October 1, 2023 8:40 am

ಹೆಲಿಕಾಪ್ಟರ್ ನಲ್ಲಿ ವಿಹರಿಸಿದ ಭಾಷಣ, ಪ್ರಬಂಧ ಸ್ಪರ್ಧೆ ವಿಜೇತರು

ಕನಸುಗಳನ್ನು ಬಿಚ್ಚಿ ಬಾನಂಗಳದಲ್ಲಿ ಹಾರಾಡಿದ ವಿದ್ಯಾರ್ಥಿಗಳು, ಲೋಹದ ಹಕ್ಕಿ ಆಕಾಶಕ್ಕೆ ಹಾರಿದ ಕ್ಷಣ ಚಪ್ಪಾಳೆ, ಸಿಳ್ಳೆ ಹಾಕಿ ಕುಣಿದು ಕುಪ್ಪಳಿಸಿದ ಜನ, ತುಂಬಿ ತುಳುಕಿದ ಮೈದಾನದಲ್ಲಿ ಸಂಭ್ರಮದ ಅಲೆ. ಆಕಾಶದಲ್ಲಿ ಹಾರುವ ಮಕ್ಕಳನ್ನು ನೋಡಿ ಸಾರ್ಥಕತೆ ಅನುಭವಿಸಿದ ಪಾಲಕರು ಮತ್ತು ಶಿಕ್ಷಕರು. ಆಕಾಶದಿಂದ ಕೆಳಗಿಳಿದು ಬಂದ ನಂತರ ಮಾಧ್ಯಮದವರೊಂದಿಗೆ, ಕುಟುಂಬಸ್ಥರೊಂದಿಗೆ ತಮ್ಮ ಸಂತಸದ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು. ಮುಗಿಬಿದ್ದು ಹೆಲಿಕಾಪ್ಟರ್ ನೊಂದಿಗೆ ಫೋಟೋ ತೆಗೆದುಕೊಂಡ ಜನ. 

ಇದು ಯಾವುದೋ ವೈಮಾನಿಕ ಪ್ರದರ್ಶನದ ದೃಶ್ಯವಲ್ಲ. ಮಾನವ ಬಂಧುತ್ವ ವೇದಿಕೆ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಕಾರ್ಯಕ್ರಮ.

ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿಯವರು ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ವೈಚಾರಿಕ ಚಳುವಳಿಗೆ ನಾಡಿನಾದ್ಯಂತ ಹೆಸರುವಾಸಿಯಾಗಿದೆ. ಮೂಢನಂಬಿಕೆಗಳ ವಿರುದ್ಧದ ಹೋರಾಟಗಳಂತೂ ದೇಶದ ಗಮನ ಸೆಳೆದಿವೆ. ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ನಡೆಸುವ ಕಾರ್ಯಕ್ರಮವಂತೂ ಇಂದು ಹಳ್ಳಿಗಳಲ್ಲೂ ಸಂಚಲನ ಮೂಡಿಸಿದೆ. ನಾಗರಪಂಚಮಿಯಂದು ಒಂದೇ ದಿನಕ್ಕೆ ಸಾವಿರಾರು ಕಾರ್ಯಕ್ರಮ ಮಾಡುವ ಮೂಲಕ ಮನೆಯಂಗಳದಲ್ಲೂ, ಅಡುಗೆ ಮನೆಯಲ್ಲೂ ಚಿಂತನೆಗಳ ಬೀಜ ಬಿತ್ತುತ್ತಿದೆ. ವಿದ್ಯಾರ್ಥಿಗಳಿಗಾಗಿ ದಲಿತೋತ್ಸವ, ಮಹಾನ್ ಪುರುಷರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. 

ಅದರ ಭಾಗವಾಗಿ ಸಾವಿತ್ರಿಬಾಯಿ ಫುಲೆಯವರ ಹೋರಾಟ ಹಾಗೂ ಸಮಾಜಕ್ಕೆ ಅವರು ಕೊಟ್ಟ ಕೊಡುಗೆಗಳನ್ನು ವಿದ್ಯಾರ್ಥಿ ಸಮೂಹಕ್ಕೆ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ವಿಜೇತರಾದ ಹತ್ತು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರದ ಜೊತೆಗೆ ಹೆಲಿಕಾಪ್ಟರ್ ನಲ್ಲಿ ಸುತ್ತಾಡುವ ಅವಕಾಶ ನೀಡಿತ್ತು. 

ಆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಸಾವಿತ್ರಿಬಾಯಿ ಫುಲೆ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರಿಗೆ ಪ್ರಶಸ್ತಿ ವಿತರಿಸುವ ಸಲುವಾಗಿ ದಿನಾಂಕ ೧೦.೦೧.೨೦೨೧ರಂದು ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಪ್ರಶಸ್ತಿ ಪ್ರದಾನದ ನಂತರ ವಿದ್ಯಾರ್ಥಿಗಳು ಹೆಲಿಕಾಪ್ಟರ್ ನಲ್ಲಿ ಬಾನಂಗಳದಲ್ಲಿ ಹಾರಾಡಿ ಸಂಭ್ರಮಿಸಿದ ದೃಶ್ಯ ನೆರೆದವರನ್ನು ಪುಳಕಿತರನ್ನಾಗಿಸಿತ್ತು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಮತ್ತು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರು ಆದ ಸನ್ಮಾನ್ಯ ಸತೀಶ ಜಾರಕಿಹೊಳಿಯವರು, ಬಹುಶಃ ಈ ದೇಶದಲ್ಲಿ ಸಾಕಷ್ಟು ಮಹಾನ್ ಪುರುಷರ ಕುರಿತು ಕಾರ್ಯಕ್ರಮಗಳು ನಡೆಯುತ್ತವೆ. ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಜನವರಿ ಮೂರಕ್ಕೆ ನಡೆಯುತ್ತಿದೆ. ನಾವು ಅಂದಿನ ಬದಲಾಗಿ ಜನವರಿ ೧೦ಕ್ಕೆ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಉದ್ದೇಶ ಇತಿಹಾಸದಲ್ಲಿ ನಮಗಾಗಿ ಹೋರಾಡಿದವರನ್ನು ನಾವು ನೋಡಿರುವುದಿಲ್ಲ. ಅಂತವರನ್ನು ಇಂದು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು. 

ಯಾರು ನಮಗೋಸ್ಕರ ತಮ್ಮ ಜೀವನವನ್ನು ತ್ಯಾಗ ಮಾಡಿದರು, ತಮ್ಮ ಆಸ್ತಿಯನ್ನು ಬಿಟ್ಟು ಈ ಹೋರಾಟಕ್ಕೆ ಇಳಿದರೋ ಅವರ ಕುರಿತು ನಾವು ಹೆಚ್ಚಿನ ವಿಚಾರಗಳನ್ನು ತಿಳಿಯಬೇಕಿದೆ. ಎಂತಹ ಕಷ್ಟಕರ ಪರಿಸ್ಥಿಯಲ್ಲಿ ಕೂಡ ತಮ್ಮ ವಿಚಾರದಿಂದ ಹಿಂದೆ ಸರಿಯದೇ ಇರುವುದನ್ನು ನಾವು ನೋಡಿದ್ದೇವೆ. ಇಂತವರನ್ನು ಸಮಾಜಕ್ಕೆ ಪರಿಚಯಿಸಲು ಕಳೆದ ಏಳೆಂಟು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಪ್ರಯತ್ನಿಸುತ್ತಿದೆ. ಸಾವಿತ್ರಿಬಾಯಿ ಫುಲೆ, ಡಾ. ಬಿ. ಆರ್ ಅಂಬೇಡ್ಕರ್, ಶಿವಾಜಿ, ಶಾಹೂ ಮಹಾರಜರು, ನಾರಾಯಣ ಗುರುಗಳು, ಗಾಂಧೀಜಿ, ಟಿಪ್ಪು ಸುಲ್ತಾನ್ ಮೊದಲಾದ ನಾಯಕರು ನನಮಗಾಗಿ ಹೋರಾಡಿದ್ದಾರೆ. ಇವರನೆಲ್ಲ ನೆನೆಯುವುದು ಸಮಾಜದಲ್ಲಿ ಬದಲಾವಣೆ ತರಲು ಬಹಳ ಅವಶ್ಯಕ ಎಂದರು.

ನಮಗಾಗಿ ಹೋರಾಡಿದ ಇವರಾರು ಕೂಡ ಬಡವರಲ್ಲ. ದೊಡ್ಡ ಶ್ರೀಮಂತರು. ರಾಜರು. ಇವರು ತಮ್ಮ ಆಸ್ತಿ, ಅಂತಸ್ತು, ಕೋಟೆಗಳನ್ನು ಬಿಟ್ಟು ನಮಗೋಸ್ಕರ ಬೀದಿಗೆ ಬಂದು ಹೋರಾಡಿದರು.  ಇವರು ಬೀದಿಗೆ ಬಂದು ಯಾಕೆ ಹೋರಾಡಿದರು ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯಕ. ಇವರಿಗೇನು ಅವಶ್ಯಕತೆ ಇತ್ತು? ಶಾಹೂ, ಶಿವಾಜಿಯವರೆಲ್ಲ ಮಹಾರಾಜರಾಗಿದ್ದರು. ನಾರಾಯಣ ಗುರುಗಳು ಇದ್ದರು. ಫುಲೆ ದಂಪತಿ ಕೂಡ ಶ್ರೀಮಂತರೇ. ಆದರೂ ಕೂಡ ಈ ದೇಶದಲ್ಲಿ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದನ್ನರಿತು ನ್ಯಾಯ ಕೊಡಿಸುವ ಸಲುವಾಗಿ ತಮ್ಮ ಆಸ್ತಿ, ಅಂತಸ್ತುಗಳನ್ನು ಬಿಟ್ಟು ಹೊರಗೆ ಬಂದು ನಮಗೆಲ್ಲ ಮಾದರಿಯಾಗಿದ್ದಾರೆ. ಸಾವಿತ್ರಿಬಾಯಿ ಫುಲೆ ಅವರ ಚಳುವಳಿ ೧೮೫೦ರಲ್ಲಿ ಪುಣೆಯಲ್ಲಿ ಆರಂಭವಾಗಿ, ಮಹಿಳೆಯರಿಗೆ ಶಿಕ್ಷಣ ಕೊಡಬೇಕು, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸಂಕಲ್ಪ ತೊಟ್ಟು ಕೆಲಸ ಮಾಡಿದರು. ಅದರ ಫಲಿತಾಂಶವನ್ನು ಇಂದು ನಾವು ಕಾಣುತ್ತಿದ್ದೇವೆ. ಅವರು ಅಂದು ಶಿಕ್ಷಣ ಪಡೆಯದೇ ಇದ್ದರೆ ಬಹುಶಃ ಇಂದು ನಾವು ಬೇರೆ ಬೇರೆ ವಲಯಗಳಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು. 

ಅವರ ಹೋರಾಟವನ್ನು ನಾವು ತಿಳಿಯಬೇಕು ಮತ್ತು ಬೇರೆಯವರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ದುರ್ದೈವವೆಂದರೆ ನಮ್ಮನ್ನು ಶಿಕ್ಷಣದಿಂದ ದೂರವಿಟ್ಟವರನ್ನು ಪೂಜೆ ಮಾಡುತ್ತಿದ್ದೇವೆ. ಈ ದೇಶದಲ್ಲಿ ನಮಗೆಲ್ಲ ಶಿಕ್ಷಣ ಸಿಗಬಾರದೆಂದು ಯಾರೆಲ್ಲ ಪ್ರಯತ್ನಿಸಿದ್ದರೋ, ಪರೀಕ್ಷೆ ಬಂದಾಗ ಅವರನ್ನೇ ಎರಡು, ಮೂರು, ನಾಲ್ಕು ಬಾರಿ ಪೂಜೆ ಮಾಡುತ್ತೇವೆ. ಪೂಜೆ ಮಾಡೋದರಿಂದ ಮಾರ್ಕ್ಸ್ ಗಳು ಹೆಚ್ಚಾಗುತ್ತವೆಯೇ? ಎಂದು ಪ್ರಶ್ನಿಸಿದರು. 

ಮುಂದುವರೆದು ಮಾತನಾಡಿದ ಅವರು ಇತ್ತೀಚೆಗೆ ಸಾವಿತ್ರಿಬಾಯಿ ಫುಲೆ ಅವರ ನೆನಪಿನ ಕಾರ್ಯಕ್ರಮಗಳು ಹೆಚ್ಚಿವೆ. ಮುಂಚೆ ಬಹಳ ಕಡಿಮೆ ಇದ್ದವು. ಕೊಲ್ಹಾಪುರ ಭಾಗದಲ್ಲಿ ಹಾಸ್ಟೆಲ್ ಕಾನ್ಸೆಪ್ಟ್ ಅನ್ನು ಮೊಟ್ಟಮೊದಲು ಜಾರಿಗೆ ತಂದವರು ಅವರು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಅನುಕೂಲವಾಯಿತು. ಕೇರಳದಲ್ಲಿ ನಾರಾಯಣ ಗುರುಗಳದೊಂದು ಹೋರಾಟ. ಅವರ ಪ್ರಭಾವ ಆಂಧ್ರ, ಕರ್ನಾಟಕದಲ್ಲಿ ಕೂಡ ಇದೆ. ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿಯವರ ಹೋರಾಟ, ಅಂಬೇಡ್ಕರ್ ಅವರದ್ದು ರಾಷ್ಟ್ರವಿಡೀ ಹೋರಾಟ. ಇವರೆಲ್ಲರ ಹೋರಾಟಗಳು ನಮಗೆ ಆದರ್ಶ. ಆದ್ದರಿಂದಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದರು. 

ಇಂತಹ ಕಾರ್ಯಕ್ರಮದ ಉದ್ದೇಶ ನಮಗೆ ಯಾರು ಒಳ್ಳೆಯದು ಮಾಡಿದ್ದಾರೆ ಎಂಬುದನ್ನು ಅರಿಯುವುದು. ನಮಗೆ ಶಿಕ್ಷಣ ಕೊಡಲು ನಿರಾಕರಿಸಿದವರಿಗೆ ದಿನಕ್ಕೆ ನಾಲ್ಕು ಸಲ ಪೂಜೆ ಮಾಡಿದರೆ ಮಾರ್ಕ್ಸ್ ಕೊಡುವವರು ಯಾರು? ಶಿಕ್ಷಣ ಕಲಿಸಿದವರು ಯಾರು? ಸಂವಿಧಾನದ ಮೂಲಕ ಹಕ್ಕು ಕೊಟ್ಟವರು ಯಾರು? ಬಹುಶಃ ಸಂವಿಧಾನ ಬರದೇ ಹೋಗಿದ್ದರೆ ನಮಗೆಲ್ಲ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ನಾವೆಲ್ಲ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ಈ ವಿರುದ್ಧದ ದಿಕ್ಕಿನಿಂದ ಸರಿದಾರಿಗೆ ತರಲು ಇವರೆಲ್ಲ ಆದರ್ಶ. ಇವರ ಚಿಂತನೆಗಳು ನಮಗೆಲ್ಲ ಮಾರ್ಗದರ್ಶಿಯಾಗಿವೆ. ಆದ್ದರಿಂದ ಅವುಗಳನ್ನು ಸಮಾಜಕ್ಕೆ ತಲುಪಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಸುಮಾರು ವರ್ಷಗಳಿಂದ ಮಾಡುತ್ತಿದ್ದೇವೆ. ಇಂದು ವೇದಿಕೆಯ ಮೇಲೆ ಕುಳಿತಿರುವ ೧೭ ಶಿಕ್ಷಕಿಯರಿಗೆ ಮುಂದಿನ ದಿನಗಳಲ್ಲಿ ಸಮಾಜ ಬದಲಾವಣೆಯ ಜವಾಬ್ದಾರಿ ಇದೆ. ತಮ್ಮ ಊರು, ಶಾಲೆಗಳಲ್ಲಿ ಸಾವಿತ್ರಿಬಾಯಿ ಫುಲೆಯವರ ವಿಚಾರಗಳನ್ನು ಹೇಳಬೇಕು ಎಂದ ಅವರು ಇನ್ನು ಮುಂದೆ ನಾವು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇನ್ನಷ್ಟು ಜನರಿಗೆ ಪ್ರೇರಣೆ ಸಿಗಲಿ, ಹೆಚ್ಚು ಜನ ಭಾಗವಹಿಸಲಿ ಎಂಬ ಕಾರಣಕ್ಕೆ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ವಿನೂತನವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೆಳೆಯಲು ಗಣಪತಿಯನ್ನು ಕೂರಿಸಿದರು. ಅಂದು ಬ್ರಿಟಿಷ್ ಸರಕಾರ ಅನೇಕ ರೀತಿಯ ನಿರ್ಬಂಧಗಳನ್ನು ಹೇರಿತ್ತು. ಆದ್ದರಿಂದ ಗಣಪತಿಯನ್ನು ಇಟ್ಟು ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಸೇರಿಸುತ್ತಿದ್ದರು. ಅದೇ ರೀತಿಯಲ್ಲಿ ನಾವು ಹೆಲಿಕಾಪ್ಟರ್ ಇಟ್ಟು ಜನ ಸೇರಿಸುತ್ತಿದ್ದೇವೆ. ಇದು ಮಹಾಪುರುಷರ ವಿಚಾರಗಳು ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ. ಮುಂದಿನ ದಿನಗಳಲ್ಲಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಸ್ಪರ್ಧೆ ಆಯೋಜಿಸುತ್ತೇವೆ. ಮಹಾವೀರ ಜಯಂತಿಯನ್ನು ಮಾಡುತ್ತಿದ್ದೇವೆ. ಅವರ ಕೊಡುಗೆ ಕೋಡ ವಿಶಿಷ್ಟವಾಗಿದೆ. ಬಾಬಾಸಾಹೇಬ ಅಂಬೇಡ್ಕರ್, ಶಾಹೂ ಮಹಾರಾಜರ ಜಯಂತಿ, ನಾರಾಯಣ ಗುರು ಜಯಂತಿ, ಗಾಂಧಿ ಜಯಂತಿ, ಟಿಪ್ಪು ಜಯಂತಿ ಪ್ರಯುಕ್ತ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದೇವೆ ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಧಾರವಾಡದ ಖ್ಯಾತ ಸಾಹಿತಿ ವಿನಯಾ ಒಕ್ಕುಂದ, ‘ಸಾವಿತ್ರಿಬಾಯಿ ಫುಲೆಯವರನ್ನು ನೆನಪಿಸಿಕೊಳ್ಳುವುದು ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಮಹತ್ವದ ಅಂಶ. ದೊಡ್ಡವರನ್ನು ನೆನೆಯುವುದು ಮತ್ತು ನೆನಪಿಸಿಕೊಳ್ಳುವುದು ದೊಡ್ಡದು. ಸಾವಿತ್ರಿಬಾಯಿಯವರನ್ನು ನೆನೆಸಿಕೊಳ್ಳಲು ಅನೇಕ ಕಾರಣಗಳಿವೆ. ಅವರು ದೇಶದ ಮೊಟ್ಟಮೊದಲ ಶಿಕ್ಷಕಿಯಾಗಿದ್ದರು ಎನ್ನುವುದು ಕೂಡ ಒಂದು. ೧೯ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ಕರ್ನಾಟಕದ ಈ ಭಾಗ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಹಾಗಾಗಿ ಕನ್ನಡಿಗರಿಗೆ ನಮ್ಮ ಶೈಕ್ಷಣಿಕ, ಸಾಮಸ್ಕೃತಿಕ ಚರಿತ್ರೆಯ ಬೆನ್ನೆಲುಬಾಗಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರು ಮುಖ್ಯರಾಗುತ್ತಾರೆ ಎಂದರು. 

ನಮ್ಮ ಪರಂಪರೆಯ ಅದ್ಭುತವಾದ ತೇಜಸ್ವಿ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ಕೂಡ ನಮ್ಮ ಕರ್ತವ್ಯವಾಗಿರುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಒಳಿತಿನ ರುಚಿಯನ್ನು ಕಲಿಸಬೇಕಾದ ಕಾಲದಲ್ಲಿ ನಾವಿದ್ದೇವೆ. ವಿದ್ಯಾರ್ಥಿಗಳ ಮೇಲೆ ಅವರು ಮೊಬೈಲ್ ಇತ್ಯಾದಿಗಳಲ್ಲಿ ಕಳೆದು ಹೋಗುತ್ತಿದ್ದಾರೆ ಎಂಬ ಆರೋಪವಿದೆ. ಆದರೆ ಹಿರಿಯರಾದ ನಾವು ಒಳಿತಿನ ರುಚಿ, ಸಂಪರ್ಕವನ್ನು ಕೊಡದಿದ್ದರೆ ಆ ದಾರಿ ತಪ್ಪಿದ ನಮ್ಮ ನಂತರದ ತಲೆಮಾರಿನ ಜವಾಬ್ದಾರಿಯನ್ನು ನಾವೇ ಹೊರಬೇಕಾಗುತ್ತದೆ. ಶಿಕ್ಷಕಿಯಾಗಿ ನಾನು ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಇಷ್ಟೊಂದು ಅರ್ಥಪೂರ್ಣವಾದ ರೀತಿಯಲ್ಲಿ ಆಯೋಜಿಸಿರುವ ಮಾನವ ಬಂಧುತ್ವ ವೇದಿಕೆಯನ್ನು ಮತ್ತು ಅದರ ಎಲ್ಲ ಬಳಗವನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.

ಸಾವಿತ್ರಿಬಾಯಿ ಫುಲೆಯವರು ೯ ವರ್ಷದಲ್ಲೇ ಜ್ಯೋತಿಬಾ ಫುಲೆಯವರನ್ನು ಮದುವೆಯಾಗುತ್ತಾರೆ. ಅವರ ೧೭ನೇ ವಯಸ್ಸಿಗೆ ಪಾಠ ಮಾಡುವ ಎಲ್ಲ ಅರ್ಹತೆಯನ್ನು ಪಡೆಯುತ್ತಾರೆ. ಇದು ದೊಡ್ಡ ಸಾಧನೆ. ಅವರು ತನ್ನನ್ನು ತಾನು ಶಿಕ್ಷಕಿಯಾಗಿ ಮರುಹುಟ್ಟಿಸಿಕೊಂಡ ಧೀಮಂತ ಚೇತನವಾಗಿ ನೆನಪಿಸಿಕೊಳ್ಳಬೇಕಿದೆ. ೧೯ನೇ ಶತಮಾನದ ಕಾಲಘಟ್ಟದಲ್ಲಿ ಒಂದೆಡೆ ರಾಷ್ಟ್ರೀಯ ಚಳುವಳಿ, ಸಮಾಜ ಸುಧಾರಣೆ ಮಾತು ಕೇಳಿ ಬರುತ್ತಿದ್ದವು. ಅಂಥ ಸಂದರ್ಭದಲ್ಲಿ ಒಂದೆಡೆ ಸಮಾಜದ ಪ್ರೇರಣೆ ಮತ್ತೊಂದೆಡೆ ಕುಟುಂಬದ ಪ್ರೇರಣೆ, ಎಂಬ ಎರಡರ ಉರುಳುಗಲ್ಲಿನಲ್ಲಿ ಸಿಕ್ಕು, ತಮ್ಮ ವ್ಯಕ್ತಿತ್ವವನ್ನು ಕಟೆದುಕೊಂಡವರು ಸಾವಿತ್ರಿಬಾಯಿ. ಸಾಮಾನ್ಯವಾಗಿ ಹೆಣ್ಣನ್ನು ನಾವು ಗಂಡಿನ ನೆರಳಾಗಿ ಪರಿಗಣಿಸುತ್ತೇವೆ. ಕಸ್ತೂರಬಾ ಅವರನ್ನು ಗಾಂಧೀಜಿಯವರ ದಾರಿಯಲ್ಲಿ ನಡೆದವರು ಎಂದು, ರಮಾಬಾಯಿಯವರನ್ನು ಅಂಬೇಡ್ಕರ್ ಅವರಿಗೆ ಹಿನ್ನೆಲೆಯಾಗಿ ನಿಂತವರು ಎಂದು ನೋಡುತ್ತೇವೆ. ಆದರೆ ಆ ವ್ಯಕ್ತಿತ್ವದ ಒಳಗೆ ಸಾಮಾಜಿಕ, ನೈತಿಕ ಬದ್ಧತೆ ಇಲ್ಲದಿದ್ದರೆ, ತನ್ನನ್ನು ತಾನು ಈ ಸಮಾಜಕ್ಕೆ ಒಡ್ಡಿಕೊಳ್ಳುವ ವ್ಯಕ್ತಿತ್ವ ಇಲ್ಲದೇ ಇದ್ದರೆ ಅವರೂ ಸಾಧಕಿಯಾಗುತ್ತಿರಲಿಲ್ಲ. ಅವರು ಜ್ಯೋತಿಬಾ ಫುಲೆಯವರ ಕೈ ಹಿಡಿದರು ನಿಜ ಆದರೆ ಮುನ್ನಡದೆವರು ಹೆಜ್ಜೆ ಇಟ್ಟವರು ಖಂಡಿತವಾಗಿ ಸಾವಿತ್ರಿಬಾಯಿ ಫುಲೆಯವರೆ. ಹಾಗಾಗಿ ಕಸ್ತೂರಬಾ ಅವರ, ರಮಾಬಾಯಿಯವರ, ಸಾವಿತ್ರಿಬಾಯಿ ಫುಲೆಯವರ ವ್ಯಕ್ತಿತ್ವಕ್ಕೆ ಸ್ವಯಂಭೂತವಾದ ದೀಪಕತೆ ಇದೆ ಎಂಬ ಹಿನ್ನೆಲೆಯಲ್ಲಿ ಅವರನ್ನು ನೆನಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಮತ್ತು ಮಹಿಳೆಯರ ಶಿಕ್ಷಣಕ್ಕೆ ನೀಡಿದ ಕೊಡುಗೆ ವಿಚಾರದ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಯಿತು. ಅನಂತರ ವಿಜೇತರಿಗೆ ಹೆಲಿಕಾಪ್ಟರ್ ವಿಹಾರಕ್ಕೆ ಅವಕಾಶ ಕಲ್ಪಿಸಲಾಯಿತು. ಜೊತೆಗೆ, ಬೆಳಗಾವಿ ಜಿಲ್ಲೆಯ ವ್ಯಾಪ್ತಿಯ ೧೭ ಶಿಕ್ಷಕಿಯರಿಗೆ ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ ಜಾರಕಿಹೊಳಿ, ಪ್ರಾಧ್ಯಾಪಕ ವೈ.ಬಿ.ಹಿಮ್ಮಡಿ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಕೂಡ ಹಾಜರಿದ್ದರು. ಇದೇವೇಳೆ ಮಾನವ ಬಂಧುತ್ವ ವೇದಿಕೆಯ ವೆಬ್ಸೈಟ್ (https://mbvkarnataka.com) ಗೆ ಸತೀಶ್ ಜಾರಕಿಹೊಳಿಯವರು ಚಾಲನೆ ನೀಡಿದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು