ್ಟರು.

ಬಸವಣ್ಣ ಹೇಳುತ್ತಾರೆ:

"ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ
ಇದೇ ಅಂತರಂಗ ಸುದ್ದಿ ಇದೇ ಬಹಿರಂಗ ಸುದ್ದಿ

ಇದೇ ಕೂಡಲಸಂಗಮನೊಲಿಸುವ ಪರಿ”ಹೀಗೆ ಇನ್ನೂ ಅದೆಷ್ಟೋ ವಿಚಾರವಂತರು ನಾಡಿಗಾಗಿ, ದೇಶಕ್ಕಾಗಿ ದುಡಿದಿದ್ದಾರೆ. ಜಗತ್ತು ಕಂಡಂತಹ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಜನರ ಮನೆ ಮನಗಳಿಗು ತಲುಪುವಂತಾಗಬೇಕೆಂದರೆ ಸತೀಶ್ ಜಾರಕಿಹೊಳಿಯವರು ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಅವರಿಗೆ ನಾವು ಮತ್ತೆಮತ್ತೆ ಅಭಿನಂದನೆಗಳನ್ನು ಸಲ್ಲಿಸಬೇಕು. ಶ್ರಿಮಂತರು ತಮ್ಮ ಹಣವನ್ನು ಹೀಗೆ ಖರ್ಚು ಮಾಡಿದಾಗ ಮಾತ್ರ ಸಾರ್ಥಕತೆಯನ್ನು ಪಡೆಯುತ್ತಾರೆ. ಇವರಿಗೆ ಇನ್ನೂ ಹೆಚ್ಚೆಚ್ಚು ಶಕ್ತಿ, ಸಾಮರ್ಥ್ಯ, ಪ್ರೋತ್ಸಾಹ ದೊರೆಯಲಿ ಎಂದು ಆಶಿಸುತ್ತಾ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ. ಎಲ್ಲರಿಗೂ ಶರಣು ಶರರ್ಣಾರ್ಥಿಗಳು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ