October 1, 2023 8:16 am

ಮೂಢನಂಬಿಕೆಯ ಕೊಂಡಿ ಕಳಚಿ

ಸಿದ್ಧ ಬಸವ ಕಬೀರಾನಂದ ಸ್ವಾಮಿ

ಇವನ್ಯಾರವ ಇವನ್ಯಾರವ ಇವನ್ಯಾರವ ಎಂದೆನಿಸದಿರಯ್ಯ
ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ
ಕೂಡಲ ಸಂಗಮದೇವ ನಿಮ್ಮ ಮನೆ ಮಗನೆಂದೆನಿಸಯ್ಯ

ಬಸವಾದಿ ಪರಮ ಶ್ರೇಷ್ಠರನ್ನು ಸ್ಮರಣೆ ಮಾಡಿಕೊಂಡು, ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೆನೆಸಿಕೊಂಡು, ಮಾನವ ಬಂಧುತ್ವ ವೇದಿಕೆ, ಕರ್ನಾಟಕ, ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣದ ದಿನ ಪ್ರಯುಕ್ತ ಮೂಢನಂಬಿಕೆಯ ಪರಿವರ್ತನಾ ದಿನಾಚರಣೆಯನ್ನು ಹಮ್ಮಿಕೊಂಡು ಈ ಕಾರ್ಯಕ್ರಮದ ಕಾರಣೀಕರ್ತರು, ಬಹಳ ಜನ ಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವುದರೊಂದಿಗೆ, ಮಠಗಳನ್ನು ಕಟ್ಟುವುದರೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತಹ ಸ್ವಾಮಿಗಳು ಮಾಡುವಂತಹ ಕೆಲಸವನ್ನು ತಾವು ಜವಾಬ್ದಾರಿ ಹೊತ್ತುಕೊಂಡು ಮಾಡುತ್ತೇವೆಂದು ಸನ್ಮಾನ್ಯ ಶ್ರೀ, ಶಾಸಕರಾದ ಶರಣ ಸತೀಶ್ ಜಾರಕಿಹೊಳಿಯವರಿಗೆ ಮೊಟ್ಟ ಮೊದಲನೆಯದಾಗಿ ಧನ್ಯವಾದಗಳನ್ನು ಸಲ್ಲಿಸಬೇಕಾಗುತ್ತದೆ. ಇಂತಹ ಕಾರ್ಯಕ್ರಮದ ಸಂಭ್ರಮದ ಒಂದು ವೇದಿಕೆಯಲ್ಲಿ ಸನ್ನಿಧಾನವನ್ನು ವಹಿಸಿದಂತಹ ಮಡಿವಾಳೇಶ್ವರ ಮಠದ ಪರಮ ಪೂಜ್ಯರಲ್ಲಿ, ಬೆಳಗುದಿ ಮಠದ ಪರಮ ಪೂಜ್ಯರಲ್ಲಿ, ನಮ್ಮ ಇನ್ನೊಬ್ಬ ಈ ಭಾಗದ ಪರಮ ಪೂಜ್ಯರಲ್ಲಿ, ನಮ್ಮ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪತ್ರಿಕಾ ಮಾಧ್ಯಮದ ಸಲಹೆಗಾರರ ದಿನೇಶ್ ಅಮೀನ್ ಮಟ್ಟು ಅವರಿಗೆ, ಅವರೆಲ್ಲರಿಗೂ ಹಾಗೂ ಸಮಸ್ತ ಶರಣಶರಣೆಯರೆಲ್ಲರಿಗೂ ನನ್ನ ಶರಣು ಶರಣಾರ್ಥಿಗಳು. ನಿಮ್ಮೆಲ್ಲರನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವೆನ್ನಿಸುತ್ತಿದೆ. ಏಕೆಂದರೆ ಯಾವ ನಿರಿಕ್ಷೆಯನ್ನು ನೋಡದೇ ಪರಿವರ್ತನೆಗಾಗಿ ಬಂದಿದ್ದೀರಿ.

ಕಡಕೋಳದ ಮಡಿವಾಳಪ್ಪನವರೊಂದು ಮಾತನ್ನು ಹೇಳುತ್ತಾರೆ, ನಿಮ್ಮೂರಿಗೆ ನಾವು ಬರಬೇಕಾದರೆ ನಮ್ಮ ನಿಮ್ಮ ಮನಸ್ಸು ಒಂದಿರಬೇಕು ಎಂದು ತತ್ವಜ್ಞಾನಿ ಮಡಿವಾಳಪ್ಪನವರು ಹೇಳುತ್ತಾರೆ. ಇವರ ತತ್ವಗಳನ್ನು ತೆಗೆದುಕೊಂಡು, ವೈಚಾರಿಕವಾಗಿ ಮುಖ ಮಾಡಿಕೊಂಡು ಹೋಗುವವರಿಗೆ ಕಷ್ಟಕಾರ್ಪಣ್ಯಗಳು ಬಂದರೂ ಸಹಿತ ಇಂತಹ ವೇದಿಕೆಗಳು ಸಿಕ್ಕಾಗ ಹೇಗಾಗುತ್ತದೆ ನಮ್ಮಂತವರ ಪಾಲಿಗೆಂದರೇ, ಹಾಲು ಕುಡಿದಷ್ಟು ಸಂತೋಷವಾಗುತ್ತದೆ.  

ಮೊಟ್ಟ ಮೊದಲನೆಯದಾಗಿ ಹೇಳುವುದಾದರೆ, ಬಸವಣ್ಣನವರು ಈ ಅನಿಷ್ಟ ಪದ್ಧತಿಗಳ ವಿರುದ್ಧ ಹೇಗೆ ಹೋರಾಡಿದರೆಂದರೆ ಆಶ್ಚರ್ಯವೆನ್ನಿಸುತ್ತದೆ. ಬಸವಣ್ಣನವರು ನಾಲ್ಕು ವರ್ಷದವರಿದ್ದಾಗ ಅವರ ತಂದೆ ಗುರುಕುಲಕ್ಕೆ ಕರೆದುಕೊಂಡು ಹೋಗುತ್ತಿರುವಾಗ, ಗುರುಕುಲದ ಗುರುಗಳು ಹೇಳುತ್ತಾರೆ “ಬಸವಣ್ಣ ಮೊದಲ ದಿನ ಗುರುಕುಲಕ್ಕೆ ಬರುತ್ತಿದ್ದೀ. ಈ ಹೊಸ್ತಿಲಿಗೆ ನಮಸ್ಕರಿಸಿ, ಬಲಗಾಲಿಟ್ಟು ಒಳಗೆ ಬಾ” ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಯೋಚಿಸುತ್ತಾರೆ. ಗುರುಗಳ ಬಲಗಾಲಿಟ್ಟು ಒಳಗೆ ಬಾ ಎಂದರಲ್ಲಾ ಏನು ವಿಚಿತ್ರವೆಂದು. ಆಗ ಬಸವಣ್ಣನವರು ಗುರುಗಳನ್ನು ಪ್ರಶ್ನಿಸುತ್ತಾರೆ. ಗುರುಗಳೇ ನೀವು ಬಲಗಾಲಿಟ್ಟು ಒಳಗೆ ಬಾ ಎಂದಿರಿ, ಆದರೆ ಎಡಗಾಲು ಒಲ್ಲೆ ಎಂದರೆ ಏನು ಮಾಡುತ್ತೀರಿ? ಬಲ-ಎಡಗಾಲು ಹಾಕುವುದರಿಂದ ನಾನು ಪಾಸಾಗುವುದಿಲ್ಲ ಗುರುಗಳೇ. ನೀವು ಹೇಳಿಕೊಟ್ಟ ಪಾಠದಿಂದ ಚನ್ನಾಗಿ ಅಭ್ಯಾಸ ಮಾಡಿಕೊಂಡು, ಬಂದರೆ ಮಾತ್ರ ಪಾಸಾಗುತ್ತೇನೆ ಎಂದು ಬಸವಣ್ಣನವರು ಎಡಗಾಲಿಟ್ಟು ಒಳ ಪ್ರವೇಶಿಸುತ್ತಾರೆ. 

ನಾವು ನಮ್ಮ ದೇಹದಲ್ಲೇ ಭೇದ-ಭಾವವನ್ನು ಮಾಡುತ್ತೇವೆ. ಆದರೆ ಆ ಕಾಲದಲ್ಲೇ ಬಸವಣ್ಣನವರು ತಮ್ಮ ಎಡಗೈಯಲ್ಲಿ ಇಷ್ಟಲಿಂಗವನ್ನು ಇಟ್ಟುಕೊಳ್ಳುವುದರ ಮುಖಾಂತರ, ಎಡಗೈಯ ಶ್ರೇಷ್ಠತೆಯನ್ನು ಎತ್ತಿ ತೋರಿಸಿದ್ದಾರೆ. ಬರೀ ಇಷ್ಟೇ ಅಲ್ಲ. ಎಡಪಂಥೀಯ ಜನರು ಅಂದರೆ ದೀನರು, ದಲಿತರು, ಮಹಿಳೆಯರು, ಹಿಂದುಳಿದ ವರ್ಗದವರನ್ನು ತಲೆಯ ಮೇಲೆ ಹೊತ್ತುಕೊಂಡವರೆಂದರೆ ಅದು ಬಸವಣ್ಣನವರು. 

ಒಂದು ದಿನ ಬಸವಣ್ಣನವರು ತನ್ನ ಅಕ್ಕ ತಿಂಗಳಿಗೆ ಮೂರು ದಿನ ಹೊರಗಿರುವುದನ್ನು ಕಂಡು, ಯಾಕಕ್ಕ ಹೊರಗಿದ್ದೀ ಎಂದು ಕೇಳುತ್ತಾರೆ. ಆಗ ಅವರ ಅಕ್ಕ “ಇಲ್ಲ ತಮ್ಮ, ನಾನು ತಿಂಗಳಿಗೆ ಮೂರು ದಿನ ಹೊರಗಿರುವುದೇ ಇಲ್ಲಿನ ಸಂಸ್ಕೃತಿ” ಎಂದು ಅಳುತ್ತ ಹೇಳುತ್ತಾಳೆ. ಆಗ ಬಸವಣ್ಣನವರು ತನ್ನ ಅಕ್ಕನನ್ನು ಅಪ್ಪಿಕೊಂಡು ಒಳಗೆ ಕರೆದುಕೊಂಡು ಬರುತ್ತಾನೆ.

ಕಡುಕೋಳದ ಮಡಿವಾಳಪ್ಪನವರು ಒಂದು ಮಾತನ್ನು ಹೇಳುತ್ತಾರೆ, “ಮುಟ್ಟಿಲ್ಲದ ನಿನ್ನ ಹುಟ್ಟಿಲ್ಲ ಮುಟ್ಟನ್ನೇಕೆ ಅನಿಷ್ಟ ಎನ್ನುತ್ತೀರಿ?” ಎಂದು ಕೇಳುತ್ತಾರೆ. ಊರ ಬಾವಿಯ ನೀರು ಯಾರು ತೋಡಿದರೇನು, ನಿಮ್ಮ ಬಾವಿಯ ನೀರು ಬೇರೆ ಇರುವುದೇನು..? ನಂಡೇನಹಳ್ಳ ಹೋಗಿ ನದಿಯ ಕೂಡಿದ ಮೇಲೆ ನೈವೇದ್ಯ ಹೆಂಗಾಗದು ವೀರಣ್ಣ? ಎಂದು ಕೇಳುತ್ತಾರೆ. ಅಂದರೆ ಊರ ಬಾವಿಯ ನೀರು ಎಲ್ಲರೂ ತರುತ್ತಾರೆ. ಅವ ಹೀಗೆ ತೆಗೆದುಕೊಂಡು ಹೋಗುತ್ತಾನೆ, ಇವ ಹೀಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾನೆ. ಆದರೆ ಆ ನೀರು ಒಂದೇ ತಾನೇ? ಅದನ್ನು ನೀವು ಮುಟ್ಟಬೇಡ ಎನ್ನುವುದೇಕೆ? ನಂಡೇನಳ್ಳ ಊರಲ್ಲಿರುವ ಕೊಳೆಯನ್ನೆಲ್ಲ ತೆಗೆದುಕೊಂಡುಹೋಗಿ ನದಿಗೆ ಬಿಡುತ್ತದೆ. ಅದರಲ್ಲಿ ನೀವೆಲ್ಲ ಮಿಂದೆದ್ದು ಬರುತ್ತೀರಿ. ಇಲ್ಲಿ ಯಾರಾದರೂ ಕಾಶಿಗೆ ಹೋದವರಿದ್ದಿದ್ದಾದರೇ ಗೊತ್ತಾಗುತ್ತದೆ. ಆ ಕಾಶಿಯಲ್ಲಿ ನಮ್ಮ ಬೆಳಗಾವಿಯ ಚರಂಡಿ ನೀರಿಗಿಂತಲೂ ಕೆಟ್ಟದಾಗಿ ಆ ನದಿ ನೀರು ನಾರುತ್ತಿರುತ್ತದೆ. ಕಾಶಿಯ ನೀರು ಅಪವಿತ್ರವೆಂದು ನಾನು ಹೇಳುತ್ತಿಲ್ಲ. ಆ ನೀರನ್ನು ಅಪವಿತ್ರ ಮಾಡಿದವರು ನಾವೆಂದು ಹೇಳ ಹೊರಟಿದ್ದೇನೆ.

ಮತ್ತೆ ಮುಂದೆ ಹೋಗಿ ಮಡಿವಾಳಪ್ಪನವರು ಹೇಳುತ್ತಾರೆ, “ಊರ ನರಕವ ತಿಂದು ಬೋರಾಡಿ ನೀಡುವ ಎಮ್ಮಿ, ಹಾಲಿಸ ಸವಿ ನೋಡಣ್ಣ. ಎಮ್ಮಿ ದೆವ್ವವೆಂದು ಹೇಳುತ್ತೀರಿ, ಆಕಳಿನ ಹೊಟ್ಟೆಯಲ್ಲಿ ದೇವರಿರುವುದಾದರೇ, ಎಮ್ಮೆಯ ಹಾಲನ್ನೇಕೆ ಕುಡಿಯುವಿರಿ? ಅದಕ್ಕೆ ಈ ಮೌಢ್ಯಗಳನ್ನೆಲ್ಲ ನಾವು ದೂರ ಮಾಡಿ ಬಿಡಬೇಕು. ಹೀಗೆ ಹೇಳುವವರನ್ನು ಯಾರು ತಾನೆ ಕರೆಯುತ್ತಾರೆ? ಅಥವಾ ಯಾರು ತಾನೆ ಒಪ್ಪುತ್ತಾರೆ? ಅದೇ ನಿಮಗೆ ಇಲ್ಲದ-ಸಲ್ಲದ್ದನ್ನು ಹೇಳಿ ನಿಮ್ಮನ್ನು ಮೂಢರನ್ನಾಗಿಸಿ, ನಿಮ್ಮ ಹತ್ತಿರ ಹಣವನ್ನೆಲ್ಲ ಬಾಚಿಕೊಂಡು ಹೋಗುವವರನ್ನು ನೀವೆಲ್ಲ ಒಪ್ಪುತ್ತೀರಿ, ಅವರಿರುವಲ್ಲಿ ಹೋಗಿ ಉದ್ದುದ್ದ ಸಾಲುಗಳಲ್ಲಿ ನಿಲ್ಲುತ್ತೀರಿ. ನೋಡಿ ಅವರು ತಿಂದು ತಿಂದು ಮೈ ಬೆಳೆಸಿದ್ದಾರೆಂದು, ನೀವು ಕೊಟ್ಟು ಕೊಟ್ಟು ಹೇಗೆ ಸೊರಗಿದ್ದೀರೆಂದು.

ಒಂದು ದಿನ ನನ್ನಲ್ಲಿ ಒಬ್ಬ ಹೆಣ್ಣು ಮಗಳೊಬ್ಬಳು ಬಂದಳು. ಬಂದು 500 ರೂಪಾಯಿಗಳನ್ನಿಟ್ಟು ನಮಸ್ಕರಿಸಿದಳು. ನನಗೆ ಗಾಬರಿಯಾಯಿತು. ನನ್ನ ಜೀವನದಲ್ಲಿ ಯಾರು 500 ರೂಪಾಯಿಗಳನ್ನು ಕೊಟ್ಟಿರಲೇ ಇಲ್ಲ. ಏನೋ ತಪ್ಪಿ ಬಂದಿರಬೇಕೆಂದು ಅನ್ನಿಸಿತು ನನಗೆ. ಆದರೂ ಬಿಡಬಾರದು ಗಿರಾಕಿ ದೊಡ್ಡದೆಂದುಕೊಂಡೆ. ಏಕೆಂದರೇ 500 ರೂಪಾಯಿಗಳವರೆಗು ಯಾರೂ ಕೊಟ್ಟೆ ಇರಲಿಲ್ಲವಲ್ಲ ಹಾಗಾಗಿ. ಅದನ್ನು ನನ್ನ ಜೇಬಿನಲ್ಲಿ ಇಟ್ಟುಕೊಳ್ಳಲು ಹೊರಟೆ. ಆಗ ಆ ಹೆಂಗಸು “ಅಜ್ಜರ ನನ್ನ ಮಾತೊಮ್ಮೆ ಕೇಳಿ. ನನ್ನ ಗಂಡ ನನ್ನ ಮಾತನ್ನು ಕೇಳದಾಗಿದ್ದಾನೆ. ಹಾಗಾಗಿ ಮಾತು ಕೇಳುವಂತೆ ಮಾಡಲು ಒಂದು ಮಂತ್ರವನ್ನು ಕಟ್ಟಿ” ಎಂದು ಆ ತಾಯಿ ಕೇಳುತ್ತಾಳೆ. ಆಗ ನನಗೆ ಆಶ್ಚರ್ಯವಾಯಿತು. ಅದನ್ನು ನಾನು ಕಲಿತಿಲ್ಲವೆಂದು ಹೇಳಿದೆ. ಆಗ ಆಕೆ ಕಲಿಯಲಿಲ್ಲವಾದರೇ ಕಾವಿಯನ್ನೇಕೆ ಉಟ್ಟಿದ್ದೀರಿ? ಎಂದು ಕೇಳಿದಳು. ಆಗ ನಾನು ತಾಯಿ ಆ ವಿದ್ಯೆ ನನಗೆ ಬರುತ್ತಿತ್ತೆಂದರೇ ಮುಖ್ಯಮಂತ್ರಿಗಳನ್ನೇ ನನ್ನ ಮಾತು ಕೇಳುವ ಹಾಗೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿದೆ. ಆಗಾಕೆ “ಕಲಿಯಲಿಲ್ಲವಾದರೇ ನೀವೆಂತಹ ಸ್ವಾಮಿಗಳು?” ಎಂದು ಕೇಳಿದಳು. ಕೊಟ್ಟ 500 ರೂಪಾಯಿಗಳನ್ನು ವಾಪಾಸ್ ತೆಗೆದುಕೊಂಡು ಹೋಗಿಬಿಟ್ಟಳು. ಹೋಗುವಾಗ ಸ್ವಾಮಿ ನಮ್ಮೂರಲ್ಲೊಬ್ಬ ಮುತ್ಯಾ ಇದ್ದಾನೆ. ನಮ್ಮೂರಿನ ಗೌಡನ ಮಗನಿಗೆ ಚೀಟಿ ಕಟ್ಟಿ ಗಂಡು ಮಗುವನ್ನು ಹಡೆಯುವಂತೆ ಮಾಡಿದನು. ಆಗ ಅವನಿಗೆ ಗಂಡು ಮಗುವಾಯಿತು. ನೀನ್ಯಾವ ಸ್ವಾಮಿ ಹೋಗು ಎಂದಳು. ಆಗ ನಾನು ಚೀಟಿಕಟ್ಟಿ ಗಂಡು ಮಗುವಿಗೆ ಜನ್ಮ ನೀಡುವುದಾದರೆ, ಮದುವೆ ಏಕೆ ಮಾಡಿಕೊಂಡೆ? ಎಂದು ಕೇಳಿದೆ. ಹೈರಾಣಾಗಿ, ವರದಕ್ಷಿಣೆ ಕೊಟ್ಟು ಇಷ್ಟೊಂದು ಪರದಾಡಿ ಮದುವೆ ಏಕೆ ಮಾಡಿಕೊಂಡಿರೆಂದು ಕೇಳಿದೆ. ಇವರು ಇಂತಹುದನ್ನೆಲ್ಲ ತಲೆಯಲ್ಲಿ ತುಂಬಿ, ಲಿಂಬೆಹಣ್ಣು ಮಂತ್ರಮಾಡಿ, ನಿಮ್ಮ ಕೈಯಲ್ಲಿ ಕೊಟ್ಟು ನಿಮ್ಮನ್ನು ದಿಕ್ಕು ತೋಚದ ರೀತಿ ಮಾಡಿ ಇಡುತ್ತಾರೆ. ಆ ಲಿಂಬೆಹಣ್ಣನ್ನು ನೀವು ತೆಗೆದುಕೊಂಡು ಹೋಗಿ ತಲೆಯ ದಿಂಬಿನ ಹತ್ತಿರ ಇಟ್ಟುಕೊಂಡು, ಕನಸ್ಸಿನಲ್ಲಿ ಬಂತು, ಅಲ್ಲಿ ಓಡಾಡುತ್ತಿತ್ತು, ಇಲ್ಲಿ ಓಡಾಡುತ್ತಿತ್ತೆಂದು ನಿಮ್ಮ ಮನಸ್ಸನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ. ಯಾವ ಲಿಂಬೆಹಣ್ಣು ಏನೂ ಮಾಡುವುದಿಲ್ಲ. ಯಾವ ಸೂಜಿದಾರವೂ ಏನೂ ಮಾಡುವುದಿಲ್ಲ. ನೀ ಎಲ್ಲಿಯವರೆಗೂ ಅಂಜಿಕೊಂಡು ಹೋಗುತ್ತೀರಲ್ಲ ಅಲ್ಲಿಯವರೆಗೂ ನಿಮ್ಮನ್ನು ಅಂಜಿಸಿಕೊಂಡು ಹೋಗುವ ಜನರು ಬಹಳಷ್ಟಿರುತ್ತಾರೆ. ಯಾವ ದೇವಸ್ಥಾನಕ್ಕೂ ಹೋಗುವುದು ಬೇಡ. 

ಒಬ್ಬ ಸತ್ಯಕ್ಕ ಎಂಬವರು ಹೇಳುತ್ತಾರೆ: ನೀವು ದೇವರ ಮೂರ್ತಿಗಳನ್ನು ತೊಳೆದು ತೊಳೆದು ಅವುಗಳ ಬಣ್ಣ ಬೆಳ್ಳಗಾದರೆ, ನಿಮ್ಮ ಮುಖ ಕಪ್ಪಾಗಿ ಹೋಗಿದೆ. ಏನು ವ್ಯತ್ಯಾಸವಿದೆ ನೀವೇ ನೋಡಿ.

ಮೊನ್ನೆ ನಮ್ಮೂರಲ್ಲೊಬ್ಬರು ಶ್ರೀಶೈಲಕ್ಕೆ ಹೋಗಿದ್ದರು. ನಮ್ಮೆಲ್ಲರನ್ನು ಊಟಕ್ಕೆ ಕರೆದರು. ಏಕೆಂದು ನಾನು ಕೇಳಿದೆ. ಆಗ ಆಕೆ ದೇವರನ್ನು ಕಳಿಸುವುದಿದೆ ಎಂದು ಹೇಳಿದಳು. ನಾನಾಗ ದೇವರನ್ನು ಕಳಿಸುವುದಿದೆ ಎಂದಿದ್ದರೆ ಆ ದೇವರನ್ನೇಕೆ ಕರೆಯಲು ಹೋಗಿದ್ದೀರಿ? ಎಂದು ಕೇಳಿದೆ. ಉತ್ತರವಿಲ್ಲ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ ಎಂದಳು.

ಹೀಗೆ ಇವು ಯಾವವೂ ದೇವರಲ್ಲ, ಇವ್ಯಾವವೂ ನಡೆಯೋದಿಲ್ಲ. ಯಾವವು ದೇವರೆಂದರೆ ನಿಮ್ಮ ಅಂತರಂಗವನ್ನು ಅರ್ಥಮಾಡಿಕೊಂಡು, ಹೇಗೆ ನಮ್ಮ ದಾರ್ಶನಿಕರು ಬುದ್ಧ, ಬಸವ, ಅಂಬೇಡ್ಕರ್ ಅವರಾಗಲೀ ಅನೇಕ ಜನ ದಾರ್ಶನಿಕರು ಏನು ಹೇಳಿದರೋ ಅಂತಹ ತತ್ವಗಳನ್ನು ಪರಿಪಾಲನೆ ಮಾಡಿದರೆ ನಿಮ್ಮ ಮನಸ್ಸು ಮತ್ತು ನೀವು ಸ್ವಚ್ಛವಾಗುತ್ತೀರಿ. 

ಸುಮ್ಮನೆ ಯಾವನೋ ಒಬ್ಬ ಪಂಡಿತ, ಮೇಲೆ ವೇಲು ಹಾಕಿಕೊಂಡು ನೀರಿನಲ್ಲಿ ಮುಳುಗಿ ಏಳುತ್ತಿದ್ದನಂತೆ. ಅಲ್ಲೆ ಇದ್ದು ನೋಡುತ್ತಿದ್ದ ಒಬ್ಬ ಮನುಷ್ಯ ನಮ್ಮ ರಾಯರು ಏನೊ ಮಾಡುತ್ತಿದ್ದಾರೆಂದು ಹೋಗಿ ಕೇಳಿದನಂತೆ,  ಏಕೆ ನೀರಿನಲ್ಲಿ ಮುಳುಗಿ ಹೀಗೆ ನೀರು ಬಿಡುತ್ತೀರಿ ಎಂದನಂತೆ. ಆಗ ರಾಯರು “ನಿನಗೇನೂ ಗೊತ್ತಾಗದು ನೀನು ಹೋಗು ಎಂದನಂತೆ”. ಆಗ ಆತ “ಇಲ್ಲ ನಾನು ತಿಳಿದುಕೊಳ್ಳಲೇ ಬೇಕು. ನೀವು ಏಕೆ ಹೀಗೆ ನೀರನ್ನು ಬಿಡುತ್ತೀರಿ ಹೇಳಿ ಎಂದಾಗ, ಆತ ನಮ್ಮ ತಂದೆ-ತಾಯಿ ಸತ್ತಿದ್ದಾರೆ, ಅವರಿಗೆ ಸ್ವರ್ಗ ಸಿಗಲೆಂದು ಹೀಗೆ ಮುಳುಗಿ ನೀರು ಬಿಡುತ್ತಿದ್ದೇನೆ. ಈತ ಸುಮ್ಮನಾಗುವುದನ್ನು ಬಿಟ್ಟು, ಆತ ಹೊಳೆಯ ಮಧ್ಯದಲ್ಲಿ ನಿಂತು ಮಾಡುತ್ತಿರುವುದನ್ನು ಈತ ಹೊಳೆಯ ದಂಡೆಗೆ ನಿಂತು ನೀರು ತೆಗೆದುಕೊಂಡು ಹಾಕುವುದಕ್ಕೆ ಶುರು ಮಾಡಿದನು. ಆಗ ರಾಯರು ಕೇಳಿದರು “ನೀನೇನು ಮಾಡುತ್ತಿದ್ದೀ..?” ಎಂದು. ಆಗ ಆತ ನೀವೇನು ಮಾಡುತ್ತಿದ್ದೀರೋ ಅದನ್ನೇ ನಾನೂ ಕೂಡ ಮಾಡುತ್ತಿರುವೆನೆಂದನು. ಆಗ ರಾಯರು “ನೀನು ನೀರು ಬಿಡಲು ಕಾರಣವೇನು?” ಎಂದರು. ಆತ “ಇಲ್ಲಿಂದ 8 ಕಿಲೋ ಮೀಟರ್ ದೂರದಲ್ಲಿ ನನ್ನ ತೋಟವಿದೆ. ಆ ತೋಟಕ್ಕೆ ನಾನು ನೀರು ಬಿಡುತ್ತೇನೆಂದು ಹೇಳುತ್ತಾನೆ. ಆಗ ರಾಯರು ಹೇಳುವರು “ಏ ದಡ್ಡ. ಇಲ್ಲಿಂದ ನೀರು ಬಿಟ್ಟರೆ 8 ಕಿಲೋ ಮೀಟರ್ ದೂರದಲ್ಲಿರುವ ನಿನ್ನ ತೋಟಕ್ಕೆ ಹೇಗೆ ನೀರು ಹೋಗುತ್ತದೆ?” ಎಂದಾಗ, ಆತ “ನೀನು ಇಲ್ಲಿಂದ ನೀರು ಹಾಕಿದರೆ ಸತ್ತ ನಿನ್ನ ತಂದೆ-ತಾಯಿಯರಿಗೆ ಹೇಗೆ ನೀರು ಹೋಗುತ್ತದೆ” ಎಂದು ಕೇಳಿದನು. ಅವನು ಪ್ರಶ್ನಿಸಿದ ಹಾಗೆ ನಾವೆಂದಿಗೂ ಪ್ರಶ್ನಿಸಲು ಹೋಗುವುದಿಲ್ಲ. ನಾವು ಅವರು ಹೇಳಿದಕ್ಕೆಲ್ಲ ಜೈಕಾರ ಹೇಳಿಕೊಂಡು ಹೋಗುತ್ತೇವೆ.

ಸ್ವಲ್ಪ ಕಿವಿಗೊಟ್ಟು ಕೇಳಿ.  ಸುಮಾರು ದಿನಗಳ ಹಿಂದೆ ನಮ್ಮ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ  ಕೋಟಿಗಟ್ಟಲೆ ಖರ್ಚುಮಾಡಿ, ಅಯ್ಯಪ್ಪ ಸ್ವಾಮಿಗೆ ಅಭಿಷೇಕ ಮಾಡಿದರು. ಕೆಲವರು ಅದನ್ನು ಪ್ರಶ್ನಿಸಿದರು. “ಯಾಕಿಷ್ಟೂ ವೈಭವ ಪೂರ್ಣವಾಗಿ ಅಭಿಷೇಕ ಮಾಡುತ್ತಿದ್ದೀರೆಂದು”. ಆಗ ಸರ್ಕಾರ ಜಯಮಾಲ ದೇವಸ್ಥಾನದೊಳಗೆ ಬಂದಿದ್ದಳೆಂದು ಹೇಳುತ್ತದೆ. ಹೆಣ್ಣು ಮಕ್ಕಳು ಆ ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೆ ನನ್ನದೊಂದು ಪ್ರಶ್ನೆ. ಹೆಣ್ಣು ಮಕ್ಕಳಿಲ್ಲದೆ ಆ ದೇವರು ಹುಟ್ಟಿದನೇ? ಹೇಗೆ ಹುಟ್ಟಿದನೋ ನನಗೆ ತಿಳಿದಿಲ್ಲ. ಜಯಮಾಲ ಹೋಗಿದ್ದಕ್ಕೆ ಆಕೆಯ ನೆರಳು ಬಡೆದಿದೆಯಂತೆ ದೇವರಿಗೆ, ಹಾಗಾಗಿ ಸೂತಕ ಹತ್ತಿ ಅಯ್ಯಪ್ಪ ಸ್ವಾಮಿಯ ಶಕ್ತಿ ಕಡಿಮೆ ಆಗಿದೆಯಂತೆ. ಹಾಗಾಗಿ ಆ ಸರ್ಕಾರದವರು ಅಯ್ಯಪ್ಪ ಸ್ವಾಮಿಯ ಶಕ್ತಿಯನ್ನು ಭರಿಸಲು ಅಭಿಷೇಕ ಮಾಡಿದರಂತೆ! ಯಾವಾಗ ಜಯಮಾಲ ಅವರ ನೆರಳು ಮುಟ್ಟಿದ ಮೇಲೆ ಅಯ್ಯಪ್ಪ ಸ್ವಾಮಿಯ ಶಕ್ತಿ ಕಡಿಮೆಯಾಗಿರುವಾಗ ನಾವೆಲ್ಲ ಜಯಮಾಲ ಅವರಿಗೆ ನಮಸ್ಕರಿಸೋದೋ ಅಥವಾ ಅಯ್ಯಪ್ಪ ಸ್ವಾಮಿಗೆ ನಮಸ್ಕರಿಸೋದೋ! ಆಕೆ ಮುಟ್ಟಿದ ಕೂಡಲೇ ಈತ ಚಿಕ್ಕವನಾದರೇ ಅಯ್ಯಪ್ಪ ಸ್ವಾಮಿಯ ಶಕ್ತಿಗಿಂತ ಜಯಮಾಲ ಶಕ್ತಿಯೇ ದೊಡ್ಡದಾದಂತಾಯಿತು.

ಬಸವಣ್ಣನವರ ತಂದೆ ಒಮ್ಮೆ ಬಸವಣ್ಣನವರಿಗೆ ಹೇಳುತ್ತಾರೆ “ಏ ಅಂತಹ ದರಿದ್ರದವರನ್ನು ಮುಟ್ಟಿಸಿಕೊಳ್ಳಬೇಡ, ನಾವೆಲ್ಲ ಮಡಿವಂತರು. ಅವರನ್ನು ಮುಟ್ಟಿಸಿಕೊಂಡರೇ ನಾವೆಲ್ಲ ಮೈಲಿಗೆಯಾಗುತ್ತೇವೆ” ಎಂದಾಗ, ಬಸವಣ್ಣನವರು ಪ್ರಶ್ನಿಸುತ್ತಾರೆ. “ಏಕೆ ಅವರನ್ನು ಮುಟ್ಟಬಾರದು..?” ಎಂದು.  ಆಗ ಅವರ ತಂದೆ, “ಅವರು ದರಿದ್ರರು, ಶೂದ್ರರೆಂದು ಹೇಳುತ್ತಾರೆ.” ಆಗ ಬಸವಣ್ಣನವರು ಕೇಳುತ್ತಾರೆ, “ದರಿದ್ರರು, ಶೂದ್ರರೆಂದರೆ ಏನು..?!” ಎಂದು. ಆಗವರ ತಂದೆ ಭಟ್ರೆ ಈತನ ಪ್ರಶ್ನೆಗಳಿಗೆ ನನ್ನಿಂದ ಉತ್ತರಿಸಲಾಗುವುದಿಲ್ಲ ಎಂದಾಗ, ಭಟ್ಟರು ದರಿದ್ರರು ಮತ್ತು ಶೂದ್ರರು ಮಾಂಸವನ್ನು ತಿನ್ನುವವರು, ಹಾಗಾಗಿ ನಾವು ಅವರನ್ನು ದೂರ ಇಟ್ಟಿದ್ದೇವೆ” ಎನ್ನುತ್ತಾರೆ. ಆಗ ಬಸವಣ್ಣನವರು ಭಟ್ಟರಿಗೆ “ನಾವು ನೀವೆಲ್ಲ ಇದುವರೆಗೂ ಮುಟ್ಟಿಸಿಕೊಂಡಿಲ್ಲ. ಢೋಂಗಿ ನಾಟಕವಾಡುತ್ತಿದ್ದೇವೆ. ನಮ್ಮ ಮನೆಗೆ ನೀವೆಲ್ಲ ಬರುತ್ತಿರುತ್ತೀರಿ, ಆದರೆ ಒಂದು ದಿನವು ನೀವೆಲ್ಲ ಇದುವರೆಗೂ ನಮ್ಮ ಮನೆಯಲ್ಲಿ ಊಟ ಮಾಡಿ ಎಂದು ಹೇಳಿದರೆ, ಬೇಡ ಮಠಕ್ಕೆ ಹೋಗಿ ಊಟ ಮಾಡುತ್ತೀವೆಂದು ಹೇಳುತ್ತೀರಿ.” ಎಂದರು.

ಮತ್ತೆ ಮುಂದುವರೆದು “ನಮ್ಮ ಮನೆಯಲ್ಲಿರುವ ಬೆಕ್ಕು, ನಾಯಿಗಳು ಗುಲಾಬ್ ಜಾಮೂನು ತಿನ್ನುತ್ತಾವೆಯೇ….??!! ಹೋಳಿಗೆ, ಪಾಯಸವನ್ನು ತಿನ್ನುತ್ತಾವೆಯೇ…??!! ಆದರೆ ಅವುಗಳನ್ನು ನೀವು ತೊಡೆಯ ಮೇಲಿಟ್ಟುಕೊಂಡು ಮುದ್ದಾಡುತ್ತೀರಿ. ಒಬ್ಬ ಜೀವಂತಿಕೆ ಇರುವಂತಹ ಮನುಷ್ಯನನ್ನು ಮಾತನಾಡಿಸಿದರೇ ಏನಾಗಿ ಬಿಡುತ್ತದೆ? ಎಂದು ಕೇಳುತ್ತಾರೆ. ಆ ಕಾಲದಲ್ಲಿಯೇ ಇಂತಹ ಸಾಮಾಜಿಕ ಕ್ರಾಂತಿ ಮಾಡಿದವರು ನಮ್ಮ ಬಸವಣ್ಣನವರು.

ಕಡಕೋಳ ಮಡಿವಾಳಪ್ಪನವರು ಹೇಳುತ್ತಾರೆ:

ನೀ ಕಟ್ಟಿಸಿದ್ದಿಯಪ್ಪ ಮನೆಯ ಮಾಳಿಗಿ
ನಿನಗೆ ಹೋಗುವುದು ಬಂತಲ್ಲಪ್ಪ ನಾಳಿಗಿ
ಬಗಲಿಗೆ ಮಾಡಿಯಾರಪ್ಪ ಜೋಳಿಗಿ
ನಿನ್ನ ಬಿಟ್ಟು ಬಂದಾದ ಮೇಲೆ ಉಣ್ಣುತ್ತಾರಪ್ಪ ಹೋಳಿಗಿ

ಯಾರು ಎಷ್ಟು ದಿನ ಬದುಕುತ್ತಾರೆ. ಎಲ್ಲರಿಗೂ ಒಂದಲ್ಲ ಒಂದು ದಿನ ಸಾವು ಬರುವುದೇ. ಸಾವು ಬಂದ ಮೇಲೆ ಎಲ್ಲರನ್ನೂ ಹೆಣ ಅನ್ನಲೇ ಬೇಕು. ಈಗ ತುಂಬಾ ಚಂದವಾಗಿರುವ ಬಟ್ಟೆಗಳನ್ನು ಉಟ್ಟು, ಘಮ-ಘಮವಾಗಿ ಇರುತ್ತೀರಿ, ಎಲ್ಲರೂ ನಿಮ್ಮ ಪಕ್ಕಕ್ಕೆ ಬಂದು ಕೂರುವರು. ಆದರೆ ಸತ್ತಾಗ…?! ಹೆಣವನ್ನು ಮುಟ್ಟಿ ಬಂದಿದ್ದೀರಿ, ಕೈ-ಕಾಲು ತೊಳೆದುಕೊಳ್ಳಿ ಎಂದು ಹೇಳುವರು. ನಮ್ಮ ಜೀವನ ಈಗ ಏನಾಗಿದೆ ಎಂದು ಹೇಳಿದರೆ ಇಂತಹ ಮೌಢ್ಯತೆಗಳಿಗೆ ಬೆನ್ನು ಹತ್ತಿವೆ. 

ದಲಿತನೊಬ್ಬ ಬಸವಣ್ಣನವರ ಮನೆಯಲ್ಲಿ ಚಪ್ಪಲಿ ತಂದಿಟ್ಟಾಗ, ಅವರ ತಾಯಿ ಆ ಚಪ್ಪಲಿಯ ಮೇಲೆ ನೀರು ಸುರಿಸಿ ಒಳಗೆ ತೆಗೆದುಕೊಂಡು ಬರುವರು. ಆಗ ಅಲ್ಲೇ ಕುಳಿತಿದ್ದ ಬಸವಣ್ಣ ತನ್ನ ತಾಯಿಯನ್ನು ಪ್ರಶ್ನಿಸುತ್ತಾರೆ, “ಯಾಕಮ್ಮ ಆ ಚಪ್ಪಲಿಯ ಮೇಲೆ ನೀರು ಸುರಿದೆ” ಎಂದಾಗ, ಅವರ ತಾಯಿ “ಆ ಮಾದಿಗರು ತಂದು ಕೊಟ್ಟು ಚಪ್ಪಲಿ ಅವು. ಹಾಗಾಗಿ ನಮ್ಮ ಮನೆಯಲ್ಲಿರುವ ಪವಿತ್ರವಾದ ನೀರನ್ನು ಸುರಿದು, ಅದನ್ನು ಶುದ್ಧೀಕರಣ ಮಾಡಿ ಒಳಗೆ ತೆಗೆದುಕೊಂಡು ಹೋಗುತ್ತೀನಿ” ಎಂದು ಅವರ ತಾಯಿ ಹೇಳಿದರು. ಆಗ ಬಸವಣ್ಣನವರು “ಯವ್ವಾ, ಸತ್ತ ದನದ ತೊಗಲಿಗೆ ನೀರು ಹೊಡೆದು ಪಾವನವಾಗಿದೆ. ಸತ್ತ ದನದ ಚರ್ಮ ಸೂತಕ ಹೋಗಿದೆ. ಚಪ್ಪಲಿ ಮಾಡುವವನು ಮಾಡಿದ ಚಪ್ಪಲಿ ಮೇಲೆ ಒಂದಿಷ್ಟು ನೀರು ಹೊಡೆಯದೆ ಒಳಗೆ ತೆಗೆದುಕೊಂಡು ಏನು ಆಗುತ್ತದೆ. ಎಂದು ನೋಡಿಯೇ ಬಿಡೋಣ ಎಂದು ತನ್ನ ತಾಯಿಗೆ ಹೇಳುತ್ತಾರೆ ಬಸವಣ್ಣನವರು. ಇಂತಹ ಕ್ರಾಂತಿಯನ್ನು ಬಸವಣ್ಣನವರು ಮಾಡುತ್ತಾರೆ. ನಾವು ಕೂಡ ಈ ದಾರಿಯಲ್ಲಿ ನಡೆಯಬೇಕು. ಸುಮ್ಮನೆ ಸತೀಶ್ ಜಾರಕಿಹೊಳಿಯವರು ಕರೆದಿದ್ದಾರೆಂದು ಬಂದು, ಮನೆಗೆ ಹೋದ ಮೇಲೆ ಜಾತಕ, ಪಂಚಾಂಗಗಳನ್ನು ನೋಡುತ್ತಾ ಕೂರಬೇಡಿ.

ಪಂಚಾಂಗ ಹೇಳುವವನಲ್ಲಿ ಮೊನ್ನೆ ಒಬ್ಬ ವ್ಯಕ್ತಿ ಬಂದು ಕೇಳಿದನು. “ನಾನು ಹುಡುಗಿಯನ್ನು ಕರೆದುಕೊಂಡು ಹೋಗಬೇಕಿದೆ. ಹಾಗಾಗಿ ಯಾವ ಮುಹೂರ್ತ ಹೊಂದುತ್ತದೆಂದು ನೋಡಿ” ಎಂದನು. ಆಗ ಪಂಚಾಂಗದವನು ಪಂಚಾಂಗವನ್ನು ತೆಗೆದುಕೊಂಡು ಹೇಳಿದನು. “ನೀನು ರಾತ್ರಿ 2 ಗಂಟೆಗೆ ಹುಡುಗಿಯನ್ನು ಕರೆದುಕೊಂಡು ಹೋದರೆ ಯಾವ ತೊಂದರೆಯೂ ಇರುವುದಿಲ್ಲ” ಎಂದನು. ಆ ನಂತರ ಪಂಚಾಂಗದವನು ಬೆಳಿಗ್ಗೆ ಎದ್ದು ಮುಖ ತೊಳೆದುಕೊಂಡು ನೋಡಿದರೆ, ಆತನ ಮಗಳೇ ಓಡಿ ಹೋಗಿರುತ್ತಾಳೆ. ಅದಕ್ಕೆ ಸ್ವಲ್ಪ ಯೋಚಿಸಿ ತನ್ನ, ಮುಂದಿನ ದಿನ ಏನಾಗಿರುತ್ತದೆಂದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ನಿಮ್ಮಂತವರನ್ನು ಮೋಸ ಮಾಡಿ, ನಿಮ್ಮನ್ನು ಯಾಮಾರಿಸಿ, ನಿಮ್ಮಿಂದ ಕಿತ್ತುಕೊಳ್ಳಲು ಅವರಿಗೊಂದು ಅವಕಾಶವಿರುತ್ತದೆ. ಇಂತಹ ಮೂಢನಂಬಿಕೆಗಳನ್ನು ಬೆಳೆಸುವುದರಲ್ಲಿ ಅವರು ಚಾಣಾಕ್ಯರಾಗಿರುತ್ತಾರೆ. ಆದರೆ ಅದನ್ನು ನಾವು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ. ಹೀಗೆ ನಾವು ಕ್ರಾಂತಿಕಾರಿ ವಿಚಾರಗಳನ್ನು ಮಾಡಿದರೆ ಮಾತ್ರ ಇಂತಹ ಕಾರ್ಯಕ್ರಮಗಳಲ್ಲಿ ಬಂದು ಭಾಗವಹಿಸಿದ್ದಕ್ಕೂ ಸಾರ್ಥಕತೆ. ಮತ್ತು ಒಂದಿಷ್ಟು ಮನಃಪರಿವರ್ತನೆಯನ್ನು ಹೊಂದಲು ಸಾಧ್ಯ. ನಾನು ನಮ್ಮ ಸತೀಶ್ ಜಾರಕಿಹೊಳಿಯವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಏಕೆಂದರೆ ಇಲ್ಲಿ ಬಂದಿರುವಂತಹ ಇಷ್ಟು ಜನರ ಮನಃಪರಿವರ್ತನೆಯಾಗಲು ಅವರು ಕಾರಣಕರ್ತರಾಗಿದ್ದಾರೆ. 

ಒಂದು ದಿನ ಒಂದು ಬಿಲ್ಡಿಂಗ್‍ಗೆ ಬೆಂಕಿ ಹತ್ತಿದಾಗ ಅದನ್ನು ಆರಿಸಲು ಯಾರೂ ಹೋಗಲಿಲ್ಲ. ಅಲ್ಲೆ ಇದ್ದ ಒಬ್ಬ ವ್ಯಕ್ತಿ ಆ ಬೆಂಕಿಯಿಂದಲೇ ಬೀಡಿ ಹಚ್ಚಿಕೊಂಡನಂತೆ. ಆದರೆ ಆ ಬೆಂಕಿಯನ್ನು ನೋಡಿದ ಒಂದು ಗುಬ್ಬಿ ನೀರಿನಲ್ಲಿ ಮುಳುಗಿ ನೆನೆದು ಅದರ ಪುಕ್ಕದಲ್ಲಿದ್ದ ನೀರನ್ನು ಹತ್ತಿದ ಬೆಂಕಿಯನ್ನು ಆರಿಸಲು ಹೊರಟಿತಂತೆ. 

ಹೀಗೆ ಒಳ್ಳೆಯದನ್ನು ಮಾಡುವವರು ಒಳ್ಳೆಯದ್ದನ್ನೇ ಮಾಡುತ್ತಾರೆ. ಆದರೆ ಈಗ ಬಹಳ ಜನ ಕೆಟ್ಟದ್ದನ್ನೇ ಮಾಡುತ್ತಿದ್ದಾರೆ. ಅದಕ್ಕಾಗಿ ಸಂತ ಕಬೀರರೊಂದು ಮಾತನ್ನು ಹೇಳುತ್ತಾರೆ:

"ಚಂದನ್ ಕೇ ಜೋ ಗಸ್ ಗಯೇ,
ರಹೇ ಮೀನ್ ಕೀ ಕೋಡ್.
ಅಸಲಿ ಸಂತ ಚಲೇ ಗಯೇ
ರಹೇ ಚಪಾತಿ ಚೋರ್"

ಹಾಗೆ ನಮ್ಮ ಮನಸ್ಥಿತಿ ಇವತ್ತಿಗೆ ಏನಾಗುತ್ತಿದೆ ಎಂದರೆ, ಜಾತಿ, ಮತ, ಧರ್ಮಗಳು ತಲೆಯಲ್ಲಿ ಹೊಕ್ಕು, ಈ ಮೂಢನಂಬಿಕೆ ಎಷ್ಟು ಬೆಳೆದರೂ ಕೂಡ ನಮ್ಮ ಗಮನ ಹರಿಸುತ್ತಿಲ್ಲವಾಗಿದ್ದೇವೆ. ಅವರವರ ಪಾಡಿಗೆ ಅವರವರು ಇದ್ದು ಬಿಡುತ್ತಿದ್ದಾರೆ. ಅದಕ್ಕೆ ಮಿರ್ಜಾ ಗಾಲಿಬ್ ಒಂದು ಮಾತನ್ನು ಹೇಳುತ್ತಾರೆ:

"ಹಿಂದೂ ಹೋನೆಸೆ ನಹೀ ಚಲೇಗಾ
ಮುಸಲ್ಮಾನ್ ಹೋನೆಸೆ ನಹೀ ಚಲೇಗಾ
ಸಿಖ್, ಇಸಾಯಿ ಹೋನೆಸೆ ನಹೀ ಚಲೇಗಾ
ಏಕ್ ಬಾರ್ ಆಸ್ಮಾನಕೆ ತರಫ್
ಸರ್ ಉಠಾಕೆ ದೇಕೋ
ಸಾರಾ ಜಹಾ ಅಪನಾ ಬನಾ ಜಾಹೀಯೇ"

ವಿಶ್ವ ಬಂಧುತ್ವ, ಮನಸ್ಸುಗಳ ಬಂಧುತ್ವ ಸೇರಿಕೊಳ್ಳುತ್ತ ಹೋದರೆ ಮಾತ್ರವೆ ಏನಾದರೊಂದು ಒಳ್ಳೆಯದನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿ ಇಡೀ ದೇಶವನ್ನೇ ಸುಧಾರಣೆ ಮಾಡುತ್ತೇವೆಂಬ ಛಲವನ್ನು ತೊಟ್ಟು ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಮಾಡುತ್ತಿರುವಂತಹ ಸನ್ಮಾನ್ಯ ಸತೀಶ್ ಜಾರಕಿಹೊಳಿಯವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮಗಳು ನಾಡಿನ ಮೂಲೆ ಮೂಲೆಗಳಲ್ಲೂ ನಡೆಯಬೇಕು, ನಮ್ಮಲ್ಲಿರುವಂತಹ ಮೂಢನಂಬಿಕೆಗಳನ್ನು, ಅಂಧಕಾರವನ್ನು ಹೋಗಲಾಡಿಸಬೇಕು.ಈಗಿನ ರಾಜಕಾರಣದಲ್ಲಿ ಒಳ್ಳೆಯದನ್ನು, ವಿಚಾರ ಕ್ರಾಂತಿಯನ್ನು ಮಾಡ ಹೊರಟರೆ ಯಾರೂ ಒಪ್ಪುವುದಿಲ್ಲ. ಆದರೆ ಅವರು ಒಪ್ಪದ ಮಾತ್ರಕ್ಕೆ ನಾವು ಸುಮ್ಮನೆ ಕೂತರೆ ಆಗದು. ಆ ಕೆಲಸಕ್ಕಿಂತಲೂ ಈ ಕೆಲಸ ತುಂಬಾ ಶ್ರೇಷ್ಠವಾದುದ್ದಾಗಿದೆ ಎಂದು ತಿಳಿದು ನಮ್ಮ ಸತೀಶ್ ಜಾರಕಿಹೊಳಿಯವರು ಇಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ನಿಜಕ್ಕೂ ಇದೊಂದು ಪರಿವರ್ತನೆಯೇ ಆಗಿದೆ. ನಾನಾಡಿದ ಮಾತುಗಳು ನಿಮ್ಮ ಮನಸ್ಸಿಗೆ ಮುಟ್ಟಿದರೆ ಅದೇ ನನ್ನ ಸಾರ್ಥಕತೆಯನ್ನು ತೋರಿಸುವುದೆಂದು ನಾ ಅಂದುಕೊಂಡಿರುತ್ತೇನೆ. ಇಷ್ಟನ್ನು ಹೇಳುತ್ತ ನನ್ನ ಮಾತನ್ನು ಮುಗಿಸುತ್ತೇನೆ. ಸರ್ವರಿಗೂ ಶರಣು ಶರಣಾರ್ಥಿಗಳು…

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು